ನಾನಂದು ಪುಟ್ಟ ಹುಡುಗಿ
ಪಾಠಿಚೀಲ ಬಳಪದ ಬೆಡಗಿ
ಕರಿಕಲ್ಲ ಬಿಳಿಯಂಚಿನ ಪಾಠಿ
ನನಗದುವೆ ಜ್ಞಾನ ಸಾರಥಿ

ಹೌದು,ಪ್ರತಿಯೊಬ್ಬ ಜೀವಿಯು ತನ್ನ ಬಾಲ್ಯವನ್ನು ಎಂದಿಗೂ ಮರೆಯಲಾರ.ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕುತ್ತ ಸಾಗುವುದು ಮತ್ತೊಂದು ಬಾರಿ ಬಾಲ್ಯ ಬರಬಾರದೆ ಎಂಬ ಚಿಂತನೆ ಮನದ ಮೂಲೆಯಲ್ಲಿ ಸುಳಿಯದೆ ಇರದು.೮.೩೦ ಕ್ಕೆ ಢಣಢಣ ಗಂಟೆಯ ಸದ್ದು ಕಿವಿ ಮೇಲೆ ಬೀಳುತ್ತಿದ್ದಂತೆ,ಕಾಲಿಗೆ ಓಟದ ಸ್ಪರ್ಧೆ.ಶಾಲೆಯ ಆವರಣ ಪ್ರವೇಶಿಸಿ,ಪ್ರಾರ್ಥನೆಯ ಹಾಲ್ ಸೇರಯವುದರೊಳಗೆ ಎದೆಯುಸಿರು ಏರುಪೇರು!. ಬಾಗಿಲು ಹಾಕುವುದರೊಳಗೆ ಒಳಗೆ ನುಸುಳುವುದು ಅಷ್ಟು ಸುಲಭದ ಮಾತಲ್ಲ!. ಪ್ರಾರ್ಥನೆ ನಡೆಯುವಾಗ ಒಳ ಬರುವಂತಿಲ್ಲ,ಹಿಂದೆ ಹೋಗಿ ಕುಳ್ಳುವಂತಿಲ್ಲ.ಏಕೆಂದರೆ ಪ್ರಾರ್ಥನೆ ಮಾಡುವ ಶಾಲಾ ಮಕ್ಕಳು ಕೆಳಗೆ ತರಗತಿವಾರು ಕುಳಿತಿದ್ದರೆ,ಶಿಕ್ಷಕರು ಪ್ರಾರ್ಥನೆಯ ಲೀಡರ್, ಪೇಪರ್ ಓದುವವರು,ಅಮರವಾಣಿ ಹೇಳಿವವರು ವೇದಿಕೆಯಲ್ಲಿ ಕುಳಿತಿರುತ್ತಿದ್ದರು.ಅವರಿಗೆ ಕೆಳಗಾಗುವ ಎಲ್ಲ ಚಟುವಟಿಕೆಗಳನ್ನು ಗಮನಿಸಲು ಸಾಧ್ಯವಾಗುವ ಸಮಯದಲ್ಲಿ ಸಿಕ್ಕಿ ಹಾಕಿಕೊಂಡವರಿಗೆ ಉಟಾಬಸ್,(ಬಸ್ಕಿ) ಹೊಡೆಸುವುದನ್ನು ನೆನೆದರೆ ಸುಸ್ತು.ಪಿಟಿ ಟೀಚರ್ಸ್ ಕೈಗೆ ಸಿಕ್ಕರಂತೂ ಮುಗಿತು…ಇಷ್ಟೆಲ್ಲ ಯಾಕಪ್ಪಾ…ಮೊದಲ ಹೋಗಬೇಕು ಎನ್ನುವ ಧಾವಂತ.ಹೋಮವರ್ಕ ಕೆಲಸವಂತು ಹೇಳಲು ಭಯ!. ಶಿಕ್ಷಕರಿಗೆ ತರಗತಿಯಲ್ಲಿರುವ ಎಲ್ಲ ಮಕ್ಕಳ ಬಗ್ಗೆ ಸ್ಪಷ್ಟ ಚಿತ್ರಣ ಇರುತ್ತದೆ.ಮಗುವಿನ ಸೈಕಾಲಜಿ ಅರ್ಥೈಸಿಕೊಂಡು ಮಗುವಿನ ಸರ್ವಾಂಗೀಣ ಪ್ರಗತಿಗೆ ಪೂರಕ ಶಕ್ತಿಯೇ  ಶಿಕ್ಷಣವೆಂದರೆ ತಪ್ಪಾಗದು.

