ಶಾಲೆಗಳ ಪುನರಾರಂಭ
ಶಾಲೆಗಳನ್ನು ಪುನರಾರಂಭಿಸುವ ಕುರಿತು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಪಾಲಕರ, ಶಿಕ್ಷಕರ , ಆಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ.
ಜುಲೈ 1 ರಿಂದ 4 ರಿಂದ 7 ನೇ ತರಗತಿ, ಜುಲೈ 15 ರಿಂದ 1 ರಿಂದ 3 ಮತ್ತು 8 ರಿಂದ 10 ನೇ ತರಗತಿ, ಜುಲೈ 20 ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲನೇ ಮಾದರಿ ಮತ್ತು ತಾರೀಖುಗಳೆರಡೂ ಸಮಂಜಸವಾಗಿವೆಯೆಂಬುದು ನನ್ನ ಅಭಿಪ್ರಾಯ.
ತರಗತಿಗಳನ್ನು ನಡೆಸಲು ಮೂರು ಮಾದರಿಗಳ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿದೆ. ಅಗತ್ಯವಾದ ಸುರಕ್ಷಿತ ಕ್ರಮಗಳೊಂದಿಗೆ ಎಂದಿನಂತೆ ತರಗÀತಿ ನಡೆಸುವುದು ಮೊದಲನೇ ಮಾದರಿ.ಇದು ವ್ಯವಹಾರಿಕ ಹಾಗೂ ಸೂಕ್ತ.
ಪ್ರತಿದಿನ ಎರಡು ಪಾಳಿಗಳಲ್ಲಿ ಶಾಲೆಯನ್ನು ನಡೆಸುವುದು ಎರಡನೇ ಮಾದರಿ. ಅಂದರೆ ಕೆಲವು ತರಗತಿಗಳನ್ನು ಬೆಳಿಗ್ಗೆ 8 ರಿಂದ 12 ಮತ್ತು ಉಳಿದ ತರಗತಿಗಳನ್ನು ಮದ್ಯಾಹ್ನ 1 ರಿಂದ 5 ರವರೆಗೆ ನಡೆಸುವ ವಿಧಾನ. ಬಾಡಿಗೆ ವಾಹನಗಳು ವಿದ್ಯಾರ್ಥಿಗಳನ್ನು ತರಗತಿವಾರು ಕರೆದುಕೊಂಡು ಬರುವ ಪದ್ಧತಿ ಇಲ್ಲದಿರುವುದರಿಂದ ಹಾಗೂ ಒಂದೇ ವಾಹನದಲ್ಲಿ ಎಲ್ಲಾ ತರಗತಿಯ ಮಕ್ಕಳೂ ಪ್ರಯಾಣ ಸುವುದರಿಂದ ಮಕ್ಕಳ ಪ್ರಯಾಣ ವೆಚ್ಚ ಕಡಿಮೆ ಇರುತ್ತದೆ. ತರಗತಿವಾರು ವಿದ್ಯಾರ್ಥಿಗಳು ಪ್ರಯಾಣ ಸಬೇಕೆಂದರೆ , ನಿಗದಿತ ಸಂಖ್ಯೆಯ ಕೊರತೆಯಿಂದಾಗಿ ಪ್ರಯಾಣ ವೆಚ್ಚದಲ್ಲಿ ಏರಿಕೆ ಸಹಜ.ಬಾಡಿಗೆ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರಿಗೆ ಹೆಚ್ಚಿನ ವೆಚ್ಚ ತಗಲಲಿದೆ. ಶಾಲಾ ವಾಹನಗಳೇ ಇದ್ದರೆ, ತಗಲುವ ಹೆಚ್ಚುವರಿ ವೆಚ್ಚವನ್ನು ಪಾಲಕರಿಗೆ ವರ್ಗಾಯಿಸಲಾಗುತ್ತದೆ.
ಈ ವಿಧಾನದ ಅಳವಡಿಕೆಯಿಂದ ಶಾಲೆಯ ಶಿಕ್ಷಕೇತರ ಸಿಬ್ಬಂದಿ ಹಾಗೂ ಕೆಲವು ಶಿಕ್ಷಕರು ಹೆಚ್ಚುವರಿ ಸಮಯ ದುಡಿಯುವುದು ಅನಿವಾರ್ಯವಾಗಲಿದೆ; ಅದು ಅಪೇಕ್ಷಣೀಯವಲ್ಲ.ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ರಜೆ ಇದ್ದರೂ, ಮನೆಯಲ್ಲೇ ಕುಳಿತರೂ ಸಂಬಳ ಬರುತ್ತದೆ.ಆದರೆ, ಖಾಸಗಿ ಶಾಲಾ ಶಿಕ್ಷಕರಿಗೆ ಹೆಚ್ಚಿನ ದುಡಿಮೆಗೆ, ಕೆಲವರಿಗೆ ರಜಾ ಅವಧಿಗೆ ಸಂಬಳ ಇರುವದಿಲ್ಲ.
