ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ
ಜಯದೇವಿ ತಾಯಿ ಲಿಗಾಡೆ ಅವರ ಜೀವನಗಾಥೆ
ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-108 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಆತಂಕದಲ್ಲಿಯೇ ರಾತ್ರಿ ಕಳೆದ ಕುಟುಂಬ “ಮುಂದಿನ ಬಾರಿ ಈ ತರದ ಯಾವ ಅದೃಷ್ಟವೂ ಇವರನ್ನು ಖಂಡಿತಾ ಕಾಪಾಡುವುದಿಲ್ಲ…. ಸರಿಯಾಗಿ ಪ್ಲಾನ್ ಮಾಡಿಕೊಳ್ಳೋಣ”…. ಎಂದು ಮತ್ತೊಬ್ಬ ಹೇಳಿದ. ಆಗ ಇನ್ನೊಬ್ಬ ಹೌದೆನ್ನುವಂತೆ ತಲೆ ಆಡಿಸಿದ. ಮಾತನಾಡುತ್ತಲೇ ಆ ಇಬ್ಬರು ಯುವಕರ ಸಂಭಾಷಣೆಯನ್ನು ಅಕ್ಕತಂಗಿಯರು ಗಮನಿಸಿದರು. ಅವರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ ಎಂದಿನಂತೆ ಸಹಜವಾಗಿ ಇರುವ ಪ್ರಯತ್ನ ಮಾಡಿದರು. ಅವರು ಹೇಳಿದ ಮಾತುಗಳು ತಮಗಲ್ಲವೇನೋ ಅನ್ನುವಂತೆ ಕಿಟಕಿಯಿಂದ ಆಚೆ ನೋಡುತ್ತಾ ಕುಳಿತುಕೊಂಡರು. ಆದರೆ ಮನಸ್ಸಿನಲ್ಲಿ ಆತಂಕ ಮನೆ ಮಾಡಿತ್ತು. ಅಕ್ಕನ ಕೈಯನ್ನು ತಂಗಿ, ತಂಗಿಯ ಕೈಯನ್ನು ಅಕ್ಕ ಬಲವಾಗಿ ಹಿಡಿದು ಮೌನವಾಗಿ ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡರು.  ಇಬ್ಬರ ಮನಸ್ಸು ಭಾರವಾಯಿತು. ತಮ್ಮ ಬಸ್ ನಿಲ್ದಾಣ ಬಂದಾಗ ಅಂಜುತ್ತಲೇ ಇಳಿದರು. ಆದರೆ ಹಿಂತಿರುಗಿ ನೋಡಲಿಲ್ಲ. ಸ್ವಲ್ಪ ದೂರ ಕ್ರಮಿಸಿದ ನಂತರ ತಿರುಗಿ ನೋಡಿದರು. ಅವರ ಜೊತೆ ಈ ಬಸ್ ನಿಲ್ದಾಣದಲ್ಲಿ ದಿನವೂ ಇಳಿಯುವ ಇತರೆ ಪ್ರಯಾಣಿಕರಿದ್ದರೇ ಹೊರತು ಆ ಇಬ್ಬರು ಯುವಕರು ಕಾಣಲಿಲ್ಲ. ಇಬ್ಬರೂ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟು ವೇಗವಾಗಿ ಹೆಜ್ಜೆ ಹಾಕುತ್ತಾ ಆತುರದಿಂದ ಮನೆಯ ಕಡೆಗೆ ನಡೆದರು. ಮನೆ ತಲುಪಿದಾಗ ಅಮ್ಮ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಿದ್ದುದು ಕಂಡರು. ಅಕ್ಕ-ತಂಗಿಯರಿಬ್ಬರೂ ಬಟ್ಟೆ ಬದಲಿಸಿ, ಕೈಕಾಲು ಮುಖ ತೊಳೆದು ತಾವೂ ದೇವರಿಗೆ ಕೈ ಮುಗಿದರು.  ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದರೂ ಸುಮತಿಗೆ ಮಕ್ಕಳಿಬ್ಬರ ಆಗಮನದ ಅರಿವಾಯಿತು. ಪ್ರಾರ್ಥನೆ ಮುಗಿದ ನಂತರ ಮಕ್ಕಳಿಬ್ಬರನ್ನು ಗಮನಿಸಿದಳು. ಇಂದು ಕೂಡ ಅವರ ಮುಖ ಬಾಡಿತ್ತು. ಬಹುಶಃ ನಿನ್ನಯ ಘಟನೆಯನ್ನು ನೆನೆದು ಮಕ್ಕಳು ಈ ರೀತಿ ಇರಬಹುದು ಎಂದುಕೊಂಡಳು. ಆದರೂ….” ಏನಾಯ್ತು ಮಕ್ಕಳೇ”…. ಎಂದು ಕೇಳಿದಳು. ಅಕ್ಕ-ತಂಗಿಯರಿಬ್ಬರು ಪರಸ್ಪರ ನೋಡಿಕೊಂಡು ಹೇಳೋಣ ಎನ್ನುವಂತೆ ಕಣ್ಣಲ್ಲಿ ಸನ್ನೆ ಮಾಡಿಕೊಂಡರು. ಇಬ್ಬರೂ ಒಕ್ಕೊರಲಿನಿಂದ…. “ಅಮ್ಮಾ….. ನಮ್ಮನ್ನು ಹಿಂಬಾಲಿಸಿ ಬಂದು ತೊಂದರೆ ಕೊಟ್ಟಂತಹ ಯುವಕರು ಯಾರೆಂದು ತಿಳಿಯಿತು”…. ಎಂದು ಮಕ್ಕಳು ಹೇಳಿದಾಗ, ಸುಮತಿ ಕಾತರದಿಂದ ಯಾರವರು?… ನಿಮಗೆ ಪರಿಚಿತರೇ?… ಅಥವಾ ಹೊರಗಿನವರೇ?… ಎಂದು ಕೇಳಿದಳು. ಆಗ ತಮಗೆ ತಿಳಿದಿರುವ ವಿಷಯಗಳನ್ನು ಮಕ್ಕಳು ತಿಳಿಸಿದರು. ಜೊತೆಗೆ ತಾವು ಬಸ್ಸಿನಲ್ಲಿದ್ದಾಗ ಅವರು ಮಾತನಾಡಿಕೊಂಡ ಬಗ್ಗೆಯೂ ಹೇಳಿದರು. ಮಕ್ಕಳ ಮಾತುಗಳನ್ನು ಆಲಿಸಿದ, ಸುಮತಿ ಹೌಹಾರಿದಳು. ಮುಂದೆ ಏನು ಮಾಡುವುದು? ಎನ್ನುವ ಚಿಂತೆಯು ಅವಳ ಮನವನ್ನು ಆವರಿಸಿತು. ದೇವರೇ ಗಂಡಿನಾಶ್ರಯವಿಲ್ಲದ ನಮ್ಮ ಬದುಕು ಎಷ್ಟೊಂದು ದುಸ್ತರವಾಗುತ್ತಿದೆ. ಆರೋಗ್ಯವಿರದ, ಅಬಲೆಯಾದ ನಾನು ನನ್ನ ಮಕ್ಕಳನ್ನು ಹೇಗೆ ದುಷ್ಟರಿಂದ ಕಾಪಾಡಲಿ.? ಒಂದು ಕಾಲದಲ್ಲಿ ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾದ ನನ್ನನ್ನು ನಾನು ಕಾಪಾಡಿಕೊಳ್ಳಲು ಬಹಳ ಕಷ್ಟಪಟ್ಟಿದ್ದೇನೆ…. ನನಗಿರುವವರು ನಾಲ್ಕು ಹೆಣ್ಣು ಮಕ್ಕಳು…. ಒಬ್ಬಳದು ಮದುವೆಯಾಗಿದೆ…. ಉಳಿದ ಹೆಣ್ಣು ಮಕ್ಕಳಿಗೆ ಒಂದು ದಾರಿಯಾಗುವವರೆಗೂ ಹೇಗೆ ನಾನು ಕಾಪಾಡಲಿ? ನನ್ನ ಮಕ್ಕಳು ಕೂಡ ಇಂತಹವರಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಕೃಷ್ಣಾ ನೀನೇ ಏನಾದರೂ ಒಂದು ದಾರಿ ತೋರು ನಮಗೆ ಎಂದು ಮೌನವಾಗಿ ಕೃಷ್ಣನನ್ನು ಪ್ರಾರ್ಥಿಸುತ್ತಿದ್ದಳು. ಅಮ್ಮನ ಚಿಂತಾಕ್ರಾಂತವಾದ ಮುಖವನ್ನು ನೋಡಿ ಮಕ್ಕಳಿಬ್ಬರೂ ಅಮ್ಮನ ಹೆಗಲ ಮೇಲೆ ಕೈಯಿಟ್ಟು ಏನು ಯೋಚಿಸುತ್ತಿರುವೆ? ಎಂಬಂತೆ ಅವಳ ಮುಖ ನೋಡಿದರು. ಸುಮತಿ ಬಾರದ ಮುಗುಳ್ನಗೆಯನ್ನು ಮುಖದ ಮೇಲೆ ತಂದುಕೊಳ್ಳುತ್ತಾ….”ಹೆದರಬೇಡಿ ಮಕ್ಕಳೇ, ದೇವರು ನಮಗೆ ಏನಾದರೂ ಒಂದು ದಾರಿ ತೋರುವನು. … ಬನ್ನಿ ಮಕ್ಕಳೇ ಊಟ ಮಾಡೋಣ”… ಎಂದು ಅಡುಗೆ ಮನೆಯ ಕಡೆಗೆ ಮಕ್ಕಳನ್ನು ಬರುವಂತೆ ಸೂಚಿಸಿದಳು. ಇಬ್ಬರೂ ಸುಮತಿಯ ಜೊತೆಗೆ ಅಡುಗೆ ಮನೆಗೆ ಬಂದರು. ತಾವು ಕುಳಿತುಕೊಳ್ಳುವ ಮಣೆಯನ್ನು ಇಟ್ಟುಕೊಂಡು ಅಮ್ಮನಿಗೂ ಒಂದು ಮಣೆಯನ್ನು ಇಟ್ಟರು. ಸುಮತಿ ಇಬ್ಬರಿಗೂ ಊಟ ಬಡಿಸಿದಳು. ತಾನು ತಟ್ಟೆಯಲ್ಲಿ ಊಟವನ್ನು ಹಾಕಿಕೊಂಡು ಅನ್ಯಮನಸ್ಕಳಾಗಿ ಏನನ್ನೋ ಯೋಚಿಸುತ್ತಾ ಊಟ ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಅನ್ನವು ಅವಳ ನೆತ್ತಿಗೇರಿತು. ಜೋರಾಗಿ ಕೆಮ್ಮಲು ಪ್ರಾರಂಭಿಸಿದಳು. ಮಕ್ಕಳಿಬ್ಬರೂ ನೀರಿನ ಲೋಟವನ್ನು ಅಮ್ಮನೆಡೆಗೆ ಹಿಡಿದರು. ಸುಮತಿಯ ಕಣ್ಣುಗಳಲ್ಲಿ ನೀರು ತುಂಬಿ ಕನ್ನಡಕದ ಮೇಲೆ ಬಿದ್ದು ದೃಷ್ಟಿ ಮಂಜಾಯಿತು. ತನ್ನ ದಪ್ಪ ಕನ್ನಡಕವನ್ನು ತೆಗೆದು ಸೀರೆಯಿಂದ ಒರೆಸಿ ಪುನಹ ಹಾಕಿಕೊಳ್ಳುತ್ತಾ ನೀರನ್ನು ಕುಡಿದಳು. ಊಟ ಮುಗಿಸಿ, ಪಾತ್ರೆ ತೊಳದಿಟ್ಟು ಮಕ್ಕಳ ಜೊತೆಗೆ ಹೊರಗೆ ವರಾಂಡದಲ್ಲಿ ಬಂದು ಕುಳಿತಳು.  ಮಕ್ಕಳಿಬ್ಬರೂ ಅಮ್ಮನ ಅಕ್ಕಪಕ್ಕ ಕುಳಿತುಕೊಂಡು ಅಮ್ಮನ ಹೆಗಲ ಮೇಲೆ ತಲೆ ಇಟ್ಟುಕೊಂಡರು. ಅಮಾವಾಸ್ಯೆಯು ಹತ್ತಿರ ಬರುತ್ತಿದ್ದುದರಿಂದ ಆಗಸದಲ್ಲಿ ನಕ್ಷತ್ರಗಳು ಇನ್ನೂ ಹೆಚ್ಚು ಹೊಳಪಾಗಿ ಕಾಣುತ್ತಿದ್ದವು. ಸುಮತಿ ಗಿಡ ಮರಗಳ ನಡುವೆ ಆವರಿಸಿರುವ ಕತ್ತಲೆಯಲ್ಲಿ ಶೂನ್ಯತೆಯನ್ನು ನೋಡುತ್ತಾ, ಮನಸ್ಸಿನಲ್ಲಿ ಉಪಾಯವೊಂದು ಹೊಳೆದಂತಾಗಿ…. “ಮಕ್ಕಳೇ ನಾಳೆ ನೀವುಗಳು ಶಾಲಾ-ಕಾಲೇಜಿನಿಂದ ಹಿಂತಿರುಗಿ ಬರುವಾಗ ತೋಟದ ದೊಡ್ಡ ಬಂಗಲೆಯ ಗೇಟಿನ ಬಳಿ ಇಳಿದುಕೊಳ್ಳಿ….. ನಾನು ಶಾಲೆ ಮುಗಿದ ನಂತರ ಸಂಜೆ ಬಂದು ಅಲ್ಲಿ ಬಂಗಲೆಯ ಬಳಿ ನಿಮಗಾಗಿ ಕಾಯುತ್ತಿರುತ್ತೇನೆ….. ಸಾಹುಕಾರರನ್ನು ಕಂಡು ಮಾತನಾಡೋಣ…. ಅವರು ಏನಾದರೂ ಒಂದು ಪರಿಹಾರ ಸೂಚಿಸಬಹುದು”…. ಎಂದು ಸುಮತಿ ಮಕ್ಕಳಿಗೆ ಹೇಳಿದಳು. ಅಮ್ಮನ ಮಾತನ್ನು ಕೇಳಿದ ಮಕ್ಕಳು ಹಾಗೆಯೇ ಆಗಲಿ ಎನ್ನುವಂತೆ ತಲೆಯಾಡಿಸಿದರು. ಮನಸ್ಸಿನಲ್ಲಿ ಸಣ್ಣ ಆಶಾ ಭಾವನೆ ಹೊಳೆದಿದ್ದರಿಂದ ಸುಮತಿಯ ಮನಸ್ಸು ಸ್ವಲ್ಪ ತಿಳಿಯಾಯಿತು. ಏನಾದರೂ ಒಂದು ದಾರಿ ಖಂಡಿತಾ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆಯಿಂದ ಮಕ್ಕಳಿಬ್ಬರನ್ನು ಕರೆದುಕೊಂಡು ಮನೆಯ ಒಳಗೆ ನಡೆದಳು. ಬಾಗಿಲ ಚಿಲಕವನ್ನು ಹಾಕಿ, ಇಬ್ಬರನ್ನೂ ತನ್ನ ಪಕ್ಕದಲ್ಲಿ ಮಲಗಿಸಿಕೊಂಡು ನಿದ್ರಿಸುವ ಪ್ರಯತ್ನ ಮಾಡಿದಳು. ಅಮ್ಮನ ತೋಳನ್ನು ತಲೆದಿಂಬಾಗಿಸಿಕೊಂಡು ಮಕ್ಕಳಿಬ್ಬರೂ ಅಮ್ಮನನ್ನು ಅಪ್ಪಿ ಮಲಗಿದರು. ದಿನವೂ ಮಲಗುವಾಗ ಸುಮತಿ ಮಕ್ಕಳಿಗೆ ಯಾವುದಾದರೊಂದು ನೀತಿ ಕಥೆಯನ್ನು ಹೇಳುತ್ತಿದ್ದಳು. ವಿಶೇಷವಾಗಿ ತನ್ನ ಇಷ್ಟದೈವ ಶ್ರೀ ಕೃಷ್ಣನ ಕಥೆಯನ್ನೇ ಹೆಚ್ಚಾಗಿ ಹೇಳುತ್ತಿದ್ದಳು. ಮಕ್ಕಳಿಗೂ ಅಮ್ಮ ಹೇಳುವ ಶ್ರೀ ಕೃಷ್ಣನ ಕಥೆ ಎಂದರೆ ಬಹಳ ಇಷ್ಟವಾಗುತ್ತಿತ್ತು. ಅಮ್ಮ ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ, ಹೂಂಗುಟ್ಟುತ್ತಾ ಮಕ್ಕಳಿಬ್ಬರೂ ನಿದ್ರೆಗೆ ಜಾರಿದರು. 

