ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ
ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ
ವಿಭಾ ಪುರೋಹಿತ
ಮುಖಾಮುಖಿ
೧. ಕತೆ, ಕವಿತೆಗಳನ್ನ ಏಕೆ ಬರೆಯುತ್ತೀರಿ ?
ಕೆಲವು ಕಾಡುವ ವಿಷಯಗಳು ತನ್ನಷ್ಟಕ್ಕೆ ತಾನೇ ಬರೆಸಿಕೊಂಡುಬಿಡುತ್ತವೆ. ಮನದಲ್ಲಿ ಚಿಮ್ಮಿಬಂದ ತೀವ್ರ ಭಾವನೆಗಳ ಅಲೆಗಳನ್ನು ಅಕ್ಷರಗಳಲ್ಲಿ ಹಿಡಿದಿಡುವ ಕ್ರಿಯೆಯೇ ಕವಿತೆಗಳಾಗಿವೆ. ಹೀಗೇ ಹರಿದುಬಂದ ಪ್ರಬಲ , ಸಂವೇದನೆಗಳ ಕಂತೆಗಳು ಪದಗಳೊಂದಿಗೆ ಬೆಸೆದು ಕವನಗಳಾಗಿವೆ ಜೀವನದ ಅದೇ ರುಟೀನ್ ಕೆಲಸಕ್ಕೆ ಹೋಗುವದು,ಅಡುಗೆ,ಮನೆ,ಮಕ್ಕಳು ಅಂತ ಇದರಲ್ಲೇ ಮುಳುಗಿರುತ್ತೇವೆ.
ಈ ಯಾಂತ್ರಿಕತೆಯಿಂದ ಹೊರಬರಲು ಚೂರು ಚಿನಕುರುಳಿಯಂತೆ ಸಹಾಯವಾಗುತ್ತದೆ ನನ್ನ ಬರವಣಿಗೆ. ಮನಸ್ಸು ಗೆಲುವಾಗಿರುತ್ತದೆ,ಬದುಕು ಕಳೆಕಟ್ಟಿದಂತಾಗುತ್ತದೆ. ವರಕವಿ ಬೇಂದ್ರೆಯವರು ಹೇಳಿದಂತೆ- ರಸವೇ ಜೀವನ , ವಿರಸ ಮರಣ, ಸಮರಸವೇ ಜೀವನ ಎಂತಾದರೆ ಕವನ ರಚನೆಯ ಗೀಳು ಜೀವನದಲ್ಲಿ ನನಗೆ ರಸವನ್ನು ತುಂಬಿವೆ.
೨. ಕತೆ, ಕವಿತೆ ಹುಟ್ಟುವ ಕ್ಷಣ ಯಾವದು ?
ಹಿರಿಯರು ಹೇಳಿದಂತೆ ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ. ನನಗೂ ಸಹ ಈ ಎರಡೂ ಸಮಯದಲ್ಲಿ ಕವಿತೆಗಳು ಹುಟ್ಟುತ್ತವೆ. ಹಾಗೂ ಯಾರಾದರು ಅಸಹಾಯಕರನ್ನು ನೋಡಿದಾಗ ಅವರ ಪರಿಸ್ಥಿತಿಗೆ ಕಿವಿಯಾದಾಗ ಭಾವಲೋಕದಲ್ಲಿ ತೇಲಿ ನಾನೇ ಅವರ ಸ್ಥಿತಿಯಲ್ಲಿದ್ದೇನೆ ಎಂದು ( ಪರಕಾಯ ಪ್ರವೇಶ ಎನ್ನಬಹುದು) ಮನ ಕಂಬನಿಮಿಡಿಯುತ್ತದೆ, ಕವಿತೆ, ಕತೆ ಹುಟ್ಟುತ್ತದೆ. ಕೆಲವು ಕವಿತೆಗಳು ಮಿಂಚಿನ ಹಾಗೆ ಬಂದು ಬರೆಸಿಕೊಳ್ಳುತ್ತವೆ. ಇನ್ನೂ ಕೆಲವು ಒಂದೆರಡು ದಿನ ಮನಸ್ಸಿನಲ್ಲಿ,ಬುದ್ಧಿಯಲ್ಲಿ ಮಂಥನ ಚಿಂತನಗೊಂಡು ಕವಿತೆಗಳ ನವನೀತ ರೂಪುಗೊಳ್ಳುತ್ತದೆ. ಎಷ್ಟೋಸಲ ಹೆಣ್ಣಿನ ಸಂವೇದನೆಗಳಿಗೆ ಪ್ರತಿವಾದಿಯಾಗಿ ನಿಲ್ಲುವ ಘಟನೆಗಳು ಎದುರಾದಾಗ ಕವಿತೆಗಳು ಸೃಷ್ಟಿಯಾಗಿದ್ದಿವೆ. ಎದೆತುಂಬ ಒಲವು ತುಳುಕುವಾಗ ,ನಿಸರ್ಗ ರಮ್ಯತೆಯನ್ನು ಕಂಡಾಗ,ಅಂತಃಕರಣ ಒಳಹರಿವನ್ನು ಅನುಭವಿಸಿದಾಗ ಅನೇಕ ರಚನೆಗಳು ಜನ್ಮತಳಿದಿವೆ.
