ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಯುತ್ತಿದ್ದ ಸೋಮವಾರ ಬಂದೇ ಬಿಟ್ಟಿತು ಹತ್ತು ವರೆಗೆ ಕಚೇರಿ ಸಮಯ. ಹತ್ತು ಹತ್ತಕ್ಕೆಲ್ಲ ನಾನು ಅಲ್ಲಿಯೇ ಇದ್ದೆ. ನಾಲ್ಕನೇಯ ಮಹಡಿಯಲ್ಲಿ ನಮ್ಮ ತರಗತಿಗಳು. ನಾವು ಒಟ್ಟು 28 ಜನ ಇದ್ದವು ಮೂರನೆಯ ಮಹಡಿಯಲ್ಲಿ ಎನ್ ಟಿ‌ ಬಿ ಅಭ್ಯರ್ಥಿಗಳ ತರಬೇತಿ. ಅವರು 125 ಜನ ಇದ್ದರು. ಲಿಫ್ಟ್ ನಲ್ಲಿಯೇ ಹೋಗಬೇಕಿತ್ತು. ಸದ್ಯ ನನ್ನ ಪುಣ್ಯಕ್ಕೆ ಲಿಫ್ಟ್ ಆಪರೇಟರ್ ಇದ್ದರು. ನನಗೋ ಭಯ ಅಂದರೇ ಭಯ. ಆಪರೇಟರ್  ಇಲ್ಲದಿದ್ದರೆ ನಾಲ್ಕು ಮಹಡಿ ಹತ್ತಿಯೇ ಬಿಡುತ್ತಿದ್ದೆನೇನೋ ನಾನು. ಅಂದು ಶಕ್ತಿಯೂ ಇತ್ತು ಬಿಡಿ.  ಆದರೂ ಈಗ ಒಂದನೆಯ ಮಹಡಿಗೂ ಲಿಫ್ಟನ್ನೆ ಬಳಸಲು ಬಯಸುವ ನನ್ನ ಮನಸ್ಥಿತಿ ಕಾಲದ ಆಟಕ್ಕೆ ಒಂದು ಸಾಕ್ಷಿ ಎನ್ನಬಹುದೇನೋ.

ಸರಿ ಲಿಫ್ಟ್ ನಲ್ಲಿ ಆಚೆ ಬಂದಾಗ ಬೇರೆ ಮೂರು ನಾಲ್ಕು ಜನ ಇದ್ದರು ಆದರೆ ಯಾರ ಪರಿಚಯವೂ ನನಗೆ ಇರಲಿಲ್ಲ ತರಗತಿಯ ಹಾಲ್ ಪ್ರವೇಶಿಸಿದಾಗ ಪರಿಚಿತ ಗೌರಿಯ ಮುಖ ಕಂಡಿತು ನಕ್ಕು ಅವಳ ಪಕ್ಕ ಕುಳಿತುಕೊಂಡೆ ಅಲ್ಲಿಯೇ ಅವಳ ಇನ್ನೊಂದು ಪಕ್ಕದಲ್ಲಿ ಇದ್ದವಳು ನಂದಶ್ರೀ ಕುಲಕರ್ಣಿ ಅವಳ ಪರಿಚಯ ಆಯಿತು ಸ್ನೇಹಮ ಈ ವ್ಯಕ್ತಿತ್ವ ಅಂದಿನಿಂದ ಇಂದಿನವರೆಗೂ ಅದೇ ಸ್ನೇಹ. ನಾವು ಮೂವರು ಪರಸ್ಪರ ಮಾತನಾಡಿ ಕೊಳ್ಳತೊಡಗಿದೆ ಅಷ್ಟರಲ್ಲಿ ತರಗತಿ ತೆಗೆದುಕೊಳ್ಳುವ ಸಿಬ್ಬಂದಿ ಬಂದರು.  ಶಾಲಾ ಕಾಲೇಜುಗಳಂತೆ ಒಂದೊಂದು ಗಂಟೆಯ ಅವಧಿ . ಬೆಳಿಗ್ಗೆ ಹಾಗೂ ಮಧ್ಯಾಹ್ನ ಟೀ ವಿರಾಮ‌ ಸಹ ಇರುತ್ತಿತ್ತು.

