ಅಂಕಣ ಸಂಗಾತಿ ಜ್ಯೋತಿ ಡಿ ಬೊಮ್ಮಾ ಮನದ ಮಾತುಗಳು ನಶೆ ಮುಕ್ತರಾಗಲಿ ಯುವಜನತೆ ಈ ವಾರ ಮಾದಕ ವ್ಯಸನ ನಿವಾರಣಾ ಸಪ್ತಾಹ ಆಚರಿಸಲಾಯಿತು. ಕುಡಿತ ಮತ್ತು ಮಾದಕ ಪದಾರ್ಥಗಳ ವ್ಯಸನ ಯುವ ಪಿಳಿಗೆಗೆ ಒಂದು ಶಾಪ.ಯಾವಾಗ ವ್ಯಸನಕ್ಕ ಬಲಿ ಆಗ್ತಾರ ಅಂತ ಗೊತ್ತಾಗಲ್ಲ.ಗೊತ್ತಾಗುವಷ್ಟರಲ್ಲಿ ವ್ಯಸನಿಗಳಾಗಿ ಅದರಿಂದ ಹೊರ ಬರಲಾರದವರಾಗಿರತಾರ.ಇತ್ತೀಚಿಗೆ ಲಡಾಖ್ ಪ್ರವಾಸ ಹೋಗಿದ್ಧ.ಇಷ್ಟು ದಿನ ಅಲ್ಲಿ ಮದ್ಯಪಾನಕ್ಕ ಅವಕಾಶ ಇರಲಿಲ್ಲ.ಈಗ ಸರ್ಕಾರ ಅವಕಾಶ ಮಾಡಕೊಟ್ಟದ.ಅದರ ಅಗತ್ಯ ಇರಲಿಲ್ಲ ನಿಜ.ಆದ್ರ ಸರ್ಕಾರ ಕ್ಕ ಮದ್ಯ ಮಾರಾಟ ಒಂದು ದೊಡ್ಡ ಆದಾಯ.ಬ್ಯಾರೆ ಬಿಸಿನೆಸ್ ನಿಂದ ಬರುವ ಟ್ಯಾಕ್ಸ್ ಗಿಂತ ಮದ್ಯ ಮಾರಾಟದಿಂದ ಬರುವ ಟ್ಯಾಕ್ಸ್ ಸರ್ಕಾರ ಕ್ಕ ಉಪಯೋಗ. ಆದ್ರ ಇದರಿಂದ ಆಗುವ ಉಪಯೋಗ ಅನುಪಯೋಗ ಜನ ಸಾಮಾನ್ಯರು ಚರ್ಚಿಸಬೇಕು.ಅಲ್ಲಿ ಇರುವದು ದಯಡಿಯುವ ವರ್ಗ.ಗಳಿಸಿದ ದುಡ್ಡಲ್ಲಿ ಸಂಸಾರ ನೋಡಕೊಂಡು ಆರಾಮ ಇದ್ರು.ಈಗ ಮದ್ಯ ಅವರಿಗೆ ಅಧಪತನಕ್ಕ ಕರೆದೊಯ್ಯತದ. ಸುಲಭವಾಗಿ ಸಿಗುವದರಿಂದ ದುಡಿದ ತಮ್ಮ ದಣಿವು ಪರಿಹಾರ ಮಾಡಕೊಳ್ಳಾಕ ಮದ್ಯದ ಮೊರೆ ಹೋಗತಾರ.ಕ್ರಮೇಣ ವ್ಯಸನಿಗಳಾಗತಾರ.ಆದ್ರ ಅಲ್ಲಿನ ಸರ್ಕಾರ ದವರ ಹೆಳಿಕೆ ಬ್ಯಾರೆ.ಯುವ ಜನ ಬ್ಯಾರೆ ಬ್ಯಾರೆ ನಶೆ ಪದಾರ್ಥ ಉಪಯೋಗಿಸಿ ಹಾಳಾಗುವದನ್ನು ತಡೆಯಲು ಮದ್ಯ ಮಾರಾಟದ ಪರವಾನಿಗೆ ಕೊಡಲಾಗಿದೆ ಎಂದು ಹೇಳತಾರಂತೆ.ಒಂದು ವ್ಯಸನಕ್ಕೆ ಮತ್ತೊಂದು ವ್ಯಸನ ಪರ್ಯಾಯ ಆಗಲ್ಲ.ಮದ್ಯ ಮಾರಾಟ ಮುಕ್ತ ರಾಜ್ಯಗಳು ಇವೆ.ಸಿಗಲಾರದು ಎಂದು ಜನ ಅದರ ಗೋಜಿಗೆ ಹೋಗದಿರಬಹುದು.ಉಳ್ಳವರು ಬೇರೆ ವ್ಯವಸ್ಥೆ ಮೂಲಕ ತರಿಸಿಕೊಂಡು ಕುಡಿಬಹುದು. ಆದ್ರೆ ಮುಕ್ತವಾಗಿ ಸಿಗುವದರಿಂದ ಆಗುವ ಅಧಪತನ , ಸಿಗದಿದ್ದಾಗ ಆಗದು.ಅದಕ್ಕೆ ಮದ್ಯ ಮಾರಾಟದ ನಿಷೇಧ ಒಳ್ಳೆದು. ಒಮ್ಮೆ ಓದಿದ ನೆನಪು.ಝೆನ್ ಝಿ ಗಳು ಕುಡಿಯುವದಕ್ಕ ಅಷ್ಟು ಒಲವು ತೊರಿಸುತ್ತಿಲ್ಲ ಎಂದು. ಆದ್ರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮುಕ್ತ ವಾಗಿ ಮದ್ಯ ಮತ್ತು ಗಾಂಜಾ ಇತರ ಮಾದಕ ಪದಾರ್ಥಗಳ ಸೇವನೆ ಮಾಡತಾರೆ.ಇಂಜಿನಿಯರಿಂಗ್ , ವೈದ್ಯಕೀಯ ವಿದ್ಯಾರ್ಥಿಗಳೆ ಇದಕ್ಕೆ ಹೆಚ್ಚು ಬಲಿ ಆಗತಿದ್ದಾರೆ.ಯೌವನದ ಅಮಲಿನಲ್ಲಿ ಏನು ಮಾಡಿದ್ರು ನಡಿತದ ಎಂಬ ದೋರಣೆ. ಗೆಳೆಯರೊಂದಿಗೆ ಸೇರಿ ಒಂದು ಹೊಸ ಅನುಭವ ಎಂದು ಶುರು ಮಾಡುವದು ಯಾವಾಗ ತಮಗ ವ್ಯಸನ ಆಗತದ ಎಂದು ಅರಿವಾಗುವಷ್ಟರಲ್ಲಿ ಅದರಿಂದ ಹೊರ ಬರಲಾರದವರಂಗ ಆಗಿರತಾರ.ಹಾಗಂತ ಎಲ್ಲ ವಿದ್ಯಾರ್ಥಿಗಳು ವ್ಯಸನಿಗಳೆ ಅಂತ ಹೆಳಕ್ಕಾಗಲ್ಲ.ತಮ್ಮ ಬುದ್ಚಿಯ ಸೀಮೀತದಲ್ಲಿ ಇರುವವರು ಮಾದಕ ವಸ್ತು ಗಳನ್ನು ಒಂದು ಪ್ರಯೋಗವಾಗಿ ಉಪಯೋಗಿಸಿಕೊಂಡು ಬಿಡತಾರ.ಅದನ್ನೆ ದಿನಚರಿ ಮಾಡಿಕೊಂಡವರ ವ್ಯಸನ ಬಿಡಿಸೋದು ಕಷ್ಟ. ಕಾಲೇಜ್ ಯುನಿವರ್ಸಿಟಿ ಗಳಲ್ಲಿ ಮಾದಕ ವಸ್ತುಗಳನ್ನು ಎಲ್ಲಿಂದ ತರತಾರ..! ಇವುಗಳನ್ನು ನಿಯಂತ್ರಣ ಮಾಡಲು ಅಲ್ಲಿನ ಸಿಬ್ಬಂದಿ ಪ್ರಯತ್ನ ಮಾಡಬಹುದು . ಆದ್ರ ವಿದ್ಯಾರ್ಥಿಗಳು ಕದ್ದು ಮುಚ್ಚಿ ಮಾಡುವ ವ್ಯಸನಕ್ಕ ಅವರು ಕುರುಡಾಗಿರತಾರ ಅಂತ ಕಾಣತದ.ನನ್ನ ಮಗ ಕಲಿಯುವ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗಾಂಜಾ ಮತ್ತಿತರ ನಶೆ ಪದಾರ್ಥಗಳನ್ನು ಉಪಯೋಗಿಸುವದನ್ನು ಹೇಳತಿರತಾನೆ.ಅದು ಕೆಟ್ಟದ್ದು ಎಂದು ಅವರಿಗೂ ಗೊತ್ತು.ಆದ್ರೂ ಯೌವನದ ಹುರುಪು.ಈಗಲ್ಲದಿದ್ರೆ ಮಜಾ ಮತ್ಯಾವಾಗ ಮಾಡೋದು , ಒಂದು ಸಲ ಮಾಡಿ ನೋಡೋಣ , ಹೀಗೆ ಒಂದು ಪ್ರಯೋಗವಾಗಿ ಶುರುಮಾಡತಾರೆ. ಮಾದಕ ಪದಾರ್ಥಗಳ ಬಗ್ಗೆ ನಮಗೆ ಗೊತ್ತಿರುವದಕ್ಕಿಂತ ಹೆಚ್ಚು ನಮ್ಮ ಮಕ್ಕಳಿಗೆ ಗೊತ್ತಿರತದ. ಅದರಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆಯೂ ತಿಳಿದಿರತದ.ನಾವು ಅವರಿಗೆ ಎಚ್ಚರಿಕೆ ಕೊಡಬಹುದು.ಆದ್ರ ನಿಯಂತ್ರಿಸಲಿಕ್ಕ ಆಗಲ್ಲ.ಅದರ ಪರಿಣಾಮ ದುಷ್ಪರಿಣಾಮ ಸ್ವತಃ ಅವರು ತಿಳಕೊಂಡು ತಮ್ಮನ್ನು ತಾವು ನಿಯಂತ್ರಣ ಮಾಡಕೊಳ್ಳಬೇಕು. ನಶೆ ಪದಾರ್ಥಗಳ ಬಳಕೆ ಮಾಡುವುದು ಬೇಡ ಅಂತ ಎಲ್ಲಾ ಹೆತ್ತವರಂತೆ ನಾನು ನನ್ನ ಮಕ್ಕಳಿಗೆ ಹೇಳತೇನೆ.ಆದ್ರ ಬೇಡವೇ ಬೇಡ ಅಂತ ಹೆಳಲಾರೆ.ಗೆಳೆಯರ ಸಂಗಡ ಅವರು ಬೆರೆತು ಅವರಿಷ್ಟ ಇದ್ರೆ ಉಪಯೋಗಿಸಲಿ , ಎಚ್ಚರಿಕೆ ಮಾತ್ರ ಸದಾ ಇರಲಿ ಎಂಬುದು ಸೂಚಿಸತೆನ ಯುವ ಜನ ಮದ್ಯಕ್ಕಿಂತ ಇತರ ನಶೆ ಪದಾರ್ಥ ಗಳಿಗೆ ಬಲಿ ಆಗತಿರೋದು ಶೋಚನೀಯ.ಇಂತಹ ನಶೆಗಳು ದೇಶವಿದೇಶಗಳ ನೆಲದಲ್ಲಿ ಸಾಂಕ್ರಾಮಿಕ ವಾಗಿ ವ್ಯಾಪಿಸತಿವೆ. ಇವುಗಳನ್ನು ತೆಡಯಲು ಪೋಲಿಸ್ ಪಡೆಗಳು ಶ್ರಮಿಸಬೇಕು.ಕಾಲೇಜ್ ಗಳಲ್ಲಿ ವಿದ್ಯಾರ್ಥಿ ಗಳ ಕೈಗೆ ಸಿಗದಂಗ ನಿಯಂತ್ರಿಸಬೇಕು. ಆದ್ರ ಈಗಿನ ಸಿನಿಮಾಗಳಲ್ಲಿ ಹೀರೋ ಸಿಗರೇಟ್ ಮತ್ತು ಡ್ರಗ್ ವ್ಯಸನಿ ಆಗಿರತಾನ.ಅವನನ್ನು ಹೀರೋ ಅನ್ನತೀವಿ.ಇಂತಹ ಹೀರೋಗಳು ಸಮಾಜಕ್ಕ ಏನು ಸಂದೇಶ ಕೊಡತಾರ..ಈಗಿನ ಎಲ್ಲಾ ಸಿನಿಮಾಗಳಲ್ಲೂ ಹೀರೋ ನ್ ಕೈಯಲ್ಲಿ ಉರಿಯುವ ಸಿಗರೇಟ್ ಇರತದ. ಮುಂದಿನ ಎರಡ್ಮೂರು ವರ್ಷಗಳಲ್ಲಿ ನಮ್ಮ ರಾಜ್ಯ ವ್ಯಸನ ಮುಕ್ತವಾಗಿ ಮಾಡಲಾಗತದ ಅಂತ ಸರ್ಕಾರ ಹೆಳ್ಯಾದ.ಒಳ್ಳೆದು.ನಶೆ ಪದಾರ್ಥಗಳು ವಿದ್ಯಾರ್ಥಿ ಗಳ ಕೈಗೆ ಸಿಗದಂಗ ಮೊದಲು ನಿಯಂತ್ರಿಸಬೇಕು.ನಶೆ ಪದಾರ್ಥಗಳು ನಮ್ಮ ರಾಜ್ಯದಲ್ಲಿ ತಯ್ಯಾರಾಗದಂತೆ , ಹೊರಗಿನಿಂದ ಬರದಂತೆ ನಿಯಂತ್ರಣ ಮಾಡೊದು ಮುಖ್ಯ. ಮದ್ಯ ಮತ್ತು ಇತರ ಮಾದಕ ಪದಾರ್ಥ ಗಳಲ್ಲಿ ಬಹಳ ವ್ಯತ್ಯಾಸ ಇರತದಂತ.ಮದ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ದುಷ್ಪರಿಣಾಮ ಆಗತದಂತ ಈ ಮಾದಕ ವಸ್ತುಗಳನ್ನು ಉಪಯೋಗಿಸುವ ದರಿಂದ.ಗೊತ್ತಿರಲಾರದವ್ರು ಯಾರೂ ಇಲ್ಲ ಈಗ.ಗೊತ್ತಿದ್ರೂ ಒಂದು ಸಲ ನೋಡೊಣ ಎಂಬ ಪ್ರಯೋಗ ಯುವಜನತೆಯ ಆಸೆ.ಇದೇ ಕ್ರಮೇಣ ವ್ಯಸನ ಆಗೊದು ದುರಂತ. ವಿದ್ಯಾರ್ಥಿಗಳು ಜಸ್ಟ್ ಫನ್ ಎಂದು ಶುರುಮಾಡುವ ನಶೆಗಳು ಅವರ ಜೀವಕ್ಕೆ ಮಾರಕ ಆಗತಾವೆ ಅಂತ ಅರ್ಥಾಗಲ್ಲ.ಆದರೂ ಒಂದು ಸಮಾಧಾನ.ಈಗೀನ ವಿದ್ಯಾರ್ಥಿಗಳು ತಮ್ಮ ಜೀವನದ ಒಳ್ಳೆದು ಕೆಟ್ಟದ್ದು ತಾವೇ ನಿರ್ಧರ ಮಾಡ್ತಾರ.ಅವರಲ್ಲಿ ವಿವೇಚನೆ ಅದ.ದೊಡ್ಡ ನಗರಗಳಲ್ಲಿ ಪಬ್ ಗಳಲ್ಲಿ ಕಾಣುವ ಯುವಕ ಯುವತಿಯರೆಲ್ಲ ಹೆಚ್ಚಾಗಿ ಸ್ವಾವಲಂಬಿ ಗಳು. ವ್ಯಸನದ ಪರಿಣಾಮ ಬಲ್ಲವರು, ತಮ್ಮ ಮಿತಿಯಲ್ಲಿ ಜೀವನವನ್ನು ಎಂಜಾಯ್ ಮಾಡುವದಕ್ಕೆ ಆಕ್ಷೇಪ ಮಾಡಲಾಗದು.ಆದ್ರೆ ದುಡಿಯುವ ವರ್ಗದ ವ್ಯಸನಿಗಳ ಜೀವನ ಶೋಚನೀಯ.ಮಾದಕವಸ್ತು ನಿಯಂತ್ರಣ ಮಾಡುವದೆ ಇದಕ್ಕೆಲ್ಲ ಪರಿಹಾರ. ಜ್ಯೋತಿ ಡಿ ಬೊಮ್ಮಾ
ಅಂಕಣ ಸಂಗಾತಿ ಗಾದೆಗಳ ಗಣಿ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ನೀರಲ್ಲಿ ವಾಸ, ಮೊಸಳೆ ಜೊತೆ ದ್ವೇಷ ನಮ್ಮ ದಿನ ನಿತ್ಯದ ಬದುಕಿನಲ್ಲಿ ನಮ್ಮನ್ನು ನಾವೇ ಅರ್ಥಮಾಡಿಕೊಳ್ಳಬೇಕು.ಅಂದಾಗ ಮಾತ್ರ ಈ ಪ್ರಪಂಚದಲ್ಲಿ ಸ್ವಲ್ಪ ಮಟ್ಟಿಗೆ ಹೊಂದಾಣಿಕೆಯಿಂದ ಬದುಕಲು ಸಾಧ್ಯ.ಹಾಗೆಂದು ಕೆಟ್ಟದ್ದನ್ನು ಮಾಡುವುದು ಸರಿಯಲ್ಲ.ನಾವುಗಳು, ನಾವಾಗಿ ಜೀವಿಸಲು ಕೆಲವು ಸುಲಭ ಸುಲಲಿತ ಮಾರ್ಗಗಳಿವೆ.ಒಳ್ಳೆಯ ಮಾರ್ಗವನ್ನಾರಿಸಿಕೊಂಡು ನಮ್ಮ ದುಡಿತದಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು.ಇವತ್ತಿನ ದಿನಮಾನಗಳಲ್ಲಿ ಸರ್ಕಾರಿ ನೌಕರಿರಲಿ,ಕಂಪನಿ ಕೆಲಸಗಾರರಿರಲಿ,ಅಥವಾ ಕಾರ್ಮಿಕ ಕೆಲಸಗಾರರಿರಲಿ,ರೈತರೇ ಇರಲಿ.ರಾಜಕಾರಣಿಯಿರಲಿ,ಅಥವಾ ಇನ್ನಾರಾದರೂ ಇರಲಿ,ಬಾಳಿನ ದೋಣಿ ಸಾಗಿಸಲು ಒಂದು ದುಡಿಮೆಯಂತೂ ಬೇಕು.ತುಸು ತಡವಾದರೂ ಸರಿಯಾದ ರೀತಿಯಲ್ಲಿ ಪರಿಶ್ರಮಪಟ್ಟು ದುಡಿಮೆಯಲ್ಲಿ ತೃಪ್ತಿ ಕಾಣಬೇಕಾಗುತ್ತದೆ. ಮಾಡುವ ಕೆಲಸದಲ್ಲಿ ಸುಖ,ಆನಂದವನ್ನು ಅನುಭವಿಸಿ, ಸನ್ಮಾರ್ಗದೊಂದಿಗೆ ಕೆಲಸ ಕಾರ್ಯಗಳಲ್ಲಿ ನಿರತರಾಗಿ ನಿರಂತರವಾಗಿರಬೇಕು.ಒಮ್ಮೆಲೆ ದುಡಿದು ರಾತ್ರೋ ರಾತ್ರಿ ಶ್ರೀಮಂತರಾಗಲು ಸಾಧ್ಯವಿಲ್ಲ.ದುಡಿತದಲ್ಲಿ ನಾವೆಷ್ಟು ಆತುರಾತುರ ಮಾಡಿದರೂ ಕೋಳಿ ಕೂಗುವುದಿಲ್ಲ.ಬೆಳಕರಿಯುವುದಿಲ್ಲ.ಮಾಗಬೇಕು,ಕಾಯಬೇಕು,ಸಹನೆಯಂತೂ ತುಂಬಾನೆ ಬೇಕು.ನಾವು ಬೆಳಿಗ್ಗೆಯಿಂದ ಸಂಜೆಯವರೆಗೆ ಒಬ್ಬರ ಅಧೀನದಲ್ಲಿ ದುಡಿಯುತ್ತೇವೆಂದರೆ ಯಾವಾಗಲೂ ಯಾರಾದರೂ,ಯಾವುದೇ ಕೆಲಸದಲ್ಲಿ ಯಜಮಾನರು,ಕೆಲಸ ನೀಡಿದ ಸಂಸ್ಥೆಯವರು,ಹಿರಿಯ ಅಧಿಕಾರಿಗಳು ಬೈಯುತ್ತಾರೆ ಎಂದರೆ ಅವರಿಗೂ ಒತ್ತಡವಿರಬಹುದು? ಅವರು ಬೈದಾಡುತ್ತಾರೆ ಎಂದರೆ ನಾವೂ ಸಹ ಎದುರು ವಾದಿಸ ಬಾರದು.ಆ ಕೆಲಸದ ಬಗ್ಗೆ ಚರ್ಚೆ ಮಾಡಬೇಕಷ್ಟೆ.ಅದನ್ನು ಬಿಟ್ಟು ಏರು ದನಿಯಲ್ಲಿ ಎದುರುತ್ತರ ನೀಡಿ ಕೆಂಗಣ್ಣಿಗೆ ಗುರಿಯಾಗಬಾರದು. ಅನಾಹುತ,ಅನರ್ಥಗಳಾಗುತ್ತವೆ.ನಮ್ಮ ಸ್ವಾರ್ಥವೆ ಗೆಲ್ಲಬೇಕು ಎನ್ನುವುದು ನಮ್ಮದೇ ತಪ್ಪು.ಏಕೆಂದರೆ ನಮಗೆ ವಹಿಸಿದ ಕೆಲಸವೇ ಬಹು ಮುಖ್ಯ.ಪ್ರತಿಯೊಬ್ಬರಿಗೂ ಅವರದೆಯಾದ ವಿಚಾರ ಸರಣಿ,ಸಹಾನುಭೂತಿ,ಸಹಾಯ ಸಹಕಾರ ಇದ್ದೇ ಇರುತ್ತದೆ.ಅದಕ್ಕಾಗಿ ನಮ್ಮ ನಮ್ಮ ಕೆಲಸ ಮಾಡಲು,ಮತ್ತೊಬ್ಬರಿಂದ ಹೇಳಿಸಿಕೊಳ್ಳಬಾರದು.ಅವರು ಹೇಳುವತನಕ ಕೆಲಸ ಮಾಡದೆ ಇರೋದು ನಮ್ಮದೇ ಖಂಡಿತ ತಪ್ಪಾಗುತ್ತದೆ.ನಮ್ಮ ಕೆಲಸ ಕಾರ್ಯಗಳಲ್ಲಿ ಸಹಜತೆ,ದಕ್ಷತೆ , ಪ್ರಾಮಾಣಿಕತೆ, ಪ್ರಬುದ್ಧತೆ,ಮತ್ತು ಸ್ಪಷ್ಟತೆ ಇರಬೇಕು.ಹಾಗಿದ್ದರೆ ಮಾತ್ರ ಬಹು ದಿನಗಳವರೆಗೆ ದುಡಿಮೆಲ್ಲಿರುತ್ತೇವೆ.*ಮಾತು ಬೆಳ್ಳಿ,ಮೌನ ಬಂಗಾರ* ಎಂಬಂತೆ,ಮಾತು ಕಡಿಮೆ ಮಾಡಿ,ಹೆಚ್ಚಿನ ಮೌನದಲ್ಲಿದ್ದರೆ ಮನಸ್ಸಿಗೆ ಒಳ್ಳೆಯದು.ಮನೆಗೂ ಒಳ್ಳೆಯದು,ಸಮಾಜಕ್ಕೂ ಒಳ್ಳೆಯದು.ಆದರೆ ನಾವು ಮಾಡುವ ಕೆಲಸಕ್ಕಿಂತ ಮಾತಿಗೇ ಮೊದಲ ಸ್ಥಾನ ಕೊಟ್ಟರೆ, ಕಚೇರಿ ಎಂಬುದು ಸೋಮಾರಿತನದ ತಾಣವಾಗುವುದು.ಮಾತು ಅಧಿಕವಾದಷ್ಟು ನಮ್ಮೊಳಗೆ ಅಲ್ಪತನ ಹೊರಬರುತ್ತದೆ.ನಮ್ಮ ಕಚೇರಿಯಲ್ಲಿ ನಮ್ಮ ನಮ್ಮ ಸಿಬ್ಬಂಧಿಯವರು ಸಣ್ಣ ಸಣ್ಣ ವಿಷಯಕ್ಕೆ ಅಹಂಕಾರ ತೋರಿದರೆ ಅದಕ್ಕೆ ಹುಂಬತನ ಎನ್ನಬಹುದು.ಆದರೆ ಕಾಲು ಕೆದರಿ ವಾದಕ್ಕಿಳಿದರೆ…..? ಕೋಪದಿ ಬೈದಾಡಿ ಜೋರು ಮಾಡಿ ಕದನಕ್ಕಿಳಿದರೆ..?ಮೌನವಾಗಿರಬೇಕು. ಇಂತಹ ವಿಷಯಗಳು ಪ್ರತಿ ಸಂಸ್ಥೆಗಳಲ್ಲಿ,ಪ್ರತಿ ಕಚೇರಿಯಲ್ಲಿ ನಡೆದಿರುತ್ತವೆ.ಎಂದಿಗೂ ಬಗೆಹರಿಯುವುದಿಲ್ಲ.ಇಂತವರ ಜೊತೆ ಮಾತಿನ ಕಾಳಗ,ವಿವಾದ, ವಿಚಾರಣೆ,ಮಾಡುವುದರಲ್ಲಿ ಯಾವ ಅರ್ಥವಿಲ್ಲ. ವಿಷಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅದೆಷ್ಟೋ ಮಾತುಗಳಿಗೆ ಮೌನವೆ ಸಮಾಧಾನವಾಗುವುದು.ಸಂದಾನವೂ ಆಗಬಲ್ಲದು.ಈ ಮೇಲಿನ ಮಾತು ಕೇವಲ ಜಲಚರಗಳ ಬಗೆಗಿನ ಮಾತಲ್ಲ; ಇದು ಮನುಷ್ಯ ಸಮಾಜ, ರಾಜಕೀಯ, ಉದ್ಯೋಗ,ಕೃಷಿ ಹಾಗೂ ದೈನಂದಿನ ಜೀವನದ ಅಸ್ತಿತ್ವದ ಹೋರಾಟವನ್ನು ಕುರಿತು ಹೇಳುವ ಅತ್ಯಂತ ಶ್ರೇಷ್ಠವಾದ ತತ್ತ್ವವಾಗಿದೆ.ಯಾವುದಾದರೂ ಒಂದು ಮಾತನ್ನು ಅರ್ಥಮಾಡಿಕೊಳ್ಳಲು ಮೊದಲು ಅದರ ಬಾಹ್ಯ ರೂಪವನ್ನು ನೋಡಬೇಕು. ಈ ಉಕ್ತಿಯು ಪ್ರಕೃತಿಯ ಸಹಜ ನಿಯಮವೊಂದನ್ನು ನಮಗೆ ಪರಿಚಯಿಸುತ್ತದೆ.ನೀರಿನಲ್ಲಿನರುವ ಜಲಚರಗಳಾದ ಮೀನು, ಕಪ್ಪೆ ,ಏಡಿ,ಅಥವಾ ಯಾವುದೇ ಸಣ್ಣ ಜಲಚರಗಳಿಗೆ ನೀರೇ ಆಸರೆ, ನೀರೇ ಜೀವನ. ನೀರನ್ನು ಬಿಟ್ಟು ಅವು ಕ್ಷಣಕಾಲವೂ ಬದುಕಲಾರವು.