೩. ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?
ಸ್ವೇದನೆಯೇ ಹೆಚ್ಚಾಗಿ ಕಂಡುಬರುತ್ತದೆ. ಸಾಮಾಜಿಕ ವ್ಯವಸ್ಥೆ, ಅಸಮಾನತೆ,ಮನುಷ್ಯನ ಹಣದ ಮೋಹ ಇವೆಲ್ಲವು ವಿಷಯವಾಗುತ್ತವೆ. ಹೆಣ್ಣಿನ ಅನಾದರ,ಅಗೌರವ ನನ್ನನ್ನು ತಲ್ಲಣಗೊಳಿಸುತ್ತವೆ. ಸದಾ ಕಾಡುವ ಪಾತ್ರಗಳು ದ್ರೌಪದಿ,ಭಾನುಮತಿ,ಕುಂತಿ….. ಇತ್ಯಾದಿ. ಪ್ರಸ್ತುತವಾಗಿ ಕಾಡುವದೇನೆಂದರೆ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿರುವ ಹೆಣ್ಣು ಗಂಡಿಗೆ ಸರಿಸಮನಾಗಿ ದುಡಿಯುತ್ತಿದ್ದಾಗಲೂ ವಿವಿಧ ರೀತಿಯ ಸಂಕಟಗಳನ್ನು ಅನುಭವಿಸುವದು. ಮಾನಸಿಕವಾಗಿಯೂ ದೈಹಿಕವಾಗಿಯೂ ಅವಳ ಗೋಳು ಹೇಳತೀರದ್ದು. ಇದು ಒಂದು ಮುಖವಾದರೆ ಇನ್ನೊಂದು ಕಡೆ ಅನಕ್ಷರಸ್ಥರ ಗೋಳು , ಮನೆಗೆಲಸ ಮಾಡುವವರು, ಗಾರೆ ಕೆಲಸದವರು ವಿದ್ಯೆಗಳಿಸಿಲ್ಲವೆಂದು ಈ ಸಂಕಷ್ಟಗಳು ಎದುರಾಗಿವೆ ಎಂದು ಗೊಣಗುತ್ತಾ ಇರುತ್ತಾರೆ. ವ್ಯತ್ಯಾಸ ಕಂಡುಬರುವದಿಲ್ಲ ಇಬ್ಬರೂ ನೋವಿಗೆ ಮೈ ಒಡ್ಡಿಕೊಂಡೇ ದುಡಿಯುತ್ತಾರೆ.
೪. ಕತೆ, ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೆ ?
