‘ಜನರೇಶನ್ ‌‌ ಗ್ಯಾಪ್ !ಅಲಲಿತ ಪ್ರಬಂ‍ಧ-ಸುಧಾ ಹಡಿನಬಾಳ’

ನಾವಿರೋದು ೨೧ ನೇ ಶತಮಾನದಲ್ಲಿ, ಹಾ ನೆನಪಿರಲಿ… ಇದು ಈ ಶತಮಾನದ ಆರಂಭ ಕಾಲ; ಬದಲಾವಣೆಯ ಪರ್ವಕಾಲ! ಹಿಂದೆಂದೂ ಕಂಡು ಕೇಳರಿಯದ ಬದಲಾವಣೆ ಬೇಕಾದರೆ ಸುಧಾರಣೆ ಅಂತಾನೆ ಇಟ್ಕೊಳಿ ಆಗಿರುವಂತಹ ಕಾಲ… ಊಟ ತಿಂಡಿ, ಉಡುಗೆ ತೊಡುಗೆ , ಅಸನ ವ್ಯಸನ  ,ನಡೆ ನುಡಿ ಹೀಗೆ ಎಲ್ಲದರಲ್ಲಿ ಕ್ರಾಂತಿಕಾರಿ ಬದಲಾವಣೆ  ಕಂಡು ಬರ್ತಿರೋ ಕಾಲ!!
ಮನೆ ಊಟ ಸೇರೋದಿಲ್ಲ; ರಾತ್ರಿ ಹೊತ್ತು ನಿದ್ದೆ ಬರೋದಿಲ್ಲ  ತೋಟಕ್ಕೆ ಕಾಲಿಡೋದೇ ಇಲ್ಲ!  ಮೊಬೈಲ್  ಬಿಟ್ರೆ ಜೀವ  ಉಳಿಯೋದಿಲ್ಲ; ನೆಟ್ವರ್ಕ್  ಇಲ್ಲ ಅಂದ್ರೆ ಕಾಲು ನಿಲ್ಲೋದಿಲ್ಲ! ಹೊಲದಲ್ಲಿ ಕೆಲ್ಸ  ಮಾಡು ಗಂಡ ಬ್ಯಾಡ, ಅಡುಗೆ ಮಾಡೋದೇ ಬೇಡ …ಈ ಬೇಡಗಳ  ಜೊತೆಯಲ್ಲಿ ಬೇಕುಗಳ ಪಟ್ಟಿಯೇ ಬಹಳಷ್ಟು ಉದ್ದ ಇದೆ:  ಹೋಟೆಲ್ ತಿಂಡಿ ಬೇಕೆ ಬೇಕು, ಓಡಾಡೋಕೆ ಕಾರು ಬೈಕು, ರಿಕ್ಷಾ ಕ್ಯಾಬು ಬೇಕು; ಮೊಬೈಲ್ ಕೈಯಲ್ಲಂತೂ  ಇರ್ಲೇಬೇಕು!  ಕಷ್ಟಪಡದೇನೇ ಕೈ ತುಂಬಾ ಹಣ ಸಿಗಬೇಕು .. ಬೆಂಗಳೂರಲ್ಲಿರೋ  ಹುಡುಗನೇ ಬೇಕು ವೀಕೆಂಡ್ ಬಂದ್ರೆ  ಔಟಿಂಗ್ ರೈಡಿಂಗ್,ಹೊರಗಡೆ ಊಟಕ್ಕೆ ಹೋಗಬೇಕು…ಮದುವೆಗಿಂತ ಮೊದ್ಲೇ  ಓರ್ವ ಸಂಗಾತಿ ಬೇಕು… ಹೀಗೆ ಒಟ್ಟಾರೆ ಏನೇನು ಬೇಡವೋ ಯಾವ್ ಯಾವುದು ಬೇಕೊ ಒಂದೂ ಗೊತ್ತಾಗ್ತಾ ಇಲ್ಲ !!

 ಒಂದು ತಲೆಮಾರು  ಮತ್ತೊಂದು ತಲೆಮಾರಿನ ನಡುವೆ ಹೆಚ್ಚು ಕಮ್ಮಿ ಒಂದು ಕಾಲು ಶತಮಾನ ಅಂದ್ರೆ ೨೫ ರಿಂದ ೩0 ವರ್ಷ  ಅಂತರ ಇರ್ಬಹುದು.ಈ ಅವಧಿಯಲ್ಲಿ ಒಂದಿಷ್ಟು ಬದಲಾವಣೆ ಎಲ್ಲಾ ಕಾಲದಲ್ಲೂ ನೋಡಿದ್ದೇವೆ ಅನ್ನಿ. ನಮ್ಮ ಅಜ್ಜಿಯರಂತೆ ನಮ್ಮ ಅಮ್ಮಂದಿರು ಇಲ್ಲ ; ನಮ್ಮ ಅಮ್ಮಂದಿರ ತರ ನಾವು ಇಲ್ಲ;  ನೋಡೋಕೆ ಅಂತ ಅಲ್ಲ ಮಾತು ಕಥೆ ನಡೆ-ನುಡಿ ,ಕೆಲಸ ಕಾರ್ಯ, ರೂಢಿ ರಿವಾಜು ಎಲ್ಲದರಲ್ಲೂ ಒಂದಿಷ್ಟು ಬದಲಾವಣೆ ಸಹಜ ಬಿಡಿ..  ನಮ್ಮ ಮುಂದಿರುವ ಹೊಸ ತಲೆಮಾರಿನ ಜನರಲ್ಲಿ ಕಾಣೋ ಒಂದಿಷ್ಟು ಬದಲಾವಣೆಯನ್ನು ನೋಡಿದ್ರೆ ತಲೆ ಗಿರ ಗಿರ ತಿರುಗುವುದಂತು ಪಕ್ಕ !!

