ಎದೆಯ ಕದ ತೆರೆದಾಗ.
“ಎದೆಯ ಕದವ ತೆರೆಯುತಿರೆ| ಒಳಗೆ ಬೆಳಕು ಹರಿಯಿತು|
ಹೂಗಳೆಸಳು ಬಿರಿಯುತಿರೆ |ತುಂಬಿ ಹಾಡು ಮೊರೆಯಿತು”——ಕವಿ ಕಯ್ಯಾರರ ‘ಯುಗಾದಿ’ ಕವನದ ಸಾಲುಗಳಿವು.
ಯುಗಾದಿ ಸಮೃದ್ಧಿಯ ಸಂಕೇತ.ಪ್ರಕೃತಿ-ಮಾನವ ಅನುಸಂಧಾನದ ಪ್ರತೀಕ.ಕವಿಗಳು ಪರಿಸರ ಪ್ರೇಮಿಗಳು.ಮಣ್ಣಿನಲ್ಲಿ ಸ್ವರ್ಣವನ್ನು, ಶಿಲೆಯಲ್ಲಿ ಶಿಲ್ಪವನ್ನು ಕಾಣುವವರು.ಎದೆಯ ಕದ ತೆರೆದು ಆತ್ಮದ ಮಿಂಚನ್ನು ಹೊಳೆಯಿಸುವವರು.ಅಂತರಂಗದ ಬೆಳಕಲ್ಲಿ ಬಹಿರಂಗವನ್ನು ಬೆಳಗಿಸುವವರು.
ಮೊಗ್ಗು ಹೂವಾಗಿ ದಳ ಬಿರಿದು ನಿಂತಾಗ ಒಂದು ರೀತಿಯ ನಿಸ್ವನ.ಹೂವಿನ ಮಕರಂದ ಹೀರುವ ದುಂಬಿಗಳು,ಝೇಂಕಾರದ ನಾದಮಯತೆ,ನವನವೋನ್ಮೇಷ, ಮಾಧುರ್ಯದ ಮೊರೆತಕ್ಕೆ ಮನವರಳುವುದು ಸಹಜ.ಹೀಗೆ ರವಿ ಕಾಣದ್ದನ್ನು ಕವಿ ಕಂಡೇ ಕಾಣುತ್ತಾನೆ ಎಂಬುದಂತೂ ಸತ್ಯ.
“ಎದೆಎದೆಗೂ ವ್ಯತ್ಯಯ ಹಾಳಾಗಲಿ ಎದೆಎದೆ ಗೂಡಲಿ ಹಾಲಾಗಲಿ” ಎಂಬ ವಿ.ಗ ನಾಯಕರ ಸಾಲುಗಳು ಇಲ್ಲಿ ನೆನಪಾಗುತ್ತವೆ.ದ್ವೇಷಿಸುವ ಎದೆಗಳು ಬೇಡ, ಪ್ರೀತಿಸುವ ಎದೆಗಳು ಬೇಕು.ಎದೆಎದೆಗಳ ಮಿಳಿತ ಜೀವಜೀವದ ಸೆಳೆತ.ಎದೆಯ ಆಕಾರಕ್ಕೆ ಆಕರ್ಷಣೆಯಿದೆ.ಹೃದಯದ ತುಡಿತದಲ್ಲಿ ಪ್ರೀತಿಯ ಮಿಡಿತವಿದೆ.
