ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಒತ್ತಡದ ಬದುಕಿನಲ್ಲಿ
ನಲುಗುತ್ತಿರುವ ಕುಸುಮಗಳು.

ಮಳಿಗಾಲದ ಮುಂಜಾನಿ , ನಮ ಕಲಬುರ್ಗಿ ಕಡಿ ಅನಾವೃಷ್ಟಿರ ಆಗತದ , ಅತೀವೃಷ್ಟಿರ ಆಗತಿರತದ. ಹೊಲದಾಗ ಬಿತ್ತನೆ ಮಾಡಿದಾಗ ಮಳಿ ಅಭಾವ . ಬೆಳಿ ಕೈಗಿ ಬರೋ ಸಮಯದಾಗ ಒಂದೇ ಸಮ ಸುರಿಯೋ ಮಳಿ.ಬೆಳಿ ಎಲ್ಲಾ ನೀರಾಗ ನಿಂತು ಎಲಿಗಳು ಅರಸಿನ ಬಣ್ಣಕ್ಕ ತಿರಗತಾವ .ಇಲ್ಲಂದ್ರ ಬೆಳೆದ ಧಾನ್ಯಗಳಿಗಿ ಹೊಲದಾಗೆ ಮಳಕಿ ಬರತಾವ. ಪ್ರತಿವರ್ಷ ಇದೇ ಗೋಳು .ರೈತರ ಹಾಡುಪಾಡುಗಳು ಇವೆ.
ಈಗ ನಾ ದಿನಗಳಿಂದ ಮಳಿ ಹಿಡಕೊಂಡು ಕುಂತದ. ನಾವು ಪುಸ್ತಕಗಳಲ್ಲಿ ಮಳಿ ಬಗ್ಗೆ ಓದಿರೋ ಚಂದ ಅನುಭವಗಳೆನು ನಮ್ಮ ಕಡಿನ ಜನಕ್ಕ ಮಳಿ ಕೊಡಲ್ಲ ಬಿಡ್ರಿ.ಮಣ್ಣಿನ ಮನಿದಾಗ ವಾಸಿಸೋ ಜನರ ಪಾಡು ಕೇಳಬ್ಯಾಡ್ರಿ, ಇದ್ದ ರಸ್ತೆ ಗುಂಡಿಗಳೆಲ್ಲ ಕೆಸರು , ಹಳಿ ಮನಿಗಳದಾಗ ಇರೋರು ಗೋಡಿ ಎಲ್ಲಾ ಥಣಸ ಹಿಡಿದು ಮನ್ಯಾಗಿನ ಅಕ್ಕಿ ಬ್ಯಾಳಿಗೆಲ್ಲ ಹುಳ ಹಿಡದು ರಂಪಾಟ ಆಗ್ತದ.ಇನ್ನ ಉಳದವರಿಗೂ ಬಟ್ಟಿ ಒಣಗೋದೆ ಇಲ್ಲ ಎಂಬ ಚಿಂತಿ . ಈ ಶ್ರಾವಣ ದಸರಿ ಎಲ್ಲಾ ಮಳಿಗಾಲದಾಗೆ ಬರೋ ಕಾರಣಕ್ಕ ಹೆಣ್ಣ ಮಕ್ಕಳಿಗಿ ಮನಿ ಸ್ವಚ್ಛ ಮಾಡಕೊಳ್ಳೋದು , ಮನ್ಯಾಗಿನ ಎಲ್ಲಾ ಬಟ್ಟಿ ಬರಿ ಒಗೆಯೋದು ಇರತದ.ಅದಕ್ಕ ಮಳಿಗಾಲ ಮುಗಿಯೋತನ ನಮ್ಮ ಕಡಿ ಮಂದಿ ಮಳಿ ಬಗ್ಗಿ ಅಸಮಾಧಾನ ಆಗೆ ಇರತಾರ. ಮಳಿ ಹೆಚ್ಚು ಆದ್ರು ಬೈತಾರ.ಕಮ್ಮಿ ಆದ್ರೂ ಬೈತಾರ.
