ಲಹರಿ ಸಂಗಾತಿ
ಪ್ರೇಮಾ ಟಿ ಎಂ ಆರ್
‘ಅಲ್ಲಿ ಮನೆಮನೆಯಲ್ಲಿ’
ಮದ್ಯಾಹ್ನದ ಮಂಪರಿನಲ್ಲೊಂದು ಲಹರಿ
ಕೈಚೀಲದಿಂದ ಬಸ್ಲೆ ಕಟ್ಟು ಈಚೆ ತೆಗೆದೆ.. “ಪರವಾಗಿಲ್ಲ ಫ್ರೆಶ್ ಅದೆ ಅಲ್ಲಾ ” ಅಂದೆ.. ಉಶ್ಶಪ್ಪಾ ಎಂದು ಉಸಿರು ದಬ್ಬಿದ ಸಂಗಾತಿ “ಎಪ್ಪತ್ತು ರೂಪಾಯಿ” ಎಂದರು..”ಅಬ್ಬಾ ಇದು ಇಪ್ಪತ್ತರಿಂದ ಎಪ್ಪತ್ತಕ್ಕೆ ಜಿಗಿದದ್ದು ಗೊತ್ತೇ ಆಗ್ಲಿಲ್ಲ.. ನಿನ್ನೆ ಅಷ್ಟೇ ವೀಣಾ ಹೇಳಿದ್ಲು ಅರವತ್ತು ರೂಪಾಯಿ ಅಂತ . ನೀವು ಕಾರು ತಗೊಂಡು ಮಾರ್ಕೆಟ್ ಗೆ ಹೋಗ್ಬೇಡಿ. ಅದಕ್ಕ್ಕಾಗಿಯೇ ಹತ್ರುಪಾಯಿ ಜಾಸ್ತಿ ಹೇಳ್ತಾರೆ” ಎಂದೆ ಈಗಷ್ಟೇ ಕುಂಡದಲ್ಲಿ ಚಿಗುರಿಕೊಂಡ ಬಸಲೆ ಗಿಡಕ್ಕೆ ನೀರು ಹನಿಸುತ್ತ… “ನಿನ್ನ ತಲೆ ಹಾಗೇನು ಇಲ್ಲ. ಈ ಬಿಸ್ಲಲ್ಲಿ ಬೈಕ್ ತಕೊಂಡು ಹೇಗೆ ಓಡಾಡೋದು..?”ಅಂದ್ರು.. ಛೇ , ನನ್ನ ತಲೆಗೊಂದಷ್ಟು… ಹೌದಲ್ವಾ ಹಸೀ ಮರವನ್ನೇ ಬತ್ತಿಸಿಬಿಡುವ ಸುಡು ಬಿಸಿಲು.. ಹೊಟ್ಟೆಕಳ್ಳು ಚುಳ್ಕ ಅಂತು. “ಎಲ್ಲ ದುಬಾರಿನೇ , ಪಾಪ ಅವ್ರು ಏನ್ಮಾಡ್ತಾರೆ.. ಬೆಳೆಯುವವರು ಕಡಿಮೆ. ತಿನ್ನೋವರ ಸಂಖ್ಯೆ ಜಾಸ್ತಿ . ಅವ್ರೂ ಬದುಕ್ಬೇಕು ಅಲ್ವಾ? ಎಂದವನನ್ನು ಕೆಕ್ಕರಿಸಿದೆ. ನನ್ನ ಖರ್ಚಿಗೆ ದುಡ್ಡು ಕೊಡುವಾಗ ಆಣೆಗೂ ಲೆಕ್ಕ ಹಾಕುವ ಮನುಷ್ಯ ಮತ್ತೆಲ್ಲ ಕಡೆ ದಾರಾಳಿನೇ… ನೂರು ಚಿಪ್ಪಿಕಲ್ಲಿಗೆ ಇನ್ನೂರರ ಕಾಲ ಮುಗಿದು ಈಗ ಮುನ್ನೂರು ಮುಟ್ಟಿದೆ.. ಲೆಕ್ಕಮಾಡಿ ಮೂರೇ ನುಗ್ಗಿಕಾಯಿ ಕಟ್ಟಿಗೆ ಐವತ್ತು