ಮನಸ್ಸು ಭಾರವಾದರೂ ಸದ್ಯಕ್ಕೆ ಮಕ್ಕಳನ್ನು ಅನಾಥಾಲಯಕ್ಕೆ ಸೇರಿಸುವುದಲ್ಲದೆ ಸುಮತಿಗೆ ಬೇರೆ ದಾರಿ ಕಾಣಲಿಲ್ಲ. ಎಳೆಯ ಕಂದನನ್ನು ತೋಳಲ್ಲಿ ಎತ್ತಿಕೊಂಡು ಕೂಲಿ ಕೆಲಸಕ್ಕೆ ಹೋಗಿ ಮೂವರು ಮಕ್ಕಳನ್ನು ಸಾಕುವಷ್ಟು ಶಕ್ತಿ ಅವಳಿಗೆ ಇರಲಿಲ್ಲ. ಅನಾಥಾಲಯಕ್ಕೆ ಸೇರಿಸಿದರೆ ಅಲ್ಲಿಯೇ ಮಕ್ಕಳ ವಿದ್ಯಾಭ್ಯಾಸವು ನಡೆಯುತ್ತದೆ ಎಂದು ಸಂಬಂಧಿಕರು ಹೇಳಿದ ಕಾರಣ ಮಕ್ಕಳ ಮುಂದಿನ ಭವಿಷ್ಯವನ್ನು ನೆನೆದು ಮಕ್ಕಳನ್ನು ತನ್ನಿಂದ ದೂರವಿಡುವ ಕರುಳು ಹಿಂಡುವಂತಹ ನೋವನ್ನು ಸಹಿಸಿಕೊಂಡು ಅನಾಥಾಲಯಕ್ಕೆ ಸೇರಿಸುವ ತೀರ್ಮಾನಕ್ಕೆ ಬಂದಳು. ಮಕ್ಕಳ ಸುರಕ್ಷತೆ ಹಾಗೂ ಅವರನ್ನು ಸುಶಿಕ್ಷಿತರನ್ನಾಗಿ ಮಾಡುವುದು ಈಗ ಅವಳಿಗೆ ಬಹಳ ಮುಖ್ಯವಾಗಿ ತೋರಿತು. ಹಾಗಾಗಿ ಸಂಬಂಧಿಕರು ಸೂಚಿಸಿದ ಈ ಸಲಹೆ ಅವಳಿಗೆ ಉಚಿತವಾಗಿ ಕಂಡಿತು. ಇದರ ನಡುವೆ ಚಿಕ್ಕಮಗಳೂರಿಗೆ ಹೋಗಿದ್ದ ನಾಣು ಹಿಂತಿರುಗಿ ಸಕಲೇಶಪುರಕ್ಕೆ ಬಂದರು. ಮಗಳ ಹಾಗೂ ತನ್ನ ಮೊಮ್ಮಕ್ಕಳ ಈಗಿನ ಸ್ಥಿತಿಯನ್ನು ಅರಿತು ಮಮ್ಮಲ ಮರುಗಿದರು. ತಮ್ಮ ಜೊತೆ ಬಂದು ವಾಸಿಸುವಂತೆ ಕೇಳಿಕೊಂಡರು. ಹಾಗೆಯೇ ಸುಮತಿ ಅಪ್ಪನ ಮನೆಗೆ ಬಂದಳು. ತಮ್ಮ ಸಂಬಂಧಿಕರ ಜೊತೆ ಚರ್ಚಿಸಿ ಸುಮತಿಗೆ ಎರಡನೇ ವಿವಾಹವನ್ನು ಮಾಡಲು ಬಯಸಿ ನಾಣು ವರನನ್ನು ಹುಡುಕಿದರು. ಈ ವಿಷಯ ಸುಮತಿಗೆ ತಿಳಿದಾಗ ತನ್ನ ನಾಲ್ಕು ಮಕ್ಕಳನ್ನು ಕರೆದುಕೊಂಡು ರಾತ್ರೋರಾತ್ರಿ ಅಪ್ಪನ ಮನೆಯನ್ನು ತೊರೆದಳು. ನಂತರ ಸಂಬಂಧಿಕರ ಮನೆಗೆ ಬಂದು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಳು. ತಾನು ಬೇರೆ ವಿವಾಹವಾಗಿ ಈ ಮಕ್ಕಳನ್ನು ಅನಾಥರನ್ನಾಗಿ ಮಾಡುವುದಕ್ಕಿಂತ ಅವರನ್ನು ಅನಾಥಾಶ್ರಮಕ್ಕೆ ಸೇರಿಸುವುದೇ ಉತ್ತಮ ಎಂದುಕೊಂಡಳು. ತನ್ನ ತೀರ್ಮಾನದಂತೆ ಸಂಬಂಧಿಕರೊಡಗೂಡಿ ಅನಾಥಾಲಯದ ಮುಖ್ಯಸ್ಥರನ್ನು ಭೇಟಿ ಮಾಡಿ ಮೂವರು ಮಕ್ಕಳನ್ನು ಅನಾಥಾಲಯಕ್ಕೆ ಸೇರಿಸಿದಳು.