ಶಾಲೆಗೆ ಹೊರಟ ಮಕ್ಕಳಿಗೆ ಸರಿಯಾದ ವಾಹನ ಸೌಲಭ್ಯ ಇರದೆ,ನಡೆದು ಹೋಗುವ ಕಾಲುದಾರಿಗೆ ಒಬ್ಬ ಕಾವಲುಗಾರ ಪಾಳಿಯಂತೆ.ಪಾಪ.. ಹಳ್ಳಿಯಿಂದ‌ ವಿದ್ಯೆಯ ಹಸಿವನ್ನು ನೀಗಿಸಿಕೊಳ್ಳಲು ಬರುವ‌ ಪ್ರತಿಭಾವಂತ ವಿದ್ಯಾರ್ಥಿಗಳು..ಆಟ,ಪಾಠ ಹಾಗೂ ದಂಡನೆಗೆ ಒಳಗಾದರೂ,ಯಾವೊಬ್ಬ ಪಾಲಕರು ಶಾಲೆಗೆ ಬಂದು ಮಾಸ್ತರ ನ್ನು ಕೇಳುತ್ತಿರಲಿಲ್ಲ. “ಇನ್ನೊಂದೆರೆಡು ಪೆಟ್ಟು ಹಾಕಿ ಚೆನ್ನಾಗಿ ಕಲಿಲಿ” ಅಂತ ಹೇಳಿ ಹೋಗುವ ಪಾಲಕರಿಗೆ;ಯಾವ ಮಕ್ಕಳು ಧೈರ್ಯ ಮಾಡಿ ದೂರು ಹೇಳಲು‌ ಸಾಧ್ಯ! ಶಾಲೆ ಎಂದರೆ ಹೆದರುವ ಮಕ್ಕಳು, ಇಂಗ್ಲಿಷ್, ಗಣಿತಕ್ಕೆ ಭಯಪಟ್ಟಷ್ಟು ಇನ್ಯಾವುದಕ್ಕೂ ಹೆದರಿಲ್ಲ.ಕೆಲ ಮಕ್ಕಳಿಗೆ ಕನ್ನಡವನ್ನು ಸುಲಭವಾಗಿ ಸ್ವೀಕರಿಸುವ ಮನಸ್ಸಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿದ್ದು ಆಶ್ಚರ್ಯವಿಲ್ಲ.”ಮಾತೃಭಾಷೆ ಯಾವತ್ತಿದ್ದರೂ ಹೃದಯಭಾಷೆ” ಸರಕಾರಿ ಶಾಲೆಗಳು ತುಂಬಿತುಳುಕುವ ಕಾಲವದು.

