ಕುವೆಂಪು ಜನ್ಮದಿನ ವಿಶೇಷ,ಕವಿಶೈಲ ಭೇಟಿ ವಿಶೇಷ ಬರಹ ಸುಜಾತಾ ರವೀಶ್‌ ಅವರಿಂದ

ಕವಿಶೈಲದ ಭೇಟಿ ನನ್ನ ಬಹಳ ದಿನದ ಕನಸುಗಳಲ್ಲೊಂದು ೨೦೧೯ ಜುಲೈರಲ್ಲಿ ಇದು ನನಸಾಯಿತು .ಆ ಸಂದರ್ಭದಲ್ಲಿ ಬರೆದ ಬರಹ ಇದು .

ಪ್ರೈಮರಿ ಶಾಲೆಯಲ್ಲಿದ್ದಾಗ ಪಠ್ಯದಲ್ಲಿದ್ದುದು “ಮನೆ ಮನೆ ನನ್ನ ಮನೆ “ಎಂಬ ಪದ್ಯ. ಅನಂತರ ಕೇಳುತ್ತಿದ್ದ ಭಾವಗೀತೆಗಳು ” ಮುಚ್ಚುಮರೆ ಇಲ್ಲದೆಯೇ” ” ತೆರೆದಿದೆ ಮನೆ ಓ ಬಾ ಅತಿಥಿ ”  ಇನ್ನೂ ಮುಂತಾದವು ಓ ನನ್ನ ಚೇತನ ಎಂಬ ವಿಶ್ವಮಾನವ ಕವಿತೆ ಬರೆದ ಕುವೆಂಪು ಅವರೇ ಇವೆಲ್ಲವನ್ನೂ ಬರೆದದ್ದು ಎಂದು ತಿಳಿಯುವ ವೇಳೆಗೆ ನಾನು ಕುವೆಂಪುರವರ ಅಭಿಮಾನಿ ಆಗಿಬಿಟ್ಟಿದ್ದೆ. ಬೇಂದ್ರೆಯವರಿಂದ “ಜಗದ ಕವಿ ಯುಗದ ಕವಿ “ಎಂದು ಕರೆಸಿಕೊಂಡವರು ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದಿತ್ತ ರಾಮಾಯಣ ದರ್ಶನಂ ಕರ್ತೃ. ವಿಶ್ವಮಾನವ ಸಂದೇಶದ ಹರಿಕಾರ ನವೋದಯ ಚಳವಳಿಯ ಮುಂದಾಳು ಕುವೆಂಪುರವರ ಜನನ ೨೯.೧೨.೧೯೦೪ ರಂದು .ಈ ಮಹಾಚೇತನ ನಮ್ಮನ್ನಗಲಿದ್ದು  ೧೧.೧೧.೧೯೯೪ ರಂದು.        

ಅಂದು ಅವರ ಅಂತಿಮ ದರ್ಶನ ಪಡೆದ ಲಕ್ಷಾಂತರ ಅಭಿಮಾನಿಗಳಲ್ಲಿ  ನಾನೂ ಒಬ್ಬಳು. ಕುವೆಂಪುರವರು ಮನುಜ ಪಥ ವಿಶ್ವಪಥ ಸರ್ವೋದಯ ಸಮನ್ವಯ ಪೂರ್ಣದೃಷ್ಟಿ ಎಂಬ ಪಂಚಮಂತ್ರ ತತ್ತ್ವವನ್ನು ಹುಟ್ಟು ಹಾಕಿದರು.  ಅವರ ಕಾವ್ಯಗಳ ಸಮಗ್ರತೆ ಅವು ತರುವ ಅನುಭೂತಿ ಓದಿದರಷ್ಟೇ ಬಲ್ಲರು.ಅವರ ಹೆಸರಿನ ಅಂಗವಾದ ಕುಪ್ಪಳ್ಳಿಯ ವರ್ಣನೆ ಅವರ ಕೃತಿಗಳಲ್ಲಿ ಹಾಸು ಹೊಕ್ಕಾಗಿದೆ .ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರು ಹೆಗ್ಗಡತಿಯಲ್ಲಿ ಮಲೆನಾಡಿನ ವರ್ಣನೆ ನಮ್ಮಂತಹ ಮಲೆನಾಡನ್ನು ಕಾಣದಿದ್ದವರಲ್ಲೂ ಅದರ ಪೂರ್ಣ ಚಿತ್ರಣ ಮೂಡಿಸುತ್ತಿತ್ತು .ಅಂತಹ ಕುಪ್ಪಳ್ಳಿಯನ್ನು ಕಾಣುವ ಬಯಕೆಯಂತೂ ಮನದಲ್ಲಿ ಇದ್ದೇ ಇತ್ತು .ಎರಡು ಸಾವಿರದ ಒಂದರಲ್ಲಿ ಅದನ್ನು ನವೀಕರಣ ಮಾಡಿದ್ದಾರೆಂದು ತಿಳಿದಾಗ  ಅಲ್ಲಿಗೆ ಹೋಗಬೇಕೆಂಬ ಕನಸು ಮೂಡಿತ್ತು .ನಾಗತಿಹಳ್ಳಿಯವರ ಇಷ್ಟಕಾಮ್ಯ ಚಲನಚಿತ್ರ ನೋಡಿದ ಮೇಲಂತೂ ಆಸೆ ಪ್ರಬಲವಾಗಿತ್ತು. ಅದು ಸಾಕಾರವಾಗಿದ್ದು ಈ ವರ್ಷ ಶಿವಮೊಗ್ಗೆಗೆ ಭೇಟಿ ಕೊಟ್ಟಾಗ. ಕವಿಶೈಲ ಕೈಬೀಸಿ ಆಮಂತ್ರಿಸಿತ್ತು. ಯಾವುದೇ ಅಡೆತಡೆ ಇಲ್ಲದೆ ಹೊರಟಾಗಿತ್ತು.