ತರಬೇತಿ ತೆಗೆದುಕೊಳ್ಳುತ್ತಿದ್ದವರು ವಿಭಾಗಿಯ ಕಚೇರಿಯ ಹಿರಿಯ ಅಧಿಕಾರಿಗಳು ಬಹಳ ಚೆನ್ನಾಗಿ ನಮಗೆ ನಿಗಮದ ಪರಿಚಯ ಮಾಡಿಕೊಟ್ಟರು ಕೇಂದ್ರ ಸರ್ಕಾರದ 5 ಕೋಟಿ ಅನುದಾನ ಪಡೆದು ಆರಂಭವಾದ ಸಂಸ್ಥೆ ಈಗ ಸರ್ಕಾರದ ಎಲ್ಲಾ ಸಾಮಾಜಿಕ ಕೆಲಸಗಳಿಗೂ ಹಣ ತೊಡಗಿಸುತ್ತದೆ ಅಲ್ಲದೆ ಪ್ರತಿವರ್ಷ ಕೋಟ್ಯಾಂತರ ಹಣವನ್ನು ಸರಕಾರಕ್ಕೆ ಸಂದಾಯ ಮಾಡುತ್ತದೆ ಎಂದು ಅಂದಿನ ಅಂಕಿ ಅಂಶಗಳ ಪ್ರಕಾರ ತಿಳಿಸಿಕೊಟ್ಟರು. ಮೊದಲು ಸಣ್ಣ ಸಣ್ಣ ಖಾಸಗಿ ಸಂಸ್ಥೆಗಳಾಗಿ ಇದ್ದ ವಿಮಾ ಸಂಸ್ಥೆಗಳು 1956ರಲ್ಲಿ ರಾಷ್ಟ್ರೀಕರಣಗೊಂಡು ಭಾರತೀಯ ಜೀವವಿಮ ನಿಗಮ ಆದ ಬಗೆಯನ್ನು ಹೇಳಿದರು ನಿಗಮದ ಧ್ಯೇಯ ಹಾಗೂ ಉದ್ದೇಶಗಳನ್ನೇ ಒಂದು ದಿನದ ಇಡೀ ತರಗತಿಗಳಲ್ಲಿ ಹೇಳಿದಾಗ ನಾವು ಸೇರಿದ ಈ ಸಂಸ್ಥೆಯ ಮಹತ್ವ ನಮಗೆ ಅರಿವಾಯಿತು. ನಿಗಮದ ಮೌಲ್ಯವನ್ನು ಇಂಚಿಂಚಾಗಿ ಬಿಡಿಸಿ ಹೇಳಿದ ಬೋಧಕರು ನಿಗಮದ ಸಂಸ್ಕೃತಿಯನ್ನು ಸಹ ನಮ್ಮ ಮುಂದೆ ಅನಾವರಣ ಗೊಳಿಸಿದರು ಅದರಿಂದ ನಮ್ಮ ಬದ್ಧತೆ ಹಾಗೂ ಸಂಸ್ಥೆಯ ಬಗೆಗಿನ ಗೌರವ ಮತ್ತಷ್ಟು ಹೆಚ್ಚಾಯಿತು ಇಂತಹ ಉತ್ತಮ ಧಯೋದ್ದೇಶಗಳಿಂದ ನಡೆಯುತ್ತಿರುವ ಸಂಸ್ಥೆಗೆ ನಾವು ಸಹ ಪ್ರಮಾಣಿಕವಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂಬ ಜಾಗೃತಿ ಉಂಟಾಗಿತ್ತು.

