ಅಂಕಣ ಬರಹ

 ಕಬ್ಬಿಗರ ಅಬ್ಬಿ

 ನಿಮಗೆ ತಿಳಿಸಾರು ಗೊತ್ತೇ?

ಅದೊಂದು ಕೋಣೆ, ರಸಾವಿಷ್ಕಾರದ ಕೋಣೆ ಅದು!. ಅದನ್ನು ಜನರು ಈ ಕೋಣೆಯನ್ನು ಮನೆ ಅಂತಲೇ ಕರೆಯೋದಕ್ಕೆ, ಬಹುಷಃ ಈ ಕೋಣೆಯ ತಾಯ್ತನವೇ ಕಾರಣ ಅನ್ಸುತ್ತೆ. ಮಗುವಿಗೆ ಅಮ್ಮ ಊಡುವ ಎದೆ ಹಾಲಿನ ಹಾಗೆಯೇ, ಈ ಕೋಣೆ ಮನೆ ಮಂದಿಗೆಲ್ಲ ಉಣಿಸುವುದು ಬದುಕು.

‘ಅಡುಗೆ ಮನೆ’ ಯಲ್ಲಿ ಜೀವಜಲ ಬಿಂದುವಾಗಿ ಹರಿಯುತ್ತೆ. ಹಸಿರು ತರಕಾರಿಗಳು ನೆಲಹಾಸಿನಲ್ಲಿ ತಣ್ಣಗೆ ಕಾಯುತ್ತವೆ. ನೆಲದೊಳಗೆ ಬೇರಿಳಿಸಿ ಪಿಷ್ಟಅಹಾರ ಸಂಗ್ರಹಿಸಿ ಬಲಿತ ಗಡ್ಡೆಗಳೂ ಜತೆಗೆ. ಅಡುಗೆ ಮನೆಯ ಉಗ್ರಾಣಗಳಲ್ಲಿ, ಮನುಷ್ಯ ತಿನ್ನಲೇ ಹುಟ್ಟಿದ್ದೋ ಎಂಬಂತಹಾ ಧಾನ್ಯಗಳು. ಅವುಗಳಲ್ಲಿ ಕೆಲವಕ್ಕೆ ಕಪ್ಪು ಬಣ್ಣ, ಕೆಲವಕ್ಕೆ ಬಿಳಿ. ನಡು ನಡುವಿನ ಗೋಧಿ ಬಣ್ಣದವುಗಳೂ ಪುಡಿಯಾಗಲು ಕಾಯುತ್ತವೆ.

ಕಡಲು ಅತ್ತೂ ಅತ್ತೂ ಉಪ್ಪಾದ ನೀರನ್ನು ಸೋಸಿ ಆವಿಯಾಗಿಸಿದಾಗ ಉಳಿದ ಉಪ್ಪುಪ್ಪಾದ ಭಾವ ಪಿಂಗಾಣಿ ಪಾತ್ರೆಯಲ್ಲಿದೆ. ( ಉಳಿದ ಪಾತ್ರೆಯಲ್ಲಿ ಉಪ್ಪು ತುಂಬಿದರೆ, ಅದು ಪಾತ್ರೆಯನ್ನು ತನ್ನ ಸ್ವ-ಭಾವ ದಿಂದ ಪುಡಿಗಟ್ಟುತ್ತೆ). ಬಲಿತ ಕಬ್ಬನ್ನು ಚರ ಚರಾ ಅಂತ ಗಾಣದ ತಿರುಗಾಲಿಗಳ ನಡುವೆ ಕ್ರಷ್ ಮಾಡಿ ನಮಗೆ ಸಿಹಿ ಅನ್ನಿಸುವ ರಸವಾಗಿಸಿ ಮಂದಗಟ್ಟಿಸಿ, ನಮಗಿಷ್ಟವಾದ ಆಕಾರದಲ್ಲಿ ( ಷಟ್ಕೋನವೋ, ದುಂಡಾಕಾರವೋ) ಅದನ್ನು ಅಚ್ಚಾಗಿಸಿದ ಬೆಲ್ಲ ಡಬ್ಬಿಯೊಳಗೆ ಅತಿಥಿಗಳ ಬಾಯಿ ಸಿಹಿ ಮಾಡಲು ಬಂದಿಯಾಗಿವೆ.

ಮತ್ತೆ, ಜಿಹ್ವೆಯ ಜೀವೋತ್ಪತ್ತಿಗೆ ಅಗತ್ಯವಾದ ರಾಸ ರಸದ ಖಾರ, ದಿನ ದಿನವೂ ಬದುಕಲು ರುಚಿ ಹೆಚ್ಚಿಸುವ ಹುಣಿಸೇ ಹುಳಿ,  ಪಾಕಕ್ಕೆ ಮುತ್ತಿಡುವ ಒಗ್ಗರಣೆಗೆ ಅಗತ್ಯದ ಸಾಸಿವೆ, ಹೀಗೇ ಹಲವು ಚೀಜ್ ಗಳು ಈ ಮನೆಯನ್ನು ಗ್ಲಾಮರಸ್ ಮಾಡಿವೆ.

ಮರೆತೆನಲ್ಲ! ಅಲ್ಲಿ ಒಲೆಯಿದೆ. ಒಲೆಯಲ್ಲಿ ಬೆಂಕಿ, ಬೇಯಿಸುವುದಕ್ಕೆ. ನನ್ನಮ್ಮ ಒಲೆಯ ಪಕ್ಕದಲ್ಲಿ ಸ್ಥಾಪನೆಯಾಗಿ ಬದುಕಿಡೀ,  ಆ ಒಲೆಯ ಕಿಚ್ಚಲ್ಲಿ ಆಹಾರವನ್ನು ಬೇಯಿಸುತ್ತಾ ಪಕ್ವವಾದವಳು. ಅನ್ನ ಬೆಂದಿದೆಯೇ ಎಂದು ಒಂದೇ ಅಗುಳನ್ನು ಒತ್ತಿ ಹೇಳಬಲ್ಲ ತಾಕತ್ತು, ಈ ಪಾಕತ್ತಿನಿಂದಲೇ ಬಂದದ್ದು.

