ರಾಜು ಪವಾರ್ ಅವರ ಕವಿತೆ-ಮಣ್ಣಿನ ಬಣ್ಣ

ಕಣ್ಣು ಹಾಯಿಸಿದಷ್ಟೂ ನಾನಾ ಬಣ್ಣ
ಹಗಲು ರಾತ್ರಿಗಳ ಕನಸಿನ ಬಣ್ಣ
ಜಗತ್ತು ಬಣ್ಣದ ಬದುಕಿಗೆ ಹಾತೊರೆಯುತ್ತಿದೆ
ಮಣ್ಣಿನ ಬಣ್ಣಕ್ಕೆ ಮೂಗು ಮೂರಿಯುತ್ತಿದೆ !

ರೈತನಿಗೆ ಹಗಲು-ರಾತ್ರಿ ಒಂದೇ ಪ್ರಕೃತಿ ಬಣ್ಣ
ಕನಸಲ್ಲೂ ಕಾಡುವುದು ಚಿಗುರೆಲೆಗಳ ಹಸಿರು ಬಣ್ಣ
ಕೆಂಪು,ಹಳದಿ,ಗುಲಾಬಿ ಹೂಗಳ ತಾಜಾ ಬಣ್ಣ
ರೈತ ಮಿಂದಿಹನು ಮಣ್ಣಿನ ಬಣ್ಣ !

ರೈತ ತಾನು ಮಣ್ಣಲ್ಲಿ ಮಿಂದು
ಜಗಕ್ಕೆ ಕೊಡುವನು ನಾನಾ ಬಣ್ಣ
ಹೆಜ್ಜೆ ಹೆಜ್ಜೆಗೂ ಬಣ್ಣಗಳಿಗೆ ಬಣ್ಣ ಬಳಿವ ನಾವು
ಮಲೀನ ಮನದ ಮೈಥುನಕ್ಕೆ ಬಣ್ಣಗಳ ಮಲೀನ ಮಾಡುವೇವು !

ರೈತ ತಾನೆಂದೂ ಬಣ್ಣಕ್ಕೆ ಮಾರುಹೋಗಿಲ್ಲ
ತನು ಮನವೂ ಮಣ್ಣಿನ ಬಣ್ಣ
ಮಣ್ಣಿನ ಬಣ್ಣಕ್ಕೆ ಮೂಗು ಮುರಿಯುವ ನಾವು
ಮಣ್ಣಿನ ಬಣ್ಣದಲ್ಲಿ ಮುಕ್ತಿ ಕಾಣುವುದನ್ನು ಮರೆಯುವೆವು !!


Leave a Reply

Back To Top