ಸಮಯ ಬದಲಾದಂತೆ ಮನುಷ್ಯನ ಬೇಡಿಕೆಗಳು ಬದಲಾಗಿವೆ.ಶಾಲೆಯ ವಾಸ್ತವ ಚಿತ್ರಣ ಕೂಡ ಬದಲಾಗಿದೆ.ತರಗತಿ ಕೋಣೆಗಳ ವಿನ್ಯಾಸ ಕೂಡ   ನಾವೀನ್ಯತೆಯ ಆಲ್ಬಮ್ ಆಗಿದೆ.ತರಗತಿ ಪ್ರವೇಶಿಸುವ ಮಕ್ಕಳಿಗೆ ಸ್ವಾಗತಿಸುವ ಪರಿ ಪ್ರೇಕರ ಚಟುವಟಿಕೆಯಾಗಿದೆ..ಹಿಂದೆಲ್ಲ,ಅವ್ವ ಕೈಯ್ಯಾಗ ಬಡಗಿ ಹಿಡಕೊಂಡು ನಮ್ಮ ಹಿಂದೆ ಬರತಿದ್ದರೆ,ನಾವು ಕೈಚೀಲ
ಕೈಯ್ಯಾಗ ಹಿಡಕೊಂಡ ಮುಂದಮುಂದ ಓಡೋದು..ಶಾಲಿ ಗೇಟ ಒಳಗ ಹೋದಮ್ಯಾಲೆ ಅವ್ವ ವಾಪಸ್ ಮನಿಗೆ.ಇದು ನಾವು ಶಾಲೆಗೆ ಬರೋ ರೀತಿ..ಆದ್ರೆ ಈಗ ಪಾಲಕರು ಮಕ್ಕಳ ಪಾಠಿಚೀಲ ತಾವೇ ಹೊತ್ಕೊಂಡು ಗೇಟತನಕ ಅಥವಾ ತರಗತಿ ಒಳಗಿನ ತನಕ ತಂದು ಕೊಟ್ಟು ಹೋಗುವುದನ್ನು ನೋಡಿದಾಗ ನಮ್ಮ ಅಪ್ಪನ ನೆನಪಾಗದೇ ಇರದು!.
ಇನ್ನೂ ವಾಹನಗಳಿಂದ ಶಾಲೆಗೆ ಬರುವ ಮಕ್ಕಳಿಗೆ ಪಾಲಕರು ಪಡುವ ಒದ್ದಾಟ ನೋಡಲು ಆಗದು.ಶಿಕ್ಷಣದ ಪರಿಭಾಷೆಯನ್ನು ಅರ್ಥೈಸುವ ಪರಿಕಲ್ಪನೆಗಳು ಭಿನ್ನ!. ಖಾಸಗಿಯತ್ತ ಮುಖ ಮಾಡುವ ಪಾಲಕರು ಸರ್ವೇಸಾಮಾನ್ಯ ಅನುಕೂಲ ಸ್ಥಿತಿಯುಳ್ಳವರು!. ಅದರಲ್ಲಿ ಬಹುತೇಕ ಪಾಲಕರ ವ್ಯಾಮೋಹದ ಪರಿಣಾಮ.ಮಗುವಿನ ಬುದ್ದಿಮಮಟ್ಟದ ಮೇಲೆ ಕಲಿಕೆ ನಿಂತಿದೆಯೆಂಬುದನ್ನು ಅರಿಯುವುದು ಯಾವಾಗ?