ಅತೀ ಬಲಶಾಲಿ ಜಲಚರಗಳಿದ್ದರೂ ಅವುಗಳೂ ಬದುಕುತ್ತಿವೆ. ನೀರಿನಲ್ಲಿ ಮೊಸಳೆಯೂ ವಾಸಿಸುತ್ತದೆ. ಮೊಸಳೆಯನ್ನು ‘ಜಲರಾಜ’ ಎನ್ನಬಹುದು. ನೀರಿನೊಳಗೆ ಮೊಸಳೆಗೆ ಸಿಗುವಷ್ಟು ದೈಹಿಕ ಶಕ್ತಿ ಮತ್ತು ಹಿಡಿತ ಬೇರೆ ಯಾವ ಪ್ರಾಣಿಗೂ ಸಿಗುವುದಿಲ್ಲ. ‘ಆನೆ ಬಿದ್ದರೂ ಕುದುರೆ ಬಿದ್ದರೂ ಮೊಸಳೆಗೆ ನೀರೇ ಬಲ’ ಎಂಬ ಇನ್ನೊಂದು ಗಾದೆಯೂ ಇದೆ. ನೀರಿನಲ್ಲೇ ಬದುಕಬೇಕಾದ ಸಣ್ಣ ಜೀವಿಯೊಂದು ಅದೇ ನೀರಿನಲ್ಲಿರುವ ಅತ್ಯಂತ ಶಕ್ತಿಶಾಲಿ ಮೊಸಳೆಯೊಂದಿಗೆ ಹಗೆತನ ಸಾಧಿಸಿದರೆ ಏನಾಗಬಹುದು? ಅದರ ಜೀವಕ್ಕೆ ಗಂಡಾಂತರ ಬರುವುದು ನಿಶ್ಚಿತ. ತನಗಿಂತ ನೂರು ಪಟ್ಟು ಬಲಶಾಲಿಯಾದ ಶತ್ರುವಿನ ಜಾಗದಲ್ಲೇ ಇದ್ದುಕೊಂಡು, ಅವನೊಂದಿಗೇ ದ್ವೇಷ ಸಾಧಿಸುವುದು ಆತ್ಮಹತ್ಯೆಗೆ ಸಮಾನ ಎಂಬುದು ಇದರ ನೇರ ಅರ್ಥ.ಈ ಮಾತಿನ ಹಿಂದೆ ಒಂದು ಶ್ರೇಷ್ಠವಾದ ಆಧ್ಯಾತ್ಮಿಕ ಚಿಂತನೆಯೂ ಅಡಗಿದೆ. ಇಲ್ಲಿ ‘ನೀರು’ ಎನ್ನುವುದನ್ನು ಈ ಜಗತ್ತು ಅಥವಾ ಸಂಸಾರಕ್ಕೆ ಹೋಲಿಸಬಹುದು. ‘ಮೊಸಳೆ’ ಎನ್ನುವುದನ್ನು ಪ್ರಕೃತಿಯ ನಿಯಮಗಳು, ಕಾಲ ಅಥವಾ ಭಗವಂತನ ಶಕ್ತಿಗೆ ಹೋಲಿಸಬಹುದು.”ನಾವು ಪ್ರಕೃತಿಯ ಮಡಿಲಲ್ಲಿ ಬದುಕುತ್ತಾ, ಪ್ರಕೃತಿಯ ನಿಯಮಗಳನ್ನೇ ಉಲ್ಲಂಘಿಸಿ ಬಾಳಲು ಸಾಧ್ಯವಿಲ್ಲ.”ಮನುಷ್ಯನು ಈ ಭೂಮಿಯ ಮೇಲೆ ಹುಟ್ಟಿದ್ದಾನೆ (ನೀರಲ್ಲಿ ವಾಸ). ಈ ಸೃಷ್ಟಿಯನ್ನು ನಿಯಂತ್ರಿಸುವ ಕೆಲವು ಅದೃಶ್ಯ ಶಕ್ತಿಗಳು, ಕರ್ಮ ಸಿದ್ಧಾಂತಗಳು ಮತ್ತು ಪ್ರಕೃತಿಯ ನಿಯಮಗಳಿವೆ (ಮೊಸಳೆ). ಮನುಷ್ಯ ತಾನೇ ಶ್ರೇಷ್ಠನೆಂದು ಅಹಂಕಾರದಿಂದ ಪ್ರಕೃತಿಯ ವಿರುದ್ಧ ತಿರುಗಿಬಿದ್ದರೆ, ಅಂತಿಮವಾಗಿ ವಿನಾಶ ಹೊಂದುವುದು ಅವನೇ. ಆದ್ದರಿಂದ, ನಾವು ಬಾಳುವ ಪರಿಸರ ಮತ್ತು ನಮ್ಮನ್ನು ಸಲಹುವ ಶಕ್ತಿಗಳೊಂದಿಗೆ ದ್ವೇಷ ಸಾಧಿಸದೆ, ಸಾಮರಸ್ಯದಿಂದ ಬದುಕಬೇಕು ಎಂಬ ಉದಾತ್ತ ಸಂದೇಶವಿದು.ಮಾನವ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಗಾದೆ ಮಾತುಗಳು ದಿಕ್ಸೂಚಿಯಾಗಿವೆ. ಮನುಷ್ಯ ಸಂಘಜೀವಿ. ಅವನು ಸಮಾಜ ಅಥವಾ ಕುಟುಂಬವನ್ನು ಬಿಟ್ಟು ಒಂಟಿಯಾಗಿ ಬಾಳಲಾರನು.ನಾವು ಒಂದು ಹಳ್ಳಿಯಲ್ಲೋ ಅಥವಾ ನಗರದ ಗಲ್ಲಿಯಲ್ಲೋ ವಾಸಿಸುವಾಗ, ಸುತ್ತಮುತ್ತಲಿನ ಜನರೊಂದಿಗೆ ಸೌಹಾರ್ದತೆಯಿಂದ ಇರಬೇಕು. ಸಮಾಜದಲ್ಲಿ ಪ್ರಭಾವಶಾಲಿಯಾಗಿರುವ ವ್ಯಕ್ತಿಗಳೊಂದಿಗೆ,ರಾಜಕಾರಣಿಯೊಂದಿಗೆ, ಅನಗತ್ಯ ದ್ವೇಷ ಕಟ್ಟಿಕೊಂಡರೆ, ಕಷ್ಟಕಾಲದಲ್ಲಿ ನಮಗೆ ಯಾರೂ ನೆರವಾಗುವುದಿಲ್ಲ.ಒಂದು ಜಂಟಿ ಕುಟುಂಬದಲ್ಲಿ ವಾಸಿಸುವಾಗ, ಮನೆಯ ಯಜಮಾನ ಅಥವಾ ಪ್ರಮುಖ ರಾಜಕಾರಣಿ,ಅಧಿಕಾರಿ,ಅಥವಾ ಪುಡಿ ಗುಂಡಾಗಿ ರಿ ವ್ಯಕ್ತಿಯೊಂದಿಗೆ ಸದಾ ಕಲಹ ಹೂಡುತ್ತಿದ್ದರೆ ಆ ಮನೆಯಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಮನೆಯಲ್ಲೇ ವಾಸಿಸುತ್ತಾ, ಮನೆಯ ಮುಖ್ಯಸ್ಥನನ್ನೇ ದ್ವೇಷಿಸುವುದು ಸಂಸಾರದ ನೆಮ್ಮದಿಯನ್ನು ಕೆಡಿಸುತ್ತದೆ.ಆಧುನಿಕ ಜಗತ್ತಿನಲ್ಲಿ,ಈ ಮೋಬೈಲ್ ಕಾಲದಲ್ಲಿ ಒಳ್ಳೆಯ ಮಾತನ್ನು ತಿಳಿವಳಿಕೆಗಾಗಿ ಹೇಳಿದರೆ ನಗಾಡುವ ಪಟ್ಟೆ ಹುಡುಗರಿದ್ದಾರೆ.ಮೇಲಿನ ಮಾತು ಯುವ ಪೀಳಿಗೆಗೆ ಅತ್ಯಂತ ಅವಶ್ಯಕವಾದ ಪಾಠವನ್ನು ಕಲಿಸುತ್ತದೆ. ಕಛೇರಿಗಳಲ್ಲಿ ಅಥವಾ ಉದ್ಯೋಗ ಮಾಡುವ ಸ್ಥಳಗಳಲ್ಲಿ ಇದನ್ನು ನಾವು ಪ್ರತಿದಿನ ನೋಡಬಹುದು.ಮೇಲಾಧಿಕಾರಿಗಳೊಂದಿಗೆ ಸಂಬಂಧವನ್ನು ನಮ್ರತೆಯಿಂದ ಇಟ್ಟುಕೊಂಡಿರಬೇಕು.ನಾವು ಕೆಲಸ ಮಾಡುವ ಸಂಸ್ಥೆಯೇ ನಮಗೆ ಜೀವನೋಪಾಯ ಅಲ್ಲಿರುವ ನಮ್ಮ ಬಾಸ್ ಅಥವಾ ಮ್ಯಾನೇಜರ್ (ಮೊಸಳೆ) ಅಧಿಕಾರ ಹೊಂದಿರುವ ವ್ಯಕ್ತಿ.ಬುದ್ಧಿವಂತಿಕೆಯ ನಡವಳಿಕೆಯಿಂದ ತಲೆಬಾಗಿರಬೇಕಾಗುತ್ತದೆ. ಉದ್ಯೋಗದಲ್ಲಿರುವಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ, ಅದೇ ಸಂಸ್ಥೆಯಲ್ಲಿ ಸಂಬಳ ಪಡೆಯುತ್ತಾ, ಸಂಸ್ಥೆಯ ಮುಖ್ಯಸ್ಥರೊಂದಿಗೆ ನೇರ ಹಗೆತನ ಬೆಳೆಸಿಕೊಂಡರೆ ವೃತ್ತಿಜೀವನ ಹಾಳಾಗುತ್ತದೆ. ಇಲ್ಲಿ ಶರಣಾಗತಿ ಮುಖ್ಯವಲ್ಲ, ಬದಲಿಗೆ ‘ಸಮಯಪ್ರಜ್ಞೆ’ ಜಾಣತನ,ನಯವಿನಯತೆ, ಮತ್ತು ‘ರಾಜತಾಂತ್ರಿಕತೆ’ ಮುಖ್ಯವಾಗುತ್ತದೆ. ವ್ಯವಸ್ಥೆಯ ಒಳಗಿದ್ದುಕೊಂಡೇ ವ್ಯವಸ್ಥೆಯನ್ನು ಎದುರಿಸಬೇಕಾದರೆ ವಿವೇಕ ಇರಬೇಕೇ ಹೊರತು ಕೇವಲ ಆವೇಶವಲ್ಲ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಈ ಗಾದೆಯನ್ನು ಪಾಲಿಸದ ರಾಜರುಗಳು ಹೇಗೆ ನಾಶವಾದರು ಮತ್ತು ಹೇಗೆ ಪಾಲಿಸಿದರು, ಹೇಗೆ ಉಳಿದುಕೊಂಡರು ಎಂಬುದಕ್ಕೆ ಅಸಂಖ್ಯಾತ ಉದಾಹರಣೆಗಳು ಸಿಗುತ್ತವೆ. ಬಲಿಷ್ಠ ಸಾಮ್ರಾಜ್ಯಗಳ ಪಕ್ಕದಲ್ಲಿದ್ದ ಸಣ್ಣ ಪುಟ್ಟ ಸಂಸ್ಥಾನಗಳು, ಆ ಬಲಿಷ್ಠ ರಾಜರೊಂದಿಗೆ ಅನಗತ್ಯವಾಗಿ ಯುದ್ಧ ಸಾರಿದಾಗ ಧೂಳೀಪಟವಾದವು. ಆದರೆ, ಯಾರು ತಮ್ಮ ಮಿತಿಯನ್ನು ಅರಿತು, ಬಲಿಷ್ಠರೊಂದಿಗೆ ಸ್ನೇಹ ಹಸ್ತ ಚಾಚಿದರೋ ಅಥವಾ ತಂತ್ರಗಾರಿಕೆಯಿಂದ ವರ್ತಿಸಿದರೋ ಅವರು ತಮ್ಮ ಪ್ರಜೆಗಳನ್ನು ಮತ್ತು ಸಾಮ್ರಾಜ್ಯವನ್ನು ಉಳಿಸಿಕೊಂಡರು.ಅಂತರರಾಷ್ಟ್ರೀಯ ರಾಜಕೀಯದಲ್ಲಿ ಇಂದು ಜಾಗತಿಕ ಮಟ್ಟದಲ್ಲೂ ಅಷ್ಟೇ, ಒಂದು ಸಣ್ಣ ದೇಶವು ತನ್ನ ಪಕ್ಕದಲ್ಲೇ ಇರುವ ಸೂಪರ್ ಪವರ್ ದೇಶದೊಂದಿಗೆ ವೈರತ್ವ ಬೆಳೆಸಿಕೊಂಡರೆ ಆ ದೇಶದ ಆರ್ಥಿಕತೆ ಮತ್ತು ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ.*ನೀರಲ್ಲಿ ವಾಸ, ಮೊಸಳೆ ಜೊತೆ ದ್ವೇಷ* ಎಂಬ ಗಂಭೀರ ಮಾತು ನಮಗೆ ಹೇಡಿತನವನ್ನು ಕಲಿಸುವುದಿಲ್ಲ, ಬದಲಿಗೆ ಬದುಕುವ ಕಲೆಯಾದ ‘ವಿವೇಕ’ವನ್ನು ಕಲಿಸುತ್ತದೆ.ಶತ್ರು ಬಲಶಾಲಿಯಾಗಿದ್ದಾಗ ಆವೇಶದಿಂದ ಹೋರಾಡುವುದಕ್ಕಿಂತ, ನಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು. ಬಲಹೀನನಾದವನು ಬಲಿಷ್ಠನ ಎದುರು ಜಾಣ್ಮೆಯಿಂದ ವರ್ತಿಸಬೇಕು.ನಾವು ಎಲ್ಲೇ ಇರಲಿ, ಯಾರೊಂದಿಗೇ ಇರಲಿ, ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ಅಲ್ಲಿನ ಪ್ರಭಾವಿ ಶಕ್ತಿಗಳೊಂದಿಗೆ ಅನಗತ್ಯ ಘರ್ಷಣೆಗೆ ಇಳಿಯಬಾರದು. ಬೆಂಕಿಯ ಒಟ್ಟಿಗೆ ಇದ್ದು ಸುಟ್ಟುಕೊಳ್ಳುವುದಕ್ಕಿಂತ, ಅದರ ಶಾಖವನ್ನು ಬಳಸಿಕೊಂಡು ಬದುಕುವುದನ್ನು ಕಲಿಯಬೇಕು. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗುವವರೆ ನಿಜವಾದ ಜಾಣರು ಎಂಬುದೇ ಈ ಶ್ರೇಷ್ಠ ಗಾದೆಯ ಪರಮ ತಾತ್ಪರ್ಯ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಧಾರಾವಾಹಿ-23 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಗೆಳತಿಯ ಸಹಾಯ ತಾಯಿ ಊಟ ಮಾಡಿದ ನಂತರ ಅಕ್ಕ ತಂಗಿಯರಿಬ್ಬರೂ ಹೊರಡಲು ಅನುವಾದರು….. “ಅಮ್ಮಾ…. ನಾವಿಬ್ಬರೂ ಹೊರಗೆ ಹೋಟೆಲ್ ನಲ್ಲಿ ಊಟ ಮಾಡುತ್ತೇವೆ….ತಂಗಿ ದೊಡ್ಡಕ್ಕನ ಮನೆಗೆ ಹೋಗುತ್ತಿದ್ದಾಳೆ…. ಅಕ್ಕನಿಗೂ ನೀನು ಆಸ್ಪತ್ರೆಯಲ್ಲಿ ಇರುವ ವಿಷಯ ತಿಳಿಸಬೇಕಿದೆ…. ಅಲ್ಲಿಂದ ಹಾಗೇ ನಾನು ಆಶ್ರಮಕ್ಕೆ ತೆರಳುತ್ತಿದ್ದೇನೆ…. ಸಂಜೆ ನಿನ್ನೊಂದಿಗಿರಲು ಬರುತ್ತೇನೆ…. ನನ್ನ ಗೆಳತಿಯೊಬ್ಬಳು ಅನಾಥಾಶ್ರಮದಲ್ಲಿ ಇರುವುದರಿಂದ ನಿನ್ನ ಜೊತೆ ನನಗಿರಲು ಅವಕಾಶವಾಗಿದೆ… ಆಕೆ ಇತ್ತೀಚೆಗೆ ಬಂದಿದ್ದರು ಕೂಡ ಎಷ್ಟೋ ವರ್ಷಗಳ ಗೆಳತಿಯಂತೆ ನನ್ನ ಸಹಾಯಕ್ಕೆ ಹೆಗಲು ಕೊಡುತ್ತಿದ್ದಾಳೆ… ಆದರೂ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ…. ಎಂದು ಮಗಳು ತಿಳಿಸಿದಾಗ, ಸರಿ ಎನ್ನುವಂತೆ ತಲೆಯಾಡಿಸಿದಳು ಸುಮತಿ. ಏನೋ ನೆನಪಾದಂತೆ ಅನಿಸಿ….. ಒಂದು ನಿಮಿಷ ಇರು ಮಗೂ… ನನ್ನ ವಿಧವಾ ಪೆನ್ಷನ್ ಬರುವುದಿದೆಯಲ್ಲ…. ಅದನ್ನು ಹೇಗೆ ಪಡೆದುಕೊಳ್ಳುವುದು?… ನಾನು ಇಲ್ಲಿ ಆಸ್ಪತ್ರೆಯಲ್ಲಿದ್ದೇನೆ…. ನನ್ನ ಸಹಿ ಇಲ್ಲದೆ ಆ ರೂ.50 ಸಿಗುವುದಿಲ್ಲ…. ನನ್ನ ಕಷ್ಟವನ್ನು ಅರಿತ ನಮ್ಮೂರಿನ ಪೋಸ್ಟ್ ಮಾಸ್ಟರ್ ನನ್ನಿಂದ ಅರ್ಜಿಯನ್ನು ಹಾಕಿಸಿ, ಈ ವಿಧವಾ ಪೆನ್ಷನ್ ಬರುವಂತೆ ಮಾಡಿದ್ದರು…. ಅವರ ಈ ಸಹಾಯವನ್ನು ನಾನೆಂದಿಗೂ ಮರೆಯುವುದಂತೆ ಇಲ್ಲ…. ಎಂದು ಸುಮತಿ ಅಂದಾಗ, ಮಕ್ಕಳಿಗೆ ತಾಯಿ ಹೇಳಿದ್ದು ಸರಿ ಅನಿಸಿತು. ತಾಯಿ ಈ ವಿಧವಾ ಪೆನ್ಷನ್ ಗಾಗಿ ಕಚೇರಿಗಳಿಗೆ ಓಡಾಡಿದ್ದು ನೆನಪಾಯಿತು…. ಅದಕ್ಕಾಗಿ ನಮ್ಮ ಹೋಬಳಿಯ ಪೋಸ್ಟ್ ಮಾಸ್ಟರ್ ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅವರ ಪರಿಶ್ರಮದಿಂದ ನಮ್ಮ ತಾಯಿಗೆ ತಿಂಗಳಿಗೆ 50 ರೂಪಾಯಿ ವಿಧವಾ ಪೆನ್ಷನ್ ಬರುತ್ತಿದೆ. ಕೆಲವೊಮ್ಮೆ ಪ್ರತಿ ತಿಂಗಳೂ ಬರದೇ ಎರಡು ಮೂರು ತಿಂಗಳಿನ ಹಣ ಒಟ್ಟಾಗಿ ಬರುತ್ತಿತ್ತು. ಅದನ್ನು ತಾಯಿ ನಮಗಾಗಿ ತಿಂಡಿ ತಿನಿಸುಗಳನ್ನು ಮಾಡಿಕೊಡಲು ಅಥವಾ ಬಟ್ಟೆ-ಬರೆ ಕೊಡಿಸಲು ಖರ್ಚು ಮಾಡುತ್ತಿದ್ದಳು. ಈವರೆಗೂ ನಾವು ಗಮನಿಸಿದಂತೆ ನಮ್ಮ ತಾಯಿ ಅದರಿಂದ ಒಂದು ನಯಾ ಪೈಸೆಯನ್ನು ಕೂಡ ತನಗಾಗಿ ಖರ್ಚು ಮಾಡಿಕೊಂಡಿರಲಿಲ್ಲ. ಈ ಹಣವು ಕೂಡ ತಾಯಿಗೆ ಕೆಲವೊಮ್ಮೆ ಆಪದ್ಬಾಂಧವನಂತೆ ಸಹಾಯ ಮಾಡಿದ್ದೂ ಇದೆ. ಅದೂ ಕೂಡ ನಮಗಾಗಿ, ಎನ್ನುವುದನ್ನು ನೆನೆದಾಗ ಮಕ್ಕಳಿಬ್ಬರ ಕಣ್ಣುಗಳು ಹನಿ ಗೂಡಿದವು. ತಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಈಗಲೂ ನಮ್ಮ ತಾಯಿಗೆ ನಮ್ಮದೇ ಚಿಂತೆ ಅಲ್ಲವೇ?…..”ನೋಡೋಣ ಅಮ್ಮಾ…. ನಾನು ದೊಡ್ಡಕ್ಕನ ಮನೆಯಿಂದ ನಮ್ಮ ಮನೆಗೆ ಹಿಂತಿರುಗುವಾಗ ಪೋಸ್ಟ್ ಮಾಸ್ಟರ್ ಮನೆಗೆ ಹೋಗಿ ಈ ಬಗ್ಗೆ ತಿಳಿದುಕೊಳ್ಳುತ್ತೇನೆ”…. ಎಂದು ಮೂರನೇ ಮಗಳು ಹೇಳಿದಳು. ಸರಿ ಎನ್ನುವಂತೆ ತಲೆ ಆಡಿಸಿದಳು ಸುಮತಿ. ಅಕ್ಕತಂಗಿಯರಿಬ್ಬರೂ ಆಸ್ಪತ್ರೆಯಿಂದ ಹೊರ ನಡೆದರು. ತಂಗಿಯ ಜೊತೆಗೆ ಬಸ್ ನಿಲ್ದಾಣದವರೆಗೂ ಬಂದು, ಅವಳನ್ನು ದೊಡ್ಡಕ್ಕನ ಮನೆಯ ಕಡೆಗೆ ಹೋಗುವ ಬಸ್ ಹತ್ತಿಸಿ ತಾನು ಆಶ್ರಮದ ಕಡೆಗೆ ನಡೆದಳು. ದೊಡ್ಡಕ್ಕನ ಮನೆಗೆ ಹೋದ ತಂಗಿಯು ಅಮ್ಮನ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ತಿಳಿಸಿದಳು. ಅಮ್ಮನ ಅನಾರೋಗ್ಯದ ಬಗ್ಗೆ ತಿಳಿದು ಅವಳಿಗೂ ಬಹಳ ಸಂಕಟವಾಯಿತು….. “ಬಾವ ಕೆಲಸಕ್ಕೆ ಹೋಗಿದ್ದಾರೆ…. ಸಂಜೆ ಅವರು ಬಂದ ನಂತರ ನಾನು ಮತ್ತು ಬಾವ ಆಸ್ಪತ್ರೆಗೆ ಹೋಗುತ್ತೇವೆ”…. ಎಂದಳು ದೊಡ್ಡಕ್ಕ. ದೊಡ್ಡಕ್ಕನ ಮಾತಿಗೆ ಹೂಂಗುಟ್ಟಿದಳು. ತನ್ನ ಎರಡನೇ ಅಕ್ಕ ಉಳಿದ ವಿಷಯಗಳನ್ನು ತಾನೇ ದೊಡ್ಡಕ್ಕನಿಗೆ ತಿಳಿಸುತ್ತೇನೆ ಎಂದು ಹೇಳಿದ್ದರಿಂದ ಅವಳು ಹೆಚ್ಚಾಗಿ ಇನ್ನೇನೂ ಹೇಳಲಿಲ್ಲ. ಸ್ವಲ್ಪ ಹೊತ್ತು ಅಕ್ಕನ ಮನೆಯಲ್ಲಿದ್ದು ಮಕ್ಕಳ ಜೊತೆ ಕಾಲ ಕಳೆದು ನಂತರ ಸಕಲೇಶಪುರದ ಬಸ್ ನಿಲ್ದಾಣಕ್ಕೆ ಬಂದು ತನ್ನ ಊರ ಕಡೆಗೆ ಹೋಗುವ ಬಸ್ ಹತ್ತಿ ಒಬ್ಬಳೇ ಊರ ಕಡೆಗೆ ಹೊರಟಳು. ಒಬ್ಬಳೇ ಬಸ್ಸ್ ನಲ್ಲಿ ಕುಳಿತು ಕಿಟಕಿಯ ಆಚೆಗೆ ನೋಡುತ್ತಾ ನಿಟ್ಟಿಸಿರು ಬಿಟ್ಟಳು. ನಮ್ಮ ತಾಯಿ ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾಳೆಯೇ? ಎನ್ನುವ ವಿಷಯ ಮನಸ್ಸಿಗೆ ಬಂದಾಗ ಅವಳಿಗ ಅರಿವಿಲ್ಲದಂತೆಯೇ ಕಣ್ಣುಗಳಿಂದ ನೀರು ಜಾರಿತು. ಯಾರಿಗೂ ಕಾಣದೆಂದು ಕಿಟಕಿಯ ಆಚೆ ನೋಡುತ್ತಾ ಕುಳಿತಳು. ಮನದ ತುಂಬಾ ನೋವು ಮಡುಗಟ್ಟಿತ್ತು. ಬಸ್ಸು ಯಾವಾಗ ಊರಿಗೆ ತಲುಪಿತು ಎಂಬುದು ತಿಳಿಯಲಿಲ್ಲ. ಬಸ್ಸಿನಿಂದ ಇಳಿದು ಮನೆ ತಲುಪಿದಳು. ಇಂದೇಕೋ ಮನೆ ಎಂದಿಗಿಂತ ಬಿಕೋ ಎನ್ನುವಂತೆ ಇತ್ತು. ತೀವ್ರ ಮೌನ ಆವರಿಸಿದಂತೆ ಅನಿಸಿತು. ಅಮ್ಮ ಬೇಗ ಆರೋಗ್ಯಪೂರ್ಣಳಾಗಿ ಮನೆಗೆ ಹಿಂದಿರುಗುತ್ತಾಳೆ ಎನ್ನುವ ಆಸೆಯನ್ನು ಹೊತ್ತು ಒಬ್ಬಳೇ ಹೇಗೋ ಕಾಲ ಕಳೆಯುತ್ತಿದ್ದಳು. ಆದರೆ ಈಗ ಜೊತೆಗೆ ನೋವನ್ನು ಮರೆಯಲು ಅಕ್ಕನ ಹೆಗಲೂ ಇಲ್ಲ. ಅಮ್ಮನೂ ಇಲ್ಲ. ಹೊರಡುವಾಗ ದೊಡ್ಡಕ್ಕ….” ಇವತ್ತು ಇಲ್ಲೇ ಇರೇ… ಒಬ್ಬಳೇ ಮನೆಗೆ ಹೋಗಬೇಡ…. ಎಂದರೂ ಕೇಳಲಿಲ್ಲ ನಾನು…. ಏನು ಮಾಡುವುದು ಇಲ್ಲಿ ನಾನು ಶಾಲೆಗೆ ಹೋಗದಿದ್ದರೆ ಅಮ್ಮನ ಕೆಲಸ ಕೈ ಬಿಟ್ಟು ಹೋಗುತ್ತದೆ…..