ಐದನೇ ವಾರ್ಷಿಕೋತ್ಸವದ ವಿಶೇಷ
ನಾ ಮೆಚ್ಚಿದ ಕಾದಂಬರಿ
ಡಾ.ಯಲ್ಲಮ್ಮ ಕೆ.
ಡಾ.ಶಿವರಾಮ ಕಾರಂತ
ಅಳಿದ ಮೇಲೆ
ಅಳಿದಮೇಲೆ ಇನ್ನೇನಿದೆ..? – ಕಾದಂಬರಿ ಮರುಓದು.
ಬದುಕಂದ್ರೇನು..,ಬದುಕನ್ನು ಕಟ್ಟಿಕೊಳ್ಳೊದ್ಹೇಗೆ.., ಯಾವ ವಿಶ್ವವಿದ್ಯಾಲಯಗಳಲ್ಲಿ ಇದನ್ನೆಲ್ಲ ಕಲಿಸಿಕೊಡುತ್ತಾರೆ.., ಸಂತೃಪ್ತ ಬದುಕನ್ನು ಹೊಂದುವುದ್ಹೇಗೆ.., ಯಾವ ಪುರುಷಾರ್ಥ ಸಾಧನೆಗಾಗಿ ಬದುಕಿನಲ್ಲಿ ನೆಲೆಗೊಳ್ಳಬೇಕೆಂದು ಜನ ಹಪಹಪಿಸುತ್ತಾರೆ.., ನೆಲೆಗೊಂಡವರು ನಿಜಕ್ಕೂ ಸಂತೃಪ್ತಿಯನ್ನು ಹೊಂದಿದ್ದಾರೆಯೇ..? ದುಡ್ಡನ್ನು ದುಪ್ಪಟ್ಟುಗೊಳಿಸಿ ಕೊಳ್ಳುವ ಮುಳುಗಿ ಕಟ್ಟಿಕೊಂಡ ಬದುಕಿನಲ್ಲಿ ಅವರು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿದ್ದಾರೆಯೇ..? ದಿಗಂತದಾಚೆಗೇನಿದೆ.., ಬದುಕಿನಾಚೆ ಇನ್ನೇನಿದೆ..? ಇಂಥಹ ಹತ್ತುಹಲವು ವಿಚಾರಗಳು ನನಗೆ ಎಳೆತನದಿಂದಲೂ ಕಾಡಿದ ಯಕ್ಷಪ್ರಶ್ನೆಗಳಾಗಿವೆ.
ಬೀಜವೊಂದು ಬುವಿಗೆ ಬಿದ್ದು ಸಾರವನ್ನೆಲ್ಲ ಹೀರಿ ಸೂರ‍್ಯನ ಶಾಖದಿ ಬಿರಿದು ಮೊಳಕೆಯೊಡೆದು, ಸಸಿಯಾಗಿ, ಗಿಡ-ಹೆಮ್ಮರವಾಗಿ ಬೆಳೆದು ನಿಂತು ಋತುಮಾನಗಳಿಗನುಗುಣವಾಗಿ ಬದಲಾಗುತ್ತಾ ಸಾಗಿ ಕೊನೆಗೊಂದು ದಿನ ಮಣ್ಣಲ್ಲಿ ಮಣ್ಣಾಗುತ್ತದೆ. ಹಾಗೇನೇ ಪಂಚಭೂತಗಳಿಂದಾದ ಶರೀರ ಮತ್ತೊಂದು ದಿನ ಪಂಚಭೂತಗಳಲ್ಲಿಯೇ ಲೀನವಾಗುತ್ತದೆ. ಈ ಬಂದ್ಹೋಗುವ ಮಧ್ಯದ ಅವಧಿಯನ್ನೇ ನಾವು ಬದುಕು ಎಂದು ಕರೆಯಬಹುದು. ಆದರೆ ಈ ಬದುಕಿನ ಕಾಲಾವಧಿ (ವ್ಯಾಲಿಡಿಟಿ) ಎಷ್ಟು..? ತದನಂತರ ಮುಂದೇನು.., ಎನ್ನುವುದು ಬಹುದೊಡ್ಡ ಯಕ್ಷಪ್ರಶ್ನೆ..? ಈ ವಿಷಯವಾಗಿಯೇ ಪುನರ್ಜನ್ಮದ ಕಲ್ಪನೆಯು ಮೂಡಿಬಂದಿದ್ದು. ಹೌದು ಕಾಯಕ್ಕೆ ಸಾವಿದೆ ಆತ್ಮಕ್ಕೆ ಸಾವಿಲ್ಲ. ವ್ಯಕ್ತಿ ಸತ್ತ ನಂತರ ದೇಹದಿಂದ ಬೇರ್ಪಟ್ಟ ಆತ್ಮವು ಬೇರೆ ಬೇರೆ ಜೀವರಾಶಿಗಳಲ್ಲಿ ಹೊಕ್ಕು ಮರುಹುಟ್ಟು ಪಡೆಯುತ್ತದಂತೆ..! ಇದನ್ನೇ ಜೈನಧರ್ಮದಲ್ಲಿ ಭವಾವಳಿಗಳು ಎಂದು ಕರೆದಿದ್ದು, ಎಷ್ಟೋ ಜನ್ಮಗಳನ್ನು ಕಳೆದು ಮಾನವ ಜನ್ಮ ಪಡೆದಿರುವಂತೆ ಇದು ದೊಡ್ಡದು ಹಾಳು ಮಾಡಿಕೊಳ್ಳದಿರುವಂತೆ ದಾಸರು ಉಪದೇಶಿಸಿದ್ದಾರೆ. ಹಾಗಾದರೆ ಈ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದು ಹೇಗೆ..? ಒಳ್ಳೆಯದನ್ನು ಮಾಡಬೇಕು, ಒಳ್ಳೆಯವರಿಗೆ ಒಳ್ಳೆಯ ಸಾವೇ ಸಿಕ್ಕಿದೆಯೇ..? ಸತ್ತವರೆಲ್ಲ ಸ್ವರ್ಗ ಸೇರಿದ್ದಾರೆಯೇ..? ಸೇರಿರುವ ಬಗ್ಗೆ ಪುರಾವೆಗಳೇನಾದರೂ ಸಿಕ್ಕಿವೆಯಾ..? ಇಲ್ಲ ಎನ್ನಬಹುದೆ..? ರಣರಂಗದಲ್ಲಿ ವೀರಾವೇಶದಿಂದ ಹೋರಾಡಿ ಗೆದ್ದರೆ ವಿಜಯದ ಮಾಲೆ ಸೋತರೆ, ಸತ್ತರೆ ವೀರ ಮರಣ..! ನಮ್ಮಲ್ಲಿ ಸತ್ತು ಸ್ವರ್ಗಕ್ಕೆ ಹೋದವರೆ ಜಾಸ್ತಿ, ಆದರೆ ಮರಳಿ ಬಂದವರಿಲ್ಲ. ಸತ್ತು ಸ್ವರ್ಗ ಸೇರುವುದಾದರೆ ಅಂತ ಸ್ವರ್ಗದ ಗೊಡವೆ ಬೇಡವೇ ಬೇಡ. ತಾ ನಿಂತ ನೆಲವನ್ನೆ ಸ್ವರ್ಗಮಾಡಿಕೊಳ್ಳಲು ಸಾಧ್ಯವೇ..? ಹೀಗೆ ವ್ಯಕ್ತಿ ಸತ್ತ ನಂತರ ಮುಂದೇನು..? ಎಂಬ ವಿಚಾರವನ್ನು ಮುಂದಿಟ್ಟುಕೊಂಡು, ತನ್ನ ಆಪ್ತಗೆಳೆಯ ಯಶವಂತರಾಯರ ಬದುಕನ್ನು ಬಹಳ ಹತ್ತಿರದಿಂದ ಕಂಡುಂಡ ಶಿವರಾಂ ಕಾರಂತರು ಅವನು ಸತ್ತ ನಂತರದ ವಾಸ್ತವ ಜಗತ್ತಿನ ಯಥಾವತ್ತಾದ ಚಿತ್ರಣವನ್ನು ತಮ್ಮ ಅಳಿದಮೇಲೆ ಕಾದಂಬರಿಯಲ್ಲಿ ತುಂಬ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.
