ಯುಗದ ಕವಿ ಜಗದ ಕವಿ …ವಿಶ್ವ ಮಾನವ ರಸಋಷಿ ಕುವೆಂಪು ( ಡಿಸೆಂಬರ್ 29ರ ವಿಶ್ವಮಾನವ ದಿನಾಚರಣೆ ನಿಮಿತ್ತ) ವಿಶೇಷ ಬರಹ-ವೀಣಾ ಹೇಮಂತ್‌ ಗೌಡ ಪಾಟೀಲ್

 ವರ್ಷಗಳ ಹಿಂದೆ ಎಲ್ಲೋ ಓದಿದ ನೆನಪು. ಒಂದೇ ಮನೆಯ ಇಬ್ಬರು ಸಾಹಿತಿ ಸಹೋದರರ ನಡುವೆ ನಡೆದ ಮಾತುಕತೆ. ಅದು ಮಧ್ಯಾಹ್ನದ ಊಟದ ಸಮಯ. ಆ ಮನೆಯ ಯಜಮಾನರು ಅತ್ಯಂತ ವಯೋ ವೃದ್ಧರೂ, ಜ್ಞಾನ ವೃದ್ಧರೂ ಆಗಿದ್ದು ತನ್ನ ಇನ್ನೋರ್ವ ಬರಹಗಾರ ಸಹೋದರನನ್ನು ಕುರಿತು ಶ್ರೀ ರಾಮಾಯಣ ದರ್ಶನಂ ಬರೆದ ಕುವೆಂಪು ಅವರು ಬ್ರಾಹ್ಮಣರು ಇರಬೇಕಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಆ ಕಿರಿಯ ಸಹೋದರ ಇದ್ದರೂ ಇರಬಹುದು ಅಣ್ಣ ಎಂದು ಹೇಳಿದರು. ಆಗ ಅವರೊಂದಿಗೆ ಊಟಕ್ಕೆ ಕುಳಿತಿದ್ದ ಇನ್ನೋರ್ವರು ದಿಗ್ಭ್ರಮೆಯಿಂದ ತಲೆಯೆತ್ತಿ ನೋಡಿದರು. ಅವರನ್ನು ಕಣ್ಣಲ್ಲಿಯೇ ಸಮಾಧಾನಿಸಿದ ಕಿರಿಯ ಸಹೋದರ ಊಟವಾದ ನಂತರ ಹೊರಗೆ ಕರೆದೊಯ್ದರು. ನಿಮ್ಮ ಅನುಮಾನ ನಿಜ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ರಚಿಸಿದ  ಕುವೆಂಪು ಅವರು ಬ್ರಾಹ್ಮಣರು ಎಂದು ಅಣ್ಣನವರೊಂದಿಗೆ ನಾನು ಹೇಳಿದ್ದು ತಪ್ಪು… ಆದರೆ ಈ ವಯಸ್ಸಿನಲ್ಲಿ ಅಣ್ಣನವರು ಅಂತಹ ಮಹಾಕಾವ್ಯವನ್ನು ಬ್ರಾಹ್ಮಣರು ಮಾತ್ರ ಬರೆಯಲು ಸಾಧ್ಯ ಎಂಬ ತಿಳುವಳಿಕೆಯನ್ನು ಅಲ್ಲಗಾಣಿಸುವ ಅವಶ್ಯಕತೆ ನನಗೆ ತೋರಲಿಲ್ಲ. ನೀವೇ ಹೇಳಿ ಕುವೆಂಪು ಅವರು ಯಾವ ಬ್ರಾಹ್ಮಣರಿಗಿಂತ, ಯಾವ ಮಹಾಜ್ಞಾನಿಗಿಂತ ಕಡಿಮೆ ಎಂದು ಉತ್ತರಿಸಿದರು. ಅವರ ಮಾತು ಹದಿನಾರಾಣೆ ಸತ್ಯವಾಗಿತ್ತು ಆದ್ದರಿಂದಲೇ ಅವರ ಸಹೋದ್ಯೋಗಿ ಸುಮ್ಮನೆ ತಲೆ ಆಡಿಸಿದರು. ಇಷ್ಟು ಸಾಕಲ್ಲವೇ  ವಿಶ್ವಮಾನವ ಖ್ಯಾತಿಯ ಯುಗದ ಕವಿ ಜಗದ ಕವಿ ಎಂದು ಕರೆಯಲ್ಪಟ್ಟ,  ರಾಷ್ಟ್ರಕವಿ, ರಸ ಋಷಿ, ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರ ಕುರಿತು ಹೇಳಲು.

 ಕುಪ್ಪಳ್ಳಿಯ ವೆಂಕಟಪ್ಪನವರ ಮಗ ಪುಟ್ಟಪ್ಪ ಕುವೆಂಪು ಎಂಬ ಕಾವ್ಯನಾಮದಿಂದ ಜಗದ್ವಿಖ್ಯಾತಿ ಹೊಂದಿದರು.ಕುವೆಂಪು ಅವರ ಮೂಲ ಹೆಸರು ಪುಟ್ಟಪ್ಪ. ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ಹುಟ್ಟಿದ್ದು ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ. 1904 ಡಿಸೆಂಬರ್ 29ರಂದು. ಕುವೆಂಪು ಅವರ ಬಾಲ್ಯದ ದಿನಗಳನ್ನು  ಅವರ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಕಳೆದರು .  ಮಲೆನಾಡಿನ ಸಿರಿ ಸೊಬಗನ್ನು ಹೊಂದಿದ್ದ ಕಾಡು ಬೆಟ್ಟ ಗುಡ್ಡಗಳು ಹಸಿರ ಸಿರಿ ಕುವೆಂಪು ಅವರ ಬಾಲ್ಯವನ್ನು ಸಮೃದ್ಧವಾಗಿಸಿದ್ದವು.

ಪ್ರಾಥಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ಪೂರೈಸಿ ಪ್ರೌಢಶಾಲಾ ಶಿಕ್ಷಣದಿಂದ ಹಿಡಿದು ಎಂ.ಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು.ಮಹಾರಾಜ ಕಾಲೇಜಿನಲ್ಲಿ ಎಂ ಎ ಮಾಡಿದರು. ತಳುಕಿನ ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು. ಇವರು ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿಯಲ್ಲಿ ಕನ್ನಡದ ಪ್ರಾಧ್ಯಾಪಕರಾಗಿ, ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿ  ವಿಶ್ವವಿದ್ಯಾಲಯವನ್ನು ಅಧ್ಯಯನಾಂಗ, ಸಂಶೋಧನಾ0ಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಪ್ರಾರಂಭಿಸಿದರು.

ಕನ್ನಡದ ಎರಡನೆಯ ರಾಷ್ಟ್ರಕವಿ , ಜ್ಞಾನಪೀಠ ಪ್ರಶಸ್ತಿಯನ್ನು,  ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಕೊಡಮಾಡುವ ಕರ್ನಾಟಕ ರತ್ನ, ಹಾಗೂ ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು.ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾವರು.

1937 ಎಪ್ರಿಲ್ 30 ರಂದು ಹೇಮಾವತಿಯವರನ್ನು ಕೈ ಹಿಡಿದರು..ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯ ಚೈತ್ರ ಎಂಬ ಪುತ್ರರು, ಇಂದುಕಲಾ ಮತ್ತು ತಾರಿಣಿ ಎಂಬ ಇಬ್ಬರು ಪುತ್ರಿಯರನ್ನೂ ಪಡೆದಿದ್ದರು.ಮೈಸೂರಿನಲ್ಲಿರುವ ಅವರ ಮನೆಯನ್ನು ಉದಯರವಿ ಎಂದು ಕರೆದರು. ಅವರ ಮಗ ಪೂರ್ಣಚಂದ್ರ ತೇಜಸ್ವಿಯವರೂ ಕೂಡ ಬಹುಮುಖಿಯಾಗಿದ್ದು, ಕನ್ನಡ ಸಾಹಿತ್ಯ, ಅರಣ್ಯ ಮತ್ತು ಪ್ರಾಣಿಗಳ ಸಂರಕ್ಷಣೆ, ಛಾಯಾಗ್ರಹಣ, ಕ್ಯಾಲಿಗ್ರಫಿ, ಡಿಜಿಟಲ್ ಇಮೇಜಿಂಗ್, ಸಾಮಾಜಿಕ ಚಳುವಳಿಗಳು ಮತ್ತು ಕೃಷಿಗೆ ಗಣನೀಯ ಕೊಡುಗೆ ನೀಡಿದರು.
ಅವರ ವಿವಾಹವನ್ನು ಕೂಡ ಕುವೆಂಪು ತಮ್ಮದೇ ಕೊಡುಗೆಯಾದ ಸರಳ ವಿವಾಹ ಪದ್ಧತಿಯಾದ *ಮಂತ್ರ ಮಾಂಗಲ್ಯ*ದ  ಮೂಲಕ ನೆರವೇರಿಸಿದರು.

