ಹಾಸ್ಯ ಸಂಗಾತಿ
ಚಂದಕಚರ್ಲ ರಮೇಶ ಬಾಬು
‘ಮನೆಗೆಲಸದ ಸಾಮ್ರಾಜ್ಞಿ’
“ನಿಮಗ್ಯಾಕ್ರೀ ಬೇಕಿತ್ತು ಅವಳ ಉಸಾಬರಿ? ಈಗ ನೋಡಿ ಅವಳು ಫೋನ್ ಮಾಡ್ತಾ ಇದ್ದಾಳೆ. ಅವಳಿನ್ನು ಬರಲ್ವಂತೆ. ‘ನೆನ್ನೆ ಸಾಹೇಬರು ಏನೆಲ್ಲ ಮಾತಾಡಿದರು? ಹಾಗಾದ್ರೆ ನಾನು ಕೆಲಸ ಮಾಡೋದು ಕಷ್ಟ’. ಅಂತಾಳೆ. ಈಗ ಈ ಹೊರೆ ಪಾತ್ರೆ ನಾನೇ ತಿಕ್ಕೋಬೇಕು. ಮನೆ ಕಸ ಗುಡಿಸಿಕೋಬೇಕು. ಒರೆಸಿಕೋಬೇಕು. ನಿಮಗೇನು ಗೊತ್ತು ನನ್ನ ಕಷ್ಟ?” ಮನೆ ಯಜಮಾನತಿಯ ಬೈಗುಳ ನಿಲ್ಲುವ ರೀತಿಯಲ್ಲಿ ಕಾಣುತ್ತಿರಲಿಲ್ಲ. ನಾನು ಅತಿ ವಿನಯದಿಂದ “ನಾನೇನು ತಪ್ಪು ಮಾತಾಡಿದೆ? ಅವಳು ಅಷ್ಟು ಲೇಟಾಗಿ ಬಂದಳು. ಮೊನ್ನೆ ಸಹ ಬಂದಿರ್ಲಿಲ್ಲ. ನೀನು ಕಷ್ಟ ಪಡೋದು ನೋಡಲಾರದೆ ಅವಳ್ನ ದಬಾಯಿಸಿದೆ. ನಿನ್ ಸಲುವಾಗೇ ಅಲ್ಲ ನಾನು ಅಂದಿದ್ದು?” ನನ್ನ ಸಮಜಾಯಿಷಿ ಅವಳ ಕಿವಿಗೆ ತಾಗಿದರೂ ಮನಸ್ಸಿಗೆ ನಾಟಲಿಲ್ಲ. ಮತ್ತೆ ಇವಳೇ ಫೋನ್ ಮಾಡಿದಳು. ನಮ್ಮ ಮನೆ ಕೆಲಸದವಳು ನೇಪಾಲಿ ಹೆಂಗಸು. ಅವಳಿಗೆ ಬರೋದು ನೇಪಾಲೀ ಮಿಶ್ರಿತ ಹಿಂದಿ. ಸಾಬ್ ಎನ್ನುವುದಕ್ಕೆ ಬದಲು ಶಾಬ್ ಎನ್ನುವ ಗೂರ್ಖಾ ಭಾಷೆ. ಇವಳಿಗೆ ಬರೋದು ಸಹ ಹರಕು ಮುರುಕು ಹಿಂದಿ. ಇವಳು ತನ್ನ ಕಷ್ಟ ಹೇಳುತ್ತ “ನಾನು ಸಾಹೇಬರಿಗೆ ಹೇಳಿದ್ದೀನಿ. ಇನ್ನು ನಿನ್ನ ತಂಟೆಗೆ ಬರಲ್ಲ. ಬಂದುಬಿಡು” ಎನ್ನುವ ಹಾಗೆ ಏನೋ ಹೇಳಿದಳು. ಆಕಡೆಯಿಂದ ಒಪ್ಪಿಗೆ ಸಿಕ್ಕಿರಬೇಕು. ಇವಳ ದನಿ ಮೆತ್ತಗಾಯಿತು. “ಹಾ ಹಾ ಕಲ್ ಆ ಜಾನಾ” ಎನ್ನುತ್ತ ಫೋನ್ ಕಟ್ ಮಾಡಿ, ನನ್ನಕಡೆ ಕೆಕ್ಕರುಗಣ್ಣಿಂದ ನೋಡುತ್ತ “ಹೇಗೋ ಸರಿಹೋಗಿದಾಳೆ. ನಾಳೆಯಿಂದ ಬರುತ್ತಾಳೆ. ಇವತ್ತಂತು ನನ್ನದೇ ಈ ಚಾಕರಿ” ಅಂತ ಗೊಣಗುತ್ತ ರಂಗಭೂಮಿ ಬಿಟ್ಟು ಒಳಗಡೆ ಹೋದಳು.
