ಹಿರಿಯ ಮಗಳ ಮದುವೆಯನ್ನು ಮಾಡಿದ ನಂತರ ಸುಮತಿ ಮತ್ತು ಕಿರಿಯ ಮಗಳ ಜೀವನ ಹಾಗೂ ಹೀಗೂ ಹೆಚ್ಚಿನ ತೊಂದರೆಗಳೇನೂ ಇಲ್ಲದೇ ಸಾಗುತ್ತಿತ್ತು. ಗುರುವಾರ ಸಂತೆಗೆ ಹೋಗುವಾಗ ತಿಂಗಳಿಗೊಮ್ಮೆ ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಅವರಿಬ್ಬರೂ ಕಲಿಯುತ್ತಿದ್ದ ಶಾಲೆಗೆ ಹೋಗಿ ಮಧ್ಯಾಹ್ನದ ಊಟದ ವಿರಾಮದಲ್ಲಿ ನೋಡಿಕೊಂಡು ತಾನು ಪ್ರೀತಿಯಿಂದ ತಯಾರಿಸಿಕೊಂಡು ತರುತ್ತಿದ್ದ ತಿಂಡಿ ಮತ್ತು ಊಟವನ್ನು ಅಕ್ಕರೆಯಿಂದ ತಿನ್ನಿಸುತ್ತಿದ್ದಳು. ಅವಳು ಆದಷ್ಟೂ ಅನಾಥಾಶ್ರಮಕ್ಕೆ ಹೋಗಿ ಅಲ್ಲಿ ಮಕ್ಕಳನ್ನು ಭೇಟಿ ಮಾಡುತ್ತಿರಲಿಲ್ಲ. ಅವರ ಜೊತೆ ವಾಸವಿದ್ದ ಇತರ ಮಕ್ಕಳಿಗೂ ಮಾತಾಪಿತರ ನೆನಪಾಗಿ ನೋವಾಗಬಹುದು ಎಂಬ ಕಾರಣದಿಂದ ಮತ್ತು ಅನಾಥಾಶ್ರಮಕ್ಕಿಂತ ಶಾಲೆಯೇ ಅವಳಿಗೆ ಸಮೀಪವಾಗುತ್ತಿದ್ದುದರಿಂದ ಅಲ್ಲಿಗೆ ಹೋಗಿ ಭೇಟಿ ಮಾಡುತ್ತಿದ್ದಳು. ತಾನು ಭೇಟಿ ಮಾಡಿದ್ದು ತಿಳಿದರೆ ಆಶ್ರಮದ ವಾರ್ಡನ್ ಎಲ್ಲಿ ಮಕ್ಕಳನ್ನು ಶಿಕ್ಷಿಸುವರೋ ಎನ್ನುವ ಭಯ ಕೂಡಾ ಒಂದೆಡೆ ಇರುತ್ತಿತ್ತು. ಹಾಗಾಗಿ ಶಾಲೆಯ ಶಿಕ್ಷಕ, ಶಿಕ್ಷಕಿ ಹಾಗೂ ಮುಖ್ಯೋಪಾಧ್ಯಾಯರಲ್ಲಿ ತಾನು ಮಕ್ಕಳನ್ನು ಭೇಟಿ ಮಾಡಿದ ಬಗ್ಗೆ ಹೇಳಬೇಡಿ ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದಳು. ಅಮ್ಮನನ್ನು ಕಂಡಾಗ ಮಕ್ಕಳಿಗೆ ಅಮ್ಮನೊಡನೆ ಮನೆಗೆ ಹೋಗುವ ಆಸೆ ಆಗುತ್ತಿತ್ತು….”ರಜೆಯಲ್ಲಿ ನೀವು ಮನೆಗೆ ಬರಬಹುದಲ್ಲವೇ?