ಮಹಾರಾಜ ಕಾಲೇಜಿನಲ್ಲಿ  ಕಲಿಯುತ್ತಿರುವಾಗಲೇ ಕುವೆಂಪು ಅವರು ತಮ್ಮ ಮೊಟ್ಟಮೊದಲ ಕವನವನ್ನು ಇಂಗ್ಲೀಷಿನಲ್ಲಿ ರಚಿಸಿದರು. ಆ ರಚನೆಯನ್ನು ತಮ್ಮ ಆಂಗ್ಲ ಪ್ರಾಧ್ಯಾಪಕರಿಗೆ ತೋರಿಸಿದಾಗ ಆ ಪ್ರಾಧ್ಯಾಪಕರು ಮಿಸ್ಟರ್ ಪುಟ್ಟಪ್ಪ ನೀವು ನಿಮ್ಮ ಮಾತೃಭಾಷೆಯಲ್ಲಿಯೇ ಕವನ ರಚಿಸಿ ಎಂದು ತಿಳಿ ಹೇಳಿದರು. ಮುಂದೆ ಕುವೆಂಪು ಅವರು ಸಂಪೂರ್ಣವಾಗಿ ಮಾತೃಭಾಷೆಯಲ್ಲಿಯೇ ಕವನ, ಕಾವ್ಯ, ಗದ್ಯ, ಕಥೆ-ಕಾದಂಬರಿಗಳ ರಚನೆಯನ್ನು ಆರಂಭಿಸಿದರು. ಆ ಆಂಗ್ಲ ಪ್ರಾಧ್ಯಾಪಕರಿಗೆ ಕನ್ನಡ ಸಾಹಿತ್ಯ ಲೋಕ ಯಾವತ್ತೂ ಚಿರಋಣಿ.

ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ರಾಮಾಯಣದ ಮೇರು ಕೃತಿಯಾಗಿ ಜಗತ್ತಿಗೆ ಪರಿಚಿತವಾಗಿದೆ ಅಂತೆಯೇ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಕೃತಿಗಳು ಅವರನ್ನು ವಿಶ್ವ ಲೇಖಕರ ಪಟ್ಟಿಗೆ ಸೇರಿಸುತ್ತವೆ.
‘ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ’ ಮತ್ತು ‘ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’ ಎಂಬ ಗೀತೆಗಳು ಭಾರತಮಾತೆಯ ಮತ್ತು ಕನ್ನಡ ತಾಯಿಯ ಹಿರಿಮೆ ಗರಿಮೆಗಳನ್ನು ಸಾರುತ್ತ ನಮ್ಮಲ್ಲಿ ದೇಶ ಪ್ರೇಮವನ್ನು ಉಕ್ಕಿಸುತ್ತವೆ. ‘ಓ ನನ್ನ ಚೇತನ ಆಗು ನೀ ಅನಿಕೇತನ’ ಎಂಬ ಕವನವಂತು ಮನುಷ್ಯನ ಜೀವನದ ನಿಲುವನ್ನು ಮಾರ್ಮಿಕವಾಗಿ ಸೂಚಿಸುತ್ತದೆ