ನಮ್ಮ ಅಜ್ಜಿಯರೆಲ್ಲ ಬಹುಶಹ ಸುಖ ಸೌಲಭ್ಯಗಳ ಯಾವ ಗಂಧಗಾಳಿ ಸೋಕಿದವರಲ್ಲ.. ಏನಿದ್ರೂ ಬೆವರು ಚೆಲ್ಲಿ ಮೈಬಗ್ಗಿಸಿ   ಕತ್ತಲೆ ಅಡುಗೆ ಕೋಣೆಯಲ್ಲಿ    ಕಣ್ಣು ಮೂಗು ಉಜ್ಜಿಕೊಳ್ತ   ರುಬ್ಬುಕಲ್ಲು ಹಿಡಿದು ಗಂಟೆಗಟ್ಟಲೆ ಬೀಸ್ತಾ ರಟ್ಟೆ ಮುರಿದು ಅಡುಗೆ ಮಾಡಿ ಹತ್ತು-ಹದಿನೈದು ಜನಕ್ಕೆ ಉಣ  ಬಡಿಸಿ,  ಮನೆಯಲ್ಲೇ ಎರಡು ಮೂರು ದಿನ ಬೇನೆ ತಿಂತಾ ೧೦-೧೨  ಬಸಿರು ಬಾಣಂತನ ನೋಡಿ ಉಳಿದಿರೋ ೭-೮ ಮಕ್ಕಳಿಗೆ ಬೇಯಿಸಿ , ಸಾಕಿ ಸಲಹಿ  ಗಟ್ ಮುಟ್ಟಾಗಿ ೭೫-೮೦ ವರ್ಷ ಚೆನ್ನಾಗಿ ಬದುಕಿದವರು.  ನಮ್ಮ  ತಾತಂದಿರೂ ಅಷ್ಟೇ ಚೆನ್ನಾಗಿ ಕವಳ ಜಗಿತಾ ಅವರಿವರ ಮನೆ ಚಾಕ್ರಿ ಮಾಡ್ತಾ, ಅಥವಾ  ಮನೆ ತೋಟ ಗದ್ದೆ ಕೆಲ್ಸ ಮಾಡಿ ಕದ್ದು ಮುಚ್ಚಿ  ಸಣ್ಣ  ಪುಟ್ಟ ಪೋಕರಿತನನೂ ಮಾಡ್ತಾ, ಮುಖ್ಯವಾಗಿ  ಮಾನ ಮರ್ಯಾದೆಗೆ ಅಂಜ್ತಾ ಚೆನ್ನಾಗಿ ಆರೋಗ್ಯ ಕಾಪಾಡಿಕೊಂಡವರು;  ಬೆವರಿನ ಬೆಲೆ ತಿಳಿದವರು;  ಭೂಮಿ ತಾಯಿನ ದೇವರು ಅಂತ ಆರಾಧಿಸಿದವರು!!