ಶಿವಮೊಗ್ಗೆಯಿಂದ ತೀರ್ಥಹಳ್ಳಿವರೆಗೆ ಮೈತುಂಬಿದ ತುಂಗೆ ರಸ್ತೆಯ ಬದಿಯಲ್ಲಿ ನಮ್ಮೊಂದಿಗೆ ಸಾಗಿ ಬರುತ್ತಿದ್ದಳು ಕವಿವರ್ಯರ ಮನೆಯ ದಾರಿ ತೋರುತ್ತಿರುವಳೇನೋ ಎಂಬಂತೆ. ಮಂಡಗದ್ದೆಯಲ್ಲಿ ಪಕ್ಷಿ ಕಾಶಿಗೊಂದು ಸಣ್ಣ ಭೇಟಿ ಕೊಟ್ಟು ಅವುಗಳಿಗೆ ಹಲೋ ಹೇಳಿ ಮುಂದುವರೆದೆವು. ತೀರ್ಥಹಳ್ಳಿಯಿಂದ ಕುಪ್ಪಳ್ಳಿವರೆಗಿನ ಹಾದಿ ಕುವೆಂಪುರವರು ಬಣ್ಣಿಸಿದ ಕಾಡಿನ ದರ್ಶನವನ್ನೇ ಮಾಡಿಸಿತ್ತು. ಎತ್ತ ನೋಡಿದರೂ ಹಸಿರೇ ಹಸಿರು .ಹಸಿರು ಹಬ್ಬ ಕಣ್ಮನ ತಣಿಸಿತು .

ಕುಪ್ಪಳ್ಳಿ ತಲುಪಿದಾಗ ಅಲ್ಲಿಯ ಅರಳಿ ಮರ ಕಟ್ಟೆ ಮೊದಲು ಕಣ್ಣಿಗೆ ಬಿದ್ದುದು. ಅಲ್ಲಿನ  ಸಣ್ಣ ಹೋಟೆಲಿನ ಟೀ ಕುಡಿದು ಕವಿಯ ಮನೆ ದರ್ಶನ .ಹೊರಗಿನಿಂದ ನೋಡಿದರೇ ಎಷ್ಟು ಚೆಂದ ಕಾಣ್ತಿತ್ತು .ಪಕ್ಕಾ ಮಲೆನಾಡಿನ ಹೆಂಚಿನ ಮನೆ ಹಿಂದಿನ ಅಡಿಕೆ ತೋಟ ಮುಂದಿನ ಹಸಿರ ಹುಲ್ಲು ಹಾಸು ಹೂತೋಟ ಮನೆಯ ಮೇಲ್ಗಡೆ ನೀಲಿ ಬಿಳಿ ಮುಗಿಲುಗಳ ಚೆಲ್ಲಾಟ. ಚಿತ್ರಪಟದಿಂದ ಎತ್ತಿ ತಂದ ತುಣುಕೇನೋ ಅನ್ನಿಸುವಷ್ಟು ರಮ್ಯ ಮನೋಹರ .ಕವಿ ಭಾವ ಹುಚ್ಚೆದ್ದು ಕುಣಿಯುವಂತೆ ಮಾಡುವ ಪರಿಸರ .