ಮೂರನೇ ಮಾದರಿಯಂತೆ ತರಗತಿಗಳನ್ನೇ ದಿನಬಿಟ್ಟು ದಿನ ಪಾಳಿಯಲ್ಲಿ ನಡೆಸುವುದು. ಮಕ್ಕಳ ಕಲಿಯುವಿಕೆ,ದಿನಚರಿಯಲ್ಲಿ ನಿಯಮಿತತೆ ಕಾಪಾಡುವಿಕೆ ಹಾಗೂ ವ್ಯವಹಾರಿಕ ಸಾಧ್ಯತೆಯ ದೃಷ್ಟಿಯಿಂದ ಸಮಂಜಸವಲ್ಲ.
ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತಿ ಅವಶ್ಯವಾದ ಆಟ, ಓಟ, ಸ್ನೇಹಿತರ ಒಡನಾಟದಿಂದ ಕಳೆದ 3 ತಿಂಗಳಿನಿಂದಲೂ ಲಾಕ್ ಡೌನ್ ನಿಂದಾಗಿ ಬೆಳೆಯುವ ಮಕ್ಕಳು ವಂಚಿತರಾಗಿದ್ದಾರೆ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರುವ ಮಕ್ಕಳಿಗೆ ಶುದ್ಧ ಗಾಳಿಯನ್ನು ಸೇವಿಸುವ, ಆಟ, ಪಾಠಗಳಲ್ಲಿ ತೊಡಗಿಕೊಳ್ಳುವ ಅವಕಾಶವನ್ನೂ ಇನ್ನೂ ತಡೆಗಟ್ಟುವುದು ಸಮಂಜಸವಲ್ಲ.
ರಾಜಕೀಯ ಸಭೆ ಸಮಾರಂಭಗಳಿಗೆ ಹೋದರೆ, ಮಾಲ್ ಗೆ ಹೋದ್ರೆ, ಹೋಟೆಲುಗಳಿಗೆ ಹೋದ್ರೆ. ಕಛೇರಿಗಳಿಗೆ …ಮದುವೆ-ಎಂಗೇಜ್ಮೆಂಟ್ ಗಳಿಗೆ ಹೋದ್ರೆ.., ಧಾರ್ಮಿಕ ಸ್ಥಳಗಳಿಗೆ ಹೋದರೆ ಕೊರೊನಾ ಸೋಂಕು ತಗಲುವದಿಲ್ಲವೆ?
ಮಕ್ಕಳು ಮನೆಲಿದ್ರೂ ಹೊರಗೆಹೋದ ಪಾಲಕರು ಮತ್ತೆ ಮನೆಗೆ ಹೋಗಲ್ವಾ? ಆ ಮೂಲಕ ಮನೆಯವರಿಗೆಲ್ಲಾ ಕರೋನ ಬರಲ್ವಾ? ಮದ್ಯವನ್ನು ಹೊರಗಿನಿಂದ ತಂದು ಮನೆಲಿ ಪಾರ್ಟಿ ಮಾಡೋದ್ರಿಂದ ಕೋರೊನ ಬರಲ್ವಾ?ಅಪ್ಪ ಅಮ್ಮ ಇಬ್ಬರೂ ಕೆಲಸಗಳಿಗೆ ಹೋಗುವ ಪರಿಸ್ಥಿತಿಯಲ್ಲಿ ಮನೆಯಲ್ಲೇ ಮಕ್ಕಳ ಶಿಕ್ಷಣ ಹೇಗೆ?
ಆನ್ ಲೈನ್ ಸೌಲಭ್ಯ ಇಲ್ಲದ ಮಕ್ಕಳು ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೆಷ್ಟು ಮಕ್ಕಳು ಫೇಸ್ ಬುಕ್, ವಾಟ್ಸ ಏಪ್, ಬೇಡದ ಹಾಗೂ ಸುರಕ್ಷಿತವಲ್ಲದ ಜಾಲತಾಣಗಳಿಗಳಿಗೆ ಭೇಟಿ ನೀಡಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ಗಮನಿಸಿಲಾಗಿದೆಯೇ? ಇನ್ನೀಗ ಶಾಲೆಯೆ ಇಲ್ಲ ಅಂದ್ರೆ ಮಕ್ಕಳು ಮೊಬೈಲ್ ..ಟಿವಿ ಗಳ ನಡುವೆ ಸಿಲುಕಿ ಇನ್ನೇನೆಲ್ಲಾ ಆಗಬಹುದು?