ನನಗ ಮಾತ್ರ ಮಳಿ ಒಂಥರಾ ಮನಸ್ಸಿಗಿ ಹರುಷ ಕೊಡತದ.ಬೆಳಗಿನ ಮುಂಜಾನಿ ಸುರಿಯೋ ಮಳಿ ಅಂದ್ರ ಇನ್ನೂ ಹೆಚ್ಚು ಇಷ್ಟ. ಹಿಂಗ ಮಳಿ ಸೌಂಡ ಕೆಳತಾ ಪೇಪರ ಓದ್ತಿದ್ದ. ಅ್ರದ್ರಾಗ ವಿದ್ಯಾರ್ಥಿ ಗಳ ಆತ್ಮಹತ್ಯಗೆ ಶಿಕ್ಷಣ ಹ್ಯಾಂಗ ಕಾರಣ ಆಗ್ತಿದೆ ಎಂಬ ಸುದ್ದಿ ಓದಿ ಇಷ್ಟು ಹೊತ್ತು ಹರುಷದಿಂದ ಇದ್ದ ಮನಸ್ಸಿಗೆ ಒಂಥರಾ ಬ್ಯಾಸರ ಆಯ್ತು.
ಈಗಿನ ನಮ್ಮ ಶಿಕ್ಷಣ ಮಕ್ಕಳ ಬಾಲ್ಯ ಕಸಿದುಕೊಳ್ಳುವದಲ್ದೆ ಅವವರಿಗಿ ಆತ್ಮಹತ್ಯೆ ಮಾಡಿಕೊಳ್ಳೊ ಹಂತಕ್ಕ ಒಯ್ಯಲತದ ಅಂದ್ರ ಮಕ್ಕಳು ಎಷ್ಟು ಒತ್ತಡದಾಗ ಬದುಕಲತಾರ ಅಂತ ನಾವು ತಿಳಕೊಬೇಕು. ಅದ್ರಾಗಂತೂ ಪಿ ಯು ಸಿ ಸೈನ್ಸ ಎರಡು ವರ್ಷ ಅಂತೂ ಮಕ್ಕಳ ಪಾಲಿಗಿ ನರಕ ಆಗ್ಯಾದ.ದೇಶದಾಗ ಪ್ರತಿ ದಿನ ಆತ್ಮಹತ್ಯೆ ಗೆ ಶರಣಾಗತಿರೋ ವಿದ್ಯಾರ್ಥಿಗಳು ಸರಾಸರಿ ಮುವತೈದು ಅಂತ.ಪರೀಕ್ಷೆ ರಿಸಲ್ಟ ಬಂದಾಗ ಈ ಸಂಖ್ಯೆ ಇನ್ನೂ ಹೆಚ್ಚಾಗಲತದ.

ನಾವು ಚಿಕ್ಕವರಿದ್ದಾಗ ನಮಗ ಓದುವ ಬಗ್ಗೆ ಅಷ್ಟೊಂದು ಆತಂಕ ಇರಲಿಲ್ಲ. ಅದೇ ಆಗಬೇಕು ಇದೇ ಆಗಬೇಕು ಅಂಬೊ ಯಾವ ಕಲ್ಪನೆ ಇರದೆ ಓದಿದವರು ನಾವೆಲ್ಲ.ಆಗ ಶಾಲೆಗಳು ಒಂದು ಸುಂದರ ನೆನಪಾಗಿದ್ದವು.ಈಗ ಮಕ್ಖಳು ಮೂರು ವರ್ಷ ಇದ್ದಾಗಲೇ ಪ್ರತಿಷ್ಠಿತ ಶಾಲೆಗಳ ಹುಡುಕಾಟ ಶುರು ಆಗತದ. ದುಡ್ಡು ಎಷ್ಟಾದ್ರೂ ಕೊಟ್ಟು ಕಲಿಸಬೇಕು ಅಂಬೊ ಹಂಬಲ ಹೆತ್ತವರದ್ದು. ಅಂತಾ ಶಾಲೆಗಳಲ್ಲಿ ಹಾಕಿದ್ದೆ ತಡ ಅವರ ಮ್ಯಾಲಿನ ನೀರೀಕ್ಷೆ ಹೆಚ್ಚಾಗತಾ ಹೋಗತದ. ಇಷ್ಟ ದೊಡ್ಡ ಶಾಲೆಯಲ್ಲಿ ಓದಸಲತಿವಿ.ಅವ್ರು ಚಂದ ಓದಿ ಫಸ್ಟ್ ಕ್ಕಾಸ್ ಬರಲೇಬೇಕು ಅನ್ನೊದು ಮೊದಲ ನೀರಿಕ್ಷೆ. ಹೀಗೆ ಒಂದರ ಬೆನ್ನಿಂದ ಒಂದು ನೀರಿಕ್ಷೆಗಳ ಹೊರೆ ಹೆಚ್ಚತಾ ಹೋಗಿ ಮಕ್ಕಳಿಗಿ ಅದರ ಅಡಿಯೊಳಗ ಬಂಧಿಸಿ ಬಿಡತಿವಿ.