ಮರುದಿನ ಕೆಲಸದವಳ ಪ್ರವೇಶವಾಯಿತು. ನನ್ನ ಮಡದಿಯ ಮುಖ ಅವಲಕ್ಕಿ ಹಪ್ಪಳವಾಯಿತು. ಬಿಗಡಾಯಿಸಿದ ಮನೆಯಲ್ಲಿಯ ವಾತಾವರಣ ತಿಳಿಯಾಯ್ತು. ಕೆಲಸದವಳ ಜೊತೆ ಕೊಂಚ ಮಾತುಕತೆ ನಡೆದ ಮೇಲೆ ಮುಖದ ಮೇಲೆ ಯಾವ ತರದ ಬಿರುಗಾಳಿಯ ಚಿಹ್ನೆ ಕಾಣಲಿಲ್ಲ. ನನಗೂ ಸ್ವಲ್ಪ ನೆಮ್ಮದಿ. ಮರಣ ಶಿಕ್ಷೆಯನ್ನು ರದ್ದು ಮಾಡಿಸಲು ಅಧ್ಯಕ್ಷರಿಗೆ ಮನವಿ ಮಾಡಿದ್ದು, ಅವರು ಒಪ್ಪಿದಾಗ ಬರುವ ನಿಶ್ಚಿಂತತೆ ನನ್ನ ಅನುಭವಕ್ಕೆ ಬಂತು. “ಇನ್ನು ಮೇಲಾದರೂ ಅವಳ ತಂಟೆಗೆ ಹೋಗಬೇಡಿ. ನಿಮ್ಮ ಕೆಲಸ ನೀವು ಮಾಡ್ಕೊಂಡು ಸುಮ್ನಿರಿ” ಅಂತ ಒಂದು ತಾಕೀತು ಕೊಟ್ಟಳು ನನ್ನಾಕೆ. ಅದ್ಯಾವುದೋ ಜೋಕ್ ನೆನಪಾಯ್ತು. ಬೀದಿ ಕೊಳಾಯಿ ಹತ್ತಿರ ಇಬ್ಬರು ಹೆಂಗಸರು ಮಾತಾಡಿಕೊಳ್ತಾ ಇರ್ತಾರೆ. ಒಬ್ಬಳಂತಾಳೆ “ನೆನ್ನೆ ಇಲ್ಲಿಂದ ನೀರು ಹಿಡ್ಕೊಂಡು ಮನೆಗೆ ಹೋದಾಗ ನನ್ನ ಯಜಮಾನರು ಕೆಲಸದವಳ ಕೈ ಹಿಡ್ಕೊಂಡು ಚಕ್ಕಂದ ಆಡ್ತಿದ್ರು. ಸಿಟ್ಟು ಬಂದೋಯ್ತು” ಅಂತ. ಆಗ ಮನ್ನೊಬ್ಬಳು “ಮತ್ಯೇನು ಮಾಡ್ದೆ? ಕೆಲಸದವಳ್ನ ಕಿತ್ತಾಕ್ದಾ?” ಅಂತ ಕೇಳ್ತಾಳೆ. ಅದಕ್ಕಿವಳು “ಆ! ಕೆಲ್ಸದವಳ್ನ ಕಿತ್ತಾಕಿದ್ರೆ ಮತ್ಯಾರು ಸಿಕ್ತಾರೆ ನೀನೇ ಹೇಳು! ಅದಕ್ಕೆ ಇವರಿಗೇ ಒಳ್ಳೆ ಡೋಸ್ ಕೊಟ್ಟೆ” ಅಂತಾಳೆ.
