‘ಕಾಡುತಿದೆ ದಕ್ಷೀಣಕ್ಕೂ ಉತ್ತರಕ್ಕೂ ಯಾಕೀಷ್ಟು ಅಂತರ…?’ವಿಶೇಷ ಲೇಖನ ರಮೇಶ ಸಿ ಬನ್ನಿಕೊಪ್ಪ

ಸುತ್ತಲೂ ಸ್ವಚ್ಛವಾದ ಟಾರು ರಸ್ತೆಗಳು. ಟಾರು ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದ ಹುಲುಸಾದ ಬಾಳೆ, ತೆಂಗು,  ಬತ್ತ, ಅಡಿಕೆ…ನಳ ನಳಿಸುವ ಹಚ್ಚಹಸಿರಿನ ಈ ಬೆಳೆಗಳು ಅಭಿವೃದ್ಧಿಯ ಸಂಕೇತದಂತೆ ಕಂಗೊಳಿಸುತ್ತವೆ.  ಜೋಪಡಿ ಇಲ್ಲದ ಮಂಗಳೂರು ಹೆಂಚಿನ ಮನೆಗಳು ಇಲ್ಲವೇ ಪಕ್ಕಾ ಮನೆಗಳ ವಿಶಿಷ್ಟ ನೋಟಗಳು.. ರಸ್ತೆಯ ಅಕ್ಕಪಕ್ಕದಲ್ಲಿ ಸುಂದರವಾದ ವ್ಯಾಪಾರದ ಮಳಿಗೆಗಳು. ಎಲ್ಲಾ ಮಳಿಗೆಗಳು ಅಚ್ಚ ಕನ್ನಡದ ಅಂಗಡಿಯ ಹೆಸರುಳ್ಳ ಬೋರ್ಡುಗಳು. ಜುಳು ಜುಳು ಹರಿಯುವ ಕಾಲುವೆಗಳು..!  ಇದು ಎಲ್ಲಿಯೋ ನೋಡಿದ ದೃಶ್ಯಗಳಲ್ಲ. ಇದೇ ಕನ್ನಡ ನೆಲದ ದಕ್ಷಿಣ ಭಾಗದ ಮಂಡ್ಯ, ಮೈಸೂರು, ತುಮಕೂರು… ಮುಂತಾದ ಪ್ರಮುಖ ಜಿಲ್ಲೆಗಳ ಒಡಲೊಳಗೆ ಕಂಡುಕೊಂಡ ದೃಶ್ಯಗಳಿವು. ನಾನು  ಬಂದಾಗಲ್ಲೆಲ್ಲಾ ಮೈಸೂರಿನ ಸುತ್ತಮುತ್ತ  ಹೋಗುವಾಗ..
ನಾನು ಏನೋ ನೆನಪಾಗಿ ಕೆಲವು ಕಾಲ ಮನಸ್ಸು ತಲ್ಲಣಗೊಳಿಸಿಬಿಡುತ್ತದೆ.

ನಮ್ಮೂರು ಉತ್ತರ ಕರ್ನಾಟಕದ ಬಿಸಿಲ ನಾಡು ಕೊಪ್ಪಳ.  ಉತ್ತರ ಕರ್ನಾಟಕವೆಂದರೆ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗುತ್ತದೆ. ತುಂಗಭದ್ರೆಯ ಒಡಲನ್ನು ಬಿಟ್ಟರೆ, ಕೃಷ್ಣಾ, ಬೀಮ, ಘಟಪ್ರಭಾ, ಮಲಪ್ರಭಾ ಮಾತ್ರ ನಮ್ಮ ದಾಹವನ್ನು ತಣಿಸಬಲ್ಲರು… ಆದರೂ ನಮ್ಮ ಪ್ರದೇಶ ಇನ್ನು ಬರಗಾಲಕ್ಕೆ ತುತ್ತಾಗುತ್ತಲೇ ಇವೆ.  ಹೇಳಿಕೊಳ್ಳುವಷ್ಟು ಅಭಿವೃದ್ಧಿಯಾಗಿಲ್ಲವೆನ್ನುವ ನೋವು. ಕೂಲಿಯನ್ನು ಅರಿಸಿಕೊಂಡು ವಲಸೆ ಹೋಗುವುದು ಇನ್ನು ತಪ್ಪಿಲ್ಲ ಎನ್ನುಬಹುದು.