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ “ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಕರ್ನಾಟಕ ಮತ್ತು ಭಾರತದ ಇತಿಹಾಸದಲ್ಲಿ ಸುವರ್ಣಯುಗ ಎನ್ನುವುದು ಕೆಳದಿ ಅರಸರ ಕಾಲದಲ್ಲಿ. ಕೃಷಿ ವಾಣಿಜ್ಯ ತೆರಿಗೆ ಸುಧಾರಣೆಗಳನ್ನು ಅನುಷ್ಠಾನಗೊಳಿಸಿ ಸಮೃದ್ಧ ರಾಜ್ಯವನ್ನು ಮಾಡಿದ ಕೀರ್ತಿ ಕೆಳದಿ ಅರಸರಿಗೆ ಸಲ್ಲುತ್ತದೆ. ಶಿವಪ್ಪ ನಾಯಕ (ಶಿವಪ್ಪ ನಾಯಕ) (1645–1660), ಕೆಳದಿ ಶಿವಪ್ಪ ನಾಯಕ ಎಂದು ಜನಪ್ರಿಯವಾಗಿ ನಾಯಕರು, ಒಬ್ಬ ಭಾರತೀಯ ರಾಜ ಮತ್ತು ಕೆಳದಿ ನಾಯಕ ಸಾಮ್ರಾಜ್ಯದ ಆಡಳಿತಗಾರ. ಕೆಳದಿ ನಾಯಕರು 16 ನೇ ಶತಮಾನದ ಉತ್ತರಾರ್ಧದಲ್ಲಿ ಭಾರತದ ಕರ್ನಾಟಕದ ಕರಾವಳಿ ಮತ್ತು ಮಲೆನಾಡು (ಬೆಟ್ಟ) ಜಿಲ್ಲೆಗಳಲ್ಲಿ ವಿಜಯನಗರ ಸಾಮ್ರಾಜ್ಯದ ನಂತರದ ಲಿಂಗಾಯತ ಉತ್ತರಾಧಿಕಾರಿಗಳಾಗಿದ್ದರು. ಅವರ ಉತ್ತುಂಗದಲ್ಲಿ, ನಾಯಕರು 1763 ರಲ್ಲಿ ಮೈಸೂರು ಸಾಮ್ರಾಜ್ಯಕ್ಕೆ ಶರಣಾಗುವ ಮೊದಲು, ಆಧುನಿಕ ಕರ್ನಾಟಕದ ಕರಾವಳಿ, ಬೆಟ್ಟ ಮತ್ತು ಕೆಲವು ಆಂತರಿಕ ಜಿಲ್ಲೆಗಳನ್ನು ( ಬಯಲುಸೀಮೆ ) ಒಳಗೊಂಡ ಸ್ಥಾಪಿತ ಸಾಮ್ರಾಜ್ಯವನ್ನು ನಿರ್ಮಿಸಿದರು,   ಕೆಳದಿ ಅರಸರು ತೆರಿಗೆಯನ್ನು  ಪರಿಚಯಿಸಿದರು.  ಯುದ್ಧ ಮತ್ತು ವಿಜಯಗಳು ಶಿವಪ್ಪ ನಾಯ್ಕ ಒಬ್ಬ ಸಮರ್ಥ ಆಡಳಿತಗಾರ ಮತ್ತು  ಶೂರ ಸೈನಿಕ . ಅವರು 1645 ರಲ್ಲಿ ಸಿಂಹಾಸನವನ್ನು ಏರಿದರು. ಈ ಸಮಯದಲ್ಲಿ, ವೆಲ್ಲೂರಿನಿಂದ ಆಳಿದ ವಿಜಯನಗರ ಸಾಮ್ರಾಜ್ಯದ ಕೊನೆಯ ದೊರೆ ಶ್ರೀರಂಗರಾಯ III ಬಿಜಾಪುರ ಸುಲ್ತಾನರಿಂದ ಸೋಲಿಸಲ್ಪಟ್ಟರು ಮತ್ತು ಶಿವಪ್ಪನ ಆಶ್ರಯವನ್ನು ಪಡೆದರು. ಪೋರ್ಚುಗೀಸರ ಬೆದರಿಕೆಯನ್ನು 1653 ರ ಹೊತ್ತಿಗೆ ತೊಡೆದುಹಾಕಲಾಯಿತು ಮತ್ತು ಮಂಗಳೂರು, ಕುಂದಾಪುರ ಮತ್ತು ಹೊನ್ನಾವರ ಬಂದರುಗಳನ್ನು ಕೆಳದಿ ನಿಯಂತ್ರಣಕ್ಕೆ ತರಲಾಯಿತು.  ಕನ್ನಡ ಕರಾವಳಿಯನ್ನು ಗೆದ್ದ ನಂತರ, ಅವರು ಆಧುನಿಕ ಕೇರಳದ ಕಾಸರಗೋಡು ಪ್ರದೇಶಕ್ಕೆ ದಂಡೆತ್ತಿ ಹೋಗಿ ನೀಲೇಶ್ವರದಲ್ಲಿ ವಿಜಯಸ್ತಂಭವನ್ನು ಸ್ಥಾಪಿಸಿದರು. ಚಂದ್ರಗಿರಿ, ಬೇಕಲ್, ಅಡ್ಕ ಕೋಟೆ, ಆರಿಕ್ಕಾಡಿ ಮತ್ತು ಮಂಗಳೂರಿನ ಕೋಟೆಗಳನ್ನು ಶಿವಪ್ಪ ನಾಯಕ ನಿರ್ಮಿಸಿದ. ನಂತರ ಅವರು ತುಂಗಭದ್ರಾ ನದಿಯ ಉತ್ತರಕ್ಕೆ ದಾಳಿ ಮಾಡಿದರು ಮತ್ತು ಆಧುನಿಕ ಧಾರವಾಡ ಜಿಲ್ಲೆಯಲ್ಲಿ ಬಿಜಾಪುರ ಸುಲ್ತಾನರಿಂದ ಪ್ರದೇಶವನ್ನು ವಶಪಡಿಸಿಕೊಂಡರು. ದಕ್ಷಿಣದಲ್ಲಿ, ಆಧುನಿಕ ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಅವನು ಆಕ್ರಮಣ ಮಾಡಿ ಮುತ್ತಿಗೆ ಹಾಕಿದಾಗ, ಅವನ ಸೈನ್ಯದಲ್ಲಿ ಸಾಂಕ್ರಾಮಿಕ ರೋಗವು ಅವನನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು.  ದಕ್ಷಿಣದಲ್ಲಿ, ಅವರು ಕರಾವಳಿ ಪ್ರದೇಶದ ಎಲ್ಲಾ ಪೋರ್ಚುಗೀಸ್ ಕೋಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಕೆನರಾ ಪ್ರದೇಶದಲ್ಲಿ ಪೋರ್ಚುಗೀಸ್ ರಾಜಕೀಯ ಶಕ್ತಿಯನ್ನು ನಾಶಪಡಿಸಿದರು.  ಶಿವಪ್ಪ ನಾಯಕ ಅವರು ಸಿಸ್ಟ್ ಎಂಬ ರಾಜಸ್ವ ಪರಿಹಾರ ಯೋಜನೆಯನ್ನು ಪರಿಚಯಿಸಿದರು , ಇದು ಮೊಗಲ್ ಚಕ್ರವರ್ತಿ ಅಕ್ಬರ್ ರೂಪಿಸಿದ ಕಂದಾಯ ಯೋಜನೆಗಳಿಗೆ ಅನುಕೂಲಕರ ಹೋಲಿಕೆಯನ್ನು ಕಂಡುಕೊಂಡಿದೆ.  ಈ ಯೋಜನೆಯ ಪ್ರಕಾರ, ಮಣ್ಣಿನ ಪ್ರಕಾರ ಮತ್ತು ಲಭ್ಯವಿರುವ ನೀರಾವರಿ ಸೌಲಭ್ಯಗಳ ಆಧಾರದ ಮೇಲೆ ಕೃಷಿ ಭೂಮಿಯನ್ನು ಐದು ವಿಧಗಳಾಗಿ ವಿಂಗಡಿಸಲಾಗಿದೆ. ಖಂಡುಗ ಎಂಬ ಬಿತ್ತನೆ ಸಾಮರ್ಥ್ಯದ ಘಟಕವನ್ನು ಅಭಿವೃದ್ಧಿಪಡಿಸಲಾಯಿತು ಮತ್ತು ಪ್ರತಿ ನೀರಾವರಿ ಭೂಮಿಗೆ ಈ ಘಟಕದ ಆಧಾರದ ಮೇಲೆ ವಿವಿಧ ಮೊತ್ತಗಳಲ್ಲಿ ತೆರಿಗೆ ವಿಧಿಸಲಾಯಿತು. ತೆರಿಗೆಯ ದರವು ಈ ಐದು ರೀತಿಯ ಭೂಮಿಯಲ್ಲಿ ಪ್ರತಿಯೊಂದರ ಇಳುವರಿಯನ್ನು ಅವಲಂಬಿಸಿದೆ, ದರವು ಹಳ್ಳಿಯಿಂದ ಗ್ರಾಮಕ್ಕೆ ಬದಲಾಗುತ್ತದೆ ಮತ್ತು ಒಟ್ಟು ಇಳುವರಿಯಲ್ಲಿ ಮೂರನೇ ಒಂದು ಭಾಗದಷ್ಟು ಇರುತ್ತದೆ. ಶಿವಪ್ಪ ನಾಯಕ ಅವರು ಕೃಷಿಗೆ ಪ್ರಾಮುಖ್ಯತೆಯನ್ನು ನೀಡಿದರು, ಇದು ಕೃಷಿ ಆರ್ಥಿಕತೆಯನ್ನು ವಿಸ್ತರಿಸಲು ಕಾರಣವಾಯಿತು.  *ಧಾರ್ಮಿಕ  ಸಹಿಷ್ಣು*  ಧಾರ್ಮಿಕ ಮತ್ತು ಸಹಿಷ್ಣು ವ್ಯಕ್ತಿ, ಶಿವಪ್ಪ ನಾಯಕ ಲಿಂಗಾಯತ   ಆಚರಣೆಗಳನ್ನು ಮಾಡಿದರು ಮತ್ತು ಶೃಂಗೇರಿಯ ಹಿಂದೂ ಅದ್ವೈತ ಕ್ರಮವನ್ನು ಪೋಷಿಸಿದರು. ಶೃಂಗೇರಿಯ ಮಠ ಗುಡಿ ಕಟ್ಟಿ ಕೊಟ್ಟರು. ಅವರು ಕ್ರಿಶ್ಚಿಯನ್ನರ ಬಗ್ಗೆ ಸಹಿಷ್ಣುರಾಗಿದ್ದರು ಮತ್ತು ಅವರಿಗೆ ಕೃಷಿ ಮಾಡಲು ಭೂಮಿ ನೀಡಿದರು. ಅವರು ದಕ್ಷಿಣ ಭಾರತದ ವಾಣಿಜ್ಯ ಸಮುದಾಯಗಳಾದ ಕೋಮಟಿಗಳು ವೈಶ್ಯರು ಮತ್ತು ಕೊಂಕಣಿಗಳನ್ನು ತಮ್ಮ ರಾಜ್ಯದಲ್ಲಿ ನೆಲೆಸಲು ಮತ್ತು ವ್ಯವಹಾರಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಿದರು.  ಕಾಶ್ಮೀರಿ ಪಂಡಿತರು ವಲಸೆ ಬಂದಾಗ ಅವರಿಗೆ ಹೊಸನಗರ ಪ್ರದೇಶದಲ್ಲಿ ಆಶ್ರಯ ನೀಡಿ ಪೋಷಿಸಿದರು. *ಸ್ವಾರಸ್ಯಕರ ಪ್ರಸಂಗ* ಶಿವಪ್ಪ ನಾಯಕನ ಆಳ್ವಿಕೆಯ ಕಾಲದ ಸ್ವಾರಸ್ಯಕರ ಪ್ರಸಂಗ ಹೀಗಿದೆ. ಗಣೇಶ್ ಮಲ್ಯ ಎಂಬ ಬಡ ಬ್ರಾಹ್ಮಣನು ಉದ್ಯೋಗ ಹುಡುಕುವ ಉದ್ದೇಶದಿಂದ ರಾಜಧಾನಿ ಕೆಳದಿಗೆ ಬಂದನು. ಹಣವಿಲ್ಲದ ಕಾರಣ ಮನೆಯಲ್ಲಿ ಬೆಳೆದ ತೆಂಗಿನಕಾಯಿ ತುಂಬಿದ ಚೀಲವನ್ನು ಹೊತ್ತೊಯ್ದರು. ನಗರವನ್ನು ಪ್ರವೇಶಿಸುವ ಮೊದಲು, ಪ್ರತಿಯೊಬ್ಬ ಪ್ರಯಾಣಿಕರು ಎಂಟು ಟೋಲ್ ಗೇಟ್‌ಗಳ ಮೂಲಕ ಹಾದುಹೋಗಬೇಕಾಗಿತ್ತು, ಪ್ರತಿಯೊಂದೂ ತೆರಿಗೆಯನ್ನು ಸಂಗ್ರಹಿಸುತ್ತದೆ. ಅವರು ಯಾವುದೇ ಹಣವನ್ನು ಸಾಗಿಸದ ಕಾರಣ, ಗಣೇಶ್ ಮಲ್ಯ ಅವರು ಪ್ರತಿ ಟೋಲ್ ಗೇಟ್‌ನಲ್ಲಿ ಎರಡು ತೆಂಗಿನಕಾಯಿಗಳನ್ನು ಹಂಚಿಕೊಳ್ಳಬೇಕಾಯಿತು, ಒಂದನ್ನು ತೆರಿಗೆ ಮತ್ತು ಇನ್ನೊಂದನ್ನು ಅಧಿಕಾರಿಗೆ ಉಡುಗೊರೆಯಾಗಿ ನೀಡಲಾಯಿತು. ನಗರದ ಪ್ರವೇಶ ದ್ವಾರದಲ್ಲಿ ಎರಡು ತೆಂಗಿನಕಾಯಿ ಸಹ ಪಾವತಿಸಿದರು. ಎಲ್ಲಾ ಟೋಲ್‌ಗಳಿಂದ ನಿರಾಶೆಗೊಂಡ ಮಲ್ಯ ಅವರು ಧೈರ್ಯದಿಂದ ತಮ್ಮದೇ ಆದ ಟೋಲ್ ಗೇಟ್ (ಒಂಬತ್ತನೇ ಟೋಲ್ ಗೇಟ್) ಸ್ಥಾಪಿಸಿದರು ಮತ್ತು ತಮ್ಮ ಸ್ವಂತ ರಿಜಿಸ್ಟರ್‌ನಲ್ಲಿ ನಗರಕ್ಕೆ ಬರುವ ಪ್ರಯಾಣಿಕರ ಸಂಪೂರ್ಣ ವಿವರಗಳನ್ನು ನೋಂದಾಯಿಸಿದ ನಂತರ ಟೋಲ್ ಸಂಗ್ರಹಿಸಿದರು. ಟೋಲ್‌ಗೆ ಪ್ರತಿಯಾಗಿ, ಗಣೇಶ್ ಮಲ್ಯ ಅವರು ಹದಿನೆಂಟು ತೆಂಗಿನಕಾಯಿಗಳಿಗೆ ಹೊಸ ಕಸ್ಟಮ್ ಸ್ಟೇಷನ್, ಕುಮಟಾದ ಗಣೇಶಯ್ಯ ರಾಜರ ಸಹಿಯೊಂದಿಗೆ ಚೀಟಿಯನ್ನು ನೀಡಿದರು . ಇದು ಹದಿನೆಂಟು ತಿಂಗಳುಗಳ ಕಾಲ ರಾಜ ಶಿವಪ್ಪ ನಾಯಕನಿಗೆ ಕೇಳುವ ಮೊದಲು ಯಾರೂ ಗಮನಿಸಲಿಲ್ಲ. ರಾಜನು ಕರೆಸಿದಾಗ, ಜೀವನೋಪಾಯಕ್ಕಾಗಿ ಅಕ್ರಮ ಜಕಾತು ತೆರಿಗೆ ಸಂಗ್ರಹಿಸಿದ್ದಾಗಿ ಗಣೇಶ್ ಮಲ್ಯ ಒಪ್ಪಿಕೊಂಡಿದ್ದಾನೆ. ಅವರ ಪ್ರಾಮಾಣಿಕತೆ ಮತ್ತು ವ್ಯವಹಾರ ಕುಶಾಗ್ರಮತಿಯಿಂದ ಪ್ರಭಾವಿತರಾದ ಶಿವಪ್ಪ ನಾಯಕ ಗಣೇಶ್ ಮಲ್ಯರನ್ನು ತಮ್ಮ ಸೇವೆಗೆ ತೆಗೆದುಕೊಂಡರು.  ಶಿವಪ್ಪ ನಾಯಕನ ನಂತರ 1660 ರಲ್ಲಿ ಅವನ ಕಿರಿಯ ಸಹೋದರ ಚಿಕ್ಕ ವೆಂಕಟಪ್ಪ ನಾಯಕನು ಸಿಂಹಾಸನವನ್ನು ಅಲಂಕರಿಸಿದನು. ಶಿವಪ್ಪ ನಾಯಕ ಕೆಳದಿ ಅರಸರ ಮೊದಲ ದೊರೆ. ಇವನ ಕಾಲದ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಹಲವು ಭಾಗಗಳಲ್ಲಿ ಕಾಣುತ್ತೇವೆ.  ಇಂತಹ ಜನಪರ ಅರಸು ಸಾಮಾಜಿಕ ಬದಲಾವಣೆಯ ಕನಸುಗಾರ ಶ್ರೀ ಶಿವಪ್ಪ ನಾಯಕ ಇವರಿಗೆ ಅನಂತ ಕೋಟಿ ನಮನಗಳು ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ,”ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ, ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ನನ್ನ ತಾಯಿಯ ತವರೂರು ಗದಗ ಜಿಲ್ಲೆಯ ಮುಳಗುಂದ .