ಸ್ವಚ್ಛ ಭಾರತ
ನಂದಿನಿ ಹೆದ್ದುರ್ಗ
ಇದು ಸುಮಾರು ಮುವ್ವತ್ತು-ಮುವ್ವತ್ತೈದು ವರ್ಷಗಳ ಹಿಂದಿನ ಮಾತು.ಆಗೆಲ್ಲಾ ಹಳ್ಳಿಗೊಂದು ಪ್ರಾಥಮಿಕ ಶಾಲೆ ಇರುತ್ತಿದ್ದೇ ಹೆಚ್ಚು .
ಇನ್ನೂ ಶೌಚಾಲಯ, ಬಿಸಿಯೂಟ ಕನಸಲ್ಲೂ ಯೋಚಿಸುವ ಹಾಗಿಲ್ಲ.ನಾವು ಮೂರೂ ಮಕ್ಕಳು ನಾಲ್ಕನೆ ತರಗತಿ ಮುಗಿದಾಗ ಹತ್ತು ಕಿಮಿ ಆಚೆ ಇರುವ ಸಣ್ಣ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಹೊಗುತ್ತಿದ್ದೇವೆ.
ನಾವು ಮಾತ್ರವಲ್ಲ..
ಪ್ರತಿ ಜಿಲ್ಲೆಯ ಸಣ್ಣಸಣ್ಣ ಹಳ್ಳಿಗಳ
ಮಕ್ಕಳದ್ದೂ ಇದೇ ಪಾಡು.
ಆಗೆಲ್ಲಾ ದಾರಿಯಲ್ಲಿ ಅವಸರವಾದರೆ ಗಂಡು ಹುಡುಗರನ್ನ ಕಾವಲಿಗೆ ನಿಲ್ಲಿಸಿ ನಾವು ಪಕ್ಕದ ಕಾಫಿ ತೋಟದಲ್ಲಿ ನೀರಾವರಿ ಮುಗಿಸಿ ಬರ್ತಿದ್ದೆವು.
ವ್ಯವಸ್ಥೆ ಇರದಿದ್ದರೂ ಸಂಕೀರ್ಣತೆ ಇರಲಿಲ್ಲ.
ಯಾವ ಆನೆ ಚಿರತೆಗಳೂ ಆಗ ದಾಳಿಮಾಡುತ್ತಿರಲಿಲ್ಲ.
ಕಾಮದ ಹಸ್ತಗಳು ಪುಟ್ಟ ಮಕ್ಕಳನ್ನು ಮುಟ್ಟುತ್ತಿರಲಿಲ್ಲ.
ಯಾವ ರೋಗಗಳೂ ಅಷ್ಟು ಹರಡುತ್ತಿರಲಿಲ್ಲ.
ಅಥವಾ ಈಗಿನಷ್ಟು ವಿಪರೀತ ಆಗಿರಲಿಲ್ಲ.
ಹಾಗಾಗಿಯೇ ಕಾಡಹಾದಿಯಲ್ಲಿ ಒಬ್ಬಿಬ್ಬರು ಮಕ್ಕಳೂ ಧೈರ್ಯವಾಗಿ ಶಾಲೆಗೆ ಹೋಗಿಬರುತ್ತಿದ್ದರು.
ಬಿಡಿ.
ಅದಲ್ಲ ವಿಷಯ.
ಇಡೀ ದೇಶಾದ್ಯಂತ ಸ್ವಚ್ಚತೆಯೇ ಪರಮೋಚ್ಚ ಗುರಿ ಎನ್ನುವ ಗುರಿಯೂ ದೊರೆಯೂ ಬಂದಮೇಲೆ ಪ್ರತಿ ಪುಟ್ಟ ಹಳ್ಳಿಯ ಶಾಲೆಗಳಿಗೂ ಒಂದೋ ಎರಡೋ ಶೌಚಾಲಯ, ನೀರಿನ ವ್ಯವಸ್ಥೆ, ಬಿಸಿಯೂಟ ವ್ಯವಸ್ಥೆ ಎಲ್ಲವೂ ಆಗಿ ಇನ್ನೇನು ಹಳ್ಳಿಯ ಮಕ್ಕಳು ಕೆರೆ ಬದಿಗೆ,ಪೊದೆಯ ಹಿಂದುಗಡೆ, ಮರೆ ಅರಸಿ ಶೌಚಕ್ಕೆ ಕೂರುವ ಕರ್ಮ ಕೊನೆಯಾಗಿ ಹೆಣ್ಣುಮಕ್ಕಳ ಆರೋಗ್ಯವೂ ಮರ್ಯಾದೆಯೂ ಸುಧಾರಿಸಿತೆಂಬ ಭರವಸೆಯಲಿದ್ದಾಗಲೇ ಪಕ್ಕದ ತಾಲೂಕಿನ ಪುಟ್ಟ ಹಳ್ಳಿಯ ಶಾಲಾ ಕಾರ್ಯಕ್ರಮವೊಂದಕ್ಕೆ ಆಹ್ವಾನ ಬಂತು. ಹೋದೆ.