ಒಂದು ರೀತಿಯಲ್ಲಿ ಈ ತರಬೇತಿ ಕಾರ್ಯಕ್ರಮಗಳು ಕೆಲಸಕ್ಕೆ ತೊಡಗುವ ಮುನ್ನ ನಮ್ಮ ಮನಸ್ಸನ್ನು ಹದಗೊಳಿಸುವಂತಹ ಕಾರ್ಯವನ್ನು ತುಂಬಾ ಚೆನ್ನಾಗಿ ನೆರವೇರಿಸಿತು 15 ದಿನಗಳ ತರಬೇತಿಯಲ್ಲಿ ನಮಗೆ ನಿಗಮದ ಹಾಗೂ ಹೋಗುಗಳ ಹಾಗೂ ಕೆಲಸಕಾರ್ಯಗಳ ವೈಖರಿಯ ಬಗ್ಗೆ ಒಂದು ಪಕ್ಷಿ ನೋಟ ಕೊಡಲಾಯಿತು. ನಿಗಮದಲ್ಲಿ ಯಾವ ರೀತಿ ಕೆಲಸ ಕಾರ್ಯಗಳು ನಡೆಯುತ್ತದೆ ವಿಮೆ ಎಂದರೇನು ಅದನ್ನು ಹೇಗೆ ನಿರ್ಧರಿಸಬಹುದು ಅದಕ್ಕೆ ಇರುವ ಮಾನದಂಡಗಳೇನು ಇವೆಲ್ಲವನ್ನು  ಬೇರೆ ಬೇರೆ ತರಗತಿಗಳಲ್ಲಿ ಸವಿವರವಾಗಿ ಹೇಳಲಾಯಿತು.
ಎಲ್ ಐ ಸಿ ಎಂದರೆ ಜೀವವಿಮೆ ಎಂಬುದು ಅಂದಿನ ನಂಬಿಕೆ ಹೇಗೆ ಬೀರು ಎಂದರೆ ಗಾಡ್ರೇಜ್ ಎಂದು ಹೇಳುತ್ತಾರೋ ಆ ರೀತಿಯ ಒಂದು ಬ್ರಾಂಡ್ ಆಗಿದ್ದ ಹೆಸರು ಎಲ್ಐಸಿ. ಈ ವಿಮೆಯನ್ನು ದೇಶದ ಮೂಲೆ ಮೂಲೆಗೂ ಕೊಂಡೊಯ್ಯುವುದು ಹಾಗೂ ಪ್ರತಿಯೊಬ್ಬ ವ್ಯಕ್ತಿಗೂ ವಿಮೆಯ ಆಸರೆ ನೀಡಬೇಕೆ ಎನ್ನುವುದು ಜೀವವಿಮನಿಗಮದ ಮೂಲ ಉದ್ದೇಶ ಎಂದು ಅರಿತಾಗ ನಿಜಕ್ಕೂ ನಮ್ಮ ಈ ಸಂಸ್ಥೆಯ ಬಗ್ಗೆ ಹೆಮ್ಮೆ ಉಂಟಾಯಿತು.

ಒಂದು ಶಾಖ ಕಚೇರಿಯಲ್ಲಿ ಇರುವ ಸಿಬ್ಬಂದಿಗಳ ಬಗ್ಗೆ ತಿಳಿಸಿ ಹೇಳುತ್ತಾ ಸಿಬ್ಬಂದಿ ವರ್ಗದಲ್ಲಿ ನಾಲ್ಕನೆಯ ವರ್ಗ ಎಂದರೆ ಅದು ಸಿಪಾಯಿಗಳದು ಮೂರನೆಯ ವರ್ಗದಲ್ಲಿ ಸಹಾಯಕರು ಉನ್ನತ ಶ್ರೇಣಿ ಸಹಾಯಕರು ಟೈಪಿಸ್ಟ್ ಗಳು ಬರುತ್ತಾರೆ ನಂತರ ಒಂದನೆಯ ವರ್ಗದಲ್ಲಿ ಉಪ ಆಡಳಿತಾಧಿಕಾರಿ ಆಡಳಿತ ಅಧಿಕಾರಿಗಳು ಇರುತ್ತಾರೆ ಇಡೀ ಶಾಖೆಗೆ ಶಖಾಧಿಕಾರಿಗಳು ಮುಖ್ಯಸ್ಥರು ಹಾಗೂ ಅವರಿಗೆ ಸಹಾಯಕವಾಗಿ ಉಪಶಾಖಾಧಿಕಾರಿಗಳು ಇರುತ್ತಾರೆ ಎಂಬ ವಿಷಯ ತಿಳಿಯಿತು. ಹಾಗೂ ನಿಗಮದಲ್ಲಿ ಎರಡನೆಯ ವರ್ಗ ಎಂದರೆ ಅಭಿವೃದ್ಧಿ ಅಧಿಕಾರಿಗಳು ಇವರ ಕೈ ಕೆಳಗೆ ಪ್ರತಿನಿಧಿಗಳು ಇರುತ್ತಾರೆ ಹಾಗೂ ಪ್ರತಿಯೊಂದು ಪಾಲಿಸಿಯು ಇವರುಗಳ ಮೂಲಕವೇ ಬರುತ್ತದೆ.