ನನಗೂ ಈಗ ಜೊತೆಗೆ ಅಕ್ಕಂದಿರಿಬ್ಬರಲ್ಲಿ ಯಾರಾದರೂ ಬೇಕಿತ್ತು…. ಈ ನೋವನ್ನು ನಾನೊಬ್ಬಳೇ ಸಹಿಸಲಾರೆ… ಏನು ಮಾಡಲಿ?…” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಹಾಸಿಗೆ ಮೇಲೆ ದೊಪ್ಪನೆ ಉರುಳಿದಳು. ಇತ್ತ ಆಶ್ರಮಕ್ಕೆ ಹೋದವಳಿಗೆ ತಂಗಿಯನ್ನು ಒಬ್ಬಳನ್ನೇ ಮನೆಗೆ ಕಳುಹಿಸಿದ್ದರ ಬಗ್ಗೆ ಬಹಳ ಬೇಸರವಿತ್ತು. ಆದರೆ ಏನು ಮಾಡುವುದು? ಅನ್ಯಮಾರ್ಗವಿರಲಿಲ್ಲ. ಆಶ್ರಮಕ್ಕೆ ಬಂದ ಕೂಡಲೇ ಅವಳ ಗೆಳತಿ ಅವಳ ತಾಯಿಯ ಬಗ್ಗೆ ವಿಚಾರಿಸಿಕೊಂಡಳು. ಈಗ ಈ ಗೆಳತಿಯ ಜೊತೆಯೇ ಈ ಹುಡುಗಿಗೆ ಆಧಾರ. ಅವಳ ಹೆಗಲ ಮೇಲೆ ತಲೆ ಇಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿದಳು. ಅವಳು ಇವಳ ತಲೆಯನ್ನು ನೇವರಿಸುತ್ತಾ ಸಮಾಧಾನಪಡಿಸಿದಳು. ಸ್ವಲ್ಪ ಹೊತ್ತಿನ ನಂತರ ಸುಮತಿಯ ಮಗಳು ಆಶ್ರಮದ ಮಕ್ಕಳ ಓದಿನ ಕಡೆಗೆ ಗಮನಹರಿಸಿದಳು. ಅವಳು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಗೆಳತಿ ಅಡುಗೆ ಮಾಡುತ್ತಿದ್ದಳು. ಅಷ್ಟೊತ್ತಿಗೆ ಸಂಜೆಯಾಗಿತ್ತು. ಮಾಡಿದ ಅಡುಗೆಯನ್ನು ಗೆಳತಿ ಈ ಹುಡುಗಿಗೆ ಬಡಿಸಿ, ಒಂದು ಪುಟ್ಟ ಡಬ್ಬಿಯಲ್ಲಿ ತಾನು ಮಾಡಿದ ಈರುಳ್ಳಿ ಸೋಗೆಯ ಪಲ್ಯವನ್ನು ತುಂಬಿಕೊಟ್ಟು….. “ಇಲ್ಲಿಯ ಉಳಿದ ಕೆಲಸವನ್ನು ಮಾಡಿ, ಮಕ್ಕಳ ಕಲಿಕೆಗೆ ನಾನು ಸಹಾಯ ಮಾಡುತ್ತೇನೆ…. ನೀನು ಆಸ್ಪತ್ರೆಗೆ ತೆರಳಿ ನಿನ್ನ ತಾಯಿಯ ಯೋಗ ಕ್ಷೇಮವನ್ನು ನೋಡಿಕೋ…. ಎಂದಳು. ತನಗೆ ಈ ಸಮಯದಲ್ಲಿ ಆಸರೆಯಾಗಿ ಬಂದ ತನ್ನದೇ ಪ್ರಾಯದ ಗೆಳತಿಯನ್ನು ಬಿಗಿಯಾಗಿ ಅಪ್ಪಿಕೊಂಡು…. ಯಾವ ಜನ್ಮದಲ್ಲಿ ನೀನು ನನಗೆ ಅಕ್ಕ ಅಥವಾ ತಂಗಿ ಆಗಿದ್ಯೋ ತಿಳಿಯದು… ನಿನ್ನ ಈ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಗೆಳತಿ…. ಎಂದು ಹೇಳುತ್ತಾ ತನ್ನ ಕೃತಜ್ಞತೆಯನ್ನು ತಿಳಿಸಿದಳು…. “ಹೇಯ್ ಇದೆಲ್ಲಾ ಏನೂ ದೊಡ್ಡ ಕೆಲಸವಲ್ಲ…. ನನಗೂ ತಾಯಿ ಇದ್ದಾಳೆ… ನಿನ್ನ ನೋವು ನನಗೂ ಅರ್ಥವಾಗುತ್ತೆ…. ನಡಿ ಮೊದಲು ಆಸ್ಪತ್ರೆಗೆ ಹೋಗು…. ಎಂದು ಹೇಳುತ್ತಾ ಬಾಗಿಲವರೆಗೂ ಜೊತೆಗೆ ಬಂದು ಬಿಳ್ಕೊಟ್ಟಳು.
ಧಾರಾವಾಹಿ ಸಂಗಾತಿ-32 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಅಸುರರನ್ನು ಮಣಿಸಿದೆ ಅಂಜನಾಸುತನ ಬಲದಿಂದ ನಮ್ಮೆಡೆಗೆ ಮುನ್ನುಗ್ಗಿಬರುತ್ತಿದ್ದ ದೈತ್ಯಸೇನೆಯಲ್ಲಿ ಅಪರಿಮಿತ ಬಲದ ರಾಕ್ಷಸಿಯರೂ ಇದ್ದರು. ಯುದ್ಧಕ್ಕೆ ಸಿದ್ಧನಾಗಿ ನಿಂತಿದ್ದ ನನ್ನ ರಥದಲ್ಲಿದ್ದ ಧ್ವಜವದು ಅವರ ಕ್ರೂರದೃಷ್ಟಿಗೆ ಬಿತ್ತು. ನಾನು ಹನುಮಧ್ವಜಧಾರಿ. ನನ್ನ ರಥದ ಬಾವುಟದಲ್ಲಿದ್ದವನು ಆ ಶ್ರೀರಾಮನ ಪ್ರಿಯಭಂಟ ಹನುಮಂತ. ರಕ್ಕಸಿಸಮೂಹವದು ಅಳುಕಿತು ಮಾರುತಸುತನನ್ನು ಕಂಡೊಡನೆಯೇ. ಅಂದು ಸಾಗರ ಉಲ್ಲಂಘನದ ಆ ಸಮಯದಲ್ಲಿ ತನ್ನನ್ನು ನುಂಗಿದ ರಾಕ್ಷಸಿಯ ದೇಹ ಸೀಳಿದವನು ಆಂಜನೇಯ. ಲಂಕೆಗೆ ಹೋದ ಬಳಿಕ ಅಲ್ಲಿ ಎದುರಾದ ರಕ್ಕಸಿ ಪಡೆಗೆ ರಾಕ್ಷಸ ರೂಪ ತೋರಿದವನು ವಾಯುಪುತ್ರ. ಆ ಭೀಕರ ನೆನಪು ಮೂಡಿತು ನನ್ನನ್ನು ಎದುರಿಸಲು ಬಂದಿದ್ದ ರಾಕ್ಷಸಿಯರಿಗೆ.ಅಂದು ಲಂಕಿಣಿಯನ್ನು ಬಲವಾಗಿ ಒದೆದ ಬಲಶಾಲಿ ಹನುಮಂತ ಇಂದಿಲ್ಲಿಗೆ ಮತ್ತೆ ಬಂದಿದ್ದಾನೆ ಎಂಬ ಭ್ರಮೆಗೆ ಒಳಗಾದ ರಕ್ಕಸಿಯೊಬ್ಬಳು ದೂರದೂರಕ್ಕೆ ಓಡಿದಳು, ರಣದ ಆಸಕ್ತಿಯನ್ನೇ ತೊರೆದವಳಂತೆ, ಮರಣ ಭಯಕ್ಕೆ ಒಳಗಾದವಳಂತೆ.ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಗೆ ಬೆಂಕಿಯಿತ್ತ ಹನುಮ ಸಾಹಸ ನೆನಪಾಯಿತು ಇನ್ನೊಬ್ಬ ರಕ್ಕಸಿಗೆ. “ಮೊದಲೇನಿದ್ದರೂ ನನ್ನ ಮನೆಯನ್ನು ಉಳಿಸಿಕೊಳ್ಳುತ್ತೇನೆ. ಆಮೇಲೆ ಯುದ್ಧದ ಮಾತು” ಎಂದು ಬೊಬ್ಬೆ ಹೊಡೆದವಳು ತನ್ನ ಮನೆಗೆ ಓಡಿದಳು. ಮನೆಯೊಳಗಿದ್ದ ಸರಕನ್ನೆಲ್ಲಾ ಹೊರಗೆಸೆಯಲು ಶುರುಮಾಡಿದಳು.“ರಕ್ಕಸಿಯ ನೆರಳನ್ನು ಸಹಿಸುವುದಿಲ್ಲ ಈ ಕಪಿ” ಎಂದ ಇನ್ನೊಬ್ಬ ರಾಕ್ಷಸಿ ತನ್ನ ನೆರಳದು ಭೂಮಿಯ ಮೇಲೆ ಬೀಳದಂತಹ ತಾಣವನ್ನು ಹುಡುಕಿ ಅಲ್ಲಿ ಹೋಗಿ ನಿಂತಳು.ಹೀಗೆ ಯುದ್ಧಾಸಕ್ತರಾಗಿ ಬಂದ ರಕ್ಕಸಿಯರಿಗೆ ಭೀತಿ ಮೂಡಲು ನನ್ನ ಧ್ವಜದಲ್ಲಿದ್ದ ಹನುಮ ಕಾರಣನಾದ. ಹೀಗಿದ್ದಾಗಲೇ ಹನುಮನಿಗೆ ಹೆದರುವವಳು ತಾನಲ್ಲ ಎಂದು ಗತ್ತು ಗಾಂಭೀರ್ಯದಿAದ ಮುಂದೆ ಬಂದಳು ಒಬ್ಬ ರಕ್ಕಸಿ. ತನ್ನ ದೈತ್ಯ ಮೊಲೆಗಳಿಂದಲೇ ಶತ್ರು ಸೈನ್ಯವನ್ನು ಪುಡಿಗಟ್ಟುತ್ತೇನೆ ಎಂದು ಅಬ್ಬರಿಸಿದಳು. ಹಾಗೆ ಹೇಳಿದವಳು ಯೋಜನಸ್ತನಿಯೆಂಬ ರಾಕ್ಷಸಿ. ಅರ್ಜುನ ಸೇನೆಯನ್ನು ನಾಶಮಾಡಲು ನನ್ನ ಹೊಟ್ಟೆಯಿದು ಸಾಕು ಎಂದು ಆರ್ಭಟಿಸಿದಳು ಲಂಬೋದರಿ ಎಂಬ ನಿಶಾಚರಿ ದೈತ್ಯೆ. ಹೀಗೆ ಇವರಿಬ್ಬರೂ ಹೊಟ್ಟೆ, ಮೊಲೆಗಳನ್ನು ಮುಂದುಮಾಡಿಕೊAಡು, ಉಳಿದ ಅಸುರ ಪಡೆಯೊಡನೆ ನಮ್ಮ ಸೇನೆಯನ್ನು ನಾಶಪಡಿಸುವ ಉತ್ಸಾಹ ತೋರಿದರು.ಆಗಲೇ ಭೀಕರ ರೂಪದಲ್ಲಿ ಬಂದ ಭೀಷಣ ಮಹಾಸ್ತçಗಳ ಮಳೆಯನ್ನೇ ಕರೆದ, ನನ್ನ ಮೇಲೆ. ಬಗೆಬಗೆಯ ಮೃಗಗಳ ರೂಪವನ್ನು ತಾಳಿ ಬೆದರಿಸುವ ಯತ್ನ ಮಾಡಿದ. “ನನಗೆ ಜನ್ಮ ಕೊಟ್ಟವನಿಗೆ ಮರಣವನ್ನು ತಂದಿಟ್ಟವನು ನಿನ್ನ ಅಣ್ಣ ಭೀಮ. ನೀನೆಂತು ಪ್ರಾಣ ಉಳಿಸಿಕೊಳ್ಳುವೆಯೋ ನೋಡುತ್ತೇನೆ. ನಿನ್ನನ್ನು ಹಿಡಿದು ನರಮೇಧ ಯಾಗಕ್ಕೆ ಬಲಿಪಶುವಾಗಿಸದೆ ಬಿಡುವುದಿಲ್ಲ” ಎಂದು ಭೂಮಿ ನಡುಗುವಂತೆ ಬೊಬ್ಬಿರಿದ ಭೀಷಣ.ಅವನ ಭೀಕರ ಬೊಬ್ಬೆಯದು ನನ್ನಲ್ಲಿ ನಗು ಮೂಡಿಸಿತು. ನನ್ನ ರಕ್ಷೆಗಾಗಿ ಉಗ್ರವಾದ ಬಾಣವೊಂದನ್ನು ಹೂಡಿದೆ. ನನ್ನ ಒಂಟಿ ಬಾಣದ ಏಟಿಗೆ ಜಂಟಿ ಜಂಟಿಯಾಗಿ ತತ್ತರಿಸಿಹೋದರು ಅಸುರರು. ಒಂದರ ಹಿಂದೊAದರAತೆ ಶರಗಳನ್ನು ಪ್ರಯೋಗಿಸುತ್ತಲೇ ಹೋದೆ ಅಸುರರ ಮೇಲೆ.ಬಿರುಗಾಳಿ ಬೀಸಿದಾಗ ಮೋಡಗಳೆಲ್ಲಾ ಚದುರಿಹೋಗುವಂತೆ ದಿಕ್ಕುದಿಕ್ಕಿಗೆ ಹೋಗಿಬಿದ್ದರು ಅಸುರರು. ಕೆಲವರ ಅಂಗಾAಗಗಳು ಮುರಿದುಹೋದವು. ಕೈಕಾಲುಗಳನ್ನು ಕಳೆದುಕೊಂಡರು ಕೆಲವರು. ಕೆಲವರ ದೇಹದಲ್ಲಿ ನಾನು ಪ್ರಯೋಗಿಸಿದ ಬಾಣಗಳು ನೆಟ್ಟಿದ್ದವು. ವೇದನೆಗಳನ್ನು ತಾಳಲಾರದೆ ಕೆಲವರು ಪ್ರಾಣಬಿಟ್ಟರು. ಜೀವ ಉಳಿಸಿಕೊಳ್ಳುವುದಕ್ಕಾಗಿ ಗಿಡಮರಗಳ ಆಶ್ರಯ ಪಡೆದರು ಕೆಲವರು. ಯುದ್ಧರಂಗದಿAದಲೇ ಓಡಿಹೋಗಿ ಉಳಿದೆವು ತಾವು ಎಂದು ಬೀಗಿದರು ಕೆಲವರು.ಈಗ ನನಗೆ ನನ್ನ ಧ್ವಜದಲ್ಲಿ ಕುಳಿತಿದ್ದ ಹನುಮನ ನಿಜ ನೆರವು ದೊರಕಿತು. ಸ್ತನ, ಉದರಗಳಿಂದ ಸೈನಿಕರನ್ನು ಬಡಿಬಡಿದು ಕೊಲ್ಲುತ್ತಿದ್ದ ಯೋಜನಾಸ್ತನಿ, ಲಂಬೋದರಿಯರೆAಬ ರಕ್ಕಸಿಯರನ್ನು ಕಂಡು ಅಚ್ಚರಿಪಟ್ಟ ಅಂಜನಾಸುತ. ಹಿಂದಿನ ನೆನಪೆಲ್ಲವೂ ಬಂತು ಅವನಿಗೆ. ನಸುನಕ್ಕ. ತನ್ನ ಬಾಲವನ್ನು ಅಸುರರಿದ್ದ ದಿಕ್ಕುದಿಕ್ಕಿಗೆ ಬಡಿದ. ಹನುಮಂತನ ಬಾಲದ ಬಲವಾದ ಏಟಿಗೆ ಇನ್ನೂ ಶಕ್ತಿ ಮೂಡದ ಬಾಲರಂತಾಗಿಹೋದರು ರಕ್ಕಸರು. ಜೋರುಜೋರಾಗಿ ಚೀರುತ್ತಾ ಪ್ರಾಣ ಕಳೆದುಕೊಂಡರು. ಎಲ್ಲೆಡೆಯೂ ಅಸುರರ ಉಗ್ರರೂಪವನ್ನು ತೋರುತ್ತಿದ್ದ ರಣರಂಗವೀಗ ಜೀವಂತ ಅಸುರರಿಲ್ಲದೆಯೇ ಶೂನ್ಯವಾಗಿ ತೋರುತ್ತಿತ್ತು. ಅಸುರರನ್ನು ಕೊಲ್ಲುವ ಬಯಲಾಟದೆಡೆಗೆ ಮನಸ್ಸು ಮಾಡಿದ್ದ ಹನುಮಂತ ಈಗ ಅಸುರ ತಾಣವನ್ನು ಬಯಲು ಬಯಲಾಗಿಸಿದ್ದ.ತನ್ನವರನ್ನು ಕಳೆದುಕೊಂಡ ಭೀಷಣ ಭೀತಿಗೆ ಒಳಗಾದ. ತಾನು ಹೀಗೆಯೇ ಇದ್ದರೆ ತನ್ನ ಪ್ರಾಣವೂ ಉಳಿಯಲಾರದು ಎನ್ನುವುದು ದೃಢವಾಯಿತು ಅವನಿಗೆ. ಮಾಯಾವಿಯಾಗಿ ಕೈಚಳಕ ತೋರಿಸಲು ನಿರ್ಧಾರ ಮಾಡಿದ.ತಕ್ಷಣವೇ ಅಲ್ಲೊಂದು ಪುಣ್ಯಾಶ್ರಮ ಕಾಣಿಸಿಕೊಂಡಿತು. ಅಸುರ ರೂಪವನ್ನು ಕಳಚಿಕೊಂಡ ಭೀಷಣ ಮುನಿರೂಪದಲ್ಲಿ ಕಾಣಿಸಿಕೊಂಡ. ಅದೀಗ ಯುದ್ಧರಂಗವಾಗಿರಲಿಲ್ಲ. ಅಸುರ ಪಟ್ಟಣವಾಗಿರಲಿಲ್ಲ. ಎಲ್ಲೆಡೆಯೂ ಗಂಗಾನದಿಯ ನೀರಿನ ಹರಿವು. ಮುನಿಗಳ ಕುಟೀರಗಳು. ಯಜ್ಞಕುಂಡದಿದೆದ್ದ ಹೊಗೆ. ಹೂವಿನ ಗಿಡಗಳು. ಹಣ್ಣಿನ ಮರಗಳು. ಭೀಷಣನ ಭೀಕರತೆಯನ್ನು ಕಣ್ಣಾರೆ ಕಂಡಿದ್ದ ನನ್ನ ಕಣ್ಣಿಗೂ ಭ್ರಾಂತಿ ಮೂಡುವಂತಹ ವಾತಾವರಣವಲ್ಲಿ ನಿರ್ಮಾಣಗೊಂಡಿತ್ತು.ಮುನಿಯ ವೇಷದಲ್ಲಿ ನನ್ನೆದುರು ಬಂದ ಭೀಷಣ “ಅಸುರರನ್ನು ಕೊಲ್ಲುವುದು ಸರಿಯಲ್ಲ. ಹಿಂಸೆಯನ್ನು ಮಾಡದಿರು. ದೇವರ ಅರ್ಚನೆಯ ಮೂಲಕ ಸನ್ಮಾರ್ಗದಲ್ಲಿ ಸಾಗು” ಎಂದು ಕಪಟ ಬೋಧನೆ ಮಾಡಿದ.ತಕ್ಷಣವೇ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಅವನ ಮೂಲರೂಪವೇ ಒದಗಿಬಂತು. ಮುನಿಯಾಗಿದ್ದವ ಮತ್ತೆ ಅಸುರನಾದ. ಒಡನೆಯೇ ಆಕ್ರಮಿಸಿ ಅವನ ಪಟ್ಟಣದಲ್ಲಿದ್ದ ಸಂಪತ್ತೆಲ್ಲವನ್ನೂ ಸೂರೆಗೊಂಡೆ. ಅದನ್ನು ಹಸ್ತಿನಾವತಿಗೆ ಕಳುಹಿಸಿಕೊಟ್ಟೆ. ಕುದುರೆಯ ಜೊತೆಗೆ ಮುಂದಕ್ಕೆ ಸಾಗಿದ ನಮ್ಮನ್ನು ಕರಬೀಸಿ ಕರೆಯುತ್ತಿತ್ತು ಮಣಿಪುರ… ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-25 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ನೇತ್ರ ಚಿಕಿತ್ಸೆ ಶಿಬಿರ ೧೯೫೦ ಮತ್ತು೧೯೫೧ ರ ಸಮಯ…….ಈ ಅವಧಿಯಲ್ಲಿ ಜಯದೇವಿ ತಾಯಿಯವರು ಕೈಗೊಂಡ ನೇತ್ರ ಚಿಕಿತ್ಸಾ ಶಿಬಿರಗಳು ಆ ಕಾಲದ ಸಾಮಾಜಿಕ ಸೇವೆಯ ಇತಿಹಾಸದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗಿ ಉಳಿದವು. ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಕಾಯಿಲೆಗಳಿಂದ ಬಳಲುತ್ತಿದ್ದ ಸಾವಿರಾರು ಬಡಜನರಿಗೆ ಚಿಕಿತ್ಸೆ ದೊರೆಯುವುದು ಅತ್ಯಂತ ಕಷ್ಟಕರವಾಗಿದ್ದ ಸಮಯ ಅಂಥ ಸಂದರ್ಭದಲ್ಲಿ ಜಯದೇವಿ ತಾಯಿಯವರು ಪ್ರಸಿದ್ಧ ನೇತ್ರತಜ್ಞರಾದ ಡಾ.ಎಮ.ಸಿ.ಮೋದಿ ಅವರನ್ನು ಆಹ್ವಾನಿಸಿ ಬೃಹತ್ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿದರು. ಆ ಕಾಲದಲ್ಲಿ ಕಾಚಬಿಂದು, ಮೇಲ್ವಿಂದು, ಕಣ್ಣಿನ ಸೋಂಕುಗಳು, ಓರೆಕಣ್ಣು ಹಾಗೂ ಇತರ ನೇತ್ರ ಸಮಸ್ಯೆಗಳಿಂದ ಬಳಲುತ್ತಿದ್ದ ಅನೇಕ ಜನರು ಚಿಕಿತ್ಸೆಯ ಕೊರತೆಯಿಂದ ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದರು. ಈ ನೋವನ್ನು ಅರಿತ ಜಯದೇವಿ ತಾಯಿಯವರು *ಜನಸೇವೆಯೇ ದೇವಸೇವೆ* ಎಂಬ ಧ್ಯೇಯದೊಂದಿಗೆ ಈ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದರು. ಒಂದು ವಾರ ಕಾಲ ನಡೆದ ಈ ಬೃಹತ್ ಶಿಬಿರದಲ್ಲಿ ಸುಮಾರು ,೩000 ಜನರಿಗೆ ಕಾಚಬಿಂದು, ಮೇಲ್ವಿಂದು, ಹೂತುಂಬುವಿಕೆ ಹಾಗೂ ಓರೆಕಣ್ಣು ಸರಿಪಡಿಸುವಂತಹ ಚಿಕಿತ್ಸೆಗಳು ನೀಡಲಾಯಿತು. ಅಲ್ಲದೆ ೨,000ಕ್ಕೂ ಹೆಚ್ಚು ಜನರಿಗೆ ನೇತ್ರ ಪರೀಕ್ಷೆ, ಔಷಧೋಪಚಾರ ಮತ್ತು ಸಲಹೆಗಳನ್ನು ಒದಗಿಸಲಾಯಿತು. ಕಣ್ಣಿನ ತೊಂದರೆಗಳಿಂದ ನರಳುತ್ತಿದ್ದ ಜನರಿಗೆ ಈ ಶಿಬಿರ ಹೊಸ ಆಶಾಕಿರಣವಾಗಿ ಪರಿಣಮಿಸಿತು. ತೀವ್ರ ಸಮಸ್ಯೆ ಹೊಂದಿದ್ದ ೪೫ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅಷ್ಟೇ ಅಲ್ಲದೆ ೩೭೫ ಜನರಿಗೆ ವಿವಿಧ ರೀತಿಯ ಪ್ರಮುಖ ಶಸ್ತ್ರಚಿಕಿತ್ಸೆಗಳೂ ನೆರವೇರಿಸಲ್ಪಟ್ಟವು. ಆ ಕಾಲದ ಸೀಮಿತ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿಕಿತ್ಸಾ ಕಾರ್ಯ ನಡೆಯುವುದು ನಿಜಕ್ಕೂ ಅಸಾಧಾರಣ ಸಾಧನೆಯಾಗಿತ್ತು.