ಪುಸ್ತಕ ಸಂಗಾತಿ

ಬಣ್ಣದ ಜೋಳಿಗೆ

ಬಣ್ಣದ ಜೋಳಿಗೆ

ಸ್ನೇಹಾ ಪಬ್ಲಿಕೇಶನ್ಸ್

ಗಾಯಿತ್ರಿ ರಾಜ್

“”ಬಣ್ಣದ ಜೋಳಿಗೆ “” ಗಾಯತ್ರಿ ರಾಜ್ ಅವರ ಮೊದಲ ಕಥಾ ಸಂಕಲನ, ಚೊಚ್ಚಲ ಪುಸ್ತಕ,
ಒಂದೇ ದಿನದಲ್ಲಿ ಬರೆಯಬಹುದುದಾದ ಅನಿಸಿಕೆಗೆ ಮೂರು ದಿನಾ ತಗೊಂಡೆ ಅಂದ್ರೆ ನಾನು ಬರೆಯೋದು “ಆರು ಹೆತ್ತೋಳಿಗೆ ಮೂರು ಹೆತ್ತೋಳು ಹದ ಹೇಳಿದಂತೆ”” ಆಗತ್ತೇನೋ ಅನ್ನಿಸಿ, ತಡ ಮಾಡಿದೆ, ನನ್ನ ತಿಳಿವಿನ ಮಟ್ಟಕ್ಕೆ, ಯಾವ ಅತಿಶಯೋಕ್ತಿ ಪೂರ್ವಗ್ರಹ ಇಲ್ಲದೇ ಬರೆದಿರುವೆ, ಗುಣಕ್ಕೆ ಮತ್ಸರ ಏಕೆ?? ಅಲ್ವಾ..
ಪೂರ್ಣ ಪ್ರಮಾಣದಲ್ಲಿ ಬರಹಕ್ಕೆ ಕುಳಿತರೆ ಒಳ್ಳೇ ಸಾಹಿತಿ ಆಗಬಲ್ಲಳು, ಯಾಕೆಂದರೆ ಬರಹಗಾರನಿಗೆ ಮೂಲತಃ ಇರಬೇಕಾದದ್ದು ತಾನು ಬರೆಯುವ ವಿಷಯದ ಅಧ್ಯಯನ ಮತ್ತು ಅರಿವು, ಮತ್ತು ಎಲ್ಲಾ ಪ್ರಕಾರಗಳಲ್ಲಿ ಬರೆಯೋದು, ಈಗಾಗಲೇ ಇವಳ ಕಥೆ, ಕವನ, ಪ್ರವಾಸಕಥನಗಳು ಸುಧಾ ತರಂಗ, ಕರ್ಮವೀರ, ಓ ಮನಸೇ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಹೊಸ ದಿಗಂತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ, ಸಂಪದ ಸಾಲು ಪತ್ರಿಕೆಯ ವರ್ಷಗಳ ಅಂಕಣಕಾರ್ತಿ ಕೂಡಾ… ಅಭಿನಂದನೆಗಳು, ಶುಭಾಶಯಗಳು ಗೆಳತೀ…
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿಯಾಗಿರೋ ಗಾಯತ್ರಿ ನಂಗೆ ಫೇಸ್ಬುಕ್ ಪರಿಚಯ, ಓದಿನ ಬರಹದ ಸಮಾನ ಆಸಕ್ತಿ ನಮ್ಮನ್ನು ಹತ್ತಿರ ತಂದಿದ್ದಾದರೂ ಬಹಳಷ್ಟು ಆಸಕ್ತಿಯ ಸಾಮ್ಯತೆಗಳು ಗೆಳೆತನವನ್ನು ಗಾಢವಾಗಿ ಬೆಸೆದಿದೆ, ಸಂಗೀತ, ಸಾಹಿತ್ಯ, ಕೆಲವು ಕಲೆ ಹವ್ಯಾಸಗಳ ಆಗರ ಆಗಿರೋ ಗಾಯತ್ರಿ ಸದಾ ಕ್ರಿಯೇಟಿವ್, ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ ಇರೋ ಇವಳಿಗೆ ತನ್ನ ಬಿಡುವಿಲ್ಲದ ಕೆಲಸಗಳಲ್ಲೂ ಬರಹವನ್ನು ಆಪ್ತವಾಗಿಸಿಕೊಂಡವಳು, ಅಕ್ಷರವನ್ನು ಪದಗಳಾಗಿಸಿ, ಅದನ್ನು ತನ್ನ ಹಿಡಿತದಲ್ಲಿ ಇಟ್ಟು ಓದುಗರ ಮನಸ್ಥಿತಿಗನುಗುಣವಾಗಿ ಬರೆಯುವ ಚತುರತೆ ಇವಳಿಗೆ ತಾನಾಗಿ ಒಲಿದು ಬಂದಿದೆ,
ಆ ಕರಾಳ ರಾತ್ರಿ…


