ಬಸವಣ್ಣನಿಗೊಂದು ಪತ್ರ

ಲೇಖನ

ನೂತನ ದೋಶೆಟ್ಟಿ

ಶರಣು ಶರಣಾರ್ಥಿಗಳು.ದಿನವೂ ಬೆಳಿಗ್ಗೆ
ಇವನಾರವ ಇವನಾರವ ಎನ್ನದಿರಯ್ಯ,
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ


ಎಂಬ ನಿನ್ನ ವಚನವನ್ನು ಹೇಳಿಕೊಳ್ಳುವಾಗ ನಾಲಿಗೆ ತೊದಲುತ್ತದೆ. ಎಲ್ಲರನ್ನೂ ನನ್ನವರು ಎಂದು ಅಪ್ಪಿಕೊಂಡ ನಿನ್ನ ನಾಡಿನಲ್ಲೇ ಇವ ನಮ್ಮವನಲ್ಲ ; ನಾವೇ ಬೇರೆ ಅವನೇ ಬೇರೆ ಎಂದು ಪ್ರತಿಪಾದಿಸಲು, ತಮ್ಮ ಈ ಪ್ರತಿಪಾದನೆಯನ್ನು ಸ್ಥಾಪಿಸಲು ಜನ ಸಂಚು ಮಾಡುತ್ತಿದ್ದಾರೆ ! ನಿನ್ನ ಕಾಲದ ಇತಿಹಾಸ ಮರುಕಳಿಸಿಬಿಟ್ಟಿದೆ ಅಣ್ಣಾ.
ಜಾತಿ ವಿಜಾತಿ ಎನಬೇಡ ಎಂದು ಕಳಕಳಿಸಿದ ನೀನು ಜಾತಿ ಆಧಾರದ ಮೇಲೆ ಒಡೆದು ಚೂರಾಗಿದ್ದ ನಮ್ಮ ಅಂದಿನ ಸಮಾಜಕ್ಕೆ ದಾರಿದೀವಿಗೆಯಾಗಿ ಬಂದು ಮೇಲು ಕೀಳೆಂಬುದನ್ನು ಧಿಕ್ಕರಿಸಿ ಕಾಯಕ ಮಂತ್ರದೀಕ್ಷೆ ಮಾಡಿದೆ. ಕಾಯಕವೇ ಧರ್ಮ ಎಂದು ಪ್ರತಿಪಾದಿಸುತ್ತಲೇ ಅಂದಿನ ಧಾರ್ಮಿಕತೆಗೆ ದಯವಿಲ್ಲದಾ ಧರ್ಮ ಅದೇವುದಯ್ಯಾ ?ಎಂದು ಪ್ರಶ್ನಿಸಿದೆ.ಇದು ಕೇವಲ ಪ್ರಶ್ನೆಯಾಗಿರದೆ ಸಹಸ್ರಾರು ಹಿಂದುಳಿದವರ, ಬಡಬಗ್ಗರ, ತುಳಿತಕ್ಕೆ ಒಳಗಾದವರ, ಶೋಷಿತರ, ದುರ್ಬಲ ವರ್ಗದವರ ಮನೋಬಲವನ್ನು ವೃದ್ಧಿಸಿ ಇತರರಂತೆ ತಾವೂ ಮನುಷ್ಯರು. ತಮಗೂ ಅವರಂತೆ ಬದುಕುವ ಹಕ್ಕಿದೆ.ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒಕ್ಕೊರಲಿನಿಂದ ಹೇಳುವ ಧೈರ್ಯದ್ರವ್ಯವಾಯಿತು.ಅಂತಹ ಧೈರ್ಯವನ್ನು ಜನಸಾಮಾನ್ಯರಲ್ಲಿ ತುಂಬುವ ಮೊಟ್ಟಮೊದಲ ಪ್ರಯತ್ನ ನಿನ್ನಿಂದ ನಡೆಯಿತು.ನೀನು ಅವರೆಲ್ಲರ ಆರಾಧ್ಯಧೈವವಾದೆ. ನಿನ್ನ ಕಾಯಕ ನಿನ್ನನ್ನು ಆ ಎತ್ತರಕ್ಕೆ ಏರಿಸಿತು.ಆನಂತರ ನಡೆದದ್ದೆಲ್ಲ ಕ್ರಾಂತಿಯೇ.