ಒಲೆಯ ಮೇಲಿನ ಅಟ್ಟದಲ್ಲಿ, ಶತಮಾನಗಳ ಹೊಗೆ ತಾಗಿದಂತಹ ಮಸಿಹಿಡಿದ ಸಾಲು ಭರಣಿಗಳು. ಅವುಗಳೊಳಗೆ ಶೇಖರಿಸಿ ಇಟ್ಟ ಬಗೆಬಗೆಯ ಉಪ್ಪಿನಕಾಯಿಗಳು. ಮಾವಿನ ಮಿಡಿ ಯೌವನದ ಗೊರಟು ಕಟ್ಟುವ ಮೊದಲೇ ಕೊಯಿದು, ಉಪ್ಪಲ್ಲಿ ಕಾದಿರಿಸಿ ಮುರುಟಿದಾಗ ಅದಕ್ಕೆ ಮೆಣಸಿನ ಪಾಕ ಸೇರಿಸಿ ಶೇಖರಣೆ ಮಾಡುವುದು. ಉಪ್ಪಿನ ಕಾಯಿ ಹಾಕುವಾಗಲೂ ಯೋಚನೆಗಳನ್ನು ಹದಬರಿಸುವಾಗಲೂ, ಮೈಮನಸ್ಸು ಕೊಳೆಯಾಗಬಾರದು. ಉಪ್ಪಿನಕಾಯಿ ಕೊಳೆತು ಹಾಳಾಗಬಾರದಲ್ಲಾ.

ಅಡುಗೆ ಮನೆ ಅಮ್ಮನವರ ಗುಡಿ.

ಅದರ ನೆಲವೇ ಸ್ತ್ರೀ ಪಾದ ಸ್ಪರ್ಶದ ನೆಲೆ. ಅಲ್ಲಿ ತೊಳೆದ ಅಕ್ಕಿಯ ನೀರಿಗೆ ತಿಳಿ ತಿಳಿಯಾದ ತಿಳಿವಿದೆ. ತುಂಬಿದ ಪಾತ್ರೆಯೊಳಗೆ ಸೌಟು ತಿರುಗಿಸುವಾಗ, ರಸ ಸ್ವರಕ್ಕೆ ಪ್ರಕೃತಿಸಹಜ ಸ್ವರೂಪವಿದೆ . ಒಳಗೆ ಜೋಡಿಸಿಟ್ಟ ಪಾತ್ರೆಗಳ ಸಾಲುಗಳಲ್ಲಿ ಒಳಸೌಂದರ್ಯವಿದೆ. ಒಂದೇ ಅಗುಳನ್ನು ಒತ್ತಿ ಅನ್ನ ಬೆಂದಿದೆಯೇ ಎನುವಷ್ಟು ಅನುಭೂತಿ ಇದೆ.

ಅಂತಹ ಜೀವಕಟ್ಟುವ ಕಾಯಕದ ನಡುವೆ ಕವನ ಹುಟ್ಟದೇ?. ವೈದೇಹಿ ಅವರ ಈ ಕವನ ನೋಡೋಣ.

**    **    ***

rasam-recipe-basic-rasam

 ತಿಳಿದವರೇ… ಹೇಳಿ

ಕಾವ್ಯದ  ಬಗ್ಗೆ ತಿಳಿದವರೇ

ಹೇಳಿ.  ನನಗೆ ಕಾವ್ಯ ಗೊತ್ತಿಲ್ಲ

ತಿಳಿಸಾರು ಗೊತ್ತು.

ತಿಳಿಸಾರು ಎಂದರೆ ಏನೆಂದುಕೊಂಡಿರಿ?

ಅದಕ್ಕೂ ಬೇಕು ಒಳಗೊಂದು

ಜಲತತ್ವ – ಗಂಧತತ್ವ –

ಕುದಿದು ಹದಗೊಂಡ ಸಾರತತ್ವ…

ಹೀಗೆ –

ಇತ್ತು ಸಾರಿನ ಪಾತ್ರೆ ಮೂಲೆಯಲ್ಲಿ

ನಂಗದೆಯೂ ನಂಗದಂತಿದ್ದ

ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ

ಕಾಯುತ್ತಿದ್ದಂತೆ. ಕಾದರೇನು?

ಮಾಂಸದಡುಗೆಯ ಕಿಡಿಮಿಂಚು ವಗ್ಗರಣೆಯ

ಬಡಿಸುವ ಝಣ್ ಝಣ್ ನಡಿಗೆಯವರ

ಲಘು ನಗೆ ಬಗೆ ವಿನಿಮಯ ಒಡ್ಡೋಲಗದಲ್ಲಿ

ತೆಳ್ಳನೆಯ ತಿಳಿಸಾರು ಹಾಗೆಯೇ ಇತ್ತು

ಬೆಳಗಿಂದ

ನಂಗದೆಯೂ ನಂಗಿದಂತಿದ್ದ ಕೆಂಡದೊಲೆಯ ಮೇಲೆ

ಕುದಿಕುದಿದು ಬತ್ತಿ

ರಾತ್ರಿಯಾದರೂ ಹಳಸದೆ

ಕಾವ್ಯದ ಬಗ್ಗೆ ದೊಡ್ಡಕ್ಕೆ ತಿಳಿದವರೇ

ಹೇಳಿ. ಗೊತ್ತೇ ತಿಳಿಸಾರು ನಿಮಗೆ?