ಪ್ರವಾಹ ಮತ್ತು ಪ್ರಕೃತಿ ವಿಕೋಪದ ಹಲವು ಮುಖಗಳನ್ನು ಕಂಡಿದ್ದೀವಿ ಹಾಗೂ ಕಾಣುತ್ತಲೇ ಇದ್ದೀವಿ, ಇದರ ಜೊತೆ, ಮಾನವೀಯ ಭಾವನಾತ್ಮಕ ಸಂಬಂಧಗಳ ತಳುಕು, ಅಜ್ಜಿ ಮೊಮ್ಮಗನ, ಮತ್ತು ತನ್ನ ಮೇಲೇ ಅವಲಂಬಿತವಾಗಿರುವ ಅಸಹಾಯಕ ವೃದ್ಧ ಜೀವವನ್ನು ರಕ್ಷಿಸಲು ರಾಜೇಶ್ ಪಡುವ ಪಾಡು, ಜೀವಕ್ಕೇ ಹತ್ತಿರವಾದ, ಪ್ರೇಮವನ್ನು ಮೀರಿ ಅಜ್ಜಿಯನ್ನು ಉಳಿಸಿಕೊಳ್ಳಲು ಹೋರಾಡಿಯೂ , ಪ್ರವಾಹದ ಸಂಕಷ್ಟದಲ್ಲಿ ಬಹುಪಾಲು ಜೊತೆಗಿದ್ದು ಇನ್ನೇನೂ ಗುರಿ ಸೇರಿದ್ದೀವಿ ಅನ್ನೋಲ್ಲಿ ಎದುರಾದ ನಿರಾಸೆ … ಇಲ್ಲಿ ಎರಡು ಸಂಭವಗಳನ್ನು ನಮ್ಮ ಮುಂದಿಟ್ಟು ಕಥೆ ಮುಗಿಸುವ ಲೇಖಕಿಯ ಜಾಣ್ಮೆ, ನಿರೂಪಣೆ, ಪ್ರಬುದ್ಧತೆ ಇಷ್ಟವಾಗತ್ತೆ, ಮೊಮ್ಮಗನ ಅಂತಃಶಕ್ತಿಯಾಗಿ ಜೊತೆಗಿರುವ ಅಜ್ಜಿಯೇ ಅಂತಾ ಪ್ರವಾಹವನ್ನು ದಾಟಿಸುವ ಶಕ್ತಿ ಎಂದರೆ ತಪ್ಪಿಲ್ಲ ….
ಅನೈತಿಕನಾ??
ಅನೈತಿಕ ಈ ಪದಕ್ಕೇ ಯಾವ ಅರ್ಥ ಕೊಡಬೇಕು ಅನ್ನೋದು ಇವತ್ತಿಗೂ ಒಗಟೇ… ನಿಜ ಯಾವುದು ಅನೈತಿಕ? ಪುರಾಣಗಳ ಪುಟ ತುಂಬಾ ಧರ್ಮಸೂಕ್ಷ್ಮಗಳಡಿಯಲ್ಲಿ ಬರುವ ವಿಷಯ ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಚರ್ಚೆಗೆ, ನಿಂದನೆಗೆ ಗುರಿಯಾಗೋದು ವಿಡಂಬನೆಯಾ…. ವಿಪರ್ಯಾಸವಾ?? ಆದರೇ ನಮ್ಮಂತವರು ಸಮಾಜಕ್ಕೆ ಕುಹಕಕ್ಕೆ ಹೆದರಿ ಬರೆಯಲಾರದ ವಿಷಯವನ್ನು ತೆಗೆದುಕೊಂಡು ಲೀಲಾಜಾಲವಾಗಿ ಸುಂದರವಾಗಿ ನಿರೂಪಿಸಿ ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೇ….
