ಅಂಕಣ ಬರಹ
ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ
ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ
ಮೂಲ ಗುಜರಾತಿ: ಪನ್ನಾಲಾಲ್ ಪಟೇಲ್ ಕನ್ನಡಕ್ಕೆ : ಎಲ್.ವಿ.ಶಾಂತಕುಮಾರಿ
ಪ್ರ : ಸಾಹಿತ್ಯ ಅಕಾಡೆಮಿ
ಪ್ರ.ವರ್ಷ :೨೦೧೫
ಬೆಲೆ : ರೂ.೧೯೦
ಪುಟಗಳು : ೪೨೪
ಎಲ್.ವಿ.ಶಾಂತಕುಮಾರಿ ನಮ್ಮ ನಡುವಿನ ಬಹಳ ದೊಡ್ಡ ವಿದ್ವಾಂಸರು ಮತ್ತು ಅನುವಾದಕರು. ಅನೇಕ ಕ್ಲಾಸಿಕ್ ಗಳನ್ನು ಅವರು ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ’ ಕಾದಂಬರಿಯು ಜ್ಞಾನಪೀಠ ಪ್ರಶಸ್ತಿ ವಿಜೇತ ಗುಜರಾತಿ ಲೇಖಕ ಪನ್ನಾಲಾಲ್ ಪಟೇಲ್ ಅವರ ‘ಮಾನವೀನಿ ಭಾವೈ’ಎಂಬ ಮೂರು ಭಾಗಗಳಲ್ಲಿರುವ ಕೃತಿಯ ಮೊದಲ ಭಾಗ ‘ಮಾಲೇಲ್ ಜೀವ್’ ಇದರ ಭಾಷಾಂತರ. ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಅನುವಾದವನ್ನು ಶಾಂತಕುಮಾರಿಯವರಿಂದ ಮಾಡಿಸಿದೆ.
ನಲವತ್ತರ ದಶಕದಲ್ಲಿ ಪನ್ನಾಲಾಲ್ ಅವರು ಬರೆದ ಈ ಕಾದಂಬರಿ ಕಾಲ್ಪನಿಕ ಕಥನ ಶೈಲಿಯಲ್ಲಿದೆ. ಅದುವರೆಗೆ ಗುಜರಾತಿ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಸಂಸ್ಕೃತ ಭೂಯಿಷ್ಠವಾದ ಶಿಷ್ಟ ಕಥಾಸಾಹಿತ್ಯಕ್ಕೊಂದು ತಿರುವು ಕೊಟ್ಟ ಕೃತಿಯಿದು. ತತ್ವ ಚಿಂತನೆಯ ಅತಿಭಾವುಕತೆ, ಆದರ್ಶಗಳ ಬೋಧನೆ ಮತ್ತು ತದ್ರೂಪಿ ಪಾತ್ರ ಚಿತ್ರಣಗಳನ್ನು ನಾವಿಲ್ಲಿ ನೋಡಬಹುದು. ಸಾಂಪ್ರದಾಯಿಕ ಶೈಲಿಯ ಕೃತಕತೆ ಹಾಗೂ ಸಂಕೀರ್ಣತೆಯಿಂದ ಮುಕ್ತವಾದ ಸರಳವೂ ನೇರವೂ ಆದ ನಿರೂಪಣೆ ಇಲ್ಲಿದೆ.
ಈ ಕಾದಂಬರಿಯಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶದ ರೈತಾಪಿ ಜನರ ಬದುಕು, ಅವರು ಅನುಭವಿಸುವ ಕಷ್ಟ ಕೋಟಲೆಗಳು, ಅವರ ಪದ್ಧತಿ-ಸಂಪ್ರದಾಯಗಳು, ಜೀವನ ಕ್ರಮ, ಅವರ ನಡುವಣ ಪ್ರೀತಿಯ ಸಂಬಂಧಗಳು ಮತ್ತು ಅಂಧ ವಿಶ್ವಾಸಗಳ ಚಿತ್ರಣಗಳಿವೆ. ಜತೆಗೆ ನಿಸರ್ಗದ ರಮ್ಯ ಮನೋಹರ ಹಿನ್ನೆಲೆಯೂ ಇದೆ. ಆದರೆ ಕಾದಂಬರಿಯುದ್ದಕ್ಕೂ ಕಾಣುವ ಬರಗಾಲದ ಚಿತ್ರಣವು ಭಯಾನಕವಾಗಿದೆ. ಹಳ್ಳಿಗಳನ್ನೂ ಬೆಟ್ಟ ಗುಡ್ಡಗಳನ್ನೂ ಕೊಚ್ಚಿಕೊಂಡು ಹೋಗಿ ಜನರ ಬದುಕನ್ನು ಛಿದ್ರಗೊಳಿಸುವ ಚಿತ್ರಗಳು, ಗುಡ್ಡಗಾಡಿನ ಮಂದಿ ಗ್ರಾಮೀಣರ ಮೇಲೆ ನಡೆಸುವ ಲೂಟಿ-ಆಕ್ರಮಣಗಳು, ಕ್ಷಾಮದ ಅಸಹಾಯಕ ಸ್ಥಿತಿಯಲ್ಲಿ ದನಗಳನ್ನು ಹಸಿಹಸಿಯಾಗಿಯೇ ತಿನ್ನುವ ಮತ್ತು ತಾಯಿಯೇ ತನ್ನ ಮಗುವನ್ನು ತಿನ್ನುವ ದೃಶ್ಯಗಳು ಭೀಭತ್ಸವಾಗಿವೆ.
