ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ

ನಾಗರೇಖಾ ಗಾಂವಕರ್

ಬರವಣಿಗೆ ಎಂಬುದು ಒಂದು ತುರ್ತಾಗಿ ಬದಲಾಗುವುದು ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು ನನ್ನಲ್ಲಿ. ಆದರೆ ಮೊದಲ ಕವಿತೆ ಬರೆದ ಕ್ಷಣದ ಅನುಭವ ಹೇಗೇ ಹೇಳಲಿ? ಬಹುಶಃ ಇದಕ್ಕೆ ಅಭಿಪ್ರಾಯ ವ್ಯಕ್ತ ಪಡಿಸುವುದು ಕಷ್ಟದ ಕೆಲಸ. ಹೌದು ನಾನೂ ಕೂಡ ಆ ಕವಿತೆ ಬರೆದೆ. ಅದು ನನ್ನ ಜೀವನದ ಮೊದಲ ಕವಿತೆ. ಕವನದ ಶೀರ್ಷಿಕೆ ವಿಶ್ವಕರ್ತನ ಗುಡಿ. ನನ್ನ ಇಪ್ಪತ್ತೆರಡನೇ ವಯಸ್ಸಿಗೆ ಬರೆದ ಕವಿತೆ. ಅದಕ್ಕೂ ಮುಂಚೆ ನಾನೊಂದು ಓದುವ ಹುಳವಾಗಿದ್ದೆ. ಕಾಲೇಜಿನ ಅಭ್ಯಾಸಗಳ ಜೊತೆ ಕಾಲೇಜಿನ ಗ್ರಂಥಾಲಯಗಳಲ್ಲಿ ಸಿಗುವ ಬಹುತೇಕ ಪ್ರೇಮ ಕಾದಂಬರಿಗಳು, ವಾರಕ್ಕೊಂದಾವರ್ತಿ ಬದಲಾಯಿಸುತ್ತಾ, ಪಾಠ ಪ್ರವಚನದ ಕಾಲದಲ್ಲಿ ಪಠ್ಯದ ಪುಸ್ತಕದ ಒಳಗೆ ಬೆಚ್ಚಗೆ  ಕಾದಂಬರಿಗಳು ಕೂತಿರುತ್ತಿದ್ದ್ದ್ತವು. ತಲೆ ಒಮ್ಮೆ ಪ್ರಾದ್ಯಾಪಕರ ಉಪನ್ಯಾಸದ ಕಡೆ ನೋಡುವಂತೆ ಮೇಲೆತ್ತಿದರೆ, ಇನ್ನೆರಡು ಪಟ್ಟು ಹೆಚ್ಚು ವೇಳೆ ಕೆಳಗೆ ಕೂತಿದ್ದ ಕಾದಂಬರಿಯ ಪಾತ್ರಗಳಲ್ಲಿ ಮುಳುಗಿರುತ್ತಿತ್ತು. ಅಷ್ಟಕ್ಕೂ ಕಲಾ ವಿಭಾಗದ ನಮಗೆ ಪರೀಕ್ಷೆಗೆ ಒಂದೆರಡು ತಿಂಗಳಿರುವಾಗ ಕಾಲೇಜು ಕ್ಲಾಸುಗಳ ಬಂಕ್ ಮಾಡಿ ಮನೆಯಲ್ಲಿ ಮನೆಗೆಲಸ ಮಾಡಿ, ಓದಿದರೂ ಪ್ರಥಮ ದರ್ಜೆಗೇನೂ ಕೊರತೆ ಆಗುತ್ತಿರಲಿಲ್ಲ. ಇಂತಿಪ್ಪ ದಿನಗಳಲ್ಲಿಯೇ ಅದೆಷ್ಟೋ ಸಾಯಿಸುತೆ, ಉಷಾ ನವರತ್ನರಾವ್, ಯಂಡಮೂರಿ ಇತ್ಯಾದಿ ಇತ್ಯಾದಿ ಲೇಖಕರ ಲೌಕಿಕ ಕಾದಂಬರಿಗಳ ಓದಿ ಮುಗಿಸಿದ್ದೆ.