ಖಂಡಿತವಾಗಿಯೂ ಇಣುಕಿದೆ. ಬಾಲ್ಯದ ಊರು,ಕಲಿತ ಶಾಲೆ, ಅಜ್ಜಅಜ್ಜಿ, ಗೆಳೆಯರು ಜೀವಮಾನವಿಡೀ ಮರೆಯಲಾರದ ನೆನಪಿನ ಜಾದೂಪೆಟ್ಟಿಗೆಗಳು : ತೆಗೆದರೆ ಒಂದೊಂದಾಗಿ ಹೊರಬಂದು ಹೃನ್ಮನಗಳನ್ನು ತಣಿಸುತ್ತವೆ. ಬಾಲ್ಯ ಎಲ್ಲರ ಜೀವನದ ಅದ್ಭುತ ಘಟ್ಟ. ಓ…. ಆ ಸುಂದರ ನೆನಪುಗಳ ಸೆಳೆತ ಮನಸ್ಸಿನ ಶೂನ್ಯತೆ,ಖಿನ್ನತೆಯ ಭಾವಗಳಿಂದ ಬಡಿದೆಬ್ಬಿಸಿ ಸಂತಸ ತುಂಬುತ್ತವೆ. ಕ್ಯಾಮರಾ ಕಣ್ಣಲ್ಲಿ ಚಿತ್ರಗಳು ಶಾಶ್ವತವಾದಂತೆ ಈ ಸುಂದರ ನೆನಪುಗಳ ತೊರೆಗಳನ್ನು ನನ್ನ ಹೃದಯದಲ್ಲಿ ಹಾಗೂ ಆತ್ಮದಲ್ಲಿ ಸೆರೆಹಿಡಿದು ಅವುಗಳಿಗೆ ಅಮರತ್ವವನ್ನು ನೀಡಿದ ಹಲವಾರು ಕವಿತೆಗಳಿವೆ. “ಹುಚ್ಚು ಖೋಡಿ ಈ ವಯಸು ಅದು ಹದಿನಾರರ ವಯಸು” ಎಂದು ಹಾಡಿದ ಹಿರಿಯಕವಿಯ ಸಾಲುಗಳಂತೆ ನನ್ನ ಕವಿತೆಗಳು ಕೆಲವು ಸಾಕ್ಷಿಯಾಗಿವೆ.
೫. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಪ್ರತಿಕ್ರಿಯೆ ಏನು ?
ಮೊದಲಿನಿಂದಲೂ ರಾಜಕೀಯ ನನಗೆ ನಿರಾಸಕ್ತಿಯ ವಿಷಯ. ರಾಜಕೀಯ ದೊಂಬರಾಟವನ್ನು ನಿರ್ಭಿಡೆಯಿಂದ ಬಯಲಿಗೆಳೆಯುವ ಅನೇಕ ಬರಹಗಳು ತಂಡೊಪತಂಡವಾಗಿ ಬರುತ್ತವೆ. ಆದರೂ ಇದು ಯಾವಾಗಲೂ ಹಗ್ಗಜಗ್ಗಾಟದ ಮೈದಾನವೇ ಸರಿ.ಲೋಕಕಲ್ಯಾಣಾರ್ಥವಾಗಿ ಸೇವೆ ಮಾಡುವವರು ಈಗ ವಿರಳ. ದೇಶಭಕ್ತಿಯನ್ನು ಬಹಿರಂಗವಾಗಿ ಪ್ರದರ್ಶನ ಮಾಡುತ್ತಾ ಅಂತರಂಗದಲ್ಲಿ ಸ್ವಾರ್ಥವೇ ತುಂಬಿಕೊಂಡಿರುವರು ಹೆಚ್ಚಾಗಿದ್ದಾರೆ. ಅಪರೂಪಕ್ಕೆ ಒಂದಿಬ್ಬರು ನಿಜವಾದ ದೇಶಸೇವಕರಿದ್ದರೂ ಅವರ ಸುತ್ತ ಕಾಲೆಳೆಯುವ ಅಮೂರ್ತ ಕೈಗಳು ಬೇಕಾದಷ್ಟು ಇರುತ್ತವೆ. ಪಕ್ಷಾತೀತವಾದ ಅಪ್ಪಟ ಸೇವಾಮನೋಭಾವವುಳ್ಳ ನೇತಾರರು ಇಂದಿನ ಅಗತ್ಯ.
೬. ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?