ಊರಿನ ಶಾಲೆಗೆ ಮಾಜಿ ವಿದ್ಯಾರ್ಥಿಗಳು ಬೆಂಗಾವಲಾಗಿ ನಿಂತು,ತಾವು ಕಲಿತ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇದ್ದರೂ,ಬದಲಾಗದ ಮನಸ್ಥಿತಿಯುಳ್ಳ ಪಾಲಕರಿಗೆ ಏನೆನ್ನಬೇಕು? ಮಾಜಿ ಮಕ್ಕಳು ಶಾಲೆಯತ್ತ ಮುಖ ಮಾಡಲು ಮುಂದೆ ಬರದಿರುವುದು ದುಃಖದ ಸಂಗತಿ!. ಒಬ್ಬ ವ್ಯಕ್ತಿ ಮುಂದಾಗಿ ಕೆಲಸ ಮಾಡಲು ಹೋದರೆ, ಆ ವ್ಯಕ್ತಿಯ ಕಾಲೆಳೆದು,ಮುಂದೆ ಹೋಗದಂತೆ ತಡೆಯುವ ಕೀಳು ಮನಸ್ಸಿನವರು ಇರುವಷ್ಟು ಸಮಯ ಯಾವುದು ಸರಿಯಾಗಿ ನಡೆಯದು.ಇದನ್ನು ಸ್ವಪ್ರತಿಷ್ಠೆಯಾಗಿ ತಗೆದುಕೊಂಡು ನಮ್ಮ ಶಾಲೆ,ನಮ್ಮೂರ ಶಾಲೆಯೆಂಬ ಆತ್ಮಾಭಿಮಾನ ಬೆಳೆದರೆ ಮಾತ್ರ ಊರ ಶಾಲೆ ಹೆಮ್ಮೆಯ ಶಾಲೆಯಾಗಿ ಸ್ಥಾಪನೆಯಾಗಲು ಸಾಧ್ಯ. ಎಷ್ಟೋ ಊರುಗಳಲ್ಲಿ ಸರಕಾರಿ ಶಾಲೆಗಳು ಊರಿನವರ ಹಿತಾಸಕ್ತಿಯಿಂದ ಇತರರಿಗೆ ಮಾದರಿಯಾದ ಉದಾಹರಣೆಗಳು ನಮ್ಮ ಮುಂದಿವೆ.ದುಡ್ಡೊಂದು ಕೈಲಿದ್ದರೆ ಎಲ್ಲವನ್ನೂ
 ಹಿಡಿಯಬಹುದೆಂಬ ಭ್ರಮೆಯಿಂದ ಹೊರಬಂದಷ್ಟು ಒಳಿತು.
ನಾವು ಕಲಿತ ಸರಕಾರಿ ಶಾಲೆಗಳು ಇಂದು ನಮ್ಮ ಬದುಕನ್ನು ರೂಪಿಸಿವೆ. ಆದರೆ,ದಾರಿ ಮಾಡಿಕೊಟ್ಟ ಗುರುವನ್ನು ಕಡೆಗಣಿಸಿದರೆ ಬದುಕು ಭದ್ರವಾದಿತೆ.ಕಲಿಯುವ ಹಕ್ಕು ಎಲ್ಲರದು.ಇಂದು ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು…ಮಗು ಬಾಲಕಾರ್ಮಿಕನಾಗದಂತೆ ತಡೆದು ಶಿಕ್ಷಣ ಕ್ಷೇತ್ರ ಅನೇಕ ಪ್ರೋತ್ಸಾಹದಾಯಕ ಯೋಜನೆಗಳನ್ನು! ಜಾರಿಗೆ ತಂದು,ನುರಿತ ಶಿಕ್ಷಕರಿರುವ ಶಾಲೆಗಳು ಬಡಮಕ್ಕಳ ಮತ್ತು ಉಚಿತ ಶಿಕ್ಷಣದ ಬಗ್ಗೆ ಅರಿತ ಪ್ರಜ್ಞಾವಂತ ಪಾಲಕರಿಂದ ಇಂದಿಗೂ ತಮ್ಮ ಗುಣಮಟ್ಟ ಕಾಯ್ದುಕೊಂಡು ಬಂದಿವೆ. ಎಲ್ಲೋ ಕೆಲವೊಂದು ಅಪವಾದಗಳಿವೆ.
ಸರಕಾರಿ ನೌಕರರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಲ್ಲಿ ಹಿಂದೇಟು ಹಾಕಿದ್ದರ ಪರಿಣಾಮ ಇತರರು ನಾವ್ಯಾಕೆ ಹಾಕಬೇಕು ಎಂಬ ಪ್ರಶ್ನೆ ಮೂಡಿದ್ದು,ತುಂಬಾ ಗಂಭೀರವಾಗಿ ಚರ್ಚೆಯಾಗಿದ್ದು ಇದೆ.ಖಾಸಗಿ ಶಾಲೆಗೆ ತುಂಬುವ ಡೋನೆಶನ್ ತಮ್ಮೂರ ಶಾಲೆಯನ್ನು ಸುಸಜ್ಜಿತ ಪ್ರಯೋಗಾಲಯಗಳಾಗಿ ಬೆಳೆಸಿ ಸುತ್ತ ಹಳ್ಳಿಯಂದ ಮಕ್ಕಳು ಕಲಿತು ಬೆಳೆಯುವಲ್ಲಿ ಕೈಜೋಡಿಸಿದರೆ ಎಷ್ಟು ಚೆನ್ನ?. ಇದೇನು ಹೇಳಿದಷ್ಟು ಆಗಿ ಹೋಗುವ ಮಾತಲ್ಲ‌.ಚಿಂತಿಸಬಹುದು.ಅವೇ ಈ ಅಸ್ತಿತ್ವಕ್ಕೆ ಕಾರಣವಲ್ಲ.ಬದಲಾದ ದೃಷ್ಟಿ ಕೋನವನ್ನು ನಾವು ಡಿಜಿಟಲ್ ಮಾಧ್ಯಮದ ರೂವಾರಿಗಳಾಗಿ ಅನುಸರಿಸಬೇಕಾಗಿದ್ದು ಅನಿವಾರ್ಯ.