 ಇನ್ನು ನಮ್ಮ ಅಮ್ಮಂದಿರ ಕಾಲಕ್ಕೆ ಬಂದ್ರೂ  ಹೆಚ್ಚೇನು ಬದಲಾವಣೆ ಆಗಿಲ್ಲ.. ಒಟ್ಟೊಟ್ಟಿಗೆ ಬಡತನ ಹಸಿವು ಎಲ್ಲವನ್ನು ನೋಡಿ, ಕಷ್ಟಪಟ್ಟು ತಂಗಿ ತಮ್ಮಂದಿರನ್ನು ನೋಡಿಕೊಂಡು, ಅಪ್ಪ ತೋರಿಸಿರೋ ಗಂಡಿಗೆ ಕೊರಳು ಕೊಟ್ಟು ಗಂಡನ ಮನೆಯಲ್ಲಿ  ಮೂರು ನಾಲ್ಕು ಹೆತ್ತು,  ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾ, ಕಷ್ಟನೋ ಸುಖನೋ ನಗ್ತಾ  ನೆಮ್ಮದಿಯಿಂದ ಜೀವನ ಮಾಡ್ತಿದ್ದಾರೆ. ಹೆಚ್ಚಿಗೆ ಏನು ಕಲಿದೇ ಇದ್ರೂ  ಏಳನೇತ್ತಿ, ಎಸ್ ಎಸ್ ಎಲ್ ಸಿ ಪಾಸಾಗಿ ಮದುವೆ ಮಾಡ್ಕೊಂಡ್ ಬಂದ್ಮೇಲು ಗಂಡನ ಮನೆಯಲ್ಲಿ ತೋಟದ ಕೆಲಸ, ಕೊಟ್ಟಿಗೆ ಕೆಲಸ,   ಸಿಲಿಂಡರು ಮಿಕ್ಸರ್ ಇಲ್ದೆ ಇದ್ರೂ ಅಡುಗೆ ಕೆಲಸವನ್ನು ಚೆನ್ನಾಗಿ ನಿಭಾಯಿಸಿ ಮಕ್ಕಳು ಮರಿಗೆ  ರುಚಿರುಚಿಯಾಗಿ ಅಡುಗೆ ಮಾಡಿ  ಉಣಬಡಿಸಿದೋರು.  ಬಹುತೇಕ  ಎಲ್ಲ ಅಪ್ಪಂದಿರು ಅಷ್ಟೇ ಕಷ್ಟಪಟ್ಟು ದುಡಿದು ಬೆವರು ಚೆಲ್ಲಿ ಚೆನ್ನಾಗಿ ಮಕ್ಕಳನ್ನು ಬೆಳೆಸಿ ವಿದ್ಯೆ ಕಲಿಸಿ ಅವರವರ ಕಾಲ ಮೇಲೆ  ನಿಲ್ಸಿ ನ್ಯಾಯಯುತವಾಗಿ  ಮೋಜು ಮಸ್ತಿ ಏನೂ ಇಲ್ದೇನೇ ಜೀವನ ಮಾಡ್ಕೊಂಡ್ ಬಂದಿರೋರು. ಮಕ್ಳಿಗೆ  ಬೆವ್ರು ಸುರಿಸಿ  ದುಡಿಯೋದು ಕಲಿಸಿದ್ರು.ನಮ್ಮ ಅಪ್ಪ ಅಮ್ಮಂದಿರ ಕಾಲಕ್ಕೆ ಒಂದಿಷ್ಟು ಆಧುನಿಕತೆಯ ಯಂತ್ರ  ಸೌಲಭ್ಯ ಮನೆಗೆ ಎಂಟ್ರಿಕೊಟ್ಟು ತುಸು ಸುಖ ಜೀವನವನ್ನು ಕಂಡಿದ್ದಾರೆ ನಿಜ. ಮಧ್ಯ ವಯಸ್ಸು ದಾಟೋ ಹೊತ್ತಿಗೆ ಮಿಕ್ಸರು ಕುಕ್ಕರು ಸಿಲಿಂಡರು,  ತೋಟದ ಕೆಲಸಕ್ಕೆ ಬೆನ್ನು ಬಗ್ಸಿ ನೀರ್ ತೋಕೋ ಬದಲಿಗೆ ಜೆಟ್ ಹಾಕಿ ನೆಮ್ಮದಿಯಾಗಿ ಒಂದಿಷ್ಟು ಸುಖ ಅನುಭವಿಸುತ್ತಿದ್ದಾರೆ. ಯೌವನದ ದಿನಗಳಲ್ಲಿ ತೋಟದ ಕಳೆ ಕೇಳೋದು , ಹುಲ್ಲು ತರೋದು ಸೌದೆ ತರೋದು ಕೊಟ್ಟಿಗೆ ತೊಳೆಯೋದು, ಅಂಗಳ ಸಾರಿಸೋದು  ಎಲ್ಲಾ ಬಗೆಯ ಕೆಲಸ ಮಾಡಿಕೊಂಡು ಬಂದೋರು. ಹೀಗಾಗಿ  ತಮ್ಮ ಜೊತೆ ಜೊತೆಗೆ ಮಕ್ಕಳಿಗೂ ಈ ಕೆಲಸ ಕಲಿಸಿ ಮಕ್ಕಳಿಂದಲೂ ಮಾಡಿಸಿರೋರು. ಹೀಗಾಗಿ ನಮ್ಮ ತಲೆಮಾರಿನ, ಇಂದು ನೌಕರಿ ಮಾಡೋರಿಗೂ ಈ ಪರಿಯ ಮೈ ಬಗ್ಗಿಸಿ ಕೆಲಸ ಮಾಡೋದು ಗೊತ್ತು.. ಶೋಕಿ ಮಾಡ್ಕೊಂಡು ಓಡಾಡೋಕೂ ಗೊತ್ತು! ಇತ್ತೀಚಿನ ಜೀವನಮಟ್ಟ ಸುಧಾರಣೆಯೊಂದಿಗೆ ಗ್ರಾಮೀಣ ಪ್ರದೇಶದ ಬಹುತೇಕ ವಯೋವೃದ್ಧರು ಈ ದೈಹಿಕವಾದ ಪರಿಶ್ರಮದಿಂದ ದೂರಾಗಿ ನೆಮ್ಮದಿಯಾಗಿ ಟೀವಿ ಧಾರವಾಹಿ ನೋಡ್ತಾ ಅಡುಗೆ ಮಾಡಿಕೊಂಡು ಮಕ್ಕಳ ಮದುವೆ ಮಾಡಿಕೊಂಡು ಮೊಮ್ಮಕ್ಕಳ ಜೊತೆ ಕಾಲ ಕಳಿತ ಇದ್ದಾರೆ . ಹಾಗಂತ ಶ್ರಮಿಕ ವರ್ಗದ ವಯೋವೃದ್ಧರಿಗೆ ದೈಹಿಕ ಶ್ರಮದಿಂದ ಮುಕ್ತಿ ಹಾಸಿಗೆ ಹಿಡಿದ ಮೇಲೆಯೇ!

