ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

‘ಮಣಿಪುರದರಸು ಬಭ್ರುವಾಹನ ನಿಮ್ಮ ಯಜ್ಞಾಶ್ವವನ್ನು ಕಟ್ಟಿಹಾಕಿದ್ದಾನೆ. ಬಿಡಿಸಿಕೊಂಡುಹೋಗುವ ಸಾಮರ್ಥ್ಯವಿದ್ದರೆ ಯುದ್ಧರಂಗದಲ್ಲಿ ಪರಾಕ್ರಮ ತೋರುವವರಾಗಬೇಕು’ ಎಂಬ ಸಂದೇಶವದು ನಮ್ಮನ್ನು ತಲುಪಿತು. ಅದಾಗಲೇ ಸೂರ್ಯ ಅಸ್ತಂಗತನಾಗಿದ್ದ. ಆ ದಿನ ಯುದ್ಧ ನಡೆಯುವುದು ಸಾಧ್ಯವಿರಲಿಲ್ಲ. ಇನ್ನೇನಿದ್ದರೂ ಮರುದಿನವಷ್ಟೇ ಕದನಕೋಲಾಹಲ ಆರಂಭ.
ನನ್ನ ಆಪ್ತರ ಜೊತೆ ಮರುದಿನದ ಯುದ್ಧತಂತ್ರಗಳನ್ನು ಚರ್ಚಿಸಿದೆ. ಸಮರ್ಥನೆನಿಸಿಕೊಂಡ ಬಭ್ರುವಾಹನನನ್ನು ಹೀನಾಯವಾಗಿ ಸೋಲಿಸಿದರೆ ನನ್ನ ವಿಜಯಮಾಲೆಗೆ ಹೊಸದೊಂದು ಕುಸುಮದ ಆಗಮನವದು ಖಚಿತ ಎನಿಸಿತು. ಬಭ್ರುವಾಹನನ ಸ್ಮರಣೆಯಲ್ಲಿಯೇ ಇರುಳು ಕಳೆಯಿತು.
ಬೆಳಕು ಮೂಡಿತು. ನಿತ್ಯಕರ್ಮಗಳನ್ನು ಪೂರೈಸಿದೆ. ಜಪತಪಾದಿಗಳನ್ನು ಮುಗಿಸಿದೆ. ಕೃಷ್ಣ ಪಾದಪದ್ಮಗಳನ್ನು ನೆನೆದೆ. ನಮ್ಮ ಪಾಳಯದ ವೀರರೆಲ್ಲರನ್ನೂ ಕರೆಸಿದೆ. ಅವರ ಜೊತೆಗೆ ಯುದ್ಧರಂಗಕ್ಕೆ ಹೊರಟೆ.
ಅನುಸರಿಸುತ್ತಿತ್ತು ಅನುಸಾಲ್ವಕನ ಸೇನೆ ನನ್ನನ್ನು. ಯುಕ್ತಿಯ ಯಾದವ ಚತುರಂಗವದು ಜೊತೆಗಿತ್ತು. ಒಡನೆಯೇ ಬಂತು ವೃಷಕೇತುವಿನ ವ್ಯಗ್ರಸೇನೆ. ಯುದ್ಧಚತುರ ಯೌವನಾಶ್ವನ ದಂಡು ಹಿಂದೆಯೇ ಇತ್ತು. ಹಂಸಧ್ವಜನ ಹೋರಾಟದ ಪಡೆಯದು ಮುನ್ನುಗ್ಗುತ್ತಿತ್ತು. ಘನವಾದ್ಯಗಳ ಧ್ವನಿಯದು ಮೊಳಗಿರಲು ನಾವೆಲ್ಲರೂ ಬಂದುಸೇರಿದೆವು ರಣರಂಗವನ್ನು.
ನಾನು ಮುಂಚೂಣಿಯಲ್ಲಿದ್ದೆ. ಬಭ್ರುವಾಹನನ ಆಗಮನಕ್ಕಾಗಿ ನನ್ನ ಕಣ್ಣು ಕಾತರಿಸುತ್ತಿತ್ತು. ಅಪಾರ ಜನಸಮೂಹದೊಂದಿಗೆ ಮಣಿಪುರದೊಡೆಯ ಬರುತ್ತಿರುವುದು ಕಂಡಿತು. ನೋಡಿದೆ! ಸರಿಯಾಗಿ ಇನ್ನೊಮ್ಮೆ ನೋಡಿದೆ! ಯುದ್ಧೋನ್ಮುಖವಾಗಿ ಬರುತ್ತಿರುವ ದಂಡು ಅದಲ್ಲ ಎಂದು ತೋರಿತು ನನಗೆ.