ಇನ್ನು ಒಳಗಡೆ ಪ್ರವೇಶಿಸಿದರೆ ಮಲೆನಾಡಿನ ವಾಸ್ತು ಶಿಲ್ಪದ ಜೀವಂತ ಉದಾಹರಣೆ .ಮೂರು ದಿಕ್ಕಿನ ಚೌಕಿ ಮೂರಂತಸ್ತಿನ ಮನೆ .ಅಂಗಳದ ನಡುವಿನ ತುಳಸಿ ಕಟ್ಟೆ ಜಗಲಿಯ ಬಲಭಾಗದ ಕವಿಯ ಅರ್ಧಾಕೃತಿಯ ಪ್ರತಿಮೆ ಸ್ವಾಗತ ಕೋರುತ್ತವೆ .ಬೃಹತ್ ಮುಂಡಿಗೆಗಳು ಕಂಬಗಳು ನಾಗಂದಿಗೆಗಳು. ಕಾಷ್ಟ ವೈಭವ ಮನ ತುಂಬುತ್ತದೆ .ಅವರ ಹಿರಿಯರು  ಉಪಯೋಗಿಸುತ್ತಿದ್ದ .ವಸ್ತುಗಳು ಕವಿಗಳು ಮದುವೆಯಾದ ಮಂಟಪ ಇವೆಲ್ಲ ಚೆಂದದ ಕೆತ್ತನೆಯ ಕುಸುರಿ ಕೆಲಸದಿಂದ ಆಕರ್ಷಣೀಯ .ಹಿಂಬಾಗಿಲಿನಿಂದ ನೋಡಿದರೆ ಹಳೆಯ ಕಾಲದ ಬಚ್ಚಲು ಮನೆ ಕೆರೆ ತೋಟ ಕಾಡು ನೀರಿನ ಝರಿ ಕಣ್ಣಿಗೆ ಬೀಳುತ್ತವೆ .
ಅಲ್ಲಿಯೇ ನೇತು ಹಾಕಿದ ನಿಂತು ಹೋಗಿದ್ದ ದೊಡ್ಡ ಗೋಡೆ ಗಡಿಯಾರ ಕವಿಗಳು ಕಾಲನ ಕರೆಗೆ ಓಗೊಟ್ಟು ದ್ದನ್ನು ಸೂಚಿಸುವಂತೆ ಭಾಸವಾಗುತ್ತದೆ . ಆಗೆಲ್ಲಾ ನನ್ನ ಮನಸ್ಸು ಜನ ತುಂಬಿ ಸರಭರ ಓಡಾಡುವ ಜೀವಂತಿಕೆ ಸೂಸುತ್ತಿದ್ದ ಅಂದಿನ ದೃಶ್ಯವನ್ನು ಊಹಿಸುವಂತೆ ಆಯಿತು .ಅಲ್ಲೇ ಇದ್ದ ಅನಿಸಿಕೆಗಳನ್ನು ಬರೆಯುವ ಪುಸ್ತಕದಲ್ಲಿ ನಮ್ಮ ಅನಿಸಿಕೆಗಳನ್ನು ದಾಖಲಿಸಿ ಆಯಿತು. ಒಂದು ಬೇಸರ ಅಂದರೆ ಅದನ್ನು ಒಂದು ಫೋಟೋ ತೆಗೆದುಕೊಳ್ಳಬೇಕಿತ್ತು ಆಗ ಹೊಳೆಯಲಿಲ್ಲ .