 ದುರಂತವೆಂದರೆ,  ಅಸ್ತವ್ಯಸ್ತಗೊಂಡ ರಸ್ತೆಗಳು, ಬಿಸಿಲಿನ ಬೇಗೆಗೆ ಬೆಂದು ಹೋದ ಬೆಳೆಗಳು, ಎಂದೋ ಬರುವ ಮಳೆರಾಯನಿಗಾಗಿ ನಿರೀಕ್ಷಿಸಿ ಕಾದು ಕುಳಿತು ಬಿತ್ತುವ ಬೀಜಗಳು ಮಳೆರಾಯನಿಲ್ಲದೆ ಒಣಗಿ ಹೋಗುತ್ತವೆ. ಕಮರಿಹೋಗುವ ಬೆಳೆಗಳು.  ಇಲ್ಲವೇ ದೋ ದೋ ಎಂದು ಎಡೆಬಿಡದೆ ಸುರಿದು ಬಿತ್ತಿದ ಬೆಳೆಗಳನ್ನು ಚಿಗುರದಂತೆ ಕಮರಿಸುವ ಪ್ರಕೃತಿಯ ಕಾರಸ್ಥಾನಕ್ಕೆ ಬೆಳೆಗಳ ನಾಶ. ಅನಾವೃಷ್ಠಿ, ಅತಿವೃಷ್ಟಿ ಒಂದೇ ಎರಡೇ ಸಮಸ್ಯೆಗಳು ಸಾವಿರ ಸಾವಿರ… ಇವೆಲ್ಲದರ ನಡುವೆ ನಮ್ಮ ರೈತ ರು, ಕೂಲಿ ಕಾರ್ಮಿಕರು ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.

 ನಮ್ಮ ಸಾಂಸ್ಕೃತಿಕ ಪರಂಪರೆ ಅತ್ಯಂತ ಹಿರಿದಾದು. ಸಾಹಿತಿಗಳು, ಕವಿಗಳು, ಬರಹಗಾರರು, ಸಂತರು, ಶರಣರು, ತತ್ವಪದಕಾರರು, ಸೂಫಿಗಳು, ಅಲ್ಲದೇ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳು ಅತ್ಯಂತ ವಿಸ್ತಾರವಾದ ಹರವು ಹೊಂದಿದ್ದರೂ ಅವುಗಳಿಗೆ ಸರಿಯಾದ ಕಾಯಕಲ್ಪವಿಲ್ಲದೆ ಸೊರಗಿ ಹೋಗುತ್ತಿರುವುದು ನಮ್ಮ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಕಾರಣವಲ್ಲದೆ, ಮತ್ತೇನು ಎನ್ನಬೇಕೆನ್ನುವುದು ನನ್ನ ಮನದ ಮಾತು. ನಮ್ಮೂರಿನ ಬದುಕು. ಅದು ಸವಾಲಿನ ಬದುಕು. ಸವಾಲಿನ ಬದುಕಿನಲ್ಲಿಯೇ ಮುಂದಿನ ಭವಿಷ್ಯವನ್ನು, ಪ್ರಸ್ತುತ ಬದುಕನ್ನು ಕಟ್ಟಿಕೊಳ್ಳಬೇಕಾಗಿರುವುದು ವಿಷಾದನೀಯ.

