ಧಾರಾವಾಹಿ ಸಂಗಾತಿ ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಅಕ್ಕ ತಂಗಿಯರ ಪರಸ್ಪರ ಸಾಂತ್ವಾನದ ಕ್ಷಣಗಳು ಸುಮತಿಯ ಅನುಪಸ್ಥಿತಿಯಲ್ಲಿ ಮೂರನೇ ಮಗಳು ತಾಯಿಯ ಬದಲು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶಾಲೆ ಹೋಗುತ್ತಿದ್ದಳು. ತೋಟದ ಶಾಲೆಯ ಮಕ್ಕಳಿಗೆ ಯಾರಾದರೂ ಹೋಗಿ ಅಕ್ಷರಾಭ್ಯಾಸ ಮಾಡಿಸಲೇ ಬೇಕಾದ ಅನಿವಾರ್ಯತೆ ಇತ್ತು. ಒಂದು ದಿನ ಶಾಲೆಗೆ ರಜೆಯಾದರೂ ಕೂಡಾ ಮರುದಿನ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದರು. ಮಕ್ಕಳು ಶಾಲೆಗೆ ಬರದೇ ಹೋದರೆ ತಿಂಗಳ ಸಂಬಳ ಎಲ್ಲಿ ತಪ್ಪಿ ಹೋಗುವುದೋ ಎನ್ನುವ ಭಯ. ಸಂಬಳದಿಂದ ಬರುವ ಹಣದಲ್ಲಿ ತಿಂಗಳು ಪೂರ್ತಿ ಸುಮತಿಯ ಕುಟುಂಬ ಕಳೆಯಬೇಕಿತ್ತು. ಎರಡನೇ ಮಗಳು ಕೆಲಸ ಮಾಡುತ್ತಿದ್ದರೂ ಅವಳಿಗೆ ಬರುವ ಸಂಬಳವೂ ಕಡಿಮೆ ಇತ್ತು. ಈಗ ಸುಮತಿ ಆಸ್ಪತ್ರೆಯಲ್ಲಿ ಇರುವುದರಿಂದ ಖರ್ಚುಗಳು ಸ್ವಲ್ಪ ಹೆಚ್ಚಿತ್ತು. ಸರಕಾರಿ ಆಸ್ಪತ್ರೆ ಆದ್ದರಿಂದ ಅಲ್ಲಿ ವಾರ್ಡ್ ಗೆ ಹಣ ಕಟ್ಟುವ ಅಗತ್ಯ ಇರಲಿಲ್ಲ. ಮಾತ್ರೆ ಔಷಧಿಗಳು ಅಲ್ಲಿಯೇ ಸಿಗುತ್ತಿದ್ದವು. ಹೊರಗಿನಿಂದ ತರಬೇಕೆಂದಿದ್ದರೆ ಎಷ್ಟೇಟಿನ ಲೆಕ್ಕದಲ್ಲಿ ಮೆಡಿಕಲ್ ಸ್ಟೋರ್ ನಿಂದ ಖರೀದಿಸಬಹುದಿತ್ತು. ಆದರೆ ಇನ್ನುಳಿದ ಖರ್ಚನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಗುರುವಾರ ಶಾಲೆಗೆ ರಜೆ ಇದ್ದ ಕಾರಣ ಮೂರನೇ ಮಗಳು ಸುಮತಿಯನ್ನು ನೋಡಲು ಆಸ್ಪತ್ರೆಗೆ ಬಂದಳು. ಇನ್ನೂ ಹದಿನಾರರ ಹರೆಯದ ಹುಡುಗಿ ತೋಟದ ನಿರ್ಜನವಾದ ದಾರಿಯಲ್ಲಿ ಒಬ್ಬಳೇ ಶಾಲೆಗೆ ಹೋಗಿ ಬರಬೇಕಿತ್ತು. ಸುಮತಿ ಆಸ್ಪತ್ರೆಯಲ್ಲಿ ದಾಖಲಾದ್ದರಿಂದ ಮನೆಯಲ್ಲಿಯೂ ಕೂಡ ಅವಳೊಬ್ಬಳೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮತಿಯ ಮಕ್ಕಳು ಧೈರ್ಯವಂತರು. ಅನಿವಾರ್ಯತೆಗಳಲ್ಲಿ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳಲು ಶಕ್ತರಾಗಿದ್ದರು. ಜೀವನದಲ್ಲಿ ಅವರು ಅನುಭವಿಸಿದ ಕಷ್ಟಗಳು ಆವರಿಗೆ ವಿಧಿ ಒಡ್ಡಿರುವ ಸವಾಲುಗಳನ್ನು ಎದುರಿಸಿ ಬದುಕುವ ಪಾಠ ಕಲಿಸಿತ್ತು. ಆದರೂ ಭಯ, ಆತಂಕ, ಒಂಟಿತನ ಇವೆಲ್ಲವೂ ಕಾಡುತ್ತಿದ್ದರೂ ಆ ಹುಡುಗಿ ಧೈರ್ಯವಾಗಿ ಶಾಲೆಗೆ ಹೋಗಿ ಬಂದು ತಾಯಿಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಳು. ಇದೀಗ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ತಾಯಿಯನ್ನು ಕಂಡು ಅವಳ ಮನಸ್ಸು ವಿಹ್ವಲಗೊಂಡಿತು. ಕಾಲೇಜಿನಿಂದ ಆಸ್ಪತ್ರೆಗೆ ಬಂದಾಗ, ತನ್ನ ತಂಗಿ ತಾಯಿಯನ್ನು ನೋಡಲು ಬಂದಿರುವುದು ಅಕ್ಕನಿಗೆ ತಿಳಿದು ಸಂತೋಷದ ಜೊತೆಗೆ ದುಃಖವೂ ಆಯಿತು. ವೈದ್ಯರು ತಾಯಿಯ ಬಗ್ಗೆ ತಿಳಿಸಿರುವ ಸಂಗತಿಯನ್ನು ತಂಗಿಗೆ ಹೇಳಲೇ ಬೇಕಿತ್ತು. ಇವಳಿಗೆ ಅವಳು, ಅವಳಿಗೆ ಇವಳು ಸದಾ ಸಾಂತ್ವನ ನೀಡಿ, ಪರಸ್ಪರರನ್ನು ಕಾಳಜಿವಹಿಸುತ್ತಿದ್ದರು. ಇಬ್ಬರೂ ಅಕ್ಕತಂಗಿಯರಂತಿರದೇ ಆತ್ಮೀಯ ಗೆಳತಿಯರಂತೆ ಅನ್ಯೋನ್ಯವಾಗಿದ್ದರು. ಹಾಗಾಗಿ ಏನೇ ಇದ್ದರೂ ಮುಚ್ಚು ಮರೆ ಇಲ್ಲದೇ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೂ ಇಂತಹಾ ಖೇದಕರ ಸಂಗತಿಯನ್ನು ತಿಳಿಸಲು ಅಕ್ಕನಿಗೆ ಕಷ್ಟವಾಯಿತು…… ಇನ್ನು ನಮ್ಮ ತಾಯಿ ಬದುಕಿರುವುದು ಕೇವಲ ಆರು ತಿಂಗಳ ಮಾತ್ರ…. ಅಮ್ಮ ತುಂಬಾ ಗಂಭೀರ ಸ್ಥಿತಿಯಲ್ಲಿರುವಳು…. ಒಂದೊಂದು ದಿನ ಕಳೆಯುತ್ತಿದ್ದಂತೆ ಅವಳು ನಮ್ಮಿಂದ ದೂರವಾಗುತ್ತಿದ್ದಾಳೆ… ಎನ್ನುವ ಸತ್ಯವನ್ನು ನಾನು ಹೇಗೆ ತಂಗಿಗೆ ಹೇಳಲಿ? ಎಂಬ ಆಲೋಚನೆಯಲ್ಲಿ ಇದ್ದಳು. ಸುಮತಿಯ ಮೂರನೇ ಮಗಳು ತನ್ನ ತಾಯಿ ಮತ್ತು ಅಕ್ಕನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಳು. ತಾಯಿಯ ಮುಖದಲ್ಲಿ ಭರವಸೆಯ ಛಾಯೆ ಇದ್ದರೆ, ಅಕ್ಕನ ಮುಖದಲ್ಲಿ ನಿರಾಶೆಯ ಛಾಯೆ ಮನೆ ಮಾಡಿತ್ತು. ಸದಾ ಹಸನ್ಮುಖಿಯಾದ ಅಕ್ಕ ಗಂಭೀರವಾದ ವಿಚಾರವಿಲ್ಲದೆ ಹೀಗೆ ಚಿಂತಾಕ್ರಾಂತಳಾಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ತಂಗಿಗೆ ತಿಳಿದಿತ್ತು. ಆದರೂ ತಾಯಿಯ ಎದುರು ಏನನ್ನೂ ಕೇಳುವುದು ಸೂಕ್ತವಲ್ಲ ಎಂದುಕೊಂಡು…. “ಅಮ್ಮಾ ….ಈಗ ಹೇಗಿದ್ದೀಯಾ?….ಮೊನ್ನೆ ನೀನು ಮನೆಯಿಂದ ಹೊರಟಾಗ ತುಂಬಾ ದಣಿದಿದ್ದೆ…. ಈಗ ನಿನ್ನ ಆಯಾಸ ಕಡಿಮೆಯಾಯಿತೇ? ಮನೆಯಲ್ಲಿ ನೀನು ಆಗಾಗ ವಾಂತಿ ಮಾಡಿಕೊಳ್ಳುತ್ತಿದ್ದೆ…. ಈಗ ಹೇಗಿದೆ?…. ಊಟ ಸೇರುತಿದೆಯೇ?…. ಎಂದು ತಾಯಿಯನ್ನು ಕೇಳಿದಳು. ಅದಕ್ಕೆ ಸುಮತಿ ಈಗ ಸ್ವಲ್ಪ ಪರವಾಗಿಲ್ಲ ಮಗಳೇ….. ವೈದ್ಯರ ಮೇಲ್ನೋಟದಲ್ಲಿ, ದಾದಿಯರ ಶುಶ್ರೂಷೆಯಲ್ಲಿ ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ…. ಜೊತೆಗೆ ನಿಮ್ಮಿಬ್ಬರ ಪ್ರೀತಿ ಮತ್ತು ಕಾಳಜಿ ನನಗೆ ಔಷಧವಲ್ಲವೇ? ….. ಅದಿರಲಿ ನೀನು ಹೇಗಿದ್ದೀಯಾ?….. ನಿನ್ನನ್ನು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ನಾನು ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ ಅನಿವಾರ್ಯ ಪರಿಸ್ಥಿತಿ ಬಂತು…. ನನಗೆ ತಿಳಿದಿರಲಿಲ್ಲ ಹೀಗೆ ಕೂಡಲೇ ನನ್ನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡುತ್ತಾರೆ ಎಂಬುದು…. ವೈದ್ಯರು ಪರಿಶೀಲನೆ ನಡೆಸಿ ಮನೆಗೆ ಕಳುಹಿಸುತ್ತಾರೆ ಎಂದು ತಿಳಿದಿದ್ದೆ…. ಇಲ್ಲಿಗೆ ಬಂದ ಕೂಡಲೇ ನನ್ನನ್ನು ವೈದ್ಯರು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ, ಇಲ್ಲಿ ದಾಖಲಾಗುವಂತೆ ತಿಳಿಸಿದರು…. ನಿನ್ನ ಅಕ್ಕ ಕೂಡ ಕೂಡಲೇ ನನ್ನನ್ನು ಇಲ್ಲಿಗೆ ದಾಖಲಿಸಿದಳು”….. ಎಂದಾಗ,…. “….ಅಮ್ಮಾ ….ಅಕ್ಕ ಆ ದಿನವೇ ನನಗೆ ಈ ಎಲ್ಲಾ ವಿಷಯವನ್ನು ತಿಳಿಸಿದ್ದಾಳೆ…. ನೀನು ಹೆಚ್ಚು ಯೋಚಿಸಿ ಆಯಾಸ ಪಡಬೇಡ…. ನಾನು ಅಲ್ಲಿ ಚೆನ್ನಾಗಿದ್ದೇನೆ…. ಅಲ್ಲಿ ಸುತ್ತಲೂ ನಮಗೆ ಪರಿಚಿತರಲ್ಲವೇ ಇರುವುದು? ಹಾಗಾಗಿ ಯಾವುದೇ ತೊಂದರೆ ಇಲ್ಲ…. ದಿನವೂ ನಾನು ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಬರುತ್ತಿದ್ದೇನೆ…. ನೀನು ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಬೇಡ…. ನಿನ್ನ ಜೊತೆ ಸದಾ ನಾನು ಮತ್ತು ಅಕ್ಕ ಇದ್ದೇವೆ…. ಎಂದಳು. ಮಗಳ ಮಾತನ್ನು ಕೇಳಿದ ಸುಮತಿ ಎದ್ದು ಕುಳಿತು, ಇಬ್ಬರನ್ನೂ ತನ್ನ ಅಕ್ಕಪಕ್ಕದಲ್ಲಿ ಬಂದು ಕುಳಿತುಕೊಳ್ಳುವಂತೆ ಸೂಚಿಸಿದಳು.ತಾಯಿಯ ಅಣತಿಯಂತೆ ಇಬ್ಬರೂ ಅಕ್ಕಪಕ್ಕ ಬಂದು ಕುಳಿತರು. ಸುಮತಿ ಮಕ್ಕಳಿರಿಬ್ಬರನ್ನೂ ತೋಳಿಂದ ಬಳಸಿ …. ಮಕ್ಕಳೇ ಈ ಅಮ್ಮನನ್ನು ಕ್ಷಮಿಸಿ…. ಈ ವಯಸ್ಸಿಗೇ ನಿಮ್ಮನ್ನು ಹಲವಾರು ಕಷ್ಟಗಳಿಗೆ ದೂಡಿದೆ. ನನ್ನಿಂದ ನಿನ್ನ ವಿಧ್ಯಾಭ್ಯಾಸ ಕೂಡಾ ಮೊಟಕುಗೊಂಡಿತು…..ಎನ್ನುತ್ತಾ ಮೂರನೇ ಮಗಳ ಭುಜವನ್ನು ಹಿಡಿದು ತನ್ನಡೆಗೆ ಆನಿಸಿಕೊಂಡು ಸುಮತಿ ಹೇಳಿದಳು….. “ಅಮ್ಮಾ …..ಅದಕ್ಕಾಗಿ ನೀನೇನೂ ಬೇಸರಗೊಳ್ಳಬೇಡ…. ಎಸ್ ಎಸ್ ಎಲ್ ಸಿ ವರೆಗೂ ಓದಿದ್ದೇನೆ…. ಅಕ್ಕ ಈಗ ಪದವಿ ತರಗತಿಯಲ್ಲಿ ಓದುತ್ತಿದ್ದಾಳೆ…. ತಂಗಿ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾವು ವಿದ್ಯೆಯನ್ನು ಕರೆಯಲಿ ಎಂದು ನೀನು ಮಾಡಿದ ತ್ಯಾಗ ಅಷ್ಟಿಷ್ಟಲ್ಲ”…. ಎಂದು ಹೇಳುತ್ತಾ, ನೀನೇಕೆ ಹೀಗೆ ಮಂಕಾಗಿರುವೆ ಎಂಬಂತೆ ಪ್ರಶ್ನಾರ್ಥಕವಾಗಿಅಕ್ಕನನ್ನು ನೋಡಿದಳು. ಅವಳ ಮುಖವು ಮ್ಲಾನವಾಗಿತ್ತು. ಕಣ್ಣುಗಳಲ್ಲಿ ಕಂಡೂ ಕಾಣದಂತೆ ಕಣ್ಣೀರಿನ ಪಸೆಯಿತ್ತು. ರುಕ್ಮಿಣಿ ನಾಯರ್
ಧಾರಾವಾಹಿ ಸಂಗಾತಿ-22 ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಜನ ಸೇವೆಯೇ ಜೀವನದ ಧ್ಯೇಯವಾಗಿದ್ದ ಜಯದೇವಿ ತಾಯವರ ಜೀವನವು ತ್ಯಾಗ, ಸೇವೆ ಮತ್ತು ಮಾತೃತ್ವದ ಅದ್ಭುತ ಸಂಗಮ.ಅವರು ತಮ್ಮ ವೈಯಕ್ತಿಕ ಸುಖದುಃಖಗಳನ್ನು ಮರೆತು ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಿದ್ದರು. ಕುಟುಂಬದ ಜವಾಬ್ದಾರಿ ಹೊತ್ತು ಮಕ್ಕಳನ್ನು ಪ್ರೀತಿಯಿಂದ ಸಾಕಿ ಸಲಹುತ್ತಾ….. ಬಡವರು, ನಿರ್ಗತಿಕರು ಹಾಗೂ ಸಹಾಯದ ನಿರೀಕ್ಷೆಯಲ್ಲಿದ್ದ ಜನರಿಗೆ ಆಶಾಕಿರಣವಾಗಿದ್ದರು. ಪತಿಯ ವಿಯೋಗದ ನಂತರ ಜೀವನದ ಭಾರ ಇನ್ನಷ್ಟು ಹೆಚ್ಚಾದರೂ ಅವರು ಎಂದಿಗೂ ಕುಗ್ಗಲಿಲ್ಲ…ಐದು ಮಕ್ಕಳನ್ನು ಬೆಳೆಸಿ ಅವರಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಮತ್ತು ಜೀವನ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಮಕ್ಕಳ ಮನಸ್ಸುಗಳಲಿ ಪ್ರೀತಿ, ಕರುಣೆ ಮತ್ತು ಮಾನವೀಯತೆಯತೆ ತುಂಬಿಸಿದರು. ತಾಯಿಯವರ ಮನೆ ಎಂದರೆ…. ನೆರವು ಕೇಳಿ ಬರುವವರಿಗೆ ಸದಾ ತೆರೆದ ಬಾಗಿಲಾಗಿತ್ತು. ಹಸಿದವರಿಗೆ ಅನ್ನ, ಸಂಕಷ್ಟದಲ್ಲಿರುವವರಿಗೆ ಧೈರ್ಯ, ನಿರಾಶೆಯಲ್ಲಿರುವವರಿಗೆ ಆಶ್ವಾಸನೆ ನೀಡುವುದು ಅವರ ಸಹಜ ಗುಣವಾಗಿತ್ತು. ಊರಿನಲ್ಲಿ ಯಾರಿಗಾದರೂ ಕಷ್ಟ ಬಂದರೆ ಮೊದಲು ನೆನಪಾಗುತ್ತಿದ್ದ ಹೆಸರು ಜಯದೇವಿ ತಾಯಿಯವರದ್ದೇ.ತಮ್ಮ ಮಕ್ಕಳಿಗೆ ತಮ್ಮ ಜೀವನದ ಮೂಲಕವೇ ಪಾಠ ಕಲಿಸಿದರು. “ಮನುಷ್ಯನ ಬದುಕಿನ ನಿಜವಾದ ಅರ್ಥ ಇನ್ನೊಬ್ಬರ ಕಣ್ಣೀರು ಒರೆಸುವುದರಲ್ಲಿ ಇದೆ” ಎಂಬ ಸಂದೇಶವನ್ನು ತಮ್ಮ ನಡೆನುಡಿಗಳ ಮೂಲಕ ತೋರಿಸಿದರು. ಮಕ್ಕಳಲ್ಲು ಕೂಡ ಸೇವಾಭಾವವನ್ನು ಜೀವನದ ಮೌಲ್ಯವಾಗಿ ಅಳವಡಿಸಿದರು. ಅವರ ಜೀವನ ಶಕ್ತಿಯ, ಸಹನೆಯ ಮತ್ತು ನಿಸ್ವಾರ್ಥ ಪ್ರೀತಿಯ ಮಹಾಕಾವ್ಯ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಕುಟುಂಬ ಮತ್ತು ಸಮಾಜದ ಒಳಿತಿಗಾಗಿ ಅರ್ಪಿಸಿದ ಅವರು ನಿಜಕ್ಕೂ “ತಾಯಿ” ಎಂಬ ಪದಕ್ಕೆ ಅರ್ಥ ತುಂಬಿದ ಮಹನೀಯರು. *ಬೇಡಿಲ್ಲ ಫಲ ಪದವಿ |ಬೇಡಿಲ್ಲ ಸ್ಥಾನಮಾನಬೇಡಿಲ್ಲ ಮಂತ್ರಿ ತಂತ್ರಿಯಾಗಲು -ಜಯದೇವಿತಾಯಿ ಆದಳು ಕನ್ನಡದ* || ಎನ್ನುವಂತೆ ಕನ್ನಡದ ತಾಯಿಯಾಗಿ ನಿಸ್ಸಹಾಯಕರ ಬಂಧುವಾಗಿ,ತಮ್ಮ ಮಕ್ಕಳಿಗೆ ನೆರಳಾಗಿ ನಿಂತ ತಾಯಿ, ಸಮಾಜದ ನೋವಿಗೆ ಮದ್ದಾಗಿ ಬದುಕಿದ ತಾಯಿ!!!!, ಇನ್ನೂ ಜಯದೇವಿ ತಾಯಿಯವರ ಮೂರನೇ ಮಗ *ಬಸವರಾಜ* ಚಿಕ್ಕಂದಿನಿಂದಲೇ ಎಲ್ಲರಲ್ಲೂ ವಿಭಿನ್ನವಾಗಿದ್ದರು. ಮನೆಯಲ್ಲಿದ್ದ ಇತರ ಮಕ್ಕಳಂತಲ್ಲ…..