ವಿಭಾಗ ಕಚೇರಿಯಲ್ಲಿ ಒಂದನೆಯ ಮತ್ತು ಮೂರು ಮತ್ತು ನಾಲ್ಕನೆಯ ವರ್ಗದ ಸಿಬ್ಬಂದಿಗಲ‌ಜೊತೆಗೆ ಮೂರು ವಿಭಾಗಾಧಿಕಾರಿಗಳೊಂದಿಗೆ ಬೇರೆ ಬೇರೆ ಡಿಪಾರ್ಟ್ಮೆಂಟುಗಳಿಗೆ ಮುಖ್ಯಸ್ಥರಾಗಿ ಉಪ ವಿಭಾಗಾಧಿಕಾರಿಗಳು ಇರುತ್ತಾರೆ.

ಈ ಎಲ್ಲಾ ವಿಷಯಗಳೊಂದಿಗೆ ಅಂದು ಪ್ರಸ್ತುತ ವಿತ ಎಲ್ಲಾ ರೀತಿಯ ಪಾಲಿಸಿಗಳ ಬಗೆಗೂ ನಮಗೆ ಅರಿವು ಉಂಟು ಮಾಡಿಸಿದರು ಅಲ್ಲದೆ ಪಾಲಿಸಿ ಸೇವಾ ವಿಭಾಗದಲ್ಲಿ ಯಾವ ರೀತಿಯ ಸೇವೆಗಳನ್ನು ಪಾಲಿಸಿದರೆ ಕೊಡಲಾಗುತ್ತದೆ ಎಂದು ತಿಳಿಸಿ ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆಯೂ ಹೇಳಿಕೊಟ್ಟರು. ಇವೆಲ್ಲವನ್ನೂ ಕೇಳಿ ನಾವು ಶಾಖೆಗೆ ಹೋಗಿ ಇದೆಲ್ಲವನ್ನು ನಿರ್ವಹಿಸುತ್ತೇವೆಯೇ ಎಂಬ ಒಂದು ರೀತಿಯ ಸಣ್ಣ ಅಳುಕು ಕಾಡಿದರೂ
ಬೋಧನಾ ಸಿಬ್ಬಂದಿಯ ಪ್ರೋತ್ಸಾಹದ ನುಡಿಗಳು ಹಾಗೂ ಸೀನಿಯರ್ ಸಿಬ್ಬಂದಿಗಳು ನಿಮಗೆ ಎಲ್ಲಾ ರೀತಿಯಲ್ಲೂ ಸಹಾಯ ಸಹಕಾರ ನೀಡುತ್ತಾರೆ ಎಂದು ಹೇಳಿದ ಮಾತುಗಳು ಹೆದರಿಕೆಯನ್ನು ದೂರ ಮಾಡುತ್ತಿದ್ದೆವು ಏನೆಂದರು ಪ್ರತ್ಯಕ್ಷವಾಗಿ ಹೋಗಿ ಕೆಲಸ ಮಾಡಿದಾಗ ಅನುಭವ ತಾನಾಗಿಯೇ ಆಗುತ್ತದೆ ಎಂದು ಅನಿಸಿತು.

