ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಅಷ್ಟಾಂಗ ಯೋಗ.
ಇಡೀ ಜಗತ್ತಿಗೆ ಯೋಗದ ಪರಿಚಯವನ್ನು ಮಾಡಿದ, “ಯೋಗಹ ಚಿತ್ರ ವೃತ್ತಿ ನಿರೋಧಹ” ಎಂದು ಸಾರಿದ ಪತಂಜಲಿ ಮಹರ್ಷಿಯು…. ಯೋಗವು ಈ ಲೌಕಿಕ ಜಗತ್ತಿನ ಜಂಜಡ,ಚಿಂತೆ,ದುಃಖ,ಕ್ಲೇಶ, ನೋವುಗಳನ್ನು ನಿವಾರಿಸಿ ಸಚ್ಚಿದಾನಂದವನ್ನು ನೀಡುವ ಅಲೌಕಿಕತೆಯತ್ತ ಕರೆದೊಯ್ಯುವ ಕ್ರಿಯೆಯಾಗಿದೆ ಎಂದು ಸಾರಿದನು.
ಪತಂಜಲಿ ಮಹರ್ಷಿಯು ಯೋಗದ ಮಹತ್ವವನ್ನು ವಿವರಿಸುವ ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಷ್ಟಾಂಗ ಯೋಗ ಎಂಬ ಹೆಸರಿನ 8 ಭಾಗಗಳನ್ನಾಗಿ ವಿಭಾಗಿಸಿದನು.
ಈ ಎಂಟು ಶಾಖೆಗಳು ಶಾಸ್ತ್ರೀಯವಾಗಿದ್ದು ಈ ಎಂಟು ಹಂತಗಳನ್ನು ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಮನಃಶಾಂತಿ ಸ್ಥಿರವಾಗಿ ನೆಲೆಸುತ್ತದೆ. ಮನುಷ್ಯನ ಬಹಿರಂಗವನ್ನು ಶುದ್ಧಿಗೊಳಿಸುತ್ತಾ ಅಂತರಂಗದತ್ತ, ಬಹಿರ್ಮುಖತೆಯಿಂದ ಅಂತರ್ಮುಖತೆಯತ್ತ ಸಾಗುವ ಪಯಣವಾಗಿದೆ.
ಅಷ್ಟಾಂಗ ಯೋಗದ ಎಂಟು ಸೂತ್ರಗಳು
* ಯಮ( ಸಾಮಾಜಿಕ ಶಿಸ್ತು ಮತ್ತು ಬದ್ಧತೆ )
*ನಿಯಮ ( ವೈಯುಕ್ತಿಕ ಶಿಸ್ತು )
*ಆಸನ (ವಿವಿಧ ಭಂಗಿಗಳ ಅಭ್ಯಾಸ )
*ಪ್ರಾಣಾಯಾಮ (ಉಸಿರಾಟ ಕ್ರಿಯೆ)
*ಪ್ರತ್ಯಾಹಾರ ( ಹಿಂತೆಗೆದುಕೊಳ್ಳುವಿಕೆ)
*ಧಾರಣ ( ಏಕಾಗ್ರತೆ )
*ಧ್ಯಾನ ( ಮನಸ್ಸಿನ ಧ್ಯಾನಸ್ತ ಸ್ಥಿತಿ
* ಸಮಾಧಿ ( ಅಂತಿಮ ಸ್ಥಿತಿ)
ಅಷ್ಟಾಂಗ ಯೋಗದ ಮೊದಲನೆಯ ನಿಯಮವಾದ
ಯಮದಲ್ಲಿ….. ಸಾಮಾಜಿಕ ಶಿಸ್ತು ಮತ್ತು ಬದ್ಧತೆಯನ್ನು ಕಾಯ್ದುಕೊಳ್ಳಲು ಕೆಲ ಆರೋಗ್ಯಕರ ಸೂತ್ರಗಳನ್ನು ಪತಂಜಲಿಯು ರೂಪಿಸಿದ್ದಾನೆ ಅವುಗಳು ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ
– ಅಹಿಂಸೆ….. ಯಾರಿಗೂ ನೋವನ್ನು ಉಂಟುಮಾಡಬಾರದು. ಈ ಜಗತ್ತಿನ ಯಾವ ಚರಾಚರಗಳಿಗೂ ನಮ್ಮಿಂದ ನೋವು ಉಂಟಾಗಬಾರದು. ‘ಅಹಿಂಸಾ ಪರಮೋಧರ್ಮ’ ಎಂಬ ಗೀತೆಯ ನುಡಿಯನ್ನು ಕೇಳಿಲ್ಲವೇ… ಅದನ್ನು ಬದುಕಿನಲ್ಲಿ ಪಾಲಿಸಬೇಕು.
