ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ರಾಷ್ಟ್ರಮಟ್ಟದ
ಮಹಿಳಾ ಸಾಧಕಿಯಾಗಿ
ಗುರುತಿಸಿಕೊಂಡ
ಭದ್ರಾವತಿಯ ಲಕ್ಷ್ಮಿ ಟೀಚರ್
ಅದೊಂದು ಮೂರು ದಿನದ ನಾಟಕೋತ್ಸವ ಕಾರ್ಯಕ್ರಮ…. ಆ ಮೂರು ದಿನವು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ ಆಕೆ ತನ್ನ ಅಭಿನಯದ ಗಟ್ಟಿಗಾರಿಕೆಯನ್ನು, ಆಂಗಿಕ ಹಾವ ಭಾವ, ಧ್ವನಿಯ ಏರಿಳಿತಗಳ ಮೂಲಕ ವೈವಿಧ್ಯಮಯವಾಗಿ ಪ್ರದರ್ಶಿಸಿ ಸ್ವತಹ ಮಲ್ಲಿಕಾರ್ಜುನ ಸ್ವಾಮಿಗಳ ಪ್ರಶಂಸೆಗೆ ಪಾತ್ರರಾಗಿದ್ದಳು.
ಆಕೆ ಮೊದಲ ದಿನ ಅಕ್ಕಮಹಾದೇವಿಯ ಪಾತ್ರಕ್ಕೆ ನ್ಯಾಯ ಒದಗಿಸಿದರೆ ಎರಡನೇ ದಿನ ಮಹಾಭಾರತದ ಅಂಬೆಯ ಪಾತ್ರದಲ್ಲಿ ಆಕೆಗಾದ ಅವಮಾನ ಅನ್ಯಾಯ ನೋವು ಅಸಹಾಯಕತೆಗಳನ್ನು ಭಾವಪೂರ್ಣ ಅಭಿನಯದ ಮೂಲಕ ನಿರ್ವಹಿಸಿದರು.ಮೂರನೇ ದಿನ ಕೆಳದಿ ಚೆನ್ನಮ್ಮನ ಪಾತ್ರದಲ್ಲಿ ವಿರೋಚಿತವಾದ, ಗಟ್ಟಿತನದ ಕ್ಷಾತ್ರ ತೇಜಸ್ಸನ್ನು ತಮ್ಮ ಅಭಿನಯದಲ್ಲಿ ಮಿಳಿತಗೊಳಿಸಿ ಎಲ್ಲ ಜನರ ಮೆಚ್ಚುಗೆ ಗಳಿಸಿದ್ದಾರೆ.
ಯಾವುದೇ ರೀತಿಯ ಕಲಿಕಾ ತರಬೇತಿ ಇಲ್ಲದೆ ಇದ್ದಾಗ್ಲೂ ಕೂಡ ತಮ್ಮ ನಟನಾ ಪ್ರತಿಭೆ ಮತ್ತು ಭಾವಾಭಿನಯದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿಸುವ ಲಕ್ಷ್ಮಿ ಅವರ ಕಂಠಸಿರಿ ಕೂಡ ಅತ್ಯದ್ಭುತವಾಗಿದೆ. ಮುಖ್ಯ ಪಾತ್ರಗಳನ್ನು ಅಭಿನಯಿಸುವ ಅವರು ಇಡೀ ನಾಟಕದ ಹೊಣೆಗಾರಿಕೆಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸಮರ್ಥವಾಗಿ ನಿಭಾಯಿಸುತ್ತಾರೆ.ಆಕೆಯೇ ಸಿರಿಗೆರೆಯ ಲಕ್ಷ್ಮಿ ಟೀಚರ್.
ಶಿವಮೊಗ್ಗ ಜಿಲ್ಲೆಯ ಸಿರಿಗೆರೆಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿರುವ ಶ್ರೀಮತಿ ಲಕ್ಷ್ಮಿ ಅವರು ಬಹುಮುಖ ಪ್ರತಿಭೆಯನ್ನು ಹೊಂದಿದ ವ್ಯಕ್ತಿ.
ರಂಗಭೂಮಿಯ ಹವ್ಯಾಸಿ ಕಲಾವಿದೆ, ಮಕ್ಕಳ ಪ್ರೀತಿಯ ಶಿಕ್ಷಕಿ, ಒಳ್ಳೆಯ ನೃತ್ಯಪಟು ಮತ್ತು ಉತ್ತಮ ವಾಗ್ಮಿಯೂ ಆಗಿರುವ ಲಕ್ಷ್ಮಿ ಅವರು ಇತ್ತೀಚಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ನಟಿ (siwaa) ಪ್ರಶಸ್ತಿಯನ್ನು ಪಡೆದಿದ್ದು ಅತ್ಯಂತ ಸಂತಸದ ಸಂಗತಿಯಾಗಿದೆ.