ಇನ್ನು ನಾವು ನಮ್ಮಂತವರು ಕಷ್ಟಪಟ್ಟು ಚೆನ್ನಾಗಿ ಓದಿ  ಅಪ್ಪ ಅಮ್ಮನ ಮಾತಿಗೆ ಎದುರಾಡದೆ , ಶಾಲೆಗೆ ಹೋಗುವ ದಿನಗಳಲ್ಲಿ ಮಾಸ್ತರರು, ಅಕ್ಕೋರನ್ನೇ  ಆದರ್ಶವನ್ನಾಗಿ ಇಟ್ಟುಕೊಂಡು, ಮೊಬೈಲು ಟಿವಿ ಯಾವುದೂ  ಇಲ್ದೇನೆ , ಕೆಡೋಕೆ ಬೇರೆ ದಾರಿ  ಇಲ್ಲದೇನೆ!  ಚೆನ್ನಾಗಿ ಓದಿ ಸರಿ ಸುಮಾರು ಎಲ್ಲರೂ ಸಣ್ಣಪುಟ್ಟ ನೌಕರಿ ಅದು ಇದು ಕೆಲಸ ಅಂತ ಮಾಡ್ಕೊಂಡಿದ್ದೇವೆ..  ತೀರಾ ರೀತಿ ರಿವಾಜು ,ಸಂಪ್ರದಾಯ, ಮಡಿ ಮೈಲಿಗೆ ಇಲ್ದೆ ಇದ್ರೂ ತಕ್ಕಮಟ್ಟಿಗೆ ಗ್ರಾಮೀಣ ಪ್ರದೇಶದ ಕೌಟುಂಬಿಕ   ವ್ಯವಸ್ಥೆ, ಬಾಂಧವ್ಯ,ಹಿರಿಯರು ಕಿರಿಯರು ಅತಿಥಿ ಸತ್ಕಾರ, ಶಿಸ್ತು  , ಜವಾಬ್ದಾರಿ ಈ ಬಗೆಯ ಅಪ್ಪ-ಅಮ್ಮಂದಿರಿಂದ ಕಲಿತುಕೊಂಡಿರೋ ಒಂದಿಷ್ಟು ಸಂಸ್ಕಾರವನ್ನ ನಾವು ಅನುಕರಿಸುತ್ತಿದ್ದೇವೆ .ನೌಕರಿ ಮಾಡಿದ್ರು ನಮ್ಮ ವಯಸ್ಸಿನ ಎಲ್ಲಾ  ಹೆಂಗಸರು ಗಂಡಸರು ತೋಟಕ್ಕೂ ಹೋಗ್ತಾರೆ, ಕಳೆನೂ ಕೇಳ್ತಾರೆ ಗ್ರಾಮೀಣ ಪ್ರದೇಶದ ತುಂಡು ಹೊಲ ತೋಟ ಇರುವವರೆಲ್ಲ ನೌಕರಿ ಜೊತೆ ಜೊತೆಗೆ ಭೂಮಿ ತಾಯಿಯನ್ನು ಪ್ರೀತಿಸ್ತಾ ಬಂದಿದ್ದೇವೆ.   ನೌಕರಿ ಅದು ಇದು ಅಂತ ಹೊರಗೆ ದುಡಿವವರ ಸಂಖ್ಯೆ  ಹೆಚ್ಚಾಗಿ ಕೊಟ್ಟಿಗೆ ಬಹುತೇಕ  ಮನೆಯಲ್ಲಿ ಇಲ್ಲ ಅಥವಾ  ತುಂಬಾ ಕಡಿಮೆಯಾಗಿದೆ. ಹೀಗಾಗಿ ಹಾಲು ಕರೆಯೋದು, ಸಗಣಿ ತೆಗೆಯೋದು ಇವೆಲ್ಲ ಚಿಕ್ಕಂದಿನಲ್ಲಿ ಮಾಡಿದ್ದಷ್ಟೇ ನೆನಪು ಆದರೂ ಅಲ್ಲಲ್ಲಿ ಇದನ್ನೆಲ್ಲ ಇವತ್ತಿಗೂ ಶ್ರದ್ಧೆ ಭಕ್ತಿಯಿಂದ ಮಾಡಿಕೊಂಡು ಬರೋ ಹಿರಿಯರು, ಮಧ್ಯ ವಯಸ್ಕರೂ ಇದ್ದಾರೆ

ಈ ಒಂದು ಕಾಲ ಶತಮಾನದಲ್ಲಿ ಎಷ್ಟೊಂದು ಬದಲಾವಣೆ ಆಗೋಯ್ತಲ್ವಾ?? ಏನೇನೆಲ್ಲಾ ಬಂತು ಮನೆಗೆ!!  ನಾವು ಅಷ್ಟೇ, ಒಂದಿಷ್ಟು ಸುಖ ಜೀವನಕ್ಕೆ ಇತ್ತೀಚಿಗೆ ಹೊಂದಿಕೊಂಡು ಬಿಟ್ಟಿದ್ದೇವೆ. ದೈಹಿಕ  ಶ್ರಮದಿಂದ ದೂರಾಗ್ತಾ ಇದ್ದೇವೆ.ಇನ್ನು ನಮ್ಮ ಮುಂದೆ ಬೆಳೆಯುತ್ತಿರೊ  ಮಕ್ಕಳು, ಇವತ್ತಿನ ಯುವ ತಲೆಮಾರು   ಇವ್ರನ್ನು ನೋಡ್ದಾಗ ಒಂದಿಷ್ಟು ಆತಂಕ ಸಹಜವಾಗಿ ಅಪ್ಪ-ಅಮ್ಮಂದಿರನ್ನ ಕಾಡುತ್ತಿರುವುದಂತೂ ನಿಜ… ಏನಪ್ಪಾ ಜನರೇಶನ್ ಗ್ಯಾಪ್ ಅಂದ್ರೆ ಗ್ಯಾಪು…. ಒಂದು ಹತ್ತು ತಲೆಮಾರು ನಮಗಿಂತ ಅವರು ಮುಂದಿದ್ದಾರೆ!! ಊಟ, ನೋಟ, ಮಾತು, ಕೃತಿ  ನಗು ಎಲ್ಲದರಲ್ಲೂ ಬದಲಾವಣೆ ಅಥವಾ ಸುಧಾರಣೆನೊ ಒಂದೂ ಗೊತ್ತಾಗುತ್ತಿಲ್ಲ!! ನಮ್ಮ ಮಕ್ಕಳು ಹುಟ್ಟೊ ವೇಳೆಗೆ ಅಂದ್ರೆ ೨೦೦೦ ದ  ನಂತರದಲ್ಲಿ ಅಂದ್ರೆ ೨೧ ನೇ ಶತಮಾನದ ಆರಂಭ ಕಾಲದಲ್ಲಿ ಹಳ್ಳಿಹಳ್ಳಿಯ ಮನೆ ಮನೆಗೆ ಟಿವಿ ಕಾಲಿಟ್ಟಿದೆ; ರೇಡಿಯೋ ಮೂಲೆಗುಂಪಾಗಿದೆ!  ಮೊಬೈಲ್ ಬಂದಿದೆ; ದೂರವಾಣಿ ದೂರ ಸರಿದಿದೆ!!  ಅಡುಗೆ ಮನೆಗಂತೂ ಸಿಲಿಂಡರು, ಮಿಕ್ಸರು, ಕುಕ್ಕರು, ಫ್ರಿಜ್  ಗೀಜರು ಇನ್ನೂ  ಏನೇನೋ ನಾವು ಕಂಡು ಕೇಳರಿಯದ ಸುಖ ಸಲಕರಣೆಗಳೆಲ್ಲ ಬಂದಿವೆ!!  ಹೀಗಾಗಿ ನಾವು ಒಂದಿಷ್ಟು ನೆಮ್ಮದಿಯಾಗಿದ್ದೇವೆ ಆದರೆ ಸಂದರ್ಭ ಬಂದರೆ ರುಬ್ಬು ಕಲ್ಲು ಹಿಡಿಯೋದು ಗೊತ್ತು, ಕೆಂಡದ ಬೆಂಕಿಯಲ್ಲಿ  ಅಕ್ಕಿ ರೊಟ್ಟಿ ಸುಡೋದೂ ಗೊತ್ತು,ಬಚ್ಚಲಿಗೆ ಬೆಂಕಿ ಒಟ್ಟಿ ನೀರ್ ಕಾಯ್ಸೋಕು ಗೊತ್ತು… ಆದರೆ ನಮ್ಮ ಮಕ್ಕಳ ಕಥೆ ಸಿವನೆ ಕಾಯ್ಬೇಕು !!

