ಕಾವ್ಯ ಸಂಗಾತಿ
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಬೇವು – ಬೆಲ್ಲ

ಅಲ್ಲೊಬ್ಬ ಕೊಲೆ ಪಾತಕಿ ತನ್ನ ಪಾಪ
ತೊಳೆದುಕೊಳ್ಳಲು ದೇವಾಲಯದಲ್ಲಿ
ಹೋಮ ಹವನ ಪೂಜೆ ಮಾಡಿ
ದೇವರ ಕಣ್ಣಲ್ಲಿ ಸಾಚಾ ಆಗುತ್ತಿದ್ದಾನೆ.
ಇಲ್ಲೊಬ್ಬ ಉಚ್ಚಾಟಿತ ನಾಯಕ
ದಿನಕ್ಕೊಂದು ಹೇಳಿಕೆ ನೀಡುತ್ತ
ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವೆ.
ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದಾನೆ.
ಬ್ಯಾಂಕಾಕ್ ಮಯನ್ಮಾರ್ ನ
ಭೂಮಿ ನಡುಗಿ ಸಾವಿರ ಹೆಣಗಳು
ಸಮಾಧಿಯಾಗಿವೆ. ಕಟ್ಟಡಗಳ ಬುಡದಲ್ಲಿ
ಸಿಕ್ಕು ಗಂಟಲು ಕಟ್ಟಿದ ಮಗುವೊಂದು ಅನಾಥವಾಗಿದೆ.
ಗಾಜಾ ಪಟ್ಟಿಯಲ್ಲಿ ನರಮೇಧ
ಉಕ್ರೇನ್ ಉರಿದು ಬೂದಿಯಾಗಿದೆ.
ತಾನೇ ನಟಿಸಿದ ರುದ್ರನಾಟಕಗಳ ದೃಶ್ಯ
ನೋಡಿ ಟ್ರಂಪ್ ಕಣ್ಣಿರಾಗಿದ್ದಾನೆ.
ಸಾವಿರಾರು ಹೆಣ್ಣುಮಕ್ಕಳೊಂದಿಗೆ
ರಾಸಲೀಲೆಯಾಡಿದ ಮಾಜಿ ಸಂಸದನೊಬ್ಬ
ಜೈಲಿನಲ್ಲಿ ಮೆತ್ತನೆ ಮುದ್ದೆಯನ್ನು ನಿತ್ಯವೂ
ಮೆತ್ತಗೆ ಹಿಚುಕಿ ಹಿಚುಕಿ ನೊಯುತ್ತಿದ್ದಾನೆ.
ಯುಗಾದಿ, ರಂಮ್ಜಾನ ಹಬ್ಬಕ್ಕೆಂದೆ
ಹೆಂಗಳೆಯರು ಹೊಸ ಬಗೆಯ
ಸೀರೆ ಕೊಳ್ಳಲು ಗಂಟೆ ಗಟ್ಟಲೆ
ಶಾಪಿಂಗ್ ನಲ್ಲಿ ಬ್ಯುಜಿ ಇದ್ದಾರೆ.
ಶಾವಿಗೆ ಪಾಯಸ ,ಸುರಕುರುಮಾ
ಒಟ್ಟಾಗಿ ಕುಡಿಯುವ ಖುಷಿಯಲ್ಲಿ ಬಿಲ್ಡಿಂಗ್
ಕಸ ಗುಡಿಸುವ ಹುಡುಗಿ ಹೊಸ ಲಂಗ ತೊಟ್ಟು
ಬಟ್ಟಲು ಹಿಡಿದು ಕಾದಿದ್ದಾಳೆ.
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

ಪ್ರಕಟಣೆಗಾಗಿ ಅನಂತ ಶರಣಾರ್ಥಿ
ವಾಸ್ತವ ಚರಿತ್ರೆ ಅನಾವರಣಗೊಂಡಿದೆ.ಚಂದದ ಕವಿತೆ ಅಕ್ಕಾರ
Nice thought mam
ಸುಂದರವಾದ ಕವಿತೆ ಮೇಡಂ ಜೀ
ವಾಸ್ತವ ಮತ್ತೆ ಹೊಸ ವರ್ಷದ ಕವಿತೆ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ ಮೇಡಂ