ಕ್ಷಮಿಸಿ, ಗೊತ್ತಿಲ್ಲ ಕಾವ್ಯ ನನಗೆ

†*     ***     ***

‘ತಿಳಿದವರೇ …ಹೇಳಿ’ ಎನ್ನುವ ಈ ಶೀರ್ಷಿಕೆ ಒಂದು ವಿಜ್ಞಾಪನೆ ಮಾತ್ರವೇ?. ಅಥವಾ ಅದು, ಜ್ಞಾನಾಕಾಂಕ್ಷೀ ವಿದ್ಯಾರ್ಥಿಯ ಹಂಬಲವೇ?.ಅಥವಾ, ತಿಳಿದವರಿಗೆ ಹಾಕಿದ ಸವಾಲೇ?.

“ಕಾವ್ಯದ  ಬಗ್ಗೆ ತಿಳಿದವರೇ

ಹೇಳಿ.  ನನಗೆ ಕಾವ್ಯ ಗೊತ್ತಿಲ್ಲ

ತಿಳಿಸಾರು ಗೊತ್ತು.”

ಕಾವ್ಯ ಎನ್ನುವುದು ಕ್ಲಿಷ್ಟ ಅಭಿವ್ಯಕ್ತಿ.  ಅದಕ್ಕೆ ಅದರದ್ದೇ ಆದ ವಿನ್ಯಾಸ, ಅರ್ಥದಿಗಂತ ಎಲ್ಲವೂ ಇದೆ. ಕಾವ್ಯದ ತಿಳಿವು ಅಂದರೆ ಏನು? . ಕಾವ್ಯ ಎಂದರೆ ಮಿದುಳು ಪೆಟ್ಟಿಗೆಯೊಳಗೆ ಬೀಗ ಹಾಕಿಡುವ ವಸ್ತುವೇ?. ತನಗೆ ಕಾವ್ಯ ತಿಳಿದಿದೆ ಎನ್ನುವಾಗ, ಕಾವ್ಯದ ವ್ಯಾಪ್ತಿಯನ್ನು ಘಮಂಡು ಸೀಮಿತಗೊಳಿಸದೇ?. ‘ಕಾವ್ಯ ತಿಳಿದವರೇ ಹೇಳಿ’ ಎನ್ನುವಾಗ ಅಕ್ಷರ ಪದರದ ಕೆಳಗೆ ವಿಡಂಬನೆಯ ಧ್ವನಿ ಕೇಳಿಸುತ್ತೆ.

‘ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು ‘  ಅಂತ ವೈದೇಹಿ ಅವರ ಉಸಿರು, ಉಸುರುತ್ತಿದೆ. ಅಡುಗೆ ಮನೆಯಲ್ಲಿ ತಿಳಿಸಾರು ತಯಾರು ಮಾಡುವ ಸ್ತ್ರೀ ಸಂವೇದನೆಯ ದನಿಯದು.

ಅದಷ್ಟೇ ಅಲ್ಲ. ತಿಳಿಸಾರು, ಪ್ರಯೋಗ ಸಿದ್ಧ ಜ್ಞಾನ.

ಕಾವ್ಯ ಬೆಳೆದು ನಿಲ್ಲುವುದು ಕಲ್ಪನೆ ಮತ್ತು ಚಿಂತನೆಗಳ ಚಪ್ಪರವಾಗಿ. ಹಲವು ಬಾರಿ ಕಾವ್ಯದ ಅಭಿವ್ಯಕ್ತಿ, ಸಿದ್ಧಾಂತದ ಪ್ರತಿಪಾದನೆ ಅಥವಾ ನಿರಾಕರಣೆಯೂ ಆಗಿರುತ್ತೆ. ಪ್ರಯೋಗ ಸಿದ್ಧ ‘ತಿಳಿಸಾರು’ ವಿನ ಜ್ಞಾನಕ್ಕೂ ಕಾವ್ಯದ ಥಿಯರೆಟಿಕಲ್ ಹೈಪಾಥಿಸಿಸ್ ಗೂ ನಡುವೆ ಪ್ರಶ್ನೋತ್ತರದ ಪ್ರತೀಕ ಮೇಲಿನ ಸಾಲೇ?.

‘ತಿಳಿಸಾರು’ ಆಹಾರ. ಆಹಾರವಿದ್ದರೆ ಮನುಷ್ಯ ಜೀವಿಸಬಲ್ಲ. ಕಾವ್ಯ ಜ್ಞಾನದಿಂದ ಹಸಿವು ತಣಿದೀತೇ?. ದೇಹದ ಪೋಷಣೆ ಮತ್ತು ಅಸ್ತಿತ್ವ ಕವಿತೆಯಿಂದ ಸಾಧ್ಯವಿಲ್ಲ. ಅದಕ್ಕೆ ಆಹಾರ ಬೇಕು. ಹಾಗಿದ್ದರೆ, ಅಸ್ಥಿತ್ವಕ್ಕೆ ಅಗತ್ಯವಾದ ವಾಸ್ತವ ವಸ್ತುಗಳು ಜೀವನದ ಮೊದಲ ಆದ್ಯತೆ ಅನ್ನಬಹುದೇ?.