ಕವಯಿತ್ರಿ ಆಶಾ ದಿಲೀಪ್ ಸುಳ್ಯಮೆ ಅವರ ಚೊಚ್ಚಲ ಕವನ ಸಂಕಲನದ ಶೀರ್ಷಿಕೆ “ಎದೆಯ ಕದ”.ವಿಷಯ ವೈವಿಧ್ಯತೆಯ ನಲುವತ್ತೆರಡು ಕವನಗಳ ಈ ಸಂಕಲನ 2016 ರಲ್ಲಿ ಬೆಳಕಿಗೆ ಬಂದಿದೆ.ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ್ ಇದರ ಪ್ರಕಾಶಕರು.ಬಿಡುಗಡೆಯಾದ ಸಂದರ್ಭದಲ್ಲಿ ಓದಿ ಖುಷಿ ಪಟ್ಟವರಲ್ಲಿ ನಾನೂ ಒಬ್ಬ.ಈಗ ಮತ್ತೊಮ್ಮೆ ಕಣ್ಣು ಹಾಯಿಸುವ ಅವಕಾಶ ಲಭಿಸಿದೆ.ಕವನಗಳ ಬಗ್ಗೆ ಕೆಲವು ಮಾತುಗಳನ್ನು ಹೇಳ ಬೇಕು ಎನಿಸಿದೆ.ಇಲ್ಲಿ ಕಲೆಹಾಕಿದ ಕವನಗಳೆಲ್ಲವು ಭಾವ ಕೇಂದ್ರಿತ ರಚನೆಗಳು.ಆಶಾ ಅವರು ಭಾವನೆಯ ಬಲೆ ಹೆಣೆದು ಕಾವ್ಯ ಕಟ್ಟಿದ್ದಾರೆ.ಅನುಭವಕ್ಕೆ ದಕ್ಕಿದ್ದನ್ನು ಸಶಕ್ತ ಪದಗಳಲ್ಲಿ ಅಭಿವ್ಯಕ್ತಿಸಿದ್ದಾರೆ.ಎದೆ ಮುಟ್ಟುವ ರಚನೆಗಳಿಗೆ ಭಾವವೇ ಮೂಲದ್ರವ್ಯ ವಾದರೂ ಇಲ್ಲಿ ಎದೆಯ ಕದ ತೆರೆದಾಗ ಅನುಭವದ ಅಂತರ್ಧ್ವನಿ ಅನುರಣಿಸುವುದನ್ನು ಕಾಣಬಹುದು.
ಮುನ್ನುಡಿಯಲ್ಲಿ ಸಾಹಿತಿ, ಮಾಧ್ಯಮ ತಜ್ಞ ಡಾ ವಸಂತಕುಮಾರ್ ಪೆರ್ಲ ಅವರು ಹೇಳುವಂತೆ ‘ಈ ಸಂಕಲನದಲ್ಲಿ ಮನೆ, ಮಕ್ಕಳು, ಸಂಸಾರ ಜೊತೆಗೆ ಕೆಲವು ಪ್ರಕೃತಿ ಚಿತ್ರ ಗಳು ಇವೆ.ಎಲ್ಲವುಗಳ ಕಡೆಗೆ ಒಂದು ಸಹೃದಯ ವೀಕ್ಷಣೆ ಕವಯಿತ್ರಿಯಲ್ಲಿ ಕಂಡುಬರುತ್ತದೆ.ಚಿತ್ರಕ ಸನ್ನಿವೇಶವೊಂದನ್ನು ಕೊಡುತ್ತಲೇ ಅದರಾಚೆಗಿನ ಅರ್ಥ ಭಾವಗಳನ್ನು ಭಾಷಿಕ ಸಂವಿಧಾನದ ಮೂಲಕ ಕಟ್ಟಿಕೊಡುವ ಪರಿ ಸಂತೋಷ ಕೊಡುತ್ತದೆ.ಈ ಮಾತಗಳು ಎದೆಯ ಕದ ತೆರೆದು ನೋಡುವ ಕುತೂಹಲ ವನ್ನು ಹೆಚ್ಚಿಸುತ್ತದೆ’.