ಘನವಾದ್ಯದ ಮೊರೆತವಿರಲಿಲ್ಲ. ಕಾಳಗದ ಆರ್ಭಟವದು ಅಲ್ಲಿರಲಿಲ್ಲ. ಶುಭಸೂಚಕವಾದ ಇಂಪು ವಾದನಗಳ ಧ್ವನಿಯದು ಕೇಳಿಬರುತ್ತಿತ್ತು. ಕಳಶ, ಕನ್ನಡಿಗಳನ್ನು ಹಿಡಿದು ಅಲಂಕೃತರಾಗಿ ಮಂದಗಮನೆಯರಾಗಿ ಸಾಗಿಬರುತ್ತಿದ್ದರು ಲಲಿತಾಂಗಿಯರು. ಬ್ರಾಹ್ಮಣರಿದ್ದರು ಆ ಮೆರವಣಿಗೆಯಲ್ಲಿ, ವೇದಮಂತ್ರಗಳನ್ನು ಪಠಿಸುತ್ತಾ. ಈ ಬಗೆಯಲ್ಲಿ ಯುದ್ಧಕ್ಕೆ ಆಗಮಿಸುವುದೂ ಇದೆಯೇ! ಎಂದು ಅಚ್ಚರಿಯಾಯಿತು ನನಗೆ.
ಮೆರವಣಿಗೆಯ ಮೊಟ್ಟಮೊದಲಲ್ಲಿದ್ದ ಬಭ್ರುವಾಹನ. ಹತ್ತಿರ ಬಂದAತೆಲ್ಲಾ ಅವನ ರೂಪವದು ಸ್ಪಷ್ಟವಾಯಿತು. ಒಂದಷ್ಟು ವರ್ಷಗಳಿಗೆ ಮೊದಲು ನಾನು ಹೇಗಿದ್ದೆನೋ ಹಾಗೆಯೇ ಇದ್ದಾನೆ.
ನೇರವಾಗಿ ಬಂದ ನನ್ನೆಡೆಗೆ, ನಗುವನ್ನು ಸೂಸುತ್ತಾ. ಕದನ ಭಾವವದು ಅವನ ಮುಖದಲ್ಲಿ ಎಳ್ಳಷ್ಟೂ ಕಾಣಿಸಲಿಲ್ಲ. ನನಗೆ ತೀರಾ ಸನಿಹದವನಾಗಿ ನಿಂತ, ಆನಂದದಿAದ ನನ್ನ ಮೊಗವನ್ನು ನಿಟ್ಟಿಸುತ. ಒಡನೆಯೇ ತನ್ನ ಶಿರದಲ್ಲಿ ಶೋಭಿಸುತ್ತಿದ್ದ ಕಿರೀಟವನ್ನು ತೆಗೆದ. ನನ್ನ ಪಾದಗಳ ಬಳಿಯಿಟ್ಟ. ಅದು ಶರಣಾಗತಿಯ ಸಂಕೇತ. ಅಚ್ಚರಿಯಾಯಿತು ನನಗೆ. ಯುದ್ಧಕ್ಕೂ ಮೊದಲೇ ಶರಣು ಬಂದನೇ ಈತ! ಎನಿಸಿತು. ಮುಂದೇನು ಮಾಡಲಿದ್ದಾನೋ ಎಂಬAತೆ ನೋಡಿದೆ. ಅನರ್ಘ್ಯ ರತ್ನಗಳನ್ನು ನನ್ನ ಪಾದಮೂಲಕ್ಕೆ ಸುರಿದ. ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದ. ಹಾಗೆಯೇ ಸಾಷ್ಟಾಂಗ ಪ್ರಣಾಮವನ್ನೇ ಮಾಡಿದ, ನೆಲದ ಮೇಲೆ ಒರಗಿ.
