ಮಾವಿನ ಪುರಾಣ
ಮಾವಿನ ಪುರಾಣ
ಹಣ್ಣುಗಳಲ್ಲಿ ಮಾವು ಕೊಡುವ ಖುಷಿ, ಯಾವ ಹಣ್ಣು ಕೂಡ ಕೊಡದು ಎಂದರೆ ತಪ್ಪಾಗಲಾರದು.ಹಣ್ಣುಗಳಲ್ಲಿ ಮಾವಿಗೆ ವಿಶೇಷ ಸ್ಥಾನಮಾನ,ರಾಜಮರ್ಯಾದೆ.ಮಾವಿನ ಹಣ್ಣು, ಹಣ್ಣುಗಳ ರಾಜ.
ಬೇಸಿಗೆ ಶುರುವಾದೊಡನೆ ಮಾವು ಶುರುವಾಗುತ್ತದೆ.ನಮ್ಮಲ್ಲಿ ಮೊದಲು ಗಿಣಿಮೂತಿ ಮಾವಿನಕಾಯಿ ಜೊತೆ ಈ ಸೀಸನ್ ಶುರುವಾಗುತ್ತದೆ.ಎರೆಡು ಮಳೆ ಆಗುವ ತನಕ ಮಾವು ತಿನ್ನುವುದಿಲ್ಲ.ಒಂದು ದೃಷ್ಟಿ , ಬಂದ ಈ ಗಿಣಿಮೂತಿ ಕಾಯಿಯ ಮೇಲೆ ಇಟ್ಟುಕೊಂಡು ನೋಡದ ಹಾಗೆ ಮಾರುಕಟ್ಟೆಯಲ್ಲಿ ಓಡಾಡುತ್ತೇವೆ.ಮಳೆ ಸ್ವಲ್ಪ ಲೇಟಾದರೆ ಚಡಪಡಿಕೆ ಶುರು.ನಾಲ್ಕೋ,ಐದೋ ಗಿಣಿ ಮಾವಿನಕಾಯಿ ಖರೀದಿಸಿ ಉಪ್ಪು,ಖಾರ ಹಚ್ಚಿಕೊಂಡು ಸವಿಯುವುದೇ ಚೆಂದ.ಮನೆಯಲ್ಲಿ ಹಿರಿಯರ ಕೂಗಾಟ….ಮಳೆ ಬರಲಿ ಎಂದು.
ಅಷ್ಟರಲ್ಲೇ ಉಪ್ಪಿನಕಾಯಿ ಹಾಕುವ ಮಾವಿನ ಕಾಯಿ,ಅದರಲ್ಲೂ ಆಮ್ಲೇಟ್ ಕಾಯಿ ಬಂದಿರುತ್ತೆ.ಸ್ವಲ್ಪ ದಿನ ಮನೆಗಳಲ್ಲಿ ಅದರದ್ದೇ ಸಂಭ್ರಮ. ಮಕ್ಕಳು ಕದ್ದುಮುಚ್ಚಿ ಅದನ್ನೇ ತಿಂದು ಬೈಗುಳ ತಿನ್ನುತ್ತಾರೆ.ಉಪ್ಪಿನಕಾಯಿ ಜಾಡಿ ಸೇರಿ ಅಟ್ಟಕ್ಕೆ ಸೇರುತ್ತದೆ.ನಂತರದ್ದೇ ದಿಢೀರ್ ಗಿಣಿಮಾವಿನಕಾಯಿಯ ಉಪ್ಪಿನಕಾಯಿ.ಮಕ್ಕಳಿಗೆ ಈಗ ಸ್ವಾತಂತ್ರ ತಿನ್ನಲು.ಚಿತ್ರಾನ್ನದ ಜೊತೆ ಪರಮಾನ್ನ ಇದು.
ಎರೆಡು ಮಳೆ ಆದ ತಕ್ಷಣ ಮಾರುಕಟ್ಟೆಯಲ್ಲಿ ಮಾವಿನ ಸುಗ್ಗಿ. ಎಲ್ಲಕ್ಕಿಂತ ಮೊದಲು ಬಾದಾಮಿ ಹಣ್ಢಿನ ದರ್ಬಾರು.ಮೊದಲಿಗೆ ಕೆ.ಜಿ.ಗೆ 120 ರೂಪಾಯಿಗಿಂತ ಕಮ್ಮಿ ಸಿಗದು.ಕೊಳ್ಳುವ ಜನ ಹಿಂದಕ್ಕೆ ಹೋಗಬಾರದೆಂದು ಇದರ ಜೊತೆಯ ಬುಟ್ಟಿಯಲ್ಲಿ ಸ್ಥಳೀಯ ನಾರಿನ ಹಣ್ಣು ಕೆ.ಜಿ.ಗೆ 50 ರೂಪಾಯಿ. ತಿಂದವರು ಸ್ವಲ್ಪ ಶಾಪ ಹಾಕಿ ಚಪ್ಪರಿಸುತ್ತಾರೆ.
