ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 *ಗುರುಪಾದ ತೀರ್ಥವೆ ಮಂಗಳ ಮಜ್ಜನವೆನಗೆ*
*ವಿಭೂತಿಯ ಒಳಗುಂದದ* *ಅರಿಸಿನವೆನಗೆ*
 *ದಿಗಂಬರವೆ ದಿವ್ಯಾಂಬರವೆನಗೆ*
 *ಶಿವಪಾದರೇಣುವೆ ಅನುಲೇಪನ ವೆನಗೆ*
 *ರುದ್ರಾಕ್ಷಿಯೆ ಮೈದೊಡಿಗೆ ಎನಗೆ*
 *ಶರಣರ ಪಾದಂಗಳ ತೊಂಡಿಲ* *ಬಾಸಿಗವೆನಗೆ* *ಚೆನ್ನಮಲ್ಲಿಕಾರ್ಜುನ*
 *ಎನ್ನ ಮದವಣಿಗ*
 *ಎನಗೆ ಬೇರೆ ಶೃಂಗಾರವೇಕೆ ಹೇಳಿರವ್ವ*

ಅಕ್ಕ ಮಹಾದೇವಿಯವರು ಕೌಶಿಕ ಮಹಾರಾಜರನ್ನು ತ್ಯಜಿಸಿ ,ಭಾವ ದಿಗಂಬರೆಯಾಗಿ ,ಹೊರನಡೆದು ಬರುವ ಚೆನ್ನಮಲ್ಲಿಕಾರ್ಜುನನ ಭಾವ ಬೆಳದಿಂಗಳಿನಲ್ಲೇ ಅನುರಕ್ತಗೊಂಡು, ತನ್ನ ಶೃಂಗಾರದ ವರ್ಣನೆಯನ್ನು ಮಾಡುವ ,ಅಕ್ಕನವರ ಮನ ಭಾವ, ಅನುಭಾವ ಚಿಂತನೆಯ ನಿಗೂಢ, ಬದುಕಿನ ಸೆಲೆ ಗೆ ನಮ್ಮನ್ನು ಕರೆದೊಯ್ಯುವ ಪರಿ ನಿಜಕ್ಕೂ ಅಚ್ಚರಿಯಾದದ್ದು .

ಅಕ್ಕನವರ ಭಾವ ತುಂಬೆಲ್ಲ ಚೆನ್ನಮಲ್ಲಿಕಾರ್ಜುನನವರೇ, ತುಂಬಿಕೊಂಡು ಶೃಂಗಾರದ ರಸ ಕಾವ್ಯದ, ಪದ ಮೂಲಿಕೆಯಲ್ಲಿ ವಚನಗಳನ್ನು ಕಟ್ಟಿ ನಮ್ಮನ್ನು, ಅಧ್ಯಾತ್ಮಿಕ ಚಿಂತನೆಗಳ ಪಥಕ್ಕೆ ಕರೆದೊಯ್ಯುವ, ಅಕ್ಕನವರ ವಚನಗಳು ಅಂದಿಗೂ ಮತ್ತು ಇಂದಿಗೂ ಹೆಚ್ಚು ಪ್ರಸ್ತುತವೆನಿಸಿಕೊಳ್ಳುತ್ತವೆ .