ಕಾವ್ಯ ಸಹಜವಾಗಿ ಹುಟ್ಟು ವ ಕ್ರಿಯೆ.ಅತಿಯಾದ ನೋವು ಮತ್ತು ಸಂತೋಷವಾದಾಗ ಜೀವ ಪಡೆಯುತ್ತದೆ.ಇದು ಆಶಾ ಅವರು ಕಂಡುಕೊಂಡ ಸತ್ಯ.ಮೌನರೋದನದಲ್ಲಿ ರೋಮಾಂಚನದ ಉತ್ತುಂಗದಲ್ಲಿ ಸುಖದುಃಖದ ಕಟ್ಟೆಯೊಡೆದು ಕಾವ್ಯಕನ್ನಿಕೆ ಹುಟ್ಟುತ್ತಾಳೆ ಎಂಬುದು ಅನುಭವ ಜನ್ಯ.ಆದರೆ ‘ಬರೆಯಲು ಹೊರಟರೆ ಸುಂದರ ಕವಿತೆ| ಪದಗಳ ಮರ್ಮವ ಅರಿಯದೆ ಹೋದೆ’ ಎಂಬ ಮರುಕ ‘ಒಂಟಿ ನಾನು’ ಕವನದಲ್ಲಿದೆ.ಕ ವಯಿತ್ರಿ ‘ಭಾವ ಜೀವ ರಸಿಕನೆದೆಗೆ ದಾಳಿಯಿಡುವ ಕವಿಯು ನಾನಾಗ ಬೇಕು| ನನ್ನ ಕವಿತೆಯ ಪ್ರಾಸ ನೀನಾಗ ಬೇಕು|ನಾ ಭಾವವಾದರೆ ಜೀವ ನೀನಾಗ ಬೇಕು’ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.ನಲ್ಲೆಯ ನಲ್ನುಡಿ ಯ ಕೇಳದೆ ವಿಚಲಿತನಾದ ನಲ್ಲ ಆಸೆ ಮುತ್ತುಗಳ ಪೋಣಿಸುತ ಎದೆ ಬಾಗಿಲಿಗೆ ತೋರಣ ಕಟ್ಟಿ ಕಾಯುತ್ತಾನೆ.ಏಕಾಂಗಿಯಾಗಿರುವ ಆತನ ಭಾವನೆಗಳು ಬಂಧನಕ್ಕೊಳಗಾಗಿದೆ. ‘ನನ್ನೆದೆಯ ಕದವನ್ನು’ ಸರಳತೆ ಮತ್ತು ಆರ್ದ್ರತೆಗಳಿಂದ ಗಮನ ಸೆಳೆಯುತ್ತದೆ.
ಸಂಕಲನದ ಮೊದಲ ಕವಿತೆ ‘ಯಾವ ಮಾಯೆಯಮ್ಮಾ’ ಜೀವದನಿ ತುಂಬಿ ಕೊಂಡ ಭಾವ ಗೀತೆ.ಹೆಣ್ಣು ಮಾಯೆ ಆಕೆಯ ಮಹಿಮೆ ಅಪಾರ.ಸಕಲ ಜೀವದ ಭಾಗ್ಯ ದಾಯಿನಿ ಆಕೆ.’ಅಷ್ಟವೈರಿಗಳನ್ನು ದಮನಮಾಡಿಸಿ| ಸ್ವರ್ಗ ದಾರಿಯಲ್ಲಿ ನಮ್ಮನ್ನು ನಡೆಸು’ ಎಂಬ ಪ್ರಾರ್ಥನೆ (ಗೀತೆ)ಯಾಗಿಯೂ ಈ ರಚನೆ ಸಲ್ಲುತ್ತದೆ.ತಾಯಿಗೆ ಮಕ್ಕಳು ಅಂದರೆ ಮಮತೆ.ಹೊತ್ತು ಸಲಹಿದಾಗ ಕಂದನ ಮುಖವರಳುವುದು ಸಹಜ.ಆದು ಹೆತ್ತ ನೋವನ್ನು ಮರೆಸುತ್ತದೆ.’ಅಮ್ಮ ಎನ್ನುವ ಕಂದನ ಕೂಗಲಿ|ಬ್ರಹ್ಮಾಂಡದ ಭವ್ಯತೆ ಅಡಗಿತ್ತು’ (ಅಮ್ಮ) ಎಂಬೀ ಸಾಲುಗಳಲ್ಲಿ ದರ್ಶನದ ಕಲ್ಪನೆಯಿದೆ.ಮಹಿಳೆ ಎಂದರೆ ಮಹಾ ಇಳೆ.ಸಕಲ ಚರಾಚರಗಳಿಗೂ ಜೀವ ಚೈತನ್ಯ ನೀಡುವವಳು.ಮಹಿಳೆ ತಾಯಿಯೂ ಹೌದು.ಭೂದೇವಿಯೂ ಹೌದು.’ಭರತ ಭೂಮಿ ವಿಶ್ವ ವಂದ್ಯೆ ಜನ್ಮದಾತೆಯು’ಎಂದು ಆರಂಭವಾಗುವ ‘ಭರತಭೂಮಿ ವಿಶ್ವ ವಂದ್ಯೆ’ ಎನ್ನುವ ಕವನದಲ್ಲಿ ದೇಶಪ್ರೇಮವುಕ್ಕಿಸುವ ಭಾವನೆಗಳಿವೆ.’