ಪ್ರಸ್ತುತ

ಮತ್ತೆ ಕಾಣಬಲ್ಲೆವೇ ಆ ದಿನಗಳನು..?

Red virus, depth of field, background, copy space, text overlay, corona, coronavirus, corona virus, disease, outbreak, health, healthcare, heath risk, public health, pandemic, epidemic, global, 3d, 3d model, concept, stock photo, abstract, china, attention, concept, careful, medical, biohazard, wuhan, coronavirus, 2019-ncov, china, wuhan, 2019-ncov, abstract, attention, biohazard, careful, caution, chinese, contagion, contamination, corona-virus, danger.

ಮಲ್ಲಿಕಾರ್ಜುನ ಕಡಕೋಳ

ದುರಿತಕಾಲ ಎಂಬ ಪದ ನಾವೆಲ್ಲ ಬರಹಗಳಲ್ಲಿ ಸೂಕ್ಷ್ಮತೆಯಿಂದ ಬಳಕೆ ಮಾಡಿದ ಪರಿಚಯವಿತ್ತು. ಪ್ರಸ್ತುತ ನಾವು ಅನುಭವಿಸುತ್ತಿರುವ ಖರೇ, ಖರೇ ದುರಿತಕಾಲದ ಈ ದಿನಗಳಿಗೆ ಕೊನೆಯೆಂಬುದು ಯಾವಾಗ ಎಂಬ ದುಗುಡ ನಮ್ಮನ್ನೀಗ ಘೋರವಾಗಿ ಬಾಧಿಸುತ್ತಿದೆ. ಅಷ್ಟಕ್ಕೂ ಕೊರೊನಾದ ಈ ಕಾಲಘಟ್ಟಕ್ಕೆ ಕೊನೆಯೆಂಬುದು ಇದೆಯೋ, ಇಲ್ಲವೋ ಎಂಬ ಕ್ರೂರ ಆತಂಕ. ಹಗಲು ರಾತ್ರಿಗಳೆನ್ನದೇ ಕಿವಿ, ಕಣ್ಣು, ಬಾಯಿ, ಮೂಗು, ಮನಗಳ ತುಂಬೆಲ್ಲ ಸೋಂಕಿತರು, ಶಂಕಿತರು, ರೆಡ್ ಝೋನ್, ಎಲ್ಲೋ ಝೋನ್, ಪೋಲಿಸರು, ವೈದ್ಯರಿಗೇ ಸೋಂಕು ಪದಗಳ ರಕ್ಕಸ ಕುಣಿತ. ಇವುಗಳ ಜೊತೆಗೆ ಜಾಗತಿಕ ಮಟ್ಟದ ಲಕ್ಷ ಲಕ್ಷ ಸಂಖ್ಯೆಯ ಸಾವು ನೋವಿನ ಅಂಕಿ ಅಂಶಗಳ ರುದ್ರನರ್ತನ. ಹುಟ್ಟೂರಿಗೆ ಹೋಗಿಯೇ ಸಾಯಬೇಕೆಂಬ “ಬದುಕಿಗಾಗಿ” ರಹದಾರಿಗಳಿಲ್ಲದೇ ಸಾವಿರಾರು ಮಂದಿ ನೂರಾರು ಹರದಾರಿ ನಡಕೊಂಡೇ ಹೋದವರು. ಹಾಗೆ ನಡಕೊಂಡು ಹೋಗುವ ನಡುದಾರಿಯಲ್ಲೇ ನೀರು – ಕೂಳಿಲ್ಲದೇ ಪ್ರಾಣಬಿಟ್ಟ ಬಸುರಿ – ಬಾಣಂತಿ, ತಾಯಿಮಕ್ಕಳ ಸಂಕಟದ ಸಾಲು ಸಾಲು ಸರಗಥೆಗಳು. ಹೀಗೆ ಅರಣ್ಯ ರೋದನವಾಗುತ್ತಿರುವ ಒಂದೆರಡಲ್ಲ ನಿತ್ಯವೂ ನೂರಾರು ಸಂಕಟಗಳ ಕರುಳು ಹಿಂಡಿ ಹಿಪ್ಪೆಮಾಡುವ ದೃಶ್ಯಗಳಿಗೆ ಕೊನೆಯೆಂಬುದಿದೆಯೇ ? ಇದ್ದರೆ ಯಾವಾಗ..?