 *ಗುರುಪಾದ ತೀರ್ಥವೆ ಮಂಗಳ ಮಜ್ಜನವೆನಗೆ*

ಅಕ್ಕನವರ ನಿರ್ಲಿಪ್ತ ಭಾವ ನಮಗಿಲ್ಲಿ ಎದ್ದು ಕಾಣುತ್ತದೆ.
ಗುರುಪಾದಗಳ ತೀರ್ಥವೇ ಎನಗೆ ಮಜ್ಜನ ಎನ್ನುವ,ಅಕ್ಕನವರ ಭಾವ ಮಜ್ಜನ ನಮ್ಮ ಆಂತರಿಕ ಅರಿವಿನ ಸ್ನಾನ.ಈ ಆಂತರಿಕ ಸ್ನಾನ ದ ಕೊಳೆಯನ್ನು ಸ್ವಚ್ಚ ಮಾಡಿಕೊಂಡಾಗ ಮಾತ್ರ.ಗುರು, ಪಾದ ,ತೀರ್ಥ ಮಂಗಳದ ಸ್ನಾನ ಆದಂತೆ ಎನ್ನುವ ಅಕ್ಕನವರ ಅರಿವಿನ ಭಾವ ಸ್ನಾನ, ಪ್ರತಿಯೊಬ್ಬರ ಮೈ ಮನದ ತುಂಬ ತುಂಬಿಕೊಂಡಿರುವ ಕೊಳೆಯನ್ನು  ತೊಳೆದು ಶುದ್ಧ ಮಾಡಿಕೊಳ್ಳುವ ವಿಧಾನ.
ಗುರುಪಾದದ ಎರಡು ಉಂಗುಷ್ಟಗಳು ನಮ್ಮ ಅರಿವಿನ ಎರಡು ಕಣ್ಣುಗಳು ಈ ಅರಿವಿನ ಸ್ನಾನ ನನ್ನೊಳಗಿಂದಲೇ
ಅನುಗ್ರಹದ ಸ್ನಾನ  ಆಗಬೇಕು.

*ವಿಭೂತಿಯ ಒಳಗುಂದದ ಅರಿಸಿನವೆನಗೆ*

ಅಕ್ಕನ ಮೈ ಅರಿಸಿನ ವಿಭೂತಿಯಾಗಿದೆ . ಹಸುವಿನ ಸೆಗಣಿಯಿಂದ ತಯಾರು ಮಾಡಿದ ವೈಜ್ಞಾನಿಕ ಅಂಶವನ್ನು ಹೊಂದಿದ ವಿಭೂತಿಯು ಒಂದು ಆಜ್ಞಾಧಾರಕ ಸಂಕೇತವಾಗಿದೆ .

ಮೊದಲನೇಯ ಸಾಲು ನಮ್ಮ ನಮ್ಮ ಮನದಲ್ಲಿರುವ ಅಹಂಕಾರ ತೆಗೆದುಹಾಕುವ ಸಂಕೇತ .
ಎರಡನೇಯ ಸಾಲು ನಮ್ಮ ಮನದ ಅಜ್ಞಾನ ಕಳೆದು ಸುಜ್ಞಾನ ಮೂಡಿಸುವ ಸಂಕೇತವಾದರೆ ,
ಮೂರನೇಯದು ನಮ್ಮ ಕೆಟ್ಟ ಕರ್ಮಗಳನ್ನು, ಸುಳ್ಳುಗಳನ್ನು ಈ ದೇಹದೊಂದಿಗೆ ಸುಡುವ ಭಸ್ಮ.ಭವ ಭಂದನದಿಂದ ಮುಕ್ತರಾಗುವ ಸಂಕೇತ.
ಸೂಕ್ಷ್ಮ ಶರೀರದ ಭಾಗಕ್ಕೆ ವಿಭೂತಿಯನ್ನು ಧರಿಸಿಕೊಂಡು, ನಮ್ಮ ಮೈಯಲ್ಲಿ ಇರುವ ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಪಡೆದು .ದೇಹ ಹಾಗೂ ಭಾವದಿಂದ ಶುದ್ಧರಾಗಿ , ಅಧ್ಯಾತ್ಮಿಕ ಚೈತನ್ಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಭಸ್ಮವೇ ನನಗೆ ಅರಿಸಿನ ಇದ್ದಂತೆ.

