ಸುರೇಶ್ ಬಾಬು ಜಂಬಲದಿನ್ನಿ ಅವರ ಗಜಲ್ ಸಂಕಲನ “ದಾರಿ ತೋರಿದ ಕಂದೀಲು” ಅವಲೋಕನ,ಕವಿತಾ ಹಿರೇಮಠ ಕವಿತಾಳ

“ಬದುಕಿದ್ದ ಅವಧಿ ಮುಖ್ಯವಾಗಬಾರದು
ಬದುಕಿದ್ದ ರೀತಿ ಮುಖ್ಯವಾಗಬೇಕು”
— ಅಬ್ರಹಾಂ ಲಿಂಕನ್

ಎಷ್ಟು ಕಾಲ ಜೀವಿಸಿದೀವಿ ಎನ್ನುವುದಕ್ಕಿಂತ ಹೇಗೆ ಜೀವಿಸಿದೀವಿ ಎನ್ನುವುದು ಬಹಳ ಮುಖ್ಯ.
ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಇರುವಿಕೆಯ ಕುರುಹನ್ನು ಬಿಟ್ಟು ಹೋಗಲು ಬಯಸುತ್ತಾನೆ.
ಓಡುತ್ತಿರುವ ಕಾಲಚಕ್ರದ ಬೆನ್ನು ಹತ್ತಿದ ಮನುಷ್ಯ ಇಹಲೋಕದ ಎಲ್ಲಾ ಸುಖ, ಸಂಪತ್ತುಗಳನ್ನು ಅನುಭವಿಸಲು ಹಾತೊರೆದು ಸರಿ ತಪ್ಪುಗಳ ಅರಿವು (ತಿಳಿವಳಿಕೆ) ಇಲ್ಲದೆ, ಕೇವಲ ತನ್ನ ಸುಖ, ಸಂತೋಷವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತಾನು ಮಾಡುವುದೇ ಸರಿ ಎಂದು ತಿಳಿದು  ಬರೀ ಅನಾಚಾರ, ಭ್ರಷ್ಟಾಚಾರ, ಕೋಮು ಗಲಭೆಗಳ ಸೃಷ್ಟಿ ಮಾಡಿ ಮನುಷ್ಯ ನಿಜವಾದ ಮಾನವೀಯತೆ ಮರೆತು ಸಮಾಜದ ಶಾಂತಿ, ನೆಮ್ಮದಿ ಹಾಳು ಮಾಡಿ ದುರಹಂಕಾರ, ದುರ್ಬುದ್ಧಿಗಳಿಂದ ಮೆರೆಯುತ್ತಿದ್ದಾನೆ.
ನಮ್ಮಿಂದ ಸಮಾಜಕ್ಕೆ ಏನು ಕೊಡುಗೆ ನೀಡಲು ಸಾಧ್ಯವಾಗದ್ದಿದ್ದರು ಪರವಾಗಿಲ್ಲ ನಮ್ಮಿಂದ ಸಮಾಜಕ್ಕೆ ಹಾನಿ ಆಗದಿದ್ದರೆ ಸಾಕು.

ಗಜಲ್ ಪಿತಾಮಹರು ನಮ್ಮ ರಾಯಚೂರಿನ ಶಾಂತರಸರು ಎಂಬುದು ನಮಗೆ ಹೆಮ್ಮೆಯ ಗರ್ವದ ಗರಿ. ಇತ್ತೀಚೆಗೆ ಗಜಲ್ ಸಾಹಿತ್ಯ ಎಲ್ಲರನ್ನೂ ಕೈಬೀಸಿ ಕರೆದು ಅಪ್ಪಿ ಒಪ್ಪಿಕೊಳ್ಳುತ್ತಿದೆ. ಗಜಲ್ ಬರೀ ಪ್ರೀತಿ,ಪ್ರೇಮ ನೋವು, ನಲಿವುಗಳಿಗೆ ಮಾತ್ರ ಅಲ್ಲದೆ ಸಮಾಜದ ಅಂಕು ಡೊಂಕುಗಳನ್ನು ಪ್ರಶ್ನೆ ಮಾಡುತ್ತಿದೆ.