ನಮ್ಮ ಮನೆಯಿಂದ ಶಾಲೆ ಬಹಳ ದೂರವಿದೆ….ಬಸ್ ಸೌಲಭ್ಯವೂ ಇಲ್ಲ…. ಕಾಡುದಾರಿಯಲ್ಲಿ ನಡೆಯಬೇಕು…ದಾರಿಯಲ್ಲಿ ಕಾಡುಪ್ರಾಣಿಗಳು ಇರುತ್ತವೆ…ನೀವಿನ್ನೂ ಚಿಕ್ಕವರು…ಸ್ವಲ್ಪ ದೊಡ್ಡವರಾದ ಮೇಲೆ ಕರೆದುಕೊಂಡು ಹೋಗುತ್ತೇನೆ”…. ಎಂದು ಸಮಾಧಾನ ಮಾಡುತ್ತಿದ್ದಳು. ಅಮ್ಮನ ಮಾತುಗಳು ನಿಜವೆಂದು ತಿಳಿದು ಮಕ್ಕಳು ನಂಬಿ ಅಳುತ್ತಾ ಸುಮ್ಮನಾಗುತ್ತಿದ್ದರು.

ವಾಸ್ತವವೇನು ಎಂಬುದರ ಅರಿವಿದ್ದ ಸುಮತಿಗೆ ಮಕ್ಕಳ ಮುಗ್ಧ ಮುಖವನ್ನು ಕಂಡು ತಾನು ಹೇಳಿ ಸಮಾಧಾನ ಪಡಿಸುತ್ತಿದ್ದ ಮಾತುಗಳು ಸುಳ್ಳು ಎನ್ನುವುದು ತಿಳಿದಿದ್ದರೂ ಬೇರೆ ದಾರಿಯಿಲ್ಲದೆ ಮನಸ್ಸನ್ನು ಕಲ್ಲು ಮಾಡಿಕೊಂಡು ಮನೆಗೆ ಹಿಂತಿರುಗುತ್ತಿದ್ದಳು. ಮನೆಗೆ ಮರಳಿದ ನಂತರ ಮಕ್ಕಳ ನೆನಪಾಗಿ ರಾತ್ರಿಯೆಲ್ಲಾ ಮೌನವಾಗಿ ಅಳುತ್ತಿದ್ದಳು. ಕಿರಿಯ ಮಗಳು ತನ್ನ ಜೊತೆ ಇರುವಳಲ್ಲ ಹಾಗಾಗಿ ತಾನು ಇಲ್ಲಿ ಒಂಟಿಯಲ್ಲ ಎನ್ನುವ ಸಣ್ಣ ಸಮಾಧಾನವೂ ಇತ್ತು. ಕಿರಿಯ ಮಗಳು ಅಲ್ಲಿನ ತೋಟದ ರೈಟರ ಮಕ್ಕಳ ಜೊತೆ ಶಾಲೆಗೆ ಹೋಗಿ ಬರುತ್ತಿದ್ದುದರಿಂದ ಅವಳನ್ನು ಶಾಲೆಗೆ ಬಿಟ್ಟು ಪುನಃ ಕರೆದುಕೊಂಡು ಬರುವ ಕೆಲಸವಿರುತ್ತಿರಲಿಲ್ಲ. ಮಗಳು ಬೆಳಗ್ಗೆ ಶಾಲೆಗೆ ಹೊರಡುವಾಗ ಅವಳಿಗೆ ತಿಂಡಿ ತಿನ್ನಿಸಿ ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿ ಕೊಡುತ್ತಿದ್ದಳು. ತನ್ನ ಶಾಲೆ ಹತ್ತಿರವಿದ್ದ ಕಾರಣ ಮಧ್ಯಾಹ್ನ ಮನೆಗೆ ಹೋಗಿ ಊಟ ಮಾಡಿ ಬೇಗ ಬಂದು ಬಂಗಲೆಯ ಜಗುಲಿಯಲ್ಲಿ ಸ್ವಲ್ಪ ಹೊತ್ತು