ಅಂಕಣ ಬರಹ
ನರವಾನರ
ನರವಾನರ
ಮರಾಠಿ ಮೂಲ : ಶರಣಕುಮಾರ ಲಿಂಬಾಳೆ
ಕನ್ನಡಕ್ಕೆ : ಪ್ರಮೀಳಾ ಮಾಧವ
ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್
ಪ್ರಕಟಣೆಯ ವರ್ಷ : ೨೦೧೭
ಬೆಲೆ : ರೂ. ೧೬೫
ಪುಟಗಳು : ೧೯೨
ಭಾರತದಾದ್ಯಂತ ಅಂಬೇಡ್ಕರ್ ದಲಿತರ ಪರವಾಗಿ ಮಾಡಿದ ಚಳುವಳಿಯ ಕುರಿತಾದ ಕಾದಂಬರಿ ಇದು. ಮನುಸ್ಮೃತಿಯಲ್ಲಿ ಶೂದ್ರರು ಮತ್ತು ದಲಿತರ ಕುರಿತಾಗಿರುವ ಉಲ್ಲೇಖಗಳಿಂದ ದಲಿತರ ಬದುಕು ನರಕವಾಗಿ ಬಿಟ್ಟು ಅವರಿಗಾದ ಅನ್ಯಾಯಗಳ ವಿರುದ್ಧ ಕೆರಳಿ ಕೆಂಡವಾದ ಅಂಬೇಡ್ಕರ್ ವರ್ಣವ್ಯವಸ್ಥೆಯಿಂದಾಗಿ ಹಿಂದೂ ಸಮಾಜದಲ್ಲಿ ಮೇಲು ಜಾತಿಯವರು ನಿಮ್ನ ಜಾತಿಯವರನ್ನು ಶೋಷಿಸಿದ್ದರ ವಿರುದ್ಧ ಸಮರ ಸಾರಿದರು. ಇಂಥ ಹಿಂದೂ ಸಮುದಾಯದಲ್ಲಿ ತಾನೆಂದೂ ಇರಲಾರೆ ಎಂದು ಬೌದ್ಧಧರ್ಮಕ್ಕೆ ಮತಾಂತರ ಹೊಂದಿ ಇತರರಿಗೂ ಕರೆಯಿತ್ತರು. ಆದರೆ ಆ ಮಹನೀಯರು ಮರಣ ಹೊಂದಿದ ನಂತರ ದಲಿತ ಚಳುವಳಿಯ ನೇತೃತ್ವ ವಹಿಸುವವರು ಯಾರೂ ಇಲ್ಲದೆ ದಲಿತರು ಅಸಹಾಯಕರಾದರು. ಆ ವಿಚಾರದಲ್ಲಿ ದೇಶದಾದ್ಯಂತ ಬಿಕ್ಕಟ್ಟುಗಳು ತಲೆದೊರಿದವು. ಜಗಳಗಳಾದವು. ಹಲವಾರು ಪಕ್ಷ- ಪಂಗಡಗಳು ಹುಟ್ಟಿಕೊಂಡವು. ಎಲ್ಲರೂ ‘ನಿಜವಾದ ಆಂದೋಲನ ನಮ್ಮದು’ಎಂದು ಕೂಗೆಬ್ಬಿಸ ತೊಡಗಿದವು. ಪ್ರಜಾಪ್ರಭುತ್ವದ ಹೆಸರಿನಲ್ಲಿ ದಲಿತ ಪ್ರತಿನಿಧಿಗಳನ್ನು ರಾಜಕೀಯ ಪಕ್ಷಗಳು ತಮ್ಮೆಡೆಗೆ ಸೆಳೆಯ ತೊಡಗಿದವು. ಈ ಕಾದಂಬರಿ ಇದೇ ವಿಷಯವನ್ನು ಕುರಿತು ಚರ್ಚಿಸುತ್ತದೆ.
ಮೊದಲ ಅಧ್ಯಾಯದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಬಡ ಯುವಕ ಅನಿರುದ್ಧ ಕಾಲೇಜಿಗೆ ಸೇರಿದಾಗ ಅವನಿಗೆ ದಲಿತ ಯುವಕರಿದ್ದ ರೂಮಿನಲ್ಲಿ ಸೀಟು ಸಿಗುತ್ತದೆ. ಅವನು ದಲಿತ ಗೆಳೆಯರ ಸಂಕಷ್ಟಗಳನ್ನು ನೋಡಿ ಮರುಗುತ್ತ ಸಾವಿರಾರು ವರ್ಷಗಳಿಂದ ಅವರನ್ನು ಶೋಷಿಸುತ್ತ ಬಂದ ತನ್ನ ಬ್ರಾಹ್ಮಣ ಸಮುದಾಯವನ್ನು ಬಿಟ್ಟು ದಲಿತನಾಗುತ್ತಾನೆ. ಇನ್ನೊಂದು ಅಧ್ಯಾಯದಲ್ಲಿ ಬ್ರಾಹ್ಮಣ ಸಮುದಾಯದ ಹುಡುಗಿ ದಲಿತನನ್ನು ಮದುವೆಯಾಗುತ್ತಾಳೆ. ದಲಿತ ಚಳುವಳಿ ಪ್ರಬಲವಾಗುತ್ತ ಹೊಗುತ್ತದೆ. ದಲಿತ ಪ್ಯಾಂಥರ್ ಮತ್ತು ರಿಪಬ್ಲಿಕನ್ ಪಾರ್ಟಿ ಎಂಬ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಸಂಘರ್ಷಗಳ ಮೂಲಕ ದಲಿತ ಚಳುವಳಿ ವ್ಯವಸ್ಥೆಯ ಒಂದು ಭಾಗವಾಗಿ ಹೋಗುತ್ತದೆ. ದಲಿತ ಸಾಹಿತ್ಯ ಮತ್ತು ದಲಿತ ರಾಜಕೀಯಗಳು ಈ ಚಳುವಳಿಯ ಉತ್ಪನ್ನಗಳಾಗುತ್ತವೆ. ಹೀಗೆ ಕಾದಂಬರಿಯ ವಸ್ತು ಇಂದಿನ ವ್ಯವಸ್ಥೆಯ ಜ್ವಲಂತ ಚಿತ್ರಣವಾಗಿದ್ದು ಅತ್ಯಂತ ಪ್ರಸ್ತುತವಾಗಿದೆ. ಪ್ರಮೀಳಾ ಅವರ ಅನುವಾದದ ಶೈಲಿ ಸುಂದರವಾಗಿದೆ ಮತ್ತು ಸುಲಲಿತವಾಗಿದೆ.
***************************
ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