– ಸತ್ಯ…. ಮನುಷ್ಯ ಯಾವಾಗಲೂ ಸತ್ಯವನ್ನೇ ಮಾತನಾಡಬೇಕು. “ಸತ್ಯಂ ವಧ,ಧರ್ಮಂ ಚರ” ಎಂದು ಗೀತೆಯಲ್ಲಿ ಹೇಳಿರುವಂತೆ ಸತ್ಯವು ನಮ್ಮನ್ನು ಯಾವಾಗಲೂ ಕಾಯುತ್ತದೆ. ಆದ್ದರಿಂದಲೇ ನಮ್ಮ ರಾಷ್ಟ್ರೀಯ ಲಾಂಛನದಲ್ಲಿಯೂ ಕೂಡ “ಸತ್ಯಮೇವ ಜಯತೆ” ಎಂದು ಬರೆಯಲ್ಪಟ್ಟಿದೆ.
-ಆಸ್ತೇಯ…. ನಮ್ಮದಲ್ಲದ ಯಾವುದೇ ವಸ್ತು ವ್ಯಕ್ತಿ ಮತ್ತು ಹಣವನ್ನು ನಾವು ಮುಟ್ಟಬಾರದು ಪರರ ವಸ್ತು ಪಾಷಾಣಕ್ಕೆ ಸಮ. ಇದನ್ನೇ ಅಣ್ಣ ಬಸವಣ್ಣನವರು
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ ಛಲಬೇಕು ಶರಣಂಗೆ ಲಿಂಗ ಜಂಗಮ ಒಂದೇ ಎಂಬ ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ
ಎಂದು ಹೇಳಿದ್ದಾರೆ. ಮನುಷ್ಯನು ಪರಧನಾ ಪರಸ್ಥಿತಿ ಮತ್ತು ಪರದೇವತೆಗಳನ್ನು ಎಂದು ತನ್ನದಾಗಿಸಿಕೊಳ್ಳಲು ಪ್ರಯತ್ನಿಸಬಾರದು ಹಾಗೆ ಮಾಡಿದ್ದೇ ಆದರೆ ಅದು ಅಕ್ಷಮ್ಯ ಅಪರಾಧ.
-ಬ್ರಹ್ಮಚರ್ಯ….ಎನ್ನುವುದು ಒಂದು ಮನೋ ದೈಹಿಕ ಸ್ಥಿತಿ. ಕೆಸರಿನಲ್ಲಿರುವ ಕಮಲ ಹೇಗೆ ಕೆಸರನ್ನು ಅಂಟಿಸಿಕೊಳ್ಳುವುದಿಲ್ಲವೋ ಹಾಗೆ ಸಂಸಾರದಲ್ಲಿದ್ದು ಕೂಡ ಸ್ಥಿತಪ್ರಜ್ಞನಾಗಿ, ಮಾನಸಿಕ ನಿರ್ಲಿಪ್ತತೆಯನ್ನು ಹೊಂದಿರುವ ಅದ್ವಿತೀಯ ಕ್ರಿಯೆಯೇ ಬ್ರಹ್ಮಚರ್ಯ.
-ಅಪರಿಗ್ರಹ…. ಅವಶ್ಯಕತೆಗಿಂತ ಹೆಚ್ಚಿನದನ್ನು ಸಂಗ್ರಹಿಸದೆ ಇರುವುದು. ಮನೆಯಲ್ಲಾಗಲಿ ಮನಸ್ಸಿನಲ್ಲಾಗಲಿ ಅನವಶ್ಯಕ ವಸ್ತು ಮತ್ತು ವಿಷಯಗಳನ್ನು ಸಂಗ್ರಹಿಸಿ ಗೊಂದಲದ ಗೂಡನ್ನಾಗಿಸುವುದಕ್ಕಿಂತ ಅತ್ಯಂತ ಕಡಿಮೆ ವಸ್ತುಗಳ ಬಳಕೆಯನ್ನು ಮಾಡುವುದು ಮತ್ತು ಅನವಶ್ಯಕ ವಿಷಯಗಳನ್ನು ಕೈಬಿಡುವುದು ಹೆಚ್ಚು ಸೂಕ್ತ.
ಯೋಗದ 2ನೆಯ ಬಹುದೊಡ್ಡ ಸೂತ್ರ
ನಿಯಮವು……ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ ಎಂಬ 5 ಉಪಅಂಗಗಳನ್ನು ಹೊಂದಿದೆ.
– ಶೌಚವು…. ಮನಸ್ಸು ಮತ್ತು ದೇಹದ ಪರಿಶುದ್ಧತೆಯನ್ನು ಸೂಚಿಸುತ್ತದೆ. ನಿಗದಿತ ಸಮಯಗಳಲ್ಲಿ ಮಲಮೂತ್ರ ವಿಸರ್ಜನೆ ಮತ್ತು ಸ್ನಾನದ ಮೂಲಕ ದೈಹಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವ ನಾವು ಒಳ್ಳೆಯ ಆಚಾರ, ವಿಚಾರ ಮತ್ತು ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಶೌಚವು ಸೂಚಿಸುತ್ತದೆ.