ಇದು ಗೊತ್ತಿದ್ರೂ ನಾವು ಯಾರೋ ನಮ್ಮ ಮಕ್ಕಳಿಗಿ ಒತ್ತಡ ಮುಕ್ತ ಜೀವನ ಕೊಡತಿಲ್ಲ. ತಮಗ ಎಷ್ಟೆ ಕಷ್ಟ ಆದ್ರೂ ಮಕ್ಕಳಿಗಿ ಬಾಳ ಡೊನೇಷನ್ ಕೊಟ್ಟು ಪೃತಿಷ್ಟಿತ ಶಾಲೆಗಳಲ್ಲಿ ಹಾಕಿ ಅವರಿಗಿ ಹರಕಿ ಕುರಿಹಂಗ ಸಲವುತಿದ್ದೆವು. ನಿನಗ ಇಷ್ಟು ದುಡ್ಡು ಸುರಿಲತಿವಿ ಓದಲಿಕ್ಕ ಏನ್ ಧಾಡಿ ಅಂತ ಅವರಿಗಿ ಹಿಯಾಳಿಸ್ತ ಮಕ್ಕಳ ಆತ್ಮವಿಶ್ವಾಸ ನಾವೇ ಕಸದುಕೊಳ್ಳತಿದ್ದೆವೆ. ಈಗ ಕಾಲೇಜ್ ಗಳಲ್ಲಿ ಗ್ರೇಡ್ ಮಾಡಿ ಹುಷಾರ್ ಮಕ್ಕಳಿಗಿ ಒಂದು ಕ್ಲಾಸ್ ಮತ್ತು ದಡ್ಡ ಮಕ್ಕಳಿಗಿ ಒಂದು ಕ್ಲಾಸ ಅಂತ ಮಾಡಲತಾರ.ಇದರಿಂದ ಮಕ್ಕಳು ಬೇರೆಯವರ ಜೊತೆ ಹೋಲಿಸಿಕೊಂಡು ಕಿಳರಿಮೆ ಅನುಭವಿಸಲತಾರ.