ಹೀಗಿದ್ದ ನೀನು ,ನಿನ್ನ ಜೀವಿತಕಾಲದಲ್ಲೇ ಆರಂಭಿಸಿದ ಸಾಮಾಜಿಕ ಚಳವಳಿಗೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಯಿತು. ಪ್ರಬಲರು ದುರ್ಬಲರೊಂದಿಗೆತಮ್ಮನ್ನು ಗುರುತಿಸಿಕೊಳ್ಳಲು,ಅವರಿಗೆ ಸಮಾನ ಸ್ಥಾನ-ಮಾನಗಳನ್ನು ನೀಡಲು ವಿರೋಧ ವ್ಯಕ್ತಪಡಿಸಿದರು.ಈ ಪ್ರತಿರೋಧದ ಜ್ವಾಲೆ ನಿನ್ನನ್ನೂ ಸೇರಿಸಿದಂತೆ ನಿನ್ನ ಆದರ್ಶ ಸಮಾಜದ ಕನಸನ್ನೂ ಆಹುತಿ ತೆಗೆದುಕೊಂಡಿತು.ಅದೂ ಮತ್ತೊಂದು ರೀತಿಯ ಕ್ರಾಂತಿಯೇ.ಆನಂತರ ಮತ್ತೊಮ್ಮೆ ನೀನು ಆರಾಧ್ಯದೈವವಾದೆ.
ಅಂದು ನೀನು ಬೆಳೆಸಿದ ನಿನ್ನ ಮಕ್ಕಳು ದಾಯಾದಿಗಳಾಗಿ ಹೊಡೆದಾಡುತ್ತಿದ್ದಾರೆ.ಅವರು ಏಕೆ ಹೊಡೆದಾಡುತ್ತಿದ್ದಾರೆ ಎಂದು ನನ್ನಂಥ ಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಅದು ನನ್ನಂಥ ಸಾಮಾನ್ಯರಿಗೆ ಸಂಬಂಧಿಸಿದ್ದೂ ಅಲ್ಲ. ಅದೇನಿದ್ದರೂ ರಾಜಕಾರಣಿಗಳಿಗೆ, ಧರ್ಮದ ಮುಂದಾಳುಗಳಿಗೆ ಸಂಬಂಧಿಸಿದ್ದು ಎಂದು ಜನ ಆಡಿಕೊಳ್ಳುತ್ತಿದ್ದಾರೆ.ಇವರಿಬ್ಬರ ನಡುವೆ ನೀನು ಹೇಗೆ ಮತ್ತು ಏಕೆ ಸಿಲುಕಿದೆ ಎಂಬುದು ನನಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.ನಿನ್ನನ್ನು ದೈವವಾಗಿ ಆರಾಧಿಸಬೇಕೆಂದು ನೀನೇನು ಅವರನ್ನು ಬೇಡಿಕೊಂಡಿದ್ದಿಲ್ಲ. ಅಥವಾ ನಿನ್ನನ್ನೇ ಆರಾಧಿಸಬೇಕೆಂದೂ, ಅವರು ನಿನ್ನ ನಂತರ ತಾವೇ ಒಪ್ಪಿಕೊಂಡು ಮುನ್ನಡೆಸಿದ ಧರ್ಮದ ಮೊದಲಿಗನೆಂದೂ ಹೇಳಿರಲಿಲ್ಲ. ಇದೆಲ್ಲ ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಅವಶ್ಯಕತೆಯಾಗಿತ್ತು.ಅದಕ್ಕೆ ನಿಮಿತ್ತವಾಗಿ ಬಂದ ನೀನು ಎಲ್ಲರನ್ನೂ ಒಂದಾಗಿಸಿ, ಮುನ್ನಡೆಸಲು ಹರಸಾಹಸ ಮಾಡಿ ಒಂದು ಹಂತದಲ್ಲಿ ಯಶಸ್ವಿಯಾದೆ. ಇದನ್ನು ಸಹಿಸದ ಜನ ಅಂದೂ ಇದ್ದರು ತಾನೆ?ಈ ನೋವು ನಿನ್ನನ್ನು ಅವರೆಲ್ಲರಿಂದ ದೂರ ಸರಿಯುವಂತೆ ಮಾಡಿತೋ ಅಥವಾ ಅವರೇ ನಿನ್ನನ್ನು ಕಾಣದ ಲೋಕಕ್ಕೆ ಕಳಿಸಿದರೋ ಆ ಕೂಡಲಸಂಗನಿಗೆ ಮಾತ್ರ ಗೊತ್ತು.


