ಕಾವ್ಯ ಸಂಗಾತಿ
ಕೃಷ್ಣೆಯ ಕಡೆಗಣಿಸದಿರಿ
ಎಮ್ಮಾರ್ಕೆ


ಕಾವೇರಿಯಂತೆಯೇ ಕೃಷ್ಣೆಯು
ಈ ಕರ್ನಾಟದವಳೇ ತಾನೇ,
ತವರು ಒಂದೇಯಾದರೂನು
ತಾರತಮ್ಯ ಏತಕೋ ಕಾಣೆ
ಉತ್ತರ ಕರ್ನಾಟಕದ ರೈತರಿಗೆ
ಜೀವನದ ನದಿ ಕೃಷ್ಣೆಯೇ,
ಜೀವನದಿ ಎಂದೆನಿಸಿಕೊಳ್ವದು
ಮಾತ್ರ ಆ ಕಾವೇರಿಯೇ
ಆದೇಶವಿದ್ದರೂ ಹೆಚ್ಚಿಸುತಿಲ್ಲ
ಆಲಮಟ್ಟಿ ಡ್ಯಾಂನ ಎತ್ತರ,
ಹೊಲಗದ್ದೆಗಳಿಗೆಲ್ಲ ನೀರಿಲ್ಲದೇ
ಇಲ್ಲಿನ ಅನ್ನದಾತರು ತತ್ತರ
ರಾಜಕೀಯ ಇಚ್ಛಾಶಕ್ತಿಯಲ್ಲಿ
ಎದ್ದು ಕಾಣುತಿದೆ ಕೊರತೆ,
ಆ ಕಣ್ಣಿಗೆ ಬೆಣ್ಣೆಯು ಈ ಕಣ್ಣಿಗೆ
ಸುಣ್ಣವು ಇದೆಂತಹ ಅಳತೆ
ಅಭಿವೃದ್ಧಿಗೆ ಅನುದಾನ ನಿಧಾನ
ಮತ್ತೆ ಹಣಕಾಸಿನ ಮುಗ್ಗಟ್ಟು,
ಉತ್ತರದ ಆಶೋತ್ತರ ಈಡೇರಲು
ನಾಯಕರಲ್ಲಿರಬೇಕು ಒಗ್ಗಟ್ಟು
ಈ ಕರುನಾಡು ಕೃಷ್ಣೆಗೂ ಕೂಡ
ತವರೂರೇ ಮರೆಯದಿರಿ,
ಕೃಷ್ಣೆ ವಿಷಯದಲಿ ಮಲತಾಯಿ
ಧೋರಣೆಯ ತಳೆಯದಿರಿ
ಎಮ್ಮಾರ್ಕೆ