ಭದ್ರಾವತಿಯ ಶಿವಣ್ಣ ಮತ್ತು ಸುಂದರಮ್ಮ ದಂಪತಿಗಳ ಮಗಳಾಗಿರುವ ಲಕ್ಷ್ಮೀ ಬಾಲ್ಯದಿಂದಲೂ ಕ್ರೀಡೆ, ನೃತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಕಲೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು.
ತನ್ನ ವೃತ್ತಿಯ ಜೊತೆಗೆ ರಂಗ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದ ಮತ್ತು ಭಜನಾ ಮಂಡಳಿಯನ್ನು ಹೊಂದಿದ್ದ ತಂದೆ ಶಿವಣ್ಣನವರು ಮಕ್ಕಳಿಗಾಗಿ ಆಡಿಸುತ್ತಿದ್ದ ಪುಟ್ಟ ನಾಟಕಗಳಿಗೆ ಸಂಭಾಷಣೆಯನ್ನು ಬರೆದುಕೊಡುತ್ತಿದ್ದ ಪುಟ್ಟ ಬಾಲಕಿ ಲಕ್ಷ್ಮಿ ಮೊಟ್ಟ ಮೊದಲ ಬಾರಿಗೆ ವೇದಿಕೆ ಏರಿದ್ದು 9ನೇ ತರಗತಿಯಲ್ಲಿ ಇದ್ದಾಗ ಕುಡುಕನ ಎರಡು ನಿಮಿಷದ ಪಾತ್ರಕ್ಕೆ. ಅಪಾರ ಜನ ಮೆಚ್ಚುಗೆ ಗಳಿಸಿದ ಈ ಪಾತ್ರದ ನಂತರ ಲಕ್ಷ್ಮಿ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.
ಹೆಸರಿನಲ್ಲಿ ಲಕ್ಷ್ಮಿಯಾಗಿರುವ ಈಕೆ ಸರಸ್ವತಿ ಪುತ್ರಿಯೂ ಹೌದು ಎಂದು ಸಾಬೀತುಪಡಿಸಿದ್ದಾರೆ. ಪಿಯುಸಿಯಲ್ಲಿ ಹಿಂದಿ ಭಾಷೆಯಲ್ಲಿ ಮೊದಲ ರಾಂಕ್ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ನಂತರ
ಡಿ ಎಡ್ ಪದವಿಯನ್ನು ಪಡೆದ ಲಕ್ಷ್ಮಿ ಅವರು
2008 ರಲ್ಲಿ ಶಿಕ್ಷಕಿಯಾಗಿ ಆಯ್ಕೆಯಾದರು. ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಲೇ ಕುವೆಂಪು ವಿಶ್ವವಿದ್ಯಾಲಯದಿಂದ ಬಿ ಎ ಪದವಿಯನ್ನು ನಾಲ್ಕನೇ ರಾಂಕ್ ಪಡೆಯುವ ಮೂಲಕ ಗಳಿಸಿದ ಲಕ್ಷ್ಮಿ ಮುಂದೆ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪ್ರಥಮ ರಾಂಕ್ ನಲ್ಲಿ ಎಂ ಎ ಸ್ನಾತಕೋತ್ತರ ಪದವಿ ಪೂರೈಸಿದರು
ಬಹುಮುಖ ಪ್ರತಿಭೆಯ ಲಕ್ಷ್ಮಿ ಹಲವಾರು ಪ್ರಸಿದ್ಧ ವ್ಯಕ್ತಿಗಳ ಕುರಿತು ಲೇಖನಗಳನ್ನು ಬರೆದಿದ್ದು, ಹಲವಡೆ ಉಪನ್ಯಾಸಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಒಳ್ಳೆಯ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ತಮ್ಮ ಶಾಲೆಯ ಮಕ್ಕಳಲ್ಲಿ ಹಾಡು, ನೃತ್ಯ, ನಾಟಕಗಳಲ್ಲಿ ಆಸಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವತಹ ಕೂಚಿಪುಡಿ ನೃತ್ಯ ಪರಿಣತೆಯಾಗಿರುವ ಲಕ್ಷ್ಮಿ ಹವ್ಯಾಸಿ ರಂಗ ಕಲಾವಿದೆಯಾಗಿ ಮಾತೆ ಮಂಡೋದರಿ, ವರದಕ್ಷಿಣೆ,ಭಾಮತಿ, ಕೃಷ್ಣ ಸಂಧಾನ, ಭಾರತಾಂಬೆ, ಚಮ್ಮಾವುಗೆ, ಕೆಳದಿ ಚೆನ್ನಮ್ಮ, ಉಡುತಡಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಹಲವಾರು ನೃತ್ಯಗಳನ್ನು ಸಂಯೋಜಿಸಿರುವ ಇವರು ನಿರೂಪಕಿಯಾಗಿಯೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ತಮ್ಮ ಪಾತ್ರಕ್ಕೆ ಅಲಂಕಾರ ಮತ್ತು ವಸ್ತ್ರ ವಿನ್ಯಾಸವನ್ನು ತಾವೇ ಮಾಡಿಕೊಳ್ಳುವ ಲಕ್ಷ್ಮಿ ಅವರು ಇಲ್ಲಿಯೂ ಕೂಡ ತಮ್ಮ ಪ್ರಾವೀಣ್ಯತೆಯನ್ನು ಮೆರೆದಿದ್ದಾರೆ.