ಕೊರೊನಾ ಸಂದರ್ಭದಲ್ಲಿ ಮನುಷ್ಯ, ಮನುಷ್ಯರ ನಡುವಿನ ದೈಹಿಕ ದೂರ ಕಾಪಾಡಬೇಕೆಂಬುದು ವೈಜ್ಞಾನಿಕ ಸತ್ಯ. ವಿದೇಶಗಳಲ್ಲಿ ಸೋಶಿಯಲ್ ಗ್ಯಾದರಿಂಗ್ ಹಿನ್ನೆಲೆಯಲ್ಲಿ ಸೋಶಿಯಲ್ ಡಿಸ್ಟನ್ಸ್ ಎಂದು ಕರೆದಿರಬಹುದು. ಆದರೆ ಬಹುತ್ವ ಭಾರತದ ಸಂದರ್ಭದಲ್ಲಿ ಅದನ್ನು ಸಾಮಾಜಿಕ ಅಂತರ ಎಂಬ ಹೆಸರಿಂದ ಕರೆಯುವ ಮೂಲಕ ಅದು ಭಯ ಮೂಲದ್ದು ಎಂಬುದು ಮಾತ್ರವಲ್ಲದೇ ಜನಸಂಸ್ಕೃತಿ ವಿರೋಧಿಜನ್ಯ ಭಾವಕ್ಕೆ ಹತ್ತಿರವಾಗಿದೆ. ಅದು ವ್ಯಕ್ತಿಗತ ಅಥವಾ ದೈಹಿಕ ಅಂತರ – ದೂರ ಎಂಬುದು ವಾಸ್ತವವೇ ಆದರೂ ಹಾಗೇಕೆ ಕರೆಯುತ್ತಿಲ್ಲ.? ಮಡಿ – ಮೈಲಿಗೆ ಎಂಬಂತೆ ಸಾಮಾಜಿಕ ಅಂತರ ಎಂದು ಕರೆಯುವ ಮೂಲಕ ಅದು ಹುಟ್ಟುಹಾಕುತ್ತಿರುವ ಭಯ ಮಾತ್ರ ಭಯಂಕರ. ಕೊರೊನಾಗಿಂತ ಕೊರೊನಾ ಕುರಿತು ಹುಟ್ಟಿಕೊಂಡಿರುವ ಈ ತೆರನಾದ ಆತಂಕಕಾರಿ ಜೈವಿಕ ಸಂಸ್ಕೃತಿ (Bio Culture) ಬಣ್ಣಿಸಲಸದಳ.

ಈ ಕೊರೊನಾಮಾರಿ ಮನುಷ್ಯ ಮನುಷ್ಯರ ನಡುವಿನ ಜೀವ ಸಂಬಂಧಗಳನ್ನು ನಿರ್ನಾಮಗೊಳಿಸುತ್ತಿದೆ. ಜೀವ ಕಕುಲಾತಿಯ ಸಹಬಾಳ್ವೆ, ಸಹಿಷ್ಣುತೆ, ಸಮಷ್ಟಿ ಪ್ರಜ್ಞೆಯ ಸಾಮೂಹಿಕ ಬದುಕು ಮತ್ತೆ ಮರಳಿ ಬರುವುದೇ ಎಂಬ ಶಂಕೆ. ಒಡೆದು ಹೋಗುತ್ತಿರುವ ಸಹಮತದ ಜೀವಗನ್ನಡಿ ಹರಳು ಮತ್ತೆ ಬೆಸೆದೀತೇ.? ಎಲ್ಲವೂ ಸರಿಯಾಗುವವರೆಗೆ ಲಾಕ್ ಡೌನ್, ಸೀಲ್ ಡೌನ್ ಪ್ರಕ್ರಿಯೆಗಳು ಮುಂದುವರೆದರೆ ನಾವೆಲ್ಲ ಬದುಕುಳಿಯಬಹುದೇ.? ಹೀಗೆ ಏನೇನೋ ಜೀವದುಸಿರು ಸೂತಕದ ಆಲೋಚನೆಗಳು. ಸಣ್ಣದೊಂದು ಸಮಾಧಾನದ ಸಂಗತಿಯೆಂದರೆ ಟೀವಿಗಳಲ್ಲಿ ಗಂಟೆಗಟ್ಟಲೇ ಕೊರೆಯುತ್ತಿದ್ದ, ಮನುಕುಲದ ಉದ್ದಾರಕ್ಕಾಗಿಯೇ ಹುಟ್ಟಿ ಬಂದವರಂತೆ ತರಹೇವಾರಿ ಫೋಸು ಕೊಡುತ್ತಿದ್ದ ದೇವಮಾನವ ನಾಮಾಂಕಿತ ಜೋತಿಷಿಗಳು ನಾಪತ್ತೆಯಾಗಿದ್ದಾರೆ. ಕೊರೊನಾ ಹೋದಮೇಲೂ ಅವರು ಮತ್ತೆ ಬಾರದಿರಲಿ.