ತಕ್ಷಣವೇ ಅಲ್ಲಿ ನೆರೆದಿದ್ದ ಮಣಿಪುರದ ಜನರು, ಹೆಂಗಳೆಯರು ನನ್ನ ಮೇಲೆ ಮುತ್ತಿನ ಮಳೆಗರೆದರು. ಬಗೆಬಗೆಯ ಕಾಣಿಕೆಗಳನ್ನು ನನಗಿತ್ತರು ಅಲ್ಲಿಯ ಸಚಿವರು. ಪರಾಕ್ರಮದ ಮಾತು, ಹರಿತ ಬಾಣಗಳ ಪ್ರಯೋಗ, ಹೀಗಳೆವ ಹೀನನನುಡಿ ಇವುಗಳನ್ನೆಲ್ಲಾ ನಿರೀಕ್ಷಿಸಿ ಹೋಗಿದ್ದ ನಾನು ಬಭ್ರುವಾಹನನ ವಿನಯಶೀಲತೆ, ಅಲ್ಲಿನ ಜನರ ಮುತ್ತಿನ ಮಳೆ, ಅಪೂರ್ವ ಕಾಣಿಕೆಗಳು ಇದನ್ನೆಲ್ಲಾ ಕಂಡು ವಿಸ್ಮಯಚಕಿತನಾದೆ. ನನ್ನ ಜೊತೆಗಿದ್ದ ನನ್ನ ಆಪ್ತರೂ ಸಹ ಅಚ್ಚರಿಯ ಸಾಗರದಲ್ಲಿ ಮುಳುಗಿಹೋಗಿದ್ದರು. ಕೇಳಿದೆ ಬಭ್ರುವಾಹನನಲ್ಲಿ, “ಏನಿದೆಲ್ಲಾ?! ಯಾಕೆ ಈ ಪರಿಯ ವಿನಯಶೀಲತೆ?!”
ಒಡನೆಯೇ ಅವನು ನನ್ನನ್ನು ‘ತಂದೆ’ ಎಂದು ಸಂಭೋದಿಸಿದ. ನನ್ನ ಕಣ್ಣುಗಳರಳಿದವು, ಚಕಿತತೆಯಿಂದ. “ನಾನು ನಿಮ್ಮ ಮಗ. ನೀವಂದು ತೀರ್ಥಯಾತ್ರೆಗೆಂದು ಇಲ್ಲಿಗೆ ಬಂದಾಗ ನಿಮ್ಮಿಂದ ಜನಿಸಿದವನು ನಾನು. ನನ್ನ ತಾಯಿ ಚಿತ್ರಾಂಗದೆ. ಪ್ರೀತಿಯಿಂದ ಸಲಹಿದವಳು ಉಲೂಪಿ. ನೀವೆನ್ನ ಜನಕ ಎಂಬ ಸತ್ಯವನ್ನು ಅರಿಯದೆಯೇ ಕಟ್ಟಿದೆ ಕುದುರೆಯನ್ನು. ಕ್ಷಮಿಸಬೇಕು ನಾ ಮಾಡಿದ ಈ ಬಗೆಯ ತಪ್ಪನ್ನು” ಎಂದವನು ತಪ್ಪು ಮಾಡಿ ಸಿಕ್ಕಿಬಿದ್ದ ಎಳೆಮಗುವಿನಂತೆ ಕಾಲಿಗೆ ಬಿದ್ದ.
ನಾನು ಏನೊಂದು ನುಡಿಯನ್ನೂ ಆಡಲಿಲ್ಲ. ನನ್ನನ್ನೇ ನೋಡುತ್ತಿದ್ದರು ನನ್ನಾಪ್ತರು, ಆತ್ಮೀಯರು. ಇದಾವ ಹೊಸ ಬಾಂಧವ್ಯವಿದು ಬಂದಪ್ಪಿದೆ ಈ ಅರ್ಜುನನನ್ನು ಎಂಬ ಭಾವವಿತ್ತು ಅವರ ಆ ಕಣ್ಣೋಟದಲ್ಲಿ. ಬಭ್ರುವಾಹನ ನನ್ನ ಮಗ ಎನ್ನುವುದನ್ನು ಸಂಪೂರ್ಣವಾಗಿ ನಂಬಿದAತಿತ್ತು ಅವರ ಮಾತುಗಳು.
