ಯುಗಾದಿ ಕಾವ್ಯ
ಭರವಸೆಯೊಂದಿರಲಿ ಶಾಲಿನಿ ಆರ್. ಚಿಗುರಿದೆಲಿ ಮ್ಯಾಲೆಲ್ಲ ಚುಂಬನವಿತ್ತಿದೆ ಸಾವಿರ ಸೂರ್ಯಕಿರಣ ಗಾಳ್ಯಾಗ ತೇಲಿಬರುತಿವೆ ಹೂವ ಪರಿಮಳ ದುಂಬಿಗದುವೆ ಪ್ರಾಣ, ಹೊಸ ಆದಿಗೆ ತಳಿರು ತೂಗಿವೆ ತೋರಣ ಹೊಸ ಮನ್ವಂತರಕೆ ರಸದೌತಣವ ಬೀಡಿಗೆ ಪ್ರಕೃತಿ ಹಾಡಿದೆ ತಾನನ, ಕೋಗಿಲೆಯ ಗಾನ ದುಂಬಿಯ ಝೇಂಕಾರ ಕೇಳುತ ಮೈಮರೆತಿವೆ ಮರಗಳೆಲ್ಲ ಕೂತು ಹರಸುತ ನಮ್ಮನ್ನೆಲ್ಲ, ಬೇವಿನಮರಕದು ಹೂವಿನ ಸೀರಿ ಮಾವಿನ ಮರದಲಿ ಕಾಯಿಗಳ ಮೋಡಿ ಸುಂದರ ಸೊಬಗಿದು ಯುಗದ ಆದಿ ಎದಿಮನವ ಬೆಸೆದಿದೆ ಸಿರಿ ಸಂಭ್ರಮ ಚೈತ್ರ, ಬದುಕೆಲ್ಲ ಹಿಂಗಾ ಇರಲಿ ಸುಖ ದುಃಖಗಳ ಬಾಳ್ವೆ ಸಮ್ಮಿಳಿತವಾಗಿರಲಿ ಬೇವುಮಾವುಗಳ ಉಗಾದಿಯಾಗಿ ಚೈತ್ರದ ಒಲುಮೆಯಿದು ಮರಳಿ ಮರಳಿ ಬರಲಿ ಪ್ರತಿ ವರುಷ ಹೊಸ ಹರುಷ ಹೊಸ ಭರವಸೆಯೊಂದಿರಲಿ… *******
ಯುಗಾದಿ ಕಾವ್ಯ
ಬಾರೆ ಶಾರ್ವರಿ ಡಾ.ಗೋವಿಂದ ಹೆಗಡೆ ಬಂದೆಯಾ ಬಾ ಬಾರೆ ಶಾರ್ವರಿ ನಲವಿನೂಟೆ ತಾರೆ | ಕಾಲನ ಕಾಲಲಿ ಕುಸಿದಿದೆ ಜನಪದ ಬದುಕನುಣಿಸು ಬಾರೆ|| ಕಿರೀಟಿ ಕ್ರಿಮಿಯ ಬಾಧೆಯ ಬೇಗೆಗೆ ನಲುಗಿದೆಯೇ ಜೀವ | ನೆಲೆಗಾಣದೆ ಗೋಳಿಟ್ಟಿದೆ ಮನುಕುಲ ತಾರೆ ಕರುಣೆ ತೇವ || ನಿನ್ನಯ ಹೆಸರೇ ಇರುಳೆಂದರಿತೆ ಶಕ್ತಿಯೂ ಹೌದು ನೀನು | ಕತ್ತಲ ಮಣ್ಣಲಿ ಬೆಳಕನು ಬೆಳೆವ ವರವನು ನೀ ತಾರೆ || ಬಾಳಲಿ ಶ್ರದ್ಧೆಯ ನೀ ಮರುಕಳಿಸು ಬೆಳೆಯಲಿ ನಿನ್ನೊಲುಮೆ | ದುರಿತವ ದೂರಾಗಿಸಿ ನೀ ಹರಸು ಎರೆ ನೆಮ್ಮದಿ ನಲುಮೆ || ********
ಯುಗಾದಿ ಕಾವ್ಯ