ಬದುಕಿನ ಕುರಿತಾದ ಮೂಲಭೂತವಾದ ಪ್ರಶ್ನೆಯೊಂದನ್ನು ಕೈಗೆತ್ತಿಕೊಂಡು – ಬಾಬಾನನ್ನುದ್ದೇಶಿಸಿ ಸತ್ತಮೇಲೆ ನಾನು ಏನನ್ನು ಕಟ್ಟಿಕೊಂಡು ಹೋಗುತ್ತೇನೆ, ಹಣವಷ್ಟೇ ಅಲ್ಲ ನನ್ನ ಹೆಣವನ್ನೂ ನಿಮಗೆ ಬಿಟ್ಟು ಹೋಗುತ್ತೇನೆ. ಎಂದು ಉತ್ತರಿಸುತ್ತ ಸಾಗುವ ಕಾದಂಬರಿಯು ಸಾರ್ವಕಾಲಿಕವಾಗಿ ನಿಲ್ಲಬಲ್ಲ ಮೇರುಕೃತಿಯ ಮರುಓದಿನ ಹಿನ್ನಲೆಯಲ್ಲಿ ಮೂಡಿಬಂದ ಲೇಖನವಾಗಿದೆ.
ಜೀವನವೆಂಬುದೊಂದು ಸುದೀರ್ಘಕಾಲದ ಯಾತ್ರೆ. ಈ ಯಾತ್ರೆಯು ಪರಾಶ್ರಯವಿಲ್ಲದೆ ನಮ್ಮ ಅಂದಿನ ಬಾಳು ಸಾಗದಾದರೂ, ಅವೆಲ್ಲವುಗಳ ವಿಚಾರದಲ್ಲಿ ಉಳಿಯುವ ನೆನಪುಗಳು ತೀರಾ ಕಡಿಮೆ. ಹೀಗೆ ಈ ಅಸಂಖ್ಯ ಜೀವರಾಶಿಗಳು ಹುಟ್ಟಿ, ಬೆಳೆದು ಕೊನೆಗೊಂದು ದಿನ ಮಣ್ಣಹುಡಿ ಸೇರಲೇಬೇಕು. ಹಾಗಾದರೆ ಬದುಕಿನ ಸಾರ್ಥಕತೆ ಎಲ್ಲಡಗಿದೆ..? ಹೀಗೆ ಸಾವಿಗೀಡಾದ ಯಾರ ಬಾಳು ವ್ಯರ್ಥವಲ್ಲ. ಅದು ಆದಷ್ಟು ಹೆಚ್ಚು ಸಾರ್ಥಕವಾಗುವಂತೆ ನಡೆದರಾದೀತೆಂದು ನನ್ನ ಮನಸ್ಸು ಹೇಳುತ್ತದೆ.
ಪರರ ಎನಪಿನ ಬುತ್ತಿಯಲ್ಲಿ ಇಂಥ ಒಂದು ಜೀವ ಇದ್ದೀತು ; ಅದು ಹೋಯಿತಲ್ಲ, ಅದು ಹೋದದರಿಂದ ನಮ್ಮ ಬಾಳ್ವೆಯ ಸಂಪತ್ತು ಅಷ್ಟೇ ಬಡವಾಯಿತಲ್ಲ ಎಂದು ಬರೆಯಿಸಿ ಹೋಗಬಲ್ಲಂತಹ ಬಾಳ್ವೆಯ ಅವಶೇಷ ಎಷ್ಟು ಮಂದಿಗೆ ಇರುತ್ತದೆ. ಅಂತಹ ಬದುಕು ನಮ್ಮದಾಗಬೇಕು. ಈ ಬಾಳಿನ ಹಾದಿಯಲ್ಲಿ ಅಹಮಿಕೆಯನ್ನು ಜನ್ಮದತ್ತವಾಗಿ ಪಡೆದುಕೊಂಡು ಬಂದವರಿರುತ್ತಾರೆ, ಏನೇ ಆದರೂ ಜನರು ಜನರೇ ಹಣಕಾಸು ಇದ್ದ ಮಾತ್ರಕ್ಕೆ ದೇವತೆಗಳಾಗುತ್ತಾರೆಯೇ..? ಅವರು ನೆಮ್ಮದಿಯಿಂದ ನಿದ್ರಿಸಬಲ್ಲರೇ..? ಬದುಕಿನಲ್ಲಿ ತೀರ ಸುಖದಿಂದ ಸರಿಯುವ ಸಮಯ ಯಾವುದು..? ಎಂದು ನನ್ನನ್ನು ಕೇಳಿದರೆ – ಸುಖ ದುಃಖಗಳಿಲ್ಲದಂತಹ ನಿದ್ರೆ ಎಂದು ತಿಳಿದವನು ನಾನು. ಅಂತಹ ಸುಖ ನಿದ್ರೆಯನ್ನು ಪಡೆಯಬೇಕಾದರೆ ಯಾರಿಗೂ ಒಳ್ಳೆಯದನ್ನು ಮಾಡಬೇಕೆಂದಿಲ್ಲ ; ಕೆಡುಕನ್ನು ಮಾಡದಿದ್ದರೆ ಸಾಕು.