ಅಡಿಗೆ ಮನೆಯಲ್ಲಿ ಆಗ ಉಪಯೋಗಿಸುತ್ತಿದ್ದ ಪಾತ್ರೆಗಳು ಹಿಂದಿನ ಕಾಲದ ಬಾಣಂತಿ ಕೋಣೆ ತೊಟ್ಟಿಲು ಹೊಸತೊಂದು ಲೋಕವನ್ನೇ ಕಣ್ಣ ಮುಂದೆ ತಂದಿದ್ದವು. ಕವಿಯ ಅವರ ಕುಟುಂಬದವರ ಆಪ್ತ ವರ್ಗದವರ ಗೆಳೆಯರೊಂದಿಗಿನ ಛಾಯಾಚಿತ್ರಗಳು ದರ್ಶನೀಯ. ನಾನು ನಮ್ಮ ಡಾ. ಲಕ್ಷ್ಮಿನಾರಾಯಣ ಅವರ ಕ್ಲಿನಿಕ್ ನಲ್ಲಿ ನೋಡಿದ ಒಂದು ಛಾಯಾಚಿತ್ರವೂ ಅಲ್ಲಿ ಸಂಗ್ರಹವಾಗಿದ್ದು ಯಾವುದೋ ಒಂದು ರೀತಿ ಕವಿಯೊಂದಿಗೆ ನನ್ನ ಬಾಂಧವ್ಯ ಜೋಡಿಸಿ ಕೊಂಡಂತೆ ಅನ್ನಿಸಿ ಖುಷಿಯಾಯಿತು. ಗಾಜಿನ ಪೆಟ್ಟಿಗೆಯಲ್ಲಿ ಸಂಗ್ರಹಿಸಲ್ಪಟ್ಟ ಅವರು ಉಪಯೋಗಿಸುತ್ತಿದ್ದ ವಸ್ತುಗಳು ಕಟ್ಟು ಹಾಕಿಸಿಟ್ಟ ಪ್ರಸಿದ್ಧರು ಬರೆದ ಪತ್ರಗಳು ಖಂಡಿತ ಓದುವಂಥವು ನೋಡುವಂಥವು.  ಮದುವೆಗೆ ಬರಲಾಗುವುದಿಲ್ಲ ಎಂದು ಶ್ರೀಯುತ ಬಿಎಂಶ್ರೀ ಅವರು ಬರೆದ ಪತ್ರ ತುಂಬಾ ಇಷ್ಟವಾಯಿತು. ಅವರ ಕೃತಿಗಳೆಲ್ಲ ದರ ಸಂಗ್ರಹ ನೋಡಿದಾಗ ನಮ್ಮಂಥವರಿಗೆ ಇಷ್ಟು ಕೃತಿಗಳನ್ನು ಓದಲಿಕ್ಕೇ ಜೀವಮಾನ ಸಾಲುವುದಿಲ್ಲ ಎಂದೆನಿಸಿ ಅದನ್ನು ಬರೆದ ಅವರ ಅಗಾಧ ಪ್ರೌಢಿಮೆಗೆ ವಿಸ್ಮಯವಾಯಿತು.

ಕವಿಗಳ ಮನೆಯ ಪಕ್ಕದಿಂದ ಏರು ಹತ್ತಿ ಹೋದರೆ ಒಂದು ಚಿಕ್ಕ ಬೆಟ್ಟ .ಕಾಲುಹಾದಿ .ಅದರಾಚೆಗೆ ವಿಸ್ತಾರವಾಗಿ ಹರಡಿದ್ದ ಬಂಡೆಗಳ ರಾಶಿ .ಅಲ್ಲಿಂದ ನೋಡಿದರೆ ಸುತ್ತಲ ಕೊಡಚಾದ್ರಿ ಕುಂದಾದ್ರಿಗಳ ನಯನ ಮನೋಹರ ದೃಶ್ಯ. ಅಲ್ಲಿನ ಕಣಿವೆಯ ಹಸಿರಿನ ವಿಹಂಗಮ ನೋಟ. ಇಷ್ಟು ಹೇಳಿದರೆ ವಿವರಣೆ ಪೂರ್ಣವಾಗುವುದಿಲ್ಲ .ಕವಿಯ ಭಾವಗಳು ಶಬ್ದರೂಪದಲ್ಲಿ ಕೃತಿಗಳಾಗಿ ಕನ್ನಡ ಜನಮಾನಸದ ರತ್ನಗಳಾದ ಅಪೂರ್ವ ಜಾಗ .ಕವಿವರ್ಯರ ಸ್ಫೂರ್ತಿಯ ಸೆಲೆ .ಅವರೇ ನಾಮಕರಣ ಮಾಡಿದ ಕವಿಶೈಲ .ಇದೇ ಜಾಗದಲ್ಲಿಯೇ ಕವಿಗಳ ಸಮಾಧಿಯೂ ಇದ್ದು ಈ ಜಾಗದ   ಭವ್ಯತೆಗೆ ಧೀಮಂತಿಕೆಯನ್ನು ತಂದಿದೆ .ಈ ಜಾಗವನ್ನು ೨೦೦೧ ರಲ್ಲಿ ನವೀಕರಿಸಿದಾಗ ಮೂವತ್ತೈದು ಕಲ್ಲು ಕಂಬಗಳು ಇಪ್ಪತ್ತೈದು ಶಿಲಾ ತೊಲೆಗಳನ್ನು ಉಪಯೋಗಿಸಿ ಬೃಹತ್ ಗಾತ್ರದ ಕಲಾಕೃತಿ ರೂಪುಗೊಂಡಿದೆ .ಇದರ ರೂವಾರಿ ಇತ್ತೀಚೆಗೆ ನಿಧನರಾದ ಕಾಫಿ ಡೇ ಖ್ಯಾತಿಯ ಸಿದ್ಧಾರ್ಥ ರವರದು. ಅವರು ಕುವೆಂಪುರವರಿಗೆ ಸೋದರ ಸಂಬಂಧಿ.ಆ ಕಾಲದಲ್ಲಿಯೇ ಐವತ್ತು ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿದರೂ ಎಲ್ಲೂ ಹೇಳಿಕೊಳ್ಳದೆ ಸುಮ್ಮನಿದ್ದವರು. ಈ ಕಲಾಕೃತಿಗಳ ಶಿಲ್ಪಿ ಕೆ ಟಿ ಶಿವಪ್ರಸಾದ್ .