ವಿವಾಹ ಎನ್ನುವುದೇ ಅವಳಿಗೆ ಭಯಾನಕ ಸ್ವಪ್ನದಂತೆ ಅನಿಸಿತು. ಹಾಗಾಗಿ ಎರಡನೇ ವಿವಾಹದ ಬಗ್ಗೆ ಯೋಚಿಸಲು ಅವಳ ಮನಸ್ಸು ಹಿಂಜರಿಯಿತು. ವಿವಾಹ ಮಾಡಿಕೊಳ್ಳದೆ ತಾನು ಹೀಗೆ ಒಂಟಿಯಾಗಿಯೇ ಇರುವುದು ಅವಳಿಗೆ ಸೂಕ್ತ ಎನಿಸಿತು. ಮಕ್ಕಳನ್ನು ಅನಾಥಾಲಯಕ್ಕೆ ಸೇರಿಸಿದ ನಂತರ ಅವಳು ಒಂದು ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಳು. ಬೆಳಗ್ಗೆ ತನ್ನ ಪುಟ್ಟ ಮಗುವಿಗೆ ಹೊಟ್ಟೆ ತುಂಬ ಎದೆಹಾಲನ್ನು ಕುಡಿಸಿ ಸೀರೆಯ ಜೋಲಿಯಲ್ಲಿ ಮಗುವನ್ನು ಮಲಗಿಸಿ ಕೆಲಸಕ್ಕೆ ಹೋಗುತ್ತಿದ್ದಳು. ಸಂಜೆ ಮನೆಗೆ ಬಂದು ನೋಡಿದಾಗ ಮಗು ಅತ್ತು ಸಾಕಾಗಿ ನಿತ್ರಾಣವಾಗಿ ಮಲಗಿರುತ್ತಿತ್ತು. ತನ್ನ ಮಗುವಿನ ಈ ಸ್ಥಿತಿಯನ್ನು ಕಂಡು ಮನಸ್ಸಿಗೆ ಅತೀವ ವೇದನೆ ಆಗುತ್ತಿತ್ತು. ಆದರೂ ಅವಳಿಗೆ ಬೇರೆ ದಾರಿ ಇರಲಿಲ್ಲ. ಹೇಗಾದರೂ ಬದುಕನ್ನು ಸಾಗಿಸಲೇಬೇಕಿತ್ತು. ಹೀಗೆ ಇರುವಾಗ ಒಂದು ದಿನ ಸುಮತಿಯು ಎಂದಿನಂತೆ ಮಗುವಿಗೆ ಹೊಟ್ಟೆ ತುಂಬ ಹಾಲನ್ನು ಕೊಟ್ಟು ಸೀರೆಯ ಜೋಲಿಯಲ್ಲಿ ಮಲಗಿಸಿ ಕೂಲಿ ಕೆಲಸಕ್ಕೆ ಹೋಗಿದ್ದಳು. ಸಂಜೆ ಕೆಲಸ ಬಿಟ್ಟು ಬರುವಾಗ ಅದೇಕೋ ಅವಳ ಎದೆ ಡವಡವ ಎಂದು ಹೊಡೆದುಕೊಳ್ಳುತ್ತಿತ್ತು. ಮನಸ್ಸಲ್ಲಿ ಏನೋ ಆತಂಕ ಹಾಗಾಗಿ ಓಡೋಡಿ ಮನೆಯ ಕಡೆಗೆ ಬಂದಳು. ಬಾಗಿಲ ಬೀಗವನ್ನು ತೆರೆದು ಒಳಗೆ ನೋಡಿದಾಗ ಜೋಲಿಯಲ್ಲಿ ಮಲಗಿದ್ದ ಮಗು ಕಾಣಲಿಲ್ಲ. ಮಗು ಸಣ್ಣದಾಗಿ ನರಳುತ್ತಿರುವುದು ಕೇಳಿಸುತ್ತಿತ್ತು. ನರಳುವಿಕೆಯ ಸದ್ದು ಕೇಳಿದಡೆಗೆ ನೋಡಿದಳು. ಆ ಪುಟ್ಟ ಮಗು ಜೋಲಿಯಿಂದ ಕೆಳಗೆ ಬಿದ್ದು ಕೆಳಗೆ ಹರಿದಿದ್ದ ತನ್ನ ಉಚ್ಚೆಯಲ್ಲಿಯೇ ಒದ್ದಾಡಿ ಮುಖವೆಲ್ಲ ಮಣ್ಣುಮೆತ್ತಿತ್ತು. ಮೂಗಿನ ಹೊಳ್ಳೆಯಲ್ಲಿ ಕೂಡಾ ಮಣ್ಣು ಸೇರಿ ಉಸಿರಾಡಲು ಕಷ್ಟಪಟ್ಟು ನರಳುತ್ತಿತ್ತು. 