ಆಯುರ್ವೇದ, ಅಲೋಪತಿ, ಸಿದ್ಧ, ಹೋಮಿಯೋಪಥಿ ಯಾವುದರಲ್ಲಿ ಇದಕ್ಕೆ ನೆಟ್ಟಗಾಗುವ ಮದ್ದಿದೆ ? ದಿನಕ್ಕೊಂದಲ್ಲ ಹತ್ತಾರು, ನೂರಾರು ತರಹೇವಾರಿ ಸುದ್ದಿಗಳಿಂದ ಬದುಕು ಅಕ್ಷರಶಃ ಗದ್ಗದಿತವಾಗಿದೆ. ಸಾವಿಗಿಂತಲೂ ಸಾವಿನ ಕುರಿತಾದ ಸಾವಿನಪ್ಪನಂತಹ ಸುದ್ದಿಗಳನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ತಿಂಗಳೊಪ್ಪತ್ತಿನಿಂದ ನಾಗಾಲೋಟದಲ್ಲಿ ನೂರಿನ್ನೂರನೇ ಪ್ರಯೋಗದಲ್ಲಿ ಮುನ್ನುಗ್ಗುತ್ತಿರುವ ಪ್ರಸಿದ್ಧ ಕಂಪನಿ ನಾಟಕಗಳ ಪ್ರಯೋಗಗಳಂತೆ. ಆದರಿದು ಕುಪ್ರಸಿದ್ಧವಾಗುತ್ತಿರುವ ಕೊರೊನ ಎಂಬ ಮಹಾರಾಕ್ಷಸತ್ವದ ಕರಾಳ ಕಥೆ. ಮನುಷ್ಯರ ಬದುಕು ಬರ್ಬರಗೊಳ್ಳುತ್ತಿರುವ ದುಃಖಸಾಗರದ ಕಥೆ. ಜನರ ಜೀವನ ಅಕ್ಷರ ಅಕ್ಷರಶಃ ತತ್ತರಿಸಿ ಹೋಗಿದೆ. ಆದರೆ ಇಂತಹ ಸಂಕಟಗಳನ್ನು ಹಾಡು, ರೂಪಕ, ಸಣ್ಣಾಟ, ಜಾನಪದ, ಪ್ರಹಸನ, ಕವನ ಮುಂತಾದ ಪ್ರಕಾರಗಳಲ್ಲಿ ಜನಕಲಾವಿದರು ತೋರಿಸುವ ಕ್ರಿಯಾಶೀಲತೆ ಮಾತ್ರ ತುಂಬಾ ಚುರುಕಾಗಿದೆ.