ಮಗುವಾಗಿದ್ದಾಗ ಶಾಂತವಾಗಿ ಮಲಗಿರುತ್ತಿದ್ದರು ಹಸಿವೆ ಆದಾಗ ಮಾತ್ರ ಅಳುತ್ತಿದ್ದರು ಹೀಗಾಗಿ ತಾಯಿಯವರಿಗೆ ಹೆಚ್ಚಾಗಿ ಮಗನ ಕಾಳಜಿ ಮಾಡದು ಬೇಕಾಗಿ ಬರಲಿಲ್ಲ ಅಂತ ಹೇಳುತಿದ್ದರು. ಡಾ. ಬಸವರಾಜ್ ಲಿಗಾಡಿ ಮಧ್ಯದಲ್ಲಿ ಲಲ್ಲೇಶ್ವರಿ ತಾಯಿ, ಬಸವರಾಜರ ಧರ್ಮಪತ್ನಿ ಡಾ. ಮಧುಮಾಲ ಇತರರಂತೆ ಗಲಾಟೆ, ಹಠ, ಆಟ-ಪಾಟಗಳಲ್ಲಿ ಮುಳುಗದೆ ಶಾಂತವಾಗಿದ್ದರು. ಅವರ ಕಣ್ಣುಗಳಲ್ಲಿ ಒಂದು ವಿಚಿತ್ರ ಶಾಂತಿ ಇತ್ತು. ಮುಖದಲ್ಲಿ ಸದಾ ಮೃದುವಾದ ನಗು. ತಾಯಿಯವರು ಎಷ್ಟೇ ದುಃಖದಲ್ಲಿದ್ದರೂ ಬಸವರಾಜನ ಆ ಶಾಂತ ವದನವನ್ನು ನೋಡಿದ ಕ್ಷಣ ಮನಸ್ಸಿಗೆ ಒಂದು ನೆಮ್ಮದಿಗೆ ಇಳಿಯುತ್ತಿದ್ದರು. ಮನೆಯಲ್ಲಿ ಯಾರಿಗಾದರೂ ನೋವಾದರೆ ಮೊದಲಿಗೆ ಓಡಿ ಹೋಗಿ “ಏನಾಯ್ತು?” ಎಂದು ಕೇಳುವ ಕರುಣೆ ಅವರೋಳಗೆ ಬೆಳೆದಿತ್ತು. ಚಿಕ್ಕವರಿದ್ದಾಗಲೇ “ನಾನು ದೊಡ್ಡವನಾದ ಮೇಲೆ ಡಾಕ್ಟರ್ ಆಗಬೇಕು… ನೋವಿನಲ್ಲಿರುವ ಮಕ್ಕಳನ್ನು ಉಳಿಸಬೇಕು…” ಎಂದು ತಾಯಿಯವರ ಬಳಿ ಹೇಳುತ್ತಿದ್ದ. ಅವರ ಆಟಿಕೆಯ ಸಾಮಾನುಗಳೆಂದರೆ ಇಂಜೆಕ್ಷನ್ ತೆತಸ್ಕೋಪ್ಗಳೇ ಆಗಿದ್ದವು ಅಂತ ತಾಯಿಯವರು ಹೇಳುತ್ತಿದ್ದರು.ನಾವು ಬಯಸಿದ್ದನ್ನೇ ಮುಂದೆ ಆಗುತ್ತೇವೆ ಅನ್ನುವದು ಬಲು ಸತ್ಯ ಎನ್ನುವರು!!…..ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕತೆಯಿಂದಾಗಲಿ ನಾವು ಏನನ್ನು ಬಯಸುತ್ತೇವೋ ಜೀವನದಲ್ಲಿ ಅದೇ ಆಗುವದು ಅನ್ನುವ ಸ್ಥಿತಿ ಗತಿಗಳ ಬಗ್ಗೆ ಹೇಳುಲು.. ಈ ಉದಾಹರಣೆಯನ್ನು ಹೇಳುತ್ತಿದ್ದರು. ಬಸವರಾಜರು ಬೆಳೆದಂತೆ , ವೈದ್ಯಕೀಯ ಶಿಕ್ಷಣಕ್ಕೆ ಸೇರಿದರು..ಆ ದಿನ ತಾಯಿಯವರು ಸಂತೋಷದಿಂದ “ನನ್ನ ಮಗ ಇನ್ನು ಜೀವ ಉಳಿಸುವ ದೇವರ ಕೈ ಆಗ್ತಾನೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಡಾ. ಬಸವರಾಜರ ಇನ್ನೋರ್ವ ಪತ್ನಿ ಮಧ್ಯದಲ್ಲಿ ಶೈಲಜಾ ಮುಂದೆ ಬಸವರಾಜ ಮಕ್ಕಳು ಆಗದವರಿಗೆ ಉಪಚಾರವನ್ನು ಮಾಡಲಾರಂಭಿಸಿದರು. ಬಂಜೆತನ ನಿವಾರಣೆ ತಜ್ಞರಾದರು. *ನುಡಿಗಳ ಸ್ಮರಿಸುವೆ| ನಡೆಯಲಿ ಅಳವಡಿಸಿ ಎಡವಿದರೆ ಕೈಹಿಡಿದೆತ್ತು – ಹಡೆದವ್ವದಡೆಗೆ ಕರೆದೊಯ್ಯೇ ಮಗುವಿಗೆ*||ಎನ್ನುವ ಮನೋಭಾವವನ್ನು ಬಸವರಾಜರು ಹೊಂದಿದ್ದರುಅಂತೇಯೇ ಜಯದೇವಿ ತಾಯಿಯವರ ವೃದ್ಧಾಪ್ಯದಲ್ಲಿ ಬಸವರಾಜರು ನೆರಳಾಗಿ ನಿಂತರು. ತಾಯಿಯವರಿಗೆ ನೋವಾಗದಂತೆ ಪ್ರತಿಯೊಂದು ಹೆಜ್ಜೆಯಲ್ಲೂ ಕಾಳಜಿ ವಹಿಸಿದರು. ರಾತ್ರಿ ಎಷ್ಟೇ ಕೆಲಸ ಇದ್ದರೂ ತಾಯಿಯ ಕೋಣೆಗೆ ಹೋಗಿ “ಅಮ್ಮ ಆರೋಗ್ಯ ಹೇಗಿದೆ?” ಎಂದು ಕೇಳದೇ ನಿದ್ರೆ ಮಾಡುತ್ತಿರಲಿಲ್ಲ. *ಹೊತ್ತು ಇಳಿಯುತಿದ್ದಂತೆ |ಗೊತ್ತು ಗುರಿಕಾಣು ಮತ್ತೆ ಹುಟ್ಟಿ ಬರದು- ಜನುಮಹೆತ್ತವ್ವನ ಬಿಡದೆ ಜಪಿಸು* ||ಎನ್ನುವಂತೆ ತಾಯಿಯವರ ಕೊನೆಯ ದಿನಗಳಲ್ಲಿಯೂ ಬಸವರಾಜ ಅವರ ಕೈ ಹಿಡಿದುಕೊಂಡೇ ಇದ್ದರು. ಮಗನ ಆ ಮಮತೆಯ ಸ್ಪರ್ಶದಲ್ಲಿ ಜಯದೇವಿ ತಾಯಿಯವರು ತಮ್ಮ ಜೀವನದ ಎಲ್ಲಾ ಹೋರಾಟಗಳಿಗೂ ಅರ್ಥ ಸಿಕ್ಕಂತಾಗಿತ್ತು. *ತಾಯಿಯೇ ದೇವರು| ತಾಯಿಯೇ ಗುರಿತಾಯಿ ಕಲಸಿದರು ನಡೆ ನುಡಿ -ಚೆನ್ನಆಯಿತು ಅದು ಮುಕ್ತಿಯ ಧಾಮ *|| ಎನ್ನುವಂತೆ ಬದುಕಿದವರು ಲಲ್ಲೇಶ್ವರಿ ತಾಯಿಯವರು (ನನ್ನ ತಾಯಿ) ತಾಯಿಯವರ ನೆರಳಲಿ ಬದುಕಿದ ಬಾಳಿದ ಮಗಳ ಮಹಾ ಸೇವೆಯ ಬಗ್ಗೆ ಜಯದೇವಿ ತಾಯಿಯವರು ಎಲ್ಲರೆದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅವರ ಉಸಿರಾಗಿ, ಅವರ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ಬದುಕಿದವರು ಕೊನೆಯ ಮಗಳು ಲಲ್ಲೇಶ್ವರಿ ತಾಯಿ. ತಾಯಿಯಲ್ಲಿಯೇ ತಮ್ಮ ಲೋಕವನ್ನು ಕಂಡವರು. *ಅಂದಾಜು ಮೃದ ನುಡಿ |ಚಂದಾದ ಮುಖಮಂದಿರ ಮಂದಮತಿಗೆ -ಲಭಿಸಿ ಸೇವೆಮಾತಾಯಿ ಎಂದೆಂದೂ ಬಿಡೇನು ಪಾದ*|| ಎನ್ನುತ ಲಲ್ಲೇಶ್ವರಿಯವರಿಗೆ ತಾಯಿಯ ಒಂದು ಕಣ್ಣೋಟ ಸಾಕು, ಅವರ ಮನದ ಮಾತನ್ನು ಅರಿಯುತ್ತಿದ್ದರು. ಏನನ್ನೂ ಕೇಳುವ ಮುನ್ನವೇ ಅವರ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ತಾಯಿಯವರ ನಗು ಅವರ ಸಂತೋಷವಾಗಿತ್ತು; ಅವರ ನೋವು ಅವರ ಹೃದಯದ ನೋವಾಗಿತ್ತು. ಹಗಲು ರಾತ್ರಿ ಎನ್ನದೆ, ಸುಖ ದುಃಖ ಎನ್ನದೆ, ತಮ್ಮ ಬದುಕನ್ನೇ ತಾಯಿಯ ಸೇವೆಗೆ ಅರ್ಪಿಸಿಕೊಂಡಿದ್ದರು. *ತನು ಮನದ ಸೇವೆ| ಉಸಿರಿರುವ ತನಕಬೇಸರವಿಲ್ಲ ಕಿಂಚಿತ್ತ -ಹಡೆದವ್ವಉಸಿರು ಹಾಕಲಾರೆ ಕಡೆ ತನಕ* || ಎನ್ನುತ್ತಿದ್ದರು ನನ್ನ ತಾಯಿ ಲಲ್ಲೇಶ್ವರಿಯವರುತಾಯಿಯವರು. ಪ್ರತಿ ಘಳಿಗೆಯಲ್ಲೂ ಅವರ ಕೈ ಹಿಡಿದು ನಡೆಸುತ್ತಿದ್ದರು. ತಾಯಿಯವರು ಆಯಾಸಗೊಂಡಾಗ ತಮ್ಮ ಮಡಿಲನ್ನೇ ಆಸರೆಯನ್ನಾಗಿ ಮಾಡುತ್ತಿದ್ದರು. ತಾಯಿಯವರ ಆರೋಗ್ಯದಲ್ಲಿ ಏರಿಳಿತಗಳು ಬಂದಾಗ, ಅವರ ಕಣ್ಣಲ್ಲಿ ನಿದ್ರೆ ಇರುತ್ತಿರಲಿಲ್ಲ… ಒಂದೇ ಸಮನೆ ದೇವರಲ್ಲಿ ತಾಯಿಗೆ ನೋವು ಕೊಡಬೇಡವೆಂದು ಬೇಡಿಕೊಳ್ಳುತ್ತಿದ್ದರು. *ಅರೆ ನಿಮಿಷ ಬಿಟ್ಟಿಲ್ಲ |ನೆರಳಾಗಿ ಬೆಳೆದೆವುಬೇರೆ ಸ್ವತಂತ್ರ ಪಡೆದಿಲ್ಲ -ತಾಯಿಯಹರಣ ಒಂದು ದೇಹವೆರಡು*|| ಎನ್ನುವಂತೆ ಲಲ್ಲೇಶ್ವರಿಯವರು ತಾಯಿ ಇಲ್ಲದೆ ಒಂದು ಕ್ಷಣವೂ ಬದುಕಿರಲಾರಿ ಅನ್ನುವ ಸ್ಥಿತಿಯಲ್ಲಿ ಅವರು ಬದುಕುತ್ತಿದ್ದರು.ತಾಯಿಯವರ ಕೊನೆಯ ದಿನಗಳಲ್ಲಿ ಲಲ್ಲೇಶ್ವರಿ ತಾಯಿಯವರ ಸೇವೆ ಇನ್ನಷ್ಟು ಅಪೂರ್ವವಾಯಿತು. ಅವರು ಮಗಳಾಗಿ , ತಾಯಿಗೆ ತಾಯಿಯಾಗಿ ಮಗುವನ್ನು ನೋಡಿಕೊಳ್ಳುವಂತೆ ಮಮತೆಯಿಂದ ಜಯದೇವಿ ತಾಯಿಯವರನ್ನು ನೋಡಿಕೊಂಡರು. ಔಷಧಿ ನೀಡುವುದರಿಂದ ಹಿಡಿದು, ಊಟ ಮಾಡಿಸುವವರೆಗೂ, ರಾತ್ರಿ ನಿದ್ರೆಯಲ್ಲೂ ಎಚ್ಚರವಿದ್ದು ಅವರ ಆರೋಗ್ಯವನ್ನು ಗಮನಿಸುತ್ತಿದ್ದರು. *ಅಹೋರಾತ್ರಿ ನೆನೆದೆ| ಮಹಾತಾಯಿ ಸೇವೆಇಹಪರವ ಗೆಲಿದೆ ಕಟಾಕ್ಷ -ಸೇವೆಯಲಿಗೆಲಿದೆ ಜನನ ಮರಣವನು* ||ಎನ್ನುತ್ತಿದ್ದರು ಲಲ್ಲೇಶ್ವರಿಯವರು. ಇಲ್ಲಿ ಜಯದೇವಿ ತಾಯಿಯವರು ಒಂದು ಘಟನೆಯನ್ನು ಯಾವಾಗಲೂ ನೆನಪಿಸುತ್ತಿದ್ದರು . ಆಗ ಲಲ್ಲೇಶ್ವರಿ ಅವರಿಗೆ ಕೇವಲ ಮೂರು ಅಥವಾ ನಾಲ್ಕು ವರ್ಷಗಳಿರಬಹುದು…..ಜಯದೇವಿ ತಾಯಿಯವರ ಆರೋಗ್ಯ ಹುಷಾರಿಲ್ಲದೆ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆದ ದಿನಗಳಲ್ಲಿ ನಡೆದ ಈ ಘಟನೆ ಕೇಳಿದರೆ ಹೃದಯವೂ ಕರಗುತ್ತದೆ.ಆಸ್ಪತ್ರೆಯ ಹಾಸಿಗೆಯ ಮೇಲೆ ಜಯದೇವಿ ತಾಯಿಯವರು ಅಸಹನೀಯ ನೋವಿನಿಂದ ನರಳುತ್ತಿದ್ದರು. ದೇಹದ ಯಾತನೆ ಹೆಚ್ಚಾದಾಗ ಆ ಕ್ಷಣದಲ್ಲಿ ತಮ್ಮನ್ನು ತಾವು ಮರೆತು, ಪುಟ್ಟ ಮಗುವಿನಂತೆ,“ಅವ್ವಾ… ಅವ್ವಾ…”ಎಂದು ತಮ್ಮ ಜನ್ಮದಾತೆಯನ್ನು ಕರೆಯುತ್ತಿದ್ದರು. ಆ ಕರೆಯಲ್ಲಿ ನೋವಿತ್ತು, ಹಂಬಲವಿತ್ತು, ತಾಯಿಯ ಮಡಿಲಿಗಾಗಿ ಹಾತೊರೆಯುವ ಮಗುವಿನ ಹೃದಯವಿತ್ತು. ಆ ದೃಶ್ಯವನ್ನು ಕಂಡ ಲಲ್ಲೇಶ್ವರಿಯವರ ಹೃದಯ ಕರಗಿತು. ಆ ಕ್ಷಣದಲ್ಲಿ ತಾಯಿಯಾಗಿ ನಿಂತರು..ತನ್ನ ತಾಯಿಯ ಕಣ್ಣೀರನ್ನು ಒರೆಸುತ್ತಾ, ತಲೆಯನ್ನು ಮೃದುವಾಗಿ ಸವರುತ್ತಾ, ಮೂರು ವರ್ಷದ ಮಗುವೊಂದು ತನ್ನ ತಾಯಿಯನ್ನು ಸಮಾಧಾನಪಡಿಸಲು ಮುಗ್ಧತೆಯಿಂದ,“ಅವ್ವಾ, ಅಳಬೇಡ. ನಿನ್ನ ತಾಯಿ ಬರುವವರೆಗೂ ನಾನೇ ನಿನ್ನ ತಾಯಿಯಾಗಿರುತ್ತೇನೆ. ಏನು ಬೇಕಾದರೂ ನನಗೆ ಹೇಳು…”ಎಂದು ಹೇಳಿದರು.ಆ ಮಾತು ಕೇಳಿದಾಗ ಅಲ್ಲಿ ಇದ್ದವರ ಕಣ್ಣುಗಳಲ್ಲೂ ನೀರು ತುಂಬಿತು…. ಸಂಬಂಧಗಳೆಲ್ಲ ತಲೆಕೆಳಗಾಗಿದ್ದವು. ತಾಯಿ ಮಗುವಾಗಿದ್ದರು,ಮಗಳು ತಾಯಿಯಾಗಿದ್ದರು.ಲಲ್ಲೇಶ್ವರಿ ತಾಯಿಯವರು ತಮ್ಮ ಕೈಯಿಂದ ನೀರು ಕುಡಿಸಿದರು. ನೋವಿನಿಂದ ನಲುಗಿದ್ದ ತಾಯಿಯ ಬೆವರನ್ನು ಒರೆಸಿದ್ದರು. ಅಂದಿನದಿನದಿಂದ ಕೊನೆಯ ದಿನ ವರೆಗೂ ತಾಯಿಯಾಗಿಯೇ ಅವರು ಜಯದೇವಿ ತಾಯಿಯವರಿಗೆ ಆಸರೆಯಾದರು.ಅವರ ಪ್ರತಿಯೊಂದು ಸ್ಪರ್ಶದಲ್ಲೂ ಮಮತೆಯಿರುತಿತ್ತು.ಪ್ರತಿಯೊಂದು ಮಾತಿನಲ್ಲೂ ಧೈರ್ಯವಿತ್ತು, ಸೇವೆಯಲ್ಲೂ ಭಕ್ತಿಯಿತ್ತು.ಒಂದು ಸಮಯದಲಿ ಜಯದೇವಿ ತಾಯಿಯವರು ಲಲ್ಲೇಶ್ವರಿಯನ್ನು ಮಡಿಲಲ್ಲಿ ಹೊತ್ತು ಬೆಳೆಸಿದ್ದರು. ಈಗ ಕಾಲಚಕ್ರ ತಿರುಗಿ, ಲಲ್ಲೇಶ್ವರಿಯವರೇ ಜಯದೇವಿ ತಾಯಿಯವರನ್ನು ಮಮತೆಯ ಮಡಿಲಲ್ಲಿ ಹೊತ್ತುಕೊಂಡಿದ್ದರು. *ತನು ಸವಿಸಿ ಸೇವೆಯಲ್ಲಿ| ಮನನಿಲಿಸಿ ಧ್ಯಾನದಿ ತನುಮನ ಒಂದಾಗಿ ದುಡಿಸಿದೆ -ನನ್ನವ್ವನಾನೆಂಬುದು ಅಳಿದು ನೀನಾದೆ*|| ತಾಯಿಯ ನೋವನ್ನು ತಮ್ಮ ನೋವನ್ನಾಗಿ, ತಾಯಿಯ ಕಣ್ಣೀರನ್ನು ತಮ್ಮ ಕಣ್ಣೀರನ್ನಾಗಿ, ಪ್ರತಿ ಉಸಿರಿನ ಪ್ರಾರ್ಥನೆಯಾದರು. *ಕಡೆತನ ಭಂಗ |ಬರದೇ ಅಡಿಗಡಿಗೆ ಎಚ್ಚರಬಿಡದಂತೆ ತವ ಸೇವೆ -ನನ್ನವ್ವಮೂಡಿಗೆ ಧರಿಸಿರಿ ತವ ಪಾದ*|| ಜನ್ಮ ನೀಡಿದ ತಾಯಿಗೆ ಮರಳಿ ತಾಯಿಯಾಗುವ ಭಾಗ್ಯ ಕೆಲವೇ ಆತ್ಮಗಳಿಗೆ ಸಿಗುತ್ತದೆ. ಅಪರೂಪದ ಭಾಗ್ಯವನ್ನು ಲಲ್ಲೇಶ್ವರಿ ತಾಯಿಯವರು ತಮ್ಮ ಪ್ರೀತಿ, ಸೇವೆ ಮತ್ತು ತ್ಯಾಗದ ಮೂಲಕ ಸಾರ್ಥಕಗೊಳಿಸಿದರು. ಜಯದೇವಿ ತಾಯಿಯವರ ಕೊನೆಯ ದಿನಗಳಲ್ಲಿ ಮಮತೆಯ ಮೂರ್ತಿ, ಸೇವೆಯ ಮಗಳಾಗಿ, ತಾಯಿಯ ಬದುಕಿನ ಆಶ್ರಯವಾಗಿದ್ದರು. ಅವರ ಜೀವನವನ್ನು ನೋಡಿದಾಗ, “ಮಗಳು ಎಂದರೆ ಕೇವಲ ಜನ್ಮ ನೀಡಿದ ಸಂತಾನವಲ್ಲ….ತಾಯಿಯ ಹೃದಯದ ತುಂಡು” ಎಂಬ ಮಾತು ನೆನಪಾಗುತ್ತದೆ.ತಾಯಿಯವರ ಜೀವನದ ಕೊನೆಯ ಕ್ಷಣಗಳಲ್ಲೂ ಲಲ್ಲೇಶ್ವರಿ ತಾಯಿಯವರ ಕಾಳಜಿ ಮತ್ತು ಸೇವೆ ಗಂಗೆಯಂತೆ ನಿರಂತರವಾಗಿ ಹರಿಯುತ್ತಿತ್ತು… ಅಪಾರ ಪ್ರೀತಿ, ಭಕ್ತಿ ಮತ್ತು ಕೃತಜ್ಞತೆಯಿಂದ ಮೂಡಿದ ಅಮೃತಧಾರೆ.*ನೀನಿಲ್ಲದ ತಾಣ |ಇಲ್ಲ ಇನ್ನೆಲ್ಲಿನೀನೆ ತುಳುಕಿರುವೆ ಒಳ ಹೊರಗೆ -ತಾಯವ್ವನಾನು ನೀನು ಬೆರೆತು ಒಂದಾಗಿ*|| ಎನ್ನುವಂತೆ ಜಯದೇವಿ ತಾಯಿಯವರು ಮತ್ತು ಲಲ್ಲೇಶ್ವರಿ ತಾಯಿಯವರ ನಡುವಿನ ಬಾಂಧವ್ಯ ಸಾಮಾನ್ಯ ತಾಯಿಮಗಳ ಸಂಬಂಧವಾಗಿರಲಿಲ್ಲ. ಅದು ಎರಡು ದೇಹಗಳಲ್ಲಿ ನೆಲೆಸಿದ್ದ ಒಂದೇ ಆತ್ಮದ ಪ್ರೀತಿಯಾಗಿತ್ತು. ಕೊನೆಯ ದಿನಗಳಲ್ಲಿ ಜಯದೇವಿ ತಾಯಿಯವರ ಆರೋಗ್ಯ ಹದಗೆಟ್ಟ ದಿನಗಳಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಅವರ ಹತ್ತಿರದವರು ಒಂದು ವಿಷಯವನ್ನು ಗಮನಿಸಿದ್ದರು. ಲಲ್ಲೇಶ್ವರಿ ತಾಯಿಯವರ ಜೀವನವೇ ಜಯದೇವಿ ತಾಯಿಯವರ ಸುತ್ತ ಸುತ್ತುತ್ತಿತ್ತು. .ಆ ಕಾರಣದಿಂದಲೇ ತಾಯಿಯವರ ಸ್ಥಿತಿಯನ್ನು ಕಂಡ ವೈದ್ಯರು ಕೂಡ ಒಂದು ತುರ್ತು ಸಭೆ ಕರೆದು“ತಾಯಿಯವರ ಬಗ್ಗೆ ನಮ್ಮ ಕಾಳಜಿ ಎಷ್ಟಿದೆಯೋ, ಅಷ್ಟೇ ಕಾಳಜಿ ಲಲ್ಲೇಶ್ವರಿ ತಾಯಿಯವರ ಬಗ್ಗೆಯೂ ಇದೆ. ಇವರಿಬ್ಬರ ಪ್ರೀತಿ ಎಷ್ಟು ಆಳವಾಗಿದೆ ಎಂದರೆ, ತಾಯಿಯವರ ಅಗಲಿಕೆಯ ಆಘಾತವನ್ನು ಅವರು ಹೇಗೆ ತಡೆದುಕೊಳ್ಳುತ್ತಾರೆ ಎಂಬ ಚಿಂತೆ ನಮಗಿದೆ. ಅವರನ್ನು ಸ್ವಲ್ಪವಾದರೂ ಮಾನಸಿಕವಾಗಿ ಸಿದ್ಧಗೊಳಿಸಬೇಕು…”ಎಂದು ಮಾತನಾಡಿದ್ದರೆಂದು ಕೇಳಿದಾಗ ಅನೇಕರಿಗೆ ಆಶ್ಚರ್ಯವಾಗುತ್ತಿತ್ತು.ಅದು ಸಾಮಾನ್ಯ ಪ್ರೀತಿಯಲ್ಲ…ಅದು ಉಸಿರಿಗೂ ಉಸಿರಿನ ಸಂಬಂಧವಾಗಿತ್ತು.ಜಯದೇವಿ ತಾಯಿಯವರು ಕೂಡ ಈ ವಿಷಯವನ್ನು ಅರಿತಿದ್ದರು. ಆದ್ದರಿಂದ ಅವರು ಆಗಾಗ ಲಲ್ಲೇಶ್ವರಿ ತಾಯಿಯವರನ್ನು ಕರೆದು ಪ್ರೀತಿಯಿಂದ,“ಮಗಳೇ, ನಾನು ಯಾವಾಗಲೂ ದೇಹದಲ್ಲಿ ಇರಲಾರೆ. ನಾನು ಹೋದ ಮೇಲೂ ನೀನು ಕುಗ್ಗಬಾರದು. ಗಟ್ಟಿಯಾಗಿ ನಿಲ್ಲಬೇಕು. ನಮ್ಮ ಪರಂಪರೆಯನ್ನು, ನಮ್ಮ ಮೌಲ್ಯಗಳನ್ನು, ನಮ್ಮ ಸೇವೆಯ ಮಾರ್ಗವನ್ನು ಮುಂದುವರಿಸಬೇಕು…”ಎಂದು ಹೇಳುತ್ತಿದ್ದರು.ಆದರೆ ಆ ಮಾತು ಕೇಳಿದ ಕೂಡಲೇ ಲಲ್ಲೇಶ್ವರಿ ತಾಯಿಯವರ ಮನಸ್ಸು ತಲ್ಲಣಗೊಳ್ಳುತ್ತಿತ್ತು.“ಅವ್ವಾ, ಆ ಮಾತು ಹೇಳಬೇಡ! ನೀನು ಇಲ್ಲದಿರುವುದನ್ನು ನಾನು