ಮಲಗುತ್ತಿದ್ದಳು. ಮಧುಮೇಹಕ್ಕೆ ಮೈಯೆಲ್ಲಾ ಬಿಸಿಯಾಗುತ್ತಿದ್ದ ಕಾರಣ ಅಲ್ಲಿನ ತಂಗಾಳಿಗೆ ಮೈಯೊಡ್ಡಿ ಮಲಗಿದಾಗ ನೆಮ್ಮದಿ ಎನಿಸುತ್ತಿತ್ತು. ಮಧ್ಯಾಹ್ನ ಮಕ್ಕಳಿಗೆ ಪಾಠ ಹೇಳುಕೊಡುವ ಸಮಯ ಬಂದಾಗ ಎದ್ದು ಅಲ್ಲಿಯೇ ಇದ್ದ ನೀರಿನ ನಳವನ್ನು ತಿರುಗಿಸಿ ತಣ್ಣನೆಯ ನೀರಿನಲ್ಲಿ ಮುಖ ತೊಳೆದು ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸ ಮಾಡುತ್ತಿದ್ದಳು. ಮಧುಮೇಹ ನಿಯಂತ್ರಣಕ್ಕೆ ವ್ಯಾಯಮ ಬೇಕಾದ ಕಾರಣ ಬೆಳಗ್ಗೆ ಸ್ವಲ್ಪ ಬೇಗನೇ ಬಂದು ಬಂಗಲೆಯ ಸುತ್ತ ನಡೆದಾಡುವಳು. ಅಲ್ಲಿನ ವಿವಿಧ ಬಗೆಯ ಹೂ ಗಿಡಗಳನ್ನು ಕಂಡು ಖುಷಿ ಪಡುವಳು. ಬಹಳ ವಿಶೇಷವೆನಿಸುವ ಅಪರೂಪದ ಗಿಡಗಳು ಬಂಗಲೆಯ ಸುತ್ತಾ ಇದ್ದವು. ಮಾಲಿಕರ ಮಗ ಬಂಗಲೆಯಲ್ಲಿ ಉಳಿದುಕೊಳ್ಳಲು ಬಂದಾಗ ಕೆಲವೊಮ್ಮೆ ಸುಮತಿಯನ್ನು ಕಂಡು ನಸು ನಗುತ್ತಾ ಮಾತನಾಡಿಸುತ್ತಿದ್ದರು. 

ಅವರನ್ನು ಕಂಡೊಡನೆ ಮೈತುಂಬಾ ಸೆರಗು ಹೊದ್ದು ನಮಸ್ಕರಿಸುವಳು. ತೋಟದ ಮಾಲೀಕರು ಹಾಗೂ ಅವರ ಮಕ್ಕಳು ಸರ್ವಗುಣ ಸಂಪನ್ನರಾಗಿದ್ದರು. ಹಾಗಾಗಿ ಅವರಲ್ಲಿ ಸುಮತಿಗೆ ಬಹಳ ಗೌರವವಿತ್ತು. ತನಗೂ ಹಾಗೂ ಮಕ್ಕಳಿಗೂ ಆಶ್ರಯ ನೀಡಿ, ಯಾವುದೇ ಹೆದರಿಕೆ ಇಲ್ಲದೇ ಧೈರ್ಯವಾಗಿ ನಿರ್ಭೀತಿಯಿಂದ ಜೀವನ ನಡೆಸಲು ಅವಕಾಶ ಮಾಡಿಕೊಟ್ಟ ದಣಿ ಹಾಗೂ ಕುಟುಂಬವನ್ನು ಕಂಡರೆ ಅವಳಿಗೆ ಹೆಚ್ಚು ಆದರ. ಒಮ್ಮೆ ಹೀಗೆಯೇ ಮಕ್ಕಳಿಗೆ ಪಾಠ ಮಾಡುವಾಗ ವಿವರಿಸಲೆಂದು ಮುದ್ದಾದ ತಾಯಿಕೋಳಿ ಹಾಗೂ ಪುಟ್ಟ ಮುದ್ದು ಮರಿಗಳ ಚಿತ್ರವನ್ನು ಬಿಡಿಸಿದ್ದಳು. ಮಕ್ಕಳಿಗೆ ಟೀಚರ್ ಬಿಡಿಸುವ ಚಿತ್ರಗಳೆಂದರೆ ಅಚ್ಚುಮೆಚ್ಚು. ಪಾಠ ಮುಗಿಸಿ ಹೋಗುವಾಗ ಗೋಡೆಯ ಮೇಲೆ ಇದ್ದ ಕಪ್ಪು ಹಲಗೆಯಲ್ಲಿ ತಾನು ಬರೆಯುತ್ತಿದ್ದ ಅಕ್ಷರಗಳು ಹಾಗೂ ಬಿಡಿಸುತ್ತಿದ್ದ ಚಿತ್ರಗಳನ್ನು ಅಳಿಸಿ ಸ್ವಚ್ಛ ಮಾಡಿ ಹೋಗುವುದು ಸುಮತಿಗೆ ವಾಡಿಕೆ. ಆದರೆ ಅಂದು ಆ ಚಿತ್ರವನ್ನು ಮಕ್ಕಳು ಅಳಿಸಲು ಬಿಡಲಿಲ್ಲ. ಮುದ್ದಾದ ಆ ಚಿತ್ರವು ಹಾಗೇ ಇರಲಿ ಅಳಿಸಬೇಡಿ ಟೀಚರ್ ಎಂದು ಮಕ್ಕಳು ಮನವಿ ಮಾಡಿಕೊಂಡಿದ್ದರು. ತನ್ನ ಮೆಚ್ಚಿನ ವಿದ್ಯಾರ್ಥಿಗಳ ಕೋರಿಕೆನ್ನು ಕೇಳಿದಾಗ ಆ ಚಿತ್ರವನ್ನು ಅಳಿಸಲು ಮನಸ್ಸು ಬಾರದೇ ಹಾಗೆಯೇ ಬಿಟ್ಟಿದ್ದಳು. ಅಂದು ರಾತ್ರಿ ಮಾಲೀಕರ ಮಗ ಬಂದರು. ಕಾರ್ ಶೆಡ್ ನಲ್ಲಿ ಕಾರು ನಿಲ್ಲಿಸುವಾಗ ಹೆಡ್ಲೈಟ್ ಬೆಳಕಿನಲ್ಲಿ ಕಪ್ಪು ಹಲಗೆಯ ಮೇಲೆ ಬಿಡಿಸಿರುವ ಕೋಳಿ ಮತ್ತು ಮರಿಗಳ ಚಿತ್ರ ಅವರ ಗಮನ ಸೆಳೆಯಿತು. ಕಾರಿನಿಂದ ಇಳಿದವರೇ ಕಣ್ಣೆವೆಯಿಕ್ಕದೇ ತದೇಕ ಚಿತ್ತವಾಗಿ ಆ ಚಿತ್ರವನ್ನು ಗಮನಿಸುತ್ತಾ ನಿಂತರು. ಸಣ್ಣ ದಣಿಯ ಕಾರಿನ ಹಾರ್ನ್ ಸದ್ದು ಕೇಳಿದೊಡನೆಯೇ ಬಂಗಲೆಯ ಕೆಲಸ ಹಾಗೂ ಅದರ ಸುತ್ತಲಿನ ಹೂಡೂಟವನ್ನು ನೋಡಿಕೊಳ್ಳುವ ಕೆಲಸಗಾರ ಬಂದು ಅವರ ಸೂಟ್ಕೇಸ್ ಹಾಗೂ ಇನ್ನಿತರೇ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಂದವನು, ಕಾರಿನಿಂದ ಇಳಿದು ಬಂಗಲೆಯ ಒಳಗೆ ಹೋಗದೇ ಕಪ್ಪು ಹಲಗೆಯ ಮೇಲೆ ಟೀಚರಮ್ಮ ಬಿಡಿಸಿರುವ ಚಿತ್ರವನ್ನು ತಡೆಕಚಿತ್ತವಾಗಿ ನೋಡುತ್ತಿದ್ದ ದಣಿಯನ್ನು ಕಂಡು ಅಚ್ಚರಿಯಾಯಿತು. 