ವೇಷ ಬೇರೆ ಭಾಷೆ ಬೇರೆ ಒಲವು ಮೆರೆಯಲಿ |ಪ್ರೀತಿ ಉಳಿದು ದ್ವೇಷ ಅಳಿದು ನಗೆಯು ಚಿಮ್ಮಲಿ’ ಎಂಬ ಆಶಯವಿದೆ.ಬದುಕಿನ ಉನ್ಮಾದ’ ವಿಷಾದ,ಪ್ರೀತಿ ,ತೀವ್ರತೆಯನ್ನು ಆಪ್ತವಾಗಿ ಕಟ್ಟಿಕೊಡುವ ‘ತೂಗದ ತೊಟ್ಟಿಲು’ ಅಂತರಂಗದ ನಿಸ್ವನ.’ಒಲುಮೆ ತುಂಬಿದ ಮನೆಯಲ್ಲಿ| ತೂಗಲಿಲ್ಲ ತೊಟ್ಟಿಲು| ಕೊನೆಗೂ ಕಂದನ ಕನಸು ಕಾಡಿದೆ|ಬರಿದಾಗಿದೆ ಮಡಿಲು’.ಬದಲಾವಣೆಯ ಕಾಲಘಟ್ಟದಲ್ಲಿ ಪ್ರೀತಿ ಮಮಕಾರ ಯಾಂತ್ರಿಕವಾದಾಗ,ಸಹಜತೆಯ ಒರತೆ ಬತ್ತಿ ಹೋಗುವುದನ್ನು ಇಲ್ಲಿ ಕಾಣಬಹುದು.ದಾರ್ಶನಿಕ ಹೊಳಹು ಗಳನ್ನು ನೀಡುವ ‘ಆತ್ಮದೇಗುಲ’ದಲ್ಲಿ ‘ಬಾಳ ಹಾದಿ ಚಿಮ್ಮಿ ನಗಲಿ ಹೂವ ಹಾಸಿಗೆ| ಒಲವ ಧಾರೆ ಹರಿದು ಬರಲಿ ಬಾಳ ಹಣತೆಗೆ’ ಎಂಬ ಆಶಯವಿದೆ.’ಸಿಹಿಯುಂಟು ಕಹಿಯುಂಟು ಜೀವನ ಯಾತ್ರೆಲಿ| ಮರೆಯಲು ಕಲಿತೋನೆ ಜಾಣ ಈ ಜಗದಲಿ’ ಈ ವಾಸ್ತವ ಸತ್ಯ ‘ಹೋಗೋಣ ಬಾರೆ’ ಕವನದಲ್ಲಿದೆ.
‘ವಂದನೆ-ಅಭಿನಂದನೆ’ಯಲ್ಲಿ ಸಾಮರಸ್ಯದ ಸಂದೇಶವಿದೆ.’ಹಿಂದೂ ಸಿಖ್ಖ ಕ್ರೈಸ್ತ ಮುಸಲ್ಮಾನರು| ಒಟ್ಟಿಗೆ ಬದುಕುವ ರೀತಿಯೆ ಅಭಿಮಾನವು’ ನಿಜವಾಗಿಯು ಇದು ಹೆಮ್ಮೆಯ ವಿಷಯ. ಸ್ವಾತಂತ್ರ್ಯ ಸಿಕ್ಕಿ ವರ್ಷಗಳೇ ಸಂದರೂ ಅಳಿಯಲಿಲ್ಲ ಗುಲಾಮಗಿರಿ.’ಎಲ್ಲಿದೆ ಸಮಾನತೆ ಮೀಸಲಾತಿ| ಸ್ತ್ರೀ ಸ್ವಾತಂತ್ರ್ಯದ ಅನುಭೂತಿ’ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.ಹಳತಿಗೆ ವಿದಾಯ, ಹೊಸತಿಗೆ ಸ್ವಾಗತ ಹೇಳುವ ಸಂದರ್ಭವನ್ನು ನೆನಪಿಸುವ ‘ವಿದಾಯ’ ವರ್ತಮಾನದ ವೈಚಿತ್ರ್ಯ ವನ್ನು ಧ್ವನಿಸುವ ‘ನಲುಗುತ್ತಿದೆ ವರ್ತಮಾನ’
ಕನಸು ಭ್ರಮೆಯಾಗಿ ಕಾಡುವ ಘಟನೆಗಳನ್ನು ಪಲ್ಲವಿಸುವ ‘ಭ್ರಮೆ’ ಅರ್ಥ ಸಂಚಲನ ಮೂಡಿಸುತ್ತದೆ.