ನಮ್ಮ ಸುತ್ತಣ ಪರಿಸರದಲ್ಲಿ ಬದುಕುವಾಗ ಬೇರೆಯವರ ದೃಷ್ಟಿಯಲ್ಲಿ ನಾವು ಅವರು ಇಲ್ಲಿ ವಾಸವಾಗಿರುವುದೆಂದರೆ ಒಂದು ಗುಲಾಬಿ ಗಿಡ ಹೂವು ಬಿಟ್ಟು, ಕಂಪು ಬೀರುವಂತೆ ಕಾಣಿಸುತ್ತಿತ್ತು ಎಂಬತಿರಬೇಕು. ಮನುಷ್ಯ ಸಮಾಜದ ಋಣವನ್ನು ಹೊತ್ತುಕೊಂಡೇ ಬಂದಿದ್ದಾನೆ. ಅದರ ಋಣದಿಂದಲೇ ಬೆಳೆಯುತ್ತಾನೆ, ನಾಳೆ ದಿನ ಸಾಯುವಾಗ ತಾನು ಪಡೆದುದಕ್ಕಿಂತಲೂ ಹೆಚ್ಚಿನ ಋಣವನ್ನು ಹಿಂದೆ ಸಲ್ಲಿಸಿ ಹೋದರೆ ಆತ ಹುಟ್ಟಿದ್ದಕ್ಕೊಂದು ಸಾರ್ಥಕ. ಇಲ್ಲವಾದರೆ ಅವನ ಜನ್ಮದಿಂದ ಸಮಾಜಕ್ಕೆ ನಷ್ಟ ಎಂಬ ಭಾವನೆ ನನ್ನದು .
ಸಾವು ಯಾರಿಗಾದರೂ ತಪ್ಪಿದ್ದುಂಟೇ..? ನಾವು ಸತ್ಮೇಲೆ ಕಟ್ಟಿಕೊಂಡ್ಹೋಗುವುದೇನಿದೆ..? ನಾನು ಸಾಯುವಾಗ ಏನಾಗುತ್ತೇನೆಂದು ನನಗೆ ಗೊತ್ತಿಲ್ಲ. ಹಣ ಮಾತ್ರವಲ್ಲ ನನ್ನ ಹೆಣವನ್ನು ಬಿಟ್ಟು ಹೋಗುತ್ತೇನೆ. ಹಣ,ಕಾಸು ಮೊದಲಾದವು ಈ ದೃಷ್ಟಿಯಿಂದ ನನಗೆ ಅಲ್ಪ ಪದಾರ್ಥಗಳು, ಆದರೂ ಬಾಳನ್ನು ಸಾಗಿಸಲು ಬೇಕಾದ ದ್ರವ್ಯಗಳಷ್ಟೇ..!
ಸಾವಿನ ಭಯ ನನಗಿಲ್ಲವೇ ಇಲ್ಲ. ಆದರೆ ನಾನು ಬದುಕಿ, ಯಾರಿಗೆ ಏನು ಪ್ರಯೋಜನವಾದೀತು ಎಂಬ ಲೆಕ್ಕಾಚಾರ ನನಗೆ ಕಷ್ಟವಾಗಿ ಕಾಣಿಸಿದ್ದ ವಿಚಾರ. ಒಟ್ಟಿನಿಂದ ನನ್ನ ಮನಸ್ಸು ಈ ಕೆಲವು ಸಮಯದಿಂದ ಕಾಡುತ್ತಿದ್ದ ಒಂದೇ ಒಂದು ಸಂಗತಿಯೆAದರೆ..? ಬದುಕಿನ ಲೆಕ್ಕಾಚಾರದಲ್ಲಿ ನಾನು ಕೊಂಡುದಕ್ಕಿಂತಲೂ ಕೊಟ್ಟದ್ದು ಕಡಿಮೆಯಾಗಬಾರದು ಎಂಬ ಭಾವನೆ. ಹಾಗೇ ಬದುಕುವ ಹೆಣಗಾಟದಲ್ಲಿದ್ದೇನೆ. ಸತ್ತೊಡನೆಯೇ ಬದುಕಿದವರ ಕೆಲಸ ಮುಗಿಯಲಿಲ್ಲವಲ್ಲ , ಮುಂದೆ ಮಾಡಬೇಕಾದದ್ದು ಮಾಡಬೇಡವೇ..? ಅದಕ್ಕಾದರೂ ಒಂದಿಷ್ಟು ಇಡುಗಂಟು ಇಡಬಾರದೆ..? ಇಡಬೇಕು ಅಗತ್ಯಕ್ಕಿಂತ ಹೆಚ್ಚಾದರೆ ಅದು ಕೂಡ ಭ್ರಷ್ಟಾಚಾರ ಅಲ್ಲವೇ..?