 ಅಯ್ಯೋ ಸಿಲಿಂಡರ್ ಇಲ್ದೇನೆ ಅಡುಗೆ ಮಾಡೋಕೆ ಗೊತ್ತಿಲ್ಲ.. ಕರೆಂಟ್ ಇಲ್ಲ ಅಂದ್ರೆ ನಿದ್ದೆನೇ ಬರೋದಿಲ್ಲ… ಕೈಯಲ್ಲಿ ಮೊಬೈಲ್ ಇಲ್ಲ ಅಂದ್ರೆ ಜೀವನೇ ನಿಲ್ಲೋದಿಲ್ಲ. ವಾರಕ್ಕೊಂದಿನ ಹೊರಗಡೆ ಹೋಗಿಲ್ಲ ಅಂದ್ರೆ ಸಮಾಧಾನವೇ ಇಲ್ಲ.. ಏನು ಬದಲಾವಣೆ ಅಂತೀರಿ, ಮಾತ್ ಬೇಡ ಕಥೆ ಬೇಡ, ಗಟ್ಟಿಯಾಗಿ ಮಾತಾಡಿದ್ರೆ ಹಳ್ಳಿ ಗುಗ್ಗು ಅನ್ಕೋತಾರೆ… ಇವ್ರು ಮನುಷ್ಯರ ಜೊತೆ ನಗ್ತಾರೋ ಬಿಡ್ತಾರೋ ಒಂದು ಗೊತ್ತಾಗೋದಿಲ್ಲ!!  ಮೊಬೈಲ್ ಮುಂದೆ ಮೂರ್ಹೋತ್ತು  ಕಿಸಿಕಿಸಿ ನಗ್ತಾ ಇರ್ತಾರೆ!!  ಗಂಡು ಮಕ್ಕಳು ಅಷ್ಟೇ ಹೆಣ್ಣು ಮಕ್ಕಳು ಅಷ್ಟೇ ತೋಟ ಇಳಿಯಂಗಿಲ್ಲ ಅಡುಗೆ ಮಾಡಂಗಿಲ್ಲ.. ಮ್ಯಾಗಿ ನೂಡಲ್ಸ್, ಬ್ರೆಡ್ ಜಾಮು ಇಂತದನ್ನೇ ತಿಂದ್ಕೊಂಡು ಮೂರ್ ಹೊತ್ತು ಬೇಕಾದ್ರೆ ಕಳಿತಾರೆ. ಈಗಂತೂ  ಬಂದಿದ್ಯಲ್ಲ ಆರ್ಡರ್ ಮಾಡಿದ್ರಾಯ್ತು;  ಮೆಟ್ಟು ನಡೆಯೋದೂ ಬೇಕಾಗಿಲ್ಲ! .ರಾತ್ರಿ ೧೨ ಆದ್ರೂ  ನಿದ್ದೆ ಬರೋದಿಲ್ಲ.. ಬಹುತೇಕ ಇವ್ರೆಲ್ಲಾ  ಬೆಳಿಗ್ಗೆ ೭-00 ಗಂಟೆಗೆ ತಿಂಡಿ ತಿನ್ನೋ ಕಾಲ ಎಲ್ಲಾ ಹೋಯ್ತು. ಆರಾಮ್ ೯.೦೦  ಕ್ಕೆಲ್ಲ ಎದ್ದು ಮೊಬೈಲ್ ನೋಡಿ ತಿಂಡಿ ತಿಂದು ಮುಗಿಯೋ ಹೊತ್ತಿಗೆ ೧೦-೧೧  ಗಂಟೆ ದಾಟಿರುತ್ತೆ. ಅದರಲ್ಲೂ ಈ ಸಾಫ್ಟ್ವೇರ್ ಗಳಂತೂ  ವೀಕೆಂಡ್ ಅಂದ್ರೆ ಎರಡು ದಿನ ರಜೆ ಬೇರೆ … ಗಡದ್ದಾಗಿ ನಿದ್ದೆ ಮಾಡೋದು, ಅಲ್ಲಿ ಇಲ್ಲಿ ಸುತ್ತಾಡಕ್ ಹೋಗೋದು…ಗಂಡು ಮಕ್ಕಳು ಸುತ್ತೋದು, ತಿನ್ನೋದು, ತಿರುಗೋದು ಅನ್ನೋ ಕಾಲ ಹೋಯ್ತು ಈಗ ಹೆಣ್ಣು ಮಕ್ಕಳು ಏನು ಕಮ್ಮಿ ಇಲ್ಲ ಅವರ ಹಂಗೇನೆ ಇವರು ತಿರುಗ್ತಾರೆ. ತಿಂತಾರೆ ಬೇರೆ ಕುಡಿತಾರಂತೆ!!  ಇದರಲ್ಲಂತೂ ಲಿಂಗ ತಾರತಮ್ಯ ಇಲ್ಲ!! .ಇರಲಿ ಬಿಡಿ ಅಂದ್ರೂ ಒಂದಿಷ್ಟು ಜವಾಬ್ದಾರಿ ಹೆಣ್ಣು ಗಂಡು ಇಬ್ಬರಿಗೂ ಬೇಕು ಅಲ್ವಾ ?