rusticrumblings: Vaidehi : A Reluctant Feminist

ಇನ್ನೂ ಗಹನವಾಗಿ ಯೋಚಿಸಿದರೆ, ‘ತಿಳಿ ಸಾರು’ ವಿನ ‘ತಿಳಿ’ ಎಂದರೆ ಅರಿವು. ತಿಳಿ ಎಂದರೆ ಸ್ಪಷ್ಟತೆ, ಸ್ಫುಟತೆ ಮತ್ತು ಪಾರದರ್ಶಕತೆ. ಕ್ರಿಯಾಪದವಾದಾಗ, ಈ ಎಲ್ಲವನ್ನೂ ಪಡೆಯುವ ದೃಷ್ಟಿ ಮತ್ತು ಪ್ರಕ್ರಿಯೆ. ಸಾರು ಎಂದರೆ ಘೋಷಣೆ ಅಂತಲೂ ಪ್ರಸಾರ ಮಾಡು ಅಂತಲೂ, ವಿಸ್ತರಿಸು ( spread, ಅಂಗಳಕ್ಕೆ ಸೆಗಣಿ ಸಾರಿಸುವುದು) ಅಂತ ಬಹುಅರ್ಥಗಳಿವೆ. ತಿಳಿಸಾರು ಎಂದರೆ ಅರಿವನ್ನು ಪಸರಿಸು, ಸ್ಪಷ್ಟವಾಗಿ ಸ್ಪುಟವಾಗಿ ವಿಸ್ತರಿಸಿ ಕಾಣು ಅಂತ ಅನ್ವಯಿಸಬಹುದು. ಹಾಗಾದರೆ,  ಕಾವ್ಯ ಎಂಬ ಕ್ಲಿಷ್ಟಕರ, ಪ್ರತಿಮಾತ್ಮಕ ಗೂಡುಕಟ್ಟುವ ಅಭಿವ್ಯಕ್ತಿ ಗೊತ್ತಿಲ್ಲ. ಸರಳ, ಪ್ರಾಯೋಗಿಕ, ಸ್ಪುಟ,ಪಾರದರ್ಶಕ ದೃಷ್ಟಿಯೂ, ಅದನ್ನು ಅನಿರ್ಬಂಧವಾಗಿ ಹರಡಿ ವಿಸ್ತರಿಸಿ ಹಂಚುವುದು ಗೊತ್ತು ಅನ್ನುವ ಅರ್ಥವೇ?.

“ತಿಳಿಸಾರು ಎಂದರೆ ಏನೆಂದುಕೊಂಡಿರಿ?

ಅದಕ್ಕೂ ಬೇಕು ಒಳಗೊಂದು

ಜಲತತ್ವ – ಗಂಧತತ್ವ –

ಕುದಿದು ಹದಗೊಂಡ ಸಾರತತ್ವ…

ಹೀಗೆ -“

‘ತಿಳಿಸಾರು’ ವಿಗೆ ಬೇಕು ಜಲತತ್ವ, ಗಂಧ ತತ್ವ ಮತ್ತು ಕುದಿದು ಹದಗೊಂಡ ಸಾರ ತತ್ವ.ಜಲತತ್ವ ,ಗಂಧತತ್ವ ಮತ್ತು ಸಾರತತ್ವ, ಇವು ಮೂರೂ ನೀರು, ಪರಿಮಳ, ಇತರ ವ್ಯಂಜನಗಳನ್ನು ಸರಿ ಮಾತ್ರೆಯಲ್ಲಿ ಬೆರೆಸಿ, ಕುದಿಸಿ ಸಾರವನ್ನು ಸಮತೋಲಿಸುವ ಹದಬರಿಸುವ ಕ್ರಿಯೆ ಎನ್ನುವುದು ಸಾಲುಗಳ ಹೊರತತ್ವ.!

ಜಲತತ್ವ ದ ಜಲದ ಮೂಲ ಸ್ವರೂಪ, ಹರಿಯುವುದು. ಅಧಿಕ ಗುರುತ್ವಾಕರ್ಷಣೆಯ ಪೊಟೆನ್ಶಿಯಲ್ ( ಎತ್ತರ) ನಿಂದ ಕಡಿಮೆ ಪೊಟೆನ್ಶಿಯಲ್ ( ತಗ್ಗು) ನತ್ತ ಹರಿಯುತ್ತೆ. ಜ್ಞಾನವೂ ಹಾಗೆಯೇ, ಹೆಚ್ಚು ಅರಿವಿನ ಸ್ಥಾನದಿಂದ ( ಗುರು) ಕಡಿಮೆ ಅರಿವಿನ ‘ಖಾಲಿ’ ( ವಿದ್ಯಾರ್ಥಿ) ಯತ್ತ ಹರಿಯುತ್ತೆ.

ಜಲದ ಇನ್ನೊಂದು ಸ್ವಭಾವ, ಅದಕ್ಕೆ ಸ್ಥಿರ ಆಕಾರ ಇಲ್ಲ. ಅದು ತುಂಬಿದ ಪಾತ್ರೆಯ ಆಕಾರ ಅದಕ್ಕೆ. ( ಹಾಗಂತ ಅದು ನಿರಾಕಾರ ಅಲ್ಲ).

ಜಲವನ್ನು ನೀವು ಮಥಿಸಬಹುದು ಅನ್ನುವುದು ಇನ್ನೊಂದು ತತ್ವ.

ಜಲವನ್ನು ನಿರಂತರ ಕುದಿಸಿದಾಗ ಅದು ಆವಿಯಾಗಿ ತನ್ನ ತನವನ್ನು ಕಳೆದುಕೊಳ್ಳುತ್ತೆ. ಹಾಗಾಗಿ ಅದನ್ನು ಅಗತ್ಯಕ್ಕಿಂತ ಹೆಚ್ಚು ಕುದಿಸಬಾರದು!

ಯಾವುದೇ ಗ್ರಹದಲ್ಲಿ ಜೀವಿಗಳು ಇರಬಹುದೇ ಎನ್ನುವ ಪ್ರಶ್ನೆಗೆ ವಿಜ್ಞಾನಿಗಳು ಮೊದಲು ಹುಡುಕುವುದು, ಅಲ್ಲಿ ಜಲವಿದೆಯೇ ಅಂತ. ಹಾಗಾಗಿ ಜಲತತ್ವ ಎನ್ನುವುದು ಜೀವ ತತ್ವ, ಸೃಷ್ಟಿತತ್ವಕ್ಕೂ ಪ್ರತಿಮೆಯೇ.

‘ಗಂಧ ತತ್ವ’ ದ ಗಂಧ ಎಂದರೆ ಪರಿಮಳ. ಪರಿಮಳ ಆಕರ್ಷಣೆಯೂ. ಗಂಧ ಎಂದರೆ ವಾಸನೆ, ಸ್ವಭಾವ. ಕರ್ಮಸಿದ್ಧಾಂತದ ಪ್ರಕಾರ, ವಾಸನೆಯ ಮೂಲದಲ್ಲಿ ಸಂಗ್ರಹಿತವಾದ ಕರ್ಮ, ಇಂದ್ರಿಯಗಳನ್ನು ಪೋಲರೈಸ್ ಮಾಡುವುದರಲ್ಲಿದೆ. ಗಂಧ ಎನ್ನುವುದು ಅನುವಂಶಿಕವೂ ( ಜೆನೆಟಿಕ್) ಆಗಬಗಹುದು.