ಜಗವೊಂದು ನಾಟಕರಂಗ. ನಾವೆಲ್ಲ ಪಾತ್ರಧಾರಿಗಳು, ಸೂತ್ರಧಾರ ಮೇಲೊಬ್ಬ ಇದ್ದಾನೆ. ಇದ್ದಾನೋ.., ಇಲ್ಲವೋ..? ಅದು ಅವರವರ ನಂಬಿಕೆ ಅಪನಂಬಿಕೆಯಲ್ಲಿದ್ದಾನೆ. ನಾನು ಕಣ್ಮುಚ್ಚಿದರೆ ಸಾಕು ನನ್ನ ಸಾಕುತಾಯಿಯ ವಿಸ್ಮಿತ ರೂಪವು ಕಣ್ಮುಂದೆ ಕಾಣಿಸಿಕೊಂಡು ಬಾ ಮಗು, ಇಲ್ಲಿನ ನಾಟಕವಾಯಿತು, ನಿನ್ನ ಕೆಲಸಗಳನ್ನು ನೀನು ಮಾಡಿದ್ದೀಯ ಎಂದು ಹೇಳುವಂತೆ, ನನ್ನನ್ನು ಕರೆಯುತ್ತಿರುವಂತೆ ಭಾಸವಾಗುತ್ತದೆ, ನಾಟಕದ ವೇಷಧಾರಿ ಯಾದರೂ ಒಂದ ದಿನ ಬಣ್ಣ ಕಳಚಲೇಬೇಕು. ತನ್ನ ರಂಗಪರಿಕರಗಳನ್ನು ಸಿಕ್ಕಿದ್ದಲ್ಲಿ ಎಸೆಯದೆ, ಮುಂದಣ ವೇಷಧಾರಿಗಳಿಗೆ ಅನುಕೂಲವಾಗಿ ಒದಗಿಸಿಕೊಡುವುದು ಅವನ ಕರ್ತವ್ಯವಲ್ಲವೇ..? ನಾವು ಉಳಿಸಿ ಹೋಗುವ ಸಂಪತ್ತು ಅಂತಹ ರಂಗಪರಿಕರವಾಗಿದೆ.
ನಾವು ಈ ಬದುಕಿನ ಜಂಜಾಟದಲ್ಲಿ ಸಿಲುಕಿ ನರಳುವುದು ಏತಕ್ಕೆ..? ಹೆಂಡತಿ, ಮಕ್ಕಳು ಎಂಬ ಮೋಹ ಏತಕ್ಕೆ..? ನಾವು ಪ್ರೀತಿಸುವುದು ಯಾತಕ್ಕಾಗಿ ಎಂದರೆ..? ಪರೋಪಕಾರಕ್ಕಾಗಿ ಅಲ್ಲ. ಔದಾರ್ಯದಿಂದಲ್ಲ. ಬಹುಮಟ್ಟಿಗೆ ನಮಗಾಗಿ, ನಮ್ಮ ಸ್ವಾರ್ಥಕ್ಕಾಗಿ ಎಂಬುದಾಗಿದೆ. ನೈತಿಕತೆ ಅನೈತಿಕತೆ ಪ್ರಶ್ನೆ ಏನೇ ಇರಲಿ..? ದಾಂಪತ್ಯ ಎಂದರೆ..? ಮನಸ್ಸಿಗೆ ಸುಖವಾಗುವುದಕ್ಕೆ.., ಶಾಂತಿ ದೊರೆಯುವುದಕ್ಕೆ ಮನಸ್ಸು ತೆರಬಲ್ಲವಳು ಬೇಕು. ನಮ್ಮೊಡನೆ ಭಾವತಲ್ಲೀನರಾಗುವವರು ಬೇಕು. ಕಟ್ಟಿಕೊಂಡವಳೇ ಆಗ್ಬೇಕೆಂಬ ಕಟ್ಟಳೆ ಏನಿಲ್ಲ..! ಜೀವನವಿಡೀ ರಕ್ತ ಹೀರಿದ ಉಣ್ಣೆಯಂತಾದವಳೊಬ್ಬಳು ; ನಿನಗೇನು ಬೇಕು..? ಎಂದು ಕೇಳಿದರೆ ನೀವಿರಿಸಿದ ವಿಶ್ವಾಸವೇ ಸಾಕು, ನಿಮಗಾಗಿ ನನ್ನ ಮನೆ ಮತ್ತು ಮನದ ಬಾಗಿಲು ಯಾವತ್ತೂ ತೆಗೆದೇ ಇರುತ್ತೆ ಎಂದಿದ್ದಳಿನ್ನೊಬ್ಬಳು, ಅವಳಿಗೆ ನಾನಾಗಲಿಲ್ಲವಲ್ಲ ಎಂಬ ಕೊರಗು ಕೊನೆವರೆಗೂ ಇದ್ದೇ ಇತ್ತು.