“ನಿನ್ನ ಮಗನಾದ ಈ ಬಭ್ರುವಾಹನ ಮಹಾ ಪರಾಕ್ರಮಿ. ವೈಭವಯುತನಾಗಿದ್ದಾನೆ. ಹೊಗಳಿಕೆಗೆ ಅರ್ಹನೆನಿಸಿಕೊಂಡಿದ್ದಾನೆ. ನಿನ್ನನ್ನೇ ಹೋಲುತ್ತಾನೆ ರೂಪದಲ್ಲಿ. ಪಾದವನ್ನಪ್ಪಿರುವ ಈತನನ್ನು ಕ್ಷಮಿಸದೆಯೇ ಸುಮ್ಮನೆ ಏಕೆ ನಿಂತೆ?! ಮನ್ನಿಸು ಅವನನ್ನು” ಎಂದರು ಅವರೆಲ್ಲರೂ.
ಹೀಗೆ ಬಭ್ರುವಾಹನ ನಡೆದುಕೊಳ್ಳುವುದರ ಹಿಂದೆ ಒಂದು ಬಲವಾದ ಕಾರಣವಿತ್ತು. ಹಿಂದಿನ ದಿನ ನಮ್ಮ ಕುದುರೆಯನ್ನು ಕಟ್ಟಿಸಿದ್ದ ಆತ ನಮ್ಮೆದುರಿನ ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದ. ಈ ಸಮಯದಲ್ಲಿಯೇ ಅವನ ತಾಯಿಗೆ ಈ ವಿಷಯ ಗೊತ್ತಾಯಿತಂತೆ. ತಕ್ಷಣವೇ ಅವನ ಬಳಿಹೋಗಿ, “ಅರ್ಜುನ ನಿನ್ನ ತಂದೆ. ಅವನ ಕುದುರೆಯನ್ನು ಕಟ್ಟಿರುವುದು ಸರಿಯಲ್ಲ” ಎಂದಳAತೆ. ಈ ವಿಚಾರವನ್ನು ಸುಬುದ್ಧಿಯ ಜೊತೆಗೆ ಚರ್ಚಿಸಿದನಂತೆ ಬಭ್ರುವಾಹನ. “ತಂದೆಯೆAದು ತಿಳಿಯದೇ ಇದ್ದಾಗ ಕುದುರೆಯನ್ನು ಕಟ್ಟಿಸಿದವ ನೀನು. ಈಗ ನಿಜ ವಿಚಾರ ತಿಳಿದ ಬಳಿಕವೂ ಹಾಗೆಯೇ ನಡೆದುಕೊಳ್ಳುವುದು ಉಚಿತವಲ್ಲ” ಎಂಬ ಸಲಹೆಯನ್ನು ನೀಡಿದನಂತೆ ಸುಬುದ್ಧಿ. ಈ ಕಾರಣಕ್ಕೇ ಬಭ್ರುವಾಹನ ಯುದ್ಧಚಂತನೆಯನ್ನು ತೊರೆದು, ಶರಣಾಗತನಾಗಿ ನನ್ನೆದುರಿಗೆ ಬಂದದ್ದು.
ನನಗಂತೂ ಬಭ್ರುವಾಹನ ನುಡಿದದ್ದೆಲ್ಲವೂ ಕಟ್ಟುಕಥೆ ಎಂದೇ ತೋರಿತು. ನನ್ನನ್ನು ಎದುರಿಸಲಾರದ ಅಧೈರ್ಯಕ್ಕೆ ಒಳಗಾದವನು ಸುಳ್ಳು ಹೇಳುತ್ತಿದ್ದಾನೆ ಎನಿಸಿತು. ಹೀಗಿದ್ದಾಗಲೇ ನಮ್ಮವರಾಡಿದ “ಕ್ಷಮಿಸು ಮಗನನ್ನು” ಎಂಬ ಮಾತು ನನ್ನನ್ನು ಕೆರಳಿಸಿತು. ಉಗ್ರನೋಟ ಬೀರಿದೆ ಬಭ್ರುವಾಹನನೆಡೆಗೆ…


About The Author

Leave a Reply

You cannot copy content of this page

Scroll to Top