ಬಾಲಲೀಲಾ ಮಹಾಂತ ಸ್ವಾಮಿಗಳು ,ದಾವಲ ಮಲಿಕ್ ಶಿರಹಟ್ಟಿ ಫಕೀರೇಶ್ವರ ಹೀಗೆ ಬೇರೆ ಬೇರೆ ಮಹಾತ್ಮರ ಪರಿಸರದಲ್ಲಿ ನನ್ನ ತಾಯಿ ಲಿಂಗೈಕ್ಯ ಸರೋಜಾ ರುದ್ರಪ್ಪ ಪಟ್ಟಣ ಲಿಂಗೈಕ್ಯ ಶ್ರೀ ವೀರಭದ್ರಪ್ಪ ವಾಲಿ ಮತ್ತು ಲಿಂಗೈಕ್ಯ ಶ್ರೀಮತಿ ಚೆನ್ನವೀರವ್ವ ಅವರ ಉದರದಲ್ಲಿ ಜನಿಸಿದ ಹಿರಿಯ ಮಗಳು. ಐವತ್ತು ವರುಷದ ಹಿಂದೆ ನಾನು ಬಾಲಕನಾಗಿದ್ದಾಗ ನನ್ನ ಅಜ್ಜ ಲಿಂಗೈಕ್ಯ  ಶ್ರೀ ವೀರಭದ್ರಪ್ಪ ವಾಲಿ ಅವರು ನನಗೆ ನಿತ್ಯ ಸಂಜೆ  ರಾತ್ರಿ  ಕಥೆ ಹೇಳುತ್ತಿದ್ದರು ಅವರು ಹೇಳಿದ ಒಂದು ಸಹಜ ಪ್ರಕರಣದ ಭಾಗವನ್ನು ಇಲ್ಲಿ ಸ್ಮರಿಸುತ್ತೇನೆ. ಮುಳಗುಂದ ವ್ಯಾಪಾರಸ್ಥರು  ಒಮ್ಮೆ ಶ್ರೀ  ಪಂಚಾಕ್ಷರಿ ಗವಾಯಿಗಳನ್ನು   ಜಾತ್ರಾ ಮಹೋತ್ಸವಕ್ಕೆ ಮುಳಗುಂದಕ್ಕೆ ಕರೆಸಿದರಂತೆ ಕಾರ್ಯಕ್ರಮ ಮುಗಿದ ಮೇಲೆ ಶ್ರೀ   ಶ್ರೀ  ಪಂಚಾಕ್ಷರಿ ಗವಾಯಿಗಳು ತಾವು ತಂದ ಧೋತರ ಅಲ್ಲಿನವರು ಬೇರೆಯವರ ಧೋತರಗಳ ಜೊತೆಗೆ ಬೆರೆಸಿ ಇಟ್ಟಿದ್ದರಂತೆ ,ಇವರ ತೀಕ್ಷ್ಣತೆ ಪರೀಕ್ಷೆ ಮಾಡಲು, ಇಪ್ಪತ್ತು ದೋತುರಗಳಲ್ಲಿ ಶ್ರೀ  ಪಂಚಾಕ್ಷರಿ ಗವಾಯಿಗಳು ತಮ್ಮ ದೋತುರವನ್ನೇ ಆಯ್ಕೆ ಮಾಡಿಕೊಂಡರಂತೆ. ಅದೇ ರೀತಿ ಅವರ ಉಣ್ಣುವ ಗಂಗಾಳ ಮತ್ತು ಚರಿಗೆಯನ್ನು ಅವರು ಪತ್ತೆ ಹಚ್ಚಿ ಜನರಿಗೆ ಆಶ್ಚರ್ಯವನ್ನು   ಉಂಟು ಮಾಡುತ್ತಿದ್ದರಂತೆ ,ಇದನ್ನು ನನ್ನ ಅಜ್ಜ ಸ್ವತಹ ಕಣ್ಣಿಂದ  ಕಂಡ ದೃಶ್ಯವೆಂದರೆ ಶ್ರೀ  ಪಂಚಾಕ್ಷರಿ ಗವಾಯಿಗಳು ಎಷ್ಟು ತೀಕ್ಷ್ಣಮತಿಗಳಾಗಿದ್ದರು ಎಂದು ತಿಳಿಯುತ್ತದೆ. ಇಂತಹ ಅಪ್ರತಿಮ ಸಂಗೀತ ಸಾಮ್ರಾಟನ ಪರಿಚಯ ಮಾಡುವುದು ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ.  ಕರ್ನಾಟಕವು ಅದರಲ್ಲೂ ಉತ್ತರ ಕರ್ನಾಟಕವು ಸಂಗೀತ ಸಾಹಿತ್ಯ ದಿಗ್ಗಜರನ್ನು ನಾಡಿಗೆ ಸಮರ್ಪಿಸಿದೆ .ಅಂತಹ ಸಾಧಕರಲ್ಲಿ ನಮ್ಮ ಪಂಚಾಕ್ಷರಿ ಗವಾಯಿಗಳು. ಶ್ರೀ ಪಂಚಾಕ್ಷರ ಗವಾಯಿಗಳು  ಗದುಗಿನಲ್ಲಿರುವ ಪ್ರಸಿದ್ಧ ಸಂಗೀತ ಆಶ್ರಮವಾದ “ಶ್ರೀ ವೀರೇಶ್ವರ ಪುಣ್ಯಾಶ್ರಮ”ದ ಸಂಸ್ಥಾಪಕರು. ಇವರು ಜನಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ, ದಿನಾಂಕ: ೨, ಫೆಬ್ರುವರಿ ೧೮೯೨ರಂದು. ಇವರ ತಾಯಿ ನೀಲಮ್ಮ ಹಾಗು ತಂದೆ ಗುರುಪಾದಯ್ಯ ಚರಂತಿಮಠ. ಗದಿಗೆಯ್ಯ ಇವರ ಹುಟ್ಟು ಹೆಸರು. ಗದಿಗೆಯ್ಯ ಹಾಗು ಇವರ ಅಣ್ಣ ಗುರುಬಸಯ್ಯ ಇಬ್ಬರೂ ಹುಟ್ಟು ಕುರುಡರು. ಸ್ಥಳೀಯವಾಗಿ ಸಾಧ್ಯವಿದ್ದ ಸಂಗೀತ ಶಿಕ್ಷಣವನ್ನು ಪಡೆದಿದ್ದರು. ಒಮ್ಮೆ ಶ್ರೀ ಹಕ್ಕಲ ಬಸವೇಶ್ವರ ಜಾತ್ರೆಯಲ್ಲಿ ಹಾಡುತ್ತಿದ್ದ ಈ ಕುರುಡು ಬಾಲಕರ ಹಾಡು ಕೇಳಿದ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು ಈ ಎಳೆಯರನ್ನು ತಮ್ಮ ಉಡಿಯಲ್ಲಿ ಹಾಕಿಕೊಂಡರು.ಹಾನಗಲ್ ಕುಮಾರಸ್ವಾಮಿಗಳು ಇವರಿಗೆ ಸಂಗೀತ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು. ಸಂಗೀತ ಶಿಕ್ಷಣ ಅಣ್ಣತಮ್ಮಂದಿರಿಬ್ಬರಿಗೂ ಅನೇಕ ಗುರುಗಳಿಂದ ಸಂಗೀತ ಶಿಕ್ಷಣ ದೊರೆಯಿತು. ಶ್ರೀ ಕುಮಾರಸ್ವಾಮಿಗಳು ಹಳ್ಳಿಹಳ್ಳಿಗಳಲ್ಲಿ ಭಿಕ್ಷೆ ಎತ್ತಿ ನೆಲವಿಗಿಯಲ್ಲೊಂದು ಶಿವಯೋಗ ಮಂದಿರ ಸ್ಥಾಪಿಸಿದ್ದರು. ಅಲ್ಲಿ ಇತರ ಹುಡುಗರ ಜೊತೆಗೆ ಈ ಹುಡುಗರೂ ಸಹ ಸಂಗೀತಾಭ್ಯಾಸ ಮಾಡುತ್ತಿದ್ದಾಗ ಅಣ್ಣ ಗುರುಬಸಯ್ಯ ಕಾಲರಾ ರೋಗದಿಂದ ಮರಣವನ್ನಪ್ಪಿದ. ಗದಿಗೆಯ್ಯನಿಗೆ ಹದಿನೆಂಟು ವರ್ಷವಾದಾಗ ಮೈಸೂರಿನಲ್ಲಿ ಗೌರಿಶಂಕರ ಸ್ವಾಮಿಗಳಲ್ಲಿ ಕರ್ನಾಟಕ ಸಂಗೀತ ವಿದ್ಯಾಭ್ಯಾಸವಾಯಿತು. ನಾಲ್ಕು ವರ್ಷ ಮೈಸೂರಿನಲ್ಲಿ ಜೋಳಿಗೆ ಹಿಡಿದು ಹೊಟ್ಟೆ ತುಂಬಿಸಿಕೊಂಡ ಗದಿಗೆಯ್ಯನವರು, ಆ ಬಳಿಕ ಬಾಗಲುಕೋಟೆಯಲ್ಲಿ ನಡೆಯುತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಶ್ರೀ ಕುಮಾರಸ್ವಾಮಿಗಳಿಂದ “ಪಂಚಾಕ್ಷರಿ ಗವಾಯಿ” ಎಂದು ಉದ್ಘೋಷಿತರಾದರು. ಆ ಬಳಿಕ ಸಹ ಮತ್ತೆ ನಾಲ್ಕು ವರ್ಷ ಹಿಂದುಸ್ತಾನಿ ಸಂಗೀತವನ್ನು ಅಭ್ಯಸಿಸಿ ಉಭಯ ಸಂಗೀತ ಪಂಡಿತರಾದರು. ಸಂಗೀತದ ಮೂಲಕವೆ ಸಮಾಜಸೇವೆ ಮಾಡಲು ಬಯಸಿದ್ದ ಪಂಚಾಕ್ಷರಿ ಗವಾಯಿಗಳು ಕಂಚಗಲ್ ಬಿದಿರೆ ಗ್ರಾಮದ ಪ್ರಭುಕುಮಾರ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಆಧ್ಯಾತ್ಮಮಾರ್ಗದಲ್ಲೂ ಮುನ್ನಡೆದರು. *ಸಂಗೀತ ಪ್ರಚಾರ* _________________ ಪಂಚಾಕ್ಷರಿ ಗವಾಯಿಗಳು ನಾಡಿನಲ್ಲೆಲ್ಲ ಸಂಚರಿಸುತ್ತ ಒಂದು ಸಂಚಾರೀ ಪಾಠಶಾಲೆಯನ್ನು ಪ್ರಾರಂಭಿಸಿದರು. ೧೯೧೪ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಕೊಪ್ಪದಲ್ಲಿ ಶಿವಯೋಗ ಮಂದಿರದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳವರು ಬಸವ ಜಯ೦ತಿಯ೦ದು ಸ್ಥಾಪಿಸಿಕೊಟ್ಟರು. ಶಾಖೆಯಾಗಿ ಸಂಗೀತ ಶಾಲೆಯೊಂದನ್ನು ಪ್ರಾರಂಭಿಸಿದರು. ಈ ಸಂಗೀತಶಾಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಗಳನ್ನು ಸಹ ಹೇಳಿಕೊಡಲಾಗುತ್ತಿತ್ತು. ಇವರ ಶಿಷ್ಯರಲ್ಲಿ ಇವರ ಉತ್ತರಾಧಿಕಾರಿಯಾಗಿ ದೊರೆತ, ಪ್ರಸಿದ್ಧ ಗವಾಯಿ ಪುಟ್ಟರಾಜರೂ ಸಹ ಕುರುಡರೇ! ಸಂಗೀತಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿಯೊಂದನ್ನು ಪ್ರಾರಂಭಿಸಿ ಕೈಸುಟ್ಟುಕೊಂಡದ್ದೂ ಆಯಿತು. ಈ ನಡುವೆ ೧೯೩೦ರಲ್ಲಿ ಪಂಚಾಕ್ಷರಿ ಗವಾಯಿಗಳ ರೂವಾರಿಯಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ಲಿಂಗೈಕ್ಯರಾದರು. ಇದೇ ಸಮಯದಲ್ಲಿ ಬರಗಾಲ ಬಿದ್ದದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಗ ಮುಂದೆ ಬಂದು ನೆರವು ನೀಡಿದವರು ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀಡಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು. *ಕನ್ನಡ ಪ್ರೇಮಿ ____________ ಎಚ್.ಎಮ್.ವಿ. ಕಂಪನಿಯವರು ಖ್ಯಾತ ಕಲಾವಿದರ ಗಾನಮುದ್ರಿಕೆಗಳನ್ನು ಹೊರತರುವ ಸಲುವಾಗಿ ಅನೇಕ ಕಲಾವಿದರನ್ನು ಮುಂಬಯಿಗೆ ಕರೆಸಿದ್ದರು. ಕನ್ನಡದಲ್ಲಿಯೇ ಗಾಯನ ಮಾಡುವದಾಗಿ ಹಟ ಮಾಡಿದ ಪಂಚಾಕ್ಷರಿ ಗವಾಯಿಗಳು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಾಗ, ಕಂಪನಿಯವರು ಗವಾಯಿಗಳ ಆಗ್ರಹಕ್ಕೆ ಮಣಿಯಲೇ ಬೇಕಾಯಿತು. *ಸ್ವದೇಶಾಭಿಮಾನಿ ಗ್ರಾಮ್ಯ ಸಂಸ್ಕೃತಿ* —————————————— ಪಂಚಾಕ್ಷರಿ ಗವಾಯಿಗಳು ಖಾದಿಯನ್ನೇ ತೊಡುತ್ತಿದ್ದರು. ಉದರ ರೋಗದಿಂದ ಬಳಲುತ್ತಿರುವಾಗ ಆಯುರ್ವೇದದ ಹೊರತಾಗಿ, ಇಂಗ್ಲಿಷ್ ವೈದ್ಯಕೀಯಕ್ಕೆ ಗವಾಯಿಗಳು ಒಪ್ಪಿಕೊಳ್ಳಲಿಲ್ಲ. ಕೊನೆಗೂ ಇದೇ ರೋಗಕ್ಕೆ ಗವಾಯಿಗಳು ಬಲಿಯಾದರು. *ಲಿಂಗೈಕ್ಯ* ——————- ಸುಮಾರು ನಾಲ್ಕು ವರ್ಷಗಳವರೆಗೆ ಗವಾಯಿಗಳು ಉದರ ರೋಗದಿಂದ ಬಳಲಿದರು. ಕೊನೆಗೆ ದಿನಾಂಕ ೧೧, ಜೂನ್ ೧೯೪೪ರಂದು ಪಂಚಾಕ್ಷರ ಗವಾಯಿಗಳು ವಿಶ್ವಸಂಗೀತದಲ್ಲಿ ಲೀನರಾದರು ಮತ್ತು ನಿಧನರಾದರು. ತಮ್ಮ ಜೀವಿತ ಐವತ್ತೆರಡು ವರುಷಗಳಲ್ಲಿ ಸಂಗೀತ ಸಾಮ್ರಾಜ್ಯವನ್ನು ಕಟ್ಟಿದರು. ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ,”ಸಂಚಾರಿ ಸಂಗೀತ ಸಾಮ್ರಾಟ  ಶ್ರೀ  ಪಂಚಾಕ್ಷರಿ ಗವಾಯಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ

ಗಾದೆ ಮಾತು-ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ‌ ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಗಾದೆ ಸಂಗಾತಿ ಗಾದೆ ವಿಶ್ಲೇಷಣೆ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ‌ ​ಕನ್ನಡ ಜನಪದ ಸಾಹಿತ್ಯವು ಜೀವನದ ದೊಡ್ಡ ಸತ್ಯಗಳನ್ನು ಅತ್ಯಂತ ಸರಳ ರೂಪದಲ್ಲಿ ನಮಗೆ ಉಣಬಡಿಸುತ್ತದೆ. ಇಂತಹ ಮುತ್ತಿನಂತಹ ಗಾದೆಗಳಲ್ಲಿ “ಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ” ಎಂಬುದು ಪ್ರಮುಖವಾದ ಮಾತು.ನಮ್ಮೆಲ್ಲರಿಗೂ ನಮ್ಮದೇ ಆದ ಒಂದು ಸ್ವಂತಿಕೆಯ ವ್ಯಕ್ತಿತ್ವವಿದೆ.ನಮ್ಮತನ ಎಂಬುದು ನಮ್ಮೊಳಗೆ ಅಡಗಿದ್ದರೂ ಸಹ ಅದನ್ನು ಸದ್ವಿನಿಯೋಗ ಮಾಡಿಕೊಳ್ಳಲಾಗದೆ,ನಾವು ನಾವೇ ಸಣ್ಣದಿರುವ ವಿಷಯವನ್ನು ಬಹು ಗಂಭೀರವಾಗಿ ತೆಗೆದುಕೊಂಡು ಎಲ್ಲೋ ಕಳೆದು ಹೋದೆವು ಎಂದು ಗೋಳಾಡಿಬಿಡುತ್ತೇವೆ.ನಮ್ಮಂತೆ ಪ್ರಾಣಿಗಳು ಬದುಕುತ್ತವೆಯೆ?ಅದಕ್ಕೆ ಎರಡು ಮಾತಿಲ್ಲ.,ಹಠವಿಲ್ಲ,ಭರದಲ್ಲಿ ಬದುಕಬೇಕೆಂಬುದಿಲ್ಲ,ಉಲ್ಟಾ ಪಲ್ಟಾ ಮಾಡಬೇಕೆಂಬುದಿಲ್ಲ,ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾಗಿ ಬಾಳಬೇಕೆಂಬುದಿಲ್ಲ.ಅದರ ಇಚ್ಛಾಶಕ್ತಿ ಏನೆಂದರೆ ಹೊಟ್ಟೆ ತುಂಬಿಸಿಕೊಳ್ಳುವುದು ಮಾತ್ರವಾಗಿದೆ.ಹೊಟ್ಟೆ ತುಂಬಿದರೆ ಸಾಕು ಮಲಗುವುದೆ ಅದರ ಕೆಲಸ.ಆದರೆ ಈ ಮನುಷ್ಯರಾದ ನಾವುಗಳು ಪರಿವರ್ತನೆಯನ್ನು ಮರೆತು, ಎಂಥ ಕೆಲಸ ಮಾಡಿಬಿಟ್ಟರು?,ಅದೇಕೆ ಹಾಗೆ ಅವರು ಮಾಡಬೇಕಿತ್ತು?, ಮನೆತನವೆ ಹಾಳು ಮಾಡಲು ಅನ್ಯಾಯ ಮಾಡಿದರು?;ಹೀಗೆಲ್ಲಾ ಬೈದಾಡಿ,ರೇಗಾಡಿಬಿಡುತ್ತೇವೆ.ಅವರ ತಪ್ಪಲ್ಲ.ಮೇಲ್ನೋಟಕ್ಕೆ ಕೆಲವು ನಿರ್ಧಾರಗಳು ನಮಗೆ ಹಾಗೆ ಕಾಣುವುದು ಸತ್ಯ.ಆದರೆ ನಿಜವಾದ ಸಂಗತಿ ಹಾಗಿರುವುದಿಲ್ಲ.ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಕೆಲವೊಮ್ಮೆ ಕೆಲ ಕಹಿ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತೇವೆ.ಈ ಗಾದೆಯ ಮಾತಿನಂತೆ,ಇಲ್ಲಿ ‘ಆನಿ’ ಎಂದರೆ ಆನೆ ಅಥವಾ ದೊಡ್ಡ ವಸ್ತು.ಬಹುದೊಡ್ಡದಾದ ಮೊತ್ತ ಎಂದರ್ಥ. ಈ ಗಾದೆಯು ಮನುಷ್ಯನ ಜಿಪುಣತನ, ಆದ್ಯತೆಗಳ ತಪ್ಪು ನಿರ್ಧಾರ ಮತ್ತು ವಿವೇಕಹೀನತೆಯನ್ನು ಮಾರ್ಮಿಕವಾಗಿ ಟೀಕಿಸುತ್ತದೆ. ​ಒಬ್ಬ ವ್ಯಕ್ತಿ ಸಾವಿರಾರು ರೂಪಾಯಿ ಬೆಲೆಬಾಳುವ ಆನೆಯನ್ನೇ ಕಳೆದುಕೊಂಡಾಗ ಅಥವಾ ತನ್ನ ಮನಸಾರೆ ದಾನ ಮಾಡುತನಕ ಸುಮ್ಮನಿದ್ದು, ಕೇವಲ ಒಂದು ಪುಕ್ಕಟೆ ಸಿಗುವ ಅದರ ಕೊರಳಿಗೆ ಕಟ್ಟಿದ ಗಂಟೆಗೆ ಕ್ಯಾತೆ ತೆಗೆಯುತ್ತಾನೆ ಎಂದರೆ ಆತನು ಧರ್ಮದಿಂದ ದಾನ ಮಾಡಿಲ್ಲ. ಅಥವಾ ಅತ್ಯಂತ ಕಡಿಮೆ ಬೆಲೆಯ ಆನೆಯ ‘ಬಾಲ’ದ ವಿಷಯಕ್ಕೆ ಬಂದಾಗ ಜಾಣತನ (ಸ್ಯಾಣೇತನ) ಪ್ರದರ್ಶಿಸುವುದು ಅಥವಾ ಲೆಕ್ಕಾಚಾರ ಮಾಡುವುದು ಎಷ್ಟು ಮೂರ್ಖತನ ಎಂಬುದು ಇದರ ನೇರ ಅರ್ಥ. ಅಂದರೆ, ದೊಡ್ಡ ನಷ್ಟ ಅಥವಾ ದೊಡ್ಡ ನಿರ್ಧಾರಗಳ ಮುಂದೆ ಕ್ಷುಲ್ಲಕ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ವ್ಯರ್ಥ.​ ಹಣಕಾಸು ಮತ್ತು ವ್ಯವಹಾರದ ವಿಷಯ ಬಂದಾಗನಾವು ಜೀವನದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಐಷಾರಾಮಿ ವಸ್ತುಗಳಿಗೆ ಅಥವಾ ಅನಗತ್ಯ ಖರ್ಚುಗಳಿಗೆ ಲಕ್ಕವಿಲ್ಲದಂತೆ ಸುರಿಯುತ್ತೇವೆ. ಆದರೆ ಹಲವು ಬಡ ವ್ಯಾಪಾರಿಗಳು ಮನೆ ಮುಂದೆ ತರಕಾರಿ ಮಾರುವವರ ಜೊತೆ, ಹಣ್ಣು ಹಂಪಲು ಮಾರುವವರ ಬಳಿ ತಕರಾರು,ಆಟಿಕೆ ಸಾಮಾನು ಮಾರುವವರ ಜೊತೆ ಒಂದು,ಎರಡು ರೂಪಾಯಿಗಳಿಗೆ ಚೌಕಾಸಿ ಮಾಡುತ್ತೇವೆ. ಆನೆಯಂತಹ ದೊಡ್ಡ ಖರ್ಚನ್ನು ಒಪ್ಪಿಕೊಂಡ ಮೇಲೆ, ಬಾಲದಂತಹ ಸಣ್ಣ ಮೊತ್ತಕ್ಕೆ ಜಾಣತನ ತೋರಿಸುವುದು ನಮ್ಮ ವ್ಯಕ್ತಿತ್ವದ ಸಣ್ಣತನವನ್ನು ತೋರಿಸುತ್ತದೆ. ದೊಡ್ಡ ಗುರಿಯನ್ನು ಹೊಂದಿದವರು ಸಣ್ಣಪುಟ್ಟ ನಷ್ಟಗಳಿಗೆ ಕುಗ್ಗಬಾರದು.ಸಂಬಂಧ ಮತ್ತು ಜೀವನದ ಮೌಲ್ಯಗಳಲ್ಲೂ ನಮ್ಮ ಮನಸ್ಸು ಹಾಗೆನೆ.