ನಿಗಮದ ಬಗ್ಗೆ ಏನೆಂದು ತಿಳಿದಿರದ ನಮಗೆ ಅದರ ಬಗ್ಗೆ ಅರಿವು ಮೂಡಿಸಿ ಕಾರ್ಯಕರ್ತೆಯ ತಿಳುವಳಿಕೆ ನೀಡಿ ಈ ಎಲ್ಲದಕ್ಕೂ ಬೇಕಾದ ಒಂದು ರೀತಿಯ ಕಮಿಟ್ಮೆಂಟ್ ಉಂಟಾಗುವಂತೆ ಮಾಡಿದ್ದು ಖಂಡಿತ ಆ 15 ದಿನಗಳ ತರಬೇತಿ. ನಿಗಮದ ಬಗ್ಗೆ ಒಂದು ರೀತಿಯ ಕರ್ಟನ್ ರೈಸರ್ ಆಗಿತ್ತು ಆ ತರಬೇತಿ.

ಇದಿಷ್ಟು ಬೋಧನೆಯ ಬಗ್ಗೆ ಆದರೆ ನಾವು ಅದನ್ನು ಅನುಭವಿಸುತ್ತಾ ಸಂತೋಷ ಅನುಭವಿಸಿದ ಬಗ್ಗೆ ಹೇಳದಿದ್ದರೆ ಖಂಡಿತಾ ಈ ಬರಹ ಪೂರ್ತಿ ಆಗುವುದೇ ಇಲ್ಲ. ಟೀ ರಾಮ ಇರುತ್ತಿತ್ತು ಎಂದು ಹೇಳಿದೆ ಅಲ್ಲವೇ ನಾನು ಕಾಫಿ ಟೀ ಅಂದರೆ ಪ್ರಾಣ ಬಿಡುತ್ತಿದ್ದವಳು ಗೌರಿ ನಂದ ಸಹ ಹಾಗೆ ಎರಡು ಹೊತ್ತು ಕೆಳಗೆ ಕ್ಯಾಂಟೀನಿಗೆ ಹೋಗಿ ಕಾಫಿ ಕುಡಿಯುತ್ತಿದ್ದೆವು ಲಿಫ್ಟ್ ಇದ್ದೆ ಇತ್ತಲ್ಲ.
15 ನಿಮಿಷಗಳ ವಿರಾಮ ಅದು ಹಾಗಾಗಿ ಹೋಗಿ ಬರಲು ಸಮಯ ಸಾಕಾಗುತ್ತಿತ್ತು. ಆ ಸಮಯದಲ್ಲಿ ಕ್ಯಾಂಟೀನಿನಲ್ಲಿ ವಡೆ ಬಜ್ಜಿ ಬೋಂಡ ಆ ರೀತಿ ಕುರುಕಲು ತಿಂಡಿಗಳನ್ನು ಮಾಡಿರುತ್ತಿದ್ದರು ನಾವು ಒಂದು ಪ್ಲೇಟ್ ಅದನ್ನು ತೆಗೆದುಕೊಂಡು ಮೂರು ಜನವು ಶೇರ್ ಮಾಡಿ ಟೀ ಕುಡಿದು ಬರುತ್ತಿದೆ ಮಧ್ಯಾಹ್ನದ ಹೊತ್ತು ಹಾಗೆ ಊಟದ ವಿರಾಮದಲ್ಲಿ ಅವರಿಬ್ಬರು ಡಬ್ಬಿ ತಂದಿರುತ್ತಿದ್ದರು ನಾನು ಮಾತ್ರ ದೊಡ್ಡಮ್ಮನ ಮನೆಗೆ ಹೋಗಿ ಊಟ ಮಾಡಿ ಬರುತ್ತಿದ್ದೆ. ಹಾಗೆ ಒಂದು ಬಾರಿ ಗೌರಿಯನ್ನು ನಮ್ಮ ದೊಡ್ಡಮ್ಮನ ಮನೆಗೆ ಕರೆದುಕೊಂಡು ಹೋಗಿದ್ದೆ.