ನಮ್ ಹೆಣ್ಮಕ್ಲಿಗಂತೂ ಹಳ್ಳೀಲಿ ಇರೋ ರೈತ , ಮಾಸ್ತರರು ಪುರೋಹಿತರು  ಬೇಡ್ವೇ ಬೇಡ.. ಏನಿದ್ರೂ ಶೋಕಿ ಮಾಡೋ ಪ್ಯಾಟೆಲಿರೋ ಹೈದನೇ  ಬೇಕು.. ಅತ್ತೆ ಮಾವ ಇಲ್ದೆ ಹೋದ್ರೆ ತುಂಬಾ ಒಳ್ಳೇದು ಅಂತಾರಂತೆ!!  ಹಿಂಗ್ ಆದ್ರೆ ಹೆಂಗೆ ಅಂತ ….

ಕಾಲ ಕೆಟ್ಟೋಯ್ತು, ಯಾರು ಕಾಲ ಕೆಡಿಸಿದ್ದು??? ನಮ್ಮಕ್ಕಳು ಈ ಮಟ್ಟಕ್ಕೆ ಬೆಳೆಯೋದಕ್ಕೆ, ಬದಲಾಗೋದಕ್ಕೆ ಕಾರಣ ಯಾರು ಒಮ್ಮೆ ಯೋಚಿಸಬೇಕಲ್ವಾ??  ತಪ್ಪು ನಮ್ಮಲ್ಲೇ ಇದೆ ..

ಇವತ್ತು ೧೦-೧೨ ಹೇರೋ ಕಾಲ ೭-೮ ಹೆರೋ ಕಾಲ  ೩-೪  ಹೆರೋ ಕಾಲ ಎಲ್ಲ ಮುಗಿದು ಒಂದು ಎರಡಕ್ಕೆ ಸೀಮಿತವಾಗಿದೆ .ಇತ್ತೀಚೆಗೆ ಮದುವೆಯೂ ಬೇಡ , ಮಕ್ಕಳೂ ಬ್ಯಾಡ  ಸುಖ ಜೀವನ ಮಾತ್ರ ಸಾಕು ಅಂತ ‘ Living Together’   ಕಾನ್ಸೆಪ್ಟ್ ಒಪ್ಪಿಕೊಳ್ತಿರೋ ಕಾಲ!!  ಯಾರಿಗೆ ಬೇಕು  ಜವಾಬ್ದಾರಿ?? ಇರೋವಷ್ಟು ದಿನ ಮೋಜು ಮಜಾ; ಆಮೇಲೆ ನಿಂದಾರಿ ನಿಂಗೆ, ನಂದಾರಿ ನಂಗೆ ಅಂತ ಅನ್ನೋ ಕಾಲ… ಆಮೇಲೆ ಅಪ್ಪ ಅಮ್ಮನ ಒತ್ತಾಯಕ್ಕೆ ಒಂದು ಮದುವೆ ಅಂತ ಮೂರು ಗಂಟಾಕಿ ಸಣ್ಣ ಪುಟ್ಟ ಚಿಲ್ಲರೆ ವಿಷಯಕ್ಕೆಲ್ಲಾ ಕಿರಿಕ್ ಮಾಡ್ಕೊಂಡು ಡಿವೋರ್ಸ್ ಗೆ ಎಪ್ಲ್ಯ್ ಮಾಡ್ಕಂಡು ದೇವ್ದಾಸ್ ಆಗೋ  ಕಾಲ ಇದು.

   ನಮ್ ನಮ್ ಮಕ್ಕಳು ಅಂದ್ರೆ ಎಲ್ಲರಿಗೂ ಮಮಕಾರ ಪ್ರೀತಿ ಸಹಜ  ಆದ್ರೆ ಇವತ್ತಿನ  ಮಾಡರ್ನ್ ಪಾಲಕರು  ಮಕ್ಳನ್ ಬೆಳೆಸೊ  ರೀತಿ ನೋಡಿದ್ರೆ ತುಂಬಾ ಭಯ ಆಗ್ತಿದೆ!  ಮಕ್ಕಳು ಏನು ಮಾಡಿದ್ರೂ  ಸರಿ ; ಮಕ್ಳನ್ನ  ಫಾರಂ ಕೋಳಿ ತರ, ಕುಂಡದಲ್ಲಿರೋ ಗಿಡದ ತರ ಬೆಳೆಸ್ತಿದ್ದಾರೆ. ಮಕ್ಳ  ಕೈಗೆ ಯಾವ ಕೆಲ್ಸಾನೂ ಕೊಡದೆ ಅವರಿಗೆ ಶಾಲೆ  ಬ್ಯಾಗನ್ನು ಕೂಡ   ಹೊತ್ಕೊಂಡು ಬಂದ್  ಕೊಟ್ಟು ಹೋಗ್ತಾರೆ ಅಮ್ಮಂದಿರು ಅಪ್ಪಂದಿರು… ಹಾಗಾಗಿ ಮಕ್ಕಳು ಯಾವ ಮಟ್ಟಕ್ ಬೆಳೆದಿದ್ದಾರೆ ಅಂದ್ರೆ ಶಾಲೆಯಲ್ಲಿ ಏನ್ ಕೆಲಸ ಹೇಳಿದ್ರೂ   ಕಳ್ಳ ಬೀಳೋಕೆ ನೋಡ್ತಾರೆ…  ಕೆಲ್ಸ ಕೊಟ್ರೆ  ಇಲಾಖೆ , ಪಾಲಕರು ಕೇಳ್ತಾರೆ   !!  ಮತ್ತೆ  ಕಲಿಯೋದು ಹೆಂಗೆ ?? ತಮ್ಮಂದು ತಂಗಿದು ಅಂಗಿ ಚಡ್ಡಿ ತೊಳಿಯೋ ಕಾಲ ಎಲ್ಲ ನಮ್ಮ ಕಾಲಕ್ಕೆ ಮುಗ್ದೋಯ್ತು …