ಇದಕ್ಕೂ ಮುಂಚೆ ಹೈಸ್ಕೂಲು ಕಲಿಯುವಾಗ ಹಳ್ಳಿಯಿಂದ ಹೋಗಿ ಬರುವುದು ಕಷ್ಟವೆಂದು ಬಾಡಿಗೆ ಮನೆಯೊಂದರಲ್ಲಿ ನಾವು ಅಣ್ಣ ಅಕ್ಕ ತಂಗಿ  ಎಲ್ಲರೂ ಸೇರಿ ಒಟ್ಟಿಗೆ  ಬಾಡಿಗೆ ಮನೆಯೊಂದರಲ್ಲಿ  ಇರುತ್ತಿದ್ದೆವು. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ  ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಉಳಿದವರ ಪರೀಕ್ಷೆಯೆಲ್ಲ ಮುಗಿದು ಮನೆಗೆ ಹೋಗಿದ್ದರೆ, ನಾನು ಒಬ್ಬಳೇ ಬಾಡಿಗೆ ಮನೆಯಲ್ಲಿ ನಾನೇ ಅಡುಗೆ ಮಾಡಿಕೊಂಡು ಉಣ್ಣುತ್ತಾ  ಪರೀಕ್ಷೆ ಬರೆಯುತ್ತಿದ್ದೆ. ಅದು ಗಣಿತ ಪರೀಕ್ಷೆಯ ಹಿಂದಿನ ದಿನ. ಓದುತ್ತಾ ಕೂತವಳಿಗೆ ಅಕ್ಕ ತಂದಿಟ್ಟಿದ್ದ ಕಾದಂಬರಿಯೊಂದು ಕಣ್ಣಿಗೆ ಬಿದ್ದಿತ್ತು. ಅದು ತ.ರಾ.ಸು ಅವರ ಚಂದವಳ್ಳಿಯ ತೋಟ ಮಾರನೇ ದಿನ ಗಣಿತ ಪರೀಕ್ಷೆ.  ಕಣ್ಣಿಗೆ ಕಂಡ ಕಾದಂಬರಿಯನ್ನು ಬಿಡಲು ಮನಸ್ಸಾಗದೇ ಲೆಕ್ಕ ಬಿಡಿಸುವುದು ಅರ್ಧಮರ್ಧ ಮಾಡಿ ಕಾದಂಬರಿ ಹಿಡಿದವಳು ಹನ್ನೆರಡುವರೆಗೆ ಇಡೀ ಕಾದಂಬರಿ ಓದಿ ಮುಗಿಸಿದ್ದೆ. ಮಾರನೇ ದಿನ ಮತ್ತೆ ಪರೀಕ್ಷೆ ಬರೆದಿದ್ದೆ. 45 ಅಂಕಗಳಷ್ಟೇ ಗಣಿತಕ್ಕೆ ಪಡೆದಿದ್ದೆ. ಇದೆಲ್ಲ ನೆನಪಾಗುತ್ತಲೂ ಮೊದಲ ಕವಿತೆಯ ಸುಖ ಎಂತದ್ದೆಂದೂ ಹೇಳಲೇ ಬೇಕು.

ಅದೆಂತಹುದೋ ಅಳಕು, ಮೊದಮೊದಲು ಬರೆದ ಅರೆಬರೆ ಅರೆಬೆಂದ ಕವಿತೆಗಳ ಮೇಲೆ ಕೆಳಗೆ ನೋಡಿ, ಶಬ್ದಗಳ ಚೌಕಟ್ಟು ಸರಿಯಾಗಿದೆಯೇ?ಎಂಬೆಲ್ಲ ಚಿಂತೆಗಳು. ಈ ಕವಿತೆ ಬರೆಯಲು ಪ್ರೇರಣೆ ಒಂದು ಬೇಕೆ ಬೇಕು. ಆಗ ತಾನೇ ಪದವಿ ಹಂತದಲ್ಲಿದ್ದೆ. ಗೆಳತಿಯೊಬ್ಬಳ ಪ್ರೇಮ ಕವಿತೆ ಕಾಲೇಜಿನ ಲಿಟರೇಚರ್ ಬುಲೆಟಿನ್ನಲ್ಲಿ ರಾರಾಜಿಸುತ್ತಿತ್ತು. ಎಲ್ಲರ ಬಾಯಲ್ಲಿಯೂ ಅದೇ ವಿಷಯ. ಎಷ್ಟು ಚೆನ್ನಾಗಿದೆ? ಹಾಗಿದೆ.., ಹೀಗಿದೆ.. ಮನೆಗೆ ಹೋದವಳೆ ನಾನೂ ಒಂದು ಬರೆದರೆ ಹೇಗೆ ?ಎಂಬ ಹುಕಿ ಹುಟ್ಟಿದ್ದೆ ತಡ, ಬರೆದೆ ಬರೆದೆ. ಅದನ್ನು ಯಾರಾದರೂ  ಓದಿದರೆ ನಕ್ಕಾರು, ಅನ್ನಿಸಿ ಬರೆದಷ್ಟನ್ನು  ಮತ್ತೆ ಮತ್ತೆ ಹರಿದು ಎಸೆದೆ. ನನಗೇ ನಗು ಬಂದಿತ್ತು. ಪ್ರೀತಿ ಪ್ರೇಮ ಇಂತಹ ನಾಜೂಕಿನ ವಿಷಯವನ್ನೆಲ್ಲಾ  ಶಬ್ದಗಳಲ್ಲಿ ಮುದ್ಧಾಗಿ ಮೂಡಿಸುವ ಗಟ್ಟಿತನ ಹೇಗೆ ಬರುವುದು  ಎಂಬ ಅಚ್ಚರಿ.