ಇದೆಲ್ಲ ಮಕ್ಕಳ ಮಾನಸಿಕ ಆರೋಗ್ಯ ದ ಮ್ಯಾಲ ಪರಿಣಾಮ ಬೀರಲತದ.ಡಾಕ್ಟರ್ ಇಂಜಿನಿಯರ್ ಆದ್ರ ಮಾತ್ರ ಗೌರವ ಅನ್ನೊ ಮನಸ್ಥಿತಿ ನಿಂದ ಹೊರಗ ಬರಲಕ್ಕ ಬಾಳ ಪ್ರಯತ್ನ ಪಡಬೇಕಾಗತದ ನಾವು. ಒತ್ತಡ ಮನುಷ್ಯ ನ ಆರೊಗ್ಯದ ಮ್ಯಾಲ ಅದೇಷ್ಟು ಪರುಣಾಮ ಬೀರಲತದ ಅನ್ನೊದು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳದು ನೋಡಿ ಅರ್ಥ ಆಗಲತದ.ಆದ್ರ ಯಾರು ಏನು ಮಾಡುವ ಸ್ಥಿತಿನಾಗ ಇಲ್ಲ.ವಿದ್ಯಾಬ್ತಾಸ ಮಕ್ಕಳಿಗಿ ಕೊಡಿಸಲೇಬೇಕು . ಅದು ಉತ್ತಮವಾಗಿ ಇರಬೇಕು . ಮುಂದೆ ಅವರು ಉನ್ನತ ನೌಕರಿ ಮಾಡಬೇಕು. ಇವೆಲ್ಲವೂ ಆಕಾಂಕ್ಷೆಗಳು ನಾವು ಮಕ್ಕಳ ಮ್ಯಾಲ ಹೋರಸಿ ಅವರಿಗಿ ಒತ್ತಡದಾಗ ಬದುಕುವ ಹಂಗ ಮಾಡಲಕ್ಕ ನಾವೆ ಕಾರಣರು.
ಅವರು ಓದಿ ಒಂದು ಹಂತಕ್ಕ ಬಂದು ತಮ್ಮ ಕಾಲಮ್ಯಾಲ ತಾವು ನಿಂತರೂ ಒತ್ತಡ ಅವರ ಬೆನ್ನು ಬಿಡಲ್ಲ. ಆಗ ಹೊರೆ ಹೆಚ್ಚೆ ಆಗತದ ಹೊರತಾಗಿ ಕಮ್ಮಿ ಆಗಲ್ಲ.ಓದಿ ನೌಕರಿಗಾಗಿ ಬಡಿದಾಡಬೇಕು. ಅದರೊಳಗಿನ ಒತ್ತಡ ನಿಭಾಯಿಸಬೇಕು. ಮಹಾನಗರಗಳಲ್ಲಿ ಇರೋರು ಅಲ್ಲಿ ಬದುಕಲಾಕ ಸದಾ ಹೋರಾಡತಿರಬೇಕು. ಈಗಿನ ಅನಿಶ್ಚಿತ ಪರಿಸ್ಥಿತಿ ಯೊಳಗ ತಮ್ಮ ಉದ್ಯೋಗ ಕ್ಕ ಯಾವಾಗ ಕುತ್ತು ಬರತದೋ ಅನ್ನೊ ಒತ್ತಡದಾಗ ಬದುಕಬೇಕು.ವಿದ್ಯಾಬ್ಯಾಸ ಮಾಡುವಾಗ ರ್ಯಾಂಕ ಬರಬೇಕು ಅನ್ನೊ ಒತ್ತಡ.ನೌಕರಿ ಮಾಡೊವಾಗ ಅದನ್ನು ಉಳಿಸಿಕೊಂಡು ದುಡಿಯೊ ಒತ್ತಡ.ಮದುವೆಯಾದ ಮ್ಯಾಲ ಸಂಸಾರದ ಒತ್ತಡ.ಜೀವನವೆಲ್ಲಾ ಬರಿ ಒತ್ತಡದಾಗೆ ಕಳೆಯುವ ಈಗೀನ ಪಿಳಿಗಿ ಅದನ್ನು ಎದುರಿಸಲಕ್ಕ ಆಗದೆ ಆತ್ಮಹತ್ಯೆ ಮಾಡಕ್ಕೊಳತಿರೋದು ವಿಪರ್ಯಾಸ.

ಅವರು ಈ ರೀತಿ ಮಾಡಕ್ಕೊಳಲಾಕ ಒಂದು ರೀತಿ ನಾವೆಲ್ಲರೂ ಕಾರಣ ಆಗತಿದ್ದೆವೆ.ಸದಾ ಅವರ ಮ್ಯಾಲ ನಮ್ಮ ಆಕಾಂಕ್ಷೆ ಗಳನ್ನ ಹೇರೋದು , ಮತ್ತೊಬ್ಬರಿಗಿ ಹೋಲಿಸಿ ಅವರನ್ನು ಹೀಗಳೆಯೋದು , ನೀನು ಇಷ್ಟು ಓದಿ ಇಷ್ಟು ದೊಡ್ಡ ನೌಕರಿ ಮಾಡಿದ್ರ ಮಾತ್ರ ಬದುಕಲಕ್ಕ ಸಾದ್ಯ ಅಂತ ಉಪದೇಸಿಸೋದು ಇವೆಲ್ಲ ಮಕ್ಕಳ ಮನಸ್ಸಿನ ಮ್ಯಾಲ ವೀಪರೀತ ಒತ್ತಡ ಉಂಟು ಮಾಡಲತವ. ನಾವು ಮಾಡ್ತುರೊದು ದೊಡ್ಡ ಅಪರಾಧ ಅಂತ ನಮಗ ಅನಿಸ್ತಾನೆ ಇಲ್ಲ. ಮಕ್ಕಳಿಗಾಗಿ ನಾವು ಇಷ್ಟು ಮಾಡ್ತಿರಬೇಕಾದ್ರ ಅವರಿಗಿ ಓದಲಿಕ್ಕ ಏನ ಧಾಡಿ ಅಂತ ಮಾತ್ರ ನಾವು ಯೋಚಿಸತೇವೆ. ಪ್ರತಿಯೊಬ್ಬರ ಬುದ್ದಿ ಮಟ್ಟ ಒಂದೊಂದು ರೀತಿ ಇರತದ.ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರತದ , ಆದ್ರ ಅದು ಹೊರ ಬರಲಕ್ಕ ನಾವು ಅವಕಾಶ ಕೊಡದೆ ಮಕ್ಕಳಿಗೆ ರ್ಯಾಂಕ ಬಂದ್ರ ಮಾತ್ರ ನೀನು ಬದುಕು ಇಲ್ಲ ಸಾಯಿ ಅಂತ ನಾವೇ ಪರೋಕ್ಷವಾಗಿ ನಿರ್ದೆಶನ ಮಾಡಲತಿವಿ.
ಹರೆಯದ ವಯಸ್ಸು ಬಾಳ ಸೂಕ್ಷವಾಗಿರತದ. ಸ್ವಲ್ಪ ಎಡವಿದರು ಮಕ್ಕಳು ಗಾಬರಿ ಆಗತಾರ.ಇಂತಹ ವಯಸ್ಸಿನಾಗ ಪ್ರೀತಿ ಪ್ರೇಮದ ಆಕರ್ಷಣೆ ದಾಗ ಬೀಳೊದು ಸಹಜ . ಅಂತಹ ಪ್ರತಿಕೂಲ ಸಂದರ್ಭ ಎದುರಿಸಲಾಗದೆ ಎಷ್ಟೋ ಮಕ್ಕಳು ಆತ್ಮಹತ್ಯೆ ಮಾಡಕೋತಾರ. ಹೆತ್ತವರೊಂದಿಗೆ ಆತ್ಮೀಯವಾಗಿ ಇರಲಾಗದೆ ಅವರೊಂದಿಗೆ ಯಾವ ವಿಷಯಗಳು ಹಂಚಿಕೊಳ್ಳಕ್ಕ ಆಗದೆ ಒದ್ದಾಡಿ ಕೊನೆಗೆ ಸಾವಿನಲ್ಲಿ ಪರಿಹಾರ ಕಂಡುಕೊಳ್ಳತೊಡಗಿದಾರ.
ಹಾಸ್ಟೆಲ್ ನಾಗ ಇರೋ ವಿದ್ಯಾರ್ಥಿಗಳು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗಗಳು ಹೆಚ್ಚು ಇರತಾವ.ಅವರು ಅನುಭವುಸುವ ಒಂಟಿತನ , ಎಕಾಂಗಿತನ , ಹರೆಯದ ಆಕರ್ಷಣೆ ಯ ಪ್ರೇಮ ಪ್ರಸಂಗಗಳು , ಪರಿಕ್ಷೆಯ ಭಯ , ಫೇಲ್ ಆದ ಅವಮಾನ ಇವೆಲ್ಲ ವಿದ್ಯಾರ್ಥಿಗಳ ಮೇಲೆ ಬಹಳ ಪರಿಣಾಮ ಬೀರತಾವ. ಹೆತ್ತವರು ದೂರ ಇರತಾರ , ಅಸುರಕ್ಷೆತೆಯ ಭಾವನೆ , ಇಲ್ಲ ಹೆತ್ತವರ ಅತೀ ಅಂಜಿಕೆ ಇವೆಲ್ಲ ಆತ್ಮಹತ್ಯಗೆ ಕಾರಣಗಳು.
ಆತ್ಮಹತ್ಯೆ ಗೆ ಕಾರಣವಾಗಬಲ್ಲ ಮಾನಸಿಕ ಸಮಸ್ಯೆಗಳು ಕಂಡು ಹಿಡಿದು ವಿದ್ಯಾರ್ಥಿಗಳಿಗೆ ಆಪ್ತವಾಗಿ ಮಾತಾಡಿಸಿ ಅವರ ಹಿಂಜರಿಕೆ ದೂರ ಮಾಡೋ ಸಮಾಜ ಈಗ ತುಂಬಾ ಅವಶ್ಯಕವಾಗೇದ. ಮನಿಯೊಳಗ , ಶಾಲಿಯೊಳಗ ಮಕ್ಕಳ ಜೋಡಿ ಮುಕ್ತವಾಗಿ ಮಾತಾಡಿ ಅವರು ಖಿನ್ನತೆಗೆ ಜಾರದಂತೆ ನೋಡಕೋಬೇಕು. ಮೊಟ್ಟಮೊದಲ ಹೆತ್ತವರು ಮಕ್ಕಳ ಮ್ಯಾಲ ಒತ್ತಡ ಹಾಕದೆ ಅವರ ಬುದ್ದಿಮಟ್ಟ ಅನುಸಾರ ಅವರಿಗಿ ಓದಲು ಬರೆಯಲು ಬಿಡಬೇಕು. ಶಾಲಾ ಕಾಲೇಜಿನ ಒಳಗ ಮಕ್ಕಳಿಗಿ ಗ್ರೇಡ್ ಮಾಡಿ ಶ್ರೇಷ್ಠ ಕನಿಷ್ಟ ಅನ್ನೊ ವಿಧಾನ ಬಿಡಬೇಕು. ಹಾಸ್ಟೆಲ್ ವಾರ್ಡನ್ ಗಳು ಪ್ರತಿಯೊಬ್ಬ ಮಕ್ಕಳ ಮಾನಸಿಕ ಸ್ಥಿತಿ ಬಗ್ಗೆ ನಿಗಾ ಇಡಬೇಕು.ಇದು ಕಷ್ಟ ಆದ್ರೂ ಅವರ ವರ್ತನೆ ಮ್ಯಾಲ ಅವರ ಮನಸ್ಥಿತಿ ಸ್ವಲ್ಪಮಟ್ಟಿಗೆ ಗೊತ್ತಾಗತದ.
ಮುಂದಿನ ಭವಿಷ್ಯದ ವಾರುಸದಾರರಾಗಬೇಕಾದ ಮಕ್ಕಳು ಒತ್ತಡ ಬದುಕಿಗೆ ಸಿಕ್ಕಿ ಆತ್ಮಹತ್ಯೆ ಮಾಡಕ್ಕೊಳತಿರೋದು ನಿಜಕ್ಕೂ ಶೋಚನೀಯ ಸಂಗತಿ. ಇದನ್ನು ತಡೆಗಟ್ಟಲು ಪ್ರತಿಯೊಬ್ರು ಪ್ರಯತ್ನಿಸಬೇಕು. ಮಕ್ಕಳು ನಮ್ಮ ಆಸೆ ಈಡೇರಿಸುವ ಯಂತ್ರಗಳಲ್ಲ .
ಜ್ಯೋತಿ ಡಿ ಬೊಮ್ಮಾ