ಇತ್ತೀಚಿಗೆ ಸರ್ಕಾರಿ ಶಾಲೆ ಎಂದ್ರೆ  ಒಂದು ರೀತಿ ಪ್ರಯೋಗ್ ಶಾಲೆ!  ಹತ್ತಾರು ಪ್ರಯೋಗಗಳು, ಹತ್ತಾರು ಯೋಜನೆಗಳು ,ಕಾರ್ಯಕ್ರಮಗಳು. ಒಂದಿಷ್ಟು  ದಾಖಲೆ, ವರದಿ ಪೋಟೋಕೆ ಸೀಮಿತ… ಆದ್ರೂ ಮಕ್ಳಿಂದ ಕೆಲವನ್ನಾದ್ರೂ ಮಾಡಿಸ್ಬೇಕು ಮಾಡಿಸ್ತೇವೆ ಬಿಡಿ.  ಅವುಗಳಲ್ಲೊಂದು   ಬೀಜದ ಉಂಡೆ ತಯಾರಿಸಿ ಸಸಿ ಬೆಳೆಸಿ ಪೋಷಿಸುವಂತಹ ಒಂದು ಕಾರ್ಯಕ್ರಮ. ಶಾಲೆಯಲ್ಲಿಯೇ ಮಣ್ಣು, ಸಗಣಿ, ಗೋಮೂತ್ರ ಅಥವಾ ನೀರು ಸೇರಿಸಿ ಮಿಶ್ರಣ ಮಾಡಿ ಹದವಾಗಿ ಕಲಸಿ   ಮಣ್ಣಿನ ಉಂಡೆ ತಯಾರಿಸಿ ಅದರೊಳಗೊಂದು ಬೀಜ ಇಟ್ಟು ಬೀಜದ ಉಂಡೆ ತಯಾರಿಸಿ ಸಸಿ ಬೆಳೆಸುವಂತಹ ಒಂದು ಯೋಜನೆ.. ಸರಿ ಮಕ್ಕಳಿಗೆ  ಸಗಣಿ ತಕೊಂಡ್ ಬರೋಕೆ ಹೇಳಿ  ಆಯ್ತು, ಬಹುಶಹ ಅಮ್ಮಂದಿರಲ್ಲಾ ಸಗಣಿಯನ್ನ ಪ್ಲಾಸ್ಟಿಕ್ ಕವರ್ ಗೆ  ಹಾಕಿ ಕಳಿಸಿಕೊಟ್ಟಿರಬೇಕು ಪಾಪ … ಗಂಡು ಮಕ್ಕಳೆಲ್ಲ ನೆಲ ಅಗೆದು  ಮುಟ್ಟಿಯಲ್ಲಿ ಒಂದಿಷ್ಟು ಮಣ್ಣನ್ ತಂದು ರಾಶಿ ಹಾಕಿದ್ರು .ಆಮೇಲೆ ಮಕ್ಕಳತ್ರ ಮಣ್ಣಿಗೆ ಸಗಣಿ ಹಾಕಿ  ಮಿಕ್ಸ್ ಮಾಡಿ ಅಂತಂದ್ರೆ ಎಲ್ಲ ಮಕ್ಕಳೂ ಕೈಗೆ ಪ್ಲಾಸ್ಟಿಕ್ ಕವರ್ ಹಾಕೊಂಡ್ರು!    ಮಣ್ಣನ್ ಹದ ಕಲಸುವಾಗ ಮೂಗು ಮುಚ್ಕೊಂಡು ‘ಇಷೀ ಇಷೀ’ …ಅಂತೂ  ಟೀಚರ್ ಒತ್ತಾಯಕ್ಕೆ ಪ್ಲಾಸ್ಟಿಕ್ ಹಾಕೊಂಡು ಸಗಣಿ ಮಣ್ಣು ಮಿಶ್ರಣ ಮಾಡಿದ್ರು. ಆಮೇಲೆ ಉಂಡೆ ಕಟ್ಟುವಾಗ ಎಲ್ಲರೂ ಕೈಯ್ಗೆ ಹಾಕಿರೊ  ಪ್ಲಾಸ್ಟಿಕ್ ತೆಗೆದು   ಒಂದೊಂದು ಬೀಜದ ಉಂಡೆ ಕಟ್ಟಬೇಕು ಅಂತ  ಹೇಳ್ದಾಗ  ಊಹೂಂ ಮುಟ್ಟೋಕೆ ರೆಡಿ ಇಲ್ಲ!  ಅಂತೂ ಇಂತೂ ಹೇಳಿದ್ಮೇಲೆ ಚಿಕ್ಕ ಮಕ್ಕಳೆಲ್ಲ ಉಂಡೆ ಕಟ್ಟಿದ್ರು  ; ಆರು ಏಳರ ಹುಡುಗ್ರು, ಹುಡುಗೀರು   ಹೇಸೋದು  ಅದು ಯಾವ ಪರಿ? ಒತ್ತಾಯಕ್ಕೆ ಬೈತಾರೆ ಅಂತ  ಕಟ್ಟಿದ್ರು;  ಆಮೇಲೆ ನೋಡಬೇಕು  ಮೈ ಮೇಲೆ ಹುಳ ಬಿಟ್ಟಂಗೆ  ಓಡಾಡ್ತಾರೆ! ‘ಟೀಚರ್ ಡೆಟಾಲ್ ಕೊಡಿ, ಟೀಚರ್ ಹ್ಯಾಂಡ್ ವಾಶ್ ಕೊಡಿ’ ಹ್ಯಾಂಡ್ ವಾಶ್ ಹಾಕ್ಕೊಂಡು ಕೈ ತೊಳ್ಕೊಂಡ್  ಮೇಲೂ ಊಟ ಮಾಡೋವಾಗ ಸ್ಪೂನ್ ಕೇಳ್ತಾರೆ!!  ಕಾಲ ಎಲ್ಲಿಗ್ ಬಂತು??   ಒಮ್ಮೆ ನೆನಪು ಮಾಡಿಕೊಳ್ಳಿ ನಮ್ಮಮ್ಮಂದಿರು ಗೋಬರ್ ಗ್ಯಾಸ್ ಗೆ ಸಗಣಿ ಕರಡಿ  ಹಾಕಿ ,ಕೊಟ್ಟಿಗೆಯಲ್ಲಿರೊ ಸಗಣಿ ಹೆಕ್ಕಿ ಎಮ್ಮೆ ಮೈ ತೊಳೆಸಿ ಸಗಣಿ ಜೊತೆಗೆ ಮಸಿ ಹಾಕಿ ಅಂಗಳ ಕಪ್ಪು ಮಾಡಿ ಸರ್ಸಿ  ರಂಗೋಲಿ ಹಾಕುತ್ತಿದ್ದ ಕಾಲ ಎಷ್ಟು ಬೇಗ ಮರೆಯಾಗೋಯ್ತು!! ,