ಒಂದು ಸುಂದರವಾದ ಸಂಬಂಧವನ್ನು ಉಳಿಸಿಕೊಳ್ಳಲು ನಾವು ಎಷ್ಟೋ ತ್ಯಾಗಗಳನ್ನು ಮಾಡಿರುತ್ತೇವೆ (ಇದು ಆನೆಯನ್ನು ಕೊಟ್ಟಂತೆ). ಆದರೆ, ಯಾವುದೋ ಒಂದು ಸಣ್ಣ ತಪ್ಪು ಅಥವಾ ಒಂದು ಮಾತಿನ ವಿಷಯಕ್ಕೆ ಜಗಳವಾಡಿ ಆ ಸಂಬಂಧವನ್ನೇ ಮುರಿದುಕೊಳ್ಳುತ್ತೇವೆ (ಇದು ಬಾಲಕ್ಕೆ ಜಾಣತನ ತೋರಿಸಿದಂತೆ). ಇಡೀ ಆನೆಯೇ ಹೋದ ಮೇಲೆ ಬಾಲದ ಬಗ್ಗೆ ಹಠ ಹಿಡಿಯುವುದು ಸಂಬಂಧಗಳಲ್ಲಿ ಬಿರುಕು ತರುತ್ತದೆ ಎಂಬುದ ಅರಿವಿಗೆ ಬರಬೇಕು.​ಸಮಯ ಮತ್ತು ಶ್ರಮದ ಪ್ರತಿಫಲದಲ್ಲೂ ಅಷ್ಟೆ.ಯಾರೋ..ಬಡವರು ಬೆಳಿಗ್ಗೆಯಿಂದ ಸಂಜೆಯವರೆಗೆ  ಹೊಟ್ಟೆಪಾಡಿಗಾಗಿ ಕೆಲಸ ಮಾಡಿರುತ್ತಾರೆ.ಅಂತವರಿಗೆ ತಕ್ಕ ಪ್ರತಿಫಲ ನೀಡುವುದಿಲ್ಲ.ಆದರೆ ಯಾರೋ ಇನ್ನೊಬ್ಬ ಗರ್ಧಿಗಮ್ಮತ್ತಿನಿಂದ, ಜಾಣತನದಿಂದ ಮಾತಾಡಿ ಅರ್ಧಗಂಟೆಯ ಕೆಲಸ ಮಾಡಿದರೆ ಹೆಚ್ಚು ಹಣ ನೀಡಿ ಬಿಡುತ್ತಾರೆ. ಜಿಪುಣತನ ಇರಬಾರದು ಅಂತಲ್ಲ.ಇರಬೇಕು ನಿಜ.ಎಷ್ಟಿರಬಾರದೆಂದರೆ  ದೀನತೆಯನ್ನು ಮರೆತು ಹೋಗುವಷ್ಟಿರಬಾರದು.ಒಂದು ದೊಡ್ಡ ಕೆಲಸವನ್ನು ಮಾಡುವಾಗ ಅಥವಾ ಸಾಧನೆಯ ಹಾದಿಯಲ್ಲಿರುವಾಗ ನಮಗೆ ದೊಡ್ಡ ಸವಾಲುಗಳು ಎದುರಾಗುವುದು ಸರ್ವೆ ಸಾಮಾನ್ಯ.ಆ ಸವಾಲುಗಳನ್ನು ಎದುರಿಸಿ ಗೆದ್ದ ನಂತರ, ತೀರಾ ಸಣ್ಣ ವಿಷಯಗಳಲ್ಲಿ ಸೋಲು ಒಪ್ಪಿಕೊಳ್ಳುವುದು ಅಥವಾ ಅಲ್ಲಿ ಜಿಪುಣತನ ತೋರುವುದು ಸರಿಯಲ್ಲ. ಮನೆ ಕಟ್ಟಲು ಲಕ್ಷಾಂತರ ಹಣ ಖರ್ಚು ಮಾಡಿ,ಗೃಹ ಪ್ರವೇಶದ ದಿನ ಉಂಡ ಎಲೆಗಳ ತೆಗೆದು,ಅಂಗಳದಲ್ಲಿ ಚೆಲ್ಲಿದ ಅನ್ನವನ್ನು ಬಳಿದು ಹಾಕುವವರ ಜೊತೆ ಅಷ್ಟೇ ತಗೊ…ಇಷ್ಟೆ ತಗೋ..ಎನ್ನಬಾರದು. ಕೇವಲ ಕೆಲವು ರೂಪಾಯಿಗಳ ಉಳಿತಾಯಕ್ಕಾಗಿ ಅವರನ್ನು ಬೈದಾಡುವುದು ಸಭ್ಯತೆಯಾಗಲಾರದು.ಶುಭವಾಗಲಿ ಎನ್ನದೆ ಹಾಳಾಗಿ ಹೋಗು ಎಂದು ಬೈದು ಹೋಗುತ್ತಾರಷ್ಟೆ.​ಇವತ್ತಿನ ದಿನ ನಾವು ದೃಶ್ಯ ಮಾಧ್ಯಮಗಳಲ್ಲಿ,ಸಾಮಾಜಿಕ ಜಾಲತಾಣದಲ್ಲಿ,ಕಣ್ಣೆದುರಿನ ​ಸಮಾಜದಲ್ಲಿ ನಿತ್ಯವೂ ನೋಡುತ್ತೇವೆ, ದೊಡ್ಡ ದೊಡ್ಡ ಹಗರಣಗಳು ರಾಜಕೀಯದಲ್ಲಿ ನಡೆದಾಗ ಮೌನವಾಗಿರುವ ವ್ಯವಸ್ಥೆ, ಒಬ್ಬ ಸಣ್ಣ ನೌಕರ ಸಾಮಾನ್ಯ ಮನುಷ್ಯ ಸಣ್ಣ ತಪ್ಪು ಮಾಡಿದಾಗ ಕಾನೂನಿನ ಎಲ್ಲಾ ಪಟ್ಟುಗಳನ್ನು ಬಳಸಿ ಆತನನ್ನು ಶಿಕ್ಷಿಸಲು ಇವತ್ತು ಮೋಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದು ಅಧಿಕಾರಿಗಳಿಗೆ ತೋರಿಸಿ  ಆತನಿಗೆ ಶೀಕ್ಷೆ  ಕೊಡಿಸಲು  ಮುಂದಾಗುತ್ತಾರೆ.ಆದರೆ ಅಧಿಕಾರಿ ದೊಡ್ಡ ಹಡಗವನ್ನೆ ನುಂಗಿದ್ದು ಗೊತ್ತಾಗುವುದಿಲ್ಲ.ಇದು ಇವತ್ತಿನ ನಮ್ಮ ವ್ಯವಸ್ಥೆ. “ಆನೆ ಹೋದರೂ ಪರವಾಗಿಲ್ಲ, ಬಾಲ ಮಾತ್ರ ಸಿಗಬೇಕು” ಎನ್ನುವ ವಿಪರ್ಯಾಸದಂತಿದೆ. ನಮ್ಮ ಜಾಣತನವು ದೊಡ್ಡ ಬದಲಾವಣೆಗಳಿಗೆ ಬಳಕೆಯಾಗಬೇಕೇ ಹೊರತು, ಸಣ್ಣತನದ ಪ್ರದರ್ಶನಕ್ಕಲ್ಲ.​​”ಸಣ್ಣ ವಿಷಯಗಳ ಬಗ್ಗೆ ಅತಿಯಾಗಿ ಯೋಚಿಸುವವರು ದೊಡ್ಡ ವಿಷಯಗಳಲ್ಲಿ ಸೋಲುತ್ತಾರೆ.” ಆನೆಯನ್ನು ನಿರ್ವಹಿಸುವ ಶಕ್ತಿ ಇರುವವನಿಗೆ ಬಾಲದ ಬಗ್ಗೆ ಚಿಂತೆ ಇರಬಾರದು. ನಮ್ಮ ಬದುಕು ಉದಾತ್ತವಾಗಿರಬೇಕು. ದೊಡ್ಡ ಗುರಿಯನ್ನು ತಲುಪುವ ಹಾದಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು ಅಥವಾ ನಷ್ಟಗಳು ಸಹಜ. ಅವುಗಳನ್ನು ನಿರ್ಲಕ್ಷಿಸಿ ಮುಂದೆ ಸಾಗುವುದೇ ನಿಜವಾದ ‘ಸ್ಯಾಣೇತನ’ (ಜಾಣತನ).​ಕೇವಲ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಬಾಲಕ್ಕೆ ಗಂಟು ಬೀಳುವ ಬದಲು, ಆನೆಯಂತಹ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಗಾದೆ ಮಾತು-ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ‌ ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »

You cannot copy content of this page

Scroll to Top