ಮಕ್ಕಳ ಸಂಪತ್ತು ದೊಡ್ಡದೆಂದು ಸಭ್ರಮಿಸಿ ಜೀವನವನ್ನು ಮುಡಿಪಾಗಿಟ್ಟ ತಂದೆ-ತಾಯಿಯರನ್ನು ಕಡೆಗಣಿಸುವುದು ಉಚಿತವೇ..? ತಮ್ಮ ಮಕ್ಕಳು ಕೊನೆಗಾಲದಲ್ಲಾಗಲಿ ಎಂದು ಬಯಸುವುದು ತಪ್ಪೇ..? ಬೆಳೆದು ನಿಂತ ಮಕ್ಕಳಿಗೆ ಯೌನದಲ್ಲಿ ಕಾಣಿಸುವುದು ತನಗೆ ತಾನು ಮಾತ್ರ. ಹೆಮ್ಮೆಯಿಂದ ಬೆಳೆದೊಂದ ಮರಕ್ಕೆ ತನ್ನ ಬೇರು ಕಾಣುತ್ತದೆಯೇ..? ಜೇನು ಇರುವ ತನಕ ಮಾತ್ರ ಭ್ರಮರಕ್ಕೆ ಹೂವಿನ ಮೇಲಣ ಆಸೆ ಎಂಬ ಕಟುಸತ್ಯ ತಿಳಿದೇ ಇದೆ. ನಮಗೆ ಜಗತ್ತಿನಲ್ಲಿ ಸುಖ ಬೇಕಾದರೆ ಎಲ್ಲರ ಮಕ್ಕಳೂ ನಮ್ಮ ಮಕ್ಕಳೆಂದು ತಿಳಿದರಾಯಿತು.
ಮಕ್ಕಳು ದೊಡ್ಡವರಾದ ಮೇಲೆ ಅವರು ಮಕ್ಕಳಲ್ಲ, ಆಗ ಅವರ ಜಗತ್ತೇ ಬೇರೆಯಾಗಿರುತ್ತದೆ, ಅವರು ಸ್ವತಂತ್ರರಾಗುತ್ತಾರೆ. ನಾವು ಅಂಥವರನ್ನು ಪ್ರೀತಿಸಬೇಕಾಗಿಲ್ಲ. ನಮ್ಮ ಮರುಕ, ಸಹಾನುಭೂತಿಗಳೇನಿದ್ದರೂ ತಮ್ಮ ಬದುಕು ತಾವು ನಡೆಸಲಾರದ ಎಳೆಗರುಗಳ ವಿಚಾರದಲ್ಲಷ್ಟೇ..! ಅದು ಸಾಲದೇ..? ನಾವು ನಮ್ಮ ಬದುಕಿನಲ್ಲಿ ಹೊಗಳಿಕೆ-ತೆಗಳಿಕೆ ಏನೇ ಬಂದರೂ ಸಮಚಿತ್ತದಿಂದ ನಿಭಾಯಿಸಬೇಕು. ಎಷ್ಟು ಗಟ್ಟಿ ಮನಸ್ಸಿನವನೇ ಇರಲಿ ಹೊಗಳಿಕೆಗೆ ಕಿವಿಗೊಟ್ಟನೆಂದರೆ ಬಲೆಗೆ ಬೀಳುತ್ತಾನೆ, ಬೀಳದಂತೆ ಎಚ್ಚರವಹಿಸಬೇಕೆ.