ತರಬೇತಿಯ ಮೊದಲ ವಾರ ಮುಗೀತು ಶನಿವಾರ ಅಣ್ಣ ಮತ್ತು ರವೀಶ್ ಬಂದರು ನನಗೆ ಚಿಕ್ಕಬಳ್ಳಾಪುರ ಪೋಸ್ಟಿಂಗ್ ಎಂದು ತಿಳಿದಾಗಲೇ ಅಮ್ಮ ಅವರ ತಂಗಿ ಪ್ರಭಾತ್ ಕಣೋ ಅವರಿಗೆ ಕಾಗದ ಬರೆದು ನನಗೊಂದು ಮನೆ ನೋಡುವಂತೆ ತಿಳಿಸಿದ್ದರು. ಹಾಗೆ ಅವರು ಮನೆ ನೋಡಿರುವುದಾಗಿ ಪತ್ರ ಬರೆದಿದ್ದರು ಹಾಗಾಗಿ ಚಿಕ್ಕಬಳ್ಳಾಪುರಕ್ಕೆ ಹೊರಟೆವು. ಪ್ರಭ ಚಿಕ್ಕಮ್ಮ ಅವರು ಕೋಟೆಯ ಬ್ರಾಹ್ಮಣರ ಬೀದಿಯಲ್ಲಿ ಇದ್ದದ್ದು .ಅಲ್ಲಿಯೇ ಅವರ ಮನೆಯ ಮುಂದಿನ ರಸ್ತೆಯಲ್ಲಿ ಶ್ರೀಕಂಠ ರಾಯರು ಎನ್ನುವವರ ಮನೆ ಖಾಲಿ ಇತ್ತು. ಔಟ್ ಹೌಸ್ ತರಹವೆ ಇದ್ದರು ಮುಂದಿನ ಬಾಗಿಲು ರಸ್ತೆಗೆ ಇತ್ತು ಪಕ್ಕದಲ್ಲಿ ಮನೆ ಮಾಲೀಕರ ಮನೆ ಸಣ್ಣ ರೂಮ್ ಹಾಲ್ ಮತ್ತು ಅಡಿಗೆ ಮನೆ ಬಚ್ಚಲು ಮನೆಗಳ ಮನೆ. ಶೌಚಾಲಯ ಮಾತ್ರ ಓನರ್ ಮನೆಯಲ್ಲಿ ಇದ್ದಿದ್ದು. ಅದೊಂದು ಕೊರತೆ ಬಿಟ್ಟರೆ ಇನ್ನೆಲ್ಲಾ ತರಹದಲ್ಲೂ ಸರಿ ಹೋಗುತ್ತಿದ್ದು ನಾನು ಒಬ್ಬಳೇ ಭಯವಿಲ್ಲದಂತೆ ಇರಬಹುದಾದ ಅಂತಹ ವಾತಾವರಣವಿತ್ತು. ಆಗ 250 ಬಾಡಿಗೆ 10 ತಿಂಗಳ ಅಡ್ವಾನ್ಸ್ ಎರಡುವರೆ ಸಾವಿರ ಅದಕ್ಕೆ. 500 ಮುಂಗಡ ಕೊಟ್ಟು ಮಿಕ್ಕಿದ್ದನ್ನು ಮುಂದಿನ ವಾರ ಸಾಮಾನುಗಳನ್ನು ಶಿಫ್ಟ್ ಮಾಡಿ ತರುವಾಗ ಕೊಡುತ್ತೇವೆ ಎಂದು ಹೇಳಿ ಮನೆ ಗಟ್ಟಿ ಮಾಡಿಕೊಂಡೆವು ಚಿಕ್ಕಮ್ಮನ ಮನೆ ಹತ್ತಿರದಲ್ಲಿಯೇ ಇದ್ದುದರಿಂದ ಒಂದು ರೀತಿ ಸುರಕ್ಷಿತತೆ ಎನಿಸಿತು ಆ ಶ್ರೀಕಂಠ ರಾಯರು ಬೇರೆಯವರೇನಲ್ಲ ನಮ್ಮ ದೂರದ ಸಂಬಂಧಿಕರೇ ಹಾಗಾಗಿ ಅವರಿಗೂ ನಾವು ಹೋಗಿದ್ದು ಬಹಳ ಸಂತೋಷವಾಗಿತ್ತು.