ಸುರೇಶ್ ಬಾಬು ಜಂಬಲದಿನ್ನಿ ಅವರ ಗಜಲ್ ಗಳು ಸಮಾಜದ ಮೇಲೆ ಬೆಳಕು ಚೆಲ್ಲುತ್ತವೆ. ವೃತ್ತಿಯಲ್ಲಿ ಆರಕ್ಷಕರಾದ ಇವರು ಲಾಠಿ ಹಿಡಿದ ಕೈಯಲ್ಲಿ ಲೇಖನಿ ಹಿಡಿದು ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಾ ತಮ್ಮ ಜೀವನದ
 ಸಾರ್ಥಕತೆಯನ್ನು ಮೆರೆದಿದ್ದಾರೆ.
ಸುರೇಶ್ ಜಂಬಲದಿನ್ನಿ ಅವರ ‘ದಾರಿ ತೋರಿದ ಕಂದೀಲು’ ಎಂಬ ಗಜಲ್ ಕೃತಿಯಲ್ಲಿ ಒಟ್ಟು 60 ಗಜಲ್ ಗಳಿವೆ.
ಇವರ ಗಜಲ್ ಗಳಲ್ಲಿ ಐದು, ಆರು ಮತ್ತು ಏಳು ಶೇರ್ ಗಳನ್ನು ಕಾಣಬಹುದು.

ನನಗೆ ಓದಿದ ತಕ್ಷಣ ತುಂಬಾ ಇಷ್ಟವಾಗಿದ್ದು, ಮತ್ತೆ ಮತ್ತೆ ಓದಿಸಿಕೊಂಡ ಗಜಲ್ ಎಂದರೆ ಅದು ಈ ಕೆಳಗಿನಂತಿದೆ.

 ಗಜಲ್43.

ನೋವು ನುಂಗಿ ನಗುವಿನ ಹೂವು ಪೋಣಿಸ್ಯಾಳ ನನ್ನವ್ವ
ಕಣ್ಣೀರಿನ ಕಣ್ಣಾಗ ಹಾಲಿನ ಮಾತು ಸುರುದಾಳ ನನ್ನವ್ವ

ರಟ್ಯಾಗ ಸ್ವಕ್ಕಾದಯಂದು ಸಿಟ್ಟಿಲೆ ಜಿಗಿಬ್ಯಾಡ ಕಂದ
ಮೀಸೆ ತಿರುವಿದವರು ಮಣ್ಣಾಗ್ಯಾರ ನುಡಿದಾಳ ನನ್ನವ್ವ
ತಾಯಿಯ ಪಾದದಡಿ ಸ್ವರ್ಗವಿದೆ ಎಂದು ಸಾಬೀತು ಪಡಿಸಿದ


ಈ ಗಜಲ್ ನ ಪ್ರತಿಯೊಂದು ಶೇರ್ ಹೃದಯ ತಟ್ಟಿ ಮನಸು ವಾವ್ ಎನಿಸಿತು. ಇದು ಅವ್ವನ ಕುರಿತು ಬರೆದ ಗಜಲ್ ಪ್ರತಿಯೊಬ್ಬ ತಾಯಿ ತನ್ನ ಮಗನಿಗೆ ಹೇಳಿದ ಸರಳ ಸುಂದರ ಮತ್ತು ಅರ್ಥಪೂರ್ಣ ಮಾತುಗಳನ್ನು ಕಾಣಬಹುದು ಇದರಿಂದ ಇವರ ತಾಯಿಯ ದೊಡ್ಡತನ ಎದ್ದು ಕಾಣುತ್ತದೆ.
ತಾಯಿಗೆ ಎಷ್ಟೇ ನೋವಿದ್ದರೂ ಮಕ್ಕಳಿಗೆ ಅದರ ಬಿಸಿ ಗೊತ್ತಾಗದಂತೆ ಇರುತ್ತಾಳೆ.
ಈ ಗಜಲ್ ನಲ್ಲಿ ಕವಿ ತಮ್ಮ ತಾಯಿ ತಮಗೆ ಹೇಳಿದ ಬುದ್ಧಿ ಮಾತುಗಳನ್ನು ನೆನೆದಿದ್ದಾರೆ.

ಗಜಲ್ 24.