ಲೋಕಾನುಭವವಿಲ್ಲದೆ ನಾವಾಗಿ ದುಡಿಯದಂತಹ ಹಣವನ್ನು ಇತರರಿಗೆ ಬಾಚಿಕೊಡಲು ನಮಗೆಲ್ಲಿನ ಅಧಿಕಾರವಿದೆ..? ನನ್ನದೆಲ್ಲವನ್ನು ಕಳೆದುಕೊಂಡಮೇಲೆ ಮಾತ್ರ ಜ್ಞಾನ ಬಂದಿತು. ದುಡ್ಡು ಎಂದರೆ..? ಶುದ್ಧ ತುಪ್ಪ, ಅದನ್ನು ತುಸುವೇ ನಾಲಗೆ ಮೇಲಿರಿಸಿಕೊಂಡರೆ ರುಚಿ, ಹೆಚ್ಚಾಗಿ ತಿಂದರೆ ದಾಹ..! ಹಣವಿದ್ದಲ್ಲಿ ಮೋಹವಿದೆ, ದುರಾಶೆಯಿದೆ, ಮತ್ಸರವಿದೆ, ಕಹಿಯೂ ಇದೆ, ಇದರ ದೆಸೆಯಿಂದಲೇ ನನ್ನ ಮಡದಿ, ಮಕ್ಕಳು ಎಲ್ಲರೂ ವೈರಿಗಳಾದರು, ನಾನು ಲೋಭಿಯಾದದ್ದು ನಿಜ. ಕೊಡುಗೈ ದಾನಿಯಾಗಿದ್ದವ – ಲೋಭಿಯಾದೆ ಲೋಕದ ದೃಷ್ಟಿಯಲ್ಲಿ. ಈ ಸಮಾಜದಲ್ಲಿ ನೀವು ಹೇಗೇ ಬದುಕಿದರೂ ಒಂದು ಮಾತು ಬಂದೇ ಬರುತ್ತದೆ. ಕಡೆ ಪಕ್ಷ ಒಂದು ನಾಲ್ಕು ಜನರಿಗೆ ಬೇಕಾಗಿರಬೇಕು, ಆಗಲೇ ಬದುಕಿಗೂ ಬೆಲೆ.
ಸಾವೇ ಸುಖ ಎಂದು ನೆನೆದೆ. ಸಾವೆಂದರೆ..? ನಮ್ಮ ಜೀವನ ಯಾತ್ರೆ ಮುಗಿಸಿ ಹೊರಡಲು ಆ ದೇವರು ನೀಡಿದ ಪ್ರೀತಿಯ ಆಹ್ವಾನ ಪತ್ರಿಕೆ (ಡೆತ್ ಈಸ್ ಬೆಸ್ಟ್ ಇನ್ವೆಟೇಶನ್ ಫಾರ್ ಅವರ್ ಲೈಫ್, ಗಿವನ್ ಬೈ ಗಾಡ್..!). ನನ್ನ ಮಗುವನ್ನು ದೇವರು ಕರೆದುಕೊಂಡ ತನ್ನ ಹತ್ತಿರಕ್ಕೆ, ಅವನಿಗೆ ಇವನು ಬೇಕೆನಿಸಿತು, ಮುದುಕಿಯಾದ ನಾನು, ನಾನು ಬರುತ್ತೇನೆ ಎಂದು ಅವನನ್ನು ಬೇಡಿದರೆ ತಡೆ, ನಿಲ್ಲು..! ಕರೆದಾಗ ಬಾ ಎನ್ನುತ್ತಾನೆ. ಅವನು ಕರೆಯಲಿಲ್ಲವಾದರೆ ನಾವು ದುಃಖಿಸಬೇಕು, ಕರೆದುದ್ದಕ್ಕೆ ಅಳುವುದಲ್ಲ. ನಮ್ಮ ದೇಹವಿರಲಿ ಹೋಗಲಿ ನೆನಪು ಸದಾ ಉಳಿಯುತ್ತದೆ.