ಮಾಸಿದ ಉಗಾದಿ… ಕೃಷ್ಣಮೂರ್ತಿ ಕುಲಕರ್ಣಿ ಸಂಭ್ರಮಿಸುವ ಉಗಾದಿ ಸಂಭ್ರಮ ಮಾಸಿಹೋತ ಗೆಳತಿ../ ಬೆಲ್ಲ ಕರಗಿಹೋಗಿ ಬರೀ ಬೇವೆ ಬಟ್ಟಲು ತುಂಬೈತಿ…// ದೇವರ ಮನಿ ನಂದಾದೀಪ ಮಿಣ ಮಿಣ ಅಂತೈತಿ ಬೇವಿನ ಸ್ನಾನ ಸವಿ ಸವಿ ಹೂರಣ ಅದ್ಯಾಕೊ ದೂರಸರಿದೈತಿ ವರ್ಷದ ಮೊದಲ ಹಿಂಗಾದ್ರೈಂಗ ಹಳವಂಡ ಕಾಡತೈ ಬದುಕಿನ ಚಿಗುರೆ ಉಗಾದಿ ಬಾಡಿದ್ರ ಬದುಕುಇನ್ನೈಲಿ.. ಮಣ್ಣಿನಮಕ್ಕಳ ಕನಸೆ ಉಗಾದಿ ಕತ್ತಲು ಕವಿದೈತಿ.. ಉತ್ತುವ ಬಿತ್ತುವ ಆಸೆಗಳೆಲ್ಲ ಕಮರೇ ಹೋಗೈತಿ../ ಬೇವು ಹೆಚ್ಚಿದ್ದರೂ ಇರಲಿ ಬೆಲ್ಲವೂ ಇರಲಿಸ್ವಲ್ಪ ದೇವರ ದರುಶನ ಬ್ಯಾಡಾಂದ್ರ ಇನ್ನು ಬದುಕು ಹೆಂಗ್ಯಪ್ಪ ಯುಗದ ಆದಿ ಉಗಾದಿ ತರಲಿ ಹರುಷ ನೆಮ್ಮದಿ ಬೇವಿರಲಿ ಬೆಲ್ಲವೂ ಇರಲಿ ಸರಿ ಸಮಾನತೆ ಕಾಣಲಿ. *******
ಯುಗಾದಿ ಕಾವ್ಯ
ಯುಗಾದಿ ಐ.ಜಯಮ್ಮ *ನಿಸರ್ಗವು ಚೈತನ್ಯದಿ ಸಂಭ್ರಮಿಸುವ ನವಕಾಲ ಪ್ರಕೃತಿ ಅಪ್ಸರೆಯಂತೆ ಮೆರೆಯುವ ಸವಿಕಾಲ ಬ್ರಹ್ಮದೇವನು ವಿಶ್ವಸೃಷ್ಠಿಸಿದ ಚೈತ್ರಮಾಸ ಭೂತಾಯಿ ಹಸಿರ ಸೀರೆಯನ್ನುಟ್ಟ ವಸಂತಕಾಲ ಮೇಘಗಳ ಘರ್ಜನೆಗೆ ಮಯುರಿ ನರ್ತಿಸಲು ಚಿಗುರೆಲೆಯ ಮಾಮರದಿ ಕೋಗಿಲೆಯು ಕೂಗಿರಲು ಬಾನಂಗಳದಿ ಹರ್ಷದಿ ಹಕ್ಕಿಗಳು ಹಾರಿರಲು ಪುಷ್ಪಗಳೆಲ್ಲ ಆರಳಿ ಸುಗಂದ ದ್ರವ್ಯಸುಸಿರಲು ಮಕರಂದ ಹೀರುವ ಜೇನಿನ ಝೇಂಕಾರ ಪೃಥ್ವಿಯ ಬೆಳಗುವ ಭಾಸ್ಕರನಿಗೆ ನಮಸ್ಕಾರ ಅಭ್ಯಂಜನ ಸ್ನಾನದ ಶೃಂಗಾರ ದೇವ ಮಂದಿರದಲ್ಲಿ ಶಿವನಾಮದ ಓಂಕಾರ ಮನೆಯ ಬಾಗಿಲಿಗೆ ತಳಿರುಗಳ ತೋರಣ ಅಂಗಳದಿ ವರ್ಣಗಳ ರಂಗೋಲಿಗಳ ಚಿತ್ರಣ ಬೇವು ಬೆಲ್ಲಗಳ ಮಿಶ್ರಣಗಳ ಸವಿಯೋಣ ಕಷ್ಟಸುಖಗಳ ಜೀವನ ಸಮನಾಗಿ ಅನುಭವಿಸೋಣ ಹೊಸ ಬಟ್ಟೆಗಳ ಧರಿಸಿ ಸಂಭ್ರಮಿಸಿ ಚಂದ್ರದರ್ಶನ ಮಾಡಿ ಕೈಮುಗಿದು ನಮಿಸಿ ಗುರುಹಿರಿಯರಿಗೆ ಭಕ್ತಿಭಾವದಿ ನಮಸ್ಕರಿಸಿ ಸಂತಸದಿ ನಾಡಿನೆಲ್ಲೆಡೆ ಯುಗಾದಿ ಹಬ್ಬ ಆಚರಿಸಿ **********