ಒಟ್ಟಾರೆಯಾಗಿ ಹೇಳುವುದಾದರೆ,ಮನೆ ಮನಸ್ಸುಗಳು ಒಗ್ಗೂಡುವುದು ಕೇವಲ ಬಾಯಿ ಮಾತಲ್ಲಿ ಆದರೆ ಉಪಯೋಗವಿಲ್ಲ.ಸರಕಾರ ಕೊಡುವ ಸವಲತ್ತುಗಳನ್ನು ಸದುಪಯೋಗ ಪಡೆದುಕೊಂಡು,ಅಭಿವೃದ್ಧಿಯತ್ತ ಸಾಗಿದರೆ ಎಷ್ಟು ಚಂದ. ಮನಸ್ಸುಗಳು ಬಲಿಯಬೇಕು.ಸರಕಾರಿ ಶಾಲೆಗಳಲ್ಲಿಯ ಪೂರಕ ಯೋಜನೆಯನ್ನು ಪುರಸ್ಕರಿಸುತ್ತ,ಶಿಕ್ಷಕರಿಗೆ ಕಲಿಸಲು ಮಾತ್ರ ಆದ್ಯತೆ ನೀಡುತ್ತ,..ಎಲ್ಲ ಒತ್ತಡಗಳಿಂದ ಮುಕ್ತಿ ನೀಡುತ್ತ ಸಾಗಿದರೆ ಎಲ್ಲವೂ ಸುಸೂತ್ರವಾಗುವುದು.


3 thoughts on “

    1. ಲೇಖನ ಓದುತ್ತಿದ್ದಂತೆ ನಾ ಓದಿದ ಶಾಲೆ,ಅಮ್ಮ,ಅಪ್ಪ ಒಮ್ಮೆ‌ಎದುರಿಗೆ ಬಂದಂತಾಗಿ ಕಣ್ಣೀರು ಬಂತು.ಮನಸಿಗೆ ನಾಟುವಂತಿದೆ.ಹಾಗೆ ಸಂದೇಶ ಇದು ನನ್ನ ಶಾಲೆ,ಕಲಿತ ಶಾಲೆ ಎಂಬ ಅಭಿಮಾನದ ಜೊತೆಗೆ ಸಹಕಾರ,ಸಹಾಯ ಹಸ್ತ ಚಾಚಿದರೆ ಅತ್ಯುತ್ತಮ ಶಾಲೆಗಳಾಗಿ ಹೊರಹೊಮ್ಮಲು ಸಾಧ್ಯ.ನಿಜವಾಗಿಯೂ ಉತ್ತಮ ಲೇಖನ ಧನ್ಯವಾದಗಳು ಮೆಡಮ್

  1. ಕಾಲ ಬದಲಾದಂತೆ ಮನಸ್ಸು ಬದಲಾಗುತಿದೆ.
    ಬದಲಾಗುತ್ತಿರುವ ಮನಸ್ಸುಗಳಿಗೆ ಏನು ಹೇಳೋದು ?
    ಪ್ರಶ್ನೆಯಾಗಿ ಉಳಿಯುತಿದೆ.
    ಇಂಗ್ಲೀಷ್ ಗೆ ಮುಗಿ ಬೀಳೋರಿಗೆ ಏನು ಹೇಳೋಕೆ ಆಗಲ್ಲವಲ್ಲ.
    ನಿನ್ನ ಲೇಖನ ಅರ್ಥಪೂರ್ಣ ವಾಗಿದೆ.

Leave a Reply

Back To Top