ಸಾವಿಲ್ಲದ ಶರಣರು ಮಾಲಿಕೆ- “ಕಾಯಕಯೋಗಿನಿ -ಕದಿರ ರೆಮ್ಮವ್ವೆ”, ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ “ಕಾಯಕಯೋಗಿನಿ -ಕದಿರ ರೆಮ್ಮವ್ವೆ”, ಕದಿರ ರೆಮ್ಮವ್ವೆ -ಅವಿರಳ ವಚನಕಾರ್ತೆ. ಅವಳು ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ವಚನ ಕ್ರಾಂತಿಯಲ್ಲಿ ಪಾಲ್ಗೊಂಡು ರಾಟಿಯಿಂದ ಕದಿರು ತೆಗೆದು ನೂಲುವ ಕಾಯಕದವಳಾಗಿದ್ದವಳು.ತೆಗೆದ ನೂಲನ್ನು ಮಾರಿ ಬಂದ ಹಣದಲ್ಲಿ ಗುರು ಲಿಂಗ ಜಂಗಮ ದಾಸೋಹ ಮಾಡಿ ಬದುಕಿದಳು..ಬಹುತೇಕರು ಈಕೆಯ ಕಾಲವನ್ನು ಬಸವಾದಿ ಪ್ರಮಥರ ಕಾಲವೆಂದು ನಿರ್ಣಯಿಸುತ್ತಾರೆ . ಡಾ ಎಲ್ ಬಸವರಾಜು ಅವರು ಇವಳ ವಚನದಲ್ಲಿ ಬರುವ “ಪರದಳ ವಿಭಾಡ” “ಗಜವೇಂಟೆಕಾರ ” ಎಂಬ ಪದಗಳನ್ನು ಗಮನಿಸಿ ಇವಳು ವಿಜಯನಗರದ 1430 ಕಾಲದ ವಚನಕಾರ್ತೆ ಎಂದು ತೀರ್ಮಾನಿಸುತ್ತಾರೆ. ಆದರೆ ಹರಿಹರ ತನ್ನ ರಗಳೆಯಲ್ಲಿ ಕದಿರ ರೆಮ್ಮವ್ವೆಯನ್ನು ಸ್ಮರಿಸಿದ್ದಾನೆ. ಪಾಲ್ಗುರಿಕೆ ಸೋಮನಾಥನು ತನ್ನ ಪಂಡಿತಾರಾಧ್ಯ ಚರಿತ್ರೆಯಲ್ಲಿ ಕದಿರ ರೆಮ್ಮವ್ವೆ ಶರಣೆಯ ಉಲ್ಲೇಖವಿದೆ. ಅಲ್ಲದೆ ಕದಿರು ಕಾಯಕದ ಕದಿರ ರೆಮ್ಮವ್ವೆಯ ಒಂದು ವಚನದಲ್ಲಿ ಬಸವಣ್ಣ ,ಚೆನ್ನ ಬಸವಣ್ಣ ಪ್ರಭುದೇವರನ್ನು ಸ್ಮರಿಸಿದ್ದಾಳೆ.ಶರಣರ ವಚನಗಳ ಜೊತೆ ಈಕೆಯ ವಚನಗಳು ಮತ್ತು ಸಕಲ ಪುರಾತನರ ವಚನಗಳು ಹಾಗು ಇತರ ಸ್ಥಲ ಕಟ್ಟಿನ ವಚನಗಳಲ್ಲಿ ಸಮಾವೇಶಗೊಂಡಿರುವುದು ಕದಿರು ರೆಮವ್ವೆ ಬಸವ ಕಾಲಿನ ಶರಣೆ ಎನ್ನಲು ಹೆಚ್ಚು ಪುಷ್ಟಿ ಸಿಗುತ್ತವೆ. 1620 ರ ಶಂಕರ ದೇವನ “ಇಷ್ಟಲಿಂಗ ಚಾರಿತ್ರ್ಯ ” ಅಜ್ಞಾತ ಕವಿಯ “ನೂರೆಂಟು ಶರಣೆಯರ ಅಷ್ಟಕ “ದಲ್ಲಿ ಕದಿರ ರೆಮ್ಮವ್ವೆ ಯ ಉಲ್ಲೇಖ ಕಂಡು ಬಂದಿದೆ. ಹೀಗಾಗಿ ಕದಿರ ರೆಮ್ಮವ್ವೆ ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ಸಂಕುಲಕೆ ಸೇರಿದ ಶರಣೆ ಎಂದು ಗಟ್ಟಿಯಾಗಿ ನಿರ್ಧರಿಸಬಹುದು.. ಕದಿರ ರೆಮ್ಮವ್ವೆ ಒಬ್ಬ ನಿಷ್ಠಾವಂತ ನೇಕಾರ ಕುಟುಂಬದ ಕಾಯಕಜೀವಿ. ರಾಟಿಯಿಂದ ನೂಲು ತೆಗೆಯುವುದು ,ನೂಲನ್ನು ಮಾರಿ ಬಂದ ಆದಾಯದಿಂದ ಜಂಗಮ ಸೇವೆ ಕೈಗೊಳ್ಳುವ ಸತ್ಯ ಶುದ್ಧ ಶರಣೆ.ಇವಳ ಗಂಡನ ಬಗ್ಗೆ ಯಾವುದೇ ದಾಖಲೆಗಳಿಲ್ಲ . ಅವಳು ತನ್ನ ಕಾಯಕದ ಜೊತೆಗೆ ನಿತ್ಯ ಅನುಭಾವದ ಗೋಷ್ಠಿಯಲ್ಲಿ ಪಾಲ್ಗೊಂಡು ಲೌಕಿಕ ಪಾರಮಾರ್ಥಿಕ ಚಿಂತನೆಗಳಲ್ಲಿ ಭಾಗವಹಿಸುತ್ತಿದ್ದಳು.ಅವಳ ಎರಡು ವಚನದಲ್ಲಿ ನಿರಾಕಾರದ ಗಂಡನ ಬಗ್ಗೆ ಒಲವು ತೋರಿಸಿದನ್ನು ನೋಡಿದರೆ ಅವಳು ಅವಿವಾಹಿತೆಯಾಗಿರಬಹುದು ಎಂದು ನನ್ನ ಗ್ರಹಿಕೆಯಾಗಿದೆ. ಕದಿರ ರೆಮ್ಮವ್ವೆ ನಾಲ್ಕು ವಚನಗಳು ಮಾತ್ರ ದೊರೆತಿವೆ.” ಕದಿರ ರೆಮ್ಮಿವೊಡೆಯ ಗುಮ್ಮೆಶ್ವರ ” ನಾಲ್ಕು ವಚನಗಳಲ್ಲಿ ಎರಡುವಚನಗಳು ಸತಿ ಪತಿ ದಾಂಪತ್ಯ ಧರ್ಮಕ್ಕೆ ಸಂಬಂಧ ಪಟ್ಟ ಅಲೌಕಿಕ ವಿಚಾರಗಳು ,ಒಂದು ವಚನದಲ್ಲಿ ಶರಣರ ಸ್ತುತಿ ಕಂಡು ಬಂದಿದೆ. ಇನ್ನೊಂದರಲ್ಲಿ ಕಾಯಕದ ಮಹತ್ವ ಅಡಕವಾಗಿದೆ. ಎನ್ನ ಸ್ಥೂಲ ತನುವೆ ಬಸವಣ್ಣನಯ್ಯಾ ಎನ್ನ ಸೂಕ್ಷ್ಮ ತನುವೆ ಚೆನ್ನ ಬಸವಣ್ಣನಯ್ಯ ಎನ್ನ ಕಾರಣ ತನುವೆ ಪ್ರಭುದೇವರಯ್ಯಾ ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ ಕದಿರ ರೆಮ್ಮಿಯೊಡೆಯ ಗುಮ್ಮೆಶ್ವರಾ- ಎನ್ನುವಲ್ಲಿ ಕದಿರ ರೆಮ್ಮವ್ವೆ -ತನ್ನ ವಚನದಲ್ಲಿ ಬಸವಣ್ಣ ತನ್ನ ಸ್ಥೂಲ ಶರೀರದ ಗುರುತು. ತನ್ನ ಆಕಾರ ಅನುಭಾವದ ತನುವು. ತನಗೆ ಶರಣೆಯ ಮುದ್ರೆಯನ್ನೊತ್ತಿದ ಬಸವಣ್ಣನು ತನ್ನ ಸ್ಥೂಲ ಶರೀರಕ್ಕೆ ತನುವಾಗುತ್ತಾನೆ ಎಂದು ಹೇಳುತ್ತಾ ಬಸವಣ್ಣನವರ ಕಲ್ಯಾಣ ಸಮತೆಯ ಕ್ರಾಂತಿಯಲ್ಲಿ ಕದಿರ ರೆಮ್ಮವ್ವೆಗೆ ಸ್ಥಾನ ದೊರಕಿಸಿ ತನ್ನ ಕಾಯ ಶರೀರದ ಸ್ಥೂಲ ತನುವಾದವರು ಬಸವಣ್ಣ ಎಂದು ಅಭಿಮಾನದಿಂದ ಹೇಳುತ್ತಾಳೆ. ಇನ್ನು ತನ್ನ ಸೂಕ್ಶ್ಮ ಶರೀರದ ಕಣ್ಣಿಗೆ ಕಾಣದ ಭಾವ ಸೂಕ್ಷ್ಮತೆಯ ತನುವು ಚೆನ್ನ ಬಸವಣ್ಣ, ಚೆನ್ನಬಸವಣ್ಣನವರ ಷಟಸ್ಥಲ ಅರಿವಿನ ಜ್ಞಾನ ಸ್ಥೂಲ ಶರೀರದ ಮನೋ ವಿಕಸನಕೆ ಕಾರಣವು. ಇಂತಹ ಸೂಕ್ಷ್ಮ ಶರೀರದ ತನುವು ಚೆನ್ನ ಬಸವಣ್ಣ . ಅದೇ ರೀತಿ ಶರೀರ ಪ್ರಾಣ ಆತ್ಮವು ಕ್ರಮವಾಗಿ ಸ್ಥೂಲ ,ಸೂಕ್ಷ್ಮ ಕಾರಣವಾಗಿ ತನ್ನ ಆತ್ಮದ ಕಾರಣ ತನುವಿಗೆ ಅಲ್ಲಮರು ಕಾರಣ ಎಂದು ಹೇಳುತ್ತಾ ತನ್ನನ್ನು ಅಲ್ಲಮರ ಆಪ್ತವಲಯದಲ್ಲಿ ಗುರುತಿಸಿಕೊಳ್ಳುತ್ತಾಳೆ. ಕದಿರ ರೆಮ್ಮವ್ವೆ ತನ್ನ ಕಾಯಕದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾಳೆ. ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ : ಅಡಿಯ ಹಲಗೆ ಬ್ರಹ್ಮ ,ತೋರಣ ವಿಷ್ಣು ನಿಂದ ಬೋಂಬೆ ಮಹಾರುದ್ರ ರುದ್ರನ ಬೆಂಬಳಿಯವೆರಡು ಸೂತ್ರ ಕರ್ಣ . ಅರಿವೆಂಬ ಕದಿರು ,ಭಕ್ತಿಯೇನೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತ್ತು ನೂಲು ಕದಿರು ತುಂಬಿತ್ತು. ರಾಟೆಯ ತಿರುಹಲಾರೆ -ಎನ್ನ ಗಂಡ ಕುಟ್ಟಿಹ ಇನ್ನೇವೆ ” ಕದಿರ ರೆಮ್ಮಿಯೊಡೆಯ ಗುಮ್ಮೆಶ್ವರಾ “? ಇದು ತನ್ನ ಬದುಕಿಗೆ ಸಂಬಂಧ ಪಟ್ಟ ಕಾಯಕದ ವಚನವಾಗಿದೆ. ಮೇಲ್ನೋಟಕ್ಕೆ ಇದು ಕಾಯಕದ ವಚನವಾದರೂ ಈ ವಚನದಲ್ಲಿ ಅತ್ಯಂತ ಪಾರಮಾರ್ಥಿಕ ಅರ್ಥವನ್ನು ಕದಿರು ರೆಮ್ಮವ್ವೆ ವ್ಯಕ್ತ ಪಡಿಸಿದ್ದಾಳೆ .ಕದಿರ ರೆಮ್ಮವ್ವೆ ತನ್ನ ಕುಲ ಕಸುಬು ಹಾಗು ಕೀಳು ಜಾತಿಯ ಉಲ್ಲೇಖ ಮಾಡಿದ್ದಾಳೆ. ಜೊತೆಗೆ ತಿರುಹುವ ರಾಟಿಗೆ ಅದರ ಅಡಿಯ ಹಲಗೆ ಬ್ರಹ್ಮ ಅದಕ್ಕೆ ಕಟ್ಟಿದ ತೋರಣವೇ ವಿಷ್ಣು ,ರಾಟೆಗೆ ಕಟ್ಟಿದ ಬೋಂಬೆ ಮಹಾರುದ್ರ ರುದ್ರನ ಬೆಂಬಲಕೆ ಎರಡು ಸೂತ್ರ ಕರ್ಣಗಳು .ಇಂತಹ ರಾಟೆಯಿಂದ ನೂತಾಗ ಹೊರಡುವ ಅರಿವೇ ಕದಿರು..ಭಕ್ತಿಯಿಂದ ತಿರುಹಲಾಗಿ ನೂಲು ಸುತ್ತಿಕೊಂಡಿತ್ತು,ಮತ್ತು ಕದಿರು ತುಂಬಿತ್ತು . ಕದಿರ ತುಂಬಿದ ಮೇಲೆ ಮತ್ತೆ ರಾಟೆಯ ತಿರುಹಲಾರೆ.ಇಲ್ಲಿ ಬ್ರಹ್ಮ ವಿಷ್ಣು ರುದ್ರ ಮಹಾರುದ್ರ ಎಂಬ ದೈವೀ ಕಲ್ಪನೆಯನ್ನೇ ತಾನು ನೂಲುವ ಕದಿರಿನ ಹಲಗೆಯನ್ನು ಬ್ರಹ್ಮವೆಂತಲೂ ,ಕಾರಣ ಹಲಗೆ ಗಟ್ಟಿಯಾಗಿದ್ದರೆ ತಾನಷ್ಟೇ ಕದಿರು ತೆಗೆಯುವವರು ಅದರ ಮೇಲೆ ಕುಳಿತು ನೂಲಬಹುದು ಅದು ಕದಿರಿನ ಉತ್ಪತ್ತಿಯ ಆರಂಭ (ಸೃಷ್ಟಿ ).ಅದೇ ರೀತಿ ಕದಿರಿಗೆ ಕಟ್ಟುವ ತೋರಣವು ವಿಷ್ಣು -ಇದು ಸ್ಥಿತಿ ಪ್ರಜ್ಞೆಯಾಗಿದೆ. ಲಯದ ಸಂಕೇತವಾದ ರುದ್ರನು ಕದಿರಿನ ಹೆಮ್ಮೊಳೆ-ಲೋಹದ ತುಂಡು ಕದಿರು ತೆಗೆಯುವ ಸಾಧನ. (spikes ) .ಇಲ್ಲಿಂದ ಉತ್ಪತ್ತಿಯಾಗುವ ಅರಿವೇ ಕದಿರು .ಭಕ್ತಿಯ ಕೈಯಲ್ಲಿ ರಾಟಿ ತಿರುಹಲಾಗಿ ನೂಲು ಸುತ್ತಿಕೊಳ್ಳಹತ್ತಿತು ಮತ್ತು ಕದಿರು ತುಂಬಿ ಬಿಟ್ಟಿತು. ಪ್ರಾಪಂಚಿಕ ಪಾರಮಾರ್ಥಿಕ ನಿಲುವುಗಳನ್ನು ಸಮನ್ವಯಿಸುವ ಪ್ರಯತ್ನ ಇದಾಗಿದೆ..ಅಗತ್ಯಕ್ಕಿಂತ ಹೆಚ್ಚಿನ ಆದಾಯ ತಿರಸ್ಕರಿಸಿದ ಶರಣೆ ರೆಮ್ಮವ್ವೆ ಹಾಗೇನಾದರೂ ಹೆಚ್ಚಿಗೆ ಕದಿರ ತೆಗೆದು ಆದಾಯಮಾಡಿಕೊಂಡರೆ ತನ್ನ ಲಿಂಗವೆಂಬ ಗಂಡ ತನ್ನನ್ನು ಕುಟ್ಟಿಹ ಶಿಕ್ಷಿಸುವ ಎಂದು ತನ್ನನ್ನು ತಾನೇ ಎಚ್ಚರಿಸಿಕೊಳ್ಳುತ್ತಾಳೆ.ತನ್ನ ಸಾಂಸಾರಿಕ ಬದುಕಿನಲ್ಲಿ ಪಾರಮಾರ್ಥಿಕ ಚಿಂತನೆ ಮಾಡುತ್ತಾ ಜೀವನ ಸಾಗಿಸಿದ ದಿಟ್ಟ ಶರಣೆ ಕದಿರ ರೆಮ್ಮವ್ವೆ. “ ಕದಿರು ರೆಮ್ಮವ್ವೆ – ಎರಡು ವಚನಗಳು ತನ್ನ ಪ್ರಾಪಂಚಿಕ ಬದುಕಿನ ಕುರಿತಾಗಿ ಎಂದು ಮೇಲು ನೋಟಕ್ಕೆ ಕಂಡರೂ ಅದರ ಹಿಂದಿನ ಆಧ್ಯಾತ್ಮಿಕ ಬೆಡಗನ್ನು ರೆಮ್ಮವ್ವೆ ಸೊಗಸಾಗಿ ವರ್ಣಿಸಿದ್ದಾಳೆ. ನಿರಾಕಾರ ಚೈತನ್ಯವೇ ತನ್ನ ಗಂಡವೆಂದು ಅಕ್ಕ ಮಹಾದೇವಿಯ ಹಾಗೆ ನಿರೂಪಿಸಿದ ವಚನಗಳ ಕಾಣಬಹುದು. ಎಲ್ಲರ ಹೆಂಡಿರು ತೊಳಸಿಕ್ಕುವರು; ಎನ್ನ ಗಂಡಂಗೆ ತೊಳಸುವುದಿಲ್ಲ. ಎಲ್ಲರ ಗಂಡಂದಿರಿಗೆ ಬಸಿವರು; ಎನ್ನ ಗಂಡಂಗೆ ಬಸಿವುದಿಲ್ಲ. ಎಲ್ಲರ ಗಂಡಂದಿರಿಗೆ ಬೀಜವುಂಟು; ಎನ್ನ ಗಂಡಂಗೆ ಅಂಡದ ಬೀಜವಿಲ್ಲ. ಎಲ್ಲರ ಗಂಡಂದಿರು ಮೇಲೆ; ಎನ್ನ ಗಂಡ ಕೆಳಗೆ, ನಾ ಮೇಲೆ. ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ. ಪ್ರತಿಯೊಬ್ಬ ಹೆಂಡತಿ ತಾನು ಪತಿಯ ದಾಸಿಯಾಗುವಳು .ಆದರೆ ಕದಿರ ರೆಮ್ಮವ್ವೆ ತಾನು ದಾಸಿಯಾಗುವದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾಳೆ.ಎಲ್ಲ ಗಂಡಂದಿರರಿಂದ ಹೆಂಡತಿ ಬಸಿರಾಗುವಳು.ಆದರೆ ತಾನು ತನ್ನ ಗಂಡನಿಗೆ ಕೇವಲ ಬಸಿರಾಗುವುದಕ್ಕೆ ಬದುಕಿಲ್ಲ ಎಂದಿದ್ದಾಳೆ. ತನ್ನ ಗಂಡ ಕೇವಲ ವಿಷಯಾದಿಗಳ ಹುಟ್ಟು ಸಾವಿಗೆ ಕಾರಣವಾಗುವ ವ್ಯಕ್ತಿಯಲ್ಲ ಎಂದು ನಿರೂಪಿಸಿದ್ದಾಳೆ.ಎಲ್ಲ ಗಂಡರಿಗೆ ಉತ್ಪತ್ತಿಯ ಬೀಜವಿದೆ ಆದರೆ ತನ್ನ ಗಂಡನಿಗೆ ಅಂಡದ ಅಂದರೆ ಕೇವಲ ಉತ್ಪತಿಗೆ ಬೇಕಾದ ಬೀಜ (fertile ) ಇಲ್ಲವೆನ್ನುತ್ತಾಳೆ.ಎಲ್ಲರ ಗಂಡ ಮೇಲೆ ಎಂದು ಸಾರುವ ಭಾರತೀಯ ಮಹಿಳೆಯರಿಗೆ ಕದಿರ ರೆಮ್ಮವ್ವೆ ಸವಾಲಾಗುತ್ತಾಳೆ.ತನ್ನ ಗಂಡ ಕೆಳಗೆ ತಾನು ಮೇಲೆ ಎಂದು ಹೆಮ್ಮೆಯಿಂದ ಹೇಳುವ ಕದಿರ ರೆಮ್ಮವ್ವೆ ತಾನು ಲಿಂಗ ಭೇದ ನಿರಾಕರಿಸಿ ನಿರಾಕಾರ ಸ್ವರೂಪದ ಸಾಕಾರದ ಲಿಂಗವೇ ತನ್ನ ಗಂಡ ಎಂದು ಹೇಳಿಕೊಳ್ಳುತ್ತಾಳೆ. ಎಲ್ಲರ ಗಂಡಂದಿರು ಪರದಳವಿಭಾಡರು; ಎನ್ನ ಗಂಡ ಮನದಳವಿಭಾಡ. ಎಲ್ಲರ ಗಂಡಂದಿರು ಗಜವೇಂಟೆಕಾರರು; ಎನ್ನ ಗಂಡ ಮನವೇಂಟೆಕಾರ. ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು; ಎನ್ನ ಗಂಡ ತಾರದೆ ಇಕ್ಕಿಸಿಕೊಂಬ. ಎಲ್ಲರ ಗಂಡಂದಿರಿಗೆ ಮೂರು, ಎನ್ನ ಗಂಡಂಗೆ ಅದೊಂದೆ; ಅದೊಂದೂ ಸಂದೇಹ,ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ. ಕದಿರ ರೆಮ್ಮವ್ವೆ ತನ್ನ ಮತ್ತು ಇತರ ಭವಿಗಳ ಗಂಡಂದಿರ ಗುಣ ಸ್ವಭಾವಗಳನ್ನು ವಿವರಿಸುತ್ತಾ,ತನ್ನ ಗಂಡನಿಗೂ ಮತ್ತು ಇತರ ಮಹಿಳೆಯರ ಗಂಡಂದಿರರಿಗೂ ಇರುವ ವ್ಯತ್ಯಾಸವನ್ನು ಮತ್ತೆ ಮತ್ತೆ ಕೆಣಕಿದ್ದಾಳೆ . ಎಲ್ಲರ ಗಂಡಂದಿರರು ಪರರ ಅಳಲನ್ನು ವಿನಾಶ ಮಾಡಿದರೆ ,ತನ್ನ ಗಂಡ ತನ್ನ ಮನದ ಅಳಲನ್ನು ನಾಶ ಮಾಡುತ್ತಾನೆ .ಎಲ್ಲರ ಗಂಡರು ಆನೆಯನ್ನು ಭೇಟೆಯಾಡಿದರೆ. ತನ್ನ ಗಂಡ ವಿಷಯಾದಿಗಳನ್ನು ತುಂಬಿದ ಮನದ ಭೇಟೆಯಾಡುವವನು.ಉಳಿದ ಗಂಡಂದಿರರು ತಂದದ್ದನ್ನು ತಿನ್ನುವವರು .ತನ್ನ ಗಂಡ ತಾರದೆ ತಿನ್ನುವವನು.ಎಲ್ಲರ ಗಂಡಂದಿರರು ಸೃಷ್ಟಿ ಸ್ಥಿತಿ ಲಯ -ಸ್ಥೂಲ ಸೂಕ್ಷ್ಮ ಹಾಗು ಕಾರಣ ಶರೀರಕ್ಕೆ ಅಂಟಿಕೊಂಡವ್ರು. ತನ್ನ ಗಂಡ ಮಾತ್ರ ಕಾರಣ ಶರೀರಕ್ಕೆ ನಿಂತ ಚೈತನ್ಯ ಚೇತನವೆನ್ನುತ್ತಾಳೆ ಕದಿರ ರೆಮ್ಮವ್ವೆ.. ತುಂಬಾ ಗಹನವಾದ ವಿಷಯವನ್ನು ಸಲೀಲಾಗಿ ಹೇಳುವ ಶರಣೆಯ ವಚನದಲ್ಲಿ ಅಕ್ಕ ಮಹಾದೇವಿಯ ಚೆನ್ನ ಮಲ್ಲಿಕಾರ್ಜುನನ್ನು ನೆನಯುವ ಧ್ವನಿ ಧೋರಣೆ ಎದ್ದು ಕಾಣುತ್ತದೆ.