ಬಲಗೊಂಡ ಗೋಡೆಗಳ ಮುಂದೆ ಮೌಲ್ಯಗಳು ಮುರಿದು ಬಿದ್ದವು
ವಿಷದ ಧರ್ಮಗಳ ಮುಂದೆ ವಿಶ್ವ ಸಂದೇಶಗಳು ಕುಸಿದು ಬಿದ್ದವು

ಹಗಲು ದರೋಡೆಗೆ ಕಾಯ್ದೆ ಕಾನೂನುಗಳು ಮೌನವಾದವು
ಸುಳ್ಳಿನ ಮುಂದೆ ಸೂರ್ಯನ ಚಿಂತನೆಗಳು ಮುರಿದು ಬಿದ್ದವು

ಈ ಗಜಲ್ ಐದು ಶೇರುಗಳನ್ನು ಒಳಗೊಂಡಿದೆ ಇದರ ಪ್ರತಿಯೊಂದು ಮಿಶ್ರಾ ಕೂಡ ಮನಸು ಭಾರವಾಗಿಸಿ ಸಮಾಜದಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ ರಕ್ತ ಕುದಿಯುತ್ತದೆ, ಆದರೂ ಮೌನವಾಗಿದ್ದೇವೆ.
ದ್ವೇಷ, ಅಸೂಯೆ, ದರ್ಪ ದೌರ್ಜನ್ಯ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ವ್ಯವಹಾರ ಮನಸುಗಳನ್ನು ಒಡೆಯುತ್ತವೆ.
ವಿಶ್ವ ಸಂದೇಶಗಳು ಮರೆಯಾಗಿವೆ ಮತ್ತೆ ಪುಟಿದು ಮುಂದಿನ ಗಜಲ್ನಲಿ ಹೀಗೆ ಹೇಳುತ್ತಾರೆ.

ಗಜಲ್ 28.

ತುಕ್ಕು ಹಿಡಿದ ಮಾತುಗಳನ್ನು ಹೇಗೆ ನಂಬಲಿ
ಕೇಡು ತುಂಬಿದ ಮನಸ್ಸುಗಳನ್ನು ಹೇಗೆ ನಂಬಲಿ

ಸಾವು ಕಟ್ಟುವ ಅಮೃತವನ್ನು ಹೇಗೆ ನಂಬಲಿ
ಮೂರ್ತ ಇಡುವ ಮಿತ್ರರನ್ನು ಹೇಗೆ ನಂಬಲಿ

ಮನುಷ್ಯ ನಂಬಿಕೆಯನ್ನು ಕಳೆದುಕೊಂಡು ಸ್ವಾರ್ಥದ ಬದುಕು ನಡೆಸುತ್ತಿರುವಾಗ ನಂಬಿಕೆ ಎಂಬ ಪದಕ್ಕೆ ಅರ್ಥ ಹುಡುಕುವ ಸ್ಥಿತಿ ಬಂದಿದೆ. ಯಾರು ಯಾರನ್ನು ನಂಬಲು ಆಗುತ್ತಿಲ್ಲ ಕಾರಣ ಎಲ್ಲರೂ ನಂಬಿಕೆ ದ್ರೋಹಿಗಳಾಗಿ ನಿಂತಿದ್ದಾರೆ. ಸಾವಿಗೆ ಮುಹೂರ್ತ ಇಡುತ್ತಿರುವ ಸ್ನೇಹವನ್ನು ಹೇಗೆ ನಂಬಲಿ ಮತ್ತು ಮಾತಿನಲಿ ವಿಷವನ್ನು ಕಾರುವವರನ್ನು ಹೇಗೆ ನಂಬಲಿ ಎಂದು ಇತ್ತೀಚಿನ ದಿನಮಾನಗಳಲ್ಲಿ ನಂಬಿ ಪೆಟ್ಟು ತಿಂದ ಮನುಷ್ಯನ ಮನಸ್ಥಿತಿಯನ್ನು  ಈ ಗಜಲ್ ಪ್ರತಿಯೊಂದು ಶೇರ್ ನಲ್ಲಿ ಕಾಣಬಹುದಾಗಿದೆ.

ಗಜಲ್ 49.

ಹಸಿದವರಿಗೆ ಅಂಬಲಿ ನೀಡಿದ ರೈತರು ದೇವರಾಗಲಿಲ್ಲ
ಉಪವಾಸದಿ ಹೊಟ್ಟೆ ಬಟ್ಟೆ ಕಟ್ಟಿದವರು ದೇವರಾಗಲಿಲ್ಲ

ರೈತರ ಹೆಸರಲಿ ಅಧಿಕಾರ ಹಿಡಿದವರು ಬೆಲೆ ಹೆಚ್ಚಿಸಿದರು
ನ್ಯಾಯ ನಿಷ್ಠೆಯಿಂದ ಬಾಳಿದ ಶ್ರಮಿಕರು ದೇವರಾಗಲಿಲ್ಲ

ಈ ಗಜಲ್‍ನಲ್ಲಿ ದೇಶದ ಬೆನ್ನೆಲುಬು ರೈತನ ನೋವಿನ ಸ್ಥಿತಿ ಗತಿ ಕುರಿತು ಬರೆದಿದ್ದಾರೆ. ಇಡೀ ವಿಶ್ವಕ್ಕೆ ಅನ್ನ ನೀಡುವ ರೈತರಿಗೆ ಆದ ಅನ್ಯಾಯ, ಶ್ರಮಕ್ಕೆ ಬೆಲೆ ಇಲ್ಲದ ಕುರಿತು ಪ್ರತಿ ಮಿಶ್ರಾ ಹೇಳುತ್ತದೆ. ವರ್ಷ ಪೂರ್ತಿ ದುಡಿದರೂ ತೀರದ ಬಡತನ ರೈತರ  ಪಾಲಿಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ರೈತರ ಮೇಲೆ ಕರುಣೆ ತೋರಿದಂತೆ ನಟಿಸಿ ಅಧಿಕಾರ ಸ್ವೀಕರಿಸುವಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಅವರಿಗೆ ಇಲ್ಲಸಲ್ಲದ ಸುಳ್ಳು ಭರವಸೆಗಳನ್ನು ನೀಡುತ್ತಾರೆ ನಂತರ ರೈತರು ಅವರ ನೆನಪಿಗೆ ಅಲ್ಲ ಕಣ್ಣಿಗೂ ಕೂಡ ಕಾಣಿಸಲ್ಲ.
ರೈತಾಪಿ ಜನರ ಜೀವನ ಸುಧಾರಣೆ ಆಗಲ್ಲ ಅವರ ನೋವುಗಳು ಯಾರ ಗಮನಕ್ಕೂ ಬರುವುದಿಲ್ಲ. ಇದು ನಮ್ಮ ದೇಶದ ರೈತರ ದುಸ್ಥಿತಿ.

ಗಜಲ್ 23.

ಕೈಮುಗಿದು ಮತ ಬೇಡಿದವರ ಕೈಯಲ್ಲಿ ಬಂದೂಕೂಗಳ ಸದ್ದು
ಶಿರಬಾಗಿ ಸೋಲೊಪ್ಪಿಕೊಂಡವರ ಎದೆಯಲಿ ಅತಂತ್ರಗಳ ಸದ್ದು