ಈ ಕೆಲಸದವರ ಮೇಲೆ ನನ್ನ ಗಮನ ಶುರುವಾಗಿದ್ದು ನಾನು ಬ್ಯಾಂಕಿನ ಉದ್ಯೋಗದಿಂದ ನಿವೃತ್ತನಾದ ಮೇಲೆ. ಅಲ್ಲಿಯ ವರೆಗೆ ಮೂರು ವರ್ಷಕ್ಕೊಮ್ಮೆ ಗಂಟು ಮೂಟೆ ಕಟ್ಟಿಕೊಂಡು (GMK) ವರ್ಗಾವಣೆ ಆದ ಊರಿಗೆ ಹೋಗಿ ಅಲ್ಲಿ ಮತ್ತೆ ಎಲ್ಲ ಹೊಸದಾಗಿ ನೆಲೆಸಲು ಶುರುಮಾಡಿ, ಮಕ್ಕಳಿಗೆ ಶಾಲೆ ಹುಡುಕಿ, ಸೀಟು ಸಂಪಾದಿಸಿ, ಬ್ಯಾಂಕಿನ ವೈವಾಟು ಬೆಳೆಸುವುದರಲ್ಲಿ ನನಗೆ ಇವರ ಕಡೆ, ಇವರು ಮಾಡುವ ಕೆಲಸಗಳ ಕಡೆ ಮತ್ತೆ ಇವರು ಸಕ್ರಮವಾಗಿ ಬರುವುದರ ಕಡೆ ಗಮನ ಹರಿಸಲು ಆಗುತ್ತಿರಲಿಲ್ಲ. ಅದೂ ಅಲ್ಲದೆ ಅದು ನನ್ನ ವ್ಯಾಪ್ತಿಯ ಕ್ಷೇತ್ರವೂ ಅಲ್ಲ. ನನ್ನಾಕೆಯೇ ಅದನ್ನು ನೋಡುತ್ತಿದ್ದಳು.
ಒಂದು ನಾಲ್ವತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿದ್ದಾಗ ನಮ್ಮ ಮನೆಗೆ ಬರುವ ಕೆಲಸದವಳಿಗೆ ನಮ್ಮ ಮನೆಯ ಬಗ್ಗೆ, ನಮ್ಮ ಬಗ್ಗೆ ತುಂಬಾ ಕಾಳಜಿ ಕಂಡು ಬರುತ್ತಿತ್ತು. ದಿನದ ಕೆಲಸವೇ ಅಲ್ಲದೇ ಮನೆಯನ್ನು ಸ್ವಚ್ಛವಾಗಿಡುವುದರಲ್ಲಿ ಮಡದಿಗೆ ಸಹಾಯ ಮಾಡುತ್ತಿದ್ದಳು. ನಾವು ಸಹ ಅವಳ ಮಗಳ ಮದುವೆಗೆ ನಮ್ಮ ಕೈಲಾದಷ್ಟು ಅವಳ ನಿರೀಕ್ಷೆಗಿಂದ ಹೆಚ್ಚೇ ಕೊಟ್ಟು ನಮ್ಮ ಧನ್ಯವಾದ ತಿಳಿಸಿದ್ದೆವು. ಅದೊಂದು ತರದ Give and Take ಪಾಲಸಿಯಾಗಿತ್ತು. ಅದಾದ ನಂತರ ನಮ್ಮ ಮನೆಯಲ್ಲಿ ಕೆಲಸ ಮಾಡಲು ತರ ತರದ ಕೆಲಸದವರು ಬಂದಿದ್ದರು. ಆವರದ್ದೇನೂ ಅಂಥಾ ಹೇಳಿಕೊಳ್ಳುವ ವಿಷಯಗಳು ಮತ್ತು ದಾಖಲಿಸ ಬಹುದಾದ ವಿಷಯಗಳು ಇರಲಿಲ್ಲ. ಅವರುಗಳು ಬಂದು ಗುಡಿಸಿ ನೆಲ ಒರೆಸುವಾಗ ನಾನು ಆಡುವ ಕಣ್ಣು ಮುಚ್ಚಾಲೆ ಆಟ ಹೊರತು. ಇದೇನು ಅಂತೀರಾ? ಅವಳು ಹಾಲು ಗುಡಿಸಿದರೆ ನಾನು ನನ್ನ ರೂಮಿಗೆ ಓಡಬೇಕು. ಅಲ್ಲಿಗವಳು ಬಂದರೆ ನಾನು ಮತ್ತೆಲ್ಲೋ ಹೋಗಬೇಕು. ಹೀಗೆ. ತಡವಾದರೆ ಪೊರಕೆಧಾರಿ ಅಥವಾ ನೆಲ ಒರೆಸುವ ಕೋಲ ಧಾರಿಣಿಯಾಗಿ, ನುಸುಳುಕೋರರನ್ನು ಓಡಿಸುವ ಗಡಿ ಸೈನಿಕನಂತೆ, ಮಹಿಷಾಸುರ ಮರ್ದಿನಿಯ ತರ ನಿಂತು ನೋಡುತ್ತಾಳೆ.