 ದಕ್ಷಿಣಕ್ಕೆ ಹೋಲಿಕೆ ಮಾಡಿದರೆ ಉತ್ತರದ ಎಷ್ಟೋ ಸಮಸ್ಯೆಗಳಿಗೆ ಉತ್ತರವಿಲ್ಲದೆ ತತ್ತರಿಸಿ ಹೋಗುತ್ತಿದೆ. ನಮ್ಮನಾಳುವ ಪ್ರಜಾಪ್ರಭುತ್ವದ ಪ್ರತಿನಿಧಿಗಳು ಕೋಟಿ ಕೋಟಿ ಅನುದಾನ ತಂದರು ಸರಿಯಾದ ಸದ್ಬಳಕೆಯಾಗುವದಿಲ್ಲ ಎನ್ನುವುದು ಜನರ ಅಪವಾದ.  ಇತ್ತೀಚಿನ ದಶಕಗಳಲ್ಲಿ ಸ್ವಲ್ಪಮಟ್ಟಿಗೆ ಪ್ರಗತಿಯತೆ ಕಾಣುತ್ತದೆ ಎನ್ನುವ ಭರವಸೆಯ ಮಾತುಗಳು ಅಲ್ಲಲ್ಲಿ ಕೇಳುತ್ತೇವೆ.  ನಾವು ಎದ್ದು ನಿಂತು ನಡೆಯುವುದಕ್ಕಿಂತ ಮುಂಚಿತವಾಗಿಯೇ ದಕ್ಷಿಣ ಭಾಗದಲ್ಲಿ ಒಳ್ಳೆಯ ಅಭಿವೃದ್ಧಿಯ ನಾಗಾಲೋಟದಲ್ಲಿ ಇದ್ದುದು ಅವರ ಪ್ರದೇಶದ ಅಭಿವೃದ್ಧಿಯೇ ಸಾಕ್ಷಿಯಾಗಿದೆ.

ದಕ್ಷಿಣ ಭಾಗಕ್ಕೂ ಉತ್ತರ ಭಾಗಕ್ಕೂ ಅಭಿವೃದ್ಧಿಯಲ್ಲಿ ಯಾಕಿಷ್ಟು ತಾರತಮ್ಯ…?  ಎಂದು ಚಿಂತನೆ ಮಾಡಿದಾಗ ನಮ್ಮ ಕಣ್ಣೆದುರು ನಿಲ್ಲುವುದು ಮತ್ತೆ ಅದೇ ಮುತ್ಸದ್ದಿತನ..!  ಮೈಸೂರು ರಾಜರ ದೂರದೃಷ್ಟಿಯ ಫಲವೋ..?  ಅವರನ್ನಾಳುವ ವಿವಿಧ ಪ್ರಾಂತ್ಯಗಳ ಅರಸರ ಪ್ರಗತಿಯ  ನೀಲನಕ್ಷೆಯೋ ಒಟ್ಟಾರೆ ಆ ಪ್ರದೇಶ ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಶೈಕ್ಷಣಿಕ ಕ್ಷೇತ್ರ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ದಾಪುಗಾಲಿಟ್ಟಿದೆ. ಅಲ್ಲಿಯ ಜನಪ್ರತಿನಿಧಿಗಳ ಸದಾ ರಾಜಕಾರಣದ ಜಗಳವೆಂದರೇ ಅನುದಾನಕ್ಕಾಗಿ ಎಡೆಬಿಡದೆ ರಾಜಕಾರಣ ಮಾಡುವುದು. ಅಂತಹ ಆರೋಗ್ಯಕರ  ರಾಜಕಾರಣ ಮೆಚ್ಚುವಂತಹದ್ದು.  ಆದರೆ ನಾವು ಆರಿಸಿ ಕಳಿಸುವ ನಮ್ಮ ಜನಪ್ರತಿನಿಧಿಗಳು ಎಂಥವರು ಎನ್ನುವುದನ್ನು ನಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ.   ಯಾಕೆಂದರೆ ನಾವು ನಮ್ಮ ಜನಪ್ರತಿನಿಧಿಗಳಿಂದ ಏನನ್ನು ಬಯಸುತ್ತೇವೆಯೋ ಅದು ಸಿಗದಿರಲು ಅನೇಕ ಕಾರಣಗಳಿವೆ.  ಯಾವುದೋ ಆಮೀಷಕ್ಕೆ ಒಳಗಾಗುತ್ತೇವೆ. ಯಾವುದೋ ಮುಲಾಜುಗಳಿಗೆ ಕಟಿಬಿದ್ದು ಅಭಿವೃದ್ಧಿಗೆ ಪೂರಕವಲ್ಲದವರನ್ನು ಜನಪ್ರತಿನಿಧಿಗಳನ್ನಾಗಿ ಆರಿಸಿ, ನಮ್ಮ ಕಾಲಿಗೆ ನಾವೇ ಕಲ್ಲು ಹಾಕಿಕೊಳ್ಳುತ್ತೇವೆ.
 ಹೀಗಾಗಿ ಅಭಿವೃದ್ಧಿಯ ಉತ್ತುಂಗ ಬಯಸುವುದಾದರೂ ಹೇಗೆ..?

