ಲಹರಿ

ಹಾಡುಗಳು ಹೀಗೆ….

Person Holding Blue and Silver Vintage Camera

ಜಿ.ಲೋಕೇಶ್



ಈ ಬದುಕಿನ ಒತ್ತಡಗಳನ್ನು ನಿಭಾಯಿಸುವವರು ತಾವು ಅದರಿಂದ ಮುಕ್ತರಾಗಲು ತಾವು ತಾವಾಗಿಯೇ ಇರಲು ಹಲವು ದಾರಿಗಳನ್ನು ಕಂಡುಕೊಳ್ಳುತ್ತಾರೆ.
ಅದರಲ್ಲಿ ಸಂಗೀತವಂತು ಮನಸ್ಸಿಗೆ ಹಬ್ಬ ನೀಡುವ ಬೆಳಕು.
ಹಾಡುಗಳನ್ನು ಗುನುಗುತ್ತಾ ಅವುಗಳೊಡನೆ ದಿನ ದೂಡುವ ಎಷ್ಟೋ ಮನಸ್ಸುಗಳಿವೆ. ಕೆಲವು ಹಾಡುಗಳಂತು ಎಷ್ಟು ಕಾಡುತ್ತವೆ ಅಂದರೆ ಬಹುಶಃ ಅವು ನಮ್ಮ ಬದುಕಿನುದ್ದಕ್ಕೂ ಜೊತೆಗೆ ಇದ್ದು ಬಿಡುತ್ತವೆ.
ನಮ್ಮೊಂದಿಗೆ, ನಮ್ಮೊಡನೆ,ನಮ್ಮ ಜೀವನದ ಘಟನೆಗಳೊಡನೆ ತಳಕು ಹಾಕಿಕೊಂಡಿರುತ್ತವೆ.
ಅದರಲ್ಲಿ ಪ್ರೇಮಿಗಳಿಗಂತು ಹಾಡುಗಳು ವರದಾನ. ಅಂತಹ ಪ್ರೇಮಿ ಹೀಗೆ ತನ್ನ ಜೀವನವನ್ನು ತನ್ನ ಪ್ರಿಯತಮೆಗಾಗಿ ಮೀಸಲಿಡಬಹುದು.



“ತೇರೆ ಮೇರೆ ಸಪ್ನೆ
ಅಬ್ ಏಕ್ ರಂಗ್ ಹೈ!”
ವಾಹ್ ಎಂತಹ ಅದ್ಭುತ ಸಾಲುಗಳು ಅವಳ ಕನಸುಗಳು, ಇವನ ಕನಸುಗಳು ಒಂದೇ ಬಣ್ಣದಲ್ಲಿವೆ. ಸಾಕಲ್ಲವೇ?ಮನಸ್ಸಿಗೆ ಇನ್ನೇನು ಬೇಕು? ಸರ್ವ ಋತುವು ವಸಂತವೇ, ಚಿಗುರೆಲೆಯ ಘಮಲೇ!”



“ದೂರ ಬೆಟ್ಟದಲ್ಲಿ ಒಂದು ಮನೆಯಿರಬೇಕು,
ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು”
ಈ ಹಾಡಿನ ಸಾಲುಗಳು ಅವನು ಅವಳು ಕಂಡ ಕನಸುಗಳನ್ನು ಪ್ರತಿ ಕ್ಷಣವನ್ನು ನೆನಪಿಸುತ್ತಿರುತ್ತದೆ .ಅವರದೇ ಕನಸಿನ ಮನೆಯನ್ನು ಈ ಸಮಾಜದ ಗೊಡವೆಯೇ ಇರದ ದೂರದ ಬೆಟ್ಟದಲ್ಲಿ ಮನೆ ನಿರ್ಮಿಸಿ ಹಾಸಿ ಹೊದಿಯಲು ಕನಸುಗಳು. ಇವನಿಗೆ ಅವಳು, ಅವಳಿಗೆ ಇವನು .ಹಾಸಿ ಹೊದಿಯಲು ಕನಸುಗಳು. ಮುದಿತನದ ದಿನಗಳವರೆಗೂ ಇಬ್ಬರೇ! ಮಕ್ಕಳು ಬೇಡವೇ ಎನ್ನುತ್ತಾಳೆ ಅವಳು ಹಾಡುಗಳನ್ನು ಕೇಳಿ, ಕೇಳಿ ಇವನೆ ಒಂದು ಸಾಲು ಹೇಳುತ್ತಾನೆ