ಗಂಧ ಎನ್ನುವುದು ಗಂಧದ ಕೊರಡು ಅಂತ ತಗೊಂಡರೆ, ಕೊರಡನ್ನು ತಳೆದಷ್ಟೂ ಇನ್ನೂ ಪರಿಮಳ, ಸೂಸುವ ತತ್ವ ಅದು. ನಿರಂತರ ಪೀಡನೆಗೊಳಗಾದರೂ ಸಹಿಸಿ ಪರಿಮಳವನ್ನು ಹರಡುವ ತ್ಯಾಗ ಮತ್ತು ಸಮರ್ಪಣೆಯ ತತ್ವ.

‘ಕುದಿದು ಹದಗೊಂಡ ಸಾರತತ್ವ’  ಷಡ್ರಸಗಳನ್ನು ಅಗತ್ಯ ಮಾತ್ರೆಯಲ್ಲಿ ಬೆರೆಸಿದರೆ ‘ತಿಳಿಸಾರು’ ಆಗಲ್ಲ. ಅದನ್ನು ಕುದಿಸ ಬೇಕು. ಎಲ್ಲಾ ಸಾರಗಳೂ ಹದವಾಗಿ ಬೆರೆಯಬೇಕು. ಸಾರಗಳು ಇಂದ್ರಿಯಗ್ರಾಹ್ಯವಾಗುವಷ್ಟು ಪರಿಷ್ಕರಿಸಲ್ಪಡಬೇಕು. ಹದ ಎನ್ನುವುದು ಸಮತೋಲನ. ಚಲನಶೀಲ ಪ್ರಕ್ರಿಯೆಗಳು ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಸಮತೋಲನಕ್ಕೆ ( equilibrium)  ಬರುತ್ತವೆ. ಆ ಸಮತೋಲನದಲ್ಲಿ ನೋಟಕ್ಕೆ,ಸ್ವಭಾವಕ್ಕೆ ಸ್ಥಿರತೆಯಿರುತ್ತೆ. ಚಂಚಲತೆಯಿಂದ ಸ್ಥಿರತೆಯತ್ತ ದಾರಿಯಲ್ಲಿ ಮಂಥನವಿದೆ.

ಇಲ್ಲಿ ‘ತಿಳಿಸಾರು’ ಬದುಕಿಗೆ, ಕಾವ್ಯಕ್ಕೆ, ಕಲೆಗೆ, ಸೃಜನಶೀಲ, ಪ್ರಯೋಗಾತ್ಮಕ ಪ್ರಯತ್ನಕ್ಕೆ  ಹೋಲಿಕೆಯಾದಂತೆ ಅನಿಸುತ್ತೆ.

“ಇತ್ತು ಸಾರಿನ ಪಾತ್ರೆ ಮೂಲೆಯಲ್ಲಿ

ನಂಗದೆಯೂ ನಂಗದಂತಿದ್ದ

ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ

ಕಾಯುತ್ತಿದ್ದಂತೆ. ಕಾದರೇನು?”

rasam-recipe-south-Indian

ಮೂಲೆಯಲ್ಲಿ ಸದಾ ಉರಿಯುತ್ತಿರುವ ಬೂದಿ ಮುಚ್ಚಿದ ಒಲೆಯ ಮೇಲೆ, ಈ ತಿಳಿ ಸಾರಿನ ಪಾತ್ರೆ. ಹೊರಗೆ ತಣ್ಣಗಿನ ಬಿಳಿ ಬಿಳಿ ಬೂದಿ. ಒಳಗೆ ಉರಿಯುವ ಕೆಂಡ. ಸಾರು ಕಾಯುತ್ತಿದೆ. ಅಂದರೆ ಬಿಸಿಯಾಗುತ್ತಿದೆ ಅಂತ ಒಂದು ಅರ್ಥವಾದರೆ, ಸಾರು ಏನನ್ನೋ ನಿರೀಕ್ಷೆ ಮಾಡುತ್ತಿದೆ ಅಂತ ಇನ್ನೊಂದು ಅರ್ಥ.  ಈ ಪ್ರಕ್ರಿಯೆಯ ನಂತರ ಏನು? ಎನ್ನುವ ಪ್ರಶ್ನೆ ಕೇಳುವುದು, ಬಹುಷಃ, ಈ ಕಾಯುವಿಕೆ ಮತ್ತು ಕಾಯುವ ವ್ಯಕ್ತಿಯತ್ತ ಸಮಾಜಕ್ಕೆ ಅಸಡ್ಡೆಯಿದೆ ಅಂತಾನೇ?.

“ಮಾಂಸದಡುಗೆಯ ಕಿಡಿಮಿಂಚು ವಗ್ಗರಣೆಯ

ಬಡಿಸುವ ಝಣ್ ಝಣ್ ನಡಿಗೆಯವರ

ಲಘು ನಗೆ ಬಗೆ ವಿನಿಮಯ ಒಡ್ಡೋಲಗದಲ್ಲಿ

ತೆಳ್ಳನೆಯ ತಿಳಿಸಾರು ಹಾಗೆಯೇ ಇತ್ತು

ಬೆಳಗಿಂದ”