ಬೇಡ ಬಿಡು, ಮನೆಯಲ್ಲಿ ನನ್ನ ಅಣ್ಣಂದಿರೇನಾದರೂ ನನ್ನ ಕವಿತೆ ಓದಿದರೆ ಕಥೆ ಮುಗಿಯಿತು. ಇದರ ಗೋಜು ಬೇಡವೇ ಬೇಡವೆಂದು ನಿರ್ಧರಿಸಿದೆ. ಆದರೆ ಇದು ಒಂದು ಖಯಾಲಿ. ಒಳಗಣ ತುಡಿತ, ನನ್ನೊಳಗಿನ ತೆರೆದುಕೊಳ್ಳುವ ಹಂಬಲ. ಅದೆಷ್ಟೋ ಕನಸುಗಳು ನನಸಾಗದ ನೆಲೆಯಲ್ಲಿ ಮನದ ಮೂಲೆಯಲ್ಲಿ ಮಿಡುಕಿದ ಭಾವಗಳು, ಮತ್ತೆ ಚಿಗುರಿದ ಕನಸುಗಳು, ವ್ಯಾಮೋಹದ ಪರದೆಯಲ್ಲಿ ಕಟ್ಟಿದ ಕಣ್ಣು, ಮತ್ತೆ ಬರೆದೆ. ಆದರೆ ಈಗ ಪ್ರೇಮ ಕವಿತೆ ಬರೆಯುವ ಪ್ರಮಾದ ಮಾಡಲಿಲ್ಲ. ನಾನು ಪ್ರಯತ್ನಿಸಿದ ಪ್ರೇಮ ಕವಿತೆಗಳು ಅಂತಹ ಉದ್ದಿಪನಗೊಳಿಸುವ ಪ್ರಭಾವ ಬೀರುವಂತಹುಗಳಾಗಿರಲಿಲ್ಲ. ಹಾಗಾಗಿ ದೇವರ ಅಸ್ತಿತ್ವದ ಕುರಿತ ಒಂದು ಕವಿತೆ ಬರೆದೆ. ಆಗ ನಾನು ಎಳಸಲ್ಲ. ಬೆಳೆದ ಮನಸ್ಸು. ಭಯದ ನೆರಳಿರಲಿಲ್ಲ. ಆದರೆ ನನ್ನ ಪ್ರಾಥಮಿಕ ಶಾಲಾದಿನಗಳ ಹಂತದಲ್ಲಿ ನನಗೆ ಕಲಿಸಿದ ಗುರುಗಳಾದ ಕವಿ ಶಾಂತಾರಾಮ ಬಾಳೆಗುಳಿಯವರ ಪ್ರಭಾವವಿತ್ತು. ಹಾಗೆಂದು ನಾನವರ ನೆಚ್ಚಿನ ಶಿಷ್ಯೆಯಾಗಿರಲಿಲ್ಲ. ಎಲ್ಲರಿಂದ ಕೊಂಚದೂರವಾಗಿಯೇ ಉಳಿಯುವ ಜಾಯಮಾನ ನನ್ನದು. ಅವಕಾಶಕ್ಕಾಗಿಯೋ, ಇನ್ನೊಬ್ಬರ ಆದರಕ್ಕಾಗಿ ಹಂಬಲಿಸುವ ಗುಣವೇ ಇಲ್ಲ. ಹಾಗೇ ಗುರುಗಳ ಆತ್ಮೀಯತೆಯನ್ನು ಗಳಿಸಿಕೊಂಡಿರಲಿಲ್ಲ.ನನ್ನ ಬರೆಯುವ ಆಸೆಯನ್ನು ಅವರೆಲ್ಲೆಂದು ತೋಡಿಕೊಂಡಿರಲೇ ಇಲ್ಲ. ಕಾಲೇಜು ದಿನಗಳು ಮುಗಿದು,ನೌಕರಿಯ ಹುಡುಕಾಟದಲ್ಲಿದ್ದ ಕಾಲದಲ್ಲಿ ನಾನು ಬರೆದ ಮೊದಲ ಕವಿತೆ. ವಿಶ್ವಕರ್ತನ ಗುಡಿ

