ಕಾವ್ಯ ಸಂಗಾತಿ
ಜಯಂತಿ ಸುನೀಲ್
ಗಜಲ್
ನನ್ನ ಕಣ್ಣ ಕನ್ನಡಿಯಲಿ ಮೂಡುವವನು ಅವನೆ ಸಖಿ
ನನ್ನ ಕೖಯ್ಯ ಕೊಳಲಿನಲಿ ರಾಗವಾಗುವವನು ಅವನೆ ಸಖಿ..!!
ಕತ್ತಲೆಯ ಕಾಯ್ವ ಚುಕ್ಕಿಗಳನು ಮುಡಿಗಿರಿಸುವವನು ಅವನೆ ಸಖಿ
ಹೊಸ ಕನಸಿನ ಕೂಸಾಗಿ ನನ್ನೊಳು ಕದಡುವವನು ಅವನೆ ಸಖಿ..!!
ಕಣ್ಣಲಿ ಸಾವಿರ ದೀಪ ಹೊತ್ತಿಸಿ ಬೆಳದಿಂಗಳನು ಕೖಗಿರಿಸುವವನು ಅವನೆ ಸಖಿ
ಉನ್ಮಾದವನೇ ಪ್ರೀತಿಗೆ ಬೆರೆಸಿ ನನ್ನೊಳು ಪದ್ಯವಾಗುವವನು ಅವನೆ ಸಖಿ..!!
ಕೆಡವಿದ ಕಷ್ಟಗಳಲಿ ಕಲ್ಲಿನಲೂ ಚಿಗುರುವುದ ಕಲಿಸುವವನು ಅವನೆ ಸಖಿ
ನೆತ್ತರಿನ ಒಂದು ಕಲೆಯೂ ಕೖಗಂಟದಂತೆ ಕಾಯುತ್ತಿರುವವನು ಅವನೆ ಸಖಿ..!!
ಮೆದುವೆದೆಯ ನೋವಿಗೆ ಸದಾ ಮುಲಾಮಾಗುವವನು ಅವನೆ ಸಖಿ
ಮನದ ಗಾಯಗಳ ಹೊಲಿಯುವಲ್ಲಿ ದಾರವಾಗುವವನು ಅವನೆ ಸಖಿ..!!
ಅರಳಿದ ಮಲ್ಲಿಗೆಯ ಘಮವನು ಅಂಗಳದಲ್ಲಿಟ್ಟು ನೀರೆರೆಯುವವನು ಅವನೆ ಸಖಿ
ಹೆರಳನು ಬಾಚುತಾ, ಚಾಚಿದ ಕಾಲಿಗೆ ಗಂಧವನು ತೀಡುವವನು ಅವನೆ ಸಖಿ..!!
ಅಂಗೖರೇಖೆಗೆ ಜೊತೆಯಾಗಿ ನನ್ಹೆಸರಿನಲಿ ಬೆರೆಯುವವನು ಅವನೆ ಸಖಿ
ಮುಳಗದ ಬಾಳ ನೌಕೆಯಾಗಿ ಜಯದ ದಡ ಮುಟ್ಟಿಸುವವನು ಅವನೆ ಸಖಿ..!!
ಜಯಂತಿ ಸುನಿಲ್
wonderful ಕವಿತೆ