ಸಣ್ಣ ಕುರುಚಲು ಕಾಡಿನಂತ ಒಂದು ಸರಕಾರಿ ಜಮೀನಿನ ಮಧ್ಯಭಾಗವನ್ನು ಸಪಾಟು ಗೊಳಿಸಿ ಶಾಲಾ ಕಟ್ಟಡ ನಿರ್ಮಾಣವಾಗಿತ್ತು.ಶಾಲೆ ಪಕ್ಕದಲ್ಲೇ ಶೌಚಾಲಯ, ಗಂಡು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ವ್ಯವಸ್ಥೆ. ನೀರಿನ ತೊಟ್ಟಿ, ಬಿಸಿಯೂಟದ ಕೋಣೆ ಎಲ್ಲವೂ ವ್ಯವಸ್ಥಿತವಾಗಿತ್ತು.
ಹಳೆಯ ಶಾಲೆಗಳನ್ನು ನೆನಪಿಸಿಕೊಂಡು ಹೊಸ ವ್ಯವಸ್ಥೆಗಳ ಅಚ್ಚುಕಟ್ಟುತನ ಪ್ರಸ್ಥಾಪಿಸುವಾಗಲೇ ಪುಟ್ಟ ಹುಡುಗಿಯೊಂದು ತನ್ನ ಕಿರುಬೆರಳ ಮೇಲಕ್ಕೆತ್ತಿ ನಿಂತುಕೊಂಡಳು.ಮೇಷ್ಟ್ರು ಗದರುತ್ತಲೇ ದೊಡ್ಡ ಹುಡುಗಿ ಜೊತೆಮಾಡಿ ಕಳಿಸಿದರು.
ಅವರಿಬ್ಬರೂ ಶಾಲೆಯ ಹಿಂಬದಿಯ ಸಣ್ಣ ಪೊದೆಯ ಬಳಿ ಹೋದರು..ಅಚ್ಚರಿಯಾಯ್ತು.
ಕಾರ್ಯಕ್ರಮ ಮುಗಿಸಿ ಊಟಮಾಡುವ ಮೊದಲು ಕೈ ತೊಳೆಯಲು ಟ್ಯಾಂಕಿನ ನಲ್ಲಿ ತಿರುಗಿಸ ಹೋದವಳಿಗೆ ಅದು ಬಹಳ ಪುರಾತನ ಕಾಲದಲ್ಲೇ ಚಲನೆ ನಿಲ್ಲಿಸಿ ಸ್ತಬ್ಧವಾಗಿರುವುದರ ಕುರುಹು ಅಲ್ಲೆಲ್ಲ ಗೋಚರಿಸಿದ್ದು ನೋಡಿ ಸುತ್ತ ನೋಡಿದೆ.
ಮಕ್ಕಳು ಸಣ್ಣಸಣ್ಣ ಗುಂಪಿನಲ್ಲಿ ಶಾಲೆಯ ಹಿಂಬದಿಯ ಕುರುಚಲು ಕಾಡಿಗೆ ಹೋಗಿಬರ್ತಿರೋದು ನೋಡಿದಾಗ ಏನೋ ಸರಿಯಿಲ್ಲವೆನಿಸಿತು.
ಆಗಲೆ ಅಲ್ಲಿ ಬಂದ ಟೀಚರಮ್ಮ ‘ಅಲ್ಲಿನೀರು ಬರ್ತಿಲ್ಲ .ಬನ್ನಿ. ಇಲ್ಲೇ ಬಾಟಲಿ ನೀರಿನಲ್ಲಿ ಕೈ ತೊಳೆಯಿರಿ ಎಂದಾಗ ಅಚ್ಚರಿ ಯಿಂದ
ಹಾಗಾದರೆ ಟಾಯಲೆಟ್ ಗೆ ನೀರು.?
ಎಂದೆ.
ಇಲ್ಲಿ ಯಾವುದಕ್ಕೂ ನೀರಿಲ್ಲ ಮೇಡಮ್.
ಕೇವಲ ಟ್ಯಾಂಕಿದೆ ಅಷ್ಟೆ.ಮೊದಮೊದಲು ಸ್ವಲ್ಪ ಬಿಡ್ತಿದ್ರು .
ಈಗ ಅದೂ ಇಲ್ಲ.
ಹಾಗಾಗಿ ಮಕ್ಕಳು ಹಿಂಬದಿಯ ಪೊದೆಗೇ
ಹೋಗ್ತಾರೆ.ಇದೂ ಒಂಥರ ಸರಿಯೇಆಯ್ತು.
ಸ್ವಲ್ಪ ನೀರು ಬಿಡ್ತಿದ್ದಾಗ
ಟಾಯ್ಲೆಟ್ ಬಳಸಿ ಸರಿಯಾಗಿ ಸ್ವಚ್ಛ ವಾಗದೇ ಶಾಲೆಯ ಪರಿಸರವೇ ಹಾಳಾಗಿತ್ತು.