ಬಡವರು ಸತ್ತಾರ ಸುಡಲಾಕ ಸೌದಿಲ್ಲ ! ಶಿವನೇ ಬಡವರಿಗೆ ಸಾವು ಕೊಡಬೇಡ !! ಸಾವಿನ ಘನಘೋರ ಸಂದರ್ಭದಲ್ಲೂ ನಮ್ಮ ಜನಪದರ ಕರುಳಿನ ಸಂಕಟ ಕೊರಳ ಸಿರಿಕಂಠದ ಮೂಲಕ ಜೀವದ ಹಾಡಾಗಿ, ಪಾಡಾಗಿ ಹೊರಹೊಮ್ಮುತ್ತದೆ. ಅದು ನಮ್ಮ ಜೀವಪರ ಜನಸಂಸ್ಕೃತಿ. ಅದು ಶಿವಸಂಸ್ಕೃತಿ. ಸಾವಿನ ಬಗ್ಗೆ ಅವರಿಗೆ ಭಯವಿಲ್ಲ. ಆದರೆ ಸತ್ತರೆ ಸುಡಲು ಸೌದೆಇಲ್ಲ. ಅದಕ್ಕೆಂದೇ ಶಿವನೆ ಬಡವರಿಗೆ ಸಾವು ಕೊಡಬೇಡವೆಂದು, ಅವರು ಬಡತನದ ಬೇಗೆಯಲ್ಲೇ ಬೆಂದುಹೋಗುವ ಸತ್ಯದ ಮೊರೆತ ಅವರದು. ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ, ಒಮ್ಮೆ ನೀನು ಒಡಲುಗೊಂಡು ನೋಡಾ ರಾಮನಾಥ., ಎಂದು ದೇವರ ದಾಸಿಮಯ್ಯ ದೇವರಿಗೆ ಹಾಕುವ ಒಡಲಿನ ಸವಾಲು, ಪ್ರಪಂಚದ ಯಾವ ವೇದಾಂತ, ಸಿದ್ದಾಂತ, ಸಾಹಿತ್ಯ ಹೇಳಿಲ್ಲ. ಇಂತಹ ಪರಮಸತ್ಯದ ಸವಾಲು ನಮ್ಮ ಸಂಸ್ಕೃತಿ. ಈಗ ಅವುಗಳಿಗೆ ಸಾಮಾಜಿಕ ಜಾಲತಾಣಗಳೇ ಬಹುದೊಡ್ಡ ಮಾಧ್ಯಮ. ಜನಸಮೂಹದ ನೆಲೆದಾಣಗಳಲ್ಲಿ ಸಾರ್ವತ್ರಿಕ ಅವಕಾಶಗಳಿಲ್ಲವಾದ್ದರಿಂದ ಸಧ್ಯಕ್ಕೀಗ ಸಾಮಾಜಿಕ ಅಂತರ ಕಾಪಾಡಿಕೊಂಡಿರುವ ಸಾಮಾಜಿಕ ಜಾಲತಾಣಗಳೇ ಏಕೈಕ ಸಂವಹನ ಸಾಧನಗಳು.