ಬಡತನದ ಬಣ್ಣ ಕಡುಕೆಂಪು…..
ಇನ್ನೊಬ್ಬರ ನೋವು, ಸಂಕಟ, ಹಸಿವು ನಿರಾಸೆಯನ್ನು ನಾವು ಅನುಭವಿಸಿದಂತೆ, ನಮ್ಮದೇ ಅನುಭವದಂತೆ ಓದುವವರಿಗೂ ತಮ್ಮದೇ ಅನುಭವ ಅನ್ನೋ ಹಾಗೇ ಅಕ್ಷರಗಳಲ್ಲಿ ನಿರೂಪಿಸುವುದರಲ್ಲಿ ಬರಹಗಾರರ ಚಾತುರ್ಯ ಜಾಣ್ಮೆ, ಓದುಗರ ಮನಗೆಲ್ಲುವ ಆಕರ್ಷಣೆ ಅಡಗಿರತ್ತೆ, ಈ ನಿಟ್ಟಿನಲ್ಲಿ ಲೇಖಕಿ ಈ ಕಥೆಯಲ್ಲಿ ಓದುವ ನಮ್ಮನ್ನೇ ಪಾತ್ರವಾಗಿಸಿ ಮನ ಮಿಡಿಯುವಂತೆ ಚಿತ್ರಿಸಿದ್ದಾರೆ….. ಹಸಿವಿನ ನೋವು ಸಂಕಟ ಮಾತ್ರವಲ್ಲ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ,
” ಮಾಮ್ ” ಅಮಾನವಿ ಕುತಂತ್ರ,
ಆಧುನಿಕತೆ ಹೆಚ್ಚಿದಷ್ಟೂ ಮನುಷ್ಯನ ಲಾಲಸೆ ಯೂ ಹೆಚ್ಚುತ್ತಲೇ ಹೋಗತ್ತಾ , ಜೊತೆಗೆ ಎಷ್ಟು ಸೌಲಭ್ಯಗಳು ಸಿಕ್ಕರೂ ಇನ್ನೂ ಇನ್ನೂ ಬೇಕೆನ್ನುವ ಹಪಾಹಪಿ ಜಾಸ್ತಿಯಾಗತ್ತಾ, ಸೋಮಾರಿತನ ಯಂತ್ರಗಳ ಮೇಲಿನ ಅವಲಂಬನೆ ಹೆಚ್ಚತ್ತಾ…. ಇದನ್ನು ಓದುತ್ತಿದ್ದರೆ ಭಯ ಅನ್ನಿಸತ್ತೆ… ಕಣ್ಮುಂದೆ ನೆಡೆದಂತೆ ಅನುಭವ ನೀಡುವ ಬರಹದ ಲೇಖಕಿಯ, ತಿಳುವಳಿಕೆ ಮತ್ತು ಅದನ್ನು ಓದುಗರ ಮನಕ್ಕಿಳಿಯುವಂತೆ ಬರಹಕ್ಕಿಳಿಸುವ ಜಾಣ್ಮೆ ಮೆಚ್ಚುವಂತಹದು,
ನಿರ್ಧಾರ..