ವಿಶ್ವದ ಸಕಲ ಚರಾಚರಗಳ ಚಲನೆಗೆ ಯಾವುದೋ ಒಂದು ಶಕ್ತಿ ಕಾರಣ . ಆ ಆಮೂರ್ತ ಅವ್ಯಕ್ತ ಅನನ್ಯ ಶಕ್ತಿಯೇ ದೇವರು ಎಂದು ನನ್ನ ಭಾವನೆ.ಶಕ್ತಿ ನಿರಂತರ ಹಾಗೇ ದೇವರು ನಿರಂತರ. ವಿಗ್ರಹ ಆರಾಧನೆಯಲ್ಲಿ ನಂಬಿಕೆಯಿಲ್ಲ.ಮೌಢ್ಯ ಆಚರಣೆಗಳಿಗೆ ವಿರೋಧವಿದೆ.
ಪ್ರೇಮ,ಜ್ಞಾನ,ಧ್ಯಾನ ಇವುಗಳ ತ್ರಿವೇಣಿಸಂಗಮವೇ ಧರ್ಮ.
ಭಾರತೀಯತೆಯೇ ಶ್ರೇಷ್ಠ ಧರ್ಮ.
೭. ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನೆನಿಸುತ್ತದೆ ?
ನಾವು ಹಿಂತಿರುಗಿ ನಡೆದು ಬಂದ ದಾರಿಯನ್ನು ಅವಲೋಕಿಸಿದಾಗ ನಮ್ಮ ಗಮನಕ್ಕೆ ಬರುವ ವಿಷಯವೆಂದರೆ ನಮ್ಮ ಪರಂಪರೆಯಲ್ಲಿ ಹಾಗೂ ಸಮಷ್ಟಿಪ್ರಜ್ಞೆಯಲ್ಲಿ ಅನೇಕ ಪುರಾತನ ವಿಚಾರಗಳು ಪದ್ಧತಿಗಳು ನಡೆ-ನುಡಿಗಳು ತಾವೇ ತಾವಾಗಿ ಕಳಚಿ ಹೋಗಿವೆ. ಹಲವು ಹೊಸತತ್ವಗಳು ಅಸ್ತಿತ್ವಕ್ಕೆ ಬಂದಿವೆ. ” ಬದಲಾವಣೆ ಪ್ರಕೃತಿಯ ನಿಯಮ” ಅಲ್ಲವೆ ? ಇಂದು ವಿಜ್ಞಾನದ ಪ್ರಗತಿಯಿಂದಾಗಿ ಜಗತ್ತೆಲ್ಲವೂ ಒಂದಾಗುತ್ತಿರುವ ಹಾಗೂ ಜಾಗತೀಕರಣದ ನೂತನ ಬಿರುಗಾಳಿ ಬೀಸುತ್ತಿರುವಾಗ ಹೊಸ ಚಿಂತನ,ಹೊಸ ಜೀವನಶೈಲಿ,ಹೊಸ ಆಲೋಚನೆಗಳು ನಮ್ಮ ಬದುಕಿನಲ್ಲಿ ಹೊಸ ಸವಾಲುಗಳನ್ನು ಹುಟ್ಟಿಸುತ್ತವೆ. ಹೊಸತನದ ತೆರೆಗಳ ಅಬ್ಬರ ! ಜಾಗರೂಕತೆಯಿಂದ ಯಾವ ತತ್ವವನ್ನು ಸ್ವೀಕರಿಸಬೇಕು ? ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ ಮಹಾಮಾರಿ ಕೊರೋನಾ ಕಲಿಸಿದ ಪಾಠವನ್ನು ಮರೆಯುವಂತಿಲ್ಲ. ಪ್ರಜ್ಞಾಪೂರ್ವಕವಾಗಿ ಚಿಂತನ ಮಂಥನ ಮಾಡಿ ಹೊಸತತ್ವದಲ್ಲಿ ಯಾವುದು ಸತ್ವಹೀನವೋ ಅದನ್ನು ಬದಿಗೊತ್ತಿ ಪುಷ್ಟಿಯಿರುವ ತತ್ವಗಳನ್ನು ಮಾತ್ರ ಆಯ್ದುಕೊಳ್ಳಬೇಕಿದೆ. ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು, ಒಲವು ಹಾಗೂ ಗೌರವವಿದೆ.