ಶಿಕ್ಷಣದಿಂದ ಮಾನವರು ರೂಪುಗೊಳ್ಳಬೇಕೇ ಹೊರತು ರೊಬೋಟ್ ಗಳಲ್ಲ. ಅಂತರ್ಜಾಲದಲ್ಲಿ ಭರಪೂರ ಮಾಹಿತಿ ಲಭ್ಯ. ಆದರೆ ಆನ್ ಲೈನ್ ಶಿಕ್ಷಣ ಶಾಲಾ ಶಿಕ್ಷಣಕ್ಕೆ ಪರ್ಯಾಯವಲ್ಲ.
ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರು(ಸರ್ಕಾರಿ ಮತ್ತು ಖಾಸಗಿ ರಂಗ) ಕೂಡಾ ಪಾಲಕರು,ಅವರಿಗೆ ವೈಯಕ್ತಿಕ ಮತ್ತು ಸಾಮಾಜಿಕ ಹೊಣೆಗಾರಿಕೆ ಇದೆಯೆಂಬುದನ್ನು ಮರೆಯಲಾಗದು.
ಕೊರೊನಾವನ್ನು ಹೊಡೆದೋಡಿಸುತ್ತೇವೆ, ಮೂಲೋತ್ಪಾಟನೆ ಮಾಡುತ್ತೇವೆ, ನಾಶ ಮಾಡಿಬಿಡುತ್ತೇವೆ, ಮುಂತಾದ ಘೋಷಣೆಗಳು ರಾಜಕಾರಣಿಗಳ ವೇದಿಕೆಗೆ ಮಾತ್ರ ಸೀಮಿತ. ಕೊರೊನಾ ಭೂಮಿಯ ಮೇಲೆ ವಾಸಿಸಲು ಬಂದಿರುವ ಇನ್ನೊಂದು ವೈರಾಣು. ನೆಗಡಿ, ಫ್ಲೂ ಮುಂತಾದ ವೈರಸ್ ಗುಂಪಿಗೆ ಸೇರಿರುವ ಕೊರೊನಾ, ಮಾಧ್ಯಮಗಳು ಮತ್ತು ರಾಜಕಾರಣಿಗಳು ಬಿಂಬಿಸುತ್ತಿರುವಷ್ಟು ಅಪಾಯಕಾರಿಯಲ್ಲ. ಅದರೊಂದಿಗೆ ಬದುಕಲೇಬೇಕಾದ ಅನಿವಾರ್ಯತೆ ಉದ್ಭವಿಸಿರುವುದು ವಾಸ್ತವ.
ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವ , ಹುಲಿಯ ಹೆಸರನ್ನು ಕೇಳಿಯೇ ಭಯದಿಂದ ಬೆವರುವವರ ಅರಚಾಟವನ್ನೇ ನಿಜವೆಂದು ನಂಬುವ ಅಗತ್ಯವಿಲ್ಲ. ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ಕುಡಿದರೆ ಶೀತವಾಗುವ ಸೂಕ್ಷ್ಮ ಪ್ರಕೃತಿಯ ಮಕ್ಕಳನ್ನು ಶಾಲೆಗೆ ಕಳುಹಿಸುವ ಆಯ್ಕೆಯನ್ನು ಅವರ ಪಾಲಕರೇ ನಿರ್ಧರಿಸಲಿ.
ಕಂಫರ್ಟ ವಲಯದಲ್ಲಿ ಕುಳಿತಿರುವವರ ಅತಾರ್ಕಿಕ ಭಯವನ್ನು ಪುರಸ್ಕರಿಸಿ,ಶಾಲೆಗಳ ಪುನರಾರಂಭವನ್ನು ಮುಂದೂಡಿ ಲಕ್ಷಾಂತರ ಮಕ್ಕಳ ಬೆಳವಣಿಗೆ ಕುಂಠಿತಗೊಳಿಸುವದು ಸರಿಯಲ್ಲ;ಅದು ಅವರಿಗೆ ಮಾಡುವ ದ್ರೋಹ.ಈ ಹಂತದಲ್ಲಿ, ಜುಲೈ ಒಂದನೇ ತಾರೀಖಿನಿಂದ ಶಾಲೆಗಳನ್ನು ಪ್ರಾರಂಭಿಸುವದೇ ಸೂಕ್ತ.
*******
ಗಣೇಶ ಭಟ್ ಶಿರಸಿ