ಈ ಮಹತ್ಕಾರ್ಯದಲ್ಲಿ ಶ್ರೀ ಎಂ.ಪಿ. ಪಾಟೀಲರು ಹಾಗೂ ಶ್ರೀ ಪಠಣೆ ಅವರು ಜಯದೇವಿ ತಾಯಿಯವರೊಂದಿಗೆ ಕೈಜೋಡಿಸಿದರು. ಶಿಬಿರಕ್ಕೆ ಆಗಮಿಸಿದ ರೋಗಿಗಳು ಮತ್ತು ಅವರ ಕುಟುಂಬಸ್ಥರಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಒಟ್ಟು ೫೭೮೦ ಜನರಿಗೆ ಹಾಸಿಗೆ, ಹೊದಿಕೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಯಿತು. ದೂರದ ಊರುಗಳಿಂದ ಬಂದ ಜನರಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.ಅದರ ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಯಲ್ಲಿಯೂ ಯಾವುದೇ ಕೊರತೆ ಉಂಟಾಗದಂತೆ ಜಯದೇವಿ ತಾಯಿಯವರು ಸ್ವತಃ ಮೇಲ್ವಿಚಾರಣೆ ವಹಿಸಿದ್ದರು. ರೋಗಿಗಳು, ಅವರ ಸಂಬಂಧಿಕರು, ವೈದ್ಯರು ಹಾಗೂ ಸ್ವಯಂಸೇವಕರಿಗೆ ಅಗತ್ಯವಾದ ಆಹಾರ, ಕುಡಿಯುವ ನೀರು ಮತ್ತು ವಸತಿ ವ್ಯವಸ್ಥೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲಾಯಿತು. ಸೇವಾಭಾವ, ಸಂಘಟನಾ ಸಾಮರ್ಥ್ಯ ಮತ್ತು ಮಾನವೀಯ ಕಾಳಜಿಯ ಅಪೂರ್ವ ಉದಾಹರಣೆಯಾಗಿ ಈ ಶಿಬಿರಗಳು ಜನಮನದಲ್ಲಿ ಅಚ್ಚಳಿಯದ ಗುರುತು ಮೂಡಿಸಿದವು. ನೇತ್ರ ಚಿಕಿತ್ಸಾ ಶಿಬಿರಗಳ ಮೂಲಕ ಸಾವಿರಾರು ಜನರು ಮತ್ತೆ ಬೆಳಕನ್ನು ಕಂಡರು. ಅನೇಕರ ಜೀವನದಲ್ಲಿ ಹೊಸ ಆಶಾಭರವೂ ಮೂಡಿತು. ಜಯದೇವಿ ತಾಯಿಯವರ ಜನಪರ ಕಾಳಜಿ, ದಯೆ ಮತ್ತು ಸೇವಾ ಮನೋಭಾವದ ಜೀವಂತ ಸಾಕ್ಷಿಯಾಗಿ ಈ ಕಾರ್ಯ ಇಂದಿಗೂ ಸ್ಮರಣೀಯವಾಗಿದೆ. (ಸಹಕಾರ ಚಳುವಳಿ)೧೯೫೧ರ ಸಮಯದಲಿ… ಇನ್ನೊಂದಡೆ ಭಾರತವು ಸ್ವಾತಂತ್ರ್ಯವಾಗಿ ರಾಜಕೀಯವಾಗಿ ಸ್ವತಂತ್ರವಾಗಿದ್ದರೂ, ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು. ಭಾಷೆ, ಧರ್ಮ, ಜಾತಿ, ವೃತ್ತಿ ಹಾಗೂ ಪ್ರಾಂತಗಳ ಆಧಾರದ ಮೇಲೆ ಜನರು ವಿಭಜಿತರಾಗಿದ್ದರು. ಒಂದೇ ದೇಶದ ಪ್ರಜೆಗಳಾಗಿದ್ದರೂ ಪರಸ್ಪರ ಭಿನ್ನಾಭಿಪ್ರಾಯಗಳು, ಪ್ರಾಂತೀಯತೆ ಮತ್ತು ಮತೀಯ ಭಾವನೆಗಳು ಸಮಾಜದಲ್ಲಿ ಬೇರೂರಿದ್ದವು. ಇಂತಹ ಸಂದರ್ಭದಲ್ಲಿ ದೇಶದ ಏಕತೆ ಮತ್ತು ಸಮಗ್ರ ಅಭಿವೃದ್ಧಿಗೆ ಸಾಮರಸ್ಯ ಅತ್ಯಗತ್ಯ ಎಂಬುದನ್ನು ಜಯದೇವಿ ತಾಯಿಯವರು ಮನಗಂಡರು.ಈ ಹಿನ್ನೆಲೆಯಲ್ಲಿ ಅವರು *ಸಹಕಾರ ಚಳುವಳಿ* ಯನ್ನು ಜನಜಾಗೃತಿಯ ಸಾಧನವಾಗಿ ಬಳಸಿದರು. “ನಾವು ಮೊದಲು ಭಾರತೀಯರು, ನಂತರ ಭಾಷಿಕರು, ಮತೀಯರು ಅಥವಾ ಪ್ರಾಂತೀಯರು” ಎಂಬ ಸಂದೇಶವನ್ನು ಜನರಿಗೆ ತಲುಪಿಸಲು ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿದರು. ವಿವಿಧ ಸಮುದಾಯಗಳ ಮುಖಂಡರನ್ನು ಒಂದೇ ವೇದಿಕೆಗೆ ಕರೆತಂದು ಸಂವಾದಗಳನ್ನು ನಡೆಸಿದರು. *ಸಹಕಾರವಿರೆ ಮನೆಯು | ಸಹಕಾರವಿದೆ ಮಠವುಸಹಕಾರವಿದೆ ಬದುಕು ಬಾಳುವೆ – ತಿಳಿಯಣ್ಣ,ಸಹಕಾರದಿಂದಲೇ ಸರ್ಕಾರವು.||* ಈ ಅರ್ಥಪೂರ್ಣ ವಚನವನ್ನು ಜಯದೇವಿ ತಾಯಿಯವರು ತಮ್ಮ ಜೀವನದ ಆದರ್ಶವನ್ನಾಗಿಸಿಕೊಂಡಿದ್ದರು. ಮನುಷ್ಯನ ಬದುಕಿನಲ್ಲಿ ಸಹಕಾರಕ್ಕೆ ಪರ್ಯಾಯವೇ ಇಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಒಂದು ಕುಟುಂಬ ಸುಖವಾಗಿ ನೆಮ್ಮದಿಯಿಂದ ಇರಬೇಕಾದರೆ ಪರಸ್ಪರ ಸಹಕಾರ ಅಗತ್ಯ. ಒಂದು ಮಠ, ಸಂಘ ಅಥವಾ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಸದಸ್ಯರ ನಡುವೆ ಅನ್ಯೋನ್ಯತೆ ಮತ್ತು ಒಗ್ಗಟ್ಟು ಇರಬೇಕು.ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೂ ಜನರ ಸಹಕಾರ, ಪರಸ್ಪರ ವಿಶ್ವಾಸ ಮತ್ತು ಒಮ್ಮತದ ಮೇಲೆ ನಿಂತಿರುತ್ತದೆ ಎಂದು ಅವರು ಆಗಾಗ ಹೇಳುತ್ತಿದ್ದರು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂ ಪ್ರೇರಿತನಾಗಿ, ಪ್ರಾಮಾಣಿಕನಾಗಿ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡುತ್ತಿದ್ದರು. ವ್ಯಕ್ತಿಯ ಉದಾತ್ತ ಗುಣಗಳೇ ಸಂಘಟನೆಗಳ ಶಕ್ತಿಯಾಗುತ್ತವೆ ಎಂದು ಅವರು ನಂಬಿದ್ದರು. ಅಹಂಕಾರ, ಸ್ವಾರ್ಥ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಪರಸ್ಪರ ಗೌರವ ಮತ್ತು ವಿಶ್ವಾಸದಿಂದ ಕೈಜೋಡಿಸಿದಾಗ ಮಾತ್ರ ಯಾವುದೇ ಸಂಘ ಅಥವಾ ಸಂಸ್ಥೆ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯವೆಂದು ತಿಳಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಸಹಕಾರವೆಂದರೆ ಅದು ಹೃದಯಗಳನ್ನು ಜೋಡಿಸುವ ಮಾನವೀಯ ಮೌಲ್ಯ. ಒಬ್ಬರ ದುಃಖದಲ್ಲಿ ಮತ್ತೊಬ್ಬರು ಭಾಗಿಯಾಗುವುದು, ಒಬ್ಬರ ಯಶಸ್ಸಿಗೆ ಮತ್ತೊಬ್ಬರು ಬೆನ್ನೆಲುಬಾಗುವುದು, ಸಮಾಜದ ಹಿತಕ್ಕಾಗಿ ಎಲ್ಲರೂ ಒಂದೇ ಮನಸ್ಸಿನಿಂದ ದುಡಿಯುವುದು…. ಇವೆಲ್ಲವೂ ಸಹಕಾರದ ನಿಜವಾದ ರೂಪಗಳೆಂದು ಅವರು ಪ್ರತಿಪಾದಿಸುತ್ತಿದ್ದರು. ಆದ್ದರಿಂದಲೇ ಅವರು ಸಹಕಾರ ಚಳವಳಿಯ ಬೆಳವಣಿಗೆಯನ್ನು ಕಂಡು ಹರ್ಷಿಸುತ್ತಾ, *”ಒಂದಕ್ಕೆ ಹತ್ತಾಗಿ, ಹತ್ತಕ್ಕೆ ನೂರಾಗಿ,ನೂರಕ್ಕೆ ಸಾವಿರಾರು ಸಹಕಾರದ ಬಳ್ಳಿ ಹಬ್ಬಲಿ!* ಎಂದು ಹೃದಯಪೂರ್ವಕವಾಗಿ ಹಾರೈಸುತ್ತಿದ್ದರು. ಸಹಕಾರದ ಬೀಜವು ಪ್ರತಿಯೊಂದು ಮನಸ್ಸಿನಲ್ಲಿ ಮೊಳಕೆಯೊಡೆದು, ಅದರ ಬಳ್ಳಿ ಊರುಗಳಿಂದ ನಗರಗಳಿಗೆ, ಕುಟುಂಬಗಳಿಂದ ಸಮಾಜಕ್ಕೆ, ಸಮಾಜದಿಂದ ರಾಷ್ಟ್ರದವರೆಗೆ ವ್ಯಾಪಿಸಲಿ ಎಂಬುದು ಅವರ ಕನಸಾಗಿತ್ತು. ಒಗ್ಗಟ್ಟು, ಪರಸ್ಪರ ವಿಶ್ವಾಸ ಮತ್ತು ಸಹಕಾರದ ಮನೋಭಾವದಿಂದಲೇ ಸಮೃದ್ಧ ಸಮಾಜ ಮತ್ತು ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವೆಂದು ಅವರು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟರು. ಸಹಕಾರ ಸಂಘಗಳು ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಬೇಕೆಂದು ಒತ್ತಿಹೇಳಿದರು.ಆ ಸಮಯದಲ್ಲಿ ದೇಶದ ಗಡಿಭಾಗಗಳ ಸಮಸ್ಯೆಗಳು ಹಾಗೂ ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳು ಪ್ರಮುಖವಾಗಿದ್ದವು. ಆದ್ದರಿಂದ ತಾಯಿಯವರು ಜನರಿಗೆ, “ಮೊದಲು ದೇಶದ ಗಡಿಗಳನ್ನು ಭದ್ರಗೊಳಿಸಿ, ರಾಷ್ಟ್ರೀಯ ಏಕತೆಯನ್ನು ಬಲಪಡಿಸೋಣ. ನಂತರ ಭಾಷಿಕ ಪ್ರಾಂತಗಳ ಬೇಡಿಕೆಗಳನ್ನು ಶಾಂತಿಯುತವಾಗಿ ಚರ್ಚಿಸೋಣ” ಎಂದು ಕರೆ ನೀಡಿದರು. ಭಾಷೆಯ ಹೆಸರಿನಲ್ಲಿ ಸಂಘರ್ಷ ಮಾಡುವುದಕ್ಕಿಂತ ದೇಶದ ಹಿತಾಸಕ್ತಿಯನ್ನು ಮೊದಲ ಸ್ಥಾನದಲ್ಲಿ ಇರಿಸಬೇಕು ಎಂದು ತಿಳಿಸಿದರು.ಅವರು ನಡೆಸಿದ ಸಭೆಗಳಲ್ಲಿ ಕನ್ನಡಿಗರು, ಮರಾಠಿಗರು, ತೆಲುಗಿಗರು, ಉರ್ದು ಭಾಷಿಕರು ಸೇರಿದಂತೆ ವಿವಿಧ ಸಮುದಾಯದ ಜನರು ಭಾಗವಹಿಸುತ್ತಿದ್ದರು. ಪರಸ್ಪರ ಸಹಕಾರ, ಸಹಬಾಳ್ವೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಬೋಧಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟಿನ ಮನೋಭಾವವನ್ನು ಬೆಳೆಸಿದರು. ಸಹಕಾರ ಸಂಘಗಳ ಮೂಲಕ ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರನ್ನು ಒಗ್ಗೂಡಿಸಿ, ಸಮುದಾಯದ ಸಮಸ್ಯೆಗಳನ್ನು ಸಮೂಹವಾಗಿ ಪರಿಹರಿಸುವ ಮಾರ್ಗವನ್ನು ತೋರಿಸಿದರು. ಜಯದೇವಿ ತಾಯಿಯವರ ಈ ಪ್ರಯತ್ನಗಳು ರಾಷ್ಟ್ರ ನಿರ್ಮಾಣದ ಕಾರ್ಯವಾಗಿತ್ತು. ವಿಭಜನೆಯತ್ತ ಸಾಗುತ್ತಿದ್ದ ಸಮಾಜವನ್ನು ಒಗ್ಗಟ್ಟಿನ ದಾರಿಯಲ್ಲಿ ನಡೆಸುವ ಅವರ ಸಂಕಲ್ಪವು ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿತು. ಭಾಷೆ, ಧರ್ಮ ಮತ್ತು ಜಾತಿಯ ಭೇದಗಳನ್ನು ಮೀರಿ ಮಾನವೀಯತೆ ಹಾಗೂ ರಾಷ್ಟ್ರೀಯತೆಯ ಭಾವನೆಗಳನ್ನು ಬಲಪಡಿಸಿದ ಅವರ ಸೇವೆ ಇಂದಿಗೂ ಆದರ್ಶಪ್ರಾಯವಾಗಿದೆ. “ಹಾಗೆಯೇ ಅವರಿಗೆ ತಾಯಿ ಭಾಷೆಯ ಮೇಲಿನ ಪ್ರೇಮವೂ ಅಪಾರವಾಗಿತ್ತು. ವಿಶೇಷವಾಗಿ ಕನ್ನಡದ ಮೇಲಿನ ಅವರ ಅಭಿಮಾನ ಮತ್ತು ತಾಯ್ನುನುಡಿ ಮೇಲಿನ ಗೌರವ ಅಚಲವಾಗಿತ್ತು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೆಂದು ಅವರು ನಂಬಿದ್ದರು. ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಾ, ಕನ್ನಡದ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕನ್ನಡವೆಂದರೆ ಅವರಿಗೆ ಜೀವದಷ್ಟೇ ಪ್ರೀತಿ. ಕನ್ನಡದ ಸೊಗಡು, ಸಂಸ್ಕೃತಿ ಮತ್ತು ಸಾಹಿತ್ಯದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕೆಂಬ ಕಳಕಳಿ ಅವರ ಹೃದಯದಲ್ಲಿ ಸದಾ ಜಾಗೃತವಾಗಿತ್ತು. ಕನ್ನಡ ಭಾಷೆಯ ಬೆಳವಣಿಗೆಯೇ ಕನ್ನಡ ನಾಡಿನ ಬೆಳವಣಿಗೆ ಎಂಬ ದೃಢ ನಂಬಿಕೆಯೊಂದಿಗೆ ಅವರು ಭಾಷಾ ಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದರು. *ಜಯದೇವಿ ತಾಯಿಯವರಿಗೆ ಕನ್ನಡ ಅವರ ಉಸಿರಾಗಿದ್ದರೆ, ಇತರ ಭಾಷೆಗಳು ಅವರ ಹೃದಯದ ಆತ್ಮೀಯ ಅತಿಥಿಗಳಾಗಿದ್ದವು.* ಕನ್ನಡವನ್ನು ಅವರು ಎಷ್ಟು ಪ್ರೀತಿಸುತ್ತಿದ್ದರೋ, ಅಷ್ಟೇ ಗೌರವ ಮತ್ತು ಆದರವನ್ನು ಮರಾಠಿ ಹಾಗೂ ಹಿಂದಿ ಭಾಷೆಗಳಿಗೂ ನೀಡುತ್ತಿದ್ದರು. ಆ ಭಾಷೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿ, ಅವುಗಳ ಸಾಹಿತ್ಯ ಮತ್ತು ಸಂಸ್ಕೃತಿಯ ಸೊಗಡನ್ನು ಆಸ್ವಾದಿಸುತ್ತಿದ್ದರು. ಆದರೆ ತಮ್ಮ ಭಾಷೆಯನ್ನು ಪ್ರೀತಿಸುವುದು ಎಂದರೆ ಇತರ ಭಾಷೆಗಳನ್ನು ತಿರಸ್ಕರಿಸುವುದಲ್ಲ ಎಂಬುದನ್ನು ಅವರು ಸದಾ ಹೇಳುತ್ತಿದ್ದರು. ‘ಪ್ರತಿಯೊಬ್ಬರಿಗೂ ಅವರ ತಾಯಿಭಾಷೆ ತಾಯಿಯಂತೆಯೇ. ಕನ್ನಡಿಗನಿಗೆ ಕನ್ನಡ ಹೇಗೆ ಅಮೂಲ್ಯವೋ, ಮರಾಠಿಗನಿಗೆ ಮರಾಠಿ, ಹಿಂದಿ ಭಾಷಿಕನಿಗೆ ಹಿಂದಿಯೂ ಅಷ್ಟೇ ಅಮೂಲ್ಯ. ತಮ್ಮ ತಾಯಿಭಾಷೆಯನ್ನು ಗೌರವಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಅವರು ಪ್ರೀತಿಯಿಂದ ತಿಳಿಸುತ್ತಿದ್ದರು. *ಭಾಷೆಗಳು ಮನುಷ್ಯರನ್ನು ಬೇರ್ಪಡಿಸಲು ಅಲ್ಲ, ಹೃದಯಗಳನ್ನು ಜೋಡಿಸಲು* ಎಂಬುದು ಅವರ ನಂಬಿಕೆಯಾಗಿತ್ತು. ನುಡಿ ಭಾಷೆಯ ಮೇಲೆ ಹೆಮ್ಮೆ ಇಟ್ಟುಕೊಂಡು, ಇತರರ ತಾಯ್ನುಡಿಯನ್ನು ಸಹ ಗೌರವಿಸುವ ವಿಶಾಲ ಮನೋಭಾವವನ್ನು ಅವರು ಜೀವನದುದ್ದಕ್ಕೂ ಪಾಲಿಸಿದರು. ಭಾಷೆಗಳ ನಡುವೆ ಗೋಡೆಗಳನ್ನು ಕಟ್ಟದೆ, ಪ್ರೀತಿ ಮತ್ತು ಪರಸ್ಪರ ಗೌರವದ ಸೇತುವೆಗಳನ್ನು ನಿರ್ಮಿಸಿದ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿತ್ತು.( ಮುಂದುವರೆಯುವುದು) ಸವಿತಾ ದೇಶಮುಖ
ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ ಕ್ರಾಂತಿಕಾರಿ ಕವಿ ಸರ್ವಜ್ಞ ಸರ್ವಜ್ಞ ಕವಿ 16ನೇ ಶತಮಾನದಲ್ಲಿ ಜೀವಿಸಿದ್ದ ಕನ್ನಡದ ಅತ್ಯಂತ ಜನಪ್ರಿಯ ಕ್ರಾಂತಿಕಾರಿ ತ್ರಿಪದಿ ಕವಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಸರ್ವಜ್ಞ ಅಪ್ಪಟ ಬಸವ ಭಕ್ತ ಕ್ರಾಂತಿಕಾರಿ ಕವಿ. ತನ್ನ ಮೊನಚಾದ ಟೀಕೆ ಟಿಪ್ಪಣಿಗಳು ವಿಡಂಬನೆಯಿಂದ ಸುತ್ತಲಿನ ಅಂಕು ಡೊಂಕುಗಳನ್ನು ತಿದ್ದಿದ್ದಾನೆ. ಸಮಾಜದ ಆಷಾಢಭೂತಿತನಕ್ಕೆ ನೇರ ಚಾಟಿ ಏಟು ಬೀಸಿದ್ದಾನೆ. ಮೂರು ಸಾಲುಗಳ ಸರಳ ‘ತ್ರಿಪದಿ’ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಾರ್ವಕಾಲಿಕ ನೀತಿ ಮತ್ತು ಮೌಲ್ಯಗಳನ್ನು ಬೋಧಿಸಿದ ದಾರ್ಶನಿಕರಾಗಿದ್ದಾರೆ. ಜನನ ಮತ್ತು ಬಾಲ್ಯ ಹುಟ್ಟೂರು: ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು. ನಿಜನಾಮ: ಸಂಶೋಧನೆಗಳ ಪ್ರಕಾರ ಈತನ ನಿಜವಾದ ಹೆಸರು ಪುಷ್ಪದತ್ತ, ‘ಸರ್ವಜ್ಞ’ ಎಂಬುದು ಕಾವ್ಯನಾಮ. ತಂದೆ ತಾಯಿ : ತಂದೆ ಕುಂಬಾರ ಮಲ್ಲ ಮತ್ತು ತಾಯಿ ಮಾಳೆ (ಮಾಳಲಾದೇವಿ). ತಂದೆ ಕುಂಬಾರ ಮಲ್ಲ ತಾಯಿ ಮಾಳಲಾದೇವಿ ಇಂದು ಧರೆಗೆ ಬಂದ ಚಂದ್ರಶೇಖರ ನಾನು ಸರ್ವಜ್ಞ ಎಂದು ತನ್ನ ಹುಟ್ಟಿನ ಬಗ್ಗೆಯೇ ಹೇಳಿಕೊಂಡಿದ್ದಾನೆ. ಸಾಹಿತ್ಯ ಮತ್ತು ತ್ರಿಪದಿಗಳ ವೈಶಿಷ್ಟ್ಯ ತ್ರಿಪದಿ ಚಂದಸ್ಸು: ಮೂರು ಸಾಲುಗಳ ಪದ್ಯ ಪ್ರಕಾರವಾದ ತ್ರಿಪದಿಗೆ ಸರ್ವಜ್ಞ ಅತ್ಯಂತ ಪ್ರಸಿದ್ಧರಾಗಿದ್ದಾರೆ. ಜಾತಿ ಪದ್ಧತಿಯ ವಿರೋಧ, ಮೂಢನಂಬಿಕೆಗಳ ಖಂಡನೆ, ನೀತಿ, ಕಾಯಕದ ಮಹತ್ವ, ಸ್ನೇಹ ಮತ್ತು ಲೌಕಿಕ ಜ್ಞಾನ ಇವರ ವಚನಗಳ ಮುಖ್ಯ ವಸ್ತುಗಳಾಗಿದ್ದವು. ಸರಳ ಭಾಷೆ: ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಉಪಮೆ ಹಾಗೂ ಉದಾಹರಣೆಗಳನ್ನು ಬಳಸಿ ಕಾವ್ಯ ರಚಿಸಿದ್ದಾರೆ. ಪ್ರಸಿದ್ಧ ವಚನ (ತ್ರಿಪದಿ) ತಮ್ಮ ಜ್ಞಾನದ ಕುರಿತು ಸರ್ವಜ್ಞ ಅತ್ಯಂತ ವಿನಮ್ರವಾಗಿ ಹೀಗೆ ಹೇಳಿಕೊಂಡಿದ್ದಾರೆ: “ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ” ( ನಾನು ಹುಟ್ಟುತ್ತಲೇ ಎಲ್ಲವನ್ನೂ ತಿಳಿದ ಮಹಾಜ್ಞಾನಿಯಾಗಿರಲಿಲ್ಲ ಅಥವಾ ಅಹಂಕಾರದಿಂದ ಸರ್ವಜ್ಞನಾಗಲಿಲ್ಲ. ಸಮಾಜದಲ್ಲಿ ಸಿಗುವ ಪ್ರತಿಯೊಬ್ಬರಿಂದಲೂ ಒಂದೊಂದು ಒಳ್ಳೆಯ ವಿಷಯಗಳನ್ನು ಕಲಿತು ಜ್ಞಾನದ ಪರ್ವತವಾಗಿದ್ದೇನೆ) ಎಂದು ಹೇಳಿಕೊಂಡಿದ್ದಾನೆ. ಸರ್ವಜ್ಞನು ಕಂಡ ಬಸವಣ್ಣ ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬಸವಣ್ಣ ಮತ್ತು ಶರಣರ ಕಾರ್ಯವನ್ನು ನೆನೆಸಿದ್ದಾನೆ. ಕನ್ನಡದ ಪ್ರಸಿದ್ಧ ತ್ರಿಪದಿ ಕವಿ ಸರ್ವಜ್ಞರು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರರಾದ ವಿಶ್ವಗುರು ಬಸವಣ್ಣನವರ ಮಹಿಮೆ, ಭಕ್ತಿ ಮತ್ತು ಆದರ್ಶಗಳನ್ನು ತಮ್ಮ ಕೆಲವು ಪ್ರಮುಖ ತ್ರಿಪದಿಗಳಲ್ಲಿ ಅತ್ಯಂತ ಗೌರವದಿಂದ ಕೊಂಡಾಡಿದ್ದಾರೆ. ಲಿಂಗಾಯತ ಧರ್ಮ ಮತ್ತು ಸಮಾಜಕ್ಕೆ ಬಸವಣ್ಣನವರ ಕೊಡುಗೆಯನ್ನು ಸರ್ವಜ್ಞರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸರ್ವಜ್ಞ ಒಬ್ಬ ನೇರ ದಿಟ್ಟ ನಿರಂತರ ಕ್ರಾಂತಿಕಾರಿ ಕವಿ. ಒಂದು ಅರ್ಥದಲ್ಲಿ ಬಸವಣ್ಣನವರ ಶರಣರ ಕ್ರಾಂತಿಯ ವಾರಸುದಾರ. ಬಸವಣ್ಣನವರ ಕುರಿತಾದ ಸರ್ವಜ್ಞನ ಪ್ರಮುಖ ತ್ರಿಪದಿಗಳು ಮತ್ತು ಅವುಗಳ ಸರಳ ಭಾವಾರ್ಥಗಳು ೧. ಲಿಂಗಾಯತ ಧರ್ಮದ ಕರ್ತೃ ಬಸವಣ್ಣ ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ | ಹುಸಿಮಾತನಾಡಿ ಕೆಡದಿರಿ ಲಿಂಗಾಯತಕೆ | ಬಸವಣ್ಣನೆ ಕರ್ತೃ ಸರ್ವಜ್ಞ || ಬಸವ ಗುರುವಿನ ಮಹಿಮೆ ಮತ್ತು ಹೆಸರಿನ ಶಕ್ತಿ ಎಲ್ಲರಿಗೂ ತಿಳಿಯದು. ಸುಳ್ಳು ಮಾತುಗಳನ್ನಾಡಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಈ ಲಿಂಗಾಯತ ಧರ್ಮಕ್ಕೆ ಮತ್ತು ವೈಚಾರಿಕ ಸಮಾಜಕ್ಕೆ ಬಸವಣ್ಣನವರೇ ನಿಜವಾದ ಮೂಲಪುರುಷ ಅಥವಾ ಕರ್ತೃವಾಗಿದ್ದಾರೆ. ೨. ಬಸವ ನಾಮಸ್ಮರಣೆಯ ಮಹಿಮೆ ಬಸವನೆಂದಡೆ ಪಾಪ ದೆಶೆಗೆಟ್ಟು ಹೋಗುವುದು | ಬಸವನ ಪಾದವ ನಂಬಿದ ಭಕ್ತರು | ಹಸನಾದರಯ್ಯ ಸರ್ವಜ್ಞ || ಬಸವ’ ಎಂಬ ಹೆಸರನ್ನು ಭಕ್ತಿಯಿಂದ ಉಚ್ಚರಿಸಿದರೆ ಸಾಕು, ಮನುಷ್ಯನ ಪಾಪಗಳೆಲ್ಲವೂ ದಿಕ್ಕೆಟ್ಟು ಓಡಿಹೋಗುತ್ತವೆ. ಬಸವಣ್ಣನವರ ತತ್ತ್ವಗಳನ್ನು ಮತ್ತು ಅವರ ಪಾದಗಳನ್ನು ನಂಬಿ ನಡೆದ ಭಕ್ತರ ಜೀವನವು ಅತ್ಯಂತ ಸುಂದರವಾಗಿ ಹಾಗೂ ಪಾವನವಾಗಿ ರೂಪಿತಗೊಂಡಿದೆ. ೩. ಬಸವಣ್ಣನೇ ಜಗದ ಗುರು ಬಸವನೆ ಜಗದಾದಿ ಬಸವನೆ ಜಗದೀಶ | ಬಸವನೇ ಜಗದ ಗುರುಪ್ರಣವವೆಂದರಿದು | ಬಸವನನು ಜಪಿಸು ಸರ್ವಜ್ಞ || ಬಸವಣ್ಣನೇ ಈ ಜಗತ್ತಿನ ಕಲ್ಯಾಣದ ಆದಿಯಾಗಿದ್ದಾನೆ, ಅವನೇ ದೈವಸ್ವರೂಪಿಯಾಗಿದ್ದಾನೆ. ಬಸವಣ್ಣನೇ ಇಡೀ ಜಗತ್ತಿಗೆ ಓಂಕಾರದಂತಹ (ಪ್ರಣವ) ಜ್ಞಾನವನ್ನು ನೀಡಿದ ಜಗದ್ಗುರು ಎಂಬುದನ್ನು ಅರಿತು, ಸದಾ ಆತನ ನಾಮವನ್ನು ಜಪಿಸು. ೪. ಮಂತ್ರಸಿದ್ಧ ಬಸವಣ್ಣ ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ | ಮಂತ್ರಸಿದ್ದನು ಬಸವಣ್ಣನ ಪಾದಕ್ಕ | ಶರಣೆನ್ನಿರೆಲ್ಲ ಸರ್ವಜ್ಞ ಕಾಮವನ್ನು ಗೆದ್ದವನು ಬಸವಣ್ಣ. ಭಕ್ತರ ಚಿಂತೆಗಳನ್ನು ಪರಿಹರಿಸುವವನು ಬಸವಣ್ಣ. ಆಧ್ಯಾತ್ಮಿಕ ಮಂತ್ರಸಿದ್ಧಿಯನ್ನು ಹೊಂದಿರುವ ಆ ಬಸವಣ್ಣನ ಪಾದಗಳಿಗೆ ನಾವೆಲ್ಲರೂ ಭಕ್ತಿಯಿಂದ ಶರಣಾಗಬೇಕು. ೫. ಶಂಭುವಿನ ಕರುಣೆ ನಂಬಿ ಹೇಳುವೆ ಬಸವ ನಿಂಬಿಸಿ ಮಹಿಮೆಯ | ಶಂಭುವಿನ ಕರುಣ ನಿನಗುಂಟ ನಾನಿಮ್ಮ | ನಂಬಿ ಹೇಳಿದೆನು ಸರ್ವಜ್ಞ ಬಸವಣ್ಣನೇ, ನಿನ್ನ ಅಪಾರವಾದ ಮಹಿಮೆಯನ್ನು ನಾನು ಪೂರ್ಣವಾಗಿ ನಂಬಿ ಹೇಳುತ್ತಿದ್ದೇನೆ. ಸಾಕ್ಷಾತ್ ಶಿವನ (ಶಂಭುವಿನ) ಸಂಪೂರ್ಣ ಕೃಪೆ ನಿನ್ನ ಮೇಲಿದೆ ಎಂಬುದನ್ನು ನಾನು ದೃಢವಾಗಿ ನಂಬಿ ಜಗತ್ತಿಗೆ ಸಾರುತ್ತಿದ್ದೇನೆ ಎಂದು ಹೇಳಿದ್ದಾರೆ. ೬ ಲೋಕಕ್ಕೆ ಬಸವಣ್ಣನೇ ಮುದ್ದು ಹಸಿದೊಡಂಬಲಿ ಮುದ್ದು ಬಿಸಿಲಿಗೆ ಕೊಡೆ ಮುದ್ದು ಬಸುರಿಗೆ ಶಿಶು ಮುದ್ದು ಲೋಕಕ್ಕೆ ಬಸವಣ್ಣನೇ ಮುದ್ದು ಸರ್ವಜ್ಞ. ಬೇಸಿಗೆಯ ಬಳಲಿಕೆಗೆ ಅಂಬಲಿ ಕೊಟ್ಟಾಗ ಹೊಟ್ಟೆಗೆ ಹಿತವಾಗಿರುತ್ತದೆ. ಹಸಿದ ಹೊಟ್ಟೆ ತಣ್ಣಗೆ ಮಾಡುವ ಅಂಬಲಿ ಆರೋಗ್ಯಕ್ಕೂ ಒಳ್ಳೆಯದು. ಬಿಸಿಲಿಗೆ ಒಂದು ಕೊಡೆ ಇದ್ದರೆ ಅದಕ್ಕಿಂತ ಹೆಚ್ಚಿನ ಆನಂದ ಇನ್ನೊಂದಿಲ್ಲ. ಬಸುರಿ ಹೆಣ್ಣು ಮಗಳು ಓಣಿಯಲ್ಲಿ ಆಡುವ ಎಲ್ಲಾ ಮಕ್ಕಳನ್ನು ಪ್ರೀತಿಯಿಂದ ಮುದ್ದಾಡುತ್ತಾಳೆ ಬಸುರಿ. ೭ ಬಸವ ಪೀಠವು ಎದ್ದು ಬಸವ ಪೀಠವು ಎದ್ದು ಒಸೆದು ನಾಣ್ಯವು ಹುಟ್ಟಿ ಬಸವನ ಮುದ್ರೆ ಮೆರೆದಾವು,ಧರೆಯವಗೆ ವಶವಾಗದಿಹುದೆ ಸರ್ವಜ್ಞ ಕಲ್ಯಾಣ ಕ್ರಾಂತಿಯ ನಂತರ ಅನುಭವ ಮಂಟಪವು ಒಂದು ಪ್ರಬಲ ಪ್ರಜಾಪ್ರಭುತ್ವದ ಅಂಗವಾಗಿ ಹೊರ ಹೊಮ್ಮಿತು.ಅದನ್ನೇ ಸರ್ವಜ್ಞ ಬಸವ ಪೀಠವು ಎದ್ದು ಜಾಗೃತಗೊಂಡು ಹೊಸ ನಾಣ್ಯಗಳು ಚಲಾವಣೆಗಾಗಿ ಹುಟ್ಟಿ ಕೊಂಡು ಆ ಚಲಾವಣೆಗೊಳ್ಳುವ ನಾಣ್ಯಗಳ ಮೇಲೆ ಬಸವನ. ಮುದ್ರೆ ನಾಡಲ್ಲಿ ಮೆರೆಯುವಾಗ ಬೆಳಕಿಗೆ ಬರುವಾಗ. ಇಡೀ ಜಗತ್ತು ಅವನಿಗೆ ವಶವಾಗಲು ಸಾಧ್ಯವಿಲ್ಲವೇ ? ಎಂದು ಪ್ರಶ್ನಿಸಿದ್ದಾನೆ. ಸರ್ವಜ್ಞರು ತಮ್ಮ ಈ ತ್ರಿಪದಿಗಳ ಮೂಲಕ ಬಸವಣ್ಣನವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ, ಸಮಾಜವನ್ನು ಉದ್ಧಾರ ಮಾಡಲು ಬಂದ ಸಾಕ್ಷಾತ್ ಶಿವ ಕಲ್ಯಾಣದ ಜ್ಯೋತಿಯಾಗಿ ಆರಾಧಿಸಿದ್ದಾರೆ. ಸರ್ವಜ್ಞ ಒಬ್ಬ ದಿಟ್ಟ ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ವ್ಯಕ್ತಿ. ತನ್ನ ಅನಿಸಿಕೆ ಭಾವನೆಗಳನ್ನು ನೇರವಾಗಿ ಹೇಳುವ ಗಟ್ಟಿತನ ಹೊಂದಿರುವ ಅಪರೂಪದ ಕವಿ. ಆಡು ಮುಟ್ಟದ ಸೊಪ್ಪಿಲ್ಲ ಕವಿ ಸರ್ವಜ್ಞ ಬರೆಯದ ವಿಷಯವಿಲ್ಲ ಎನ್ನುವ ಜಾನಪದ ನಾಣ್ಣುಡಿಯಂತೆ ಸರ್ವಜ್ಞ ಎಲ್ಲಾ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ. ಆರೋಗ್ಯ ಕುಟುಂಬ ಗಂಡ ಹೆಂಡತಿ ಸಂಬಂಧ ಆಹಾರ ವೈದಿಕ ವ್ಯವಸ್ಥೆಯ ವಿರುದ್ಧ ಟೀಕೆ ಹೀಗೆ ಎಲ್ಲಾ ವಿಷಯಗಳನ್ನು ತನ್ನ ತ್ರಿಪದಿಗಳಲ್ಲಿ ದಾಖಲಿಸಿದ್ದಾನೆ. ಜಯಂತಿ: ಪ್ರತಿ ವರ್ಷ ಫೆಬ್ರವರಿ 20 ರಂದು ಸರ್ವಜ್ಞ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಆಚರಿಸಲಾಗುತ್ತದೆ. ಯಾವುದಾದರೂ ಒಂದು ವಿಶ್ವ ವಿದ್ಯಾಲಯದ ಆವರಣದಲ್ಲಿ ಸರ್ವಜ್ಞ ಪೀಠ ಸ್ಥಾಪಿಸಿ ಅವರ ಉಜ್ವಲ ಚಿಂತನೆ ಮಾನವ ಪ್ರೇಮ ಸಾಮಾಜಿಕ ಚಿಂತನೆಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕು. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ-31 ಅರ್ಜುನ ಉವಾಚ ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅಸುರಾಂತಕ ಮಿತ್ರ ನಾನು ಅಸುರಪಟ್ಟಣವ ಸೇರಿದೆಆಲಿಸಿದೆ ಅಶರೀರವಾಣಿಯನ್ನು ಪರಿಪೂರ್ಣವಾಗಿ. “ಬಾಣವನ್ನು ಪ್ರಯೋಗಿಸದಿರು ಪಾರ್ಥ. ಆ ವನಿತೆಯ ಕೊಲೆಗೆ ಹೇಸದೆ ಶರವನ್ನು ತೊಡುವುದು ತರವಲ್ಲ. ಕೋಪವನ್ನು ಬಿಡು. ಪ್ರಮೀಳೆಯನ್ನು ವರಿಸು. ಮುಂದೆ ನಿನಗೆ ಒಳ್ಳೆಯದಾಗಲಿದೆ” ಎಂಬ ಧ್ವನಿಯದು ಕೇಳಿಬಂತು. ನನ್ನೊಬ್ಬನಿಗೇ ಕೇಳಿದ ಸ್ವರವಲ್ಲ. ಅಲ್ಲಿದ್ದ ಪ್ರತಿಯೊಬ್ಬರಿಗೂ ಕೇಳಿಸಿತು.ಪ್ರಯೋಗಿಸಲೆಂದು ಎತ್ತಿಹಿಡಿದಿದ್ದ ಬಾಣವನ್ನು ಇಳಿಸಿದೆ. ನನ್ನ ಜೊತೆಗಿದ್ದ ಆಪ್ತರಲ್ಲಿ ಇದರ ಬಗೆಗೆ ಚರ್ಚಿಸಿದೆ. ನಿರ್ಣಯವನ್ನು ಮಾಡಿದೆ. ಪ್ರಮೀಳೆಯನ್ನು ನನ್ನ ಬಳಿಗೆ ಕರೆಸಿಕೊಂಡೆ. ಒಪ್ಪಂದವೊAದಕ್ಕೆ ಒಳಪಡುವಂತೆ ಅವಳ ಕರಗಳನ್ನು ಹಿಡಿದುಕೊಂಡೆ. ಮನದಿಂಗಿತವನ್ನು ಹೇಳಿದೆ.“ಮರುಳುಗೊಳಿಸುವ ಮಾತು ನನ್ನದೆಂದು ಭಾವಿಸದಿರು. ಈಗ ನಾನು ನಿನ್ನನ್ನು ವರಿಸಲು ಸಾಧ್ಯವಿಲ್ಲ. ಯಾಗ ಮುಗಿಯುವವರೆಗೂ ಹೆಣ್ಣಿನ ಸಹವಾಸವನ್ನು ತೊರೆದಿರುವ ವ್ರತವನ್ನು ಪಾಲಿಸುತ್ತಿದ್ದಾನೆ ನನ್ನಣ್ಣ ಧರ್ಮಜ. ನಾನೂ ಅದೇ ವ್ರತದ ಆಚರಣೆಯಲ್ಲಿದ್ದೇನೆ. ಈಗ ನಾನು ನಿನ್ನೆಡೆಗೆ ಮನಸ್ಸು ಮಾಡಲು ಸಾಧ್ಯವಿಲ್ಲ. ಆದರೆ ಮುಂದೆ ಅಶ್ವಮೇಧ ಯಾಗ ನಡೆಯುವ ಕಾಲದಲ್ಲಿ ನಾನು ನಿನ್ನನ್ನು ಬಂದು ಸೇರುತ್ತೇನೆ. ನೀನು ಯಾಗಕ್ಕೆ ಬಂದು, ಅಲ್ಲಿ ಕೃಷ್ಣನನ್ನು ಕಂಡು, ನಿನ್ನ ದೇಹದ ವಿಷವನ್ನು ನೀಗಿಕೊಳ್ಳಬೇಕು. ಆ ಬಳಿಕ ನಾನು ನಿನ್ನ ಜೊತೆ ಸೇರಿ ಬಾಳುವುದಕ್ಕೆ ತೊಂದರೆಯಿಲ್ಲ” ಎಂದೆ, ಒಲವಿನಿಂದ.ನನ್ನ ಮಾತಿನಲ್ಲಿ ಕಪಟವಿಲ್ಲದ್ದನ್ನು ಅರ್ಥೈಸಿಕೊಂಡಳು ಪ್ರಮೀಳೆ. ನನ್ನ ಮಾತಿಗೆ ಒಪ್ಪಿಕೊಂಡಳು. ಕಟ್ಟಿಹಾಕಿದ್ದ ನಮ್ಮ ಕುದುರೆಯನ್ನು ತರಿಸಿಕೊಟ್ಟಳು. ಅವಳಿಗೆ ಆದರದ ವಿದಾಯ ಹೇಳಿ, ಸೇನೆಸಹಿತನಾಗಿ ಅಲ್ಲಿಂದ ಹೊರಟೆ. ಅವಳು ಸಂಪತ್ತನ್ನು ಜೊತೆಗಿರಿಸಿಕೊಂಡು, ವನಿತಾ ಸೈನ್ಯದ ಜೊತೆಗೆ ಹಸ್ತಿನಾವತಿಯನ್ನು ಸೇರಿಕೊಂಡಳು.ಮುಂದೆ ಹೋದಂತೆ ಹಲವು ದೇಶಗಳು ಕಂಡವು ನಮ್ಮ ಕಣ್ಣಿಗೆ. ಆನೆ, ಕುದುರೆ, ಗೋವು, ಮಹಿಷ ಮೊದಲಾದ ಪ್ರಾಣಿಸಮೂಹಗಳನ್ನು ಕಂಡೆವು. ಸೂರ್ಯ ಉದಯಿಸಿದೊಡನೆ ಜನಿಸಿ, ಮಧ್ಯಾಹ್ನದ ವೇಳೆಗೆ ಯೌವ್ವನಾವಸ್ಥೆಯನ್ನು ಪಡೆದು, ಸೂರ್ಯಾಸ್ತ ಸಮಯಕೆ ಮರಣವನ್ನಪ್ಪುವ ಅತಿಸೂಕ್ಷö್ಮ ಜೀವಿಗಳನ್ನು ನೋಡಿದೆವು, ಗಿಡಗಳ ಪೊದರುಗಳಲ್ಲಿ.