ಮತ್ತೆ ಸೋಮವಾರದಿಂದ ತರಬೇತಿಯ ಎರಡನೆಯ ವಾರ ಆರಂಭವಾಗಿತ್ತು ಆಗ ಎನ್ ಟಿಬಿ ಅಭ್ಯರ್ಥಿಗಳ ಕಡೆಯಿಂದ ಮುಕುಂದನ್ ಎನ್ನುವವರು ಬಂದು ಚಿಕ್ಕಬಳ್ಳಾಪುರಕ್ಕೆ ತಾವು ಹೋಗುವುದಾಗಿಯೂ ತಮಗೆ ಸಿಕ್ಕಿದ್ದ ಚನ್ನಪಟ್ಟಣ ಬ್ರಾಂಚ್ ಶಾಖೆಗೆ ನಾನು ಹೋಗಲು ಸಾಧ್ಯವೇ ಎಂದು ಕೇಳಿದರು ಅವರ ಗೆಳೆಯರಾದ ನಾಗರಾಜ ಅವರಿಗೆ ಚಿಕ್ಕಬಳ್ಳಾಪುರಕ್ಕೆ ಪೋಸ್ಟಿಂಗ್ ಆಗಿತ್ತು. ಗೌರಿ ಮತ್ತು ನಂದಶ್ರೀ ಇಬ್ಬರಿಗೂ ಚೆನ್ನಪಟ್ಟಣ ಸಿಕ್ಕಿದ್ದು ನಾನು ಚನ್ನಪಟ್ಟಣಕ್ಕೆ ಬಂದರೆ ಚೆನ್ನಾಗಿರುತ್ತದೆ ಎಂದು ಅವರಿಬ್ಬರ ಅಭಿಪ್ರಾಯ. ಈಗಾಗಲೇ ಮನೆ ಎಲ್ಲಾ ಮಾಡಿ ಆಗಿದ್ದ ಕಾರಣ ಹಾಗೂ ಪ್ರತಿದಿನ ಚನ್ನಪಟ್ಟಣಕ್ಕೆ ಓಡಾಡುವುದು ಕಷ್ಟ ಎಂದು ಹೇಳಿ ನಾನು ಆ ಪ್ರಸ್ತಾಪಕ್ಕೆ ಒಪ್ಪಲಿಲ್ಲ. ಮುಂದೆ ಆ ನಾಗರಾಜ್ ಅವರೇ ನನ್ನ ಸಂಬಂಧಿ ಲಲಿತಾಳ ಕೈಹಿಡಿದು ನನಗೂ ಸಂಬಂಧಿಕರಾದರು. ಮುಕುಂದನ್ ಅವರು ನಾನು ಪದೋನ್ನತಿ ಹೊಂದಿ ಸಕಲೇಶಪುರಕ್ಕೆ ಹೋದಾಗ ಮತ್ತೆ ನನ್ನ ಸಹೋದ್ಯೋಗಿಯಾಗಿದ್ದರು.

ತರಬೇತಿ ಮುಗಿಯುತ್ತಾ ಬಂದ ಹಾಗೆ ನಾನು ನಂದಶ್ರೀ ಹಾಗೂ ಗೌರಿ ಮಾತನಾಡಿಕೊಂಡು ಹತ್ತಿರದಲ್ಲೇ ಇದ್ದ ಕಾಮತ್ ಹೋಟೆಲ್ ಗೆ ಒಂದು ಮಧ್ಯಾಹ್ನ ಊಟಕ್ಕೆ ಹೋದೆವು. ಅದೇ ಮೊದಲು ಗೊಂಡು ನಂತರ ನಾವು ಮೂವರು ಈ ರೀತಿ ಹೋಟೆಲಿನಲ್ಲಿ ಸೇರಿ ಭೇಟಿಯಾಗುವುದು ಹಾಗೆಯೇ ನಡೆದುಕೊಂಡು ಬಂದಿತು ಇತ್ತೀಚೆಗೆ ಗೌರಿ ನಿವೃತ್ತಿ ಹೊಂದಿದಾಗ ಸಹ ಅದೇ ರೀತಿ ಹೋಟೆಲ್ ಸಂದರ್ಶನ ನಡೆದಿತ್ತು.