ನಿಜ ದೈನಂದಿನ ಬದುಕಲ್ಲಿ ತುಂಬಾ ಗಹನ ಆಗಿದ್ದೂ ನಮ್ಮ ನಿರಾಸಕ್ತಿ ಬೇಜವಾಬ್ದಾರಿ ಇಂದಲೋ, ಮುಜುಗರ ಸೌಜನ್ಯ, ಅತ್ವಾ ಕರ್ತವ್ಯ ಜವಾಬ್ದಾರಿ ಎಂದೋ ಕೆಲವು ದುಡುಕಿನ ನಿರ್ಧಾರಗಳು ಬಾಳಪೂರ್ಣ ನಮ್ಮನ್ನು ಕಾಡಿ ಕಂಗೆಡಿಸುತ್ತವೆ, ಮನಸ್ಸು ಹೃದಯ ಎಂದು ಬದುಕಿಡೀ ನರಳುವ ಬದಲು ಬುದ್ದಿಗೆ ಸಾಣೆ ಹಿಡಿದು ಯೋಚಿಸಿ ನಿರ್ಧರಿಸಿದರೆ, ಬಹಳಷ್ಟು ಉತ್ತಮ ಜೀವನ ನೆಮ್ಮದಿಗೆ ಕಾರಣವಾಗುತ್ತದೆ, ಲೇಖಕಿಯ ಧನಾತ್ಮಕ ಯೋಚನೆ ಹಾಗೂ ಅದನ್ನು ಸಮಾಜಕ್ಕೂ ಧನಾತ್ಮಕತೆಯನ್ನು ಹರಡುವ ಉದ್ದೇಶ ಎರಡೂ ಸಫಲವಾಗಿದೆ,
ಸುಂಟರಗಾಳಿ?
ಏನೋ ಆಗಿದೆ ಅನ್ನೋ ಭಯ… ಅದು ತರುವ ಅಸಹನೆ…. ನಮ್ಮಲ್ಲಿನ ಕೀಳರಿಮೆ ತಪ್ಪಿತಸ್ಥ ಮನೋಭಾವನೆ ಎಷ್ಟು ಬೇಗ ನಮ್ಮನ್ನು ಪಾತಾಳಕ್ಕೆ ತಳ್ಳಬಹುದು ಅನ್ನೋದಕ್ಕೆ ಈ ಕಥೆ ಸಾಕ್ಷಿಯಾಗಿದೆ, ಅನುಮಾನ ಮತ್ತು ಅಹಂಕಾರ ಸಂಬಂಧಗಳ ಸಮಾಧಿಗೆ ತಳಹದಿ, ನಿಜ ಇದನ್ನು ಸರಳವಾಗಿ ಸುಲಭವಾಗಿ ಮನಸ್ಸಿಗಿಳಿವಂತೆ ಬಿಂಬಿಸಿದ ಲೇಖಕಿಗೆ ವಂದನೆಗಳು,
ರಾಜಿ..?
ಯಾರಾದರೂ ಯೋಚಿಸಲು ಮಾತನಾಡಲು ಸಂಕೋಚ ಮುಜುಗರ ಪಡುವ ಸಲಿಂಗ ಸಾಂಗತ್ಯದ ವಿಷಯವನ್ನೆತ್ತಿಕೊಂಡು, ಸುಲಲಿತವಾಗಿ ಅದನ್ನು ಬರಹಕ್ಕಿಳಿಸಿ, ಓದುಗರಿಗೂ ಎಲ್ಲೂ ಮುಜುಗರ ಆಗದಂತೆ, ಬಾಲ್ಯದಿಂದಲೂ ಹೆಣ್ಮಕ್ಕಳ ಮೇಲಾಗುವ ದೌರ್ಜನ್ಯದಿಂದ ದಾಂಪತ್ಯ ಸಾಂಗತ್ಯದ ಬಗ್ಗೆ ಹೆಣ್ಮಕ್ಕಳ ಮೇಲಾಗುವ ಪರಿಣಾಮ ಅದ್ಭುತವಾಗಿ ಬಿಂಬಿತವಾದ ಕಥೆ ಲೇಖಕಿಗೆ ಹ್ಯಾಟ್ಸಾಪ್ ಹೇಳದೇ ಬೇರೆ ಮಾತಿಲ್ಲ.