ಕವಿಗಳು ಕೂತು ಬರೆಯುತ್ತಿದ್ದರು ಎಂದೆನ್ನುವ ಚಪ್ಪಟೆಯಾದ ಒಂದು ಕಲ್ಲು ಹಾಸು ಇದೆ .ಅದರ ಮೇಲೆ ಕುವೆಂಪು ಬಿಎಂಶ್ರೀ ಪೂಚಂತೇ ಟಿಎಂವೆಂ ಎಂದೆಲ್ಲಾ ಕಲ್ಲಿನಲ್ಲಿ ಕೆತ್ತಿದ್ದು ಇಂತಹ ಮಹನೀಯರ ಸ್ಪರ್ಶವಾದ ಬಂಡೆ ಎಂದೆನಿಸಿ ಭಕ್ತಿಭಾವದಿಂದ ಅದನ್ನು ಮುಟ್ಟಿದ್ದೆ. ಮನದಲೆಲ್ಲಾ ಮಿಂಚು ಹರಿದಂತೆ ಅನುಭವ.  ಆ ಅನಿರ್ವಚನೀಯ ಅನುಭವ ಅಲ್ಲಿಂದ ಕಂಡ ಪ್ರಕೃತಿ ವೈಭವ ನಿಜಕ್ಕೂ ನೋಡದಿದ್ದಲ್ಲಿ ಜೀವನದಲ್ಲಿ ಮಹತ್ವದ್ದೇನನ್ನೋ ಖಂಡಿತ ಕಳೆದುಕೊಳ್ಳುತ್ತಿದ್ದೆ ಎಂಬ ಭಾವನೆ ತಂದಿತ್ತು. ಅಲ್ಲಿಯೇ ಇದ್ದ ಒಂದು ಶಿಲೆಯಲ್ಲಿ ಬರೆದಿತ್ತು  “ಮಾತಿಲ್ಲಿ ಮೈಲಿಗೆ ಸುಮ್ಮನಿರಿ ಮೌನವೇ ಮಹತ್ತಿಲ್ಲಿ “ನಿಜಕ್ಕೂ ಸತ್ಯವೆನಿಸಿತು . ಅಲ್ಲಿ ನಿಂತಾಗ ಸ್ಪುರಿಸಿದ ಭಾವ ಲೇಖನಿಯಲ್ಲಿ ಮೂಡಿ ಬಂದಿದ್ದು ಹೀಗೆ. ರಸಋಷಿಗೆ ಸಮರ್ಪಣೆ ಈ ಕವನ .

ಗಿರಿ ಬನ

ಸೃಷ್ಠಿ  ಸೊಬಗ ವೈಚಿತ್ರ್ಯವಿದು ಗಿರಿಶಿಖರ
ಬನವಿಲ್ಲಿ ಹೊದ್ದು ಮಲಗಿದೆ ಹಚ್ಚ ಹಸಿರಿನ ಚಾದರ.
ಅಲ್ಲಲ್ಲಿ ಸುರಿಯುತಿಹ ಶುಭ್ರ ಶ್ವೇತ ಜಲಧಾರ
ಶೈಲರಾಣಿಯ ಕೊರಳನಪ್ಪಿದ ಬಿಳಿ ಮುತ್ತಿನ ಹಾರ
.