ತರಬೇತಿಯ ಕಡೆಯ ಎರಡು ದಿನಗಳ ಸಂಜೆ ಕಾರ್ಮಿಕ ಸಂಘಗಳಿಂದ ಬೇರೆ ಬೇರೆ ದಿನ ನಮ್ಮೆಲ್ಲರಿಗೂ ವಿದಾಯ ಕೂಟವನ್ನು ಏರ್ಪಡಿಸಿದ್ದರು ಕೆಳಗೆ ಕ್ಯಾಂಟೀನ್ ನಲ್ಲಿಯೇ ಸಂಜೆಯ ತಿಂಡಿ ಕಾಫಿ ಹಾಗೂ ಅವರ ಸಂಘಕ್ಕೆ ಸೇರಬೇಕೆಂಬ ಹಕ್ಕೊತ್ತಾಯ. ಕಡೆಯ ದಿನ ಒಂದು ಗುಂಪು ಫೋಟೋ ಸಹ ತೆಗೆದರು ದುರದೃಷ್ಟವಶಾತ್ ಆ ಫೋಟೋ ನನ್ನ ಬಳಿ ಇಲ್ಲ ನಮ್ಮದೇ ಬ್ಯಾಚನ ಯಾರ ಬಳಿಯಾದರೂ ಇದ್ದರೆ ಕೇಳಿ ತೆಗೆದುಕೊಳ್ಳಬೇಕು. ಎಲ್ಲರಿಗೂ ವಿದಾಯ ಹೇಳಿ ಪತ್ರ ಮುಖೇನ ಸಂಪರ್ಕ ಇಟ್ಟುಕೊಳ್ಳುವುದಾಗಿ ತಿಳಿಸಿ ಬೇಸರದಿಂದಲೇ ಅಗಲಿದೆವು.

ನಮ್ಮ ತಂಡದ ಹಲವರು ಒಂದೊಂದು ಒಂದೇ ಶಾಖೆಗೆ ಹೋಗಿದ್ದರಿಂದ ಅವರುಗಳಿಗೆ ಅಷ್ಟು ಬೇಸರವಾಗಲಿಲ್ಲ ಚಿಕ್ಕಬಳ್ಳಾಪುರಕ್ಕೆ ಮಾತ್ರ ನಾನೊಬ್ಬಳೇ ಯಾರು ಪರಿಚಯವಿರದ ಕಡೆ ಒಬ್ಬಳೇ ಹೋಗಬೇಕಲ್ಲ ಎಂಬ ಸಣ್ಣದೊಂದು ಹಿಂಜರಿಕೆ ಕಾಡಿಯೇ ಇತ್ತು.

ಭಾನುವಾರ ಬೆಳಿಗ್ಗೆಗೆ ಹೊರಟು ಚಿಕ್ಕಬಳ್ಳಾಪುರಕ್ಕೆ ಚಿಕ್ಕಮ್ಮನ ಮನೆಗೆ ಹೋದೆವು ರವೀಶ್ ಹಾಗೂ ನಮ್ಮ ತಂದೆ  ಜೊತೆಗೆ ಬಂದಿದ್ದರು ಸೋಮವಾರ ಶಾಖೆಗೆ ಹೋಗಬೇಕಿತ್ತು.


About The Author

5 thoughts on “”

  1. ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕರಿಗೆ ಅನಂತ ಧನ್ಯವಾದಗಳು

    ಸುಜಾತಾ ರವೀಶ್

  2. ಬರಹ ಕುತೂಹಲ ಮೂಡಿಸುತ್ತಿದೆ.
    ಮುರಳಿಧರ ಅನಂತಮೂರ್ತಿ

  3. ಡಾ.ರಾಧಿಕಾ ರಂಜಿನಿ, ಲೇಖನ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ ಸುಜಾತ ಮೇಡಂ.‌ಅಭಿನಂದನೆಗಳು.

Leave a Reply

You cannot copy content of this page

Scroll to Top