ತನ್ನ ಹಸುಗೂಸಿನ ಹೃದಯವಿದ್ರಾವಕ ಸ್ಥಿತಿಯನ್ನು ಕಂಡು ಸುಮತಿಗೆ ಹೃದಯವೇ ಒಡೆದು ಹೋಗುವಷ್ಟು ಸಂಕಟವಾಯಿತು. ಕೂಡಲೇ ಓಡಿಹೋಗಿ ಆ ಹಸುಗೂಸನ್ನು

ಎತ್ತಿಕೊಂಡು ಎದೆಗೆ ಆನಿಸಿಕೊಂಡು ಬಾಯಿ ತೆರೆದು ಜೋರಾಗಿ ಬಿಟ್ಟಳು. ತನ್ನ ಭಾವುಕತೆಯನ್ನು ಬದಿಗೊತ್ತಿ ಬೇಗ ತಣ್ಣೀರಿನಿಂದಲೇ ಆ ಪುಟ್ಟ ಮಗುವಿನ ಮುಖ ತೊಳೆದಳು. ಸೌದೆಯ ಒಲೆ ಹಚ್ಚಿ ಸಣ್ಣ ಪಾತ್ರೆಯಲ್ಲಿ ಸ್ವಲ್ಪ ಬಿಸಿ ನೀರು ಕಾಯಿಸಿ ಮಗುವನ್ನು ಸ್ನಾನ ಮಾಡಿಸಿದಳು. ಆದರೂ ಅವಳ ಅಳು ನಿಲ್ಲಲಿಲ್ಲ ಬಿಕ್ಕಿ ಬಿಕ್ಕಿ ಅಳುತ್ತಲೇ ತನ್ನ ಇಂದಿನ ಸ್ಥಿತಿಯನ್ನು ನೆನೆದು ರೋಧಿಸಿದಳು. ಇತ್ತ ತನ್ನ ಇನ್ನುಳಿದ ಮೂವರು ಮಕ್ಕಳು ಜೊತೆಗಿಲ್ಲ ಅವರು ಯಾವ ಸ್ಥಿತಿಯಲ್ಲಿ ಇರುವವರೋ, ಇಲ್ಲಿ ನೋಡಿದರೆ ಈ ಪುಟ್ಟ ಹಸುಗೂಸನ್ನು ಒಂಟಿಯಾಗಿ ಜೋಲಿಯಲ್ಲಿ ಮಲಗಿಸಿ ಬೆಳಗಿನಿಂದ ಸಂಜೆವರೆಗೂ ಮನೆಯಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ಹೋಗುವ ಅನಿವಾರ್ಯ ಪರಿಸ್ಥಿತಿ ತನ್ನದು. ಹುಟ್ಟಿದ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಾಗದ ತನ್ನ ತಾಯ್ತನವನ್ನು ಶಪಿಸಿದಳು. ಮಕ್ಕಳನ್ನು ನೆನೆದಾಗೆಲ್ಲ ನೋಡುವ ಬಯಕೆ ಆಗುತ್ತಿತ್ತು. ಆದರೆ ಅನಾಥಾಶ್ರಮದ ನಿಯಮದ ಪ್ರಕಾರ ಆಗಾಗ ಅಲ್ಲಿ ಹೋಗಿ ಮಕ್ಕಳನ್ನು ಭೇಟಿಯಾಗುವಂತೆ ಇರಲಿಲ್ಲ. ಏಕೆಂದರೆ ಆಶ್ರಮದ ವಾತಾವರಣಕ್ಕೆ ಹೊಂದಿಕೊಂಡು ಹೋಗುತ್ತಿದ್ದ ಮಕ್ಕಳು ಪುನಃ ಎಲ್ಲಿ ತಾಯಿಯನ್ನು ನೋಡಿ ಮನಸ್ಸನ್ನು ಬದಲಿಸುವರು ಎನ್ನುವ ಆತಂಕ. ಹಾಗಾಗಿ ಮನಸ್ಸನ್ನು ಕಲ್ಲು ಮಾಡಿಕೊಂಡು ಪರಿಸ್ಥಿತಿಗೆ ಹೊಂದಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಳು. ಆದರೂ ಸುಮತಿ ಮತ್ತೊಮ್ಮೆ ಅಪ್ಪನ ಮನೆಗೆ ಹೋಗಿ ವಾಸಿಸುವ ಮನಸ್ಸು ಮಾಡಲಿಲ್ಲ. ಹೀಗೆ ಕೆಲವು ದಿನಗಳು ಉರುಳಿದವು. 