ಕಾನನದ ತುಂಬೆಲ್ಲಾ ಹರಡಿದೆ ದ್ರುಮ ಸ್ತೋಮ
ನಿತ್ಯಹರಿದ್ವರ್ಣ ಸೌಂದರ್ಯ ನಯನವಾಯ್ತು ಪಾವನ.
ಬೆಟ್ಟ ಗುಡ್ಡ ಕಾಡು ಕಣಿವೆ ಎಷ್ಟು ಚಂದ ಚಾರಣ
ಭಾಸವಾಗುತಿಹುದು!ಇಲ್ಲೇ ಇಹುದು ದೇವ ಚರಣˌ

ತರುಲತೆಗಳ ಒಡಲಿಗೆಲ್ಲಾ ಹೂವಿನಲಂಕಾರ
ಅದನರಸಿ ಬರುತಲಿಹ ಭೃಂಗಗಳ ಝೇಂಕಾರ
ವನದೇವಿಯ ಮನತಣಿಸಲು ಹಕ್ಕಿಗಳಿಂಚರ
ಶೃತಿ ಸೇರಿಸಿದೆ ಆ ರಾಗಕೆ ರೆಂಬೆ ಕೊಂಬೆ ಮರ್ಮರ.

ಬೆರಳಿಗೆಟುಕುವಷ್ಟು ಸನಿಹ ಬೆಳ್ಳಿಮೇಘ ಮಾಲೆ
ಗಿರಿಶೃಂಗದ ಉತ್ತುಂಗದ ಮೇಲೆ ನಿಂತ ಮೇಲೆ
ಕವಿಮನಸಿಗೆ ಸವಿ ಸೊಗವೀಂಟಿದ ಅನುಭೂತಿ
ಪದ ಶಬ್ದಗಳ ಮೀರಿನಿಂತ ಪ್ರಶಾಂತ ಸಮಾಧಿ ಸ್ಥಿತಿ.
                           ಸುಜಾತ ರವೀಶ್

ಅರಳಿಕಟ್ಟೆಯ ಪುಟ್ಟ ಕ್ಯಾಂಟೀನಿನ ಚಿತ್ರಾನ್ನ ಬಜ್ಜಿ ಹುರಳಿ ಸಾರು ಹಸಿದ ಹೊಟ್ಟೆಗೆ ಬಿಸಿಬಿಸಿಯಾಗಿ ಹೆಚ್ಚು ರುಚಿ ಕೊಟ್ಟಿದ್ದವು. ಸಮಯಾಭಾವದಿಂದ ಉಳಿದ ಸ್ಥಳಗಳನ್ನು ಮುಂದಿನ ಬಾರಿಗೆ ಅಂತ ಉಳಿಸಿದೆವು .ಮಧ್ಯಾಹ್ನ ಮೂರರ ಹೊತ್ತಿಗೆ ದಟ್ಟೈಸಿ ರಾತ್ರಿಯಂತೆ ಕಾಣತೊಡಗಿತ್ತು .ದಾರಿಯಲ್ಲಿ ಜೋರು ಮಳೆ ಬಂದು ಮಲೆನಾಡಿನ ವರ್ಷಧಾರೆಯ ಅನುಭವವನ್ನು ಕೊಟ್ಟಿತ್ತು.

ಕಡೆ ಗುಟುಕು:  ಕಾಕತಾಳೀಯವೋ ಕವಿಗಳ ಆಶೀರ್ವಾದವೋ ಕವಿಶೈಲದ ದರ್ಶನದ ಮಾರನೆಯ ದಿನವೇ ನನ್ನ ಕವನ “ಮುಖವಾಡಗಳು” ಕುವೆಂಪು ವಿಶ್ವವಿದ್ಯಾಲಯದ ಎರಡನೇ ಪದವಿ ಪಠ್ಯಪುಸ್ತಕದ ಪೂರಕ ಪಠ್ಯವಾಗಿ ಆಯ್ಕೆಗೊಂಡಿತ್ತು .ರಸಋಷಿಗಳ ಹೆಸರಿನ ಕೆಳಗೆ ನನ್ನ ಹೆಸರು ಪ್ರಕಟವಾಗಿತ್ತು .ಧನ್ಯೋಸ್ಮಿ .

2 thoughts on “ಕುವೆಂಪು ಜನ್ಮದಿನ ವಿಶೇಷ,ಕವಿಶೈಲ ಭೇಟಿ ವಿಶೇಷ ಬರಹ ಸುಜಾತಾ ರವೀಶ್‌ ಅವರಿಂದ

Leave a Reply