ಬೆರಳ್ಗೆ ಕೊರಳ್, ಪಕ್ಷಿಕಾಶಿ, ಕೊಳಲು, ಬೊಮ್ಮನಹಳ್ಳಿಯ ಕಿಂದರಿ ಜೋಗಿ,ರಕ್ತಾಕ್ಷೀ, ಶೂದ್ರ ತಪಸ್ವಿ, ಮಲೆನಾಡಿನ ಕಥೆಗಳು, ಶಿಲಾ ತಪಸ್ವಿ, ಸ್ವಾಮಿ ವಿವೇಕಾನಂದ, ಚಿತ್ರಾಂಗದ, ಪಾಂಚಜನ್ಯ, ವಿಚಾರ ಕ್ರಾಂತಿಗೆ ಆಹ್ವಾನ, ಕಬ್ಬಿಗನ ಕೈ ಬುಟ್ಟಿ, ಆಯ್ದ ಕವಿತೆಗಳು
ಮುಂತಾದ ಕೃತಿಗಳು ಯಮನ ಸೋಲು, ಸ್ಮಶಾನ ಕುರುಕ್ಷೇತ್ರ, ಜಲಗಾರ, ಮಹಾಭಾಗ್ಯ ವಾಲ್ಮೀಕಿಯ ಸೋಲು, ಮೋಡಣ್ಣನ ತಮ್ಮ ಗೋಪಾಲ ಎಂಬ ನಾಟಕಗಳು ಅವರ ಸಾಹಿತ್ಯದ  ಉನ್ನತ ಕೃತಿಗಳು. ಆಡು ಮುಟ್ಟದ ಸೊಪ್ಪಿಲ್ಲ ಕುವೆಂಪು ಬರೆಯದ ಸಾಹಿತ್ಯವಿಲ್ಲ ಎಂಬಂತೆ ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಬರೆದಿದ್ದಾರೆ. ಓರ್ವ ಬರಹಗಾರ ತನ್ನ ಕೃತಿಗಳನ್ನು ಬರೆಯುತ್ತಾ, ಅಂತಪ್ರಜ್ಞೆಯಲ್ಲಿ ತಂತಾನೆ ಬೆಳೆಯುತ್ತಾ ಹೋದರೆ ಆತನಲ್ಲಿ ಉಂಟಾಗುವ ವಿಶ್ವಮಾನವ ಪ್ರಜ್ಞೆ ಕುವೆಂಪು ಅವರಲ್ಲಿಯೂ ಬೆಳೆಯಿತು. ಸಾಂಸಾರಿಕವಾಗಿ ಲೌಕಿಕವಾಗಿ ಓರ್ವ ಸಾಮಾನ್ಯ ವ್ಯಕ್ತಿ ಎಂಬಂತೆ ತೋರುತ್ತಿದ್ದ ಕುವೆಂಪು ಅವರು ಅಲೌಕಿಕವಾಗಿ ವಿಶ್ವಮಾನವರಾದರು. ಕುವೆಂಪು ಅವರು ಸ್ವಾಮಿ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮತ್ತು ಸ್ವಾಮಿ ಶ್ರದ್ದಾನಂದರ ಪರಮ ಅನುಯಾಯಿಯಾಗಿದ್ದರು. ತಮ್ಮ ಅತ್ಯುನ್ನತ ಗೌರವದ ಹುದ್ದೆಯ ಹೊರತಾಗಿಯೂ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಅವರ ಸಂಬಂಧ ಸಮಾಜದ ಇನ್ನಿತರ ಸಂಸಾರಿಕ ಜನಗಳಂತೆ ಸಾಮಾನ್ಯವಾಗಿಯೇ ಇತ್ತು. ಅವರೆಂದು ಮಕ್ಕಳನ್ನು ತಮ್ಮ ಅಧಿಕಾರದ ಕಬಂಧ ಬಾಹುಗಳಲ್ಲಿ ಬೆಳೆಸಲಿಲ್ಲ. ಮೈಸೂರಿನ ಮಾನಸ ಗಂಗೋತ್ರಿಯ ಉಪಕುಲಪತಿಯಾಗಿಯೂ ಕೂಡ ಅವರು ಇಡೀ ವಿಶ್ವವಿದ್ಯಾಲಯವನ್ನು 20ನೇ ಶತಮಾನದ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಎಲ್ಲಾ ವಿಧದಲ್ಲಿಯೂ ಬೆಳೆಯುವಂತೆ ಅಭಿವೃದ್ಧಿಪಡಿಸಿದರು. ಅದೇ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರಿಗೆ ಯಾವುದೇ ರೀತಿಯ ಕಟ್ಟುಪಾಡುಗಳನ್ನು ಹಾಕದೆ ಸ್ವತಂತ್ರವಾಗಿ ಬೆಳೆಯಲು ಬಿಟ್ಟರು. ಮೈಸೂರಿನ
ಒಂಟಿಕೊಪ್ಪಲಿನಲ್ಲಿರುವ ತಮ್ಮ ನಿವಾಸ ‘ಉದಯರವಿ’ಯಲ್ಲಿ ನಿರಾತಂಕವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದರು. ಇದನ್ನೇ ಪೂರ್ಣಚಂದ್ರ ತೇಜಸ್ವಿ ಅವರು ಮತ್ತು ಅವರ ಸಹೋದರಿ ತಾರಿಣಿ ಅವರು ‘ ಅಣ್ಣನ ನೆನಪುಗಳು’ ಎಂಬ ತಂದೆಯವರ ಕುರಿತಾದ ಪುಸ್ತಕದಲ್ಲಿ ತಂದೆಯ ಕುರಿತು ಬರೆದಿದ್ದಾರೆ.
1929 ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾಲಯವನ್ನು ಸೇರಿದ ಕುವೆಂಪು ಅವರು 1960ರಿಂದ 1965 ರವರೆಗೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತರಾದರು.