ಯುಗಾದಿ ಕಾವ್ಯ
ಚೈತ್ರೋತ್ಸವ ಕೆ.ಎ.ಸುಜಾತಾ ಗುಪ್ತ ಸದ್ದು ಗದ್ದಲವಿಲ್ಲದೆ ಈ ಸೃಷ್ಟಿಯ ಅರಮನೆಗೆ ಅತಿಥಿಯಾಗಿ ಆಗಮಿಸಿರುವ ಉಲ್ಲಸಿತ ವಸಂತ ಋತುವು.. ಸಾಕ್ಷಿಯಾಯಿತು ನಿಶ್ಯಬ್ಧದಲಿ ಋತು ಮನ್ವಂತರಕೆ… ಚೇತೋಹಾರಿಯೋ.. ಚಿತ್ತ ಮನೋಹರಿಯೋ.. ವಿಸ್ಮಿತ ನೇತ್ರಗಳಲಿ ಸುಹಾಸಿನಿಯೋ..! ಹೃನ್ಮನಗಳಿಗೆ ಸುಲಲಿತೆಯೋ.. ಈ ನವ ವಸಂತವು. ಚೈತ್ರವು ವಸಂತದ ಕೈಹಿಡಿದು ಕಿಣಿ ಕಿಣಿ ನಾದದೆ ಹೆಜ್ಜೆಯನಾಕಿ ಚೈತ್ರೋತ್ಸವಸಂಭ್ರಮಿಸುತಿರೆ. ಪ್ರಕೃತಿ ಮುಗ್ಧ ಮನೋಹರಿ, ಭಾವೋಜ್ವಲೆ.. ಹೃದ್ಗೋಚರ ದೃಶ್ಯಕೆ ಹರ್ಷೋದ್ಭವವು.. ಈ ನರ ಜನುಮ ಪಾವನವೋ. ತಿಳಿ ಹಸಿರು, ಗಿಳಿ ಹಸಿರು, ಪಚ್ಚ ಪಸಿರು ಪರ್ಣಗಳು ತಲೆದೂಗಲು ಪಾದಪಗಳಲಿ , ಕಾಮನಬಿಲ್ಲಿಗೇ ಸೋಜಿಗವೆನಿಸೋ.. ಹೋಳಿಯಲಿ ಮಿಂದೆದ್ದ ವರ್ಣಮಯ ಪ್ರಸೂನಗಳು, ಬಯಸಿರಲು ವಸಂತನಿಗೆ ಸ್ವಾಗತವ, ಅತಿಶಯದೆ ವಸಂತವಿರೆ ದಿಗ್ಭಾಂತಿಯಲಿ.. ಚೈತ್ರದೂತ ಹಸಿರು ರೆಕ್ಕೆ ಬಡಿದು ಉಬ್ಬಿ ತಬ್ಬಿ ಹರುಷ ತೋರುತ ಕಂಠ ಸಿರಿಯ ಸಮೀರದಲಿ ಸಮೀಕರಿಸಿ, ಕೂಜನಗೈಯೇ ಕುಹೂ.ಕುಹೂ. ಷಡೃತುಗಳ ಚೂಡಾಮಣಿ ತಾ ವಸಂತ ತೇಜೋಮಯದೆ ಕಣ್ ಸೆಳೆಯಿತು. ಬೇವು- ಮಾವು ಗಂಧ ಬೀರೆ ಹಸಿರು ಗಿಳಿ ಕೆಂಪು ಕೊಕ್ಕಿನಿಂದ ಹಸಿರು ಮಾವು ಕುಕ್ಕಿ ತಿನ್ನೆ, ಮನೆ ಮನೆಗೆ ಹಸಿರು ಮಾವಿನ ತೋರಣವ ಹಿಡಿದು ಬರಲು ನವ ಯುಗಾದಿ ನಾವೆಲ್ಲ ಸೇರಿ ಬೇವು – ಬೆಲ್ಲ ತಿಂದು ಸಂಭ್ರಮಿಸುವ ಚೈತ್ರೋತ್ಸವವ. *********************