“ಮಗುವಿನಂತೆ ನೀನಿರಲು
ಮಕ್ಕಳು ಬೇಕೆ? ಜೊತೆಗಿರಲು”
ಮನೆಯ ಸುತ್ತಲೂ ಹೂವು ರಾಶಿ ಹಾಸಿಕೊಂಡು ದಿನವು ಇವರನ್ನು ನೋಡಿ ನಗುತಿರಬೇಕು. ಮನೆಯ ಮುಂದೆ ಹೊಂಡ ನಿರ್ಮಿಸಿ ಅದರಲ್ಲಿ ಕಮಲದ ಹೂಗಳು ಬಾತುಕೋಳಿಗಳು ಒಂದಷ್ಟು ವಿವಿಧ ಜಾತಿಯ ಹಕ್ಕಿಗಳು. ಹೊಸ ಪ್ರಪಂಚವನ್ನೇ ನಿರ್ಮಾಣ ಮಾಡಿ ಬದುಕು ಸಾಗಬೇಕು.
ಆಕಸ್ಮಾತ್ ಅವಳಿಗೆ ನೋವಾದರೆ ಹೇಳುತ್ತಾನೆ

“ನೀನ್ಯಾತಕೆ ಬಾಡುವೆ ಸೊರಗಿ
ನಾನಿಲ್ಲವೇ ಆಸರೆಯಾಗಿ”
ಅವಳನ್ನು ತೊಡೆಯ ಮೇಲೆ ಇರಿಸಿ ತಲೆ ನೇವರಿಸುತ್ತಾ ಕಂಗಳ ಹನಿಗಳನ್ನು ತಡೆಯುವನು ಕೊನೆಗೆ ಅವಳ ಅನುಪಸ್ಥಿತಿ ಕಾಡಿ ಹೇಳುತ್ತಾನೆ

“ಬರೆದೆ ನೀನು ನಿನ್ನ ಹೆಸರ


ನನ್ನ ಬಾಳ ಪುಟದಿ
ಅದರ ಮಧುರ ಸ್ಮೃತಿಯ ನಾನು
ಹೇಗೆ ತಾನೇ ಮರೆಯಲಿ.”
ಎಂದು ನೋವು ತಡೆದು ಪ್ರತಿದಿನವೂ ಬದುಕು ದೂಡುತ್ತಾನೆ. ಅವನ ಬದುಕಿನ ಪುಟವು ಕೊನೆಯಾಗ ಬಂದಾಗ

“ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ.”
ಎಂದು ಜಗವು ಇವರ ರೀತಿಯ ಪ್ರೀತಿ ಕಂಡಿಲ್ಲದಂತೆ ಅಮರವಾಗಿಸುತ್ತಾನೆ
ಕೊನೆಗೆ ಒಂದು ಉಯಿಲು ಬರೆದಿಡುತ್ತಾನೆ. ದಿನವೂ ನಮ್ಮ ಸಮಾಧಿಯ ಮುಂದೆ ಹೂಗಳು ನಲಿಯುತ್ತಿರಲಿ. ನಮ್ಮ ಕನಸುಗಳು ಮುಂದುವರಿಯಲು ಮತ್ತೊಂದು ಜೀವಾತ್ಮಗಳು ಮನೆಯನ್ನು ಸಿಂಗರಿಸಲಿ
ಅವರ ಬೆಳಗುಗಳು ಮತ್ತಷ್ಟು ಹೊಸ ಹಾಡುಗಳೊಂದಿಗೆ ಪ್ರಾರಂಭವಾಗಲಿ ಎಂದು!

*************



ಜಿ.ಲೋಕೇಶ
ಶಿಕ್ಷಕರು
ಸ.ಹಿರಿಯ ಪ್ರಾಥಮಿಕ ಶಾಲೆ ಮೈಲಾಪುರ
ಚಿಂತಾಮಣಿ ತಾಲೂಕು
ಚಿಕ್ಕಬಳ್ಳಾಪುರ ಜಿಲ್ಲೆ
563125
# 9731549945

Leave a Reply

Back To Top