ಸಮಾಜದ ದೈಹಿಕ ಜಗತ್ತು ಮಾಂಸದಡುಗೆ, ರುಚಿ, ಆಡಂಬರ,ಅಬ್ಬರ ಇತ್ಯಾದಿಗಳನ್ನು ಸವಿಯುತ್ತೆ. ಕಿಡಿ ಮಿಂಚು ವಗ್ಗರಣೆ ಎಂಬುದು ಅಪೂರ್ವ ಪರಿಕಲ್ಪನೆ. ಪುರುಷ ಪ್ರಧಾನ ಸಮಾಜದ ಮಧುಶಾಲೆಯಲ್ಲಿ, ಝಣ್ ಝಣ್ ನಡಿಗೆಯ ಮಧುಬಾಲೆ ಎಲ್ಲರಿಗೂ ಆಕರ್ಷಣೆ. ( ಹರಿವಂಶರಾಯ್ ಬಚ್ಚನ್ ಅವರ ಮಧುಶಾಲಾ ನೀಳ್ಗವಿತೆಯನ್ನು ಇಲ್ಲಿ ನೆನೆಯಬಹುದು). ಆ ಅಬ್ಬರದಲ್ಲಿ ನಮ್ಮ ಅಡುಗೆ ಮನೆಯಲ್ಲಿ ದಿನರಾತ್ರೆ ಕಾದು, ಬೆಂದ ತೆಳುದೇಹದ ( ಹೊಳಪು ದೀಪ್ತಿಯ) ಅಮ್ಮ ಮತ್ತು, ಆಕೆ ಕುದಿಸಿದ ತಿಳಿಸಾರು ಬೆಳಗಿನಿಂದ ಕಾಯುತ್ತಿದೆ. ಹಾಗೆಯೇ ಇತ್ತು ಬೆಳಗಿನಿಂದ ಎಂದರೆ, ಆರಂಭದಿಂದಲೂ ರುಚಿಕೆಡದ ಬದುಕು. ಇಲ್ಲಿ ತಿಳಿಸಾರು ಮತ್ತು ಮನೆಮಂದಿಗಳ ಬದುಕು ಕಟ್ಟುವ ಸ್ತ್ರೀಯರ ನಡುವೆ ಸಾಮ್ಯತೆ ಕಾಣಿಸುತ್ತೆ.

“ನಂಗದೆಯೂ ನಂಗಿದಂತಿದ್ದ ಕೆಂಡದೊಲೆಯ ಮೇಲೆ

ಕುದಿಕುದಿದು ಬತ್ತಿ

ರಾತ್ರಿಯಾದರೂ ಹಳಸದೆ”

ದಿನವಿಡೀ ಕುದಿ ಕುದಿದು ಬತ್ತಿದೆ ತಿಳಿಸಾರು, ನಂದದೆಯೂ ನಂದಿದಂತಿದ್ದ ಕೆಂಡದೊಲೆಯ ಮೇಲೆ, ಮತ್ತು ಅದರ ರುಚಿ ಉಳಿಸಿಕೊಂಡಿದೆ. ಅಡುಗೆಗುಡಿಯಮ್ಮನೂ ಬದುಕಿನುದ್ದಕ್ಕೂ ( ಬೆಳಗಿನಿಂದ ರಾತ್ರಿತನಕ) ಕುದಿ ಕುದಿದು ದೇಹ ಬತ್ತಿದರೂ ಸ್ತ್ರೀ ಸಹಜ ಸಕಲ ಗುಣಗಳನ್ನು ಉಳಿಸಿಕೊಂಡು ಸ್ವಲ್ಪವೂ ಹಳಸದೇ ( ಹೊಸತನವನ್ನು ಕಾಪಿಟ್ಟು),  ಹೊರಗೆ ನಂದಿದಂತೆ ಕಂಡರೂ  ಹೃದಯದೊಳಗೆ ಸದಾ ಬೆಳಗುವ ಮಮತೆಯ ನಂದಾದೀಪ ಬೆಳಗುತ್ತಾ  ಅಸ್ತಿತ್ವ ಉಳಿಸಿಕೊಳ್ಳುತ್ತಾರೆ.

“ಕಾವ್ಯದ ಬಗ್ಗೆ ದೊಡ್ಡಕ್ಕೆ ತಿಳಿದವರೇ

ಹೇಳಿ. ಗೊತ್ತೇ ತಿಳಿಸಾರು ನಿಮಗೆ?

ಕ್ಷಮಿಸಿ, ಗೊತ್ತಿಲ್ಲ ಕಾವ್ಯ ನನಗೆ”

ಇಲ್ಲಿ ಕವಯಿತ್ರಿ ಅತ್ಯಂತ ನಿರ್ಧಾರಾತ್ಮಕವಾಗಿ ತನಗೆ ತಿಳಿಸಾರು ಮಾತ್ರ ಗೊತ್ತು, ಕಾವ್ಯ ತಿಳಿದಿಲ್ಲ ಅನ್ನುತ್ತಾರೆ. ಕಾವ್ಯದ ಬಗ್ಗೆ ದೊಡ್ಡಕ್ಕೆ ತಿಳಿದವರೇ ಎಂಬ ಇತ್ಯಾತ್ಮಕ ದನಿಯಲ್ಲಿ, ‘ಕಾವ್ಯದ ಬಗ್ಗೆ, ಬದುಕಿನ ಬಗ್ಗೆ, ಜ್ಞಾನದ ಬಗ್ಗೆ ಎಲ್ಲಾ ತಿಳಿದುಕೊಂಡೆ’ ಎಂಬ ಅಹಂಕಾರವನ್ನು  ತಿಳಿಸಾರಿನ ಸರಳತೆಯಿಂದ, ನಮ್ರತೆಯಿಂದ ಸಂಬೋಧಿಸಿದ್ದು ಕಾಣಿಸುತ್ತೆ.