ಗರ್ಭಗುಡಿಯ ಕತ್ತಲು

ಜಡಿದ ಬಾಗಿಲ ಬೀಗ

ಶಿವನು ಆಗಿಹನೇ ಅಲ್ಲಿ ಬಂಧೀ

ವಿಶ್ವಕರ್ತನ ತಂದು

ಗುಡಿಯ ಬಂಧನವಿಟ್ಟು,

ಮೆರೆದ ಮೌಢ್ಯವು ಮನುಜ ಬುದ್ಧಿ.

ಹಲವು ನಾಮದ ಒಡೆಯ

ಸಕಲ ಸೃಷ್ಟಿಯ ಸುಧೆಯ

ಹರಿಸುವಾತಗೇ ಬೇಕೆ ಒಂದು ಮನೆಯು

ಜೀವಜೀವದ ಒಳಗೆ

ಹುದುಗಿರುವ ಆತ್ಮನವ

ಭಾವಿಸಲು ಸರ್ವರೂ ಅವನ ಕುಡಿಯು.

                                    ಹೀಗೇ ಸಾಗಿತ್ತು ಕವಿತೆ. ಇದೇ ಸಮಯಕ್ಕೆ ಕೆಲಸವೂ ದೊರಕಿ ಖುಷಿಯಾಗಿದ್ದೆ. ಸಿನೇಮಾ, ಮಾರ್ಕೆಟ್ಟು ತಿರುಗುವುದು ಕೊಂಚ ಜಾಸ್ತಿಯಾಗಿತ್ತು. ಮನೆಯಲ್ಲಿ ವಿವಾಹದ ತಯಾರಿಯೂ ನಡೆಯುತ್ತಿತ್ತು. ಸುತ್ತ ಸಮಾನ ಮನಸ್ಕ  ಸ್ನೇಹವಲಯವೂ ಇತ್ತು.  ಸ್ನೇಹ ಪ್ರೇಮದ  ಪರಧಿಯಲ್ಲಿ ಆ  ಭಾವವೊಂದು ನನ್ನ ಎದೆಯಲ್ಲಿ ಮೀಟುತಿತ್ತು. ಇನ್ನೊಂದು ಕವಿತೆ ಬರೆದಿದ್ದೆ. ಅದೊಂದು ಸ್ನೇಹ ಮತ್ತು ಪ್ರೇಮದ  ಬಗ್ಗೆ ಬರೆದ ಕವಿತೆ. ಶೀರ್ಷಿಕೆ ಗೆಳತಿ ಅದನ್ನು ಗಂಡುದನಿಯಾಗಿ ಬಳಸಿದ್ದೆ. ಗೆಳೆಯ ಎಂದರೆ ಯಾರಾದರೂ ನನ್ನ ಬಗ್ಗೆ ತಪ್ಪು ತಿಳಿದಾರು ಎಂಬ ಭಯ. ಹಾಗಾಗಿ ಗೆಳೆಯ ಇರಬೇಕಾದಲ್ಲಿ ಗೆಳತಿ ಬಂದಿದ್ದಳು.

ಏಕೆ ಗೆಳತಿ, ಮನ

ಬಾಗಿಲವರೆಗೂ ಬಂದು

ತಟ್ಟಿ ಕರೆಯಲಿಲ್ಲ.

ನಿನ್ನ ಭಾವನೆಗಳೇಕೆ

ನನ್ನವರೆಗೂ ಮುಟ್ಟಲೇ ಇಲ್ಲ.

ನನಗೂ ಇತ್ತಲ್ಲ ಆಸೆ

ನಿನ್ನಂತೆ..