ಅವರು ದೇವಮಾನವರು ಕಾಲುಚಾಚಿ ಕಾಮಕ್ಕೆ ಕರೆದರು
ಹೇಸಿಗೆಯ ಹಾಸಿಗೆಯಲ್ಲಿ ಬಾಡಿದ ಹೂಗಳ ಸದ್ದು

ಈ ಗಜಲ್ ನ ಪ್ರತಿಯೊಂದು ಶೇರ್ ಗಳು ಕೊಳಕು ಸಮಾಜದ ನಾಲಾಯಕ್ ನಾಯಕರ ನಾಚಿಕೆಗೇಡಿತನವನ್ನು ಕೂಗಿ ಕೂಗಿ ಹೇಳುತ್ತವೆ.
ನಿಜಕ್ಕೂ ಇಂತಹ ಬರೆಹಗಳ ಅವಶ್ಯಕತೆ ಇದೆ. ಕವಿ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ವಿರುದ್ಧ ಬಿರುಸಿನ ಚಾಟಿ ಬೀಸಿದ್ದಾರೆ. ನಾಜೂಕಾಗಿ ಕೈ ಮುಗಿದು ಆಶ್ವಾಸನೆಗಳನ್ನು ನೀಡಿ ಮುಗ್ಧ ಜನರಿಗೆ ಸೀರೆ, ಕುಡಿತದ ಆಸೆ, ಆಮಿಷ ತೋರಿಸಿ ಅಧಿಕಾರ ಹಿಡಿದವರು ಮಾನವೀಯ ಮೌಲ್ಯಗಳನ್ನು ಮರೆತು ಹಗಲು ದರೋಡೆಕೋರರಾಗಿ, ಭ್ರಷ್ಟಾಚಾರಿಗಳಾಗಿ ಧರ್ಮಗಳ ಹೆಸರಿನಲ್ಲಿ ಕೋಮು ಗಲಭೆಗಳ ಸೃಷ್ಟಿ ಮಾಡಿ ದೇಶವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ. ಸಮಾಜದಲ್ಲಿ ಹೆಣ್ಣಿಗೆ ಗೌರವ ಆಗಲಿ, ಸುರಕ್ಷತೆ ಆಗಲಿ ಇಲ್ಲ , ಅತ್ಯಾಚಾರ ಅನಾಚಾರ ಮಾಡುವುದರ ಜೊತೆಗೆ ಹೇಯಕೃತ್ಯ ಎಸಗುತ್ತಿದ್ದಾರೆ .
ಇಷ್ಟು ಈ ಗಜಲ್ ನಲ್ಲಿ ಒಳಗೊಂಡ ನೋವುಗಳು.

ಗಜಲ್ 52

ಹೆತ್ತವರು ಏನು ಮಾಡಿದರೆಂದು ಕೇಳದಿರು ತಮ್ಮ
ಹಡೆದವರು ಏನು ಕೊಟ್ಟರೆಂದು ಹೇಳದಿರು ತಮ್ಮ

ಚಾಕು ಇರಿದ ಅನುಭವ ಹೆರಿಗೆಯಲ್ಲಿ ಕಾಡಿತು
ತಾಯಿಯ ನಿಂದಿಸಿ ಕರುಳ ನೋಯಿಸದಿರು ತಮ್ಮ

ಗಜಲ್ 53.

ಹೆತ್ತವರಿಲ್ಲದ ಮನೆಯಲ್ಲಿ ತಾಯಿಯಾದಳು ನನ್ನ ಅಕ್ಕ
ಗುರು ಇಲ್ಲದ ಶಾಲೆಯಲ್ಲಿ ಗುರಿ ತೋರಿದಳು ನನ್ನ ಅಕ್ಕ

ನನಗೆ ಕಷ್ಟ ಬಂದರೆ ಕೊರಗುವಳು ಅದೇಕೋ
ಸಾವಿರ ನೋವ ನಿವಾರಿಸಿ ನಲಿಯುವಳು ನನ್ನ ಅಕ್ಕ

ಈ ಮೇಲಿನ ಎರಡೂ ಗಜಲ್ ಗಳು ಹೆತ್ತವರ ಮೌಲ್ಯವನ್ನು ತಿಳಿಸುತ್ತವೆ
ಇತ್ತೀಚಿನ ದಿನಗಳಲ್ಲಿ ಅಪ್ಪ ಅಮ್ಮನ ಬೆಲೆ ಮಕ್ಕಳಿಗೆ ತಿಳಿಯುತ್ತಿಲ್ಲ. ಅವರು  ಏನು ಮಾಡಿದರು ?  ಎಂದು ಉದಾಸೀನ ಮಾತುಗಳನ್ನಾಡಿ ಆಸ್ತಿ ಪಾಸ್ತಿಯ ಹಿಂದೆ ಓಡುತ್ತಾ ಅಪ್ಪ ಅಮ್ಮನ ಪ್ರೀತಿ ಮಮತೆ ಅವರ ಕಷ್ಟಗಳನ್ನು ಮರೆತು ಬಿಡುತ್ತಾರೆ. ಭೂಮಿಗೆ ತಂದವರ ಋಣ ತೀರಿಸಲು ಸಾಧ್ಯವಿಲ್ಲ ಎಂಬುದನ್ನು  ಮರೆತು ಸ್ವಾರ್ಥದ ಬದುಕು ಬಾಳುತ್ತಿದ್ದಾರೆ. ಹೆತ್ತವರಿಗೆ ‘ಏನು ಮಾಡಿದಿರಿ?’ ಎಂದು ಕೇಳದಿರಿ ಎನ್ನುವ ಮೂಲಕ ಹೆತ್ತವರ ಮೌಲ್ಯವನ್ನು ತಿಳಿಸಿದ್ದಾರೆ
 ಮತ್ತೊಂದು ಗಜಲ್ ನಲ್ಲಿ ಕವಿ ತನ್ನ ತಾಯಿಯಾದ, ಗುರುವಾದ ಅಕ್ಕನ ಅಕ್ಕರೆ, ಪ್ರೀತಿಯನ್ನು ನೆನೆದಿದ್ದಾರೆ.