Vaidehi (Kannada writer) - Alchetron, the free social encyclopedia

 ಈ ಕವಿತೆಯ ವಿಶೇಷ ಏನೆಂದರೆ ಕಾವ್ಯ ತಿಳಿದಿಲ್ಲ ಅನ್ನುತ್ತಲೇ “ತಿಳಿಸಾರು” ವಿನ ಸುತ್ತ ಕಟ್ಟಿದ್ದು ಅಷ್ಟೂ ಕಾವ್ಯತಂತ್ರಗಳನ್ನು ಬಳಸಿದ ಕವಿತಯನ್ನು.!. ಈ ಕವಿತೆಯಲ್ಲಿ ಪದಗಳನ್ನು ಸಂಯೋಜಿಸಿದ ಕಲೆ ಅತ್ಯಂತ ಸೃಜನಶೀಲವಾದದ್ದು. ಬೇಂದ್ರೆಯವರು ‘ಪದ ಮಾಂತ್ರಿಕ’ ರಾದರೆ, ವೈದೇಹಿ ಅವರು ‘ಪದ ಮಾತೃಕೆ’.

************************************************************

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

7 thoughts on “

  1. ಚೆಂದದ ವಿಶ್ಲೇಷಣೆ ಸರ್… ತಿಳಿಸಾರು ಕುದಿದಷ್ಟೂ ಹದವಾಗುವಂತೆ ಈ ಕವಿತೆ ಕೂಡ ಅರಿತಷ್ಟೂ ಇನ್ನೂ ಹೊಸ ಹೊಳಹನ್ನು ತೋರುತ್ತದೆ… ವೈದೇಹಿಯವರ ಕುರಿತ ಅಭಿನಂದನಾ ಗ್ರಂಥ ಇರುವಂತಿಗೆ ಯಲ್ಲಿ ಈ ಕವಿತೆಯ ಕುರಿತು ಲೇಖನ ಒಂದು ಹೊಸ ಹೊಳಹನ್ನು ತೋರಿದರೆ ನಿಮ್ಮ ಅಭಿಪ್ರಾಯ ಮತ್ತೊಂದು ರೀತಿಯ ಹೊಸ ಹೊಳಹನ್ನು ತೋರುತ್ತದೆ… ಒಂದೊಂದು ಓದಿಗೆ ಒಂದೊಂದು ರೀತಿ ತೆರೆದುಕೊಳ್ಳುವುದೇ ಅತ್ಯುತ್ತಮ ಕವಿತೆಯ ಸೌಂದರ್ಯ ಅಲ್ಲವೇ…. ಧನ್ಯವಾದಗಳು ಸರ್ ನಿಮ್ಮ ಬರಹಕ್ಕೆ …

    1. ಮಮತಾ ಶಂಕರ್ ಅವರೇ.
      ನಿಮ್ಮ ಸಹೃದಯ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು

  2. ಸಮರ್ಥ ವಿಶ್ಲೇಷಣೆ. ಕವಿತೆಯ ಎಳೆಗಳನ್ನು ಬಿಡಿಸುತ್ತ ತಮ್ಮದೇ ಅರ್ಥದೊಂದಿಗೆ ಸಾಗಿದ ಅಬ್ಬಿ ತಿಳಿಸಾರಿನಲ್ಲಿ ಜೀವನದ ಸಾರ, ನಿರಾಡಂಬರದ ನಿಲುವನ್ನು ಕಾಣುತ್ತದೆ. ಸಾರಿನ ಸಾರವನ್ನು ಸಾರುತ್ತದೆ. ಯಾವುದೇ ಕವಿತೆಯನ್ನು ತಮ್ಮದೇ ರೀತಿಯಲ್ಲಿ ನೋಡುವ ಮಹದೇವರು ಅತಿ ಸರಳವೆನಿಸಿದ ಈ ಕವಿತೆಯಲ್ಲಿ ಅನೇಕಾರ್ಥಗಳನ್ನು ಕಂಡಿದ್ದಾರೆ.

    1. ರಮೇಶ್ ಸರ್,
      ಕವಿತೆ ತೋರಿಸಿದ ಬೆಳಕಲ್ಲಿ ನಡೆದೆ.
      ತುಂಬಾ ಧನ್ಯವಾದಗಳು

    1. ನಿಮ್ಮ ಅಕ್ಕರೆಯ ಮಾತುಗಳಿಗೆ ತುಂಬಾ ಧನ್ಯವಾದಗಳು ಭಾರತಿ ಅವರೇ.