೮. ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಸುವಿರಿ ?
ಇದರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಪಂಥ ರಾಜಕೀಯವಿದೆ ಎಂದು ಆಗಾಗ ಕೇಳಿಬರುತ್ತದೆ. ಸಾಹಿತ್ಯದ ಅಂತಃಸತ್ವವನ್ನರಿತು ಮತಿವಂತರಾಗಿ ವರ್ತಿಸಬೇಕಾಗಿದೆ.
೯. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತದೆ ?
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ದೇಶದ ಚಲನೆ ಅವ್ಯಾಹತ. ಪಾರದರ್ಶಕತೆ ಮತ್ತು ದೂರದೃಷ್ಟಿ ಹೊಂದಿರುವ ಸಮರ್ಥ ಆಡಳಿತಗಾರರಾದರೆ ದೇಶ ಸುಗಮವಾಗಿ ನಡೆಯಬಲ್ಲದು.ಇಲ್ಲವಾದರೆ ದೇಶದ ಪ್ರಜೆಗಳು ದುರ್ಗಮ ಸ್ಥಿತಿ ಅನುಭವಿಸಬೇಕಾಗುವದು.
೧೦. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?
ಸತ್ವಯುತವಾದ , ಕಾಲಾತೀತವಾಗಿ ನಿಲ್ಲುವ ಸಾಹಿತ್ಯ ಸೃಷ್ಟಿಯಡೆಗೆ ತುಡಿತವಿದೆ. ಎಲ್ಲ ಹಿರಿಯ ಸಾಹಿತಿಗಳ ಅಧ್ಯಯನ,ಹೊಸತಲೆಮಾರಿನ ಪ್ರಯೋಗಶೀಲತೆಯನ್ನು ಮನಸಲ್ಲಿಟ್ಟುಕೊಂಡು ನಮ್ಮತನವನ್ನು ಉಳಿಸಿಕೊಳ್ಳುತ್ತ ಮುಂದುವರಿಯಬೇಕಿದೆ. ಶೋಷಿತರಿಗೆ ದನಿಯಾಗುವ , ಸ್ತ್ರಿ ಸಂವೇದನೆ , ಸ್ತ್ರೀ ಪರ ಚಿಂತನೆಗೆ ಮೆಟ್ಟಿಲಾಗುವ ದಾರಿಯತ್ತ ಸಾಗಬೇಕಿದೆ.
೧೧. ನೆಚ್ಚಿನ ಕನ್ನಡದ ಹಾಗೂ ಆಂಗ್ಲ ಸಾಹಿತಿಗಳಾರು ?
ಇಷ್ಟದಕವಿ ಜಿ.ಎಸ್. ಶಿವರುದ್ರಪ್ಪ
ಇನ್ನೂ ಹಲವಾರು ಸಾಹಿತಿಗಳು ಜಯಂತ ಕಾಯ್ಕಿಣಿ, ಚೆನ್ನವೀರ ಕಣವಿ
ಕವಯಿತ್ರಿಯರು ವೈದೇಹಿ,ಲಲಿತಾ ಸಿದ್ಧಬಸವಯ್ಯಾ ,ಮಾಲತಿ ಪಟ್ಟಣಶೆಟ್ಟಿ
ಆಂಗ್ಲ ಸಾಹಿತಿಗಳೆಂದರೆ ಜಾನ್ ಕೀಟ್ಸ ಮತ್ತು ಟಿ.ಎಸ್.ಎಲಿಯಟ್
೧೨. ಇತ್ತೀಚೆಗೆ ಓದಿದ ಕೃತಿಗಳಾವುವು ?
ನಾರಾಯಣ.ಪಿ.ಭಟ್ಟ ಅವರ “ನೆನಪಿನ ಉಯ್ಯಾಲೆ”
ನಾಗರೇಖಾ ಗಾವ್ಕರ್ ಅವರ ” ಆಂಗ್ಲ ಸಾಹಿತ್ಯ ಲೋಕ”
೧೩. ಇಷ್ಟವಾದ ಕೆಲಸ ಯಾವದು ?