ನಾಕೈದು ತಿಂಗಳುಕಾಲ ಅಂದರೆ ಬೇಸಿಗೆಯ ಆರಂಭದ ಒಂದೆರಡು ವಾರ ಮೊದಲೇ ಆರಂಭಗೊಂಡು ಮಿರುಗ (ಮೃಗಶಿರ)ದ ಮಳೆಯವರೆಗೂ ನಾಡಿನ ತುಂಬಾ ಜರುಗುವ ಜಾತ್ರೆ, ಸಾಂಸ್ಕೃತಿಕ ಹಬ್ಬ ಹರಿದಿನಗಳದ್ದೇ ಸಂಭ್ರಮ, ಸಡಗರ. ಜನವರಿ ತಿಂಗಳು ಬಹುಪಾಲು ಸಂಕ್ರಮಣಕ್ಕೆ ಮೊದಲೇ ಆರಂಭಗೊಳ್ಳುವ, ಜನಜೀವಾಳವೇ ಆಗಿರುವ ರೈತಾಪಿ ಬದುಕಿನ ಸುಗ್ಗಿ, ದೇವರು ದಿಂಡರ ಪರಿಷೆ, ಜನಪದರ ಜಾತ್ರೆ, ಸಾರ್ವಜನಿಕ ಪ್ರೀತಿ ಹುಟ್ಟಿಸುವ ಹತ್ತು ಹಲವು ಮಹೋತ್ಸವಗಳ ಸಾಂಸ್ಕೃತಿಕ ಸುಗ್ಗಿಯಕಾಲ. ಜನವರಿಯಿಂದ ಮೇ, ಜೂನ್ ಮುಗಿಯೋಮಟ ಜನಸಂಸ್ಕೃತಿಯ ಕಲಾಪ್ರದರ್ಶನಗಳಿಗೆ ಹೇಳಿ ಮಾಡಿಸಿದ ಕಾಲ. ರೈತಾಪಿ ಕೆಲಸಗಳು ಮುಗಿದು ಜನರ ಬದುಕಿನ ಸಾಹಿತ್ಯ, ಹಾಡು, ಕುಣಿತ ಒಟ್ಟು ಎಲ್ಲ ಕಲಾಪ್ರಕಾರ ಪ್ರದರ್ಶನಗಳ ಸಂಭ್ರಮಕಾಲ. ಸಡಗರದ ಕಾಲ. ಈ ಸಡಗರ ಸಂಭ್ರಮಗಳಿಗೆ ಈ ಬಾರಿ ಅವಕಾಶವೇ ಇಲ್ಲವಾಯಿತು.

ಕೊರೊನಾ ಇಲ್ಲದಿದ್ದರೆ ಇದು ತಿಂಗಳುಗಳ ಕಾಲ ಜಾತ್ರೆಗಳು ಜರುಗುವ ಸಮಯ. ಜಾತ್ರೆಗಳಲ್ಲಿ ನಾಟಕ ಕಂಪನಿಗಳಿಗೆ ರಂಗನಾಟಕಗಳ ಬಂಪರ್ ಸುಗ್ಗಿಯ ಸಂಭ್ರಮ. ಪುಣ್ಯಕ್ಕೆ ನಾಟಕಗಳ ಜಾತ್ರೆಯೆಂದೇ ಪ್ರಸಿದ್ದವಾದ ಬನಶಂಕರಿ ಜಾತ್ರೆಯ ಸದುಪಯೋಗ ಹನ್ನೊಂದು ನಾಟಕ ಕಂಪನಿಗಳು ಮಾಡಿಕೊಂಡವು. ಆ ನಂತರ ಮಾರ್ಚ್ ಮೊದಲ ವಾರದಿಂದ ಜಾತ್ರೆಯ ಕ್ಯಾಂಪುಗಳದ್ದು ನೋವಿನ ಮಜಕೂರ. ಕಲಾವಿದರ ನಿತ್ಯದ ಬದುಕಿಗೂ ತತ್ವಾರ. ನಾಟಕ ಕಂಪನಿಗಳ ಕಲಾವಿದರೆಲ್ಲ ಮನೆ ಸೇರಿದ್ದಾರೆ. ಹಳ್ಳಿಯ ಜಾತ್ರೆಗಳಲ್ಲಿ ಜರುಗುವ ವೃತ್ತಿರಂಗ ನಾಟಕಗಳಲ್ಲಿ ಅಭಿನಯಿಸುವ ನೂರಾರು ಮಂದಿ ಹವ್ಯಾಸಿ ಕಲಾವಿದೆಯರು ನಿರುದ್ಯೋಗದ ನಿಟ್ಟುಸಿರು ಬಿಡುತ್ತಿದ್ದಾರೆ. ಮುಖ್ಯವಾಗಿ ಮದುವೆಗಳ ಸೀಜನ್ ಇದಾಗಿತ್ತು. ಮಂಗಳವಾದ್ಯ ನುಡಿಸುವ ಕಲಾವಿದರಿಗೆ ಅಗ್ನಿಪರೀಕ್ಷೆಯಂತಹ ಬದುಕಿನ ಪ್ರಶ್ನೆಯ ಸಮಯ. ಅವರ ಕುಟುಂಬ ನಿರ್ವಹಣೆ ಅಕ್ಷರಶಃ ಸಂಕಟಮಯ. ಸಿನೆಮಾ, ಧಾರಾವಾಹಿಗಳಲ್ಲಿ ಕೆಲಸ ಮಾಡುವ ಕಲಾವಿದರು, ತಂತ್ರಜ್ಞರ ಜೀವನ ಸಂಕಷ್ಟಕ್ಕೀಡಾಗಿದೆ. ಪುಸ್ತಕಗಳ ಪ್ರಕಟಣೆ ಸ್ಥಬ್ಧಗೊಂಡಿದೆ. ಹೀಗೆ ವಿರಮಿಸಿರುವ ಸಂಸ್ಕೃತಿ ಸಂಬಂಧಿತ ಬಹುದೊಡ್ಡ ಪಟ್ಟಿಯೇ ಇದೆ.