  3. ಕನ್ನಡದ ಖ್ಯಾತ ಸಾಹಿತಿ ವೈದೇಹಿ ಅವರ ಕವನ ‘ ತಿಳಿದವರೇ.. ಹೇಳಿ’ ಕವನವನ್ನು ಬಹಳ ಕೂಲಂಕುಷವಾಗಿ ಅಧ್ಯಯನ ಮಾಡಿ ಅದರ ಪದರು ಪದರುಗಳನ್ನು ಬಿಡಿಸಿ, ಕವಿತೆಯ ವಿವಿಧ ಆಯಾಮಗಳನ್ನು ಆನಾವರಣಗೊಳಿಸಿದ ಮಹಾದೇವ ಅವರು ಅಭಿನಂದನಾರ್ಹರು.
    ಮಹಾದೇವ್ ಅವರು ಕವನದ ಕುರಿತು ವಿಶ್ಲೇಷಣೆ ಮಾಡುತ್ತಾ, ಅಡುಗೆ ಮನೆಯಲ್ಲಿ ಜೀವ ಜಲದ ಬಿಂದುವಿನಿಂದ, ಭಾವದ ಕಡಲಿನ ಉಪ್ಪಿನಿಂದ ಮಿತವಾಗಿ ಖಾರ ಬೆರೆತು ತಯಾರಾದ ತಿಳಿ ಮಿಶ್ರಣವೇ ‘ ತಿಳಿ ಸಾರು’ . ‘ ತಿಳಿ ಸಾರ’ ಕ್ಕೆ ರುಚಿಗಳು ವಿವಿಧ ಭಾವಗಳ ಛಾಯೆಗಳಿಗೆ ಕವಿ ಇತ್ತು ಸಮರ್ಥ ರೂಪಕಗಳು ಎಂದು ತೋರಿದ ರೀತಿ ಅನನ್ಯವಾಗಿದೆ.
    ‘ ನನಗೆ ಕಾವ್ಯ ಗೊತ್ತಿಲ್ಲ, ಕ್ಷಮಿಸಿ; ಎಂದು ಕವಿ ಹೇಳಿಕೊಳ್ಳುವಾಗ ವಿನಮ್ರತೆಯ ಧಾಟಿ ‘ ಟೋನ್’ ಇದೆ.
    ‘ ತಾವೇ ಎಲ್ಲವನ್ನು ಬಲ್ಲವರು, ಉಳಿದವರಿಗೆ ಏನೂ ತಿಳಿಯದು’ ಎಂದು ಅಹಮಿಕೆಯಿಂದ ಬೀಗಿ ಇತರರನ್ನು ಮೂದಲಿಸುವ ಜನರ ‘ ಸೊಕ್ಕಿಗೆ’ ಮರು ಸವಾಲು ಎಸೆಯುವಂತೆ ಇದೆ, ಕವನ. ಅದರಲ್ಲೂ ಮಹಿಳೆಯರು ಏನು ಬರೆದಾರು, ಅವರ ತಿಳುವಳಿಕೆ ಏನಿದ್ದರೂ ಅಡಿಗೆ ಮನೆಗೆ ಸೀಮಿತ ಎಂಬ ಧೋರಣೆ, ಕವನ, ಅಡಿಗೆ ಮನೆಯ ವ್ಯಂಜನಗಳನ್ನೇ ರೂಪಕಗಳನ್ನಾಗಿ ಬಳಸಿ ರಚಿಸಿದ ಕವನ ನೇರವಾಗಿ ಹೃದಯವನ್ನು ತಟ್ಟುತ್ತದೆ.
    ‘ ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ ಕಾಯುತ್ತಿದ್ದಂತೆ, ಕಾದರೇನು’ ಎಂಬ ಸಾಲು speaks very. ಪ್ರತಿಭೆ, ಬೂದಿ ಮುಚ್ಚಿದ ಕೆಂಡದಂತೆ. ಅದರ ಅಭಿವ್ಯಕ್ತಿಗಾಗಿ ತನ್ನ ಸೃಜನಶೀಲತೆಯನ್ನು ಅದುಮಿಟ್ಟ ಮಹಿಳೆ ಸಾಹಿತ್ಯದ ಕ್ಷೇತ್ರದಲ್ಲಿ ಪದಾರ್ಪಣೆ ಮಾಡಿ ತನ್ನದೇ ಆದ ಸ್ಥಾನ ಮಾನಗಳನ್ನು ಗಳಿಸಲು ಬಹಳ ಕಾಲ ಕಾಯಬೇಕಾಯಿತು ಎಂಬ ಧ್ವನಿ ಈ ಸಾಲುಗಳಲ್ಲಿ ಇದೆ.
    ಕಾದರೇನು? ಎಂಬ ಪ್ರಶ್ನೆ ಬರೀ ಪ್ರಶ್ನೆಯಾಗಿ ಉಳಿಯದೆ, ‘ ಕಾದರೆ ಏನಾಯ್ತು, ನಮ್ಮಲ್ಲಿ ಪ್ರತಿಭೆ ಇರುವುದನ್ನು ನಿರೂಪಣೆ ಮಾಡಲಿಲ್ಲವೇ’ ಎಂಬ ಎದೆಗಾರಿಕೆಯನ್ನು ಇಲ್ಲಿ ನಾವು ಗುರ್ತಿಸಬಹುದಾಗಿದೆ.
    ‘ ಮಾಂಸದಡುಗೆಯ ಕಿಡಿ ಮಿಂಚು’ ಎಂದು ಹೇಳುವಾಗ, ಕಿಡಿ ಮಿಂಚು ಏನೂ ಬೆಳಕು ನೀಡಿದೆ, ಮಿಂಚಿದಷ್ಟು ವೇಗದಲ್ಲಿ ಆರಿ ಹೋಗುವ ಮಾತು ಧ್ವನಿಸುತ್ತದೆ. ಅಂತಹ ಮಾತುಗಳ- ವಿಚಾರಗಳ ನಿರರ್ಥಕತೆಯನ್ನು ಎತ್ತಿ ತೋರುತ್ತದೆ. ಅದಕ್ಕೆ ತದ್ವಿರುದ್ಧವಾಗಿ, ಸರಿಯಾಗಿ, ಎಲ್ಲ ರುಚಿಗಳನ್ನು ಒಳಗೊಂಡು, ಹದವಾಗಿ ಬೆರೆತು ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ ಕಾಯ್ದ ‘ ತಿಳಿ ಸಾರು’ ಹಳಸದೇ ಬಹಳ ಸಮಯ ಎಲ್ಲರಿಗೂ ಸವಿಯು ನೀಡುತ್ತದೆ ಎಂಬ ಮಾತು ಬಹಳ ಮಾರ್ಮಿಕವಾಗಿದೆ.
    ವೈದೇಹಿ ಅವರ ಸಾಹಿತ್ಯದ ‘ ತಿಳಿ ಸಾರಿನ’ ಸವಿಯನ್ನು ಸದಭಿರುಚಿಯ ಸಹೃದಯಿಗಳು ಸವಿಯುತ್ತ ಬಂದಿದ್ದಾರೆ. ಅವರು ‘ ತಿಳಿ ಸಾರಿನ’ ಸವಿ ಮುಂದೆಯೂ ಬಹುಕಾಲ ನಮಗೆ ಪ್ರಾಪ್ತವಾಗಲಿ ಎಂದು ಆಶಿಸುವೆ.
    ಒಂದು ಸುಂದರ ಕವಿತೆಯನ್ನು ಆಯ್ಕೆ ಮಾಡಿ, ಅದನ್ನು ಬಹಳ ಸೊಗಸಾಗಿ ವಿಶ್ಲೇಷಣೆ ಮಾಡಿದ ಮಹಾದೇವ್ ಅವರಿಗೆ ಧನ್ಯವಾದಗಳು.

Leave a Reply

Back To Top