ಅಣ್ಣಾ, ವಿದ್ಯೆಯಿರದ ಆ ಕಾಲದ ಜನರಲ್ಲಿ ಅರಿವು ಮೂಡಿಸಲು ನೀನು ಪಡಬಾರದ ಪಾಡು ಪಟ್ಟೆ.ಎಲ್ಲರ ವಿರೋಧದ ನಡುವೆ ಏಕಾಂಗಿಯಾದರೂ ಅಚಲನಾಗಿ ನಿಂತೆ.ಕಮ್ಮಾರ, ಕುಂಬಾರ ಮೊದಲಾದ ಕಾಯಕದವರ ಬಾಳು ಭಂಡವಲ್ಲ. ಕಾಯಕವೇ ಕೈಲಾಸ ಎಂದು ಸಾರಿ ಮೊಟ್ಟಮೊದಲ ಬಾರಿಗೆ, ‘ ಡಿಗ್ನಿಟಿ ಆಫ್ ಲೇಬರ್’ – ಶ್ರಮಜೀವಿಗಳಿಗೆ ಗೌರವ ಸಲ್ಲಲೇಬೇಕಾದ ಹಕ್ಕಿನ ಪ್ರತಿಪಾದನೆ ಮಾಡಿದೆ. ಅದಾಗಲೇಇಂತಹ ಅನೇಕಾನೇಕ ಕಾಯಕಗಳು ಜಾತಿಗಳಾಗಿ ಪರಿಗಣಿತವಾಗಿದ್ದವು. ಆ ಜಾತಿಗಳು, ಅವರ ಅನಿವಾರ್ಯತೆ ಹಾಗೂ ಅವರ ಬಡತನ, ಅಂದಿನ ಮೇಲ್ವರ್ಗದ ಸಮಾಜಕ್ಕೆ ಆಳುವ ವರ್ಗಕ್ಕೆ ಬೇಕಾಗಿತ್ತು.ಅವರು ಸಂಘರ್ಷಕ್ಕೆ ಇಳಿದಾಗ ಅವರೆದುರು ನಿನ್ನ ಹೋರಾಟ ನಿನ್ನ ಜೀವಿತಕಾಲದಲ್ಲಿ ಸಫಲವಾಗಲಿಲ್ಲ. ಇದೆಲ್ಲ ನಡೆದು ಈಗ ೯ ಶತಮಾನಗಳೇ ಕಳೆದಿವೆ. ಆದರೂ ಕಾಲ ಮುನ್ನಡೆಯದೆ ನಿಂತಲ್ಲೇ ನಿಂತಿದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮೆದುರಿಗೆ ಇವೆ.
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಬೇಕಾದ ಕಾಲಘಟ್ಟದಲ್ಲಿ ನಾನಿದ್ದೇನೆ. ಅಯ್ಯಾಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಕಕ್ಕುಲಾತಿಯಿಂದ ಕಲಿಸಿದ ನಿನ್ನನ್ನೇ ಎಲವೋ ಎನ್ನುವುದಕಿಂತ ವಿಪರ್ಯಾಸ ಬೇಕೆ? ನನ್ನಂಥ ಸಾಮಾನ್ಯರಿಗೆ ದಾರಿ ತೋರುವ ಗುರುವ ಎಲ್ಲಿ ಹುಡುಕಲಿ ?
ಈಗ ನೀನೊಂದು ‘ಬ್ರ್ಯಾಂಡ್’ ಆಗಿದ್ದೀಯಾ ಬಲ್ಲೆಯಾ ?ನಿನ್ನ ವಚನಗಳನ್ನು ತಮಗೆ ಬೇಕಾದಂತೆ, ತಮಗೆ ಬೇಕಾದಲ್ಲಿ ಉದ್ಧರಿಸಿ ಚಪ್ಪಾಳೆ ಗಿಟ್ಟಿಸುವ ನಾಯಕರು ಹೆಚ್ಚುತ್ತಿದ್ದಾರೆ. ನಿನ್ನ ಮೂರ್ತಿಗಳು ಎಲ್ಲೆಡೆ ಪ್ರತಿಷ್ಠಾಪನೆಯಾಗುತ್ತಿವೆ. ಕಡಲಾಚೆಯೂ ನೀನು ಪ್ರಸಿದ್ಧ. ರಾಜಕೀಯ ಹವಣಿಕೆಗಳಿಗೆ ನೀನು ದಾಳವಾಗಿದ್ದು ಮಾತ್ರ ನನಗೆ ಸಂಕಟವುಂಟು ಮಾಡುತ್ತದೆ ಏಕೆಂದರೆ ನೀನು ನಿನ್ನ ಕಾಲದಲ್ಲೂ ರಾಜಕೀಯದಾಟಕ್ಕೆ ದಾಳವಾಗಿದ್ದಿ.


