ಶುಭಲಕ್ಷ್ಮಿ ನಾಯಕ ಅವರ ಕವಿತೆ-‘ಮರೆಯ ಬೇಡ ಅಸ್ಮಿತೆ’

ನದಿಯ ನೀರು ಹರಿದು ಹೋಗಿ
ಒಂದಾಗಿದೆ ಶರಧಿಯಲಿ
ತನ್ನತನವ ಬಿಟ್ಟು ಹೊರಟು
ಮಾಯವಾಗಿದೆ ಸಾಗರದಲಿ//

ದಡದ ತಿರುವು ಮುರುವಿನಲ್ಲಿ
ಸಿಕ್ಕು ನದಿಯ ಕಷ್ಟವು
ಹಸಿರು ಹುಲ್ಲು ಬದಿಗೆ ಇರಲು
ಇವಳಿಗೇನು ಲಾಭವು//

ಜುಳು ಜುಳನೆ ನಾದದಲ್ಲಿ
ಕರ್ಣಗಳಿಗೆ ಇಂಪಿದೆ
ಅದುವೆ ಇವಳು ನೋವಿನಲ್ಲಿ
ಕೂಗುವಂತೆ ಕಂಡಿದೆ//

ಸುತ್ತ ನೆರೆದ ಜನರಿಗೆಲ್ಲ
ನದಿಯೆ ಜೀವ ಜಾಲವು
ಇದರ ನೋವ ಪರಿವೆಯಿರದೆ
ಹಾಳು ಮಾಡೋ ವ್ಯೂಹವು//

ಮನುಜ ನಿನ್ನ ತನವ ನೀನು
ಕಳೆದು ಕೊಂಡರೇನಿದೆ
ಸಾಗರದ ಗರ್ಭವನ್ನು ಹೊಕ್ಕ
ನದಿಯ ಸತ್ವ ವೇನಿದೆ//

ಓಡಿ ಓಡಿ ಶರಧಿ ಸೇರೋ
ಭರದಿ ಮರೆತ ಅಸ್ಮಿತೆ
ದಿನವು ಹರಿದು ಹರಿದು ಹೋಗಿ
ಮಾಯವಾದ ಸ್ಪಷ್ಟತೆ//

ಬೇಡ ಬೇಡ ಮರೆಯಬೇಡ
ಜಗದಿ ನಿನ್ನ ಇರವನು
ಸರ್ವರೊಳಗೆ ಒಂದಾಗುತ
ತೋರು ನಿನ್ನ ಹರವನು//


Leave a Reply

Back To Top