ಗೆಳತಿಯಾಗಿ ಬಂದವಳು

ಪ್ರೇಮಿಯಾಗಿ ಬರಲೆಂದು

ಜೀವನಕೆ ಜೊತೆಯಾಗಲೆಂದು..

ಅದಕ್ಕೇಕೆ ತಣ್ಣಿರನ್ನೆರಚಿದೆ?

ಕಡೇತನಕ ಬಗೆಗೂಡು

ಹೊಗೆ ಗೂಡಾಗಲೆಂದೇ?

ಬಣ್ಣದ ಚಿತ್ತಾರ ಬಿಡಿಸ

ಹೊರಟಾಗ ಕಪ್ಪು ಮಸಿ

ಚೆಲ್ಲಿ ಕಲೆಯಾಯಿತೇ?

ವ್ಯಥೆ ಬೇಡ ಗೆಳತಿ,

 ನವ್ಯ ಕಲೆಯ ರೀತಿ

ಗೆರೆ ಎಳೆದು ಚಿತ್ರವಾಗಿಸುವೆ.

ಹೊಗೆಗೂಡ ಕಿಂಡಿಯನು

 ತೆರೆದುಬಿಡು.

ಶುದ್ಧವಾತ ಹರಿದು ಬರಲಿ.

ಪ್ರೇಮವಿರದಿರೆ ಸ್ನೇಹವಾದರೂ ಇರಲಿ

ಈ ಪರಿ..

ಸ್ವಾರ್ಥದ ನೆರಳಿಲ್ಲ

ಏಕತಾನತೆಯ ಕೊರಗಿಲ್ಲ

ವಿಳಂಬ ಬೇಡ ಗೆಳತಿ

ಈಗಲಾದರೂ ಪ್ರೇಮಸೌಧದ

ತಳಪಾಯದ ಮೇಲೆ ಕಟ್ಟೋಣ ನಡಿ

ಸ್ನೇಹ ಸೌಧ!

ಆನಂತರವೇ ತಿಳಿದದ್ದು ಆ ಕವಿತೆ ಓದಿದ ಗೆಳತಿಯೊಬ್ಬಳು ಇಷ್ಟಪಟ್ಟಳು. ಉಳಿದವರಿಗೆ ತೋರಿಸಿ, ಚೆನ್ನಾಗಿದೆಯೆಂಬ ಬಿರುದು. ನನ್ನೊಂದಿಗೆ ಕೆಲಸ ಮಾಡುವ ಸ್ನೇಹಿತ ಸ್ನೇಹಿತೆಯರೆಲ್ಲ ಒಂದಲ್ಲ ಒಂದು ಕಾರಣಕ್ಕೆ ಸಾಹಿತ್ಯ ಸಂವಾದ ಬೇರೆ ಬೇರೆ ಲೇಖಕರ ಪುಸ್ತಕಗಳ ಚರ್ಚೆ ಇವುಗಳಲ್ಲಿ ಭಾಗವಹಿಸುತ್ತಿದ್ದರು. ನಾನು ಎಳಸು. ಒಂದೆರಡು ವರ್ಷದಲ್ಲಿ ಕೊಂಚ ಚಿಗುರಿದ್ದೆ. ಹತ್ತಾರು ಕವನಗಳ ಬರೆದೆ. ಆಪ್ತರಿಂದ ಪ್ರೋತ್ಸಾಹವೂ ದೊರೆಯುತ್ತಿತ್ತು. ಆದರೆ ಮತ್ತೆ ವಿವಾಹ ಬಂಧನ ನನ್ನ ಕವಿತಾ ಬರವಣಿಗೆಯನ್ನು ಕುಂಠಿತಗೊಳಿಸಿತು. ಸಾಂಸಾರಿಕ ಸುಖದಲ್ಲಿ ಮುಳುಗಿಹೋದೆ.  ಮನೆ ಗಂಡ ಮಕ್ಕಳು ಕೆಲಸ  ಇದಿಷ್ಟೇ ನನ್ನ ಪ್ರಪಂಚವಾಯ್ತು. ಹಾಗೇ ಕವಿತೆ ಬರೆಯುವುದು ನನ್ನಲ್ಲಿ ಆಗಾಗ ಪ್ರತ್ಯಕ್ಷವಾಗಿ ಮತ್ತೆ ಕೆಲವು ಕಾಲ ಕಾಲಗರ್ಭ ಸೇರಿದಂತೆ ಮರೆಯಾಗಿ ಹೋಗಿತು.