ಆದರೆ ಇದೀಗ ಬೆಂಗಳೂರಿಗೆ ಪುನಃ ಬಂದು ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳಲು ನೋಡಿದಾಗ ಆಗುತ್ತಿರುವ ಅನುಭವವೇ ಬೇರೇ. ಈಗಂತೂ ಮನೆ ಕೆಲಸದವರಿಗೆ ಅವರ ಅಗತ್ಯ ನಮಗೆಲ್ಲ ಬೇಕೇ ಬೇಕು ಅಂತ ತಿಳಿದು ಹೋಗಿದೆ. ನಮ್ಮಂತ ಕೆಲಸ ಕೈಲಾಗದ ಹಿರಿಯರಿಗೆ ಅವರು ಬೇಕೇ ಬೇಕು. ಇನ್ನು ನಮ್ಮ ಮಕ್ಕಳ ವಯಸ್ಸಿನವರಿಗೆ ಗಂಡ ಹೆಂಡತಿ ಕೆಲಸಕ್ಕೆ ಹೋಗುವ ಅಗತ್ಯವಿದ್ದು, ಮಕ್ಕಳನ್ನ, ಮನೆಯನ್ನ ನೋಡಿಕೊಳ್ಳಲಿಕ್ಕೆ ಕೆಲಸದವಳು ಬೇಕೇ ಬೇಕು. ಹಾಗಾಗಿ ಅವರೆಲ್ಲ ಈ ಅನಿವಾರ್ಯತೆಯನ್ನ ತುಂಬಾ ಜಾಣತನದಿಂದ ಉಪಯೋಗಿಸಿಕೊಳ್ಳುವುದನ್ನು ಕಲೆತಿದ್ದಾರೆ.
ಭಾನುವಾರ ಅಂತೂ ಈ ಕೆಲಸದವರು ಯಾರೂ ಬರುವುದಿಲ್ಲ. “ನಿಮ್ಮ ತರಾ ನಮಗೂ ಮನೆ ಕೆಲಸಗಳು ಮಾಡಿಕೊಳ್ಳಲು ವಾರದಲ್ಲಿ ಒಂದು ದಿನ ಬೇಡ್ವಾ?” ಎನ್ನುವ ತರ್ಕಬದ್ಧ ಪ್ರಶ್ನೆ! ಅದಲ್ಲದೇ ತಿಂಗಳಲ್ಲಿ ಕೊನೆ ಪಕ್ಷ ಎರಡು ರಜೆಯಂತೂ ತೊಗೊಳ್ತಾರೆ. ಅದಕ್ಕೆ ಬೇರೇ ಬೇರೇ ಕಾರಣಗಳು ಇರುತ್ತವೆ. ಅದಲ್ಲದೇ ಹುಶಾರಿಲ್ಲದಾಗ ತೊಗೊಳ್ಳುವ ರಜೆಗಳ ಬಗ್ಗೆ ಮಾತಿಲ್ಲ. ಅವುಗಳನ್ನೆಲ್ಲ ಎತ್ತಿ ತೋರಿಸಬಾರದು. ಕೆಲಸಕ್ಕೆ ಬರುವಾಗ ಮೊದಲು ಮಾತಾಡಿದ ಸಮಯಕ್ಕೆ ಬರುವುದೇ ಇಲ್ಲ. ತಮಗೆ ಬಿಡುವಾದಾಗ ಅಥವಾ ತಮ್ಮ ಮರ್ಜಿಗೆ ಬಂದಾಗ ಬಂದು ಕೆಲಸ ಮುಗಿಸುತ್ತಾರೆ. ಅದಕ್ಕೇ ನಾವು ನಮ್ಮ ಕೆಲಸಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ಮತ್ತೆ ತಡವಾಗಿ ಬಂದು ಆ ದಿನ ಆದಷ್ಟು ಕೆಲಸ ಮಾಡುವುದು. ಇದರ ಬಗ್ಗೆ ನಾನು “ಯಾಕೆ ತಡವಾಯಿತು? ನಮಗೆ ಕೈಲಾಗುವುದಿಲ್ಲ ಅಂತ ಅಲ್ವಾ ನಿನ್ನನ್ನು ಕೆಲಸಕ್ಕೆ ಇಟ್ಟುಕೊಂಡಿರುವುದು?” ಅಂತ ಜೋರು ಮಾಡಿದಾಗಲೇ ಮೇಲೆ ಹೇಳಿದ ಸನ್ನಿವೇಶ ಸೃಷ್ಟಿಯಾಗಿ ನನ್ನನ್ನ ದೋಷಿಯಾಗಿ ನಿಲ್ಲಿಸಿತ್ತು.
ಇನ್ನು ಅವರಿಗೆ ಹಣ ಬೇಕಾದಾಗ ನಾವು ಅವರ ಬ್ಯಾಂಕುಗಳಾಗಬೇಕು. ಯಾವುದಕ್ಕೂ ಸಂಬಳದಲ್ಲಿ ತೊಗೊಳ್ಳಿ ಎನ್ನುವ ಸ್ಟಾಂಡರ್ಡ್ ಉತ್ತರ. ತಿಂಗಳ ಶುರುವಿಗೆ ಸಂಬಳ ಕೊಡುವಾಗ “ಈ ಸಲ ಹಬ್ಬ ಇದೆ, ಈ ತಿಂಗಳು ಮಗುವಿನ ಬರ್ತ್ ಡೇ ಇದೆ. ಅದಕ್ಕೆ ಬೇಕು. ತೊಗೋಬೇಡಿ” ಎನ್ನುತ್ತ ದುಂಬಾಲು ಬೀಳುವುದು. ಮತ್ತೆ ಅದರ ಮೇಲೆ ಒಗ್ಗರಣೆ ಮಾತು “ನಾವು ನೀವು ಹೀಗೇ ಮುಂದುವರೆಯುತ್ತೇವಲ್ಲ? ಎಲ್ಲಿಗೆ ಹೋಗ್ತೀವಿ?” ಅಂತ ಬೇರೇ. ಕೆಲ ಸಲ ಅವರ ಮನೆಯ ದುಬಾರಿ ಸಾಮಾನು ಕೊಳ್ಳಲು ನಾವು ದೀರ್ಘಾವಧಿ ಸಾಲ ಸಹ ಕೊಡಬೇಕಾಗುತ್ತದೆ. ಇನ್ನು ಆ ಸಾಲ ಮುಗಿಯುವ ವರೆಗೆ ಅವಳನ್ನು ತೆಗೆದುಹಾಕುವ ಹಾಗಿಲ್ಲ. ಆಗ ನೋಡಿ ಅವಳು ಮಾಡಿದ್ದಷ್ಟೇ ಕೆಲಸ, ಬಂದದ್ದೇ ಡ್ಯೂಟಿ. ನಾನು ಬ್ಯಾಂಕಿನಲ್ಲಿದ್ದ ಕಾರಣ ಒಬ್ಬಳಂತೂ ತನ್ನಮಗನಿಗೆ ಕಾರು ಕೊಂಡು ಬಾಡಿಗೆಯಲ್ಲಿ ನಡೆಸಲು ಸಾಲ ಕೊಡುವ ಹಾಗೆ ಕೇಳಿದ್ದಳು. ಪುಣ್ಯಕ್ಕೆ ನಮ್ಮ ಬ್ಯಾಂಕಿನ ನಿಯಮಗಳಿಗೆ ಅವನ ಮಗ ಹೊಂದಿಕೊಳ್ಳಲಿಲ್ಲ. ನಾನು ಬಚಾವಾದೆ. ಮತ್ಯಾವುದೋ ಫೈನಾನ್ಸ್ ಕಂಪೆನಿಯಲ್ಲಿ ಸಾಲ ತೆಗೆದು ಕಂತುಗಳು ಸರಿಯಗ ಕಟ್ಟದೇ, ಅವರು ಬಂದು ಕಾರನ್ನು ಜಪ್ತಿ ಮಾಡಿದರೆಂದು ಅವಳೇ ಹೇಳಿದ್ದಳು. ಇದೊಂದು ಪ್ರೊಫೆಷನಲ್ ಹೆಜಾರ್ಡ್.