1938 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಅಧ್ಯಕ್ಷರಾಗಿ ಕುವೆಂಪು ಅವರು ಕಾರ್ಯನಿರ್ವಹಿಸಿದರು. 1957 ರಲ್ಲಿ ಧಾರವಾಡದಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಭಾರತ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ (1968) ಪ್ರಶಸ್ತಿಯನ್ನು  ಮಹಾಕಾವ್ಯ ಶ್ರೀ ರಾಮಾಯಣ ದರ್ಶನಕ್ಕೆ ಕೊಡ ಮಾಡಲಾಯಿತು. ಇದು ಕನ್ನಡದ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ. ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್, ರಾಜ್ಯ ಸರಕಾರದ ರಾಷ್ಟ್ರಕವಿ ಪ್ರಶಸ್ತಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗಳು ಕುವೆಂಪು ಅವರ  ಮುಡಿಗೇರಿದ್ದವು. 1988 ರಲ್ಲಿ ನಡೆದ ಪ್ರಪ್ರಥಮ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡ ಅವರು ಉದ್ಘಾಟಿಸಿದ್ದರು.1988 ರಲ್ಲಿ ಪಂಪ ಪ್ರಶಸ್ತಿ 1994 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಗಳು ಕೂಡ ಕುವೆಂಪು ಅವರಿಗೆ ಸಂದವು. 1994ರ ನವೆಂಬರ್ 11ರಂದು ಕುವೆಂಪು ಅವರು ಮರಣ ಹೊಂದಿದರು. ಕನ್ನಡ ಸಾಹಿತ್ಯ ಲೋಕದ ಮೇರು ಶಿಖರದ ಅಧ್ಯಾಯ ತನ್ನ ಅಂತ್ಯವನ್ನು ಕಂಡಿತು. ಕುಪ್ಪಳ್ಳಿಯ ಅವರ ಅತ್ಯಂತ ಪ್ರೀತಿ ಪಾತ್ರವಾದ ಕವಿಶೈಲದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಿತು.ಕುವೆಂಪು ಅವರ ಹುಟ್ಟೂರಿನ ಮನೆಯನ್ನು ಕವಿಮನೆ ಸ್ಮಾರಕ ಭವನವನ್ನಾಗಿ ಕರ್ನಾಟಕ ಸರ್ಕಾರ ಘೋಷಿಸಿ ಅಲ್ಲಿ ಕುವೆಂಪು ಅವರಿಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನು ಪುಸ್ತಕಗಳನ್ನು ಸಂಗ್ರಹಿಸಿ ಇಡಲಾಗಿದೆ.1995 ರಲ್ಲಿ ನಾಡೋಜ ಪ್ರಶಸ್ತಿಯನ್ನು ಕೂಡ ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಶಿವಮೊಗ್ಗದ ಬಳಿ ಇರುವ ವಿಶ್ವವಿದ್ಯಾಲಯಕ್ಕೆ ಕುವೆಂಪು ಅವರ ಹೆಸರನ್ನು ಇಡಲಾಗಿದೆ. ಅಂತೆಯೇ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಹೆಸರು ಇಡಲಾಗಿದೆ.