ಗಜಲ್ 12.

“ಬುದ್ಧಭೂಮಿಯಲ್ಲಿ ಹಿಂಸೆಯಾಗಿ ನೋಡಲು ಹೋರಟಿದ್ದಾರೆ
ಕ್ರಾಂತಿಯ ನೆಲದಲ್ಲಿ ಜ್ವಾಲೆ ಹರಡಲು ಹೋರಟಿದ್ದಾರೆ “

“ಅಂಗುಲಿಮಾಲ ಬುದ್ಧನ ಸ್ಪರ್ಶಕ್ಕೆ ಮನುಷ್ಯನಾದ
ಬುದ್ಧನ ಬೋಧನೆಗೆ ಮಣ್ಣು ಎರಚಲು ಹೊರಟಿದ್ದಾರೆ “

ಗಜಲ್ 11.

“ಸಜ್ಜನರ ಎದೆಯಲ್ಲಿ ಕೇಡುಗಲ್ಲು ಕೆತ್ತಲು ಟೊಂಕಕಟ್ಟಿ ನಿಂತಂತಿದೆ
ದುರ್ಜನರ ಕೋಟೆಯಲ್ಲಿ ಅನಾಚಾರಕ್ಕಾಗಿ ಮಿಡಿಯುತಿಯರು ಇಲ್ಲಿ”

“ಉಡಿಯಲ್ಲಿ ಬೆಂಕಿಕೆಂಡ ಕಟ್ಟಿಕೊಂಡು ಪರರ ತಣಿಸಲು ಹೊರಟಿದೆ
ಜಾತಿ ಮತಗಳ ವಿಷ ಸುರಿದು ಪರರ ಸಾವು ಬಯಸುತಿಹರು ಇಲ್ಲಿ “

ಮೇಲಿನ ಎರಡೂ ಗಜಲ್ ಗಳು ಕೂಡ ಸಮಾಜದ ದುಸ್ಥಿತಿ, ದೌರ್ಜನ್ಯ, ದುರಾಚಾರ, ದುರಾಸೆ ದುರಾಡಳಿತ ಇಂತಹವುಗಳ ಕುರಿತು ಕವಿ ತಮ್ಮ ಮನದ ನೋವುಗಳಿಗೆ ಅಕ್ಷರ ರೂಪ ಕೊಟ್ಟು ಪ್ರಶ್ನಿಸಿದ್ದಾರೆ. ಮನದ ಗೊಂದಲ ವ್ಯಕ್ತಪಡಿಸಿದ್ದಾರೆ.

ಹೀಗೆ ಸುರೇಶ್ ಜಂಬಲದಿನ್ನಿ ಅವರು ತಮ್ಮ ಪ್ರತಿಯೊಂದು ಗಜಲ್ ನಲ್ಲಿ ಪ್ರಾಮಾಣಿಕವಾಗಿ ಸಮಾಜದ ಕಳೆ ಕೀಳುವ, ಪ್ರಯತ್ನ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಇವರಿಂದ ಇನ್ನಷ್ಟು ಮತ್ತಷ್ಟು ಬರಹಗಳು ಬರಲಿ ಎಂದು ಆಶಿಸುತ್ತೇನೆ.


Leave a Reply

Back To Top