ನೀನಾಗಲೀ, ನಿನ್ನ ವಚನಗಳಾಗಲೀ ಧರ್ಮದ ಸೋಂಕಿರದ ಜೀವನಕ್ರಮ, ಸ್ವಾಸ್ಥ್ಯ ಆದರ್ಶ ಸಮಾಜದ ಬೆನ್ನೆಲುಬು ಮತ್ತು ಒಂದು ಅನನ್ಯ ಸಂಸ್ಕೃತಿ ಎಂದು ನನ್ನಂಥ ಸಹಸ್ರಾರು ಸಾಮಾನ್ಯರು ನಂಬಿಕೊಂಡು ಅದನ್ನೇ ಬದುಕಾಗಿ ಮಾಡಿಕೊಂಡಿದ್ದೇವೆ. ಅಂತಹದರಲ್ಲಿ ನಮ್ಮ ಬದುಕನ್ನೇ ದಿಕ್ಕೆಡಿಸುತ್ತಿರುವ ವಿದ್ಯಾವಂತ, ಬುದ್ಧಿವಂತ, ಸುಶಿಕ್ಷಿತ ಎಂದು ಕರೆದುಕೊಳ್ಳುವ ಗುಂಪುಗಾರಿಕೆಯ ಜನರಿಗೆ ನನ್ನಂಥವರ ಧಿಕ್ಕಾರವಿದೆ.ಅಣ್ಣಾ, ಅಂಗೈಯಲ್ಲಿ ದೈವತ್ವವನ್ನು ಕಾಣಿಸಿದ ನಿನ್ನ ಉದಾರತೆ, ಹಿರಿತನ ಇಂಥವರಿಗೆ ಅಂದೂ ಅರ್ಥವಾಗಿರಲಿಲ್ಲ. ಈ ಲಾಭಕೋರ ಢೋಂಗಿಗಳ ನಡುವೆ ನೀನು ಮತ್ತೊಮ್ಮೆ ಹುಟ್ಟಿ ಬರಲು ಸಾಧ್ಯವೆ?

8 thoughts on “ಬಸವಣ್ಣನಿಗೊಂದು ಪತ್ರ

  1. ನಿಜವಾಗಿಯೂ ಬಸವಣ್ಣನವರಿಗೆ ತಲುಪಬೇಕು ಈ ಪತ್ರ. ಇಷ್ಟವಾಯ್ತು ಮೇಡಮ್.

  2. ಶೈವರಾಗಲಿ,ಲಿಂಗಾಯತ ಸಾಮಾನ್ಯ ಜನರ ನಡುವೆ ಎಂದೂ ಪ್ರತ್ಯೇಕವಾಗಿ ಇರಬೇಕೆಂಬ ಭಾವವಿಲ್ಲ.ಇದು ರಾಜಕೀಯ ನಾಯಕರ ಒಡೆದು ಆಳುವ ನೀತಿ ಯಷ್ಟೇ.

    1. ಇದು ಶೈವ, ಲಿಂಗಾಯತ ಪ್ರಶ್ನೆ ಅಲ್ಲ.ಗಮನಿಸಿ.

  3. ಬಸವಣ್ಣ ಅವರನ್ನು‌ ಕಟ್ಟಿಕೊಡುವ ಒಳ್ಳೆಯ ಲೇಖನ

    1. ಅದು ಸಾಧ್ಯವೇ?
      ಇದು ನನಗೆ ನಿಲುಕಿದ್ದಷ್ಟೇ..
      ಧನ್ಯವಾದಗಳು

  4. ಇತ್ತೀಚಿನ ದಿನಗಳಲ್ಲಿ ಜಾತಿ ಜಾತಿಯೊಳಗಿನ ಕಂದಕ ಅತಿ ಯಾಗುತ್ತಿರುವುದು ವಿಪರ್ಯಾಸವೇ ಸರಿ.ಇವ ನಮ್ಮವ ಇವ ನಮ್ಮವ ಎಂಬುದನ್ನು ದೊಡ್ಡವರೆನಿಸಿಕೊಂಡವರು ಮರೆಯುತ್ತಿರುವುದು….

    1. ದೊಡ್ಡವರದು ಸರಿಯಾದ ಹಾದಿಯೇ …ಎಂದು ನಿಮಗೆ ಅನ್ನಿಸುತ್ತದೆಯೇ?

Leave a Reply

Back To Top