ರೂಪಾಯಿ ಕಕ್ಕಬೇಕು.. ಸಾಕಪ್ಪಾ ಈ ಬದುಕು ಅಂದ್ಕೊಂಡೆ.. ಈ ಮಧ್ಯಮ ವರ್ಗದ ಬದುಕೇ ಹಾಗೆ ಇಲ್ಲಿ ಮುಟ್ಟಿದ್ರೆ ಅಲ್ಲಿ ಮುಟ್ಟೋದಿಲ್ಲ.. ಅಲ್ಲಿ ಮುಟ್ಟಿದ್ರೆ ಇಲ್ಲಿ ಮುಟ್ಟೋದಿಲ್ಲಿ… ಬರೀ ಕಂಡವರೆದುರಿಗೆ ಶೋಕಿ ಮಾಡಿದ್ದೇ ಬಂತು.. ಎದ್ದು ಹೋಗಿ ತಣ್ಣಗಿನ ನೀರು ಮಜ್ಜಿಗೆಗೆ ಹದವಾಗಿ ಉಪ್ಪು ಬೆರಸಿ ತಂದು ಹೊರ ಜಗುಲಿಯ ಮೆಟ್ಟಿಲಮೇಲೆ ಕೂತವನ ಕೈಗಿಟ್ಟು ನಾನೂ ಪಕ್ಕದಲ್ಲಿ ಕೂತೆ. ಯಾಕೋ ಮನ ನಾಜೂಕಿನ ಜಗದ ಜಂಜಡಗಳಿಂದ ಬಿಡಿಸಿಕೊಂಡು ಹುಟ್ದೂರಿನ ಗಾಂವ್ಟಿಯ ಕಡೆಗೆ ಮುಖ ಮಾಡಿತು… ಬೆಳಬೆಳಗ್ಗೆಯೇ ಬೆಳ್ಚ ಬೇಕೇ.. ? ಎಂದು ಕೇಳ್ತಾ ಕೇರಿಗೆ ಇಳಿವ ಬೆಳ್ಚಿನ ಭಾಗಕ್ಕ ಮನೆ ಜಗುಲಿಯ ಮೂಲೆಗೆ ಮೂರು ಸಿದ್ದೆ ಬಳ್ಚು ಅಳೆದ ಹಾಕಿ ಮುಂದಕ್ಕೆ ಹೋಗುತ್ತಿದ್ದಳು.. ದುಡ್ಡು ಇದ್ದರಂತೂ ಸರಿ… ದುಡ್ಡೆಲ್ಲಲೆ ಭಾಗಕ್ಕ ಅಂದ್ರೆ, “ನಾಳಿಗೆ ಕೊಟ್ರಾಯ್ತೆ ಮಾಸ್ತಕ್ಕ.. ನಾ ಎಂತ ಓಡೋತಿನೆ?” ಎಂದು ಮುಂದಕ್ಕೆ ಹೋಗುವದು ನಿತ್ಯದ ವಾಡಿಕೆ. ಬೆಳಚಿನ ಬೆರಕೆಗೆ ಏನೂ ಎಲ್ಲಪ್ಪ, ಎಂತ ಮಾಡವದೇನ ಸಾಯ್ಲಿ ಎಂದು ಅಕ್ಕ ಪಕ್ಕದ ಕೇರಿ ಹೊಕ್ಕರೆ ಯಾರದೋ ಮನೆಯ ಬಸಲೆ ಚಪ್ಪರದಿಂದ ಒಂದು ಗೆರಶಿ ಹಸಿಮುಗುಳುವ ಬಸ್ಲೆ ಎದುರಿಗೆ ಹಾಸಿಕೊಳ್ಳತ್ತದೆ . ಇನ್ಯಾರದೋ ಬೇಲಿಮೇಲಿನ ನುಗ್ಗೆ ಮರದಲ್ಲಿ ತೂಗುಬಿದ್ದ ನುಗ್ಗೆಕಾಯಿ, ಅದೂ ತಪ್ಪಿದರೆ ಅಡಕೆ ತೋಟದ ನಡುವೆ ಜೋತುಬಿದ್ದ ಬಿಂಬಲಿಕಾಯಿ.. ಯಾರದೋ ಮನೆ ಕಿಬ್ಬಳದಲ್ಲಿ ತಂತಾನೆ ಹುಟ್ಟಿ ಬೆಳೆದ ಪೊಪ್ಪಳೆ ಮರದಲ್ಲಿ ಜೀಕುವ ದೋರಗಾಯಿ , ಇನ್ನೆಲ್ಲೋ ಹಸಿರ ನಡುವೆ ಬಿಮ್ಮನೆ ಬೆಳೆದ ಮಾವಿನ ಕಾಯಿ ಎಲ್ಲವೂ ಬೆರಕೆ ಸಾರಿಗೆ ಸೂಪರ್.. ಬಿರು ಬೇಸಿಗೆಯಲ್ಲಿ ಕೊಚ್ಚಗಕ್ಕಿ ಅನ್ನ ,ಬೆರ್ಕಿಗೆ ಹಾಕಿದ ಆಸಿ, ಒಂದು ಗಿಂಡಿ ರಾಗಿ ಅಂಬ್ಲಿಯ ಕಾಂಬಿನೇಶನ್ಗಳು.. ಊಟವಂತೂ ಬೊಂಬಾಟ್.. ಎಷ್ಟೊಂದು ಸಮೃದ್ಧ ಆ ಕಾಲ.. ಒಬ್ಬರಿಗೊಬ್ಬರು ಹಂಚಿ ತಿನ್ನುವ ಹೊಂದಿ ಬಾಳುವ ಆ ಬದುಕು ಎಷ್ಟೊಂದು ಸುಂದರ… ಇಂದಿಗೂ ನನ್ನೂರ ರಸ್ತೆಯ ತಗ್ಗಿನ ಕೇರಿಯನ್ನೊಮ್ಮೆ ಹಣಕಿ ನೋಡಿದರೆ ಮನೆ ಮುಂದೆ ಬಸಳೆ ಚಪ್ಪರ ಕಾಣುತ್ತದೆ… ಬೆಲಿಯ ಮೇಲಿರುವ ನುಗ್ಗೆ ಮರ ಪಾಗಾರ ಚಂದವಾಗುವ ಹೊತ್ತು ಸತ್ತು ಹೋದರೂ ಅದೇ ಪಾಗಾರದ ಮೂಲೆಯಲ್ಲೊಂದು ಚೊಚ್ಚಲು ಗಿಡ ಕಾಯಿ ಹೇರಿಕೊಂಡು ಬೀಗುತ್ತದೆ.. “ಹಾಳಾಲೆ ಆಸಿಗೆಂತ ಎಲ್ಲ… ದಿನಾ ಎಂತ ಮಾಡುದು? ತಂಬ್ಳಿ ಅರ್ದಿ ಇಟ್ಟನೆ” ಎಂದು ಆ ಅಂಗಳ ಈ ಅಂಗಳ ತುದಿಯಲ್ಲಿ ನಿಂತ ಹೆಣ್ಣುಗಳ ವಾರ್ತೆ ಸುರುವಾದರೆ ಅದರಾಚೆ ಮನೆಯವಳು “ಮಾದೇವಿ , ಇಕ .. ನಾನು ಒಣಸೆಟ್ಲಿ ಮಾಯ್ನಕಾಯಿ ಹಾಕಿ ಸಾರ್ ಮಾಡಿನೆ.. ಎಂದು ತಾಂಬಾಳ ತುಂಬಿ ಕೊಡುವ ಹೆಣ್ಣುಗಳಿರುವ ಆ ನೆಲದಂಚಿನ ಬದುಕು ಬವಣೆಯಾದರೂ ಅಂತಕ್ಕರಣದ ಭರವಸೆ …. ಇದೇ ಭರವಸೆಯಲ್ಲಿ ಹಬ್ಬಿಕೊಳ್ಳುವ ಬಾಂಧವ್ಯದ ಬಲೆ……ಆ ಚಂದದ ನೆಲೆಯ ನೆನಪಿನಲ್ಲಿ ಕಳೆದುಹೋಗುವ ನಾನು ಮಧ್ಯಮೆ….
———————————
ಪ್ರೇಮಾ ಟಿ ಎಂ ಆರ್