ನಂತರದ್ದೇ ಮಾವುಗಳ ರಾಜ ರಸ್ಪುರಿ ಮಾವು ಲಗ್ಗೆ ಇಡುತ್ತದೆ. ತೆಂಡುಲ್ಕರ್ ಬ್ಯಾಟಿಂಗ್ ಗೆ ಬಂದ ಹಾಗೆ ರಸ್ಪುರಿ ಮಾವು ಬರುತ್ತದೆ.
ಇದಕ್ಕೆ ನಮ್ಮಲ್ಲಿ ಕಸಿಹಣ್ಣು ಎಂದೇ ಬಿರುದಾಂಕಿತ.ಮೊದಲು ಕೆ.ಜಿ.ಗೆ 70 ರಿಂದ ಶುರು.ನಂತರ ನಂತರ 60.50 ,40. ರಸ್ಫುರಿ ಬಂದ ತಕ್ಷಣ ಬಾದಾಮಿ ಮಾವಿನಹಣ್ಣು ನೆಲ ಕಚ್ಚುತ್ತದೆ.ಬಾದಾಮಿ ಕೂಡ 60 ರೂಪಾಯಿಗೆ ಸಿಗುತ್ತದೆ.ರಾಜ ಬಂದ ಮೇಲೆ ಉಳಿದವರಿಗೆ ಬೆಲೆ ಇಲ್ಲ.ನಾರಿನ ಮಾವಿನಹಣ್ಣು ಓಟ ಕಿತ್ತಿರುತ್ತದೆ.
ಈ ಕಸಿ ಮಾವು ರಸ್ಪುರಿ ಬಂದ ಮೇಲೆ ಮನೆಮನೆಗಳಲ್ಲಿ ಹೋಳಿಗೆ ಶುರು.ಹೋಳಿಗೆ ಶೀಕರಣೆ ತಿನ್ನದವನು ರಸಿಕನೇ ಅಲ್ಲ!. ಶೀಕರಣೆಗೆ ರಸ್ಪುರಿ ಮಾವು ಬಿಟ್ಟು ಬೇರಾವುದೇ ಹಣ್ಣಿನಲ್ಲಿ ಮಾಡಿದರೆ ರುಚಿ ಕಮ್ಮಿ. ಬೇರೆ ಬೇರೆ ಭಾಗದಲ್ಲಿ ಈ ತಳಿಗೆ ಬೇರೆ ಬೇರೆ ಹೆಸರುಗಳಿವೆ.
ನಂತರ ಬೇರೆ ಬೇರೆ ಮಾವುಗಳ ರುಚಿ ನೋಡುವ ಭಾಗ್ಯ. ಅಡಕೆ ಪುಟ್ಟ ಮಾವಂತೂ ಬಲು ರುಚಿ.ಇದರ ರುಚಿ ಸಕ್ಕರೆ. ಮಕ್ಕಳಿಗೆ ಬಲು ಪ್ರಿಯವಾದ ತಳಿ.ಇದರ ಜೊತೆಗೆ ನಾಟಿ ಮಲಗೋಬ ಹಣ್ಣು, ನಾಟಿ ಹಣ್ಣುಗಳು ಶುರು.ಈ ನಾಟಿ ಹಣ್ಣುಗಳು ಸಿಹಿಹುಳಿ ಮಿಶ್ರಿತ.
ನಂತರ ಮಲಗೋಬ ಹಣ್ಣು. ಕತ್ತರಿಸಿಕೊಂಡೇ ತಿನ್ನಬೇಕು ಇದನ್ನು. ಸರಿಯಾದ ಒಂದು ಹಣ್ಣನ್ನು ತಿಂದರೆ ಹೊಟ್ಟೆ ಭರ್ತಿಯಾಗುತ್ತದೆ..ಬಹಳ ಮಜವಾದ ಸಿಹಿ.ಗೊತ್ತಿಲ್ಲದವರಿಗೆ ಕೆಲ ವ್ಯಾಪಾರಿಗಳು ಮಲಗೋಬ ಬದಲು ನಾಟಿ ಮಲಗೋಬವನ್ನೇ ಮಲಗೋಬ ಎಂದು ಮಾರುತ್ತಾರೆ.ಕೊಳ್ಳುವವರು ಹುಷಾರಾಗಿರಬೇಕು.