ಕುದುರೆ ಮುಂದಕ್ಕೆ ಚಲಿಸಿತು. ವಿಚಿತ್ರವಾಗಿ ತೋರುತ್ತಿದ್ದ ಮನುಷ್ಯರನ್ನು ಕಂಡು ಅಚ್ಚರಿಗೊಳ್ಳುವಂತಾಯಿತು. ಚರ್ಮವನ್ನೇ ಉಡುಗೆಯಾಗಿ ಹೊಂದಿದ್ದರು ಅವರು. ಶರೀರವೆಲ್ಲಾ ವಕ್ರವಕ್ರವಾಗಿತ್ತು. ಅವರಿಗಿದ್ದದ್ದು ಒಂದೇ ಕೈ; ಒಂದೇ ಕಾಲು; ಒಂದೇ ಕಣ್ಣು. ಅವರಲ್ಲಿ ಕೆಲವರಿಗೆ ಮೂರು ಮೂರು ಕಣ್ಣುಗಳು. ಕುಬ್ಜರಾಗಿದ್ದರು. ಮೂರಡಿಯನ್ನು ಮೀರಿದ ಶರೀರವಲ್ಲ ಅವರದ್ದು. ತೀರಾ ಉದ್ದವಾದ ಮೂಗು. ನೆತ್ತಿಯ ಮೇಲೆ ಎರಡು ಕೋಡುಗಳಿದ್ದವು. ಕೆಲವರ ಮುಖ ಕತ್ತೆಯನ್ನು ಹೋಲುವಂತಿತ್ತು. ಇನ್ನೂ ಕೆಲವರು ಕುದುರೆಮುಖಿಗಳು.ವಿಚಿತ್ರವಾದ ದೇಶವಿದು ಎನಿಸಿತು ನನಗೆ. ಅಸಹ್ಯ ಭಾವ ಮೂಡಿತು. ಮರುಕ್ಷಣವೇ ಬಾಹ್ಯ ರೂಪ ಹೀಗಾದದ್ದರಲ್ಲಿ ಇವರ ತಪ್ಪೇನಿದೆ ಎನಿಸಿತು. ಎದುರಾದವರ ಚೆಲುವನ್ನು ಕಂಡು ಅವರನ್ನು ಆದರಿಸುವ, ಕುರೂಪವನ್ನು ಮೂದಲಿಸುವ ಲೋಕರೂಢಿಯ ಕ್ರಮವೊಂದಿದೆ. ಆದರೆ ಮನುಷ್ಯರೆನಿಸಿಕೊಂಡವರು ಒಳ್ಳೆಯ ಮನಸ್ಸನ್ನು ಹೊಂದಲು, ಒಳ್ಳೆಯ ಸ್ವಭಾವವನ್ನು ರೂಢಿಸಿಕೊಳ್ಳಲು ಮಾತ್ರ ಶಕ್ತರು. ಒಳ್ಳೆಯ ರೂಪವದು ಪ್ರಕೃತಿ ನಿರ್ಧರಿತವಾದದ್ದು. ಚೆಲುವೆನ್ನುವುದು ಶಾಶ್ವತವಲ್ಲ. ಹಾಗಿರುವಾಗ ಅದನ್ನು ಮುಂದಿಟ್ಟುಕೊAಡು ಸಹ್ಯ ಭಾವ ತಾಳುವುದಾಗಲೀ, ಅಸಹ್ಯವನ್ನು ಹೊಂದುವುದಾಗಲೀ ತಕ್ಕುದಲ್ಲ ಎನಿಸಿತು.ಹಾಗೆಯೇ ಮುಂದೆ ಹೋದೆವು. ಈಗ ನಮ್ಮ ಕುದುರೆ ಕಾಲಿಟ್ಟದ್ದು ಭೀಷಣ ಎನ್ನುವ ರಾಕ್ಷಸನ ಪಟ್ಟಣಕ್ಕೆ. ಮೂರು ಕೋಟಿ ಅಸುರರಿದ್ದರು ಅಲ್ಲಿ. ಅತಿಭಯಂಕರ ರೂಪ ಅವರದ್ದು. ಕ್ಷಣಕ್ಷಣವೂ ಆರ್ಭಟ. ಸಲ್ಲದ ಕೃತ್ಯಗಳೇ ಅಲ್ಲಿ ಎಲ್ಲ. ನೀಳವಾದ ದೈತ್ಯ ದೇಹವಿತ್ತು. ಶೀಘ್ರವೇ ಕೋಪಗೊಳ್ಳುತ್ತಿದ್ದರು. ಗಂಡೆದೆಯವರನ್ನೂ ಅಳುಕಿಸುವ ಘೋರ ಮುಖ ಅವರಿಗಿತ್ತು. ಮಾಯಾವಿಗಳಾಗಿದ್ದರು. ದಯೆಗೆ ಅವರೆದೆಯಲ್ಲಿ ಕಿಂಚಿತ್ ಸ್ಥಾನವೂ ಇರಲಿಲ್ಲ. ಸಂಹಾರದಲ್ಲಿಯೇ ಸಂತಸ ಕಾಣುವವರು. ಸಮರಕ್ಕೆ ಇಳಿದರೆ ಸಮಯ ಸಂದರ್ಭ ನೋಡದೆ ಹೋರಾಡುವವರು.ಹೀಗಿದ್ದ ಅಸುರರ ಪುರವನ್ನು ಆಳುತ್ತಿದ್ದ ಭೀಷಣನಿಗೆ ನಮ್ಮ ಪ್ರವೇಶದ ಸುದ್ದಿಯನ್ನು ಮುಟ್ಟಿಸಿದ್ದು ರಾಕ್ಷಸ ಪುರೋಹಿತನೆನಿಸಿದ್ದ ಮೇದೋಹೋತ. ಅವನು ಆಹಾರ ಹುಡುಕಿಕೊಂಡು ಕಾಡಿಗೆ ಬಂದಿದ್ದ. ಆ ಸಮಯದಲ್ಲಿ ನಾನು ನನ್ನ ಸೇನೆಸಹಿತ ಅದೇ ಅರಣ್ಯದಲ್ಲಿದ್ದೆ. ಅವನು ನನ್ನನ್ನು ಕಂಡ. ಕುದುರೆಯನ್ನು ನೋಡಿದ. ಸೈನಿಕರೆಡೆಗೆ ದೃಷ್ಟಿ ಹರಿಸಿದ. ಯಜ್ಞದ ಕುದುರೆಯಿದು ಅರ್ಜುನನ ರಕ್ಷೆಯಲಿ ಸೇನೆಸಹಿತವಾಗಿ ಬಂದಿದೆ ಇಲ್ಲಿಗೆ ಎನ್ನುವುದನ್ನು ಊಹಿಸಿದ. ಅವನು ನನ್ನನ್ನು ನೋಡಿದ್ದು ನನ್ನ ಅರಿವಿಗೆ ನಿಲುಕಿರಲಿಲ್ಲ ಆ ಕ್ಷಣಕ್ಕೆ.ಅವನು ತಕ್ಷಣವೇ ಹೋದದ್ದು ಭೀಷಣನ ಬಳಿಗೆ. ವಿಚಾರವನ್ನು ಅರುಹಿದ. “ಅರ್ಜುನ ಇಲ್ಲಿಗೆ ಬಂದಿದ್ದಾನೆ, ಯಾಗದ ಕುದುರೆಯನ್ನು ಜೊತೆಮಾಡಿಕೊಂಡು. ಅವನನ್ನು ಹಿಡಿದು ತಂದು ನರಮೇಧ ಯಾಗವನ್ನು ನಡೆಸು. ಅವನನ್ನು ಬಲಿಗೊಡು” ಎಂಬ ಸಲಹೆಯಿತ್ತ ಮೇದೋಹೋತ.ಭೀಷಣ ನಡೆಸುವ ನರಮೇಧ ಯಾಗಕ್ಕೆ ಪುರೋಹಿತ ತಾನಾಗಿ ಸಕಲ ಗೌರವವನ್ನೂ, ಸಮಸ್ತ ಸಂಪದವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಆಕಾಂಕ್ಷೆಯಿತ್ತು ಆ ಅಸುರ ಪುರೋಹಿತನಲ್ಲಿ.ಭೀಷಣ ಅವನ ಮಾತಿಗೆ ಒಪ್ಪಿಕೊಂಡ. “ನರಮೇಧ ಯಾಗಕ್ಕಾಗಿ ಈಗಲೇ ಮಂಟಪವನ್ನು ನಿರ್ಮಿಸು. ನಾನೀಗಲೇ ಹೋಗಿ ಆ ಅರ್ಜುನನನ್ನು ಎಳೆದುಕೊಂಡು ಬರುತ್ತೇನೆ” ಎಂದು ಬೊಬ್ಬೆ ಹೊಡೆದ, ಮೇದೋಹೋತನಲ್ಲಿ.ಹೀಗೆ ಭೀಷಣ ಮೇದೋಹೋತನ ಮಾತಿಗೆ ತಕ್ಷಣವೇ ಒಪ್ಪಿಕೊಳ್ಳುವುದರ ಹಿಂದೆ ಬಲವಾದ ಕಾರಣವಿತ್ತು. ಅವನು ಬಕಾಸುರನ ಮಗನಾಗಿದ್ದ. ಹಿಂದೆ ಭೀಮನಿಂದ ಮಡಿದಿದ್ದ ತಂದೆಯ ಸಾವಿನ ಸೇಡನ್ನು ಭೀಷಣ ತೀರಿಸಿಕೊಳ್ಳಬಯಸಿದ್ದು ಭೀಮ ಸೋದರನಾದ ನನ್ನನ್ನು ಕೊಲ್ಲುವುದರ ಮೂಲಕ. ಮುಕ್ಕೋಟಿ ರಾಕ್ಷಸರು ಸೇರಿಕೊಂಡರು ಅವನ ಜೊತೆಗೆ… ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಧಾರಾವಾಹಿ-122 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಅಮ್ಮನ ಅನಾರೋಗ್ಯದ ಬಗ್ಗೆ ದೊಡ್ಡಕ್ಕನಿಗೆ ತಿಳಿಸುವ ಸಮಯ ವಿಷಯ ತಿಳಿದ ನಂತರ ಖಂಡಿತ ತಂಗಿ ಹೀಗೆಲ್ಲಾ ಪ್ರತಿಕ್ರಿಯಿಸಿವಳು ಎಂಬುದು ಮೊದಲೇ ತಿಳಿದಿದ್ದ ಅಕ್ಕನಿಗೆ ದುಃಖ ಉತ್ತರಿಸಿ ಬಂದರೂ, ತಾನು ಕೂಡಾ ಅಳುತ್ತಾ ಕುಳಿತರೆ, ತಂಗಿಯನ್ನು ಸಮಾಧಾನ ಪಡಿಸುವವರು ಯಾರು? ಎಂದು ಯೋಚಿಸುತ್ತಾ, ತಂಗಿಯ ತಲೆಯನ್ನು ನಿಧಾನವಾಗಿ ಸಾಂತ್ವನ ಪಡಿಸುವಂತೆ ನೇವರಿಸಿದಳು. ಅವಳು ಅತ್ತು ಸಮಾಧಾನವಾಗುವರೆಗೂ ಹಾಗೆ ನೇವರಿಸುತ್ತಾ ಏನೂ ಮಾತನಾಡದೇ ಕುಳಿತಿದ್ದಳು. ಅವಳು ಸ್ವಲ್ಪ ಸಮಾಧಾನಗೊಂಡಳು ಎಂದು ಅರಿತ ಮೇಲೆ…. “ನಿನ್ನ ನೋವು, ಸಂಕಟ ಏನೆಂದು ನನಗೆ ಅರ್ಥವಾಗುತ್ತದೆ…. ದಯವಿಟ್ಟು ನಿನ್ನನ್ನು ನೀನು ಸಮಾಧಾನಪಡಿಸಿಕೋ…. ನಾವಿಬ್ಬರೂ ಈಗ ಮಾನಸಿಕವಾಗಿ ಗಟ್ಟಿಯಾಗಬೇಕಿದೆ…. ನಮ್ಮ ಈ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಜೊತೆ ಬೇರೆ ಯಾರೂ ಇಲ್ಲ…. ಅಕ್ಕನಿಗೆ ಅವಳದಾದ ಕುಟುಂಬವಿದೆ…. ಎಲ್ಲಾ ಜವಾಬ್ದಾರಿಯನ್ನು ಅಕ್ಕನಿಗೆ ಹೊರಿಸಲು ಸಾಧ್ಯವಿಲ್ಲ…. ನಮ್ಮಿಬ್ಬರ ಕೈಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಪ್ರಯತ್ನ ಮಾಡೋಣ…. ವೈದ್ಯರು ಹೇಳಿದ್ದರು ಡಯಾಲಿಸಿಸ್ ಚಿಕಿತ್ಸೆ ಕೊಡಿಸಿದರೆ, ಅಮ್ಮ ಇನ್ನೂ ಸ್ವಲ್ಪ ದಿನ ಅಮ್ಮ ಜೀವಂತವಾಗಿರಬಹುದು…. ಅಮ್ಮನ ಎಲ್ಲಾ ನೋವು ಸಂಕಟಗಳು ಸ್ವಲ್ಪ ದಿನದ ಮಟ್ಟಿಗಾದರೂ ಸುಧಾರಿಸಬಹುದು….. ನೋಡೋಣ…ಹೇಗೆ ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳುತ್ತೇನೆ….. ಎಂದಳು. ಅಕ್ಕನ ಮಾತನ್ನು ಕೇಳಿದಾಗ ತಂಗಿಯ ಮುಖವರಳಿತು. ….”ಹಾಗೆಯೇ ಮಾಡುವ ಅಕ್ಕಾ….. ನಮ್ಮಿಂದ ಆಗಿದ್ದನ್ನು ನಾವು ಮಾಡೋಣ…. ನಮಗೆ ಆಶ್ರಯ ಕೊಟ್ಟಿರುವ ಎಸ್ಟೇಟ್ ನವರು ಮೊದಲಿಂದಲೂ ಅಮ್ಮನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ…. ಅವರು ಖಂಡಿತಾ ನಮಗೆ ಸಹಾಯ ಮಾಡುತ್ತಾರೆ… ಹಾಗಾಗಿ ನಾವು ಮಾಡಬೇಕಾಗಿದ್ದು ಏನು ಎಂಬುದನ್ನು ಕೇಳಿ ತಿಳಿದುಕೋ…. ಎಂದಳು. ಸರಿ ಎನ್ನುವಂತೆ ಅಕ್ಕ ತಯಾರಿಸಿದಳು…. “ಈಗ ಡಾಕ್ಟರ್ ರೌಂಡ್ಸ್ ಮುಗಿಸಿರುತ್ತಾರೆ…. ನಡಿ ವಾರ್ಡಿಗೆ ಹೋಗೋಣ…. ಮೊದಲು ನಿನ್ನ ಕಣ್ಣುಗಳನ್ನು ಒರೆಸಿಕೊ…. ನಮಗೆ ತಿಳಿದಿರುವ ವಿಷಯ ಅಮ್ಮನಿಗೆ ಗೊತ್ತಾಗುವುದು ಬೇಡ….. ಅಮ್ಮ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಾಳೆ… ಆದಷ್ಟೂ ಅಮ್ಮನ ಮುಂದೆ ನಾವು ಖುಷಿಯಿಂದ ಇರುವಂತೆ ನಟಿಸೋಣ…. ಇದಲ್ಲದೇ ನಮಗೆ ಬೇರೆ ದಾರಿ ಇಲ್ಲ….. ಅಮ್ಮನಿಗೆ ಈ ವಿಷಯಗಳು ತಿಳಿದರೆ, ಖಂಡಿತಾ ಪೂರ್ತಿ ಕುಸಿದು ಹೋಗುತ್ತಾಳೆ…. ನಾವೆಲ್ಲರೂ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ಕೆಲಸಕ್ಕೆ ಸೇರಿ ನಂತರ ನಾವು ಮದುವೆಯಾಗುವುದನ್ನು ನೋಡಬೇಕು…. ಖುಷಿಯಿಂದ ಮೊಮ್ಮಕ್ಕಳನ್ನು ಮುದ್ದಾಡಬೇಕು…. ಅವರೊಂದಿಗೆ ಕಾಲ ಕಳೆಬೇಕು….ಎನ್ನುವ ತನ್ನಾಸೆಯ ಮಾತುಗಳನ್ನು ಆಗಾಗ ಹೇಳುತ್ತಲೇ ಇರುತ್ತಾಳೆ…. ಅಮ್ಮನಿಗೆ ಏನೂ ಆಗಿಲ್ಲ… ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ಆಶಯವನ್ನು ಅಮ್ಮನ ಮನಸ್ಸಿನಲ್ಲಿ ತುಂಬೋಣ…. ಯಾವುದೇ ಕಾರಣಕ್ಕೂ ತನ್ನ ಆರೋಗ್ಯ ಸ್ಥಿತಿ ಈ ರೀತಿ ಇದೆ ಎಂದು ತಿಳಿಯುವುದು ಬೇಡ….. ಎಂದು ಅಕ್ಕ ಹೇಳಿದಾಗ ‘ಸರಿ’ ಎನ್ನುವಂತೆ ತಲೆಯಾಡಿಸುತ್ತಾ ದುಪ್ಪಟ್ಟಾದಿಂದ ಕಣ್ಣುಗಳನ್ನು ಮತ್ತು ಮುಖವನ್ನು ಒರೆಸಿ, ಆದಷ್ಟೂ ತಾನು ನಗುನಗುತ್ತಿರುವಂತೆ ಇರುವ ಪ್ರಯತ್ನ ಮಾಡಿದಳು. ತಂಗಿಯನ್ನು ನೋಡಿ ಮುಗುಳ್ನಕ್ಕು ಅವಳ ಹೆಗಲ ಮೇಲೆ ಕೈ ಹಾಕುತ್ತಾ…._ ಬಾ ನಡಿ ಹೋಗೋಣ”…. ಎಂದಳು ಈಗ ನಾನು ಅತ್ತಿರೋದು ಕಾಣೋದಿಲ್ಲವಲ್ಲವೇ? ಎಂಬಂತೆ ಪ್ರಶ್ನಾರ್ಥಕವಾಗಿ ಅಕ್ಕನನ್ನು ನೋಡಿದಳು ತಂಗಿ. ‘ಇಲ್ಲ’ ಎನ್ನುವಂತೆ ತಲೆ ಆಡಿಸಿದಳು, ಇಬ್ಬರೂ ವಾರ್ಡಿಗೆ ತೆರಳಿದಾಗ, ನರ್ಸ್ ತಾಯಿಗೆ ಚುಚ್ಚುಮದ್ದನ್ನು ಚುಚ್ಚುತ್ತಿರುವುದು ಕಂಡಿತು. ಅಮ್ಮ ನೋವಿನಿಂದ ಮುಖ ಹಿಂಡಿದ್ದು ಕಂಡಾಗ, ಇಬ್ಬರ ಎದೆಯಲ್ಲೂ ಏನೋ ಹರಿತವಾದದ್ದು ಚುಚ್ಚಿದ ಅನುಭವವಾಯಿತು. ಆದರೂ ತೋರಗೊಡದೆ…. “ಅಮ್ಮಾ ….ಡಾಕ್ಟರ್ ಏನು ಹೇಳಿದರು?… ಎಂದು ಇಬ್ಬರೂ ಕೇಳಿದಾಗ…. “ಏನೂ ತೊಂದರೆ ಇಲ್ಲ….ಇನ್ನೂ ಕೆಲವು ದಿನಗಳು ನಾನು ಇಲ್ಲಿಯೇ ಇರಬೇಕೆಂದು ಹೇಳಿದ್ದಾರೆ”… ಎಂದು ಹೇಳುತ್ತಾ ಸುಮತಿ ಇಬ್ಬರೂ ಮಕ್ಕಳ ಮುಖವನ್ನು ನೋಡಿದಳು. ಮಕ್ಕಳಿಬ್ಬರ ಕಣ್ಣುಗಳು ಅತ್ತು ಊದಿಕೊಂಡಿರುವಂತೆ ಅವಳಿಗೆ ಅನಿಸಿತು….. “ಏನಾಯ್ತು ಮಕ್ಕಳೇ?…. ನಿಮ್ಮಿಬ್ಬರ ಕಣ್ಣುಗಳು ಏಕೆ ಊದಿಕೊಂಡಿವೆ?…. ಎಂದು ಕೇಳಿದಾಗ,….”ಇಲ್ಲಮ್ಮಾ…. ಹಾಗೇನೂ ಇಲ್ಲ…. ನಿನಗೆ ಹಾಗೆ ಅನಿಸಿದೆಯಷ್ಟೇ”….. ಎಂದು ತಂಗಿ ಹೇಳಿದಾಗ, …. “ನೀನು ಯಾವಾಗ ಸುಳ್ಳು ಹೇಳುವುದನ್ನು ಕಲಿತುಕೊಂಡೆ?…. ನಿಜ ಹೇಳಿ….ಅದೇನಿದ್ದರೂ ನನಗೆ ತಿಳಿಸಿ” …. ಎಂದಳು ತುಸುಕೋಪದಿಂದ. …”ಏನಿಲ್ಲಮ್ಮಾ…. ಅವಳು ಸುಳ್ಳು ಹೇಳಿಲ್ಲ…. ನಮಗೇನೂ ಆಗಿಲ್ಲ…. ನಿನಗೆ ಹಾಗೆ ಅನಿಸುತ್ತಿದೆ ಅಷ್ಟೇ….. ನಾವು ಹೊರಗೆ ಕುಳಿತಿದ್ದಾಗ ಗಾಳಿಯಲ್ಲಿ ಏನೋ ಕಸ ಬಂದು ತಂಗಿಯ ಕಣ್ಣಿಗೆ ಬಿತ್ತು…. ಅವಳು ಹಣ್ಣುಗಳನ್ನು ಉಜ್ಜಿಕೊಂಡಳು…. ಹಾಗಾಗಿ ಅವಳ ಕಣ್ಣುಗಳು ಹಾಗಿವೆ”…. ಎಂದಳು….. “ಹಾಗಾದರೆ ನಿನ್ನ ಕಣ್ಣು?”…. ತುಸು ಏರು ಧ್ವನಿಯಲ್ಲಿ ಸುಮತಿ ಪ್ರಶ್ನಿಸಿದಾಗ…. “ನಾನು ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲಮ್ಮಾ…. ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ರಾತ್ರಿ ಹೆಚ್ಚು ಸಮಯ ಓದುತ್ತಾ ಕುಳಿತಿದ್ದೆ… ಹಾಗಾಗಿ ನನ್ನ ಕಣ್ಣುಗಳು ಊದಿಕೊಂಡಿವೆ…. ಸುಮ್ಮನೆ ಏನೇನೋ ಆಲೋಚಿಸಿ ತಲೆಕೆಡಿಸಿಕೊಳ್ಳಬೇಡ”… ಎಂದಳು ತಂಗಿಯನ್ನು ನೋಡುತ್ತಾ. ತಂಗಿ ‘ಹೌದು’ ಎನ್ನುವಂತೆ ತಲೆ ಆಡಿಸಿದಳು. ಇಬ್ಬರೂ ಮಕ್ಕಳು ಕೊಟ್ಟ ಉತ್ತರ ಯಾಕೋ ಸರಿ ಇಲ್ಲ ಎಂದು ಸುಮತಿಗೆ ಅನಿಸಿತು. ಆದರೆ ಇನ್ನೂ ವಾದ ಮಾಡುವುದು ಬೇಡ ಎಂದು ಸುಮ್ಮನಾದಳು. ತಂಗಿ ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಾಯಿ ಮತ್ತು ಅಕ್ಕನ ಜೊತೆ ಕಾಲ ಕಳೆದಳು. ಇದರ ನಡುವೆ…. “ಅಕ್ಕಾ ….ದೊಡ್ಡಕ್ಕನಿಗೆ ಅಮ್ಮನ ಅನಾರೋಗ್ಯದ ವಿಷಯ ತಿಳಿಸಿದ್ದೀಯಾ? ಎಂದು ಕೇಳಿದಳು….. “ಇಲ್ಲ ಕಣೇ…. ಹೇಳಬೇಕು…. ಒಂದು ಕೆಲಸ ಮಾಡುತ್ತೀಯಾ? ನಾವು ಇಲ್ಲಿ ಯಾವುದಾದರೂ ಹೋಟೆಲ್ನಲ್ಲಿ ಊಟ ಮಾಡಿಕೊಳ್ಳೋಣ…. ಅಮ್ಮನಿಗೆ ಆಸ್ಪತ್ರೆಯಿಂದ ಊಟ ಸಿಗುತ್ತದೆ…. ಅಮ್ಮನಿಗೆ ಊಟ ಕೊಟ್ಟು, ನಂತರ ಹೊರಗೆ ಹೋಗಿ ನಾವು ಊಟ ಮಾಡೋಣ…. ನಂತರ ನೀನು ಅಕ್ಕನ ಮನೆಗೆ ಹೋಗಿ, ಅಮ್ಮ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎಂಬುದನ್ನು ತಿಳಿಸು… ಎಂದಳು. ತಂಗಿ ಸರಿ ಎನ್ನುವಂತೆ ತಲೆಯಾಡಿಸಿದಳು.