ಕದಿರ ರೆಮ್ಮವ್ವೆಯ ವಚನಗಳಲ್ಲಿ ತಾನು ಪ್ರಾಪಂಚಿಕ ಬದುಕಿಗೆ ಮಾತ್ರ ಸೀಮಿತವಲ್ಲ ತಾನು ಆಧ್ಯಾತ್ಮಿಕ ಪಾರಮಾರ್ಥಿಕ ಸುಖವನ್ನು ಉಣ್ಣಲು ಬಂದವಳು ಎಂದಿದ್ದಾಳೆ. ಹೀಗೆ ಲಿಂಗ ಭೇದವಳಿದು ತಾನೇ ಲಿಂಗವಾದ ಬಗೆಯನ್ನು ಅರ್ಥಪೂರ್ಣವಾಗಿ ವಿವರಿಸಿದ ಅತ್ಯಂತ ಜ್ಞಾನಿ ಅವಿರಳ ವಚನಕಾರ್ತೆ ಕದಿರ ರೆಮ್ಮವ್ವೆ . ಕದಿರ ರೆಮ್ಮವ್ವೆಯ ಸಿಕ್ಕ ನಾಲ್ಕು ವಚನಗಳು ಅತ್ಯಂತ ಉತ್ಕೃಷ್ಟ ಚಿಂತನೆಯಿಂದ ಕೂಡಿವೆ.ಅವಳ ವಚನದ ಅಂಕಿತವು ಕದಿರ ರೆಮ್ಮಿಯೊಡೆಯ ಗುಮ್ಮೆಶ್ವರಾ”. ಗುಮ್ಮೆಶ್ವರ-ಇದು ಗುಹೇಶ್ವರ ಅಂಕಿತದ ಸಾಮ್ಯತೆ ಇದ್ದು ಪಾಠಾಂತರ ಸಮಯದಲ್ಲಿ ಇದು ಗುಮ್ಮೆಶ್ವರ ಆದ ಎಲ್ಲಾ ಸಾಧ್ಯತೆಗಳಿವೆ. ಕದಿರ ರೆಮ್ಮವ್ವೆ ಅಲ್ಲಮ ಪ್ರಭುವಿನ ಗರಡಿಯಲ್ಲಿ ಬೆಳೆದಳವಳು . ತನ್ನ ಒಂದು ವಚನದಲ್ಲಿ ತಾನು ಗುರು ಅಲ್ಲಮರ ಕಾರುಣ್ಯವೆಂದು ಹೇಳಿಕೊಂಡಿದ್ದಾಳೆ. —– ಎನ್ನ ಕಾರಣ ತನುವೆ ಪ್ರಭುದೇವರಯ್ಯಾ ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ . ಕದಿರ ರೆಮ್ಮಿಯೊಡೆಯ ಗುಮ್ಮೆಶ್ವರಾ ಎಂದು ಹೇಳಿ ತನ್ನ ಗುರುವಿನ ಮೇಲಿನ ಅಭಿಮಾನ ಗೌರವ ಮತ್ತು ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾಳೆ. ಈ ಕಾರಣದಿಂದ ಅವಳು ಅಲ್ಲಮ ಪ್ರಭುಗಳ ಆಪ್ತ ವಲಯದ ಸಹಾಯಕಿ, ಶಿಷ್ಯೆ ಎಂದು ಪರಿಗಣಿಸಬಹುದು. ನನ್ನ ಈ ತರ್ಕಕ್ಕೆ ಗ್ರಹಿಕೆಗೆ ಇನ್ನೊಂದು ಕೆಲವು ಕಾರಣಗಳಿವೆ . ಅವುಗಳಲ್ಲಿ ಕಲ್ಯಾಣ ಕ್ರಾಂತಿಯ ಮೊದಲು ಮತ್ತು ನಂತರ ಕೆಲ ಶರಣರು ಕಲ್ಯಾಣವನ್ನು ತೊರೆದರು ಎಂದು ನಮಗೆ ತಿಳಿದು ಬರುತ್ತದೆ. ಹೀಗೆ ಕಲ್ಯಾಣ ರಕ್ತ ಕ್ರಾಂತಿಯ ಮೊದಲೆ ಕಲ್ಯಾಣ ತೊರೆದವರಲ್ಲಿ ಅಕ್ಕ ಮಹಾದೇವಿ ಮತ್ತು ಅಲ್ಲಮರು . ಚರಿತ್ರೆ ಇತಿಹಾಸದಲ್ಲಿ ಲಭ್ಯವಿರುವ ಘಟನಗಳನ್ನಾಧರಿಸಿ ಶರಣರ ಮಾರ್ಗದ ಸಂಭಾವ್ಯತೆಯನ್ನು ನಿರ್ಧರಿಸಲಾಯಿತು. ಕಳೆದ ಮೂವತ್ತು ವರ್ಷದಿಂದ ನಾನು ಶರಣರ ಸಮಾಧಿಗಳನ್ನು ಅತ್ಯಂತ ಕೂತಹಲದಿಂದ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಅಲ್ಲಮ ಪ್ರಭುಗಳು ತೇರದಾಳದಲ್ಲಿ ಐಕ್ಯರಾಗಿದ್ದಾರೆ ಅಲ್ಲಿ ಪ್ರಭುದೇವರ ಗದ್ದುಗೆ ಇದೆಯೆಂದು ಚಿಕ್ಕ ಬಾಲಕನಿಂದಲೂ ಕೇಳಿಸಿಕೊಂಡು ಬಂದಿದ್ದೆ.ಆದರೆ ತೇರದಾಳದಲ್ಲಿ ಅಲ್ಲಮರು ಕಲ್ಯಾಣ ತೊರೆದನಂತರ ಕೆಲಕಾಲ ತಂಗಿದ್ದರು ಎಂದು ಮುಂದೆ ಶ್ರೀಶೈಲಕ್ಕೆ ಹೋಗುತ್ತಾರೆ ಎಂದುತಿಳಿದು ಬರುತ್ತದೆ. ಅಲ್ಲಮ ಪ್ರಭುಗಳು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ
ಸಾವಿಲ್ಲದ ಶರಣರು ಮಾಲಿಕೆ- “ಕಾಯಕಯೋಗಿನಿ -ಕದಿರ ರೆಮ್ಮವ್ವೆ”, ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ಧಾರಾವಾಹಿ ಸಂಗಾತಿ -28 ಅರ್ಜುನ ಉವಾಚ ಡಾ.ವಿಶ್ವನಾಥ್ ಎನ್ ನೇರಳಕಟ್ಟೆ ಶಾಪದ ಕಥೆಗಳನ್ನು ತಿಳಿದು ಮುನ್ಡೆನದದ್ದು ಸ್ತ್ರೀ ರಾಜ್ಯದೆಡೆಗೆ ಗುರುಗಳನ್ನು ಹಿರಿಯರನ್ನು ದೇವತೆಯರನ್ನು ಕಂಡಾಗ ಪ್ರಣಾಮ ಮಾಡುವುದು ರೂಢಿ. ಪಾರ್ವತಿಯೆದುರಿಗೆ ಬಂದ, ದುಷ್ಟದೃಷ್ಟಿ ಬೀರುತ ನಿಂದ ಆ ದೈತ್ಯ ಶಿವಸತಿಗೆ ನಮಿಸಲಿಲ್ಲ. ಅವಳನ್ನು ಬಯಸಿದ. ಮನ್ಮಥನ ಹೂಬಾಣ ಅವನನ್ನು ಬಾಧಿಸಿತು. ಕಾಮಾತುರಕ್ಕೆ ಒಳಗಾದ ದಾನವ. ಜಗದ ಮಾತೆಯೊಡನೆ ಮದನಕೇಳಿಯಾಡುವ ಕೆಡುಬಯಕೆ ಅವನಲ್ಲಿ ಮೂಡಿತು. ಪಾರ್ವತಿಯನ್ನು ಮಾತನಾಡಿಸಲು ಮುಂದಾದ. ಮಹಾದೈತ್ಯನ ಮನದಿಂಗಿತ ಅರ್ಥವಾಯಿತು ಅವಳಿಗೆ. ಕಡುಕೋಪದಿಂದ ಕೆಡುಕಿನ ಕಾಯವನ್ನು ದಿಟ್ಟಿಸಿದಳು. ಉರಿಉರಿದು ಬೂದಿಯಾಗಿ ಹೋದ ಆ ರಾಕ್ಷಸ. ಬಳಿಕ ಪಾರ್ವತಿದೇವಿ ಶಾಪರೂಪದ ಮಾತೊಂದನ್ನು ಆಡಿದಳು. “ಇಂದಿನಿಂದ ಈ ವನಕ್ಕೆ ಕಾಲಿಡುವ ಪುರುಷ ರೂಪದ ಪ್ರಾಣಿಗಳೆಲ್ಲವೂ ಹೆಣ್ಣಾಗಿ ಹೋಗಲಿ” ಎಂಬ ನುಡಿಯದು ಅವಳಿಂದ ಹೊರಬಂತು. ತನ್ನನ್ನೇ ಬಯಸಿದ ಅಸುರನ ಹೀನ ಗಂಡಸ್ತನದ ಬಗೆಗೆ ಆಕ್ರೋಶ ಹುಟ್ಟಿದ್ದು ಖಚಿತ ಅವಳಲ್ಲಿ. ಗಂಡಸ್ತನದ ಬಗೆಗಿನ ತಿರಸ್ಕಾರ ತುರೀಯಾವಸ್ಥೆಯನ್ನು ತಲುಪಿದಾಗ ಹೆಂಗಳೆಯರೇ ತುಂಬಿಹೋದರೆ ಒಳಿತು ಈ ಲೋಕದಲ್ಲಿ ಎಂಬ ಭಾವವೇ ಮೂಡುತ್ತದೋ ಏನೋ! ಆ ಕಾರಣಕ್ಕೇ ಇಂಥದ್ದೊಂದು ಘನಶಾಪ ಇತ್ತಳು ಎನಿಸುತ್ತದೆ, ಮುಂದಣ ಕಾಲಕ್ಕೂ ಸಲ್ಲುವಂತೆ. ಆ ಬಳಿಕವೂ ಅವಳ ತಪಸ್ಸು ಮುಂದುವರಿಯಿತು. ಯಾವ ತಾಪತ್ರಯವೂ ಎದುರಾಗಲಿಲ್ಲ ಅವಳಿಗೆ ಪುರುಷವರ್ಗದವರಿಂದ. ಶಂಕರವಲ್ಲಭೆಯ ಶಾಪದ ಬಲದಿಂದಲೇ ನಮ್ಮ ಯಾಗದ ಕುದುರೆ ಹೆಣ್ಣಾಗಿ ಬದಲಾದದ್ದು. ಹುಲಿಯ ರೂಪವನ್ನು ಪಡೆದದ್ದರ ಹಿಂದೆಯೂ ಒಂದು ಕಥಾನಕವಿತ್ತು. ಬಹಳ ಹಿಂದೆ ಅಕೃತವ್ರಣಾಖ್ಯ ಎಂಬ ಬ್ರಾಹ್ಮಣ ದಿವ್ಯಸ್ನಾನವನ್ನು ಮಾಡುವುದಕ್ಕಾಗಿ ಇಲ್ಲಿನ ಸರೋವರಕ್ಕೆ ಬಂದ. ಸಮಸ್ತ ಭೂಮಿಯ ಬಹುಕಡೆಗಳಲ್ಲಿ ತೀರ್ಥಸ್ನಾನವನ್ನು ಪೂರೈಸಿಯೇ ಬಂದಿದ್ದ ಆತ. ಸರೋವರದ ನೀರಿಗಿಳಿದಿದ್ದ ಆತ ವರುಣದೇವರ ಮಂತ್ರವನ್ನು ಜಪಿಸುತ್ತಿದ್ದ. ಅದೇ ಸಮಯದಲ್ಲಿ ಮೊಸಳೆಯೊಂದು ಬಂದು ಅವನ ಪಾದವನ್ನು ಬಲವಾಗಿ ಕಚ್ಚಿತು. ಕಾಲನ್ನು ಹಿಡಿದು ರಭಸದಿಂದ ಎಳೆಯುತ್ತಿರುವ ಜೀವಿ ಯಾವುದದು ಎನ್ನುವುದು ಆತನ ಅರಿವಿಗೆ ಬರಲಿಲ್ಲ. ಜಲದ ಒಳಗಿದ್ದುದು ಅವನ ಹೊರನೋಟಕ್ಕೆ ದಕ್ಕಲಿಲ್ಲ. ಯಾವುದೋ ರಾಕ್ಷಸರ ಮಾಯೆಯೋ ಏನೋ! ಎಂಬ ಅಳುಕು ಮೂಡಿತು. ಹಾವು ಇರಬಹುದೇ! ಎಂಬ ಸಂಶಯ ಕಾಡಿತು. ದೈತ್ಯ ಗಾತ್ರದ ಮತ್ಸ್ಯವಿರಬೇಕಿದು ಎಂದುಕೊಂಡ. ಮಹಾಸುಳಿಯೆಂದು ಭಾವಿಸಿ ನೊಂದುಕೊಂಡ. ಮೊಸಳೆಯೇ ತನ್ನ ಕಾಲನ್ನು ಹಿಡಿದಿದೆ ಎಂಬ ಯೋಚನೆಯೇ ಬರಲಿಲ್ಲ ಅವನಲ್ಲಿ. ಹಿಡಿತದಿಂದ ತಪ್ಪಿಸಿಕೊಂಡರೆ ಸಾಕು ಎಂದುಕೊAಡವನು ಬಲವಾಗಿ ಕಾಲನ್ನೊಮ್ಮೆ ಕೊಡವಿದ. ಅವನ ಆ ಬಿರುಸಿಗೆ ಮೊಸಳೆಯ ಬಲಿಷ್ಠ ದಂತಗಳು ಮುರಿದುಹೋದವು. ಹಿಡಿತವದು ಸಡಿಲವಾಯಿತು. ತಕ್ಷಣವೇ ಸರೋವರದ ದಡವನ್ನು ಸೇರಿಕೊಂಡ ಆ ಬ್ರಾಹ್ಮಣ. ಅವನಿಗೆ ಕೋಪ ಬಂದಿತ್ತು. ನೀರಿನಲ್ಲಿರುವ ದೇವತೆಗಳು ಕೇಳಿಸಿಕೊಳ್ಳಲಿ ಎಂಬAತೆ ನುಡಿದ. “ಈ ಸರೋವರ ದುಷ್ಟಭಾವವನ್ನು ಹೊತ್ತುನಿಂತಿದೆ. ಅತಿಯಾದ ಭಯವನ್ನು ನನ್ನಲ್ಲಿ ಹುಟ್ಟುಹಾಕಿದೆ. ಆ ಕಾರಣಕ್ಕೆ ಇನ್ನುಮುಂದೆ ಈ ಸರೋವರದ ನೀರನ್ನು ಕುಡಿದ ಜೀವಿಗಳು ಭೂಮಿಗೆ ಅತೀ ಭೀತಿಯನ್ನು ಉಂಟುಮಾಡುವAತೆ ಹುಲಿಯಾಗಿ ಹೋಗಲಿ” ಎಂದು ಶಾಪವಿತ್ತ. ಬೇರೆಲ್ಲಾ ಪ್ರದೇಶಗಳ ನದಿನೀರಿನಲ್ಲಿ ಮಿಂದೆದ್ದಿದ ಅವನಿಗೆ ಇಲ್ಲಿ ಮಾತ್ರ ಈ ಬಗೆಯ ಭಯಾನಕ ಅನುಭವ ಆದದ್ದು. ಆದ್ದರಿಂದಲೇ ಆ ಬಗೆಯ ಶಾಪವೊಂದನ್ನು ಕೊಟ್ಟ ಸರೋವರದ ನೀರಿಗೆ. ಹುಲಿಯಾಗಲು ಇಚ್ಛಿಸದೆ ಸರೋವರದ ಜಲವನ್ನು ಸರ್ವ ಜೀವಿಗಳೂ ತಿರಸ್ಕರಿಸುವಂತಾಗಲಿ ಎಂಬ ಉದ್ದೇಶ ಇದ್ದಿರಬಹುದು ಅವನಲ್ಲಿ. ಈ ಕಾರಣಕ್ಕೆ ನಮ್ಮ ಯಜ್ಞಾಶ್ವ ವ್ಯಾಘ್ರವಾಗಿ ಪರಿವರ್ತನೆಯಾದದ್ದು. ಕುದುರೆಯ ಈ ಬಗೆಯ ರೂಪಾಂತರವನ್ನು ಆ ಕೃಷ್ಣನ ಸ್ಮರಣೆಯ ಬಲದಿಂದ ಸರಿಮಾಡಿದೆ. ನನ್ನ ಜೊತೆಗೆ ಇದ್ದ ಸೈನಿಕರು ನನ್ನ ಪ್ರಾರ್ಥನೆಗೆ ಶ್ರೀಕೃಷ್ಣ ಪ್ರತಿಸ್ಪಂದಿಸಿದ ಬಗೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. “ಆಪತ್ತಿನ ಭೀತಿ ಈ ಪಾಂಡವರನ್ನು ಯಾವತ್ತಿಗೂ ಬಾಧಿಸಲಾರದು. ಇವರಿಗೆ ನೋವಾಗುವುದನ್ನು, ಭಯ ಎದುರಾಗುವುದನ್ನು ಆ ಕೃಷ್ಣ ಸಹಿಸಲಾರನು. ಅವನ ನೆರವು ಇವರಿಗೆ ಯಾವಾಗಲೂ ಇದೆ” ಎಂದು ಸೈನಿಕರು ಮಾತನಾಡುತ್ತಿದ್ದುದನ್ನು ಕೇಳಿ ಹೆಮ್ಮೆಯ ಭಾವ ಮೂಡಿತು. “ಶ್ರೀಕೃಷ್ಣ ತನ್ನ ಭಕ್ತರನ್ನು ಯಾವತ್ತೂ ಕಾಪಾಡುತ್ತಾನೆ ಎನ್ನುವುದು ಈ ಕ್ಷಣಕ್ಕೆ ಮತ್ತೊಮ್ಮೆ ಸಾಬೀತಾಯಿತು. ನಂಬಿದವರ ರಕ್ಷಣೆ ಮಾಡುವುದೇ ಮಹಾಸಂತೋಷ ಆ ಅಸುರಾರಿಗೆ. ಅಶ್ವಮೇಧ ಯಾಗಕ್ಕೆ ಅಡಿಗಡಿಗೆ ಎದುರಾದ ಅಡೆತಡೆಗಳನ್ನು ಮೀರಿ ಪಾಂಡುರಾಜನ ಸುತರನ್ನು ಅಪಾಯದಿಂದ ಪಾರುಮಾಡುವುದನ್ನೇ ಮಹಾಕಾರ್ಯವಾಗಿಸಿಕೊಂಡಿದ್ದಾನೆ ಆ ಮೋಹಕ ಮಾಧವ” ಎಂಬ ಮಾತೂ ಕೇಳಿಬಂತು. ಹೆಣ್ಣು ಕುದುರೆಯಾಗಿ ಹುಲಿಯಾಗಿ ಮತ್ತೆ ನಿಜರೂಪವನ್ನು ಕುದುರೆ ಪಡೆದುದನ್ನು ಬಗೆಬಗೆಯ ವಾದ್ಯಗಳ ಶಬ್ದವನ್ನೆಬ್ಬಿಸಿ ಸಂಭ್ರಮಿಸಿದರು ನಮ್ಮ ಪಾಳಯದ ಸೈನಿಕರು. ಅತೀವವಾಗಿ ಹಿಗ್ಗಿದೆ ನಾನು. ಶ್ರೀಕೃಷ್ಣ ನಮಗಿತ್ತ ಉಪಕಾರವನ್ನು ನಮ್ಮ ಸೇನೆ ಅರಿತಿದೆಯಲ್ಲಾ ಎಂದು ಸಂಭ್ರಮಿಸಿದೆ. ಜಗವೆಲ್ಲಾ ಅರಿಯುವಂತೆ ಆ ಹರಿಯಿಂದ ಮಹದುಪಕಾರವನ್ನು ಪಡೆಯುತ್ತಿರುವ ನಾನೇ ಧನ್ಯ ಎಂಬ ಭಾವ ಮೂಡಿತು ನನ್ನಲ್ಲಿ. ಪಾರಿಪ್ಲವ ದೇಶದಿಂದ ನಮ್ಮ ಕುದುರೆ ಮುಂದಕ್ಕೆ ಚಲಿಸಿತು. ಅತಿವೇಗ ಪಡೆಯಿತು ಅದರ ಚಲನೆ. ಬಹಳ ದೇಶಗಳು ಕಳೆದುಹೋದವು. ಈಗ ಕುದುರೆ ಸಾಗುತ್ತಿದ್ದುದು ರಾಜ್ಯದ ಒಳಸೀಮೆಯಲ್ಲಿ. ಅದಾವ ಪ್ರದೇಶ ಎನ್ನುವುದನ್ನು ವಿಚಾರಿಸಿ ತಿಳಿದುಕೊಂಡೆ. ಹೆಂಗಳೆಯರು ಮಾತ್ರವೇ ಇರುವ ಪ್ರದೇಶ ಅದೆನ್ನುವುದು ತಿಳಿದುಬಂತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ.ಬೊಮ್ಮಾ ಸುಲಗ್ನ ಸಾವಧಾನ.. ಈ ವರ್ಷದ ಬ್ಯಾಸಗಿ ಧಗಿಗಿ ನಮ್ಮ ಉತ್ತರ ಕರ್ನಾಟಕ ದ ಮಂದಿ ಒಣಗಿದ ಹಪ್ಪಳಂಗ ಆಗಿಬಿಟ್ಟಿವಿ. ಸದಾ ಬಿಸಿಲು ಧಗಿದಾಗೆ ಇರೋ ನಮಗೂ ಈ ವರ್ಷ ಬಿಸಿಲಿನ ತಾಪ ಬಾಳ ಸಾಕಮಾಡ್ತು.ಮಳಿ ಬಂದ್ರೂ ನಮ್ಮ ಕಡಿ ಧಗಿ ಕಮ್ಮಿ ಆಗಲ್ಲ.ಇನ್ನೂ ಹೆಚ್ಚೆ ಆಗತದ.ಕಾದ ಹಂಚಿನ ಮ್ಯಾಲ್ ನೀರು ಸುರುದ ಮ್ಯಾಲ ಬರೋ ಉಗ ಹ್ಯಾಂಗ್ ಶಾಖ ಕೊಡತದ , ಆ ನಮೂನಿ ಮಳಿಗಾಲದ ಧಗಿ ಇರತದ. ಇದರೊಂದಿಗೆ ಬದುಕು ಸಾಗತಿರತದ.ಪ್ರಕೃತಿ ಅದರ ಕೆಲಸ ಮಾಡತಿರತದ.ಅದರೊಂದಿಗೆ ನಮ್ಮ ಬದುಕು ಸಾಗತಿರತದ.ಈ ವರ್ಷ ಬ್ಯಾಸಗಿದಾಗ ಮದುವೆಗಳ ಭರಾಟಿ ಬಾಳ ಇತ್ತು.ವಯಸ್ಸಿಗಿ ಬಂದ ಮಕ್ಕಳಿಗಿ ಮದುವೆ ಮಾಡೊದು ಒಂದು ದೊಡ್ಡ ಜವಾಬ್ದಾರಿ ಹೆತ್ತವರಿಗಿ.ಮದುವಿ ಆದ ಮ್ಯಾಲ ಜವಾಬ್ದಾರಿ ಮುಗಿತು ಅಂದುಕೊಳ್ಳೊದೆ ತಪ್ಪು ಅನಸ್ತದ. ಮದುವೆ ಮಾಡ್ದ ಮ್ಯಾಲ್ ಜವಾಬ್ದಾರಿ ಹೆಚ್ಚಿಗೆ ಆಗ್ತಾವ ಹೊರತು ಕಮ್ಮಿ ಆಗಲ್ಲ. ನೌಕರಿ ಮಾಡೊ ಹೆಣ್ಣಮಕ್ಳು ಇದ್ರ ಅವರ ಮಕ್ಕಳಿಗೆ ನೊಡಕೊಂಡ್ರ ಅವರಿಗಿ ನೌಕರಿ ಮಾಡಲಕ್ಕ ಸಾದ್ಯ.ಇಲ್ಲಂದ್ರ ಮಕ್ಕಳು ಮನಿ ನೌಕರಿ ಇವೆಲ್ಲ ಹೊಂದಿಸಲಕ್ಕ ಬಡಿದಾಡಿ ಮಾನಸಿಕ ನೆಮ್ಮದಿ ಕಳಕೊಂಡು ಸಂಸಾರದಲ್ಲಿ ಜಗಳ ಸುರು ಆಗತವ. ಹಾಗಂತ ಹೆಣ್ಣುಮಕ್ಕಳು ಬರಿ ಮಕ್ಕಳು ಹಡ್ದು ಮಕ್ಕಳಿಗಿ ಆರೈಕೆ ಮಾಡಕ್ಕೊಂತ ಮನ್ಯಾಗೆ ಇರಬೆಕಂದ್ರೂ ಈಗಿನ ಕಾಲದಾಗ ಅದು ಸಮಂಜಸ ಅನಸಲ್ಲ.ಪ್ರತಿಯೊಬ್ಬ ಹೆಣ್ಣಮಗಳು ಸ್ವಾವಲಂಬಿ ಆಗಿರಬೇಕು.ಹಿಂದಿನ ಕಾಲದಾಗ ಗಂಡು ಹೊರಗ ದುಡಿಬೇಕು ಹೆಂಗಸು ಮನ್ಯಾಗ ದುಡಿಬೇಕು ಎಂಬ ನಿಯಮ ಇತ್ತು.ಈಗಿನ ಕಾಲದಾಗ ಗಂಡನ ದುಡಮೆ ಒಂದೇ ಸಾಕಾಗಲ್ಲ.ಇಬ್ಬರೂ ದುಡಿದ್ರ ಮಾತ್ರ ಆರ್ಥಿಕ ಹೊರೆ ಕಮ್ಮಿ ಆಗತದ. ಅದಕ್ಕ ಈಗಿನ ಜನರೇಷನ್ ನವ್ರು ಮದುವೆನು ಬ್ಯಾಡ ಮಕ್ಳು ಬ್ಯಾಡ ಎಂಬ ನಿರ್ಣಯಕ್ಕ ಬರತಿದ್ದಾರ. ಮದುವೆ ಮಾಡಿಕೊಂಡು ಅವರು ಗಂಡ ಹೆಂಡತಿಯಾಗಿ ಮಕ್ಳು ಹುಟ್ಟಿಸಿ ಅವರಿಗಿ ಬೇಕಾದ ಸವಲತ್ತುಗಳನ್ನು ಕೊಟ್ಟು ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವದು ಈಗಿನ ತಲೆಮಾರುಗಳಿಗೆ ಅಷ್ಟು ಸುಲಭ ಅಲ್ಲ. ಗಂಡ ಹೆಂಡತಿ ಎಂಬ ಹೊಂದಾಣಿಕೆ ಕೊರತೆ ಬಾಳ ಅದ.ಇಬ್ಬರೂ ಸ್ವಾವಲಂಬಿ ಗಳು ಇದ್ದರಂತೂ ನಡುವೆ ಸ್ವಾಭಿಮಾನ ತುಸು ಹೆಚ್ಚೆ ಇರತದ. ಹೆತ್ತವರ ಬುದ್ದಿಮಾತು ಕೇಳದಷ್ಟು ಸ್ವನಿರ್ಧಾರ ಮಕ್ಕಳು ತಗೊಳತಾರ. ಸಂಸಾರದಲ್ಲಿ ಎರುಪೇರು ಶುರುವಾದ್ರ ತಪ್ಪು ಯಾರ್ದುಎಂದು ನಿರ್ಣಯ ಕ್ಕ ಬರಲಾರದಂತ ನೆಪಗಳು ಇಬ್ಬರಲ್ಲೂ ಇರತಾವ.ಆಗ ಯಾರಿಗೆ ಬುದ್ದಿ ಹೇಳಬೇಕು..! ಇಂತಹ ಸಂದರ್ಭದಾಗ ಹೆಣ್ಣು ಮಕ್ಕಳಿಗೆ ಬುದ್ದಿ ಹೇಳೊದು ಸಹಜ.ಹೊಂದಿಕೊಂಡು ಹೋಗು , ತಾಳಕೊಂಡು ಹೋಗು , ಗಂಡ ಅಂದ್ರ ಅನಸ್ಕೋಬೇಕು..ಇವೆಲ್ಲವೂ ಹಿಂದಿನಿಂದ ಮಗಳಿಗಿ ಹೇಳೊ ಬುದ್ದಿವಾದಗಳು. ಅಂತಹ ಸಂದರ್ಭದಾಗ ಹೆಣ್ಣಮಗಳಿಗೆ ಬ್ಯಾರೆ ದಾರಿ ಇರಲ್ಲ.ಈ ಕಡಿ ಗಂಡನ ಮನ್ಯಾಗೂ ಇರಲಾರ್ಧ ತವರು ಮನಿಗೂ ಬರಲಾರ್ದ ಸಂದಿಗ್ಧ ಪರಿಸ್ಥಿತಿ ಯೊಳಗ ಆತ್ಮಹತ್ಯೆ ಅಂತಾ ನಿರ್ಧಾರಕ್ಕ ಬಂದು ಬಿಡತಾರ. ಒಬ್ಬ ಹೈಕೋರ್ಟ್ ಜಡ್ಜ ಹೇಳಿದ್ರು ಸಾಯೋ ಮಗಳಿಗಿಂತ ವಿಚ್ಚೇದಿತ ಮಗಳು ಇರಲಿ ಅಂತ.ಕೌಟುಂಬಿಕ ಕಲಹದಿಂದ ಹೆಣ್ಣಮಕ್ಳು ಯಾರ ಸಪೋರ್ಟ್ ಮಾನಸಿಕವಾಗಿ ನೊಂದು ಸಾಯೊ ಅಂತಾ ನಿರ್ಧಾರ ತಗೊತಾರ.ಆ ನಿರ್ಧಾದ ಅವರ ಮನಸ್ಸಿನಾಗ ಗಟ್ಟಿ ಆಗಲಿಕ್ಕೆ ಬಿಡಲಾರ್ದೆ ತಂದೆ ತಾಯಿಗಳು ನಾವು ಇದ್ದೆವೆ ಎಂಬ ಧೈರ್ಯ ಆದ್ರು ಮಗಳಿಗಿ ಕೊಡಬೇಕು.ಕೊಟ್ಟ ಹೆಣ್ಣು ಕುಲಕ್ಕ ಹೊರಗ ಅಂತ ಅವಳಿಗಿ ಗಂಡನ ಆಸರೆ ಇಲ್ದೆ , ತವರಿನ ಆಸರೆ ಇಲ್ದೆ ಅವಳು ಸಾಯೋ ನಿರ್ಧಾರ ಮಾಡತಾಳ.ಈಗಿನ ಮಕ್ಕಳಿಗೆ ಸಾಯೊ ನಿರ್ಧಾರಕ್ಕ ಬರೊದು ಎಷ್ಟು ಸುಲಭ ಆಗಿಬಿಟ್ಟದ..! ಜೀವನದ ಒಂದಿಷ್ಟು ಕಷ್ಟಗಳು ಸಹಿಸಲಕ್ಕ ಆಗಲ್ಲ ಎಂಬ ಮನಸ್ಥಿತಿ ಗಿ ಬಂದ ಬಿಟ್ಟಾರ. ಸ್ವಲ್ಪ ಕೂಡ ಜೀವನದಾಗ ಏರುಪೇರಾದ್ರೂ ಆತ್ಮಹತ್ಯೆ ಮಾಡ್ಕೋತಾರ.ಈಗಿನ ಮಕ್ಕಳ ಮನಸ್ಥಿತಿ ಅಷ್ಯಾಕ ದುರ್ಬಲ ಆಗಬಿಟ್ಟದ. ಬರಿ ಹೆಣ್ಣಮಕ್ಖೆ ಅಲ್ಲ ಸಂಸಾರದ ಗಲಾಟೆದಾಗ ಗಂಡುಮಕ್ಳು ಕೂಡಾ ಆತ್ಮಹತ್ಯೆ ಮಾಡಕ್ಕೊಳ್ಳತಿದ್ದಾರ.ಹೆಂಡತಿ ಬಿಟ್ಟು ಹೋದ್ಳು ಅಂತಲೋ , ಮತ್ತೊಬ್ಬ್ರರ ಜೋತೆ ಸಂಭಂಧ ಅದ ಅಂತಲೋ , ಜಗಳ ಆಡ್ತಾಳೆ ಅಂತಲೋ , ಪದೆ ಪದೇ ತವರ ಮನಿಗಿ ಹೋಗತಾಳ ಅಂತಲೋ..ಕ್ಷುಲ್ಲಕ ಕಾರಣಗಳಿಗಿ ಆತ್ಮಹತ್ಯ ಮಾಡಿಕೊಳ್ಳುವ ಗಂಡಸರ ಬಗ್ಗೆ ಕೆಳತಿರತೀವಿ. ಸಂಸಾರದಲ್ಲಿನ ಜಗಳ ಆತ್ಮಹತ್ಯೆ ಯಲ್ಲಿ ಕೊನೆಯಾಗಬೇಕಾ..! ಈಗಿನ ಮದುವೆಗಳು ಎಷ್ಟು ಜಲ್ದಿ ನಿರ್ಣಾಯಕ ಹಂತಕ್ಕ ಬರತಿದ್ದಾವ. ತಪ್ಪು ಯಾರದು ಎಂದು ನಿರ್ಧರಿಸೊದು ಹ್ಯಾಂಗ್. ಅವರವರ ಜಾಗಕ್ಕ ಅವರವರದೆ ಸರಿ .ಎಲ್ಲಿ ತಪ್ಪತಿದ್ದೆವೆ ಎಂದು ತಿಳಕೊಳ್ಳಕ್ಕ ಪ್ರಯತ್ನಿಸುವ ತಾಳ್ಮೆ ಇಬ್ಬರಿಗೂ ಇಬ್ಬರ ಕಡೆಯವರಿಗೂ ಇಲ್ಲ.ಸಾವು ಒಂದೇ ಪರಿಹಾರ ಎಂದು ನಿರ್ಣಯಿಸಿಕೊಂಡವರಿಗೆ ಯಾವ ಉಪದೇಶಗಳು ಕಿವಿಯೊಳಗ ಹೋಗಲ್ಲ. ಇನ್ನೂ ಮದುವೆ ಎನ್ನುವದು ಈಗಿನ ತಲೆಮಾರಿನವರಿಗೆ ಅವಶ್ಯಕ ವಿಷಯ ಅಲ್ಲ.ಹೆತ್ತವ್ರು ಕೂಡ ಮಕ್ಕಳು ಸ್ವಾವಲಂಬಿ ಆಗಿ ದುಡುದು ತಮ್ಮ ತಾವು ನೋಡಕೊಳ್ಳತಾರ ಅನ್ನೊ ಭರವಸೆ ಬರುವವರೆಗೂ ಮಕ್ಕಳ ಮದುವೆಗೆ ಒತ್ತಾಯ ಮಾಡ್ಲೆಬಾರ್ದು.ಹೆಣ್ಣು ಮಕ್ಕಳಿಗಂತೂ ಸ್ವಾವಲಂಬಿ ತನ ಇನ್ನೂ ಅಗತ್ಯ ಅದ. ಗಂಡ ಗಳಿಸಿ ತಂದು ತನ್ನ ಎಲ್ಲಾ ಆಸಿ ಆಕಾಂಕ್ಷೆ ಪೂರಾ ಮಾಡ್ಲಿ ಎಂದು ಬಯಸೋದು ನೀಚತನ.ತನ್ನ ಮತ್ತು ಮಕ್ಕಳ ಜವಾಬ್ದಾರಿ ಗಂಡ ಒಬ್ಬಂದೆ ಅಲ್ಲ.ಮಕ್ಕಳು ಹಡೆದು ಕೊಟ್ಟ ಮಾತ್ರಕ್ಜೆ ತಾನು ಮಹಾನ್ ಅಲ್ಲ ಎಂಬುದು ಪ್ರತಿಯೊಬ್ಬ ಹೆಣ್ಣಮಕ್ಳು ತಿಳಕೋಬೇಕು. ಮದುವೆ ಅಂದ್ರ ಅವಲಂಬನೆ ಅಲ್ಲ.ಒಬ್ಬರಿಗೊಬ್ಬರು ಸಹಕಾರ ನಿಡೋದು.ವರದಕ್ಷಿಣೆ ಎಂಬುದು ಅಂದಿಗೂ ಇಂದಿಗೂ ಚಲಾವಣೆಯಲ್ಲಿ ಇರುವ ವಿಷಯ.ಹೆಣ್ಣು ಕಲತು ನೌಕರಿ ಮಾಡತಿದ್ದರೂ ತವರಿನಿಂದ ಏನಾದ್ರೂ ತರಲಿ ಎಂಬ ಹಂಬಲ ಗಂಡಿನ ಕಡೆಯವ್ರಿಗಿ ಇದ್ದೆ ಇರತದ.ಇದು ಪರೋಕ್ಷವಾಗಿ ಮಾತಿನ ಮುಖಾಂತರ ಬರತಾವ. ಗಂಡ ಅತ್ತೆ ಮಾವ ಈ ವಿಷಯಗಳು ಪದೇ ಪದೇ ಅನ್ನುವದು ಸೊಸೆಗೆ ಸಹಿಸದೆ ಜಗಳ ಶುರು ಆಗತಾವ.ವರದಕ್ಷಿಣೆ ಕಿರುಕುಳದ ಸಾವುಗಳು ಸಾಮಾಜಿಕ ಪಿಡುಗು. ಇದು ದುಡ್ಡಿದ್ದವರಲ್ಲೆ ಹೆಚ್ಚು . ಎಷ್ಟಿದ್ದರೂ ಇನ್ನೂ ಬೇಕು ಎಂಬ ಆಸೆ. ಎಷ್ಟೊಂದು ಧುಮ್ ಧಾಮ್ ಖರ್ಚು ಮಾಡಿ ಮಕ್ಕಳ ಮದುವೆ ಮಾಡ್ತೆವೆ.ಮದುವಿ ಆದಮ್ಯಾಲ್ ಜವಾಬ್ದಾರಿ ಮುಗಿತು ಅಂದುಕೊಳ್ಳದೆ ಮಕ್ಕಳಿಗೆ ಒತ್ತಾಸೆಯಾಗಿ ಇರಬೇಕು.ನಿಮ್ಮ ಜೊತೆಗೆ ನಾವಿದ್ದೆವೆ , ಎಂತಾ ಸಂದರ್ಭದಾಗೂ ನಿಮ್ಮ ಹಿಂದ ನಾವಿದ್ದೆವೆ ಅಂತ ಗಂಡ ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ದೈರ್ಯ ತುಂಬಬೇಕು. ಈಗಿನ ಪಿಳಿಗೆ ಸ್ವತಂತ್ರ ವಾಗಿ ಇರಬೇಕು ಅಂತ ಅಪೇಕ್ಷೆ ಪಡತಾರ.ಇರಲಿ , ತಂದೆ ತಾಯಿ ಕೂಡ ಮಕ್ಕಳಿಗಿ ಒಜ್ಜಿ ಆಗಲಕ್ಕ ಇಷ್ಟ ಪಡಲ್ಲ. ಮನಿಯೊಳಗ ಅತ್ತಿ ನಾದನಿ ಮಾವ ಇದ್ರ ಅವರ ಜೋಡಿ ಹೊಂದಾಣಿಕಿ ಆಗ್ಧೆ ಜಗಳ ಬರತದ ಅಂದ್ರ ಒಂದು ಕಾರಣ ಅನ್ನಬಹುದು.ಇಷ್ಟ ಪಟ್ಟು ಒಪ್ಪಿ ಮದುವೆ ಮಾಡಿಕೊಂಡು ಗಂಡ ಹೆಂಡತಿ ಇಬ್ರೆ ಇದ್ರು ಜಗಳ ಆಡಿ ಡೈವೊರ್ಸ ಮಾಡ್ಕೋತಾರ..ಆತ್ಮಹತ್ಯೆ ಮಾಡ್ಕೋತಾರ ಅಂದ್ರ ಇದಕ್ಕೆ ಯಾವ ಕಾರಣ ಹುಡಕಬೇಕು..!ಇಲ್ಲಿ ಸಮಸ್ಯೆ ಇರೊದು ಈಗಿನ ಯುವ ಜನರ ವಿಚಾರದಲ್ಲಿ.ತಾಳ್ಮೆಯ ಕೊರತೆ.ಮಕ್ಕಳಿಗಿ ಯಾವ ಕೊರತೆ ಇಲ್ದಂಗ ಬೆಳಸ್ತಿರೊ ತಂದೆ ತಾಯಿಗಳ್ದು ತಪ್ಪು. ಬಿಸಲು ಮಳಿ ಗಾಳಿಗಿ ಹೊಇಗಲಾರದಂಗ ಅವ್ರಿಗಿ ಕಾಪಾಡಿ ಒಂದು ಸರಿ ಅವ್ರು ಇವೆಲ್ಲ ಅನುಭವಿಸೊ ಪರಿಸ್ಥಿತಿ ಬಂದ್ರ ಸಹಿಸಲ್ಲ. ನಾವು ತಂದೆ ತಾಯಿಗಳು ಮಕ್ಕಳ ವಿಷಯವಾಗಿ ಅತೀ (possessive)ಸ್ವಾಮಿತ್ವ ಭಾವನೆ ಹೊಂದತಿದ್ದಿವಿ. ಅವರಿಗಿ ಯಾವ ನಿರ್ಧಾರ ತಗೊಳಕ್ಕ ಬಿಡಲಾರದಂಗ ಅವರಿಗಿ ಕಣ್ಣರೆಪ್ಪೆ ಹಾಂಗ ನೋಡಕೊಂಡು ಅವಲಂಬಿಸಿ ಇರೊಹಂಗ ಮಾಡ್ತಿರೋದು ಕೂಡ ಅವ್ರು ಬದುಕು ಎದುರಿಸಲಿಕ್ಕ ಆಗ್ದೆ ಇರೊದಕ್ಕ ಒಂದು ಕಾರಣ. ಮಕ್ಕಳು ಅಂದ್ರ ನಮ್ಮ ಮೂಲಕ ಈ ಭೂಮಿಗೆ ಬಂದ ಮುಂದಿನ ಪಳೆಯುಳಿಕೆ ಗಳು.ಅವ್ರೆ ನಮ್ಮ ಇಡೀ ಜಗತ್ತು ಅನ್ನೊಹಂಗ ಅವ್ರನ್ನ ಬೆಳೆಸೋದು ಒಂದು ರೀತಿ ಮಕ್ಕಳನ್ನು ದುರ್ಬಲ ಮಾಡ್ಲಿಕ್ಕೆ ಕಾರಣ ಆಗತದ. ಎಷ್ಟೋ ಮಕ್ಳು ತಂದೆ ತಾಯಿಗಿ ಹೊರೆ ಆಗತಾರ.ತಮಗ ಆಸರೆ ಆಗಬೇಕಾದ ಮಕ್ಕಳಗಿ ಜೀವನ ಪರ್ಯಂತ ತಾವೆ ಆಸರೆ ಆಗಬೇಕಾದ ಸಂದರ್ಭಗಳು ಇದ್ದಾವ. ವ್ಯಸನಕ್ಕ ಅಂಟಿಕೊಂಡ ಮಕ್ಕಳಿಗಿ , ಬೇಜವಾಬ್ದಾರಿ ಹೊಂದಿರುವ ಮಕ್ಕಳಿಗಿ ಮದುವೆ ಮಾಡಿದ್ರ ಹಾದಿಗಿ ಬರತಾನ ಅಂತ ಒಂದು ಹೆಣ್ಣು ತಂದು ಕಟ್ಟಿದ್ರ ಒಬ್ಬರ ಜೊತೆ ಮತ್ತೊಬ್ರ ಬದುಕು ಹಾಳು ಮಾಡಿದಂಗ. ಮದುವೆ ಅನ್ನುವದು ಕೇವಲ ಹೊಂದಾಣಿಕೆ ಅಲ್ಲ.ಸಾಂಗತ್ಯ.ಇಬ್ಬರು ಒಬ್ಬರಿಗೊಬ್ಬರು ಆಸರೆ ಆಗಿ ಇರಬೇಕಾದ ಸಂಭಂಧ.ಇದನ್ನು ವಿಜೃಂಭಣೆಯಿಂದ ಹಣ ಖರ್ಚು ಮಾಡಿ ಮಾಡುವದು ಬಿಡುವದು ಅವರವರ ಆಸಕ್ತಿ ಗೆ ಮತ್ತು ಆರ್ಥಿಕ ಸ್ಥಿತಿ ಮ್ಯಾಲ ಅವಲಂಬಿಸ್ತದ. ಅಷ್ಟು ಖರ್ಚು ಮಾಡಿ ಮಾಡಿದ ಮದುವೆ ಗಳ ಜೋಡಿಗಳು ಎಷ್ಟು ಸುಖ ಸಂತೋಷ ದಿಂದ ಜೀವನ ಮಾಡತಿದ್ದಾರ ಅನ್ನೊದು ಇವತ್ತಿನ ಚಿಂತನೆ ವಿಷಯ. ಹಾಗಂತ ಮದುವೆ ಮಾಡೋಧ ಬ್ಯಾಡ ಅಂತಲ್ಲ.ಮೊದಲು ನಮ್ಮ ಮಕ್ಕಳ ಸ್ವಾವಲಂಬಿ ತನ ಮತ್ತು ಅವರು ಸಂಬಂಧಗಳನ್ನು ನಿಭಾಯಿಸುವ ರೀತಿಗಳನ್ನು ನಾವು ಪರಿಕ್ಷಿಸಬೇಕು.ಅದಕ್ಕಾಗಿ ತಯ್ಯಾರಿಸಬೇಕು.ಎಲ್ಲಕ್ಕಿಂತ ಮುಖ್ಯ ಇಬ್ಬರೂ ಆರ್ಥಿಕ ವಾಗಿ ಸ್ವಾವಲಂಬಿ ಗಳಾಗಿರಬೇಕು.ಇದು ಎಲ್ಲಕ್ಕಿಂತ ಮುಖ್ಯ. ಮಕ್ಕಳು ಹರೆಯಕ್ಕ ಬರುತ್ತಲೆ ಮದುವೆ ಮಾಡಲಕ್ಕ ಇಲ್ಲ ಮದುವೆ ಆಗಲಿಕ್ಕ ಒತ್ತಾಯಿಸುವ ಹೆತ್ತವರು ಮೊದಲು ಅರ್ಥ ಮಾಡಕೊಬೇಕು..ನಮ್ಮ ಮಕ್ಕಳು ಮದುವೆ ಅನ್ನೊ ಸಂಭಂಧ ನಿಭಾಯಿಸಲಕ್ಕ ಎಷ್ಟು ತಯ್ಯಾರಿದ್ದಾರ ಅನ್ನುವ ವಿಷಯ.ನಮ್ಮ ದೇಶದಲ್ಲಿ ಮದುವೆಗೆ ಇದ್ದಷ್ಟು ಪ್ರಾಮುಖ್ಯತೆ , ಮದುವೆ ನಂತರ ಬರುವ ಸಮಸ್ಯೆ ಗಳಿಗೆ ಇಲ್ಲ. ಗಂಡ ಹೆಂಡತಿ ಅಂದ ಮ್ಯಾಲ ಇವೆಲ್ಲ ಸಾಮಾನ್ಯ. ಮಕ್ಕಳು ಆದ ಮ್ಯಾಲ್ ಇನ್ನೆಂತ ಜಗಳ , ಅಂತ ಸಮಸ್ಯೆ ಗಳನ್ನು ದೂರ ಮಾಡಲು ನೊಇಡತೀವಿ.ಇವುಗಳನ್ನು ಚಿಕ್ಕ ಸಮಸ್ಯೆ ಅಂತ ನೋಡ್ದೆ ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಆಸರೆ ಆಗಿ ನಿಲ್ಲಬೆಕಾದ್ದು ಹೆತ್ತವರ ಕರ್ತವ್ಯ. pic:AIcreated ಜ್ಯೋತಿ ಡಿ ಬೊಮ್ಮಾ ಅವರುಕಲಬುರ್ಗಿ ಜಿಲ್ಲೆಯವರು.ಇವರು ಇದುವರೆಗುನಾಲ್ಕು ಕವನ ಸಂಕಲನಗಳನ್ನು ಎರಡು ಪ್ರಬಂಧ ಸಂಕಲನಗಳನ್ನುಪ್ರಕಟಿಸಿದ್ದಾರೆ. ಸಂಗಾತಿಪತ್ರಿಕೆಗಾಗಿಯೇ ಇವರು ದೇಸಿ ನುಡಿಗಟ್ಟಿನಲ್ಲಿ ವಿಶಿಷ್ಠ, ವಿಶೇಷ ವಿಷಯಗಳ ಬಗ್ಗೆ ಪ್ರತಿ ತಿಂಗಳೂ ಬರೆಯುತ್ತಿದ್ದಾರೆ
ಅಂಕಣ ಸಂಗಾತಿ ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ-36 ನಾವು ಆ ಶಾಖೆಗೆ ಹೋದಾಗ ಶಾಖಾಧಿಕಾರಿ ಆಗಿದ್ದವರು ಶ್ರೀ ಸತ್ಯನಾರಾಯಣ ಅವರು. ಅವರು ಮೂಲತಃ ಶ್ರೀನಿವಾಸಪುರರದವರು. ನನ್ನ ತಂದೆಯ ಊರು ಸಹ ಅದೇ ಆಗಿದ್ದು ಕೆಲವು ಹಳಬರನ್ನು ನೆನೆಸಿಕೊಂಡು ಮಾತನಾಡುತ್ತಿದ್ದೆವು. ಅವರಿಗೆ ಆಫೀಸಿನಲ್ಲೇ ಹೃದಯಘಾತ ಆಗಿತ್ತು. .ನಂತರ ಚೇತರಿಸಿಕೊಂಡರು. ಆದರೆ ನಮಗೆಲ್ಲ ಒಂದು ರೀತಿಯ ಶಾಕ್ ಆಗಿದ್ದಂತೂ ನಿಜ .ಆಗ ಇಷ್ಟೆಲ್ಲ ಹೃದಯಾಘಾತಗಳ ವಿಷಯ ಕೇಳದೆ ಇದ್ದರಿಂದ ಅದು ಅಪರೂಪದ ಸಂಗತಿಯಾಗಿತ್ತು. ಹಾಗೆಯೇ ಶಾಖೆ ಎರಡರಲ್ಲಿ ಅತ್ಯಂತ ನೆನಪಿನಲ್ಲಿ ಉಳಿದ ವಿಷಯವೆಂದರೆ ಜನವರಿ ಒಂದನೆಯ ತಾರೀಕು ನಾವು ಹೆಂಗಳೆಯರೆಲ್ಲ ಸೇರಿ ಗೋಸಾಯಿ ಘಾಟ್ ಗೆ ಪ್ರವಾಸ ಹೋಗಿದ್ದು. ಆ ಬಾರಿ ಜನವರಿ ಒಂದನೆಯ ತಾರೀಕು ಶನಿವಾರ ಬಂದದ್ದು ಅಂದು ನಮಗೆ ಅರ್ಧ ದಿನ ಮಾತ್ರ ಕಚೇರಿ ಆದ್ದರಿಂದ ನೀವು ಪ್ರವಾಸವನ್ನು ಯೋಚಿಸಿದೆ ಕೆಳಗಡೆ ಇದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಒಂದು ಸಣ್ಣ ಮೆಟದ ಬುಕ್ ಮಾಡಿಕೊಂಡು ಮದ್ಯಾಹ್ನ ಹೊರಟೆವು ಎಲ್ಲರೂ ಅವರವರ ಮನೆಯಿಂದ ವಿಶೇಷ ತಿಂಡಿಗಳನ್ನು ಮಾಡಿಕೊಂಡು ಬರುವುದಾಗಿ ನಾನು ಅಂದು ಅವರೇ ಕಾಳು ರೊಟ್ಟಿ ಮಾಡಿ ತಂದಿದ್ದೆ. ಹತ್ತು ರೊಟ್ಟಿಗಳು ನಮಗಾಗಿ ಹಾಗೂ ಮತ್ತೆ ಎರಡು ಬೇರೆ ಬಾಕ್ಸ್ ನಲ್ಲಿ ಮಂಜುಗಾಗಿ. ತುಂಬಾ ಖುಷಿಯಾಗಿ ತಿಂದಿದ್ದ ಅಂದು.ಸರಿ ಅಲ್ಲಿ ಮಧ್ಯಾಹ್ನ ಹೋದ ತಕ್ಷಣ ಎಲ್ಲರೂ ಡಬ್ಬಿಗಳಿಂದ ಹಂಚಿಕೊಂಡು ತಿಂದದ್ದಾಯಿತು. ಇನ್ನು ಮೂರು ರೊಟ್ಟಿಗಳು ಉಳಿದಿದ್ದನ್ನು ರಾಜಿ ಮನೆಗೆ ತೆಗೆದುಕೊಂಡು ಹೋದಳು. ಸುಮಾ ತಂದಿದ್ದ ಉಳಿದ ಪೂರಿ ಆಲೂಗೆಡ್ಡೆ ಪಲ್ಯ ನಾನು ಮನೆಗೆ ತೆಗೆದುಕೊಂಡು ಬಂದೆ. ಸ್ವಲ್ಪ ಹೊತ್ತು ನೀರಿನಲ್ಲಿ ಇಳಿದು ಹಾಡಿ ನಂತರ ದೋಣಿಯಲ್ಲಿ ಒಂದು ರೌಂಡ್ ಹೋಗಿ ಬಂದು ಐದು ಗಂಟೆಗೆ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದೆವು ಪ್ರತಿ ವರ್ಷ ಜನವರಿ ಒಂದನೆಯ ತಾರೀಕು ಆ ದಿನ ನಾವು ಹೋದ ಪ್ರವಾಸದ ನೆನಪು ಆಗುತ್ತಲೇ ಇರುತ್ತದೆ.