ವಿಕೃತ ಮನಸುಗಳ ಅಮಾನುಷ ವರ್ತನೆಗಳಿಗೆ ಮುಖಾಮುಖಿ ಯಾಗುವ ‘ಭಯಾನಕ ರಾತ್ರಿ’ಯಲ್ಲಿ ಸೂಚ್ಯಾರ್ಥವಿದೆ.ಇಂಟರ್ನೆಟ್ ಯುಗದಲ್ಲಿ ಭಾವನೆಗಳ ಒರತೆ ಬರಿದಾಗುವ ಸಂದಿಗ್ಧ ಪರಿಸ್ಥಿತಿ ‘ಒಂಟಿ ಹಕ್ಕಿಯ ಮರ್ಮರ’ದಲ್ಲಿದೆ. ಪರಿಸರವನ್ನು ಉಳಿಸಬೇಕಾದ ಅನಿವಾರ್ಯತೆ ‘ಕೆಡಿಸದಿರು ಪರಿಸರವ’ಕವನ ಸಾರಿ ಹೇಳುತ್ತದೆ.’ಗೆಳತಿ’,’ಕಳೆದು ಹೋದ ಬಾಲ್ಯ’,’ಅರಳುವ ಹೂಗಳು’ ‘ನೆನಪಿದೆಯಾ ಗೆಳತಿ’ ಭಾವನೆಗಳಿಗೆ ಶಬ್ದ ರೂಪ ಕೊಡುವ ಕ್ರಿಯೆಯಲ್ಲಿ ಯಶಸ್ವಿಯಾಗಿದೆ.ಪ್ರೀತಿ ವಾತ್ಸಲ್ಯಕ್ಕಾಗಿ ಕವಯಿತ್ರಿಯ ‘ಹಂಬಲ’ ಸಾರ್ವಕಾಲಿಕ ಮೌಲ್ಯ ಪಡೆದ ಕವನವಾಗಿ ಸಲ್ಲುತ್ತದೆ.ಸರಳವಾಗಿ ಹೇಳುತ್ತಲೇ ಸಂಕೀರ್ಣವಾಗುವ ರಚನೆಗಳೂ ಸಂಕಲನದಲ್ಲಿ ಇಲ್ಲದ್ದಿಲ್ಲ.
ನವೋದಯದ ನಾದಮಯತೆ,ನವ್ಯದ ಧ್ವನಿ ಶಕ್ತಿ ಆಶಾ ದಿಲೀಪ್ ಅವರ ಕವನಗಳಲ್ಲಿ ಕಾಣಬಹುದು.ಹೆಚ್ಚಿನವುಗಳೂ ಗೇಯತೆಯ ರಚನೆಗಳು.ಸಂದರ್ಭೋಚಿತವಾಗಿ ಬರೆದವುಗಳು.ಅವರ ಭಾಷೆ,ಭಾವ, ಲಯ ಆಪ್ತವಾಗುತ್ತದೆ.ಪ್ರತಿಮೆ ಸಂಕೇತಗಳಿಂದ ತಾಜಾ ಅನಿಸುತ್ತದೆ.ಗೌರವಾನ್ವಿತ ಗುರು ಸಾವಿತ್ರಿ ಎಸ್ ರಾವ್ ‘ಎದೆಯ ಕದ’ಕ್ಕೆ ಬೆನ್ನುಡಿ ಬರೆದಿದ್ದಾರೆ.ಆಶಾ ಅವರ ಕ್ರಿಯಾಶಕ್ತಿ, ಧೀಶಕ್ತಿಗೆ ಕನ್ನಡಿ ಹಿಡಿದಿದ್ದಾರೆ.
*******
ರಾಧಾಕೃಷ್ಣ ಕೆ ಉಳಿಯತ್ತಡ್ಕ
ನನ್ನ ಕವನಸಂಕಲನ ” ಎದೆಯ ಕದ ” ದ ಕುರಿತು ಭಾವಪೂರ್ಣ ವಾಗಿ ಪರಿಚಯಿಸಿದ ಗುರು ಸಮಾನರಾದ ಕವಿ ರಾಧಾಕೃಷ್ಣ ಉಳಿಯತಡ್ಕರಿಗೆ ಹಾಗೂ ಈ ಪ್ರಯತ್ನ ಕ್ಕೆ ಕೈ ಜೋಡಿಸಿದ ಕವಯಿತ್ರಿ ಚೇತನ ಕುಂಬ್ಳೆ ಯವರಿಗೂ ಅಂತರಾಳದ ನಮನಗಳು.