ಇನ್ನು ನಮ್ಮ ಮನೆಯಲ್ಲಿಯ ಸಾಮಾನುಗಳು ಹಳೆಯವಾಗಿವೆಯಾ ಅಥವಾ ನಾವು ಹೊಸದು ತೊಗೊಳ್ಳಬೇಕೇ ಅಂತ ನಿರ್ಣಯಿಸುವುದು ಅವರೇ. ಅವರ ಮನೆಗೆ ಯಾವುದಾದರೂ ಸಾಮಾನು ಬೇಕಾದಾಗ ನಮ್ಮ ಮನೆಯಲ್ಲಿದ್ದ ಅದೇ ಸಾಮಾನಿನ ಮೇಲೆ ಅವಳ ಕಣ್ಣು ಬೀಳುತ್ತದೆ. “ಇದು ನೀವು ತೊಗೊಂಡು ತುಂಬಾ ದಿನ ಆಯ್ತಲ್ಲಾ? ಈಗ ಹೊಸ ಮಾಡಲ್ ಗಳೆಲ್ಲ ಬಂದಿವೆ. ಸಾಹೇಬರು ಮನಸ್ಸು ಮಾಡಿದರೆ ಹೊಸ ನಮೂನೆ ತೊಗೊಳ್ಳ ಬಹುದು” ಅಂತ ಮನೆ ಹೆಂಗಸರನ್ನ ಪುಸಲಾಯಿಸಿ, ಅವರು ನಮ್ಮನ್ನ ಒತ್ತಾಯ ಮಾಡಿ ಕೊಂಡ ಮೇಲೆ, ಹಳೇದನ್ನು ಏನು ಮಾಡೋದು ಅಂತ ತಲೆ ಕೆರೆದುಕೊಳ್ಳುವಾಗ ತಾನೇನೋ ಮೆಹರ್ಬಾನಿ ಮಾಡಿದವಳ ತರಾ “ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ಅದರ ಜವಾಬ್ದಾರಿ ನನಗೆ ಬಿಡಿ. ನನಗೆ ಗೊತ್ತಿದ್ದವರನ್ನ ಹಿಡಿದು ಅದನ್ನ ಸಾಗಿಸುತ್ತೇನೆ” ಎನ್ನೋದು. ಸಾಗಿಸೋದು ಎಲ್ಲಿಗೆ ಅಂತ ಒಮ್ಮೆ ನಮ್ಮನ್ನ ಅವಳ ಮೊಮ್ಮಗನ ಬರ್ತ್ ಡೇ ಅಂತ ಕರೆದಾಗ ಗೊತ್ತಾಯತು. ಅದು ಅವಳ ಮನೆಯಲ್ಲಿತ್ತು. ಅದರ ಬಗ್ಗೆ ನನ್ನ ಮಡದಿ ಕೆಳಿದಾಗ ಏನೇನೋ ಬಣ್ಣದ ಮಾತು ಹೇಳಿದಳಂತೆ. “ಅದು ನಾನು ಅಂದುಕೊಂಡ ಹಾಗೆ ಅವನು ತೊಗೊಳ್ಳಿಲ್ಲಮ್ಮ. ಶಾನೆ ಕಷ್ಟ ಆಯ್ತು. ಅದಕ್ಕೆ ನಾನೇ ಇಟ್ಕೊಂಬಿಟ್ಟೆ. ನಿಮಗೆ ಬೇರೇ ಮಾತು ಕೊಟ್ಟಿದ್ದೆನಲ್ಲ!” ಅಂತ ಬಾಯಿ ಮುಚ್ಚಿಸಿದಳಂತೆ.