ಮರೆವು ಈ ಬಾಳಿಗೆ ದೇವರು ನೀಡಿದ ವರ. ವಿಸ್ಮೃತಿಯ ಬಾಳು ತೀರ ಸುಖ. ಮತ್ತೆ ಮತ್ತೆ ಕಾಡುವ ಕಹಿ ನೆನಪುಗಳು ಮರೆಯಲಿಕ್ಕೆ, ಕಹಿಯನ್ನು ಮರೆತರೆ ಬಾಳು ಸಹನೀಯವಾಗುತ್ತದೆ. ನಾನಿರುವುದು ಈಗ, ಸತ್ತ ಮೇಲಲ್ಲ. ಹುಟ್ಟುವ ಮೊದಲಿರಲಿಲ್ಲ, ಸತ್ತ ಮೇಲೆ ಉಳಿಯುವುದು ನನ್ನ ನಡವಳಿಕೆಯ ನೆನಪು ಮಾತ್ರ ನಾನಲ್ಲ. ಇಲ್ಲದ ಆ ನನಗಾಗಿ ನಡೆಸುವ ಶ್ರಾದ್ಧಾದಿಕ್ರಮಗಳು ನನಗೆ ಸಮ್ಮತವಲ್ಲ. ನನಗೆ ಸಲ್ಲಿಸುವ ಶ್ರದ್ಧೆ, ನನ್ನಲ್ಲಿ ಕಂಡ ಯಾವುದೇ ಒಳಿತು ಗುಣ ಇದ್ದರೆ, ಅದನ್ನು ತಮ್ಮ ಬಾಳಿನಲ್ಲಿ ತರುವುದು. ಅಂತಹ ಶ್ರಾದ್ಧಾವನ್ನು ಯಾರು ಯಾರಿಗೂ ಮಾಡಬಹುದು. ಅದು ಮಾನವತೆಗೆ ಮಾಡುವ ಶ್ರಾದ್ಧಾ, ವ್ಯಕ್ತಿಗಲ್ಲ. ಮಾನವಕುಲ ಚಿರಂತನ, ನಾವು ನಾಲ್ಕು ದಿನಗಳ ಒಂದು ದೃಶ್ಯವಷ್ಟೇ..! ತಾಯಿಯಾಗಲಿ ತಂದೆಯೇ ಆಗಲಿ, ಪ್ರಾಯ ಬಂದಮೇಲೆ ನಾವು ಹಿರಿಯರದ್ದನ್ನು ಆಪೇಕ್ಷಿಸಬಾರದು. ನಮ್ಮ ಕಾಲಿನ ಮೇಲೆ ನಾವು ನಿಂತುಕೊಳ್ಳಬೇಕು. ಹೆಸರಿರುವ ಮನುಷ್ಯ ಸತ್ತಮೇಲೆ, ಈ ಹೆಸರು ಬರಿಯ ಶಬ್ದ, ಅದಕ್ಕೆ ಕಾರಣವಾದ ಶೀಲದ ಕಲ್ಪನೆ ಯಾವಾತನಿಗೂ ಬರಿಯೊಂದು ಹೆಸರಿನಿಂದ ಬರುವುದಿಲ್ಲ. ಇದು ಬದುಕಿನ ಪಾಠ.
ಅಳಿದಮೇಲೆ ಕೃತಿಯು ಪ್ರತಿ ಓದಿನಲ್ಲೂ ಅಬೆರಗನ್ನುಂಟುಮಾಡುವುದರೂಂದಿಗೆ ಹೊಸಹೊಸ ಒಳಹುಗಳು ಸುಳಿಯುವುದರಲ್ಲಿ ಎರಡು ಮಾತಿಲ್ಲ.
-ಅಳಿದಮೇಲೆ ಕಾದಂಬರಿ – ಡಾ.ಕೋಟ ಶಿವರಾಂ ಕಾರಂತ, ಅರ್ಪಣೆ : ನನ್ನ ಪರಮ ಮಿತ್ರರಾಗಿದ್ದ ದಿವಂಗತ ಬಿ ಎಸ್ ತುಂಗ ಇವರಿಗೆ, ಪಥ್ರಮ ಮುದ್ರಣ – ೧೯೬೦, ಇದುವರೆಗೂ ಒಟ್ಟು ಹತ್ತೊಂಬತ್ತು ಮುದ್ರಣಗಳನ್ನು ಕಂಡಿದೆ.
———————–
–ಡಾ.ಯಲ್ಲಮ್ಮ.ಕೆ