“ಅತಿ ಅವಸರ ಸಲ್ಲದು” ವೀಣಾ ಹೇಮಂತ್ ಗೌಡಪಾಟೀಲ
ಜೀವನ ಸಂಗಾತಿ ವೀಣಾ ಹೇಮಂತ್ ಗೌಡಪಾಟೀಲ “ಅತಿ ಅವಸರ ಸಲ್ಲದು” ಪುಟ್ಟ ಬಾಲಕ ಶಾಮ ಯಾವತ್ತೂ ಅವಸರದಲ್ಲಿಯೇ ಇರುತ್ತಿದ್ದ ಆತನಿಗೆ ಪ್ರತಿಯೊಂದು ವಿಷಯವು ತರಾತುರಿಯಲ್ಲಿ ಆಗಿಬಿಡಬೇಕು. ಅತ್ಯಂತ ವೇಗವಾದ ಇಂಟರ್ನೆಟ್ ಸೇವೆಯನ್ನು ಬಯಸುತ್ತಿದ್ದ ಆತ ಹೊಸ ಹೊಸ ಆಟದ ಸಾಮಾನುಗಳಿಗಾಗಿ ಆಶಿಸುತ್ತಿದ್ದ… ಆತನ ಅವಸರವನ್ನು ನೋಡಿದರೆ ಎಲ್ ಕೆ ಜಿ ಇರುವಾಗಲೇ ಒಂದನೇ ತರಗತಿಗೆ, 5ನೇ ತರಗತಿ ಇರಬೇಕಾದ ವ್ಯಕ್ತಿ ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಏರಬೇಕು ಎಂದು ತಮಾಷೆ ಮಾಡುವಷ್ಟು ಇರುತ್ತಿತ್ತು.ಯಾವುದೇ ವಿಷಯಕ್ಕೂ ವ್ಯವಧಾನ ಎಂಬ ಪದದ ಅರಿವೇ ಇರಲಿಲ್ಲ ಬಹುಶಹ ಆತನ ನಿಘಂಟಿನಲ್ಲಿ ತಾಳ್ಮೆ ಎಂಬ ಪದಕ್ಕೆ ಅರ್ಥವೇ ಇರಲಿಲ್ಲ ಅದೊಂದು ದಿನ ಸಾಯಂಕಾಲ ಆತ ತನ್ನ ಅಜ್ಜ ಮನೆಯ ವರಾಂಡದಲ್ಲಿ ಒಂದು ಹಳೆಯದಾದ ಆದರೆ ಅತ್ಯಂತ ಕಲಾತ್ಮಕವಾದ ಕೆತ್ತನೆಯನ್ನು ಹೊಂದಿದ ಸುಂದರವಾದಪುಟ್ಟ ಪೆಟ್ಟಿಗೆಯನ್ನು ಮುಂದಿಟ್ಟುಕೊಂಡು ಕುಳಿತಿರುವುದನ್ನು ನೋಡಿದ. ಅದೊಂದು ಸಂಪೂರ್ಣ ಖಾಲಿಯಾದ ಪೆಟ್ಟಿಗೆಯಾಗಿತ್ತು. ಅಜ್ಜ ಆ ರೀತಿ ಪೆಟ್ಟಿಗೆಯ ಮುಂದೆ ಸುಮ್ಮನೆ ಕುಳಿತಿರುವುದನ್ನು ನೋಡಿ ಆತನಿಗೆ ಸೋಜಿಗವಾಯಿತು.ಅಂತೆಯೇ ತನ್ನ ಅಜ್ಜನನ್ನು ಕುರಿತು ಅಜ್ಜ… ಅದೇಕೆ ಹಾಗೆ ಖಾಲಿ ಪೆಟ್ಟಿಗೆಯ ಮುಂದೆ ಕುಳಿತು ಅದನ್ನು ನೋಡುತ್ತಿರುವಿರಿ… ಎಷ್ಟೊಂದು ಸಮಯ ಹಾಳಾಯಿತು ಅಲ್ಲವೇ? ಎಂದು ಕೇಳಿದ.ಮೊಮ್ಮಗನ ಮಾತನ್ನು ಕೇಳಿದ ಅಜ್ಜ ನಸುನಗುತ್ತ ನುಡಿದ ಇದೊಂದು ಹಳೆಯ ಖಾಲಿ ಪೆಟ್ಟಿಗೆ ಎಂದು ನೀನು ಭಾವಿಸಿರುವೆ ಅಲ್ಲವೇ ?…. ಖಂಡಿತವಾಗಿಯೂ ಇದು ಖಾಲಿ ಪೆಟ್ಟಿಗೆಯಲ್ಲ ಇದರಲ್ಲಿ ನಾನು ನನ್ನ ಚಿನ್ನದ ಟಿಕೆಟ್ಗಳನ್ನು ಇಡುತ್ತೇನೆ ಎಂದು ಹೇಳಿದ. ಪೆಟ್ಟಿಗೆಯ ಒಳಭಾಗವನ್ನು ನಿರುಕಸಿ ನೋಡಿದ ಶಾಮ ‘ಆದರೆ ಅಜ್ಜ ಇದರಲ್ಲಿ ಏನೂ ಇಲ್ಲ’ ಎಂದು ಲಗು ಬಗೆಯಿಂದ ಹೇಳಿದ.‘ನಿನಗೆ ಪೆಟ್ಟಿಗೆ ಖಾಲಿಯಾಗಿ ಕಾಣುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ, ಕಾರಣ ನೀನು ನಿನ್ನ ಕಣ್ಣಿನಿಂದ ಪೆಟ್ಟಿಗೆಯನ್ನು ನೋಡುತ್ತಿರುವೆಯೇ ಹೊರತು ಮನಸ್ಸು ಹಾಗೂ ಹೃದಯದಿಂದ ಅಲ್ಲ ‘ ಎಂದು ಅಜ್ಜ ಒತ್ತಿ ಹೇಳಿದ.ಮತ್ತೆ ಮೊಮ್ಮಗನನ್ನು ‘ಇಲ್ಲಿ ಕುಳಿತುಕೋ ನಾನು ನಿಮಗೆ ನನ್ನ ಕೊನೆಯ ಟಿಕೆಟ್ ಅನ್ನು ನೀಡುತ್ತೇನೆ’ ಎಂದು ಅಜ್ಜ ಹೇಳಿದ ಆಶ್ಚರ್ಯವಾದರೂ ಮರು ಮಾತನಾಡದೆ ಅಜ್ಜ ತೋರಿದ ಸ್ಥಳದಲ್ಲಿ ಶ್ಯಾಮ ಕುಳಿತುಕೊಂಡ. ಮುಂದಿನ ಐದು ನಿಮಿಷಗಳ ಕಾಲ ಅಜ್ಜ ಏನನ್ನೂ ಹೇಳಲಿಲ್ಲ ಹಾಗೂ ಮೊಮ್ಮಗ ಏನನ್ನು ಕೇಳಲಿಲ್ಲ. ಐದು ನಿಮಿಷ ಒಂದು ಯುಗದಂತೆ ಭಾಸವಾಯಿತು ಶಾಮನಿಗೆ… ಆದರೆ ಆ ಸಮಯದಲ್ಲಿ ಆತ ಅನಿವಾರ್ಯವಾಗಿ ಅಜ್ಜನ ಜೊತೆ ಕುಳಿತು ಹಕ್ಕಿಗಳ ಚಿಲಿಪಿಲಿ ನಾದವನ್ನು ಕೇಳಿಸಿಕೊಂಡ. ಎಲ್ಲಿಂದಲೂ ಬೀಸಿದ ತಂಗಾಳಿಗೆ ಆತನ ಮೈಯನ್ನು ಸೋಕಿ ಮೈಮನಗಳಿಗೆ ಅತ್ಯದ್ಭುತವಾದ ಸಮಾಧಾನವನ್ನು ನೀಡಿತು. ದೂರದಿಂದ ಹಾರಿ ಬಂದ ಚಿಟ್ಟೆಯೊಂದು ಹೂವಿನ ಮಕರಂದವನ್ನು ಹೀರುವುದನ್ನು ಆತ ಗಮನಿಸಿದ. ಮೊದಲು ಮೊದಲು ಆ ರೀತಿ ಸುಮ್ಮನೆ ಕುಳಿತುಕೊಳ್ಳುವುದು ಶಾಮನಿಗೆ ಹಿಂಸೆಯೆನಿಸಿತು. ತನ್ನ ಜೇಬಲ್ಲಿರುವ ಮೊಬೈಲ್ ಫೋನನ್ನು ತೆಗೆದು ನೋಡಲೇ ಎಂದು ಒಂದು ಬಾರಿ ಯೋಚಿಸಿದ ಕೂಡ… ಆದರೆ ಅಜ್ಜನ ಮುಂದೆ ಹಾಗೆ ಮಾಡಲಾರದೆ ಸುಮ್ಮನೆ ಚಡಪಡಿಸುತ್ತಾ ಕುಳಿತುಕೊಂಡ. ಅನಿವಾರ್ಯವಾಗಿಯಾದರೂ ಒಂದೆರಡು ನಿಮಿಷಗಳ ನಂತರ ಆತನ ಮನಸ್ಸು ತನ್ನಂತಾನೆ ತಹಬಂದಿಗೆ ಬಂತು. ಆತನ ಮನಸ್ಸನ್ನು ಒಂದು ಬಗೆಯ ನಿರಾಳತೆ ಆವರಿಸಿತು.ತಲೆಯೆತ್ತಿ ನೋಡಿದಾಗ ನೀಲಿ ಆಕಾಶ ಆತನ ಗಮನ ಸೆಳೆಯಿತು.ತನ್ನ ಗಮನ ಸೆಳೆದ ಆಕಾಶದತ್ತ ಕೈ ಮಾಡಿದ ಶಾಮ ಅಚ್ಚನಿಗೆ ಅದೇನು? ಎಂದು ಕೇಳಿದ….. ಅದು ಕೂಡ ಚಿನ್ನದ ಟಿಕೆಟ್ ಎಂದು ಅಜ್ಜ ಹೇಳಿದ. ಈಗ ಅವಾಕ್ಕಾಗುವ ಸರದಿ ಶಾಮನದಾಗಿತ್ತುನಿಜ ಶಾಮ…. ಕೆಲ ನಿಮಿಷಗಳ, ಕ್ಷಣಗಳ ಮಟ್ಟಿಗಾದರೂ ನೀನು ನೀನಾಗಿಯೇ ಇರುವ ಗಳಿಗೆ… ಅದು ನಿನ್ನ ಬದುಕಿನ ಅತ್ಯಮೂಲ್ಯವಾದ ಟಿಕೆಟ್ ಇದ್ದಂತೆ. ಬಹಳಷ್ಟು ಜನ ಸದಾ ಓಡುತ್ತಲೇ ಇರುತ್ತಾರೆ. ಓದುವುದು, ಓದು ಮುಗಿದ ಕೂಡಲೇ ನೌಕರಿ, ನೌಕರಿ ಮುಗಿದ ಕೂಡಲೇ ಮನೆ, ಮನೆಯಿಂದ ಆಫೀಸ್ ಮತ್ತೆ ವೀಕೆಂಡ್ಗಳು, ಪ್ರಮೋಷನ್ಗಳು ಮದುವೆ ಮಕ್ಕಳು ಯಶಸ್ಸು ಹೀಗೆ ಒಂದರ ಹಿಂದೆ ಒಂದರಂತೆ ಸದಾ ಓಡುತ್ತದೆ. ಈ ಓಡುವಿಕೆಯಲ್ಲಿ ಅವರು ತಮ್ಮನ್ನು ತಾವು ಕಳೆದುಕೊಳ್ಳುತ್ತಾರೆ. ಅವರ ಗಮ್ಯ ಅವರ ಕೈಗೆ ಸಿಗುವ ಮುನ್ನವೇ ಅವರು ಮತ್ತೊಂದು ಗಮ್ಯವನ್ನು ಅರಸಿ ಮುಂದೆ ಸಾಗುತ್ತಾರೆ… ಮುಂದೆ ಅವರ ಓಟಕ್ಕೆ ಯಾವುದೇ ಅರ್ಥ ಉಳಿಯುವುದಿಲ್ಲ.ಆದರೆ ಅಜ್ಜ… ಯಶಸ್ಸಿನ ಹಿಂದೆ ಓಡುವುದು ತಪ್ಪೇ ? ಸಂತೋಷವಾಗಿರಲು ಯಾವುದೇ ಯಶಸ್ಸಿನ ಅವಶ್ಯಕತೆ ಇಲ್ಲವೇ ? ಎಂದು ಶ್ಯಾಮ ಕೇಳಿದ ಸಣ್ಣಗೆ ನಸು ನಕ್ಕು ತಲೆಯಾಡಿಸಿದ ಅಜ್ಜ ಹೀಗೆ ಹೇಳಿದ… ಸಂತೋಷವಾಗಿರಲು ಯಶಸ್ಸು ಬೇಕಾಗಿಲ್ಲ. ಅಷ್ಟಕ್ಕೂ ಯಶಸ್ಸು ಎಂಬುದು ಕೇವಲ ನೆರಳಿನಂತೆ. ಅದನ್ನು ನೀನೆಂದಿಗೂ ಹಿಡಿಯಲು ಆಗದು.ಈಗ ನನ್ನನ್ನೇ ನೋಡು. ಇದೀಗ ನನಗೆ ನಾನು ಓವರ್ ಟೈಮ್ ಮಾಡಿದ ದಿನಗಳು ನೆನಪಾಗುವುದಿಲ್ಲ. ಯಾವಾಗ ಕಾರು ಖರೀದಿಸಿದೆ ಎಂಬುದು ಕೂಡ ನೆನಪಿಲ್ಲ. ಆದರೆ ನಿನ್ನ ಅಜ್ಜಿ ಮಾಡಿದ ಸವಿರುಚಿ ಇನ್ನೂ ನನ್ನ ನಾಲಿಗೆಯಲ್ಲಿದೆ. ನಿನ್ನ ಅಜ್ಜಿಯೊಂದಿಗೆ ಒಡನಾಡಿದ ಪ್ರತಿಯೊಂದು ಮಾತುಗಳು ನನ್ನ ಮನದ ಆಳದಲ್ಲಿದೆ. ನಿನ್ನ ಅಪ್ಪ ನನ್ನ ಮಡಿಲಲ್ಲಿ ನಗುತ್ತಾ ಮಲಗಿದ ನೆನಪು ಈಗ ತಾನೇ ಎಂಬಂತೆ ಹಚ್ಚ ಹಸಿರಾಗಿದೆ.ಈ ಭೂಮಿಯ ಮೇಲೆ ಮಳೆ ಬಿದ್ದಾಗ ಅದರ ವಾಸನೆಗೆ ಮನ ಮುದಗೊಂಡಾಗ ನೆನಪುಗಳು ದಾಳಿ ಇಡುತ್ತವೆ.ಆದ್ದರಿಂದ ನಮ್ಮ ಬದುಕು ಧಾವಂತದಿಂದ ಓಡುವುದರಲ್ಲಿ ಇಲ್ಲ… ನಮ್ಮ ಬದುಕು ಇರುವುದು ನಾವು ಪ್ರಸ್ತುತ ಇರುವ ಗಳಿಗೆಯನ್ನು ನೆಮ್ಮದಿಯಿಂದ ಸವಿಯುವುದರಲ್ಲಿ ಎಂದು ಹೇಳಿ ದೀರ್ಘವಾಗಿ ನಿಟ್ಟುಸಿರಿಟ್ಟ.ತನ್ನ ಕೈಯಲ್ಲಿರುವ ಪುಟ್ಟ ಕಲಾತ್ಮಕ ಪೆಟ್ಟಿಗೆಯನ್ನು ಶಾಮನ ಕೈಯಲ್ಲಿ ಇಡುತ್ತಾ ಅಜ್ಜ ಹೇಳಿದ… ಮಗು ಶಾಮ ಈ ಜಗತ್ತು ನಿನಗೆ ಸಾವಿರಾರು ವಸ್ತುಗಳನ್ನು ಮಾರಲು ಪ್ರಯತ್ನಿಸುತ್ತದೆ. ಅವುಗಳನ್ನು ಖರೀದಿಸಿದರೆ ಮಾತ್ರ ನೀನು ಸಂತೋಷವಾಗಿರುವೆ ಎಂಬ ನಂಬಿಕೆಯನ್ನು ನಿನ್ನಲ್ಲಿ ಹುಟ್ಟಿಸುತ್ತದೆ. ಆದರೆ.. ನಿಜ ಹೇಳಬೇಕೆಂದರೆ ನೀನು ಭೂತದ ನೆನಪಿನಲ್ಲಿ ಭವಿಷ್ಯದ ಭಯದಲ್ಲಿ ನಿನ್ನ ಬದುಕನ್ನು ಕಳೆಯಬೇಡ. ನಿನ್ನ ವರ್ತಮಾನದಲ್ಲಿಯೇ ನಿನ್ನ ಬದುಕಿದೆ ಈ ಘಳಿಗೆ ಮಾತ್ರ ನಿನ್ನದು. ಮುಂದೆಂದೂ ಸಿಗಬಹುದಾದ ಸುಖಕ್ಕೆ ನಿನ್ನ ಈ ದಿನವನ್ನು ಕಳೆದುಕೊಳ್ಳಬೇಡ. ನಿನ್ನ ಬದುಕಿನ ಪೆಟ್ಟಿಗೆಯನ್ನು ಅತ್ಯುತ್ತಮ ನೆನಪುಗಳೊಂದಿಗೆ ತುಂಬು ಉಸಿರುಗಟ್ಟುವಂತೆ ಓಡುವುದು ಖಂಡಿತ ಬೇಡ. ದೀರ್ಘವಾದ ಉಸಿರನ್ನು ನಿನ್ನ ಎದೆಯಾಳದಲ್ಲಿ ತುಂಬಿಕೊಂಡು ಅದನ್ನು ನಿಧಾನವಾಗಿ ಹೊರ ಹಾಕುತ್ತಾ ಜೀವನದ ಪ್ರತಿಯೊಂದು ಗಳಿಗೆಯನ್ನು ನಿನ್ನದಾಗಿಸಿಕೋ ಅದರ ಮಧುರವಾದ ಸವಿಯನ್ನು ಆಸ್ವಾದಿಸು ಆಗ ಬದುಕು ನಿನಗೆ ಸದಾ ಸುಂದರವಾಗಿ ಕಾಣುತ್ತದೆ ಎಂದು ಅಜ್ಜ ಹೇಳಿದ.ಅಜ್ಜನ ಕೈಯಲ್ಲಿನ ಪೆಟ್ಟಿಗೆ ಇದೀಗ ಶಾಮನ ಕೈಗೆ ಹಸ್ತಾಂತರವಾಗಿದ್ದು ಇದೀಗ ಆತನ ಕಣ್ಣಿಗೆ ಅದು ಖಾಲಿ ಪೆಟ್ಟಿಗೆಯಾಗಿ ತೋರಲಿಲ್ಲ… ಅದು ನನಗಿರುವ ಬದುಕಿನ ಅವಕಾಶಗಳನ್ನು ತೋರುವ ಜಾದು ಪೆಟ್ಟಿಗೆಯಾಗಿ ಕಾಣಿಸಿತು.ನೋಡಿದಿರಾ ಸ್ನೇಹಿತರೆ ! ಈ ಕಥೆಯಿಂದ ನಮಗೆ ಅರಿವಾಗುವುದು ನಮ್ಮ ಬದುಕಿನಲ್ಲಿ ನಾವು ಬೆಲೆ ಕೊಡಬೇಕಾಗಿರುವುದು ಅತ್ಯುತ್ತಮ ವಸ್ತುಗಳಿಗೆ ಅಲ್ಲ… ವ್ಯಕ್ತಿಗಳಿಗೆ ಮತ್ತು ವ್ಯಕ್ತಿಗತ ಭಾವನೆಗಳಿಗೆ. ಬದುಕಿನ ಅದೆಷ್ಟೋ ಸಮಯವನ್ನು ನಾವು ಭೂತದ ಕನವರಿಕೆಯಲ್ಲಿ ಇಲ್ಲವೇ ಭವಿಷ್ಯದ ಚಿಂತೆಯಲ್ಲಿ ಕಳೆಯುತ್ತೇವೆ… ಈ ದಿನವನ್ನು ಜೀವಿಸಲು ಮರೆತುಬಿಡುತ್ತೇವೆ. ಎಲ್ಲರಿಗೂ ಇರುವಂತೆ ನಮಗೂ ಕೂಡ ದಿನಕ್ಕೆ 24 ಗಂಟೆಗಳು ಮಾತ್ರವೇ ಇರುತ್ತವೆ. ಶ್ರೀಮಂತನಾಗಿದ್ದ ಮಾತ್ರಕ್ಕೆ ಸಂತೋಷವಾಗಿರಲು ಸಾಧ್ಯವಿಲ್ಲ, ಎಲ್ಲಾ ಐಷಾರಾಮಗಳನ್ನು ಹೊಂದಿದ್ದವರು ಮಾತ್ರ ನೆಮ್ಮದಿಯ ನಿದ್ರೆಯನ್ನು ಮಾಡಲು ಸಾಧ್ಯವಿಲ್ಲ. ಸುಂದರವಾದ ಬದುಕನ್ನು ಸಾಗಿಸಲು ನಾವು ಮಹತ್ತರವಾದದನ್ನು ಸಾಧಿಸಬೇಕಾಗಿಲ್ಲ… ಕೇವಲ ವರ್ತಮಾನದಲ್ಲಿ ಜೀವಿಸುವುದನ್ನು ರೂಢಿಸಿಕೊಳ್ಳಬೇಕು. ಅತ್ಯಂತ ಸರಳವಾದ ಆಹಾರ ವಿಹಾರವನ್ನು ನಮ್ಮದಾಗಿಸಿಕೊಳ್ಳಬೇಕು. ಒಬ್ಬನೇ ಕುಳಿತು ಐಷಾರಾಮಿ ಹೋಟೆಲ್ ನಲ್ಲಿ ಭೂರೀ ಭೋಜನ ಸವಿಯುವುದು ಮನುಷ್ಯನಿಗೆ ಬೇಕಾಗಿಲ್ಲ…. ಬದಲಾಗಿ ನಿಮ್ಮನ್ನು ಅರ್ಥ ಮಾಡಿಕೊಂಡ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸರಳವಾದ ಊಟ ಮಾಡಿದರೆ ಸಾಕು. ನಿಮ್ಮನ್ನು ಒತ್ತಡಕ್ಕೆ ಈಡು ಮಾಡುವ ಓಟದ ಸ್ಪರ್ಧೆಗಿಂತ ಸ್ನೇಹಿತರೊಂದಿಗೆ ಒಂದು ಪುಟ್ಟ ನಡಿಗೆ ಮನಸ್ಸಿಗೆ ನೆಮ್ಮದಿಯನ್ನು ತಂದುಕೊಡಬಲ್ಲದು.ಸಂತೋಷ ಎನ್ನುವುದು ನೀವು ಅಂತಿಮವಾಗಿ ತಲುಪುವ ಗುರಿಯಲ್ಲ… ಅದು ನೀವು ನಡೆಯುವ ಹಾದಿಯಲ್ಲಿ ಕಂಡು ಬರುವ ಎಲ್ಲಾ ಚಿಕ್ಕ ಪುಟ್ಟ ವಿಷಯಗಳನ್ನು ಆಸ್ವಾದಿಸುತ್ತಾ ಮುಂದೆ ಸಾಗುವ ಮನಸ್ಥಿತಿ. ನಿಮ್ಮ ಆಯ್ಕೆಯ ಹೆದ್ದಾರಿ ನಿಮ್ಮದಾಗಲಿ…ಏನಂತೀರಾ? ವೀಣಾ ಹೇಮಂತ್ ಗೌಡ ಪಾಟೀಲ್ ́