ಇದಕ್ಕು ಮುಂಚೆ ನಾವು ಹೈದರಾಬಾದಿನಲ್ಲಿದ್ದೆವು ಅದು ಸಹ ಮೆಟ್ರೋ ನಗರವೇ ಆಗಿದ್ದರೂ ಅಲ್ಲಿಯ ಕೆಲಸದವರು ಬೆಂಗಳೂರಿನಷ್ಟು ನಗರೀಕರಣಗೊಂದಿರಲಿಲ್ಲ. ಅಲ್ಲಿ ಈ ತರದ ಮತಲಬೀ ವರ್ತನೆಗಳು ಕಂಡು ಬಂದಿರಲಿಲ್ಲ. ಬೆಂಗಳೂರಷ್ಟೇ ಅಲ್ಲ, ಬೆಂಗಳೂರಿಗೆ ಸೇರಿದ ಸುತ್ತ ಮುತ್ತ ಹಳ್ಳಿಗಳಲ್ಲೂ ಸಹ ನಗರೀಕರಣದ ವಾತಾವರಣ ಹಬ್ಬಿದ್ದು, ಎದುರಿನ ಮನುಷ್ಯನನ್ನು ಕಿತ್ತು ತಿನ್ನುವ ಅಭ್ಯಾಸ ತುಂಬಾ ಬಂದು ಹೋಗಿದೆ. ಅದರಲ್ಲೂ ಅಪಾರ್ಟ್ಮೆಂಟುಗಳಲ್ಲಂತೂ ಇನ್ನೂ ಜಾಸ್ತಿ. ಇಷ್ಟೆಲ್ಲ ನಮ್ಮ ಹತ್ತಿರ ಕಿತ್ತುಕೊಳ್ಳುವ ದುರಾಸಯ ಜೊತೆಗೆ ಇವರೆಲ್ಲರೂ ಸರಕಾರ ಮುಫತ್ತಾಗಿ ಕೊಡುವ “ಭಾಗ್ಯ”ಗಳನ್ನ ಯಥೇಚ್ಛವಾಗಿ ಪಡೆದುಕೊಳ್ಳುತ್ತಾರೆ. ಡಬಲ್ ಧಮಾಕಾ!
ಚಂದಕಚರ್ಲ ರಮೇಶ ಬಾಬು
Nice reading pleasure to read … Gopinath Hubli
ಗಂಡ ಹೆಂಡಿ ಇಬ್ಬರೂ ಕೆಲಸಕ್ಕೆ ಹೋಗುವವರಿದ್ದರೆ ಕೆಲಸದವಳು ಹೇಳಿದ ಹಾಗೆ ಕೇಳ ಬೇಕಾಗುತ್ತದೆ.
ಚೆನ್ನಾಗಿದೆ
ಚಂದದ ನಗೆಬರಹ
ಸೊಗಸಾದ ತಿಳಿ ಹಾಸ್ಯ. ಓಡಿಸಿಕೊಂಡು ಹೋಯಿತು ಮತ್ತು ತುಟಿ ಅಂಚಿನಲ್ಲಿ ನಗು ಮೂಡಿಸಲು ನೆರವಾಯಿತು
Exemplary humour
Exe
Exemplary humour
ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ…ಇಂದಿನ ವಾಸ್ತವ ಯಥಾವತ್ತಾಗಿ ಮೂಡಿದೆ.
ಕೆ.ವಿ.ರಾಜಲಕ್ಷ್ಮಿ