“”ಬಾಳಲ್ಲಿ ನಿನ್ನಿಂದ ಸೂರ್ಯೋದಯ”, ದಲ್ಲಿ ಕರಾಳತೆ ಕವಿದ ಬದುಕೊಂದು ಸಾಮಾಜಿಕ ಸಂಪ್ರದಾಯಗಳ ಸಂಕೋಲೆ ಮೀರಿ ಬದುಕನ್ನು ಧನಾತ್ಮಕವಾಗಿ ಯೋಚಿಸುವ ನಿಟ್ಟಿನಲ್ಲಿ ನಮ್ಮನ್ನು ಚಿಂತನೆಗೆ ಹಚ್ಚಿದರೇ….
“ಪಿಂಕ್ ಶರ್ಟ್ ಮತ್ತು ಖಾಕಿ?” ನಾವು ಕಾಣದ ಸಮಾಜದ ವಿಭಿನ್ನ ವ್ಯಕ್ತಿ ಮತ್ತು ವ್ಯಕ್ತಿತ್ವ, ತನ್ನದಲ್ಲದ ತಪ್ಪಿಗೆ ತೃತೀಯ ಲಿಂಗಿ ಅನ್ನಿಸಿಕೊಂಡು ಬದುಕಿದ ಮನಸ್ಸಿನ ನೋವು ಕಳವಳ, ಪಾಡು ಪರದಾಟಗಳನ್ನ ಹೇಳುತ್ತಾ… ವ್ಯವಸ್ಥೆಯ ದೌರ್ಜನ್ಯ ಮತ್ತು ಕಾಯಬೇಕಾದವರೇ ಕೊಲ್ಲುವ ಮನಸ್ಥಿತಿಯ ಕ್ರೌರ್ಯ ಪರಿಸ್ಥಿತಿಯ ದುರ್ಬಳಕೆಯನ್ನು ಮಾಡಿಕೊಳ್ಳುವ ಅಧಿಕಾರಿ ವರ್ಗ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ ಲೇಖಕಿ, ಅಕ್ಷರಗಳನ್ನು ಪದಗಳನ್ನು ಸೇರಿಸಿ ಹನೆದ ಕಥೆ ಸಚಿತ್ರವಾಗಿ ಕಣ್ಮುಂದೆ ಬರತ್ತೆ,…
” ಕಲ್ಲಾದಳೆ ಅಹಲ್ಯೆ…..?? ” ಈ ಕಥೆ ಓದುತ್ತಾ ಓದುತ್ತಾ ನಾನೇ ಅಹಲ್ಯೆ ಆಗ್ಬಿಟ್ಟಿದ್ದೆ, ಅಹಲ್ಯೆಯ ಮನದಾಳದ ಭಾವ ನೋವು ಆಕ್ರಂದನ ಆಕ್ರೋಶ ಹತಾಶೆ ಅಸಹಾಯಕತೆ, ಒಂದು ತಣ್ಣನೆ ಸೇಡು ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟ ಪರಿ ಅನನ್ಯ, ಪುರಾಣಗಳ ಪುಟಗಳನ್ನು ಮೂಲಕ್ಕೇ ಚ್ಯುತಿ ತರದೇ ಬಿಂಬಿಸೋದೇ ಒಂದು ದೊಡ್ಡ ಸಾಹಸ, ಈ ಕಥೆ ಓದಿದರೆ ಬಹುಶಃ ಲೇಖಕಿ ಪುರಾಣದ ಯಾವುದೇ ಒಂದು ಪಾತ್ರವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಅಳವಡಿಸಿ ಅದ್ಬುತ ಕಾದಂಬರಿ ಮಾಡಲು ಶಕ್ತಳು ಅನ್ನಿಸಿತು,