ಯಾವುದೇ ವಸ್ತು ವಿಷಯಗಳು ಆಯಾ ಕಾಲಕ್ಕೆ ಮಾತ್ರ ಸೀಮಿತವಾಗಿದ್ದು ಕಾಲಾಂತರದಲ್ಲಿ ಅವುಗಳ ಆಶಯಗಳು ಬದಲಾಗಬಹುದು… ಇಂತಹ ಆಶ್ರಯ ಅನಿಸಿಕೆಗಳನ್ನು ಕುವೆಂಪು ಅವರು ತಮ್ಮ ಶೂದ್ರ ತಪಸ್ವಿ ಮತ್ತು ಜಲಗಾರ ನಾಟಕಗಳಲ್ಲಿ ತೋರ್ಪಡಿಸಿದರು.
ಅಂತೆಯೇ ಕುವೆಂಪು ಅವರನ್ನು ಕುರಿತು ಇನ್ನೋರ್ವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಅಂಬಿಕಾತನಯದತ್ತ ಕಾವ್ಯನಾಮದಿಂದ ಜಗದ್ವಿಖ್ಯಾತಿ ಹೊಂದಿದ ದ.ರಾ.ಬೇಂದ್ರೆ ಅವರು ‘ಯುಗದ ಕವಿ ಜಗದ ಕವಿ’ ಎಂದು ಬಣ್ಣಿಸಿದರು. ದಲಿತ ಮತ್ತು ಹಿಂದುಳಿದವರ ಬಂಡಾಯಕ್ಕೆ ಕುವೆಂಪು ಸ್ಪೂರ್ತಿದಾಯಕ ರಾಗಿದ್ದರು. ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿಯನ್ನು ಅವರು ಜನರಿಗೆ ಪರಿಚಯಿಸಿದರು. 19ನೇ ಶತಮಾನದ ಉತ್ತರಾರ್ಧದಲ್ಲಿ ಮಹಾಕಾವ್ಯವನ್ನು ಮತ್ತೆ ಮರಳಿ ಕನ್ನಡ ಸಾಹಿತ್ಯ ಲೋಕಕ್ಕೆ ದೊರಕಿಸಿಕೊಟ್ಟ ಯುಗ ಪ್ರವರ್ತಕರಾಗಿ ಕುವೆಂಪು ಹೊರಹೊಮ್ಮಿದರು.
ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ ‘ರಾಮಾಯಣ ದರ್ಶನಂ’ ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ ‘ರಸೋ ವೈ ಸಃ’ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು ಕುವೆಂಪು ಎಂಬುದು ಅವರ ಸಮಕಾಲೀನ ಕವಿಗಳ ಅಭಿಪ್ರಾಯ.