ಸುಮಾರು ವರ್ಷಗಳಿಂದ ಅನೇಕ ವಿದೇಶಿ ರಾಜರು, ಪ್ರಗತಿಪರವಲ್ಲದ ಕೆಲವು ಆಡಳಿತಶಾಹಿಯವರ  ಕೈಯಲ್ಲಿ ನಲುಗಿ ಹೋದ ನಮ್ಮ ಉತ್ತರ ಕರ್ನಾಟಕವು ಇನ್ನಾದರೂ ಒಳ್ಳೆಯ ಜನಪ್ರತಿನಿಧಿಗಳ ದೂರದೃಷ್ಟಿಯ ನೀಲನಕ್ಷೆ ಅಭಿವೃದ್ಧಿಗೆ ಪೂರಕವಾಗಿರಲಿ. ಕನಿಷ್ಠ 20 km ರಿಗೆ ಒಂದು ತಾಲೂಕು ಕೇಂದ್ರ, ಐದರಿಂದ ಹತ್ತು ಕಿಲೋಮೀಟರ್ ಒಳಗೆ  ಹೋಬಳಿ ಕೇಂದ್ರವಿರಲಿ. ಪ್ರತಿ ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲಾ-ಕಾಲೇಜು, ಒಳ್ಳೆಯ ರಸ್ತೆಗಳು, ಉತ್ತಮ ಕುಡಿಯುವ ನೀರಿನ ವ್ಯವಸ್ಥೆ, ಸದಾ ಮಳೆಯಾಗಲು ಪೂರಕವಾದ ಪರಿಸರ ವ್ಯವಸ್ಥೆಯನ್ನು ಕಾಪಾಡುವ ಜನಪರ ಕಾರ್ಯಕ್ರಮಗಳನ್ನು ರೂಪಿಸಿದಾಗ ಅದಕ್ಕೊಂದು ವಿಶೇಷವಾದ ಅರ್ಥ ಬಂದಿತು.

 ನಮ್ಮ ಮಕ್ಕಳು ದಕ್ಷಿಣ ಭಾಗದವರಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ, ಉತ್ತಮವಾದ ಹುದ್ದೆಗಳನ್ನು ಪಡೆಯುವಂತಾಗಲಿ. ದಕ್ಷಿಣದ ಅಭಿವೃದ್ಧಿಯ ಗಾಳಿ ಉತ್ತರಕ್ಕೂ ಬೀಸಲೆಂದು ಬಯಸುವೆ.


One thought on “‘ಕಾಡುತಿದೆ ದಕ್ಷೀಣಕ್ಕೂ ಉತ್ತರಕ್ಕೂ ಯಾಕೀಷ್ಟು ಅಂತರ…?’ವಿಶೇಷ ಲೇಖನ ರಮೇಶ ಸಿ ಬನ್ನಿಕೊಪ್ಪ

  1. ದಕ್ಷಿಣದವರಿಗೆ ಪ್ರಕೃತಿದತ್ತವಾಗಿ ಸೃಷ್ಟಿಯ ಕೃಪಾಶೀರ್ವಾವಿದೆ. ಅದೇ ಉತ್ತರದವರಿಗೆ ಇಲ್ಲ. ಉತ್ತರದ ನಾಡು ಶಾಪಗ್ರಸ್ತ ನಾಡು. ಮೈಸೂರು ಮಹಾರಾಜರಂಥಹ ದೂರದೃಷ್ಟಿಯ ಒಬ್ಬ ರಾಜನೂ ನಮ್ಮನ್ನು ಆಳಲಿಲ್ಲ. ಆಗಲೂ ನಮ್ಮನ್ನಾಳಿದವರು ಉದ್ಧರಿಸಲಿಲ್ಲ. ಈಗಿನ ಜನಪ್ರತಿನಿಧಿಗಳೂ ಅಷ್ಟೇ. ಬರೀ ಸ್ವಹಿತಾಸಕ್ತಿ ಅಷ್ಟೇ.

Leave a Reply

Back To Top