ಹಾಗೆ ಮತ್ತೊಂದು ಕಹಿ ನೆನಪು ಎಂದರೆ ಪ್ರತಿ ನಿಧಿ ಬಾಂಧವರೂ ಪರ ಮನೆಯ ಗೃಹಪ್ರವೇಶಕ್ಕೆ ಹೋದಾಗ ನನ್ನದೊಂದು ಸಣ್ಣ ಚಿನ್ನದ ಸರ ಕಳೆದುಹೋದದ್ದು. ನಂಜನಗೂಡಿನ ಗೆಳತಿ ಇಂದುಮತಿ ಅವರ ತಮ್ಮನ ಮೂಲಕ ದುಬೈ ನಿಂದ ತರಿಸಿದ್ದ ೫ ಗ್ರಾಂ ನ ಸರ. ಬಹಳ ವರ್ಷಗಳಿಂದ ಭೇಟಿ ಆಗದೆ ಇದ್ದ ಪಿಯುಸಿ ಗೆಳತಿ ಲತಾ ಅವರ ನೆರೆಯ ಮನೆಗೆ ನಾವು ಗೃಹಪ್ರವೇಶಕ್ಕೆ ಹೋಗಿದ್ದು ಅವಳು ಸಿಕ್ಕಿದ್ದು ತುಂಬಾ ಖುಷಿಯಾಗಿತ್ತು. ಆಗಿನು ಮೊಬೈಲು ಕಾಲಿಟ್ಟ ಸಮಯ ಅವಳ ಬಳಿ ನನ್ನ ಬಳಿ ಇಬ್ಬರ ಬಳಿಯೂ ಮೊಬೈಲ್ ಇರಲಿಲ್ಲ ಹಾಗಾಗಿ ಮತ್ತೆ ಸ್ನೇಹ ಮುಂದುವರಿಸಲು ಆಗಲಿಲ್ಲ. ಮೊದಲೇ ಹೇಳಿದಂತೆ ಮನೆಯ ಬಳಿ ಇದ್ದ ಶಾಖೆ ಐದಕ್ಕೆ ವರ್ಗಾವಣೆ ಕೇಳಿದ್ದು ಆದರೆ ಅಲ್ಲಿ ಹೆಚ್ ಜಿ ಎ ಅಂದರೆ ನಮ್ಮ ಪೋಸ್ಟ್ ಖಾಲಿ ಇರಲಿಲ್ಲ. ಅಲ್ಲಿಗೆ ವರ್ಗಾವಣೆ ಬಯಸಿದವರಲ್ಲಿ ನನ್ನ ಜೊತೆಗೆ ಬಂದು ರಿಪೋರ್ಟ್ ಆದ ಮೊದಲನೇ ಸ್ಥಾನ ಹಾಗೂ ನನ್ನದು ಎರಡನೆಯ ಸ್ಥಾನ. ಅಲ್ಲಿ ಪೋಸ್ಟ್ ಖಾಲಿ ಇಲ್ಲ ಅಂದಮೇಲೆ ಈ ವರ್ಷ ನಮಗೆ ವರ್ಗಾವಣೆ ಇಲ್ಲ ಎಂದು ಖಾತ್ರಿ ಯಾಗಿತ್ತು ಆದರೆ ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿ ಇದ್ದುದರಿಂದ ಇನ್ನೂ ಒಂದು ವರ್ಷ ಹಾಯಾಗಿ ಇರಬಹುದು ಆದರೆ ಈ ಶಾಖೆ ಇವಾಗ ಕಟ್ಟಡಕ್ಕೆ ಅಂದರೆ ಬನ್ನಿ ಮಂಟಪಕ್ಕೆ ಸ್ಥಳಾಂತರ ಗೊಳ್ಳುವ ಯೋಜನೆ ಇತ್ತು. ಹಾಗಾಗಿ ಸ್ಥಳಾಂತರಗೊಳ್ಳುವ ಮೊದಲು ನಮಗೆ ವರ್ಗಾವಣೆ ಸಿಕ್ಕಿದರೆ ಒಳ್ಳೆಯದು ಎಂದಿತ್ತು. ಏಕೆಂದರೆ ನಮ್ಮ ಏರಿಯಾದಿಂದ ಬನ್ನಿಮಂಟಪಕ್ಕೆ ಎರಡೆರಡು ಬಸ್ ಹಿಡಿದು ಹೋಗಬೇಕಿತ್ತು. ಬಹಳ ದೂರವೂ ಇತ್ತು. ಆ ದೇವರಿಗೆ ನಮ್ಮ ಮೊರೆ ಕೇಳಿಸಿತೇನೋ ಎಂಬಂತೆ ಆ ವರ್ಷ ಶಾಖೆ ಎರಡರ ಇಬ್ಬರಿಗೆ ಸಹಾಯಕ ಅಧಿಕಾರಿಗಳಾಗಿ ಬಡ್ತಿ ಸಿಕ್ಕಿತು ಗಿರಿಜಾ ಮತ್ತು ರೇಣುಕುಮಾರಿ ಇಬ್ಬರು ಪದೋನ್ನತಿ ಹೋಗಲು ಒಪ್ಪಿಗೆ ಕೊಟ್ಟಿದ್ದರಿಂದ ನಮಗೆ ಅಲ್ಲಿ ಎರಡು ಪೋಸ್ಟ್ ಖಾಲಿ ಆಗಿತ್ತು, ಇನ್ನು ವರ್ಗಾವಣೆ ಆದೇಶ ಬರುವುದಷ್ಟೇ ಬಾಕಿ. ನಾನು ರಜೆ ಹಾಕಿದ್ದೆ. ಒಂದ್ಸಲ ನಮ್ಮ ಮನೆಯಲ್ಲಿ ಕಾಲ್ ಮಾಡಿದ್ದಳು ನನ್ನ ರಿಲವಿಂಗ್ ಆರ್ಡರ್ ಬಂದಿದ್ದು 15ನೆಯ ತಾರೀಕು ನಾವು ಆಗಬೇಕಿತ್ತು ಅಂದೇ ಮಧ್ಯಾಹ್ನ ನಾವಿಬ್ಬರೂ ಯಾಕೆಯವರಿಗೆ ಊಟ ಕೊಡಿಸೋಣವ ಎಂದು ಕೇಳಿದಳು ಆಯಿತು ಎಂದು ಹೇಳಿ ಹಬ್ಬದ ಮಾರನೆಯ ದಿನ ಮಧ್ಯಾಹ್ನ ನಮ್ಮ ಪಾರ್ಟಿ ಕೊಟ್ಟು ಸಂಜೆಗೆ ರಿಲೀಸ್ ಆದದ್ದು 1೭ನೆಯ ತಾರೀಕು ಸೋಮವಾರ ನಾವು ಶಾಖೆ ಐದಕ್ಕೆ ರಿಪೋರ್ಟ್ ಆಗಬೇಕಿತ್ತು ಈ ಹಿಂದೆ ನಂಜನಗೂಡಿನಲ್ಲಿ ನಮಗೆ ಬ್ರಾಂಚ್ ಮ್ಯಾನೇಜರ್ ಆಗಿದ್ದ ಸಿಕೆ ರವಿ ಅವರೇ ಅಲ್ಲಿ ಈಗ ಶಾಖಾಧಿಕಾರಿಗಳು ಅವರು ಶಾಖೆಗೆ ಫೋನ್ ಮಾಡಿ ನನಗೆ ಹೊಸ ವ್ಯವಹಾರ ವಿಭಾಗ ಕೊಡುವುದಾಗಿ ತಿಳಿಸಿದರು. ವತ್ಸಲಾಗೆ ಮಾರುಕಟ್ಟೆ ವಿಭಾಗ. ನನ್ನದೇನೂ ಅಭ್ಯಂತರವಿರಲಿಲ್ಲ. ಅಂತೂ ಇಂತೂ ಶಾಖೆ ಐದಕ್ಕೆ ಬಂದು ರಿಪೋರ್ಟ್ ಆದೆವು. ಮೊಟ್ಟ ಮೊದಲ ಬಾರಿ ಡ್ಯೂಟಿ ರಿಪೋರ್ಟ್ ಜೊತೆಗೆ ವರ್ಗಾವಣೆ ಕೋರಿಕೆ ಪತ್ರ ಇರಲಿಲ್ಲ. ಮುಂದೆ ನಿವೃತ್ತಿಯಾಗುವವರೆಗೂ ಬರೋಬರಿ 21 ವರ್ಷ ಇದೆ ಶಾಖೆಯಲ್ಲಿ ಸೇವೆ ಸಲ್ಲಿಸುತ್ತೇವೆ ಎಂಬ ಅಂದಾಜು ಸಹ ಅಂದು ಇರಲಿಲ್ಲ. ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿ ಇದ್ದ ಆ ಶಾಖೆಯ ಪಕ್ಕದಲ್ಲಿ ರಾಜ್ಯ ಸರ್ಕಾರದ ಕೆ ಜಿ ಐ ಡಿ ಕಚೇರಿಯೂ ಸಹ ಇತ್ತು. ರಸ್ತೆಯ ಎಡಬದಿಯಲ್ಲಿ ಇದ್ದ ಆ ಶಾಖೆ 2 ಅಂತಸ್ತಿನದಾಗಿತ್ತು ನನ್ನ ಹೊಸ ವ್ಯವಹಾರ ವಿಭಾಗ ಮೊದಲನೆಯ ಮಹಡಿಯಲ್ಲಿ ಇತ್ತು. ಮೊದಲಿಂದ ಪರಿಚಿತರಾಗಿದ್ದ ಶೈಲಾ ವೀಣಾ ಮಂಗಳ ಶಾಂತ ಹಾಗೂ ಎದುರು ಮನೆಯಲ್ಲಿ ಇದ್ದ ಸಾವಿತ್ರಿ ಎಲ್ಲರೂ ಇಲ್ಲೇ ಇದ್ದರು. ಹೊಸ ವಾತಾವರಣ ಅನಿಸಲೇ ಇಲ್ಲ ತುಂಬಾ ಬೇಗ ಅಂದುಕೊಳ್ಳುವಂತೆ ಆಯಿತು.ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ರಾಜೇಂದ್ರ ಅವರು ಸಹಾಯಕ ಆಡಳಿತ ಅಧಿಕಾರಿಗಳಾಗಿ ಇದ್ದರೆ ಸಹಾಯಕ ರಾಗಿ ನನ್ನದೇ ಹೆಸರಿನ ಜಿ ಸುಜಾತ ಮತ್ತು ಗುರುರಾಜ್ ಅವರು ಅಲ್ಲಿ ಇಬ್ಬರು ಹೆಜ್ಜೆಯಗಳಿದ್ದು ನಮ್ಮದೇ ಯೂನಿಯನ್ ನ ಸಿ ಚಂದ್ರಕುಮಾರ್ ಅವರು ಸಹ ಅದೇ ವಿಭಾಗದಲ್ಲಿ ಇದ್ದರು. ಆಗಿಲ್ಲ ಪಾಲಿಸಿಗಳು ಹೆಚ್ಚಾಗಿ ಬರುತ್ತಿದ್ದು ಆ ವಿಭಾಗದಲ್ಲಿ ಕೈ ತುಂಬಾ ಕೆಲಸ ಇತ್ತು ಆಸಕ್ತಿದಾಯಕವಾಗಿಯೂ ನಾನು ಈ ಮೊದಲು ಅದೇ ಹೊಸ ವ್ಯವಹಾರ ವಿಭಾಗದಲ್ಲಿ ಮಾಡಿದಾಗ ಪೂರ್ತಿ ಮಾನ್ಯುಯಲ್ ಕೆಲಸಗಳಿತ್ತು ಈಗ ಎಲ್ಲವೂ ಕಂಪ್ಯೂಟರ್ನಲ್ಲಿ ಮಾಡಬೇಕಿತ್ತು ಹೊಸದಾಗಿ ಕಲಿಯುವ ಆಸಕ್ತಿಯು ತುಂಬಾ ಖುಷಿಯಾಗುವಂತಿತ್ತು. ರವೀಶ್ ಅವರು ಊರಿನಲ್ಲಿ ಇದ್ದಾಗ ಮದ್ಯಾಹ್ನ ಊಟಕ್ಕೂ ಸಹ ಕರೆದುಕೊಂಡು ಹೋಗಿ ಬಂದು ಬಿಡುತ್ತಿದ್ದರು. ಸಕಲೇಶಪುರ ಬಿಟ್ಟ ಮೇಲೆ ಮಧ್ಯಾಹ್ನ ಮನೆಯ ಬಿಸಿಯೂಟ ಮತ್ತೆ ದೊರೆಯಿತು ಅನ್ನಬಹುದು.(ಮುಂದುವರೆಯುವುದು) ಸುಜಾತಾ ರವೀಶ್
“ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್ ಗೌಡ ಪಾಟೀಲ್
ಮಕ್ಕಳ ಸಂಗಾತಿ “ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್ ಗೌಡ ಪಾಟೀಲ್ ಅದೆಷ್ಟೇ ಮನಸ್ಸು ಕ್ಷೋಭೆಗೊಳಗಾಗಿರಲಿ ಆತಂಕಿತ ವಾಗಿರಲಿ ಸಂಗೀತದ ನಾದ ತರಂಗಕ್ಕೆ ಮನದ ನೋವು ನಿವಾರಿಸುವ ಶಕ್ತಿ ಇದೆ. ಮನಸ್ಸನ್ನು ಸಮಾಧಾನಗೊಳಿಸುವ, ಆಳವಾದ ನೆಮ್ಮದಿಯನ್ನು ನೀಡುವ ಮನಸ್ಸನ್ನು ಅದ್ವಿತೀಯ ವಿಶ್ರಾಂತ ಸ್ಥಿತಿಗೆ ಕರೆದೊಯ್ಯುವ ಶಕ್ತಿ ಇದೆ…. ಸಂಗೀತ ನಮ್ಮನ್ನು ನಾವಿರುವ ಭಾವದಿಂದ ತನ್ನದೇ ಆದ ಲೋಕಕ್ಕೆ ಕರೆದೊಯ್ಯುತ್ತದೆ.ಲಲಿತ ಕಲೆಗಳಲ್ಲಿ ಒಂದಾದ ಸಂಗೀತವು ಮಕ್ಕಳಲ್ಲಿ ರಾಗ, ತಾಳ, ಲಯಗಳ ಜ್ಞಾನದ ಜೊತೆಗೆ ಹತ್ತು ಹಲವು ವಿಭಿನ್ನ ಸಂಗತಿಗಳಲ್ಲಿ ಹೆಚ್ಚಿನ ಕಲಿಕೆಯನ್ನು ನೀಡುತ್ತದೆ.ವ್ಯಕ್ತಿಯ ಬೌದ್ಧಿಕ ಭಾವನಾತ್ಮಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿಗೆ ಒಳ್ಳೆಯ ಬುನಾದಿಯನ್ನು ಹಾಕುತ್ತದೆ. ಆದ್ದರಿಂದಲೇ ಮಕ್ಕಳನ್ನು ಚಿಕ್ಕಂದಿನಲ್ಲಿಯೇ ಸಂಗೀತ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆಟ ಪಾಠಗಳಂತೆ ಲಲಿತ ಕಲೆಗಳಲ್ಲಿ ಒಂದಾದ ಸಂಗೀತವೂ ಕೂಡ ಅತ್ಯವಶ್ಯಕ ಎಂಬುದನ್ನು ಮನಗಂಡಿರುವ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಪ್ರತಿ ವಾರಕ್ಕೆ ಎರಡರಿಂದ ಮೂರು ಅವಧಿಯಲ್ಲಿ ಸಂಗೀತ ಶಿಕ್ಷಣವನ್ನು ಕಡ್ಡಾಯವಾಗಿ ಕಲಿಸುವ ವ್ಯವಸ್ಥೆ ಮಾಡಿದೆ. ಪರಿಣಾಮವಾಗಿ ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯದೆ ಹೋದರೂ ಕೂಡ ತಕ್ಕಮಟ್ಟಿಗೆ ಸಂಗೀತದ ಜ್ಞಾನ ಮಕ್ಕಳಿಗೆ ದೊರೆಯುತ್ತದೆ. ಸಂಗೀತ ಕಲೆ…. ಕೇವಲ ಕಲೆಯಲ್ಲ..ಅದು ಜೀವನವನ್ನು ಅರಿಯುವ ಮಾರ್ಗ. ಸಂಗೀತವನ್ನು ಕಲಿಯುವ ಮಕ್ಕಳಲ್ಲಿ ಗಮನಾರ್ಹ ಬದಲಾವಣೆಯನ್ನು ನಾವು ಕಾಣಬಹುದು. ಸೂಕ್ಷ್ಮವಾದ ಹಾಗೂ ಅತ್ಯುತ್ತಮವಾದ ಗ್ರಹಿಕೆಯ ಶಕ್ತಿ ಮಕ್ಕಳದಾಗುತ್ತದೆ. ಸ್ಮರಣಶಕ್ತಿ ಕೂಡ ಹೆಚ್ಚುತ್ತದೆ. ಚಿಕ್ಕ ಪುಟ್ಟ ಬದಲಾವಣೆಗಳಿಂದ ಉಂಟಾಗುವ ವ್ಯತ್ಯಾಸಗಳ ಅರಿವು ಮೂಡುತ್ತದೆ…. ಇದರ ಪರಿಣಾಮವಾಗಿ ಮಕ್ಕಳು ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಬದುಕಿನ ಎಲ್ಲಾ ಹಂತಗಳಲ್ಲಿ ತಮ್ಮ ಗ್ರಹಣ ಶಕ್ತಿಯ ಸೂಕ್ಷ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಸಂಗೀತ ಶಿಕ್ಷಣವು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ. ಸಂಗೀತದ ಮೂಲಕ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವಂತೆ ಮಕ್ಕಳನ್ನು ಕ್ರಿಯಾಶೀಲಗೊಳಿಸುತ್ತದೆ. ಮಕ್ಕಳ ಸೃಜನಶೀಲತೆ ಅರಳುವುದು ಇಂತಹ ಕ್ರಿಯಾಶೀಲ ಅಭಿವ್ಯಕ್ತಿಗಳಿಂದ ಮಾತ್ರ. ಹೊಸ ವಿಚಾರಗಳನ್ನು ಅರಿಯಲು, ಹೊಸ ವಿಷಯಗಳನ್ನು ಪ್ರಸ್ತುತಪಡಿಸಲು ಸಂಗೀತವು ಅವರಿಗೆ ಸೂಕ್ಷ್ಮವಾದ ಕಲಿಕಾ ಕೌಶಲ್ಯವನ್ನು ನೀಡುತ್ತದೆ.ಸಂಗೀತದಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರೆ ಅಚ್ಚರಿ ಪಡದಿರಿ. ನಿರಂತರವಾಗಿ ಸಂಗೀತದ ಅಭ್ಯಾಸವನ್ನು ಮಾಡುವುದರಿಂದ ಹಾಗೂ ಒಳ್ಳೆಯ ಸುಮಧುರವಾದ ಸಂಗೀತವನ್ನು ಕೇಳುವ ಮೂಲಕ ಉದ್ರಿಕ ನರಗಳನ್ನು ಶಾಂತಗೊಳಿಸಬಹುದು. ಮೈ-ಮನಗಳಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ತರುವ ಸಂಗೀತದ ನಾದ ತರಂಗಗಳು ಮನಸ್ಸಿನ ಬೇಗುದಿಯನ್ನು ತೊಡೆದು ಹಾಕುವ ಮೂಲಕ ಶಾಂತ ಮನಸ್ಥಿತಿಗೆ ಕಾರಣವಾಗುತ್ತದೆ. ಸಂಗೀತವು ವ್ಯಕ್ತಿಯ ಆತ್ಮವಿಶ್ವಾಸ ವೃದ್ದಿಗೆ ಸಾಧನ…. ನಿರಂತರವಾದ ತರಬೇತಿಯ ಮೂಲಕ ಕಲಿಕೆಯಲ್ಲಿ ಆತ್ಮವಿಶ್ವಾಸ ಹೆಚ್ಚಿದರೆ, ವೇದಿಕೆಯನ್ನು ಏರಿ ಕಲಿತ ವಿದ್ಯೆಯನ್ನು ಪ್ರಸ್ತುತಪಡಿಸಲು ಅತ್ಯವಶ್ಯಕವಾದ ಧೈರ್ಯವನ್ನು ಸಂಗೀತವು ನೀಡುತ್ತದೆ. ಆತ್ಮವಿಶ್ವಾಸ ವೃದ್ಧಿಗೆ ಇದಕ್ಕಿಂತ ಇನ್ನೇನು ಬೇಕು ? ಸಾರ್ವಜನಿಕರೊಂದಿಗೆ ಸಂವಹನ ಸಾಧ್ಯವಾಗುತ್ತದೆ. ಮತ್ತಷ್ಟು ಮಗದಷ್ಟು ಕಲಿಕಾ ಆಸಕ್ತಿ ಹೆಚ್ಚುತ್ತದೆ.ಸಾಂಸ್ಕೃತಿಕ ಮೌಲ್ಯಗಳ ಪರಿಚಯ ಮಾಡಿಕೊಡುವ ಸಂಗೀತವು ನಮ್ಮ ದೇಶದ ಮಹೋನ್ನತ ಸಂಗೀತ ಪರಂಪರೆಯ ಅರಿವನ್ನು ಮೂಡಿಸುತ್ತದೆ. ವಿವಿಧ ರಾಗ ತಾಳ ಲಯಗಳ ಜ್ಞಾನವನ್ನು ನಮಗೆ ಪ್ರಚುರಪಡಿಸುತ್ತದೆ. ಸಂಗೀತದ ವೈವಿಧ್ಯಗಳ ಕುರಿತು ಹೊಸ ಕುತೂಹಲವನ್ನು ಮೂಡಿಸುತ್ತದೆ. ವಿವಿಧ ಶೈಲಿಗಳ, ತಾಳ ವಾದ್ಯಗಳ ಅರಿವನ್ನು ಮೂಡಿಸಿ ನಮ್ಮ ಮಹೋನ್ನತ ಗುರು ಪರಂಪರೆಯ ಕುರಿತು ಕೃತಜ್ಞತಾ ಭಾವವನ್ನು ಮೂಡಿಸುತ್ತದೆ. ಸಂಗೀತ ಕಲಿಕೆಯು ನಮ್ಮ ಬದುಕಿನಲ್ಲಿ ಶಿಸ್ತಿನ ಪಾಲನೆಗೆ ಕಾರಣವಾಗುತ್ತದೆ… ಪ್ರತಿದಿನವೂ ಸಂಗೀತವನ್ನು ಕಲಿಯುವ ನಿಟ್ಟಿನಲ್ಲಿ ತರಬೇತಿ ಹೊಂದುವ ಪ್ರತಿ ಮಗುವು ಕೂಡ ತಮ್ಮದೇ ಆದ ಕೆಲ ಪದ್ಧತಿಗಳನ್ನು ರೂಡಿಸಿಕೊಳ್ಳುತ್ತಾರೆ. ತಮಗೆ ಒಗ್ಗುವ ಊಟೋಪಚಾರ, ಆಹಾರ ವಿಹಾರಗಳನ್ನು ಪಾಲಿಸುತ್ತಾರೆ ಇದು ಅವರಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಿಸ್ತಿನ ಪರಿಪಾಲನೆಗೆ ಸಹಕಾರಿಯಾಗುತ್ತದೆ. ನಿಯಮ ಹಾಗೂ ಸಮಯ ಪಾಲನೆಯ ಕಾರಣದಿಂದಾಗಿ ಒಂದು ಬಗೆಯ ಶಿಸ್ತು ಅವರಲ್ಲಿ ಉಂಟಾಗುತ್ತದೆ. ಗುಂಪಿನಲ್ಲಿ ಹಾಡುವ ಮೂಲಕ ಸಾಮಾಜಿಕ ಸಾಂಗತ್ಯದ ಸಾಮರ್ಥ್ಯ ಬೆಳೆಯುತ್ತದೆ ವಿಭಿನ್ನತೆಯಲ್ಲಿಯೂ ಏಕತೆಯನ್ನು ಕಾಣುವ ಶಕ್ತಿ ಸಂಗೀತಕ್ಕಿದೆ. ಇತರರಲ್ಲಿರುವ ವಿಭಿನ್ನ ಗ್ರಹಿಕೆಯ ಶಕ್ತಿ,, ಕಲಿಕಾ ಸಾಮರ್ಥ್ಯ, ಸಮಯ ಪಾಲನೆ, ಶ್ರದ್ಧೆ,ಕಾರ್ಯ ತತ್ವರತೆಗಳು ನಮ್ಮನ್ನು ಪ್ರೇರೇಪಿಸುತ್ತವೆ. ಸಂಗೀತವು ಸ್ನೇಹ ಭಾವವನ್ನು ಹಾಗೂ ಗೌರವವನ್ನು ವೃದ್ಧಿಸುತ್ತದೆ. ನಮ್ಮ ಮನದಾಳದ ಮಾತುಗಳನ್ನು ನಮಗರಿವಿಲ್ಲದೆ ಸಂಗೀತದ ಮೂಲಕ ಹೊರಹಾಕುವ ಪ್ರತಿ ವ್ಯಕ್ತಿಯು ಇನ್ನಿಲ್ಲದ ನಿರುಮ್ಮಳತೆಯನ್ನು ಅನುಭವಿಸುತ್ತಾರೆ….ಆದ್ದರಿಂದ ತರಗತಿಯ ಕೋಣೆಯಲ್ಲಿ ಕಡ್ಡಾಯವಾಗಿ ದೊರೆಯುವ ಸಂಗೀತ ಶಿಕ್ಷಣದಿಂದ ನಿಮ್ಮ ಮಕ್ಕಳನ್ನು ವಂಚಿತಗೊಳಿಸದಿರಿ. ವೀಣಾ ಹೇಮಂತ್ ಗೌಡ ಪಾಟೀಲ್
“ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಧಾರಾವಾಹಿ ಸಂಗಾತಿ-21 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಜಯದೇವಿ ತಾಯಿಯವರು ಕೋರ್ಟ್ ಕೇಸ್ನ್ನ ಗೆದ್ದು…..“ನ್ಯಾಯಕ್ಕೆ ಜೀವ ತುಂಬಿದರು.*ಆಗಿನ ಕಾಲದಲ್ಲಿ ಜಯದೇವಿ ತಾಯಿಯವರ ಪತಿಯು ಬಾಲಕರೆಂದು ಬ್ರಿಟಿಷರ ಮೇಲ್ವಿಚಾರಣೆಯಲ್ಲಿದ್ದ ದೊಡ್ಡ ಆಸ್ತಿ, ಜಮೀನು, ಮನೆ, ವ್ಯವಹಾರ—ಎಲ್ಲವು ಒಂದೇ ಕ್ಷಣದಲ್ಲಿ ತಾಯಿ ಯ ಹೆಗಲ ಮೇಲೆ ಬಿದ್ದವು.ಪುರುಷರೇ ಹೆದರಿಬಿಡುವಂತಹ ಜವಾಬ್ದಾರಿಯನ್ನು ಒಬ್ಬ ಹೆಣ್ಣು ಮಗಳು ಒಬ್ಬಳೇ ಹೊತ್ತು ನಿಲ್ಲುವುದು ಅಂದಿನ ಸಮಾಜದಲ್ಲಿ ಅಸಾಧ್ಯವೆಂದು ಎಲ್ಲರೂ ಭಾವಿಸಿದ್ದರು.ಆದರೆ ಜಯದೇವಿ ತಾಯಿ ಒಬ್ಬ ಸಬಲ ತಾಯಿತನದ ಶಕ್ತಿಯಾಗಿ ನಿಂದರು.ಒಂದೆಡೆ ಗಂಡನ ಅಗಲಿಕೆಯ ನೋವು ಹೃದಯದಿ ಮುಚ್ಚಿಟ್ಟು ಮತ್ತೊಂದೆಡೆ ಐದು ಮಕ್ಕಳ ಭವಿಷ್ಯ ಅವರ ಕಣ್ಣೆದುರಿಗೆ ನಿಂತಿತ್ತು ಬೆಳಗ್ಗೆ ಉದಯಿಸುವ ಸೂರ್ಯನಿಗಿಂತ ಮುಂಚೆಯೇ ಎದ್ದು ಮನೆಯ ಕೆಲಸ, ಮಕ್ಕಳ ಆರೈಕೆ, ಕಾರ್ಮಿಕರ ನೋಡಿಕೊಳ್ಳುವುದು, ಆಸ್ತಿಯ ಲೆಕ್ಕಪತ್ರ, ನ್ಯಾಯದ ವಿಚಾರ …..ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಅವರಲ್ಲಿ ಆವರಿಸಿದ ಖಾಲಿತನವನು ಸಿದ್ದರಾಮನ ನೆನಹುನಲಿ ನಮ್ಮೆದೆಯ ತುಂಬಲಾರಂಭಿಸಿದರು. ಇಚ್ಛೆಯಿಂದಲೇ ಸರ್ವ|ತುಚ್ಚಿೀಕರಿಸಿ ಬೇಗ ಎಚ್ಚರದಿಂದ ಇರಬೇಕು- ನಮ್ಮಲಿಯಸಚ್ಚಿದಾನಂದನ ಸ್ಮರಿಸೂತ||*B ಸಚ್ಚಿದಾನಂದ ಶಿವಮಯನಾದ ಸಿದ್ದರಾಮನು ನೆನೆಯುತ ಐದು ಮಕ್ಕಳ ಬದುಕನ್ನು ಕಟ್ಟುವ ಉಕ್ಕಿನ ಮನೋಬಲವಿತ್ತು. ಮಕ್ಕಳ ಬದುಕು ಅರಳಬೇಕೆಂಬು ಕನಸು ಹೊತಿದ್ದರು… ಮಕ್ಕಳಿಗೆ ಪರ್ವತದಂತೆ ಬಲವಾಗಿ ನಿಂತರು.ಅದರಲ್ಲೇ ಅವರ ತಾಯಿತನದ ದಿವ್ಯತೆ ಇತ್ತು. ಇಲ್ಲಿ ಒಂದೆರಡು ಘಟನೆಗಳನ್ನು ನೆನಪಿಸಿಕೊಳ್ಳಲೇ ಬೇಕು ತಾಯಿಯವರು ಆಗಿಂದ್ದಾಂಗ ಹೇಳುತ್ತಿದ್ದರು. ಮೊದಲ ಮಗಳು ಶಶಿಕಲಾ ಅವರಿಗೆ ರಾಜಶೇಖರ ಮಡಕಿ ಸ್ವಂತ ತಮ್ಮನಿಗೆ ಕೊಟ್ಟು ಮದುವೆ ಮಾಡಲಾಗಿತ್ತು . ಅವರು ಸುಖ ಸಂಸಾರದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಹಿತ್ಯವನ್ನು ರಚಿಸುತ್ತಾ ಸುಖವಾಗಿ ಇದ್ದರು. ತಾಯಿಯವರ ಹಿರಿಯ ಮಗಳು ಶಶಿಕಲಾ ಮಡಕಿ ಅಳಿಯ ರಾಜಶೇಖರ್ ಮಡಿಕೆ ಎರಡನೇ ಮಗ ಶ್ರೀಕಂಠ ಮೂರನೇ ಮಗ ಪ್ರಭುರಾಜ ಇವರಿಬ್ಬರನ್ನು ಪಂಚಗಣಿಯ ಶಾಲೆಯಲ್ಲಿ ಓದಲು ಕಳಿಸಿಕೊಟ್ಟಿದ್ದರು .ಸುಖದ ಸುಪತ್ತಿನಲ್ಲಿ ಬೆಳೆದು ಬಂದ್ದಿದ್ದ ಮಕ್ಕಳಿಗೆ ಅಲ್ಲಿಯ ಕಠಿಣವಾದ ಶಿಸ್ತು ಬದ್ಧತೆ ,ಕಟ್ಟುನಿಟ್ಟಾದ ನಿಯಮಗಳು, ಶಾಲೆಯ ಅಭ್ಯಾಸದ ಭಾರವು ಅವರಿಗೆ ಸರಿ ಹೊಂದಲಿಲ್ಲ, ಊಟದಲಿ ವ್ಯತ್ಯಾಸ ಸಹಿಸಲಾಗಲಿಲ್ಲ. ಹೀಗಾಗಿ ಅವರು ಅಲ್ಲಿ ಇರಲು ಒಪ್ಪಿಕೊಳ್ಳಲಿಲ್ಲ… ಹಿರಿಯ ಮಗ ಶ್ರೀಕಂಠ ಆದರೂ ತಾಯಿಗೆ ಹೆದರಿ ಮೊದಲು ಮಗ ಶ್ರೀಕಂಠ ಶಾಲೆಯ ರಜೆ ಪ್ರಾರಂಭವಾಗುವವರೆಗೂ ಇದ್ದು ರಜೆಗೆಂದು ಮನೆಗೆ ಬಂದಾಗ ಹಿಂತಿರುಗಿ ಹೋಗಲು ಸಾಧ್ಯವೇ ಇಲ್ಲವೆಂದು ತನ್ನ ಅಭಿರುಚಿಯು ಕೃಷಿಯಲ್ಲಿ ಹಾಗೂ ಅಂಗಡಿ ಮನೆ ನೋಡಿಕೊಂಡು ಹೋಗುವದರಲ್ಲಿ ಇದೆ ಎಂದು ತಿಳಿಸಿದಾಗ ತಾಯಿಯವರು ಅವರ ವಿಚಾರದ ವಿರುದ್ಧ ಹೋಗಲು ಒಪ್ಪಲಿಲ್ಲ ಏಕೆಂದರೆ ಶ್ರೀಕಂಠವರಿಗೆ ಕೃಷಿಯಲ್ಲಿ ಅಭಿರುಚಿ ಹೆಚ್ಚಿಗೆ ಇರುವುದನ್ನು ಗಮನಿಸಿದ್ದ ತಾಯಿಯವರು ಅವರಂತೆ ಒಪ್ಪಿಕೊಂಡರು.ಇಲ್ಲಿ ತಾಯಿಯವರು ಮಕ್ಕಳಿಗೆ ಯಾವುದೇ ರೀತಿಯಾದ ಒತ್ತಾಯದಿಂದ ಯಾವ ಶಿಕ್ಷಣವನ್ನು ಕೊಡಬಾರದು ಅನ್ನುವುದನ್ನು ಮನಗಂಡಿದ್ದರು ಅವರವರ ಅಭಿರುಚಿಯಂತೆ ಅವರವರ ಜೀವನದ ದಾರಿಯನ್ನು ತೊರಿ ಕೊಡಬೇಕು ಅನ್ನುವ ಅಭಿಪ್ರಾಯ ಹೊಂದಿದ್ದರು. ಇನ್ನು ಎರಡನೇ ಮಗ ಪ್ರಭುರಾಜ ಅತ್ಯಂತ ಮೃದು ಹೃದಯ, ಜಾಣ ಬುದ್ಧಿವಂತನು ಇವರಿಗೆ ದೊಡ್ಡ ಶಿಕ್ಷಣವನ್ನು ಕೊಡಿಸಬೇಕೆನ್ನುವ ಆಸೆ ತಾಯಿಯವರು ಹೊತ್ತಿದ್ದರು .ಅವರು ಕೂಡ ತಿರುಗಿ ಹೋಗಲು ಒಪ್ಪದಿದ್ದಾಗ ತಾಯಿಯವರು ನನಗಾಗಿ ನೀನು ಹೋಗಲೇ ಬೇಕು ಅನ್ನುವ ಪ್ರಮಾಣ ತೆಗೆದುಕೊಂಡರು… ಏಕೆಂದರೆ ಅವರಲ್ಲಿ ಮುಂದೆ ಕಲಿಯುವ ಯೋಗ್ಯತೆ ಇದೆ ಅನ್ನುವುದನ್ನು ಅರೆತಿದ್ದರು …..ಅನಿವಾರ್ಯವಾಗಿ ಪ್ರಭುರಾಜರಿಗೆ ಹೋಗ ಬೇಕಾಗಿ ಬಂತು. ಎರಡನೆ ಮಗ ಪ್ರಭುರಾಜ ಪ್ರಭುರಾಜ್ ಅವರ ಪ್ರತ್ನಿ ಪ್ರಮೀಳಾ (ಗದಗಿನ ಎಳೆಮಲಿ ಶಾಂತಪ್ಪನವರ ಮಗಳು) ತಾಯಿಯವರನ್ನು ಒಂದು ಕ್ಷಣವು ಬಿಟ್ಟಿರದಿದ್ದ ಪ್ರಭು ರಾಜರು ತಾಯಿಯ ನೆರಳಲ್ಲಿದವರು ಹಾಗೂ ಕರುಳಿನ ಸಂಬಂಧ ಗಾಡವಾಗಿತ್ತು. ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ ಅವರಿಗೆ ತಾಯಿಯಿಂದ ದೂರಿರುವುದು ಬಹಳ ಅಸಹನಿಯವಾಗಿತ್ತು ಹಿಂಸೆ ಕೊಡಲಾರಂಭಿಸಿತ್ತು …. ತಾಯಿಗೆ ಪತ್ರ ಬರೆದು ಹಿಂತಿರುಗಿ ಬರುವುದಾಗಿ ಒತ್ತಾಯಿಸುತ್ತಿದ್ದರು. ಮನೆಯಲ್ಲಿ ಇದ್ದಾಗ ಕೂಡ ಪ್ರಭುರಾಜರಿಗೆ ತಾಯಿಯವರು ಅವನ ಸಮೀಪದಲ್ಲಿ ಇದ್ದರೆ ಮಾತ್ರ ಮನಸ್ಸಿಗೆ ಶಾಂತಿ….ತಾಯಿ ಕಣ್ಣೆದುರಿನಿಂದ ಸ್ವಲ್ಪ ದೂರವಾದರೂ ಅವನ ಹೃದಯ ಖಾಲಿಯಾಗಿಬಿಡುತ್ತಿತ್ತು. ಇನ್ನು ದೂರದ ಊರಲ್ಲಿ ಇದ್ದರೆ ಕೇಳಬೇಕೆ ಅವರ ಸ್ಥಿತಿ ಹೇಳಲಾಗಿತ್ತುಶಾಲೆಯಲ್ಲಿ ಕುಳಿತಿದ್ದರು ಪ್ರಭುರಾಜ್ ಮನಸ್ಸು ಅಲ್ಲಿ ನೆಲಸಲೇ ಇಲ್ಲ. ಸುತ್ತಲೂ ವಿದ್ಯಾರ್ಥಿಗಳು ಕುಳಿತು ಶಿಕ್ಷಕರು ಪಾಠ ಮಾಡುತ್ತಿದ್ದರೆ ಅವನ ಕಿವಿಯಲ್ಲಿ ಕೇಳಿಸುತ್ತಿದ್ದದ್ದು ತಾಯಿಯ ಧ್ವನಿಯೇ. ಊಟಕ್ಕೆ ಕೂತರೂ ತಾಯಿಯ ಕೈತುತ್ತಿನ ನೆನಪು, ರಾತ್ರಿ ಮಲಗಿದರೂ ತಾಯಿಯ ಮುಖವೇ ಕಣ್ಣಮುಂದೆ ತೇಲುತ್ತಿತ್ತು. ದಿನದಿಂದ ದಿನಕ್ಕೆ ತಾಯಿಯ ನೆನಪು ಅವನ ಮನಸ್ಸನ್ನು ಕಾಡಲಾರಂಭಿಸಿತು …..!!ಪ್ರಿಯ ಓದುಗರೆಇದೆಲ್ಲಾ ಏನೋ ನಾನು ಅತಿಶೋಯುಕ್ತಿಯಾಗಿ ಬರೆಯುತ್ತಿದ್ದೇನೆ ಅಂತ ಏನು ತಿಳಿಯಬೇಡಿ…. ಪ್ರಭು ರಾಜರ ತಾಯಿಯ ಮೇಲಿದ್ದ ಅಗಾಧವಾದ ಪ್ರೀತಿ ಯಾವದಕ್ಕೂ ಸಾಟಿಯಾಗದು….!!!!ಏನು ಹೇಳಿದರೂ ತಾಯಿಯು ಯಾವುದಕ್ಕೂ ಒಪ್ಪದಾದಾಗ ಕೊನೆಗೆ ತಾಳಲಾರದೆ ತಾಯಿಗೆ ಪತ್ರ ಬರೆದನು.“ಅವ್ವಾ… ನನಗೆ ಇಲ್ಲಿ ಇರಲು ಆಗುತ್ತಿಲ್ಲ. ನಿಮ್ಮನ್ನು ಬಿಟ್ಟು ಒಂದು ಕ್ಷಣವೂ ಇರಲಾಗುತ್ತಿಲ್ಲ. ನಾನು ಹಿಂದಿರುಗಿ ಬರುತ್ತೇನೆ. ಇಲ್ಲವಾದರೆ ಇಲ್ಲಿಯೇ ಗುಡ್ಡು ಪರ್ವತಗಳನ್ನು ಏರಿ, ಬಿದ್ದು ಸಾಯ್ತೀನಿ…” ಎಂದು ಕಣ್ಣೀರಿನಿಂದ ಬರೆದ ಆ ಮಾತುಗಳಲ್ಲಿ ಮಗನ ಅತಿಯಾದ ಮಮತೆ ಮತ್ತು ಅಧೈರ್ಯ ಎರಡೂ ತುಂಬಿಕೊಂಡಿದ್ದವು.ಆ ಪತ್ರ ಓದಿದ ತಾಯಿಯವರು ಕ್ಷಣಕಾಲ ಮೌನವಾಗಿದ್ದರು. ಮಗನ ಪ್ರೀತಿಯ ತೀವ್ರತೆ ಅವರಿಗೆ ಗೊತ್ತಿತ್ತು. ಆದರೆ ಜೀವನವೆಂದರೆ *ಕೇವಲ ಭಾವನೆಗಳಿಗೆ ತಲೆಬಾಗುವುದಲ್ಲ, ಧೈರ್ಯದಿಂದ ಎದುರಿಸುವ ಪಥ ಎನ್ನುವರು…… *ಕಣ್ಣೊಳಗಿನ ಕಸ |ಸಣ್ಣಾಗಿದ್ದರೆ ಏನುಕಣ್ಣು ಚುಚ್ಚಿ ನೀರು ಸುರಿವುದು- ಮಾಯೆಯುಸಣ್ಣಲ್ಲ ಕಣ್ಣಿನ ವಿಸ್ತಾರ ||* ಈ ರೀತಿಯ ಮನಸ್ಸಿನ ಪ್ರವೃತ್ತಿಯು ಚಿಕ್ಕದಲ್ಲ ಅನ್ನುವುದು ಅರ್ಥವಾಯಿತು ಹೀಗಾಗಿ ತಾಯಿಗೆ ಕಠಿಣವಾದರೂ ಜೀವನದ ಪಾಠವಾಗುವ ಉತ್ತರ ಬರೆದರು… *ಬಾಳಿನಲ್ಲಿ ಕೆಟ್ಟ |ಕೀಳತನಕ್ಕೆ ಜಾಗಎಳ್ಳಿನ ಮನೆಯಷ್ಟು ಕೊಡದಿರು- ನಿನ್ನಲ್ಲಿಒಳ್ಳೆತನದಿ ಗಟ್ಟಿತನವು ಬೆಳೆಯಲಿ||* ಎನ್ನುತ….. ಹೀಗೆ ಬರೆದರು“ನನ್ನ ಹೊಟ್ಟೆಯಲ್ಲಿ ಹುಟ್ಟಿದವನು ಇಂಥ ಹೇಡಿಯೇ.. ಇಂಥ ಅಧೈರ್ಯ ಹೇಗೆ ಬಂತು? ಜೀವನದಲ್ಲಿ ಸಾಧನೆ ಮಾಡಲು ದೂರದ ಊರಿಗೆ ಹೋದರೆ ಕಷ್ಟಗಳು ಬರುತ್ತವೆ, ಏಕಾಂತ ಕಾಡುತ್ತದೆ. ಅದಕ್ಕೆ ಓಡಿ ಮನೆಗೆ ಬರಬೇಕೆಂದರೆ ಬದುಕಿನಲ್ಲಿ ಏನನ್ನೂ ಸಾಧಿಸಲಾಗದು. ಧೈರ್ಯವಾಗಿ ನಿಂತು ಹೋರಾಡಬೇಕು.‘ನಾನು ಅಲ್ಲೇ ಬಿದ್ದು ಸಾಯ್ತೀನಿ’ ಅಂತ ಹೇಳುವಷ್ಟು ದುರ್ಬಲನಾಗಿ ನನ್ನ ಮಗ ಹುಟ್ಟಿಲ್ಲ.ಸಾಯಬೇಕೆಂದರೆ ಅಲ್ಲೇ ಸಾಯಿ… ಆದರೆ ಓಡಿ ಬರುವ ಹೇಡಿತನದ ಮಾತು ಬೇಡ!” ಎಂದು ಕಡಾ ಖಂಡಿತವಾಗಿ ಪತ್ರವನ್ನು ಬರೆದರು. *ಹಿರಿಯರಲ್ಲಿ ಶ್ರದ್ಧೆ |ಸ್ಥಿರವಾಗಿ ಇರಲಿಹರಕೆ ಕೊಡುವವರು ನಿನಗೆ -ಈ ಮಾತುಪರಕಿಸಿ ನೋಡು ಬಾಳಲಿ ||*ಎನ್ನುವಂತೆ ತಾಯಿಯವರ ಆ ಮಾತುಗಳು ಪ್ರಭುರಾಜ್ ಹೃದಯಕ್ಕೆ ಮಿಂಚಿನಂತೆ ತಾಕಿದವು. ಮೊದಲಿಗೆ ಅವರ ಕಣ್ಣು ತುಂಬಿ ಬಂದರೂ, ತಾಯಿಯವರ ಮಾತಿನೊಳಗಿನ ಕಠೋರ ಪ್ರೀತಿಯನ್ನು ಅವರು ಅರ್ಥ ಮಾಡಿಕೊಂಡರು.ಆ ದಿನದಿಂದ ತನ್ನ ಕಲಿಕೆಯಲ್ಲಿ ಶ್ರದ್ಧೆಯಿಂದ ಓದಲಾರಂಭಿಸಿದರು ಮುಂದೆ ಎಲ್ ಎಲ್ ಬಿ…. ಕಲಿತು ವಕೀಲರಾದರು.. ಮುಂದೆ ದೊಡ್ಡ ರಾಜಕಾರಣಿ ಕೂಡ ಆದರು…ಮಮಕಾರದ ತಾಯಿಯಾಗಿ ಜೀವನದ ಬಿರುಗಾಳಿಯನ್ನು ಎದುರಿಸಲು ಮಕ್ಕಳ ಮನಸ್ಸನ್ನು ಉಕ್ಕಿನಂತೆ ಗಟ್ಟಿಗೊಳಿಸುವ ಗುರು ಕೂಡಾ ಆಗಿದ್ದರು. ಹೀಗೆ ಅತ್ಯಂತ ಧೈರ್ಯದಿಂದ ಆಸ್ತಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ. ಸಿದ್ದರಾಮನ ಅಪ್ಪಟ ಭಕ್ತಿಯಾಗಿ, ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಹೊಂದಿದ ತಾಯಿಯವರು ಬಹಳ ಸುಭದ್ದವಾಗಿ ಭಧ್ಧತೆಯಿಂದ ತಾಯಿತನದ ಜವಾಬ್ದಾರಿಯನ್ನು, ಆಸ್ತಿಯ ಮಾಲೀಕತ್ವತೆಯನು ಹಾಗೂ ಜನ ಸೇವಕಿಯಾಗಿ ಕೆಲಸ ನಿರ್ವಹಿಸಲಾರಂಭಿಸಿದರು…. ಬಹಳ ಜನರು “ಹೆಂಗಸು ಒಬ್ಬಳೇ ಇಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸಲಾರಳು” ಎಂದು ಮಾತಾಡಿದವರಿಗೆ ಉತ್ತರವಾಗಿ ತಮ್ಮ ಬದುಕನ್ನು ಬದುಕಿ ತೋರಿಸಿದರು.ಅವರ ಜೀವನ ಒಂದು ಅಳಲಿನ ಕಥೆಯನು ಒರಸಿ ಅದು ತಾಯಿತನದ ಮಹಾಕಾವ್ಯವನು ಬರೆದರು. *ದುಃಖ ದುಮ್ಮಾನಗಳು |ಸಿಕ್ಕಿ ಒದ್ದಾಡದಿರುಸುಖ ಬಂದಿತ್ತೆಂದು ಹಿಗ್ಗದಿರು -ಮನವೇಸುಖ ದುಃಖ ಅರ್ಪಿಸು ಶಿವನಡಿಗೆ ||*ಎಂದು ಬಾಳನು ಆರಂಭಿಸಿದರು. ಸವಿತಾ ದೇಶಮುಖ್
ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಶ್ರೇಷ್ಠ ಶಿವಯೋಗ ಸಾಧಕರು ಮಲೆ ಮಹದೇಶ್ವರ ಹನ್ನೆರಡನೆಯ ಶತಮಾನದ ಶರಣರನ್ನು ಸಂತರನ್ನು ಹೊಂದಿರುವ ಕನ್ನಡದ ಈ ನೆಲದಲ್ಲಿ ಏಳು ಬೆಟ್ಟಗಳ ಮಲೆಯ ಮಹದೇಶ್ವರರು ಹುಟ್ಟಿ ಬರುತ್ತಾರೆ. ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ಲಿಂಗಾಯತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ದಕ್ಷಿಣ ತುದಿಯ ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿದೆ. ಜನಪದ ಕಾವ್ಯಗಳು ಮತ್ತು ಸ್ಥಳ ಪುರಾಣಗಳ ಪ್ರಕಾರ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ತಂದೆ ತಾಯಿಗಳ ವಿವರ ತಂದೆ: ಚಂದ್ರಶೇಖರ ಮೂರ್ತಿ (ಕೆಲವು ಕಡೆ ಚಂದ್ರಶೇಖರ ಗುರುಗಳು ಎಂದೂ ಕರೆಯಲಾಗುತ್ತದೆ). ತಾಯಿ: ಉತ್ತರಾಜಮ್ಮ (ಕೆಲವು ಜನಪದ ಕಥೆಗಳ ಪ್ರಕಾರ ಇವರನ್ನು ಸುಗುಣಾದೇವಿ ಎಂದೂ ಗುರುತಿಸಲಾಗುತ್ತದೆ).ಹಿನ್ನೆಲೆ ಮತ್ತು ನಂಬಿಕೆಗಳು: ದೈವಿಕ ಜನನ: ಜನಪದ ಚರಿತ್ರೆಯ ಪ್ರಕಾರ, ಉತ್ತರಾಜಮ್ಮನಿಗೆ ದೀರ್ಘಕಾಲ ಮಕ್ಕಳಾಗದಿದ್ದಾಗ ಅವರು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಭಕ್ತಿಗೆ ಮೆಚ್ಚಿದ ಶಿವನು ಅವಳ ಕನಸಿನಲ್ಲಿ ಬಂದು ಗಂಡು ಸಂತಾನದ ವರವನ್ನು ನೀಡುತ್ತಾನೆ. ಅದರಂತೆ ಜನಿಸಿದ ಬಾಲಕನೇ ಮುಂದೆ ‘ಮಹದೇಶ್ವರ’ರಾಗಿ ಪ್ರಸಿದ್ಧಿ ಪಡೆದರು ಎಂಬ ಪ್ರತೀತಿ ಇದೆ. *ಅವತಾರ ಪುರುಷ: ಮಹದೇಶ್ವರರು ಯಾವುದೇ ಸಾಮಾನ್ಯ ಮಾನವನಂತೆ ಜನಿಸದೆ, ಲೋಕ ಕಲ್ಯಾಣಕ್ಕಾಗಿ ಭೂಮಿಗೆ ಬಂದ ಶ್ರೇಷ್ಠ ಚಿಂತಕ ಅನುಭವಿ. ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ. ಅವರು ಸಣ್ಣ ವಯಸ್ಸಿನಲ್ಲೇ ಸಂಸಾರ ಮತ್ತು ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ಹಾದಿ ಹಿಡಿದರು.ಮಹದೇಶ್ವರ ಸ್ವಾಮಿಯ ಬಾಲ್ಯದ ಪವಾಡಗಳು ಅಥವಾ ಅವರು ಶ್ರೀಶೈಲದಿಂದ ಕರ್ನಾಟಕಕ್ಕೆ ಬಂದ ಇತಿಹಾಸದ ಬಗ್ಗೆ ಪುರಾಣ ಕಥನಗಳ ದಾಖಲೆಗಳಿವೆ. *ಹಿನ್ನೆಲೆ ಮತ್ತು ಸ್ಥಳ* ಪುರಾಣಮಹದೇಶ್ವರ ಸ್ವಾಮಿ: 14-15ನೇ ಶತಮಾನದಲ್ಲಿ ಬಾಳಿ ಬದುಕಿದ ಪವಾಡ ಪುರುಷ ಹಾಗೂ ಶರಣ ಸಂಸ್ಕೃತಿಯ ಸಂತ ಶ್ರೀ ಮಹದೇಶ್ವರರು ಸಾಕ್ಷಾತ್ ಶಿವನ ಅವತಾರ ಎಂದು ಅಲ್ಲಿನ ಜನಪದಿಗರು ನಂಬಿದ್ದಾರೆ. *ತಪೋಭೂಮಿ ಮತ್ತು ಮುಕ್ತಿ:* ಮಹದೇಶ್ವರರು ಈ ಬೆಟ್ಟಗಳಲ್ಲಿ ತಪಸ್ಸು ಆಚರಿಸಿ, ಭಕ್ತರ ಕಷ್ಟಗಳನ್ನು ನಿವಾರಿಸಿ, ಕೊನೆಗೆ ಇಲ್ಲೇ ಲಿಂಗ ರೂಪದಲ್ಲಿ ಐಕ್ಯರಾದರು (ಸಮಾಧಿ ಹೊಂದಿದರು). ಹುಲಿ ವಾಹನ: ಜನಪದ ಕಾವ್ಯಗಳ ಪ್ರಕಾರ, ಬಾಲಯೋಗಿ ಮಹದೇಶ್ವರರು ಕಾಡಿನ ಹುಲಿಯನ್ನೇ ತಮ್ಮ ವಾಹನವಾಗಿಸಿಕೊಂಡು ಬೆಟ್ಟಗಳಲ್ಲಿ ಸಂಚರಿಸುತ್ತಿದ್ದರು.ಶ್ರವಣ ಸಂಹಾರ: ಈ ಭಾಗದಲ್ಲಿ ಜನರಿಗೆ ಹಿಂಸೆ ನೀಡುತ್ತಿದ್ದ ಕ್ರೂರ ರಾಜ ‘ಶ್ರವಣ’ನನ್ನು ಮಹದೇಶ್ವರರು ಸಂಹರಿಸಿ ಜನರನ್ನು ಮುಕ್ತಗೊಳಿಸಿದರು ಎಂಬ ಇತಿಹಾಸವಿದೆ. ಏಳು ಮಲೆಗಳು (ಬೆಟ್ಟಗಳು)ಮಲೆ ಮಹದೇಶ್ವರ ಕ್ಷೇತ್ರವು ಸಮುದ್ರ ಮಟ್ಟದಿಂದ ಸುಮಾರು 3,200 ಅಡಿ ಎತ್ತರದಲ್ಲಿದ್ದು, ದಟ್ಟವಾದ ಅರಣ್ಯದಿಂದ ಆವೃತವಾದ ಏಳು ಬೆಟ್ಟಗಳ ಸಾಲನ್ನು ಒಳಗೊಂಡಿದೆ: ಆನೆಮಲೆ ಜೇನುಮಲೆ ಕಾಡುಮಲೆ ಕಾನುಮಲೆ ಪೊನ್ನಾಚಿಮಲೆ ಪಾವಲಮಲೆ (ಪವಲಮಲೆ) ಪಚ್ಚೆಮಲೆ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳುಲಿಂಗ ರೂಪದ ದರ್ಶನ: ದೇವಸ್ಥಾನದ ಗರ್ಭಗುಡಿಯಲ್ಲಿ ಮಹದೇಶ್ವರರು ಸ್ವಯಂಭೂ ಲಿಂಗ ರೂಪದಲ್ಲಿ ನೆಲೆಸಿದ್ದಾರೆ. ಅಂತರಗಂಗೆ: ಬೆಟ್ಟದ ಸಮೀಪವಿರುವ ಒಂದು ಪವಿತ್ರ ನೀರಿನ ಸೆಲೆ. ಇಲ್ಲಿ ವರ್ಷದ ಯಾವುದೇ ಋತುವಿನಲ್ಲೂ ನೀರು ಬತ್ತುವುದಿಲ್ಲ. ಭಕ್ತರು ಇಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ದೊಡ್ಡ ನಂದಿ ವಿಗ್ರಹ: ದೇವಾಲಯದ ಆವರಣದಲ್ಲಿ ಶಿವನ ವಾಹನವಾದ ನಂದಿಯ ಬೃಹತ್ ಮೂರ್ತಿಯಿದೆ. ಜಾನಪದ ಕಾವ್ಯ: ಮಲೆ ಮಹದೇಶ್ವರ ಕಾವ್ಯ ಅಥವಾ ತಂಬೂರಿ ಶೈಲಿಯ ಗಾಯನವು ಕರ್ನಾಟಕದ ಪ್ರಸಿದ್ಧ ಜಾನಪದ ಪರಂಪರೆಯಾಗಿದೆ. ಭಕ್ತರು ಇಂದಿಗೂ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುತ್ತಾ ಮಾದಪ್ಪನ ಕಥೆಗಳನ್ನು ಹಾಡುತ್ತಾರೆ. ಕಾಡಿನ ಸೋಲಿಗರು ಮತ್ತು ಇತರೆ ಬುಡಕಟ್ಟಿನ ಜನರಿಗೆ ಲಿಂಗ ಸಂಸ್ಕಾರ ನೀಡಿ ಕಾಯಕ ದಾಸೋಹ ಗುರು ಲಿಂಗ ಜಂಗಮ ತತ್ವಗಳನ್ನು ಪರಿಚಯಿಸಿದ ಸಾವಿಲ್ಲದ ಶ್ರೇಷ್ಠ ಶಿವಯೋಗ ಸಾಧಕರು ಮತ್ತು ಶರಣರು. ಬಸವ ಪರಂಪರೆಯ ಶ್ರೇಷ್ಠ ಚಿಂತಕರ ಬದುಕಿನ ತಿರುಳನ್ನು ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ತಿರುಗಾಡಿ ಬಸವ ತತ್ವ ಅಧ್ಯಯನ ಶಿವಯೋಗ ಸಾಧನೆಯನ್ನು ಅಲ್ಲಿನ ಬುಡಕಟ್ಟು ಮುಂತಾದ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು. ________________________’ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ ಅರ್ಜುನ ಉವಾಚ ಡಾ.ವಿಶ್ವನಾಥ ಎನ್ ನೇರಳೆಕಟ್ಟೆ ಹಯ ಹೆಣ್ಣಾಯಿತು; ಹುಲಿಯಾಯಿತು ಧರ್ಮರಾಯನಿದ್ದ ಪುರಕ್ಕೆ ಬಂದ ದಾನವಾಂತಕ ಚಂಪಕಾನಗರಿಯ ಸಮಸ್ತ ವಿಚಾರಗಳನ್ನು ಅವನಿಗೆ ಹೇಳಿದ. ಹಂಸಧ್ವಜ ಕೊಟ್ಟಿದ್ದ ಸಕಲ ಸಂಪದಗಳನ್ನು ಯುದಿಷ್ಠಿರನಿಗಿತ್ತ.ನಮ್ಮ ಯಾಗದ ಕುದುರೆಯದು ಈಗ ಉತ್ತರ ದಿಕ್ಕಿನಲ್ಲಿದ್ದ ಪಥವನ್ನು ಹಿಡಿದಿತ್ತು. ಆಗ ಗ್ರೀಷ್ಮ ಕಾಲ. ಬೇಸಿಗೆಯ ಬಿಸಿ ಸಂಪೂರ್ಣ ಧರೆಯನ್ನು ಇನ್ನಿಲ್ಲದಂತೆ ಸುಡತೊಡಗಿತ್ತು. ನಮಗೆ ಕಾಣುತ್ತಿದ್ದುದು ಸೂರ್ಯನುರಿಗೆ ಕಂಗೆಟ್ಟುಹೋಗಿದ್ದ ಕನಕಾಚಲ. ತನ್ನ ಕಣ್ಣಿಗೆ ಬೀಳದ ಹಾಗೆ ಈ ಪರ್ವತ ಮರೆಯಾಗಿನಿಂತಿದೆ ಎಂದು ಕ್ರೋಧಗೊಂಡ ಸೂರ್ಯ ಅದನ್ನು ಉರಿಸಿಹಾಕುವ ಸನ್ನಾಹದಲ್ಲಿದ್ದಾನೋ ಎನ್ನುವಂತೆ ಬಿರುಬಿಸಿಲು ಕನಕಾಚಲ ಪರ್ವತವನ್ನು ಬಿಸಿಬಿಸಿಯಾಗಿಸಿತ್ತು.ಸೂರ್ಯನ ಬಿಸಿ ತಾಪವನ್ನು ಹೊತ್ತು ಮೆರೆಯುತಿರುವ ತೇರು, ನೀರಿದೆಯೇನೋ ಎಂಬ ಭ್ರಮೆ ಹುಟ್ಟಿಸುವ ಬಿಸಿಲು ಕುದುರೆ, ಗಾಳಿಯನ್ನು ಹೊತ್ತುತರುತ್ತಿರುವ ಸೈನಿಕರು, ಬಿಸಿಲೆಂಬ ಆನೆ ಇವೆಲ್ಲವೂ ಗ್ರೀಷ್ಮರಾಜನ ಚತುರಂಗ ಬಲದಂತೆ ತೋರುತ್ತಿದ್ದವು.ಧರ್ಮಶಾಲೆಯಲ್ಲಿದ್ದ ಸುಂದರ ನೀರೆಯರು ದಾರಿಹೋಕರ ಕರಗಳಿಗೆ ನೀರನ್ನೆರೆಯುತ್ತಾ ಅವರ ದಾಹವನ್ನು ತಣಿಸುತ್ತಿದ್ದರು. ಬಯಲಿನಲ್ಲಿದ್ದ ತೊರೆಗಳು ಬಾಯಾರಿಕೆಯಿಂದ ಬಳಲಿದ್ದ ಮೃಗಗಳ ತೃಷೆಯನ್ನು ಮಣಿಸುತ್ತಿದ್ದವು. ಉಪ್ಪರಿಗೆಗಳ ಮೇಲೆ ಚೆಲುವೆಯರ ಜೊತೆ ದೇಹಸುಖವನ್ನು ಪಡೆಯುತ್ತಿದ್ದ ಕೆಲವರು ಸುಂದರಿಯರ ತುಟಿಗಳಿಂದ ಜಿನುಗುತ್ತಿದ್ದ ಅಮೃತದ ರುಚಿ ನೋಡುತ್ತಿದ್ದರು.ಪ್ರದ್ಯುಮ್ನ, ವೃಷಕೇತು, ಯೌವನಾಶ್ವ, ನೀಲಧ್ವಜ, ಅನುಸಾಲ್ವ ಈ ಐದು ಮಂದಿ ನನಗೆ ಸಹವರ್ತಿಗಳಾಗಿದ್ದರು. ನನ್ನ ಜೊತೆಜೊತೆಗೇ ಹೆಜ್ಜೆ ಹಾಕುತ್ತಿದ್ದರು. ಈಗ ಹಂಸಧ್ವಜನೂ ನಮ್ಮೊಡನೆ ಸೇರಿಕೊಂಡಿದ್ದ.ಹಾಗೆಯೇ ಮುಂದೆ ಮುಂದೆ ಹೋದ ಹಯವೀಗ ಪಾರಿಪ್ಲವ ಎಂಬ ಹೆಸರಿನ ದೇಶವನ್ನು ತಲುಪಿತ್ತು. ಅಲ್ಲಿಯ ನೆಲದ ಮೇಲೆ ಕುದುರೆ ಕಾಲಿಟ್ಟ ಕ್ಷಣದಲ್ಲಿಯೇ ನಾವೆಲ್ಲರೂ ವಿಸ್ಮಯಕ್ಕೀಡಾಗುವ ಪ್ರಸಂಗವದು ಎದುರಾಯಿತು. ಯಾಗಕ್ಕೆ ನಾವು ಆರಿಸಿದ ವಿಶೇಷಕುದುರೆಯದು ಗಂಡಾಗಿತ್ತು. ಪಾರಿಪ್ಲವದ ನೆಲದ ಸ್ಪರ್ಶವಾದೊಡನೆಯೇ ಹೆಣ್ಣುಗುದುರೆಯಾಗಿ ಬದಲಾಯಿತು. ಅಲ್ಲೇ ಇದ್ದ ಸರೋವರದ ನೀರನ್ನು ಕುಡಿದ ತಕ್ಷಣವೇ ಹುಲಿಯಾಯಿತು. ಇದಾವ ಬಗೆಯ ಮಾಯೆಯಿದು ಎಂದು ನಾವೆಲ್ಲರೂ ಸೋಜಿಗಪಟ್ಟೆವು. ನನ್ನಲ್ಲಿ ಆ ಕ್ಷಣಕ್ಕೆ ಮೂಡಿದ್ದು ಕೃಷ್ಣ ಸ್ಮರಣೆ. ನೆನೆದೆ ಶ್ರೀಹರಿಯನ್ನು. ಮೊದಲಿನಂತೆಯೇ ಗಂಡು ಕುದುರೆಯಾಯಿತು ನಮ್ಮ ಯಜ್ಞಾಶ್ವ. ಹೀಗೆ ನಮ್ಮ ಅಶ್ವವದು ತಕ್ಷಣದಲ್ಲಿಯೇ ಎರಡು ರೂಪಗಳನ್ನು ಹೊಂದುವುದಕ್ಕೆ ಕಾರಣವಿತ್ತು.ಹಿಂದೊಮ್ಮೆ ಪರ್ವತರಾಜನ ಮಗಳಾದ ಪಾರ್ವತಿದೇವಿ ಶಿವನನ್ನು ಪೂರ್ಣಮನಸ್ಸಿನಿಂದ ಅರ್ಚಿಸುವೆನೆಂಬ ನಿರ್ಧಾರ ಮಾಡಿದಳು. ತನ್ನ ತಪಸ್ಸಿಗೆ ಸರಿಹೊಂದುವ ತಾಣವೆಲ್ಲಿದೆ ಎಂದು ಹುಡುಕಾಟ ಆರಂಭಿಸಿದಳು. ಪ್ರಶಾಂತಮಯವಾದ, ಚಿತ್ತಾಕರ್ಷಕವಾದ ಸ್ಥಳವನ್ನು ಅವಳ ಮನಸ್ಸು ಬಯಸುತ್ತಿತ್ತು.ಹೀಗೆ ಅರಸಿ ಬರುತ್ತಿದ್ದ ಶಿವನರಸಿಗೆ ಕಾಣಿಸಿದ್ದು ನಯನಮನೋಹರವೆನಿಸುವ ಒಂದು ಸರೋವರ. ಹಂಸಗಳು ಜಲದಲ್ಲಿ ಈಜುತ್ತಿದ್ದವು. ದುಂಬಿಗಳು ಹಾರಾಡುತ್ತಿದ್ದವು. ಕಮಲಗಳು ಅರಳಿನಿಂತಿದ್ದವು. ಕೋಗಿಲೆಗಳ ಮಧುರ ಧ್ವನಿಯದು ಕೇಳಿಬರುತ್ತಿತ್ತು. ಹೊಳೆವ ಶುಭ್ರ ಜಲವದು ರತ್ನದಿಂದ ನಿರ್ಮಿಸಲಾದ ಹಾಸಿಗೆಯಂತೆ ತೋರುತ್ತಿತ್ತು. ಸುಂದರವಾದ ಮೀನುಗಳಿದ್ದವು. ಸರೋವರದ ಸವಿನೀರನ್ನು ಸವಿಯುವ ಚಕ್ರವಾಕ ಪಕ್ಷಿಗಳಿದ್ದವು. ಮೊಸಳೆಗಳಿದ್ದವು. ಸುಗಂಧಭರಿತವಾದ ಗಾಳಿ ಅಲ್ಲೆಲ್ಲಾ ಬೀಸುತ್ತಿತ್ತು. ತಂಪುತAಪಾದ ವಾತಾವರಣವಿತ್ತು. ಹೀಗೆ ಕಣ್ಣಿಗೆ ಶೋಭಾಯಮಾನವಾಗಿ ಕಾಣುತ್ತಿತ್ತು ಆ ಸರೋವರ.ಕಮಲದೆಲೆಗಳ ಹಸಿರು ಕಾಂತಿ. ಕೆಂದಾವರೆಗಳ ಕೆಂಪು ಕಾಂತಿ. ಬಿಳಿದಾವರೆಗಳ ಬಿಳುಪಿನ ಕಾಂತಿ. ಹೊಂದಾವರೆಗಳ ಹಳದಿ ಕಾಂತಿ. ಹೀಗೆ ಹಲವು ಬಣ್ಣಗಳ ಬೆಳಕಿನಿಂದ ಕಂಗೊಳಿಸುತ್ತಿದ್ದ ಆ ಸರೋವರ ಕಾಮನಬಿಲ್ಲಿನ ನೆನಪನ್ನು ತರುವಂತಿತ್ತು.ಶಿವಧ್ಯಾನಕ್ಕಿದು ಸೂಕ್ತ ಸ್ಥಳ ಎಂದು ತೋರಿತು ಗಿರಿಜೆಗೆ. ಸರೋವರವಿದ್ದ ತಾಣವನ್ನು ತನ್ನ ತಪಸ್ಸಿನ ಸ್ಥಾನವಾಗಿ ಆಯ್ಕೆ ಮಾಡಿದಳು. ಹೀಗೆ ಅಂದು ಪಾರ್ವತಿ ಆರಿಸಿದ ತಾಣವದು ಈಗ ನಮ್ಮ ಯಾಗದ ಕುದುರೆ ಪ್ರವೇಶಿಸಿದ್ದ ಪಾರಿಪ್ಲವ ದೇಶ.ಆಶ್ರಮವೊಂದನ್ನು ನಿರ್ಮಿಸಿಕೊಂಡಳು ಪಾರ್ವತಿ. ಈಶ್ವರನ ಅನುಮೋದನೆಯೂ ದೊರಕಿತು. “ನಿನ್ನ ತಪಸ್ಸಿಗೆ ಯಾವ ತೊಂದರೆಯೂ ಎದುರಾಗದು ಇಲ್ಲಿ” ಎಂದು ಗಿರಿಜೆಯನ್ನು ಆಶೀರ್ವದಿಸಿದ ಗೌರೀರಮಣ. ಆ ತಾಣವೇ ಅನುದಿನದ ತಾಣವಾಯಿತು ಅವಳಿಗೆ. ತಪಸ್ಸಿನಲ್ಲಿ ಸುಖ ಕಂಡುಕೊಳ್ಳುವ ಯೋಗಿನಿಯಂತಾದಳು ಶಿವನ ಮಡದಿ. ಇದು ನಿಜಕ್ಕೂ ವಿಸ್ಮಯ. ಶಿವನ ಅರ್ಧ ಶರೀರ ಎನಿಸಿಕೊಂಡಿದ್ದ ಪಾರ್ವತಿ ಅವನಿದ್ದ ತಾಣವನ್ನು ತೊರೆದು ಇಲ್ಲಿಗೆ ಬಂದು ಮತ್ತೆ ಅವನನ್ನೇ ಧ್ಯಾನಿಸುವುದೆಂದರೆ, ಪೂಜಿಸುವುದೆಂದರೆ ಅದು ಭಕ್ತಿ ಪ್ರಕಟಣೆಯ ಇನ್ನೊಂದು ರೀತಿ. ದೇಹಗಳ ಅಂತರ ಅಧಿಕವಾದಾಗ ಪ್ರೀತಿ ಹೆಚ್ಚುವಂತೆ ಭಕ್ತಿಯೂ ಹೆಚ್ಚುವುದು ಎಂಬ ತತ್ವವನ್ನು ಸ್ವಯಂ ಮನಗಾಣಲು ಬಯಸಿದ್ದಳೋ ಏನೋ ಆ ಪಾರ್ವತಿದೇವಿ!ಸರೋವರದ ನೀರಿನಲ್ಲಿ ಜಳಕ. ಬಳಿಕ ಶಿವಜಪದ ಪುಳಕ. ಇದು ಗಿರಿಜೆಯ ಅನುದಿನದ ಬದುಕಾಗಿಹೋಯಿತು.ಅವಳ ತಪಜಪಗಳು ಆರಂಭಗೊAಡ ನಂತರ ಪೂರ್ಣ ವಾತಾವರಣವದು ಸುಂದರತೆಯನ್ನು ಪಡೆಯಿತು. ಬಿಸಿಗಾಳಿ ಬೀಸಲಿಲ್ಲ. ಗಿಡಮರಗಳು ಒಣಗಲಿಲ್ಲ. ನೀರ ಮೂಲಗಳು ಅಳಿಯಲಿಲ್ಲ. ಸದಾಕಾಲ ತಂಪುತಂಪಾದ ವಾತಾವರಣ. ಇಂಪುಇಂಪಾದ ಧ್ವನಿಯ ಅನುರಣನ. ಪಾರ್ವತಿಯಿದ್ದ ಕಾರಣದಿಂದಾಗಿ ಅಲ್ಲಿಯ ಪ್ರಾಣಿ ಪಕ್ಷಿಗಳು ತಮ್ಮ ವೈರತ್ವವನ್ನು ಮರೆತವು. ಶಿವಪೂಜೆಯನ್ನು ಅತೀವ ಭಕ್ತಿಭಾವದಿಂದ ನಡೆಸುತ್ತಿದ್ದಳು ಪಾರ್ವತಿ. ಜಗನ್ಮಾತೆಯಾದ ಪಾರ್ವತಿಗೇಕೆ ಶಿವನ ತಪಸ್ಸಿನ ಕಡು ಒಲವು! ಎಂದು ದೇವವೃಂದವೇ ಅಚ್ಚರಿಪಡುವ ರೀತಿಯಲ್ಲಿ ತ್ರಿನೇತ್ರನನ್ನು ಅರ್ಚಿಸುತ್ತಿದ್ದಳು ಭಕ್ತಿಭಾವನೇತ್ರೆ.ಅದೊಂದು ದಿನ ಎಂದಿನಂತೆ ಪಾರ್ವತಿದೇವಿ ಶಿವಧ್ಯಾನದಲ್ಲಿದ್ದಳು. ಆಗಲೇ ಅಲ್ಲಿ ಕಾಣಿಸಿದ್ದು ರಾಕ್ಷಸನೊಬ್ಬನ ದೈತ್ಯ ನೆರಳು… ಡಾ. ವಿಶ್ವನಾಥ ಎನ್ ನೇರಳಕಟ್ಟೆ