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು “ಜಾತಿ,ಮತ”ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.
ಅಂತೆಯೇ ಅವರ ಕವನ
 ‘ಓ ನನ್ನ ಚೇತನ ಆಗು ನೀ ಅನಿಕೇತನ’ ದಲ್ಲಿ ಅವರು ನೂರಾರು ಮತದ ಪೊಳ್ಳು ಸಿದ್ದಾಂತಗಳನ್ನು ತೂರಿ, ಎಲ್ಲಾ ತತ್ವಗಳ ಎಲ್ಲೆಗಳನ್ನು ಮೀರಿ ಮನುಷ್ಯ ಬೆಳೆಯಬೇಕೆಂದು ಆಶಿಸಿದರು. ಯಾವುದೇ ಹಂತದಲ್ಲಿಯೂ ಮನುಷ್ಯನ ಚಿಂತನಾ ಲಹರಿ ನಿಲ್ಲದಿರಲಿ ಕೊನೆಯನ್ನು ಮುಟ್ಟದಿರಲಿ ಸತತವಾಗಿ ಅನ್ವೇಷಣೆಯ ಹಾದಿಯಲ್ಲಿ ಸಾಗಲಿ ಎಂಬುದು ಅವರ ಆಶಯವಾಗಿತ್ತು. ಅನಂತ ಮತ್ತು ಅಗಣಿತ ಹಾದಿಯಲ್ಲಿ ತಾನು ಅನಂತನಾಗಿ ಮನುಷ್ಯ ವಿಶ್ವಮಾನವತೆಯಲ್ಲಿ ಒಂದಾಗಲಿ ವಿಶ್ವ ಕುಟುಂಬಿಯಾಗಲಿ
‘ ವಸುದೈವ ಕುಟುಂಬಕಂ’ ಎಂಬಂತೆ ಬಾಳಿ ಬದುಕಲಿ ಎಂಬ ಉನ್ನತ ಆಶಯವನ್ನು ಅವರು ಹೊಂದಿದ್ದರು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಕುವೆಂಪು ಅವರ ಆಶಯದಲ್ಲಿ ವಿಜ್ಞಾನಿ ರೈತ ಲೇಖಕ ಸೈನಿಕ ಎಲ್ಲರೂ ಒಂದೇ. ತಮ್ಮ ಬರಹದ ಮೂಲಕ ಅಂಬೇಡ್ಕರ್ ಗಾಂಧಿ ಮತ್ತು ಲೋಹಿಯಾ ಅವರನ್ನು ಕನ್ನಡಕ್ಕೆ ಕರೆತಂದವರು ಕುವೆಂಪು. ನೇಗಿಲ ಮೇಲೆ ನಿಂತಿದೆ ಧರ್ಮ ಎಂದು ಉಳುವಾ ಯೋಗಿಯ ನೋಡಲ್ಲಿ ಎಂಬ ರೈತ ಗೀತೆಯಲ್ಲಿ ಹೇಳುತ್ತಾ ಭಾರತದ ಶ್ರಮ ಸಂಸ್ಕೃತಿಯನ್ನು ಬಿಂಬಿಸಿದವರು ಕುವೆಂಪು. ಬಂಗಾಳದಲ್ಲಿ ರವೀಂದ್ರನಾಥ ಟ್ಯಾಗೂರರನ್ನು ಹೊರತುಪಡಿಸಿದರೆ ಒಂದು ಇಡೀ ಶತಮಾನವನ್ನು ತಮ್ಮ ಬರಹದ ಮೂಲಕ ಬದಲಾಯಿಸಿದ ಏಕೈಕ ವ್ಯಕ್ತಿ ಕುವೆಂಪು.

 ಅಂತೆಯೇ 2015 ನೇ ಇಸ್ವಿಯಿಂದ ಕರ್ನಾಟಕ ಘನ ಸರ್ಕಾರವು ಅವರ ಹುಟ್ಟಿದ ದಿನ ಡಿಸೆಂಬರ್ 29 ನ್ನು ವಿಶ್ವಮಾನವ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇದು ಕನ್ನಡದ ರಸಋಷಿ, ರಾಷ್ಟ್ರಕವಿ ಕುವೆಂಪು ಅವರಿಗೆ ಸಂದ ಮತ್ತೊಂದು ಗೌರವ.
ಎಲ್ಲರಿಗೂ ವಿಶ್ವಮಾನವ ದಿನಾಚರಣೆಯ ಶುಭಾಶಯಗಳು


Leave a Reply