ಸರ್ಕಾರಿ ನೌಕರರ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕೂಚಿಪುಡಿ ನೃತ್ಯವನ್ನು ಪ್ರದರ್ಶಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಪ್ರಶಸ್ತಿಯನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಾತೆ ಮಂಡೋದರಿ ನಾಟಕದ ಮಂಡೋದರಿ ಪಾತ್ರದ ಮನೋಜ್ಞ ಅಭಿನಯಕ್ಕೆ ಇವರಿಗೆ ರಾಜ್ಯಮಟ್ಟದ ಉತ್ತಮ ನಟಿ ಪ್ರಶಸ್ತಿಯು ಲಭಿಸಿದೆ.
ಎಲ್ಲ ರಂಗಗಳಲ್ಲಿಯೂ ತಮ್ಮ ಪ್ರತಿಭೆಯಿಂದ ಮಿಂಚುತ್ತಿರುವ ಲಕ್ಷ್ಮಿ ಅವರು ಹಿಂದುಳಿದ ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ನಾಟಕ ಮುಂತಾದ ಸಾಂಸ್ಕೃತಿಕ ಕಲೆಗಳನ್ನು ಕಲಿಸುವ ಮಹದಾಶಯವನ್ನು ಹೊಂದಿದ್ದಾರೆ. ಸಮಾಜದಲ್ಲಿ ಸಮಾಜದಲ್ಲಿ ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರಲ್ಲಿ ಸ್ಪೂರ್ತಿ ಮತ್ತು ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಆಸಕ್ತಿಯನ್ನು ಹೊಂದಿರುವ ಲಕ್ಷ್ಮಿ ಅವರು ಪ್ರಸ್ತುತ ಮಹಿಳಾ ಪ್ರಧಾನ ನಾಟಕಗಳಿಗೆ ಹೆಚ್ಚು ಒತ್ತು ನೀಡಿದ್ದು ಮುಖ್ಯ ಭೂಮಿಕೆಯನ್ನು ನಿಭಾಯಿಸುತ್ತಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯ ಜೊತೆ ಜೊತೆಗೆ ದಿನಂಪ್ರತಿ ಎರಡು ಗಂಟೆಯ ಕಾಲ ರಂಗ ತಾಲೀಮು ನಡೆಸುತ್ತಾರೆ.
ಲಕ್ಷ್ಮಿ ಅವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ ತಮ್ಮ 2023 ನೇ ಸಾಲಿನ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದ್ದು ಖ್ಯಾತ ಬರಹಗಾರರಾದ ಬರಗೂರು ರಾಮಚಂದ್ರಪ್ಪ ಅವರು
ಪ್ರಶಸ್ತಿ ಪತ್ರವನ್ನು ವಿತರಿಸಿ ಅತ್ಯಂತ ಅಭಿಮಾನ ಮತ್ತು ಹೆಮ್ಮೆಯಿಂದ ಲಕ್ಷ್ಮಿಯವರ…[3:06 pm, 24/12/2024] Veena hemanth Patil: ಲಕ್ಷ್ಮಿಯವರನ್ನು ಹೊಗಳಿ ಮಾತನಾಡಿದ್ದರು.