“ಅತಿ ಅವಸರ ಸಲ್ಲದು” ವೀಣಾ ಹೇಮಂತ್ ಗೌಡಪಾಟೀಲ Read Post »
ಧಾರಾವಾಹಿ ಸಂಗಾತಿ24 ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನ ಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದಮಹಾನ್ ಚೇತನ *ಜಯದೇವಿ ತಾಯಿಯವರ ಸಮಾಜಮುಖಿ, ಸಾಹಿತ್ಯಿಕ ಹಾಗೂ ಭಕ್ತಿಮಯ ಬದುಕು* ಜಯದೇವಿ ತಾಯಿಯವರ ವ್ಯಕ್ತಿತ್ವವು ಕೇವಲ ಕುಟುಂಬದ ಚೌಕಟ್ಟಿನೊಳಗೆ ಸೀಮಿತವಾಗಿರಲಿಲ್ಲ. ಸಂಸಾರದ ಹೊಣೆ ಹೊತ್ತು… ಸಿದ್ದರಾಮೇಶ್ವರರ ಶ್ರೇಷ್ಠ ಭಕ್ತಿಯಾಗಿ, ತ್ರಿಭಾಷಾ ಪಾಂಡಿತ್ಯವನ್ನು ಪಡೆದು ,ಕನ್ನಡ ಸರಸ್ವತ ಲೋಕದ ಕಣ್ಣಾಗಿ, ಕನ್ನಡಿಗರ ತಾಯಿಯಾಗಿ , ಶ್ರೇಷ್ಠ ಶಿವಶರಣಿಯಾಗಿ ಬದುಕಿ… ಜನಮನಗಳಲ್ಲಿ ಅಳಿಯದ ಛಾಪು ಮೂಡಿಸಿದ ಮುಂದಿನ ಬದುಕನ್ನು ನೋಡೋಣ ಬನ್ನಿ …… *ಸವಿಧಾನ ಜೀವನ| ನೋವು ನಾವುಗೆಲಿದು ಪಾವನ ಬದುಕಿ -ನಂದನವನಲಿದು ಬೇವು ಬೆಲ್ಲಾಗಿ ಸವಿದೇನ*|| ಎನ್ನುತ ಸಮಾಜದ ನೋವು-ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದ ಜಯದೇವಿ ತಾಯಿಯವರು ಅನೇಕ ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಬಡವರು, ನಿರ್ಗತಿಕರು, ಮಹಿಳೆಯರು ಹಾಗೂ ಯುವಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಶಿಕ್ಷಣ ಮತ್ತು ಸಂಸ್ಕಾರಗಳು ಬೆಳೆಯಬೇಕು ಎಂಬ ಆಶಯದಿಂದ ಹಲವು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ವಿಶಿಷ್ಟವಾದುದು. ಜೀವನದ ಅನುಭವಗಳು, ಭಕ್ತಿ, ಸಾಮಾಜಿಕ ಚಿಂತನೆಗಳು ಮತ್ತು ಸ್ತ್ರೀ ಸಂವೇದನೆಗಳನ್ನು ತಮ್ಮ ಕೃತಿಗಳ ಮೂಲಕ ಜನರಿಗೆ ತಲುಪಿಸಿದರು. ಅವರ ಬರಹಗಳು ಕೇವಲ ಓದಿಗಾಗಿ ಅಲ್ಲ, ಬದುಕಿಗೆ ದಾರಿದೀಪವಾಗುವಂತಿದ್ದವು. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಅವರ ಅಪಾರ ಪ್ರೀತಿಯು ಅನೇಕ ಮೌಲಿಕ ಕೃತಿಗಳ ಸೃಷ್ಟಿಗೆ ಕಾರಣವಾಯಿತು. *ಬರದೇನೆನ್ನುವ ಭಾವ| ಬರಿತಾಯ್ತೆನಗವ್ವ ಕರೆದೇನೆನ್ನುವ ಭಕುತಿ ಬಯಲಾಯ್ತ- ತಾಯವ್ವಕೊರಗೇನೆಂಬುವ ಮನ ಮಾಯಾಯಿತು||* ಎನ್ನುತ ಶ್ರೀ ಸಿದ್ದರಾಮೇಶ್ವರಲಿ ಅಪಾರ ಭಕ್ತಿಯ ಲೀನರಾಗಿದ್ದರು. ಭಕ್ತಿ ಎಂದರೆ ಕೇವಲ ಪೂಜೆ-ಪುನಸ್ಕಾರಗಳಲ್ಲ, ಸಮಾಜ ಸೇವೆಯೇ ನಿಜವಾದ ದೇವರ ಸೇವೆ ಎಂಬ ತತ್ವವನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು .*ಕೃಪೆ ಮಾಡಿ ಎನಗೆ | ಶ್ರೀಪಾದವ ತೋರಿದನುಉಪಮೀಸ ಬಾರದ ಸಂತಸ -ಗೊಳಿಸಿದಆ ಪರಬ್ರಹ್ಮನಿಗೆ ಶರಣೆಂಬೆ||* ಎನ್ನುವಂತೆ ಸಮಾಜ ಸೇವೆಯೇ ದೇವರ ಸೇವೆಯಂತೆ ಸ್ವೀಕರಿಸಿದರು.ಸಿದ್ದರಾಮರ ಆದರ್ಶಗಳಾದ ದಾಸೋಹ, ಕಾಯಕ, ಸಮಾನತೆ ಮತ್ತು ಮಾನವ ಪ್ರೇಮವನ್ನು ತಮ್ಮ ಬದುಕಿನ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸಿದರು. ಈಗ ಒಂದೊಂದಾಗಿ ತಿಳಿದುಕೊಳ್ಳೋಣ. ಅವರ ಬದುಕಿನ ಅಧ್ಯಾಯಗಳು ನಿಸ್ವಾರ್ಥ ಸೇವೆ, ಆಧ್ಯಾತ್ಮಿಕತೆ ಮತ್ತು ಜನಪರ ಕಾಳಜಿಯ ಅಮೂಲ್ಯ ಕಥನಗಳಾಗಿವೆ.ಆದರ್ಶ ಗೃಹಿಣಿ, ಸಮಾಜಸೇವಕಿ, ಸಾಹಿತಿ ಮತ್ತು ಶ್ರೇಷ್ಠ ಭಕ್ತೆಯಾಗಿ ಜಯದೇವಿ ತಾಯಿಯವರು ನಡೆಸಿದ ಬದುಕು ಬಹುಮುಖ ಸಾಧನೆಯ ಪ್ರತೀಕವಾಗಿದೆ. *ಬಿಂಕಿನ ಮಾತಿಲ್ಲ ಕೊಂಕೀನ ನುಡಿಯಲ್ಲಕಿಂಕರಳ ಕೂಗು ಕೇಳಿರಿ,- ಶರಣರಲೆಂಖಿನ ನಾ ನೋಡಿ ನಂಬೀದ* ಎನ್ನುತ ಕಿಂಕರರಲಿ ಕಿಂಕರಳಾಗಿ ಕನ್ನಡಾಂಬೆಯ ಸೇವೆಯಲ್ಲಿ ಜನಸೇವೆಯಲ್ಲಿ ತೊಡಗಿದರು. ೧೯೪೯ರಲ್ಲಿ ಕಲ್ಬುರ್ಗಿಯಲ್ಲಿ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ೩೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು* ಶ್ರೀ ಉತ್ತಂಗಿ ಚನ್ನಪ್ಪನವರು* ಅಧ್ಯಕ್ಷತೆ ವಹಿಸಿದ್ದರು. ಇಲ್ಲಿ ತಾಯಿಯವರು ಮಹಿಳಾ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದರು. ೧೯-೨-೧೯೫೦ ರಂದು ಸೊಲ್ಲಾಪುರದಲ್ಲಿ ೩೩ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು ಇಲ್ಲಿ ಶ್ರೀ ಎಂ ಆರ್ ಶ್ರೀ ಅವರ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಮಹಿಳಾಪರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮುಂದೆ ೨೫-೧೨-೧೯೫೦ರಂದು ಮುಂಬೈಯಲ್ಲಿ ೩೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು ಇಲ್ಲಿ ರಾಷ್ಟ್ರಕವಿ* ಶ್ರೀ ಮಂಜೇಶ್ವರ ಗೋವಿಂದ ಪೈ *ಅವರು ಅಧ್ಯಕ್ಷತೆ ವಹಿಸಿದ್ದರು. ಇಲ್ಲಿಯೂ ಕೂಡ ಮಹಿಳೆಯರ ಸಮಾರಂಭಕ್ಕೆ ಅಧ್ಯಕ್ಷತೆ ವಹಿಸಿದ್ದರು.ಈ ಮೂರು ಸಮ್ಮೇಳನಗಳ ಮಹಿಳಾ ಗೋಷ್ಟಿಯಲ್ಲಿ ಜಯದೇವಿ ತಾಯಿಯವರು ಅಧ್ಯಕ್ಷತೆ ವಹಿಸಿದ್ದರು. ಜಯದೇವಿ ತಾಯಿಯವರ ಶಿಕ್ಷಣ ಕ್ರಾಂತಿ ಸೊಲ್ಲಾಪುರದ ಇತಿಹಾಸದಲ್ಲೊಂದು ಸುವರ್ಣ ಅಧ್ಯಾಯ.೧೯೪೯ನೇ ವರ್ಷ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇನ್ನೂ ಕೆಲವು ವರ್ಷಗಳಷ್ಟೇ ಆಗಿದ್ದವು. ಸಮಾಜದಲ್ಲಿ ಬಡತನ, ಅಸಮಾನತೆ ಮತ್ತು ನಿರಕ್ಷರತೆ ವ್ಯಾಪಕವಾಗಿದ್ದ ಕಾಲ ಅದು. ವಿಶೇಷವಾಗಿ ಗಿರಣಿಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರು ಹಾಗೂ ದಲಿತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಜೀವನೋಪಾಯಕ್ಕಾಗಿ ದಿನವಿಡೀ ದುಡಿಯಬೇಕಾಗಿದ್ದ ಕಾರಣ ಅವರಿಗೆ ಶಾಲೆಯ ಮುಖವೇ ಕಾಣುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಜಯದೇವಿ ತಾಯಿಯವರು ಸಮಾಜದ ತಳಮಳವನ್ನು ಕಂಡು “ಶಿಕ್ಷಣವೇ ಬದುಕಿನ ಬೆಳಕು” ಎಂಬ ದೃಢ ನಂಬಿಕೆಯೊಂದಿಗೆ ಅವರು ಒಂದು ಮಹತ್ತರ ಸಾಮಾಜಿಕ ಚಳವಳಿಗೆ ಚಾಲನೆ ನೀಡಿದರು….. ಯಾವುದೇ ದೊಡ್ಡ ಕಟ್ಟಡವಿಲ್ಲ, ಸರ್ಕಾರದ ನೆರವಿಲ್ಲ. ಆದರೆ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಮತ್ತು ಮಾನವೀಯತೆ ಅವರಲ್ಲಿತ್ತು.ತಮ್ಮ ಮನೆಯ ಆವರಣದಲ್ಲಿಯೇ ಒಂದು ಸಣ್ಣ ಶಾಲೆಯನ್ನು ಆರಂಭಿಸುವ ಮೂಲಕ ಅವರು ಶಿಕ್ಷಣ ಯಜ್ಞಕ್ಕೆ ನಾಂದಿ ಹಾಡಿದರು. ಗಿರಣಿಯಲ್ಲಿ ದುಡಿಯುತ್ತಿದ್ದ ಸುಮಾರು ೩೦,೦೦೦ ಕಾರ್ಮಿಕರ ಕುಟುಂಬಗಳ ಮಕ್ಕಳು ಹಾಗೂ ದಲಿತ ಸಮುದಾಯದ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಕನಸನ್ನು ಕಂಡರು.ಆರಂಭದಲ್ಲಿ ಕೆಲವು ಅಡೆತಡೆಗಳು ಬಂದರೂ ತಾಯಿಯವರ ಪ್ರೀತಿ, ತಾಳ್ಮೆ ಮತ್ತು ಸೇವಾ ಭಾವದಿಂದ ಆ ಪ್ರಯತ್ನ ಬೇಗನೆ ಜನಮನ ಗೆದ್ದಿತು. ನಂತರ* ಕಾರ್ಮಿಕ ಸಾಕ್ಷರತಾ ಸಮಿತಿಯ* ಸಹಯೋಗದೊಂದಿಗೆ ವಿವಿಧ ಪ್ರದೇಶಗಳಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಮುಂದಾದರು. ಮೊದಲಿಗೆ ೨೫ ಕೇಂದ್ರಗಳು ಆರಂಭವಾದವು. ಕೇಂದ್ರಗಳಲ್ಲಿ ಮಕ್ಕಳ ಜೊತೆಗೆ ಅಕ್ಷರಜ್ಞಾನವಿಲ್ಲದ ಕಾರ್ಮಿಕರಿಗೂ ಓದು-ಬರಹ ಕಲಿಸಲಾಗುತ್ತಿತ್ತು. ಶಿಕ್ಷಣವನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪಿಸಬೇಕು ಎಂಬುವದು ಅವರ ಉದ್ದೇಶವಾಗಿತ್ತು. ತಾಯಿಯವರ ಪರಿಶ್ರಮ ಮತ್ತು ಜನರ ವಿಶ್ವಾಸದಿಂದ ಈ ಚಳವಳಿ ದಿನದಿಂದ ದಿನಕ್ಕೆ ವಿಸ್ತರಿಸಿತು. ೨೫ ಕೇಂದ್ರಗಳಾಗಿದ್ದವು ಮುಂದೆ ೧೨೫ ಶಿಕ್ಷಣ ಕೇಂದ್ರಗಳಾಗಿ ಬೆಳೆದವು. ಸಾವಿರಾರು ಮಕ್ಕಳು ಮತ್ತು ವಯಸ್ಕರು ಈ ಕೇಂದ್ರಗಳ ಮೂಲಕ ಅಕ್ಷರಜ್ಞಾನ ಪಡೆದರು. ಶಿಕ್ಷಣದ ಬೆಳಕು ಮನೆಮನೆಗೂ ಹರಡಿತು.ಈ ಕಾರ್ಯ ಶಾಲೆಗಳನ್ನು ಆರಂಭಿಸಿದ ಸಾಧನೆಯೊಂದಿಗೆ….*ಅದು ಸಮಾಜ ಪರಿವರ್ತನೆಯ ಚಳವಳಿಯಾಗಿತ್ತು. * ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳಿಗೆ ಹೊಸ ಭವಿಷ್ಯಕೆ ದಾರಿ ಮಾಡಿಕೊಟ್ಟರು ಬಡವರ ಮನೆಗಳಲ್ಲಿ ಆಶಾಕಿರಣ ಮೂಡಿಸಿದ ಪ್ರಯತ್ನವಾಗಿತ್ತು. ಅನೇಕ ಕುಟುಂಬಗಳ ಬದುಕಿನ ದಿಕ್ಕನ್ನೇ ಬದಲಿಸಿದ ಮಹಾನ ಸೇವೆಯಾಗಿತ್ತು.ಆದ್ದರಿಂದಲೇ ಜಯದೇವಿ ತಾಯಿಯವರು ಕೈಗೊಂಡ ಶೈಕ್ಷಣಿಕ ಅಭಿಯಾನ ಸೊಲ್ಲಾಪುರದ ಶೈಕ್ಷಣಿಕ ಇತಿಹಾಸದಲ್ಲೇ ಒಂದು ದಾಖಲೆಯ ಸಾಧನೆಯಾಗಿ ಗುರುತಿಸಲ್ಪಟ್ಟಿದೆ. ಒಬ್ಬ ಮಹಿಳೆ ತನ್ನ ಮನೆಯ ಆವರಣದಲ್ಲಿ ಆರಂಭಿಸಿದ ಸಣ್ಣ ಶಿಕ್ಷಣ ಸೇವೆ ಮುಂದೆ ೧೨೫ ಕೇಂದ್ರಗಳ ಮಹಾ ಚಳವಳಿಯಾಗಿ ಬೆಳೆದು ಸಾವಿರಾರು ಜನರ ಬದುಕನ್ನು ಬೆಳಗಿಸಿತು ಎಂಬುದು ನಿಜಕ್ಕೂ ಅಪೂರ್ವ ಸಾಧನೆ.ಜಯದೇವಿ ತಾಯಿಯವರ ಈ ಕಾರ್ಯ ನಮಗೆ ಶಿಕ್ಷಣದ ಮಹತ್ವವನ್ನು ಯಾವ ರೀತಿಯಲ್ಲಿ, ಒಬ್ಬ ವ್ಯಕ್ತಿಯ ಸಂಕಲ್ಪ ಸಮಾಜದ ಇತಿಹಾಸವನ್ನೇ ಬದಲಾಯಿಸಬಲ್ಲದು ಎಂಬುದನ್ನೂ ಸಾರುತ್ತದೆ. ಅವರ ಜೀವನವು ಸೇವೆ, ತ್ಯಾಗ ಮತ್ತು ಶಿಕ್ಷಣದ ಮೂಲಕ ಸಮಾಜೋತ್ಥಾನ ಮಾಡಿದ ಆದರ್ಶದ ಪ್ರತೀಕವಾಗಿದೆ. ಶಿಕ್ಷಣವು ಎಲ್ಲರಿಗೂ ಲಭಿಸಬೇಕು, ಸಮಾನತೆಯನ್ನು ಮೂಡಿಸಬೇಕು ಅನ್ನುವ ಉದ್ದೇಶ ಶಿಕ್ಷಣದ ತಳಹದಿಯಾಗಿರಬೇಕು ಅನ್ನುತ್ತಿದ್ದರು. *ಜಗವು ಒಂದಾಗಲಿ |ನಗುತ ಕೈಗೂಡಿಸಿರಿಬಗೆಯಲಿ ಅಣ್ಣತಮ್ಮರಂತೆ ಲೋಕದಿಹಗೆ ಎಂಬ ಭಾವ ಅಳಿಯಲಿ||* (ಮುಂದುವರೆಯುವುದು) ಸವಿತಾ ದೇಶಮುಖ