ಯುಗಾದಿ ಕಾವ್ಯ
ನವ ವಸಂತ ಎನ್ ಶಂಕರರಾವ್ ಹೊಸತೇನು ನಮ್ಮ ಬಾಳಲ್ಲಿ *ಹೊಸವರ್ಷ* ಮರಳಿ ಬಂದಲ್ಲಿ, ಹೊಸ ಪರಿವರ್ತನೆ ಸೃಷ್ಟಿಯ ಸಂಕೇತ, ವಸಂತನಾಗಮನ ಬಾಳ ಪಯಣದಲಿ. ಋತುಮಾನ ಬದಲಾವಣೆ ತಂದಿತು ಪ್ರಕೃತಿಯಲಿ ಸಂಭ್ರಮ, ಅಂತರಾತ್ಮದ ಪ್ರತಿಧ್ವನಿ, ಆತ್ಮಾವಲೋಕನ ಮನದಾಳದಿ. ಕಾಲಚಕ್ರ ಯಾನದ ಪ್ರಗತಿ ಸುಲಲಿತ ಪರಿಭಾಷೆಯ ಮುನ್ನುಡಿ, ಸಚ್ಚರಿತ ಸದ್ಭಾವನೆಯ ನುಡಿ, ಸಚ್ಚಿದಾನಂದ ಆತ್ಮ ಸಂತೃಪ್ತಿ. ನವ್ಯ ನವೀನತೆಯ ಸಂತಸ, ನವೋದಯ ಉಲ್ಲಾಸ ಮಾನಸ, ನವೋಲ್ಲಾಸ ನಿತ್ಯೋತ್ಸವ ಭುವಿಯಲಿ, ನವ್ಯ ನಲ್ಮೆಯ ಬಾಳಿನಾ ನಾಂದಿ. ಹೊಸ ವರ್ಷ ತರಲಿ ಹರ್ಷ, ಹೊಸ ಕಾಮನೆಗಳ ವರ್ಷ, ಹೊಸ ಪರಿಕಲ್ಪನೆ ಸಾಕಾರವಾಗೆ ಹೊಸ ದಿಗಂತದ ಅನಾವರಣ. ಅದೇನು ಸಂಭ್ರಮ ಸಡಗರ ಅದೇನು ಸಂತಸ ಕಾತುರ, ಸದಾ ಹಳೆಯ ನೆನಪಿನ ನವಿಲುಗರಿ, ಬದುಕಿನ ಆಶಾಕಿರಣದ ಸಿರಿ. ಹೊಸ ವರ್ಷದ ಕ್ಷಣಗಣನೆ, ಸಂಭ್ರಮಾಚರಣೆಯ ಮನನ, ಶಾರ್ವರಿ ನಾಮಸಂವತ್ಸರದ ಚಾಂದ್ರಮಾನ ಯುಗಾದಿ ನವವಸಂತ ನಗುವ ತರಲಿ ಎಲ್ಲರ ಮನ ಮನೆ ಯಲಿ. ****************
ಯುಗಾದಿ ಕಾವ್ಯ
ಯುಗಾದಿ ಬಂದಿದೆ ವೀಣಾ ರಮೇಶ್ ಯುಗಾದಿ ಬಂದಿದೆ ಇಳೆಯ ಹೊಸಿಲಿಗೆ ಅಡಿಇಟ್ಟ ಹೊಂಗಿರಣ ವಸಂತನ ಚಿಗುರಿನಲಿ ತರುಲತೆಗಳ ತೋರಣ ಯುಗಾದಿ ತಂದ ಸಿಹಿ ಸಿಹಿ ಹೂರಣ ಹೊಸ ಪರ್ವದ ಹಾದಿ ಚೈತ್ರಮಾಸದ ಯುಗಾದಿ ಹಳೆಯ ನೆನಪುಗಳು ತಿವಿದು ಹೊರಳಿದೆ ಮತ್ತದೇ ಹೊಸ ಕನಸು ಬಗೆದು ಮರಳಿದೆ ಸಿಹಿ ಕಹಿಗಳು ತಬ್ಬಿವೆ ಮತ್ತದೇ ಬದುಕಿನ, ಸಾಂಗತ್ಯಕೆ ಬದುಕು ಬೆಸೆದಿದೆ, ಹಸಿರು ಸಿರಿಯಲಿ ನಿಸರ್ಗ ಮೈತುಂಬಿದೆ ಮಾವು,ಬೇವುಗಳ ಭಾವ ಸಮಾಗಮ ಏಳು ಬೀಳುವಿನ ಸಿಹಿಕಹಿ ಸುಖದ ಲೇಪನ ಬೇವು ಬೆಲ್ಲದ ಜೀವನ ಸವಿಯೋಣ ಸಮಾನತೆ ಹಂಚೋಣ ಯುಗಾದಿ ಅರ್ಥತಿಳಿದು ಆಚರಿಸೋಣ *********
ಯುಗಾದಿ ಕಾವ್ಯ
ಮರಳಿ ಬಂದಿದೆ ಯುಗಾದಿ :- ಹರೀಶ್ ಬಾಬು ಹಣ್ಣೆಲೆ ಉದುರಿ ಚಿಗುರೆಲೆ ಅರಳಿ ನಗೆ ಬೀರಿವ ಪುಷ್ಪವರಳಿ ನೂತನ ವರುಷ ಮರಳಿ ಎಲ್ಲರ ತನು ಮನಗಳೊಡನೆ ನಗೆಯಾ ಬೀರಿ ತಂದಿದೆ ಹರುಷ ಯುಗ ಯುಗಾದಿ ಮರಳಿ ಚೈತ್ರ ಮಾಸವ ತೆರಳಿ ಬೇವು ಬೆಲ್ಲ ತಿನ್ನುತ್ತಾ ಸಿಹಿ ಕಹಿಯಾ ಹೀರುತ್ತಾ ದ್ವೇಷ ಮತ್ಸಾರ ತೊಲಗಿಸುತ್ತಾ ಪ್ರೀತಿ ಪ್ರೇಮವ ಹಂಚುತ್ತಾ ನೂತನ ಯುಗದ ಆಗಮನದ ಸಂತೋಷ. ದ್ವೇಷ ಅಸೂಯೆ ಮರೆಸಿ ಎಲ್ಲರ ಮನದಲ್ಲಿ ಬಿತ್ತುತ್ತಿದೆ ನೂತನ ಶೈಲಿಯಾ ಭಾವನೆಗಳ ಕೂಡಿ ಬಾಳುವ ಭರವಸೆ ಬೆಳೆಸಿ ಸೋದರತ್ವದ ಜೀವನ ತಿಳಿಸಿ ತಂದಿದೆ ಮನದಲ್ಲಿ ನೂತನ ವರುಷ ಚಿಗುರೆಲೆ ಅರಳಿ ನಿಂತು ತಂಪಾದ ಗಾಳಿ ಸೋಬನೆ ಹಾಡಿ ಬಿಸಿಲ ತಾಪಕ್ಕೆ ತಂಪೆರೆದು ಹೂಗಳು ಗಮಗಮ ಸುವಾಸನೆ ಬೀರಿ ಬಯಲು ತುಂಬೆಲ್ಲಾ ಹಸಿರೇ ತಣಿಸಿ ನೋಡುಗರ ಮನಕ್ಕೆ ತಂದಿದೆ ಹರುಷ. ಬಣ್ಣ ಬಣ್ಣದ ಉಡುಪುಗಳ ತೊಟ್ಟು ರಂಗು ರಂಗಿನ ವಣ೯ಗಳ ಮನೆಗೆ ಬಳಿದು ತಳಿರು ತೋರಣಗಳಿಂದ ಬಾಗಿಲು ಸಿಂಗರಿಸಿ ಚಿತ್ರ ವಿಚಿತ್ರದ ರಂಗೋಲಿ ಅಜಾರಕ್ಕೆ ಹಾಕಿ ಬೇವಿನೆಳೆ ಮನೆ ಮೂಲೆ ಮೂಲ್ಗೆ ಸುಚ್ಚಿ ಎಲ್ಲಿಲ್ಲದ ಹಬ್ಬದ ಸಡಗರದ ಸಂತೋಷ . ಹೋಳಿಗೆ ತಿಂಡಿ ರುಚಿಯ ಸವಿಯುತ್ತಾ ಬಗೆ ಬಗೆಯಾ ಭಾವನೆಗಳ ಅರಿಯುತ್ತಾ ದುಡ್ಡಾಟ ಕಿತ್ತಾಟ ತುಂಟಾಟ ಆಡುತ್ತಾ ಕಷ್ಟ ಸುಖಗಳನ್ನು ವಿನಿಮಯಿಸುತ್ತಾ ಸುಃಖ ದುಃಖಗಳನ್ನು ದೇವರ ಬಳಿ ಕೇಳುತ್ತಾ ಇದುವೇ ನಮ್ಮೆಲ್ಲರ ಹಬ್ಬ ದಿನಗಳ ಉಲ್ಲಾಸ ********