ಆಕೆಯ ಸಾಧನೆಗಳ ಪಟ್ಟಿಗೆ ಕಿರೀಟಪ್ರಾಯವೆಂಬಂತೆ ಇದೀಗ ದಕ್ಷಿಣ ಭಾರತದ ಮಹಿಳಾ ರಂಗಸಾಧಕಿ(ಸೌತ್ ಇಂಡಿಯಾ ವಿಮೆನ್ ಅಚೀವರ್ಸ್ ಅವಾರ್ಡ್ siwaa) ಎಂಬ ಪ್ರಶಸ್ತಿಯು ಆಕೆಗೆ ಇತ್ತೀಚಿಗೆ ಲಭಿಸಿದ್ದು ಈ ಪ್ರಶಸ್ತಿಗೆ ಆಯ್ಕೆಯಾದ ದಕ್ಷಿಣ ಭಾರತದ ಏಕೈಕ ಮಹಿಳೆ ಆಕೆ ಎಂಬುದು ಎಲ್ಲ ಕನ್ನಡಿಗರು ಹೆಮ್ಮೆಪಡಬಹುದಾದ ವಿಷಯವಾಗಿದೆ.
ಮುಂಡರಗಿಯ ಸಾಹಿತಿ ಡಾ. ನಿಂಗೂ ಸೊಲಗಿಯವರು ತಮ್ಮ ‘ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನ’ದಿಂದ ಕೊಡ ಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಕೂಡ ಪಡೆದಿರುವ ಆಕೆ
ಮುಂಡರಗಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದಾಗ ವೈಯುಕ್ತಿಕವಾಗಿ ನನಗೆ ಪರಿಚಯವಾಗಿದ್ದು ಆಕೆಯ ನಟನಾ ಚಾತುರ್ಯವನ್ನು ಖುದ್ದು ನೋಡಿ ಬೆರಗಾಗಿ ಸಂತಸ ಪಟ್ಟ ನಮಗೆ ಕೂಡ ಆಕೆಯ ಈ ಯಶಸ್ಸು ಹೆಮ್ಮೆ ಮತ್ತು ಅಭಿಮಾನದ ವಿಷಯ.
ಹೆಸರಿನಲ್ಲಿ ಲಕ್ಷ್ಮಿಯಾಗಿರುವ ಆಕೆ ಸರಸ್ವತಿ ಪುತ್ರಿಯೂ ಹೌದು. ತನ್ನೆಲ್ಲ ಸಾಧನೆಗಳ ಹಿಂದಿನ ಶ್ರಮಕ್ಕೆ ತನ್ನ ತಾಯಿ ನೀಡುವ ಸ್ಪೂರ್ತಿಯಾಗಿದ್ದು ಮತ್ತು ಖುದ್ದು ತಾಯಿಯಂತೆಯೇ ರಂಗ ಚಟುವಟಿಕೆಗಳಲ್ಲಿ ತಾನು ಕೂಡ ಆಸಕ್ತಿ ಬೆಳೆಸಿಕೊಂಡು ರಂಗ ತರಬೇತಿಗಳಲ್ಲಿ ಪಾಲ್ಗೊಳ್ಳುವ, ನಾಟಕಗಳಲ್ಲಿ ಅಭಿನಯಿಸುತ್ತಿರುವ ಮಗ ಚಿರಾಗ್ ನ ಪ್ರೋತ್ಸಾಹವೂ ಕೂಡ ಕಾರಣ ಎಂದು ಮನದುಂಬಿ ಹೇಳುವ ಲಕ್ಷ್ಮಿ ಅವರು ಅತ್ಯಂತ ಸರಳ ಮತ್ತು ನಿಸ್ಸೃಹಜೀವಿ.ಅತಿ ಹೆಚ್ಚು ಪ್ರಧಾನ ಪಾತ್ರಗಳನ್ನ ನೀಡಿ ಪ್ರೋತ್ಸಾಹಿಸಿದ ‘ಮಲೆನಾಡು ಕಲಾತಂಡ’ದ ಅಧ್ಯಕ್ಷರು ಹಾಗೂ ರೂವಾರಿಗಳಾದ ಸಹೋದರರಾದ ಡಾ ಗಣೇಶ್ ಕೆಂಚನಾಳ್ ಅವರಿಗೆ ಸದಾ ಕೃತಜ್ಞಳಾಗಿರುತ್ತೇನೆ ಎಂದು ಧನ್ಯತೆಯನ್ನು ವ್ಯಕ್ತಪಡಿಸುವ ಲಕ್ಷ್ಮಿ ಅವರು ಇನ್ನೂ ಹೆಚ್ಚು ಸಾಧಿಸುವ ಮೂಲಕ ತಮ್ಮ ವೃತ್ತಿ ಮತ್ತು ಪ್ರವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲಿ, ಇನ್ನಷ್ಟು ಎತ್ತರಗಳನ್ನು ಏರಲಿ ಎಂದು ಹಾರೈಸುವ
ವೀಣಾ ಹೇಮಂತ್ ಗೌಡ ಪಾಟೀಲ್