“”ಅನಿರೀಕ್ಷಿತ ತಿರುವು “” ನಿಜಾ ಬಹಳ ಸಲ ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳು ತೀರಾ ಎಲ್ಲೋ ಮುಂಚೆನೇ ನೆಡೆದಂತೆ ಕನಸಲ್ಲಿ ಕಂಡಂತೆ ಈ ಮೊದಲೇ ಅನುಭವಕ್ಕೆ ಬಂದಂತೆ ಅನ್ನಿಸಿ ಗಾಬರಿ ಹುಟ್ಟಿಸುವುದು, ಇದು ಬಹಳ ಜನಕ್ಕೆ ಏನೆಂದು ಅರಿವಾಗೋದು ಇಲ್ಲಾ, ನಾವೇ ಇದೇನೂ ಸಿಕ್ಸ್ತ್ ಸೆನ್ಸಾ ಅನ್ನಿಸಿ ಕಳವಳ ಆಗೋದುಂಟು, ಅಂತಹ ಒಂದು ಎಳೆ ಹಿಡಿದು ಕಥೆ ಹೆಣೆದು ಅಲ್ಲಿಯೂ ಅನೂಹ್ಯ ತಿರುವಿಟ್ಟಿದ್ದಾರೆ ಲೇಖಕಿ, ಅನುಬಂಧಗಳ ಪರಸ್ಪರ ಮಿಡಿಯುವಿಕೆಯ ಭಾವಗಳ ತಾಕಲಾಟ ನಿರೂಪಣೆ ಚಂದ ಚಂದ,
“”ಹೀಗೊಂದು ಅಂತ್ಯ “” ತನ್ನ ಬದುಕಿನಲ್ಲಿ ನೆಡೆಯೋ ಅಪಘಾತ ಲೇಖಕನ ಮುಂದಿಟ್ಟು ಅವನು ಕೊಡೋ ಅಂತ್ಯವನ್ನು ತಾನು ಅಪಾದಿಸಿಕೊಳ್ಳುವ ಅದನ್ನರಿಯದ ಲೇಖಕ ಅಂತ್ಯವನ್ನು ಸೂಚಿಸಿ ತೊಳಲಾಡುವ ಉದ್ವೇಗ, ಪರಿತಾಪ ಚೆನ್ನಾಗಿ ವ್ಯಕ್ತವಾಗಿದೆ, ಲೇಖಕರಿಗೆ ಇರಬೇಕಾದ ಸಾಮಾಜಿಕ ಪ್ರಜ್ಞೆ ಸೂಚ್ಯವಾಗೀ ಮೂಡಿ ಬಂದಿದೆ,
“ವಿಷಸರ್ಪ” ಕೆಲವು ಬಾರಿ ನಾವು ಮನುಷ್ಯರನ್ನು ಮೊದಲು ನೋಡಿದಾಗಲೇ ಏನೋ ಒಂದು ಭಾವ ಉದ್ಭವ ಆಗ್ಬಿಡತ್ತೆ, ಅದರಲ್ಲಿ ಅವರ ಹೊರ ರೂಪ ನಮ್ಮಲ್ಲಿ ಸಲ್ಲದ ಋಣಾತ್ಮಕ ಅಂಶಗಳೇ ಎದ್ದು ಕಾಣಿಸಿದಂತಾಗೀ ವಿನಾಕಾರಣ ದ್ವೇಷ ಅಸಹನೆ ಬೆಳೆಯುತ್ತ, ಕೊನೆಗೊಂದು ಸಲ ನಮ್ಮ ತಪ್ಪು ಅರಿವಾಗೋದ್ರೊಳಗೆ ಏನಾದರೂ ಘಟನೆ ಸಂಭವಿಸಿರತ್ತೆ, ಅದಕ್ಕೇ ಹಿರಿಯರು ಹೇಳೋದೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾ, ಹಾವೂ ಮುಂಗುಸಿ ಕಥೆ ನೆನಪಾಯಿತು,