ಯುಗಾದಿ ಕಾವ್ಯ
ಯುಗಾದಿಗೆ ಸ್ವಾಗತ ರತ್ನಾ ನಾಗರಾಜ ಯುಗ ಯುಗ ಕಳೆದರು ಯುಗಾದಿ ಹುಟ್ಟುತ್ತಲೆ ಇರುತ್ತದೆ ನಶ್ವರವೆಂಬುವುದು ಅದು ಕಾಣದು ಚಿರಂಜೀವಿ ಯುಗಾದಿಗೆ ಸ್ವಾಗತ ಮನುಷ್ಯ ಹುಟ್ಟುತ್ತಾನೆ ಹುಟ್ಟಿ ಸಾಯುತ್ತಾನೆ ಯುಗಾದಿ ಅವನಿಗೊಂದಷ್ಟು ಗಾದಿಗಳನ್ನು ಕೊಟ್ಟು ಯುಗಾದಿಗೆ ಉತ್ಸಾಹದ ಸ್ವಾಗತ ಯುಗಾದಿ ಮರೆಯಾಗುತ್ತದೆ ಹಳೆಯದನ್ನು ನೆನಪಾಗಿಯಿಟ್ಟು ಹೊಸದತ್ತ ಪಯಣಿಸುತ್ತಲೆಯಿರುತ್ತದೆ ಗಡಿಯಾರದ ಮುಳ್ಳಿನಂತೆ ಅದಕ್ಕೆ ತಳಿರು ತೋರಣಗಳ ಸ್ವಾಗತ ಯುಗಾದಿ ಬೇವು ಬೆಲ್ಲದ ಮಿಶ್ರಣದ ಸುಖ ಬರಿ ಬೇವು ಬೇಡ, ಸದಾ ಸಿಹಿಯು ಬೇಡ ಒಂದರೊಳಗೊಂದು ಇದ್ದರೆ ಜೀವನ ಪಾವನ ಅದಕ್ಕೆ ಸಮಿಶ್ರಣ ಯುಗಾದಿಗೆ ಸ್ವಾಗತ ನವ ಚೈತನ್ಯ ನವ ಉಲ್ಲಾಸ ತರುವ ಯುಗಾದಿ ಹಳೆಯದನ್ನು ಮಂಕುತನವನ್ನು ಓಡಿಸುವ ಯುಗಾದಿಗೆ ಸ್ವಾಗತ ಯುಗಾದಿಗೆ ಶುಭ ಶಕುನ ನುಡಿಯುತ್ತಾರೆ ಹೊಸ ಉಡಿಗೆ ತೊಡಿಗೆ ಕಾಣಿಕೆಗಳು ಲಭಿಸುತ್ತದೆ ನೆಂಟರಿಷ್ಟರರು ಆಗಮಿಸುವ ಸಂಭ್ರಮ ತರುವ ಯುಗಾದಿಗೆ ಸ್ವಾಗತ ನವ ವಸಂತ ಪ್ರಕೃತಿಗೆ ಹೊಸ ಚಿಗುರು ಹೊಸ ಉಸಿರು ನೀಡುತ್ತಾನೆ, ಹಚ್ಚ ಹಸಿರು ತುಂಬುತ್ತಾನೆ ಸದಾ ಕಾಲ ಜೀವಿಗಳಿಗೆ ಜೀವ ನೀಡುವ ಯುಗಾದಿಗೆ ಸ್ವಾಗತ ಬೀರು ಬಿಸಲ ಬೆವರು ಹರಿದರು ವಿಹಾರ ವಿರಾಮ ತರುವ ಮದುವೆ ದಿಬ್ಬಣ ಹೊತ್ತು ಬರುವ ಹಳೆಯ ಲೆಕ್ಕಾಚಾರ ತುಲನೆ ಮಾಡಿ ಹೊಸ ವ್ಯವಹಾರಕ್ಕೆ ಮುನ್ನುಡಿಯಿಡುವ ಯುಗಾದಿಗೆ ಸ್ವಾಗತ ನೂತನ ಪಂಚಾಗ ವಷðವಿಡಿ ಭವಿಷ್ಯ ಪಲುಕಿ ವಷðತಡಕು ಭೋಜನ ಪ್ರಿಯ ಜಾತ್ರೆ ಹರಕೆ ನದಿ ಜಳಕ ಮೋಜು ಮಸ್ತಿ ಕುಸ್ತಿಯಾಟ ಆಡಿಸುವ ಯುಗಾದಿಗೆ ಸ್ವಾಗತ ********
ಯುಗಾದಿ ಕಾವ್ಯ
ಪರಿಭ್ರಮಣ ಸುಕನ್ಯ ಎ.ಆರ್. ಕಡಲಲೆಗಳಂತೆ ಬರುತಿಹುದು ಹೊಸವರುಷ ಬದುಕಿನ ನೋವು ನಲಿವಿನ ಸಂಘರ್ಷ ಕ್ಷಣ ಕ್ಷಣದಲ್ಲೂ ಹರುಷದ ನಿಮಿಷ ನಮ್ಮೆಲ್ಲರ ಬಾಳು ಬೆಳಗಲಿ ಈ ವರುಷ ಋತುಮಾನದ ಪರಿಭ್ರಮಣ ಚೈತ್ರಮಾಸದ ತೇರನೇರಿ ಹೊಂಗೆ ಮಾವು ಬೇವಿನ ಆಗಮನ ಹೊಸ ವರ್ಷದ ಸಂಭ್ರಮ ಒಳಿತು ಕೆಡುಕನು ಮರೆಮಾಚಿ ಮೊಗದಲ್ಲಿ ನೆಮ್ಮದಿಯ ನಗುವ ಮಳೆಹರಿಸಿ ಸಹಬಾಳ್ವೆಯಲ್ಲಿ ಶುಭವ ಹಾರೈಸಿ ನೆನಪಿನಂಗಳದಲ್ಲಿ ಬರುತಿಹುದು ಹೊಸವರುಷ ಹೊಂಗೆ.ತೆಂಗು.ಮಾವು.ಬಾಳೆ.ಬೇವುಗಳ ತಳಿರು ತೋರಣವ ಶೃಂಗಾರದಿ ಪ್ರಕೃತಿ ಮಾತೆಯು ಅಲಂಕರಿಸಿ ಸ್ವಾಗತಿಸುವಳು ಹೊಸ ವರುಷವ ರೋಗ ರುಜಿನಗಳನು ಮೀರಿ ಬಿಸಿಲು ತಾಪವ ಹೊಂಗೆಯ ನೆರಳಲಿ ತಂಪಾಗಿಸಿ ಸೂರ್ಯ ಚಂದ್ರರ ಕಣ್ಣಾಮುಚ್ಚಾಲೆಯಲಿ ಕಳೆದವು ಋತುಮಾನಗಳು ಆದರೂ ಸ್ವಾಗತಿಸುವೆವು ಪ್ರತಿ ವರ್ಷ ನವ ಯುಗಾದಿಯ ಆದಿಯ ಬೇರು.ಆನಾದಿಯ ಚಿಗುರು ಯುಗ ಯುಗಗಳ ಸಂಗಮ ಕಹಿ ಘಟನೆಗಳ ಮರೆತು ಸವಿ ಬದುಕಿನ ನವ ಚೇತನ ಈ ಯುಗಾದಿ ಆದಿ ಅಂತ್ಯದ ಸೂಚಕ ಯುಗಾದಿ ಹಬ್ಬದ ಪ್ರತೀಕ ಹೊಸ ವರ್ಷದ ಸೂಚನ ಫಲಕ ಅರುಣೋದಯದ ಹೊಸತನದ ಹೊಂಬೆಳಕ ಬಟ್ಟ ಬಯಲಲ್ಲಿ ಮೂಡಿತು ಪಡುವನದಿ ಅರ್ಧಚಂದ್ರನ ದರ್ಶನ ಜನರ ಹರ್ಷೋಡ್ಗರ ಮೊಳಗಿತು ಹುಣ್ಣಿಮೆ ಚಂದ್ರನ ಆಗಮನ *********
