ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮನೆಯೊಳಗಿನ ಕಿಟಕಿಯಾಚೆ ಇಣಕಿದೆ
ಹೊರಗಡೆ ವಿಚಿತ್ರ ಪ್ರಪಂಚ,
ಹೊರಗೆ ಬರಬೇಕೇನಿಸಿ
ವಾಮನನಂತೆ ಮೂರು ಕಾಲಿಡುವ
ಬದಲು ಒಂದೆ ಕಾಲಿಟ್ಟೆ,

ಬರಿಸುಳ್ಳು, ಮೋಸ, ನಯವಂಚಕತನ
ತೋರುವ ಮುಖವಾಡಗಳು,
ಡಂಭಾಚಾರದ ಆಡಂಬರದ ಬದುಕು,
ಅಜ್ಜಿ ಹೇಳಿದ್ದು ನೆನಪಾಯಿತೀಗ
“ಹೊರಗೆ ಜನ ಸರಿಯಿಲ್ಲ ಹುಷಾರು ಮಗ”
ಎಂದಿದ್ದು,ಚಿತ್ತದಲ್ಲೀಗ ಕೋಲ್ಮಿಂಚಿನಂತೆ
ಹೊಳೆಯುತ್ತಿದೆ,

ಪ್ರತಿಯೊಂದು ಜೀವಿಗೂ ಬದುಕುವ
ಹಕ್ಕಿರುವುದನ್ನು ನೆನಪಿಸಿಕೊಂಡೆ,
ಕಿಟಕಿಯ ಸರಳುಗಳ ಹಿಂದೆ,
ಏಕಿರಬೇಕು ನಾನು ಬಂಧಿಯಾಗಿ,
ಹೊರಹೊರಡುತ್ತೇನೆ ಚಿಂತೆಗಳ ಸರಿಸಿ
ಬುದ್ಧನಂತೆಯೆ ಏಕಾಂಗಿಯಾಗಿ,

ಇಟ್ಟ ಹೆಜ್ಜೆಯನು ಹಿಂದಕ್ಕಿಡದಿರು ಎಂದಿದ್ದಳು
ಮಾತಾಯಿ ಹಡೆದವ್ವ,
ನಡೆದೆಯಿದ್ದೇನೆ
ವೀರನಂತೆ,
ಶೂರನಂತೆ
ಜ್ಞಾನಿಯಂತೆ,
ಸಾಧಿಸಹೊರಟಿದ್ದೇನೆ,

ಯಾರು ಒಳ್ಳೆಯವರು..? ಯಾರು ಕೆಟ್ಟವರು…?
ಎಲ್ಲರೂ ಒಂದೆಂದೂ ಭಾವಿಸಲು
ಕೈಬೆರಳಿನಂತೆ ಎಲ್ಲರೂ ಸಮವಿಲ್ಲ,
ವಿಚಿತ್ರ ಭಾವನೆಗಳ ಬಿತ್ತುವವರ ಮಧ್ಯೆ
ಬದುಕಿನ ಬಂಡಿ ನಡೆವುದ ಕಂಡು
ಒಳಗೊಳಗೆ ಕೊರಗುತ್ತಿದ್ದೇನೆ
ಕಿಟಕಿಯಾಚೆಗಿನ ಬದುಕ ನೆನೆದು…


About The Author

Leave a Reply

You cannot copy content of this page

Scroll to Top