ಕನ್ನಡೇತರರಿಗೆ ಕನ್ನಡ ಕಲಿಸುವದು, ರಂಗೋಲಿ ಹಾಕುವದು ಮತ್ತು ಅಡುಗೆ ಮಾಡುವದು.
೧೪. ಇಷ್ಟವಾದ ಊರು ?
ಧಾರವಾಡ ಎರಡು ಕಾರಣಗಳಿಂದ * ನನ್ನ ತವರುಮನೆ
* ವರಕವಿ ಬೇಂದ್ರೆಯವರಂಥ ಮಹಾನ್ ಸಾಹಿತಿ ನೆಲೆಸಿದ್ದ ಊರು. ಹಾಗೂ ಕನ್ನಡ ಸಾರಸ್ವತಲೋಕಕ್ಕೆ ಧಾರವಾಡ ಹಲವಾರು ಮೇರು ಸಾಹಿತಿಗಳನ್ನ ನೀಡಿದಂತಹ ನೆಲ.
೧೫. ಇಷ್ಟವಾಗುವ ಸಿನಿಮಾಗಳು ಯಾವವು ?
ಮಾಲ್ಗುಡಿ ಡೇಸ್, ಕವಿರತ್ನಕಾಳಿದಾಸ ಮತ್ತು ಫಸ್ರ‍್ಯಾಂಕ್ ರಾಜು
೧೬. ಮರೆಯಲಾರದ ಘಟನೆಗಳಾವವು ?
* ಧಾರವಾಡದಲ್ಲಿ ನಡೆದ ೮೪ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸುಯೋಗ ಓದಗಿಬಂದಿತ್ತು. ಅಪ್ಪ,ಅಮ್ಮ ಇಬ್ಬರನ್ನೂ ಕರೆದುಕೊಂಡು ಹೋದೆ. ವಿಶಾಲವಾದ ಸಭಾಂಗಣದ ಆಸನದ ಮೇಲೆ ಕುಳಿತೆವು. ಕರ‍್ಯಕ್ರಮ ಇನ್ನೇನು ಶುರುವಾಗಬೇಕು ಕವಿಗೋಷ್ಠಿಯ ಅಧ್ಯಕ್ಷರು,ಅತಿಥಿಗಳು ಒಬ್ಬೊಬ್ಬರಾಗಿ ಆಗಮಿಸತೊಡಗಿದರು, ನಂತರ ಕವಿಗಳ ಹೆಸರುಗಳನ್ನು ವೇದಿಕೆಗೆ ಬರಬೇಕೆಂದು ಆಹ್ವಾನಿಸುತ್ತದ್ದರು,ಆಗ ವೇದಿಕೆಯ ಮೇಲೆ ನನ್ನ ಹೆಸರು ಕರೆದ ತಕ್ಷಣ ಅಪ್ಪನ ಕಣ್ಣಲ್ಲಿ ಆನಂದಬಾಷ್ಪಗಳು ದಳದಳನೇ ಇಳಿದುಬಂದವು. ಅಪ್ಪನ ಹೆಮ್ಮೆಯ ಭಾವ ಕಂಡು ನನ್ನ ಮತ್ತು ಅಮ್ಮನ ಕಣ್ಣುಗಳು ಆದ್ರಗೊಂಡಿದ್ದವು.
*************************************************
**********************************************************
ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚೆನ್ನಾಗಿ ಮೂಡಿಬಂದಿದೆ.ಕವಿಯ ಕವಿತೆ ಅವರವರ ಪಾಲಿಗೆ ಅಸಾಮಾನ್ಯವಾದುದು..ಅದು ಸಾಮಾಜದಲ್ಲಿ ಗುರುತಿಸುವಂತಾದಾಗ ಹೆಮ್ಮೆ ಇಡೀ ಕುಟುಂಬ ಸಂತಸ ಪಡುವ ಗಳಿಗೆ ….
Thanks