ಕಾಳು ಮತ್ತು ರಾಜೂ ಇಲ್ಲಿನ ಮುಖ್ಯ ಪಾತ್ರಗಳು. ಬಹಳ ಚಿಕ್ಕವರಿದ್ದಾಗಲೇ ಅವರಲ್ಲಿ ಅಂಕುರಿಸಿದ್ದ ಪ್ರೇಮವು ಸಾಮಾಜಿಕ ಕಟ್ಟುಪಾಡುಗಳ ನಡುವೆ ಸಿಲುಕಿ ನಲುಗಿದರೂ ಕಾದಂಬರಿ ಕೊನೆ ಮುಟ್ಟುತ್ತಿದ್ದಂತೆ ಶುದ್ಧ ಸಲಿಲದ ಕಾರಂಜಿಯಾಗಿ ಚಿಮ್ಮಿ ಹರಿಯುವ ಹೃದಯಂಗಮ ಚಿತ್ರಣವು ಓದುವವರ ಮನಸ್ಸಿಗೆ ಕಚಗುಳಿಯಿಡುತ್ತದೆ.
ಕಾಳು-ರಾಜೂರ ನಡುವಣ ಉದಾತ್ತ ಪ್ರೇಮವು ಕಾದಂಬರಿಯ ಕೊನೆಯಲ್ಲಿ ಮನಸೂರೆಗೊಳ್ಳುತ್ತದೆ. ಬರದ ಬೇಗೆಯನ್ನು ತಾಳಲಾರದೆ ಅವರಿಬ್ಬರೂ ಊರು ಬಿಟ್ಟು ಹೋಗುತ್ತಾರೆ. ತಡೆಯಲಾರದ ಹಸಿವಿನಿಂದ ಬಳಲುವ ಕಾಳು ‘ನೀರು ಬೇಕು’ ಅನ್ನುತ್ತ ಕುಸಿದು ಬೀಳುತ್ತಾನೆ. ಬರದ ಬೆಂಗಾಡಿನಲ್ಲಿ ರಾಜು ಎಲ್ಲಿಂದ ತರಬೇಕು ನೀರು? ಅವಳ ಮಾತೃಹೃದಯ ವಿಲವಿಲ ಒದ್ದಾಡುತ್ತದೆ. ಕಾಳೂನ ಎದೆಯ ಮೇಲೆ ಮಲಗಿ ಅವಳು ಅಳುತ್ತಾಳೆ. ತನ್ನ ಎದೆಯನ್ನು ತೋರಿಸಿ ‘ ಇಲ್ಲೂ ಏನೂ ಇಲ್ಲ. ಎಲ್ಲ ಒಣಗಿ ಹೋಗಿದೆ’ಅನ್ನುತ್ತಾಳೆ. ಅವಳ ಮೊಲೆಗಳಿಂದ ದ್ರವ ಜಿನುಗಿತೋ ಅಥವಾ ಅವಳ ಬಾಯಿಯಿಂದ ರಸದ ಸ್ಪರ್ಶವಾಯಿತೋ ದೇವರೇ ಬಲ್ಲ. ಪವಾಡದಂತೆ ಕಾಳು ಎದ್ದು ನಿಲ್ಲುತ್ತಾನೆ. ಪ್ರಕೃತಿಯನ್ನು ಪ್ರತಿನಿಧಿಸುವ ಹೆಣ್ಣು ತಾನು ಪ್ರೀತಿಸುವ ಪುರುಷನ ಪಾಲಿಗೆ ಚೈತನ್ಯದಾಯಿನಿಯಾಗುತ್ತಾಳೆ ಎಂಬ ಅರ್ಥದಲ್ಲಿ ಈ ದೃಶ್ಯವು ಚಿತ್ರಿಸಲ್ಪಟ್ಟಿದೆ ( ಪು.೪೨೨). ಶಾಂತಕುಮಾರಿಯವರ ಸುಂದರ ಅನುವಾದವು ಕೃತಿಯನ್ನು ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ.
************************
ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