“” ಅವ್ಯಕ್ತ ” ನಮ್ಮೊಳಗಿನ ಮಾನಸಿಕ ತಾಕಲಾಟಗಳು ಸಂಸಾರದ ಇತರ ಸದಸ್ಯರುಗಳ ಮೇಲಾಗುವ ಸಾಮಾಜಿಕ ಸಾಂಸಾರಿಕ ಮಾನಸಿಕ ಪರಿಣಾಮಗಳನ್ನು ಹೇಳುವ ಕಥೆ, ಇಂತಹ ವಿಷಮ ಸನ್ನಿವೇಶದಲ್ಲಿ ಆತುರ ಪಡದೇ ಸಾವಧಾನವಾಗಿ ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳಬೇಕಾದ ಅವಶ್ಯಕತೆ ಎತ್ತಿ ಹಿಡಿಯತ್ತೆ,
“”ತಪ್ಪಿದ ತಾಳ ” ಅತಿಯಾದಲ್ಲಿ ಅಮೃತವೂ ವಿಷವೇ, ಕಾಮವೂ ಅದಕ್ಕೇ ಹೊರತಲ್ಲ, ಮನೋ ನಿಗ್ರಹ, ಇಂದ್ರಿಯ ನಿಗ್ರಹ ಸ್ವಸ್ಥ ಬದುಕಿಗೇ, ಸಂಸಾರ ಸಮರಸಕ್ಕೆ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯ, ಯಾವುದು ಎಲ್ಲೇ ದಾಟಿದರೂ, ಯಾರೇ ಮಿತಿ ಮೀರಿದರೂ, ಪರಿಣಾಮ ಇಡೀ ವ್ಯವಸ್ಥೆಯ ಮೇಲಾಗುವುದು,
ಎಲ್ಲಾ ಹದಿನೈದು ಕಥೆಗಳು ವಿಭಿನ್ನ ಕೋನಗಳಲ್ಲಿ ಭಿನ್ನ ವಸ್ತುಗಳಲ್ಲಿ ಬರೆದ ಲೇಖಕಿ ಮೊದಲ ಹೆಜ್ಜೆಯಲ್ಲೇ ತಾನೇನೂ ಎಂಬುದನ್ನು ಸಾಬೀತು ಪಡಿಸಿದ್ದಾರೆ, ಹೊಸ ಲೇಖಕಿ ಎಂದೋ ತಿಳಿಯದೆಯೋ, ಇಲ್ಲದ ಪೂರ್ವಗ್ರಹಕ್ಕೆ ಒಳಗಾಗಿ ಓದದಿದ್ದರೆ ನಷ್ಟ ಓದುಗರದೆ, ಸಾಹಿತ್ಯಾಭಿಮಾನಿಗಳು ಒಮ್ಮೆ ಓದಿ, ಹೊಸ ಲೇಖಕರನ್ನು ಪ್ರೋತ್ಸಾಹಿಸಿ ಹಾರೈಸಿ,

ಸ್ನೇಹ ಬುಕ್ ಹೌಸ್, ಫೀನಿಕ್ಸ್ ಬುಕ್ ಹೌಸ್ ಅಲ್ಲಿ ಮತ್ತು ಲೇಖಕರ ಬಳಿಯೂ “ಬಣ್ಣದ ಜೋಳಿಗೆ ” ಲಭ್ಯವಿದೆ,

*********

ಪದ್ಮಜಾ ಜೋಯ್ಸ್ ತೀರ್ಥಹಳ್ಳಿ

,

One thought on “ಪುಸ್ತಕ ಸಂಗಾತಿ

  1. ಗಾಯಿತ್ರಿ ರಾಜ್ ಅವರ ಬಣ್ಣದಜೋಳಿಗೆ ಕಥಾಸಂಕಲನದ ಒಳಹೂರಣವನ್ನು ತೆರೆದಿಟ್ಟು ,ಓದಲೆಬೇಕೆನಿಸುವ ತುಡಿತವನ್ನುಂಟು ಮಾಡಿದೆ

Leave a Reply

Back To Top