ತನ್ನ ಬಳಿಗೆ ಬಂದು ವಿನಯಪೂರ್ವಕವಾಗಿ ಕೈ ಮುಗಿದು ನಿಂತ ಮಾಲಿಯನ್ನು ಕಂಡ ಡಾಕ್ಟರ್….”ಮಾಲಿ ಈ ಚಿತ್ರವನ್ನು ಬಿಡಿಸಿದವರು ಯಾರು?….ಎಂದು ಕೇಳಿದಾಗ…. “ಬುದ್ದಿ ಇದನ್ನು ನಮ್ಮ ಟೀಚರಮ್ಮ ಬಿಡಿಸಿದ್ದಾರೆ….ಅವರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವಾಗ ಹೀಗೆ ಸುಂದರವಾದ ಚಿತ್ರಗಳನ್ನು ಬಿಡಿಸಿ ಮಕ್ಕಳಿಗೆ ಅರ್ಥ ಆಗುವ ರೀತಿಯಲ್ಲಿ ಬಹಳ ಚೆನ್ನಾಗಿ ವಿವರಿಸಿ ಕಲಿಸುತ್ತಾರೆ ಬುದ್ದಿ….ದಿನವೂ ಕಪ್ಪುಹಲಗೆಯ ಮೇಲೆ ಬರೆದಿದ್ದನ್ನು ಶಾಲೆಯ ಅವಧಿ ಮುಗಿದ ನಂತರ ಅಳಿಸಿ ಹೋಗುತ್ತಾರೆ ಇಂದೇಕೋ ಅಳಿಸಿಲ್ಲ”….ಎಂದಾಗ ಮುಗುಳ್ನಕ್ಕ ಡಾಕ್ಟರ್ ಕಪ್ಪು ಹಲಗೆಯನ್ನು ಮತ್ತೊಮ್ಮೆ ವೀಕ್ಷಿಸಿದರು. ಅಚ್ಚುಕಟ್ಟಾಗಿ ಕನ್ನಡ  ಅಕ್ಷರಗಳನ್ನು ಬರೆದು, ಕನ್ನಡದ ಕ ಅಕ್ಷರ ಕಾಗುಣಿತದ ಕೊನೆಯ ಒಂದು ಅಕ್ಷರವನ್ನು ಬಿಟ್ಟು ಉಳಿದೆಲ್ಲಾ ಅಕ್ಷರಗಳಿಗೂ ಪಕ್ಕದಲ್ಲಿ ಪುಟ್ಟದಾಗಿ ಅದಕ್ಕೆ ಹೊಂದುವ ಚಿತ್ರಗಳನ್ನು ಬಿಡಿಸಿದ್ದಳು ಸುಮತಿ. ಕೋಳಿ ಮತ್ತು ಮರಿಗಳ ಚಿತ್ರವನ್ನು ಮಾತ್ರ ದೊಡ್ಡದಾಗಿ ಬಿಡಿಸಿ ಅದರ ಶರೀರ ಭಾಗಗಳನ್ನು ಹೆಸರಿಸಿದ್ದಳು. ಕೆಲಸಗಾರರನ್ನು ಉದ್ದೇಶಿಸಿ…. ” ನಾಳೆ ಬೆಳಗ್ಗೆ ಟೀಚರಮ್ಮನಿಗೆ ನನ್ನನ್ನು  ಭೇಟಿ ಮಾಡಲು ತಿಳಿಸು”….ಎಂದು ಹೇಳುತ್ತಾ ಬಂಗಲೆಯ ಒಳಗೆ ಹೋದರು. ಅವರು ವೈದ್ಯಕೀಯ ಶಿಕ್ಷಣ ಮುಗಿಸಿ ಹಳ್ಳಿಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಹಾಗಾಗಿ ಅವರನ್ನು ಡಾಕ್ಟರ್ ಎಂದು ಎಲ್ಲರೂ ಕರೆಯುತ್ತಿದ್ದರು. ಡಾಕ್ಟರ್ ಒಳಗೆ ಹೋದ ನಂತರ ಮಾಲಿಯೂ ಒಂದೆರಡು ಕ್ಷಣ ಚಿತ್ರವನ್ನು ನೋಡುತ್ತಾ ತಲೆ ಕೆರೆದುಕೊಂಡು….”ಯಾಕೆ ದಣಿಗಳು ಬೆಳಗ್ಗೆ ಟೀಚರಮ್ಮನನ್ನು ಬರಲು ಹೇಳಿದ್ದಾರೆ?… ಈ ಚಿತ್ರದಲ್ಲಿ ಅಂತದ್ದು ಏನಿದೆ ಎಂದು ಯೋಚಿಸುತ್ತಾ, ಏನೂ ತಲೆಗೆ ಹೊಳೆಯದೇ ದಣಿಗಳು ಜೊತೆಗೆ ತಂದಿದ್ದ ಪೆಟ್ಟಿಗೆಗಳನ್ನು ತೆಗೆದುಕೊಂಡು ಬಂಗಲೆಯ ಒಳಗೆ ಇಟ್ಟು ತನ್ನ ಮನೆಯ ಕಡೆಗೆ ಹೋದನು.

̲——————————-

Leave a Reply

Back To Top