ಹಳ್ಳಿ ಮಕ್ಕಳು.
ಎಷ್ಟೇ ಹೇಳಿಕೊಟ್ಟರೂ ಶೌಚಾಲಯ ಬಳಕೆ ಅವರಿಗೆ ಕಷ್ಟವೂ ಆಗಿತ್ತು..
ಇನ್ನೇನು ಈ ಅಭ್ಯಾಸ ರೂಢಿಸಿಕೊಳ್ತಾರೆ ಎನ್ನುವಾಗ ನೀರು ಬಂದ್ ಆಯ್ತು.
ಹೆಣ್ಣಮಕ್ಕಳನ್ನ ದೂರಕ್ಕೆ ಕಳಿಸುವಾಗ ತುಸು ಭಯವೂ ಇರ್ತದೆ.
ಆದರೆ ಏನ್ಮಾಡೋದು ಹೇಳಿ.
ಯಾರನ್ನೂ ದೂರಿ ಫಲವಿಲ್ಲ.
ಇಲ್ಲಿನ ಸ್ಥಳೀಯ ಜನ ಪ್ರತಿನಿಧಿ ಬೇರೆ ಪಕ್ಷ .
ಸರ್ಕಾರಕ್ಕೆ ಸಮಸ್ಯೆ ತಲುಪಿಸುವುದರಲ್ಲಿ ಅಂತಹ ಆಸಕ್ತಿಯೂ ಇಲ್ಲ. ತಲುಪಿಸಿದರೂ ಪಕ್ಷ ಬೇರೆ ಇರುವುದರಿಂದ ಈಡೇರುವ ಭರವಸೆಯೂ ಇಲ್ಲ.
ಒಮ್ಮೆ ಇಲ್ಲೇ ಬೋರವೆಲ್ ತೆಗೆಸುವುದಕ್ಕೆ ಬಂದ ಫಂಡ್ ಯಾವ ಯಾವುದೋ ಕಾರಣಕ್ಕೆ ಸದುಪಯೋಗ ಆಗಲೇ ಇಲ್ಲ.
ಶಾಲೆ, ಮೀಟಿಂಗು,ಓಡಾಟದಲ್ಲೇ ನಾವು ಕಳೆದುಹೋಗುವುದರಿಂದ ನೀರಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸುವುದು ಕಷ್ಟವಾಗ್ತಿದೆ.
ಈಗ ಊಟ ತಯಾರಿಸಲು ಸಹ ಕೊಡದಲ್ಲಿ ತರಬೇಕು ಅಂತ ಅಸಹಾಯಕತೆ ಹೇಳಿಕೊಂಡರು.
ಅಷ್ಟರಲ್ಲಿ ಶೌಚ ಮುಗಿಸಿ ಮಕ್ಕಳು ಬಂದರು.
ಮನೆಯಿಂದ ತಂದಿದ್ದ ಬಾಟಲಿ ನೀರು ತಟ್ಟೆ ತೊಳೆಯಲೂ ಬೇಕಿರೋದ್ರಿಂದ ಕೈ ತೊಳೆಯದೇ ಊಟಕ್ಕೆ ಕುಳಿತರು.
ಶೌಚಾಲಯದ ಮೇಲೆ ಸ್ವಚ್ಛ ಭಾರತ ಅನ್ನುವ ಪದಗಳಿದ್ದವು.
ಯಾಕೊ ಸ್ವಚ್ಛವೊಂದು ಕಡೆ,ಭಾರತವೊಂದು ಕಡೆ ಇರಬೇಕಾ ಅನಿಸಿತು.
************
ಯಾವುದೆ ಯೋಜನೆ ಕಾರ್ಯಗತವಾಗಿ ಬಳಕೆಗೆ ಬಂದರೆ ಮಾತ್ರ ಅರ್ಥಪೂರ್ಣವಾಗುತ್ತೆ ಇಲ್ಲವಾದರೆ ಕೇವಲ ವೇದಿಕೆಯ ಭಾಷಣಕ್ಕೆ ಸೀಮಿತ ಅಷ್ಟೆ.ನಿಮ್ಮ ಅನುಭವ ಕೂಡ ಇದಕ್ಕೆ ಹೊರತಾಗಿಲ್ಲ ಎಂದೆ ನನ್ನ ಭಾವನೆ.ಆ ಮಕ್ಕಳಿಗೆ ಶೌಚಾಲಯ ಬಳಸುವ ಭಾಗ್ಯ ಆದಷ್ಟು ಬೇಗ ಸಿಗಲಿ.
ನಿಮ್ಮ ಪೀಠಿಕೆಯನ್ನು ಓದಿ ನಾನು ನಲವತ್ತು ವರ್ಷ ಹಿಂದಕ್ಕೆ ಹೋದೆ.ಕೊಡಗಿನ ಬೆಳೆದ ನಾನು ಹಳೆಯ ನೆನಪುಗಳನ್ನು ಮೆಲುಕು ಹಾಕುವಂತಾಯ್ತು.