 *ದಿಗಂಬರವೇ ದಿವ್ಯಾಂಬರವೆನಗೆ*

ಕೌಶಿಕ ಮಹಾರಾಜ ಒಬ್ಬ ಜೈನ ಧರ್ಮದ ಅನುಯಾಯಿ .ಜೈನ ಧರ್ಮದಲ್ಲಿ ಶ್ವೇತಾಂಬರ ಹಾಗೂ ದಿಗಂಬರ ಎನ್ನುವ ಎರಡು ಪಂಥಗಳು ಇವೆ.
ಅಕ್ಕಳನ್ನು ಮೆಚ್ಚಿ ವಿವಾಹ ಆಗಿ, ಅರಮನೆಗೆ ಕರೆದುಕೊಂಡು ಬಂದ ಕೌಶಿಕ ಮಹಾರಾಜರು , ಅಕ್ಕಳು ಹಾಕಿದ ಮೂರು ವಚನಗಳನ್ನು ಪಾಲಿಸದೇ, ಗುರು, ಲಿಂಗ, ಜಂಗಮದ ತತ್ವಕ್ಕೆ ಭಂಗ ಬಂದೊದಗಿದಾಗ ,ಅಕ್ಕಳು ಕೌಶಿಕ ರಾಜನ ಮನ ಭಾವಕ್ಕೆ ದಿಗಂಬರೆಯಾಗಿ ಕಂಡು ಬರುತ್ತಾರೆ .
ಕೌಶಿಕ ಮಹಾರಾಜರು ದಿಗಂಬರ ಪಂಥವನ್ನು ಅನುಸರಿಸಿದ್ದಿರಬೇಕು.ಇಲ್ಲವೇ ಅರಮನೆಗೆ ದಿಗಂಬರ ಜೈನ ಮುನಿಗಳು ಬಂದು ಹೋಗುತ್ತಿದ್ದಿರಬೇಕು . ಹೀಗೆ ಮುನಿಗಳು ಬಂದು ಹೋಗುವುದನ್ನು ಅಕ್ಕಳೂ ಕೂಡಾ ಕಂಡಿದ್ದೀರಬೇಕು.ಹೀಗಾಗಿ ಮನದಲ್ಲಿ ಯಾವ ಆಸೆ, ಆಕಾಂಕ್ಷೆಗಳನ್ನು ಹೊಂದಿರದ ಜೈನ ಮುನಿಗಳಂತೆ ಅಕ್ಕನವರ ಭಾವವು ಬೆತ್ತಲೆ ಆಗಿದ್ದೀರಬೇಕು ಎನ್ನುವುದು ನನ್ನ ವೈಯಕ್ತಿಕ  ಅಭಿಪ್ರಾಯ.
ಅಲ್ಲದೇ ಕೌಶಿಕ ರಾಜನ ಮೇಲೆ ಹಾಗೂ ಕೌಶಿಕ ಮಹಾರಾಜರ ಅರಮನೆಯ ಯಾವ ವೈಭವದ ಸುಖಕ್ಕೆ ಅಕ್ಕಳು ಆಸೆ ಪಡದೇ ಮನವೆಲ್ಲಾ ಶೂನ್ಯ ಭಾವದಿಂದ ದಿಗಂಬರ ವಾಗಿದ್ದಿರಲೂ ಬಹುದು .
ಒಬ್ಬ ವ್ಯಕ್ತಿಗೆ ಆಸೆ ಆಕಾಂಕ್ಷೆಗಳು , ವೈಭವದ ಸುಖಗಳಲ್ಲಿ ನಿರ್ಲಿಪ್ತ ಭಾವ ಇದ್ದಾಗ ಮನಸ್ಸು ದಿಗಂಬರವಾಗಿ ನಿಲ್ಲುವ , ದಿಗಂಬರ ಭಾವ ಅಕ್ಕನವರ ಒಳ ಮನಸ್ಸಿಗೆ ಆಗಿದ್ದೀರಲೂ ಬಹುದು .
ಕೌಶಿಕ ರಾಜನ ಕಾಡುವಿಕೆಯಿಂದ ಅಕ್ಕಳು ತಾನು ಹಾಕಿಕೊಂಡ ವಸ್ತ್ರಾಲಂಕಾರವನ್ನು , ಕೌಶಿಕ ಮಹಾರಾಜರ ಮೇಲೆ  ಸಿಟ್ಟಿನಿಂದ ಎಸೆದು ಅರಮನೆಯನ್ನು ತ್ಯಜಿಸಿದ್ದಿರಬಹುದು .ಆದರೆ ಅಕ್ಕನವರು ದಿಗಂಬರೆಯಾಗಿ ಹೊರ ನಡೆದಿರಲು ಸಾಧ್ಯವಿಲ್ಲ.
ಇಡೀ ಆಕಾಶವೇ ನನಗೆ ಅಂಗರಕ್ಷಕ ವಾಗಿ ನಿಂತಾಗ, ನನಗೆ ನಿನ್ನ ವಸ್ತ್ರದ ಹಂಗೂ ಬೇಡ ಎಂದು ಹೊರನಡೆದ ಅಕ್ಕಳು ನಿನ್ನ ಬಟ್ಟೆಯ ಹಂಗು ಬೇಡ .
ಜನರು ಎಸೆದ ಬಟ್ಟೆಗಳನ್ನು ತೊಡುವೆ.ಎನ್ನುವ ಅಕ್ಕನವರ ಗಟ್ಟಿ ಪಾದಕ್ಕೆ ನನ್ನ ಅನಂತ ನಮನಗಳು ತಾಯೆ.ಕಾಮ ಮೋಹವ ತೊರೆದು ನಿರ್ಮೋಹಿಯಾಗಿ ಕದಡಿಯ ವನವನ್ನು ಪ್ರವೇಶಿಸುವ ಅಕ್ಕಳ ಭಕ್ತಿ ,ಭಾವಕೆ ಅನಂತ ಶರಣು ಶರಣೆನ್ನುವೆ ತಾಯೆ.

*ಶಿವಪಾದರೇಣುವೆ ಅನುಲೇಪನವೆನಗೆ*

ಶಿವಶರಣರ ಪಾದದ ಧೂಳಿಯೇ ನನಗೆ ಅನುಲೇಪನ ಎಂದು ಹೇಳುವ ಅಕ್ಕನವರ ಭಕ್ತಿ ಹಾಗೂ ಭಾವವನ್ನು ನಾವು ಕಾಣಬಹುದು .ಶರಣರು ನಡೆದರೆ ಧರೆಯೆಲ್ಲ ಪಾವಣ. ಇಂಥಹ ಪಾವಣ ಪುರುಷ ಶರಣರು ನಡೆಯುವ ಅವರ ಪಾದದ ಧೂಳೇ,  ನನಗೆ ಲೇಪನ  ಅದುವೇ ನನಗೆ ಆಶೀರ್ವಾದ.ಎನ್ನುವ ಅಕ್ಕನವರು ಶರಣರ ಮೇಲೆ ಇಟ್ಟಿದ್ದ  ಭಕ್ತಿಯ ನಡೆಯು ನಮಗಿಲ್ಲಿ ಎದ್ದು ಕಾಣುತ್ತದೆ.

 *ರುದ್ರಾಕ್ಷಿಯೆ ಮೈದೊಡಿಗೆ ಎನಗೆ*

ನನಗಾವ ಒಡವೆಯ ಹಂಗೂ ಇಲ್ಲ.ರುದ್ರಾಕ್ಷಿಯೇ ನನ್ನ ಮೈಗೆ ಆಭರಣ ಎನ್ನುವರು ಅಕ್ಕ.

 *ಶರಣರ ಪಾದಂಗಳೇ ತೊಂಡಿಲ ಬಾಸಿಗವೆನಗೆ*  
 *ಚೆನ್ನಮಲ್ಲಿಕಾರ್ಜುನ ಎನ್ನ* *ಮದುವಣಿಗ ಎನಗೆ ಬೇರೆ*
 *ಶೃಂಗಾರವೇಕೆ ಹೇಳಿರವ್ವ*

ಶರಣರು ಎಂದರೆ ಇಲ್ಲಿ ಗುರುಗಳು ಎಂದರ್ಥ. ಗುರುಗಳು ಧರಿಸಿಕೊಂಡು ನಡೆಯುವ ಪಾದುಕೆಗಳೇ ನನಗೆ ಬಾಸಿಂಗ . ಪರಮಾತ್ಮನೇ ನನಗೆ ವರ ಎಂದು ಹೇಳುವ ಅಕ್ಕನವರು ,ಬೇರೆ ಶೃಂಗಾರದ ಅವಶ್ಯಕತೆ ಇಲ್ಲ ಎನ್ನುವರು. ಅಕ್ಕಮಹಾದೇವಿಯವರು, ಲೌಕಿಕದ  ಎಲ್ಲಾ  ಬಂಧನಗಳಿಂದ ಹೊರಬಂದ ಅಕ್ಕನವರು ಅನುಭಾವ, ಅಷ್ಟಾವರಣ, ಧಾರ್ಮಿಕ ಲಾಂಛನಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವುದು ಈ ವಚನದಲ್ಲಿ ವ್ಯಕ್ತಿ ಪಡಿಸಿರುವುದು ಕಂಡು ಬಂದಿದೆ.
____________

About The Author

Leave a Reply

You cannot copy content of this page

Scroll to Top