 ಈ ಮಟ್ಟಕ್ಕೆ ನಮ್ಮ ಮಕ್ಳು ಬದಲಾದ್ರೆ ಮುಂದಿನ ತಲೆಮಾರು ಹೆಂಗಿರಬಹುದು?? ತೋಟ ಗದ್ದೆ ಕಥೆ ಏನು? ಯೋಚಿಸಬೇಕಾಗಿರುವ ಸತ್ಯ! ಮಕ್ಕಳನ್ನು ಇಷ್ಟು ಮುದ್ದು ಮಾಡಿ ಬೆಳೆಸಿದ್ರೆ ತುಂಬಾ ಕಷ್ಟ ಅವ್ರಿಗೂ  ದೇಶಕ್ಕೂ ! .ಎಲ್ಲರೂ ಇಂಜಿನಿಯರ್, ಡಾಕ್ಟರೇ ಆದ್ರೆ, ಆಗೋದಾದ್ರೂ ಹೌದಾ?  ರೈತರು ,ಕೂಲಿಕಾರ್ರು ಬೇಡ್ವಾ?

ನಮ್ಮ ಮಕ್ಕಳಿಗೆ ಮಾದರಿಯಾಗಬೇಕಾಗಿರೋ ನಾವುಗಳು ಬದಲಾಗಿದ್ದೇವೆ… ನಮ್ಮಲ್ಲೂ ತಪ್ಪುಗಳಿವೆ …ನಮ್ಮ ಮಕ್ಕಳು ನಮಗಿಂತ ನೂರ್ಗಾವ್ದ ದೂರ ಇದ್ದಾರೆ!  ನಮ್ಮ ವಿಚಾರಗಳು ಯಾವ್ದು ಅವ್ರಿಗೆ ಇಷ್ಟ ಆಗೋದಿಲ್ಲ;  ಅವರ ವಿಚಾರಗಳು ನಮ್ಗೆ  ಸರಿ ಕಾಣೋದಿಲ್ಲ.. ಇಬ್ಬರಲ್ಲೂ ಸಾಮರಸ್ಯ  ಇಲ್ದೆ ಹೋದ್ರೆ , ಜನರೇಶನ್ ಗ್ಯಾಪ್ ಹೆಚ್ಚಾಗ್ತಾ ಹೋದ್ರೆ ಸಂಬಂಧ ಹದಗಿಡುತ್ತೆ ವ್ಯವಸ್ತೆ ಅಲ್ಲೋಲಕಲ್ಲೋಲವಾಗುತ್ತೆ! ಹಳ್ಳಿಗಳೆಲ್ಲ ಬಿಕೋ ಅಂತ ಪಟ್ಟಣಗಳೆಲ್ಲ ತುಂಬಿ ತುಳುಕಿ ಮಹಾನಗರಗಳಲ್ಲಿ ಜನಸಂಖ್ಯಾ ಸ್ಪೋಟ ಸಂಭವಿಸಿ ; ಹಳ್ಳಿಗಳಲ್ಲಿ ಮುದಿರಾಜ ಮುದಿರಾಣಿಯರು ಕೈಲಾಗುವರೆಗೆ ದಿನದೂಡಿ ಆಮೇಲೆ ಬಾಗಿಲಿಗೆ ಬೀಗ ಜಡಿದು ಪೇಟೆ ಕಡೆ ಮುಖ ಮಾಡೊ   ಅಥವಾ ವೃದ್ಧಾಶ್ರಮದ ಕಡೆ ಮುಖ ಮಾಡೋ ಕಾಲ ದೂರ ಇಲ್ಲ …. ಇರ್ಲಿಎಚ್ರ !!


One thought on “‘ಜನರೇಶನ್ ‌‌ ಗ್ಯಾಪ್ !ಅಲಲಿತ ಪ್ರಬಂ‍ಧ-ಸುಧಾ ಹಡಿನಬಾಳ’

Leave a Reply

Back To Top