ಅಪರೂಪಕ್ಕೊಮ್ಮೆ ದಿನಸಿ ಹಾಗೂ ತರಕಾರಿಗಳನ್ನು ಖರೀದಿಸಲು ಸಕಲೇಶಪುರದ ಸಂತೆಗೆ ಹೋಗುವಾಗ ಮಕ್ಕಳನ್ನು ನೋಡುವ ಅವಕಾಶ ಸುಮತಿಗೆ ದೊರಕುತ್ತಿತ್ತು. ಹಿರಿಯ ಮಗಳಿಗೆ ಅಮ್ಮನ ಸ್ಥಿತಿ ಸ್ವಲ್ಪವಾದರೂ ಅರ್ಥವಾಗುತ್ತಿದ್ದ ಕಾರಣ ಅವಳು ಅಮ್ಮನನ್ನು ಏನೂ ಕೇಳುತ್ತಿರಲಿಲ್ಲ. ಆದರೆ ಇನ್ನುಳಿದ ಇಬ್ಬರು, ಒಂದು ಐದು ವರ್ಷದ್ದು ಹಾಗೂ ಇನ್ನೊಂದು ಎರಡೂವರೆ ವರ್ಷದ ಪುಟ್ಟ ಮಗು. ಅವರಿಗೆ ತಾವೇಕೆ ಇಲ್ಲಿದ್ದೇವೆ ಎನ್ನುವ ಅರಿವು ಇರುತ್ತಿರಲಿಲ್ಲ. ಅಮ್ಮ ತಮ್ಮನ್ನು ನೋಡಲು ಬರುತ್ತಿದ್ದಾಗೆಲ್ಲಾ ನಮ್ಮನ್ನು ಜೊತೆಗೆ ಮನೆಗೆ ಕರೆದುಕೊಂಡು ಹೋಗು ಎಂದು ದಂಬಾಲು ಬೀಳುತ್ತಿದ್ದರು. ಆಗೆಲ್ಲಾ ಸುಮತಿಯ ಮನಸ್ಸು ಬಹಳ ನೊಂದುಕೊಳ್ಳುತ್ತಿತ್ತು. ಆದರೂ ಮಕ್ಕಳಿಗೆ ಏನಾದರೂ ಸಿಹಿ ತಿಂಡಿಗಳನ್ನು ತಂದುಕೊಟ್ಟು ಇನ್ನೊಮ್ಮೆ ಬಂದಾಗ ಕರೆದುಕೊಂಡು ಹೋಗುವೆ ಎಂದು ಸಮಾಧಾನ ಪಡಿಸುತ್ತಿದ್ದಳು. ಅಮ್ಮನ ಮಾತನ್ನು ಕೇಳಿದಾಗ ಆ ಪುಟ್ಟ ಮಕ್ಕಳಿಬ್ಬರು ಮನಸ್ಸಿಲ್ಲದ ಮನಸ್ಸಿನಿಂದ ತಲೆ ಆಡಿಸಿ ಸುಮ್ಮನಾಗುತ್ತಿದ್ದರು. ಭಾರವಾದ ಮನಸ್ಸನ್ನು ಹೊತ್ತು ಸುಮತಿಯು ಮಕ್ಕಳಿಂದ ಬೇರ್ಪಟ್ಟು ಮನೆಗೆ ತೆರಳುತ್ತಿದ್ದಳು. ನಾಲ್ಕನೇ ಮಗು ಸ್ವಲ್ಪ ದೊಡ್ಡದಾಯಿತು. ಅಂದಿನ ಆ ಘಟನೆಯ ನಂತರ ಸುಮತಿ ತನ್ನ ಮಗುವನ್ನು ಬೆನ್ನಿಗೆ ಕಟ್ಟಿಕೊಂಡೇ ಕೂಲಿ ಕೆಲಸಕ್ಕೆಹೋಗುತ್ತಿದ್ದಳು. ಕಾಲಚಕ್ರದ ನಡುವೆ ಸಿಲುಕಿ ತಾಯಿ ಮಕ್ಕಳ ಜೀವನ ಅಗಲಿಕೆಯ ನೋವಿನ ಜೊತೆ ಸಾಗುತ್ತಿತ್ತು. ಯಾಂತ್ರಿಕ ಜೀವನಕ್ಕೆ ಸುಮತಿ ಹಾಗೂ ಮಕ್ಕಳು ಬಹುತೇಕ ಹೊಂದಿಕೊಂಡರು. ಹೇಗಿದ್ದರೂ ಅವರ ಜೀವನದ ರಥ ಸಾಗಲೇ ಬೇಕಿತ್ತು


Leave a Reply

Back To Top