ಆದರೆ ಭೂಮಿಯಲ್ಲಿ ಚಿಗುರುವ ಪ್ರತಿಯೊಂದು ಗಿಡ, ಮರ ಬಳ್ಳಿ, ಜೀವ ಸಂಕುಲ ಎಲ್ಲಕ್ಕೂ ಒಂದು ಮೊದಲ ಅನುಭವವಿದ್ದೆ ಇದೆ. ಬೀಜದೊಳಗಿನ ಸತ್ವ ಆಹಾರ ಪೂರೈಕೆ ಆಗುವವರೆಗೆ ಏನೂ ಗೊತ್ತಿಲ್ಲದ ಆಗಷ್ಟೇ ಚಿಗುರಿದ ಸಸಿ, ಆನಂತರ ತಾನೇ ಆಹಾರ ತಯಾರಿಸಿಕೊಳ್ಳುವ ಪ್ರಕ್ರಿಯೆಗೆ ಒಗ್ಗಿಕೊಳ್ಳುತ್ತಲೇ ಬೃಹದಾಕಾರವಾಗುತ್ತ ಗಿಡವಾಗಿ ಮರವಾಗಿ ಹೆಮ್ಮರವಾಗಿ ಬೆಳೆಯುವುದು. ಜೀವ ಸಂಕುಲದ ಆದಿಮ ಜೀವಿಗಳಿಂದ ಹಿಡಿದು ಮಾನವನಂತಹ ಪ್ರಚಂಡ ಬುದ್ದಿಶಕ್ತಿಯ ಜೀವಿಯೂ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ತನ್ನದೇ ಆದ ಪ್ರಥಮ ಅನುಭವಕ್ಕೆ ಒಳಗಾಗುತ್ತಲೇ ಗಟ್ಟಿಗೊಳ್ಳುತ್ತಲೇ ಹೋಗುವುದು.ವಿಕಸನದ ಹಾದಿಯೇ ಹಾಗೇ? ಅವಸಾನದ ತುದಿಯಲ್ಲೂ  ಕೆಲವೊಮ್ಮೆ ಮತ್ತೇ ಉತ್ಕರ್ಷಕ್ಕೆ ಎಡೆಮಾಡಿಕೊಟ್ಟ ಉದಾಹರಣೆಗಳು ಹೇರಳ.

ಹಾಗೇ ಭೂಮಿಯೊಳಗಣ ಎಂದೂ ಒಣಗದ ತೇವದಂತೆ ಕವಿತೆ ನನ್ನೊಳಗನ್ನು ತಡಕಾಡಿ, ತಿವಿದು, ಎಬ್ಬಿಸಿ,ಉದ್ದೀಪಿಸುತ್ತಲೇ ಇತ್ತು. ನನ್ನ ಅಪ್ರಬುದ್ಧ ಭಾವನೆಗಳು, ಬಂಡಾಯದ ಗುಣ, ಪ್ರಕೃತಿಯೊಂದಿಗಿನ ಪ್ರೀತಿ ಜೀವಂತವಾಗಿಯೇ ಇದ್ದವು. ಹಾಗಾಗಿ ಇತ್ತೀಚೆಗೆ   ನಡು ವಯಸ್ಸಿನಲ್ಲಿ ಅಕ್ಷರದ ಕೊಳದಲ್ಲಿ ನನ್ನ ಮುಖ ಕಾಣಬಹುದೇ ಎಂಬ ಆಸೆಯಿಂದ ಅದರಲ್ಲಿ ಇಣುಕಿ ಇಣುಕಿ ನೋಡುತ್ತಿದ್ದೇನೆ. ಈಗ ಮತ್ತೆ ವಿಸ್ಮಯವೆನ್ನುವಂತೆ ಮುಖ ಅಸ್ಪಷ್ಟವಾಗಿ ಕಾಣುತ್ತಿದೆ. ಹೂ ಹಣ್ಣು ನೀಡುವ ಹೆಮ್ಮರವಾಗುವುದೇ ಕಾದು ನೋಡಬೇಕಿದೆ ನನಗೆ..

***********************

5 thoughts on “ಮೊದಲ ಕವಿತೆ

  1. ಬಹಳ ಚೆನ್ನಾಗಿ ನಿಮ್ಮ ಮೊದಲ ಕವಿತೆ ರಚನೆಯ ಅನುಭವಗಳನ್ನು ಹಂಚಿಕೊಂಡಿದ್ದೀರಿ..

Leave a Reply

Back To Top