ನಂತರದ್ದು ಜೀರಿಗೆ ಮಾವಿನಹಣ್ಣು.ಸ್ವಲ್ಪ ಮಟ್ಟಿಗೆ ಆಕಾರದಲ್ಲಿ ರಸ್ಪುರಿಯನ್ನು ಹೋಲುತ್ತದೆ.ವಿಶೇಷ ಸುವಾಸನೆಯ ತಳಿ ಇದು.ಕೆಲವರಿಗೆ ಇದು ರುಚಿಸದು.ಇತ್ತೀಚೆಗೆ ಇದರ ತಳಿ ಕಡಿಮೆಯಾಗುತ್ತಿದೆ.ಕೆಲವರು ಇದನ್ನು ಮಾರುವ ಗೋಜಿಗೆ ಹೋಗದೆ ಗಿಡದಲ್ಲೇ ಬಿಡುತ್ತಾರೆ.ಮಾರುಕಟ್ಟೆಯಲ್ಲಿ ಬೆಲೆ ಕಮ್ಮಿ ಇದಕ್ಕೆ. ಇನ್ನೂ ಹಲವು ಹೆಸರಿನ ಸ್ಥಳೀಯ ಹಣ್ಣುಗಳು ಕಡಿಮೆ ಪ್ರಮಾಣದಲ್ಲಿ ಬರುತ್ತವೆ.
ಕಸಿ ಮಾವಿನ ಹಣ್ಣಿಗೆ ಸ್ವಲ್ಪ ಮಟ್ಟಿಗೆ ಸ್ಪರ್ದೆ ಒಡ್ಡುವ ತಳಿ ಎಂದರೆ ಸೇಂಧೂರ ಹಣ್ಣು. ಹಸಿರಿದ್ದರೆ ಈ ತಳಿ ಹುಳಿ.ಸಂಪೂರ್ಣ ಹಣ್ಣಾದರೆ ಸ್ವರ್ಗದ ಸಿಹಿ ರುಚಿ.ಇದನ್ನು ಸಿಂಧೂರ ಎಂತಲೂ,ಬೇರೆ ಬೇರೆ ಹೆಸರುಗಳಿವೆ.40 ರೂಪಾಯಿಯಿಂದ 25 ರೂಪಾಯಿಯ ತನಕ ಕೆ.ಜಿ.ಗೆ ಮಾರಲ್ಪಡುತ್ತದೆ.
ಕೊನೆಯದಾಗಿ,ಬೇಸಿಗೆ ಮುಗಿಯುವ ಹೊತ್ತಿಗೆ ನೀಲಂ ಶುರುವಾಗುತ್ತದೆ.ಅಷ್ಟರಲ್ಲಾಗಲೇ ಮಳೆ ಶುರುವಾಗಿರುತ್ತದೆ.ಈ ನೀಲಂ ಕೂಡ ಸಿಹಿಯಾದ ತಳಿ.ಮಳೆ ಶುರುವಾದರೆ ಈ ಹಣ್ಣಿನಲ್ಲಿ ಹುಳುಗಳು ಶುರುವಾಗುತ್ತದೆ.ನೋಡಿಕೊಂಡು ತಿನ್ನಬೇಕು.ಸೀಸನ್ ಮುಗಿದರೂ ಮಾರುಕಟ್ಟೆಯಲ್ಲಿ ಸಿಗುವ ಏಕೈಕ ಹಣ್ಣು ಇದು.ಮಹಾರಾಷ್ಟ್ರದಿಂದ ಈ ಹಣ್ಣು ಬರುತ್ತದೆ.ಮಹಾರಾಷ್ಟ್ರದಲ್ಲಿ ಮಳೆ ಶುರುವಾದ ಮೇಲೆ ಮಾವಿನಹಣ್ಣನ್ನು ತಿನ್ನುವುದಿಲ್ಲವಂತೆ.ವ್ಯಾಪಾರಿಗಳು ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ನಮ್ಮ ರಾಜ್ಯಕ್ಕೆ ರಫ್ತು ಮಾಡುತ್ತಾರೆ.
ಸೀಸನ್ ಇರುವಾಗ ಆಯಾ ಹಣ್ಣುಗಳನ್ನು ಚೆನ್ನಾಗಿ ತಿನ್ನಬೇಕು.ಆರೋಗ್ಯಕ್ಕೆ ಒಳ್ಳೆಯದು.
************
ಕೊಟ್ರೇಶ್ ಅರಸಿಕೆರೆ
ಸಂಗಾತಿಗೆ ಧನ್ಯವಾದಗಳು