ಹಳ್ಳಿ, ಪಟ್ಟಣ, ನಗರಗಳೆನ್ನದೇ ಬೇಸಿಗೆ ಶಿಬಿರಗಳು ಸಂಸ್ಕೃತಿಯ ಸಮೃದ್ಧತೆಯನ್ನು ಮಕ್ಕಳಿಗೆ ಉಣ ಬಡಿಸುತ್ತಿದ್ದವು. ಮಕ್ಕಳಿಗೆ ಅಭಿನಯ, ಸಂಗೀತ, ಅಜ್ಜಿಹೇಳುವ ಕಥೆ, ಚಿತ್ರಕಲೆ ಕಲಿಕೆ ಹೀಗೆ ಹೊಸತನದ ಸೃಜನಶೀಲತೆಗಳಿಗೆ ಮಕ್ಕಳನ್ನು ಸಿದ್ಧಗೊಳಿಸುವ ಎಲ್ಲಕ್ಕೂ ಕೊರೊನಾ ಕಲ್ಲು ಬಿದ್ದಿದೆ. ಸರಕಾರದ ರಂಗಾಯಣಗಳು ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ನಡೆಸುತ್ತಿದ್ದವು. ಖಾಸಗಿಯಾಗಿ ಸಂಘ ಸಂಸ್ಥೆಗಳು ಅಲ್ಲಲ್ಲಿ ಜರುಗಿಸುತ್ತಿದ್ದ ಇಂತಹ ನೂರಾರು ಶಿಬಿರಗಳು ಸಂಸ್ಕೃತಿಯ ವಿವಿಧ ಮಜಲುಗಳ ಬೃಹತ್ ಕಾರ್ಯಾಗಾರ, ಕಮ್ಮಟ, ಸಮಾವೇಶಗಳು ನಾಡಿನ ಸಂಸ್ಕೃತಿ ಬಿಂಬಿಸುವ ಅವಕಾಶಗಳಾಗಿದ್ದವು. ಅಲ್ಲದೇ ಸರಕಾರದ ಹತ್ತು ಹಲವು ಸಂಸ್ಕೃತಿ ಉತ್ಸವಗಳು ಜರುಗುತ್ತಿದ್ದವು. ಅವೆಲ್ಲವುಗಳನ್ನು ಕೊರೊನಾ ಎಂಬ ಕರಾಳ ಕಾಳಿ ನುಂಗಿ ನೊಣೆಯುತ್ತಿದೆ. ಲಾಕ್ ಡೌನ್ ಮತ್ತು ಸೀಲ್ ಡೌನ್ ಗಳಿಂದ ಸಾಂಸ್ಕೃತಿಕ ಲೋಕವಿರಲಿ ಸಾಮಾನ್ಯ ಜನಜೀವನ ಸಹಜಸ್ಥಿತಿಗೆ ಮತ್ತೆ ಮರುಳತ್ತದೆಯಾ.? ಮತ್ತೆ ಕಾಣಬಲ್ಲೆವೇ ಆ ದಿನಗಳನು ಎಂಬ ಸಹಸ್ರಮಾನದ ನಿರೀಕ್ಷೆ ನಿತ್ಯವೂ ನಮ್ಮೆಲ್ಲರನ್ನು ಕಾಡುತ್ತಿದೆ.

***********

Leave a Reply

Back To Top