– ಸಂತೋಷ ಅಥವಾ ಸಂತೃಪ್ತಿ…… ಇರುವುದನ್ನು ಇರುವ ಹಾಗೆಯೇ ತೃಪ್ತಿಯಿಂದ ಒಪ್ಪಿ ಅಪ್ಪಿಕೊಳ್ಳುವ ಮನಸ್ಥಿತಿಗೆ ಸಂತೋಷ ಮತ್ತು ಸಂತೃಪ್ತಿ ಇರುತ್ತದೆ. ಪ್ರಯತ್ನಪೂರ್ವಕವಾಗಿ ನಮ್ಮ ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು
– ತಪಸ್…. ಹೆಸರೇ ಹೇಳುವಂತೆ ತಪಸ್ ಎನ್ನುವುದು ನಿರಂತರ ಸಾಧನೆ… ನಿರಂತರ ಸಾಧನೆಯು ನಮಗೆ ಅದ್ಭುತ ಆರೋಗ್ಯ ದೇಹ ಧೈರ್ಯ ಜಾಣ್ಮೆ ಮತ್ತು ವ್ಯಕ್ತಿತ್ವವನ್ನು ತಂದುಕೊಟ್ಟು ನಮ್ಮ ವ್ಯಕ್ತಿತ್ವವನ್ನು ಕುಸುಮದಂತೆ ವಿಕಸಿತಗೊಳಿಸುವುದು.
-ಸ್ವಾಧ್ಯಾಯ…. ಎಂದರೆ ತನ್ನನ್ನು ತಾನು ಅರಿತುಕೊಳ್ಳುವುದು. ಎಲ್ಲರ ಬಗ್ಗೆಯೂ ಅಭಿಪ್ರಾಯಗಳನ್ನು ಹೊಂದುವ ನಾವು ನಮ್ಮ ವೈಯುಕ್ತಿಕ ತಪ್ಪು ಸರಿ ಒಳಿತು ಕೆಡುಕುಗಳ ಕುರಿತು ಅರಿವನ್ನು ಹೊಂದುವ ಕ್ರಿಯೆ. “ನಿನ್ನರಿವೇ ನಿನಗೆ ಗುರು” ಎಂದು ಹೇಳಿರುವುದು ಈ ಕಾರಣಕ್ಕೆ.
-ಈಶ್ವರ ಪ್ರಣಿಧಾನ…. ದೇವನೊಬ್ಬನಿರುವ ಅವನೆಲ್ಲವನ್ನು ಕಾಯುವ ಎಂಬ ಭಕ್ತಿ, ಶ್ರದ್ಧೆಯನ್ನು ಹೊಂದಿದ್ದು, ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
3.ಅಷ್ಟಾಂಗ ಯೋಗದ ಮೂರನೆಯ ಸೂತ್ರ ಆಸನ…..
ವಿವಿಧ ಬಗೆಯ ಭಂಗಿಗಳನ್ನು ಉಸಿರಾಟದ ಏರಿಳಿತಗಳೊಂದಿಗೆ ಅಭ್ಯಾಸ ಮಾಡುವ ಮೂಲಕ ದೈಹಿಕ ನೋವುಗಳನ್ನು ಹಿಮ್ಮೆಟ್ಟಿಸಿ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.
‘ ಸ್ಥಿರಂ ಸುಖಂ ಆಸನಂ’ ಎಂಬ ಮಾತನ್ನು ಕಡ್ಡಾಯವಾಗಿ ಪಾಲಿಸಬೇಕು. ಆಸನಾಭ್ಯಾಸವನ್ನು ಪ್ರಾರಂಭಿಸುವ ಮುನ್ನ
ಮೊದಲು ಸ್ಥೂಲ ವ್ಯಾಯಾಮಗಳನ್ನು ಅಭ್ಯಾಸ ಮಾಡಿ ನಂತರ ಕ್ಲಿಷ್ಟಕರ ಭಂಗಿಗಳನ್ನು ನಿಂತು ಕುಳಿತು ಮಲಗಿ ಮತ್ತು ಹೊಟ್ಟೆ ಅಡಿ ಮೇಲಾಗಿಸಿ ಮಾಡುವ ವಿವಿಧ ವ್ಯಾಯಾಮಗಳನ್ನು ಅಭ್ಯಸಿಸಿ ಕೊನೆಯದಾಗಿ ಶವಾಸನ ಸ್ಥಿತಿಯಲ್ಲಿ ಮಲಗಿ ಕಣ್ಣು ಮುಚ್ಚಿ ಅ ಕಾರ, ಉಕಾರ,ಮ ಕಾರ ಮತ್ತು ಓಂಕಾರವನ್ನು ಕ್ರಮವಾಗಿ 3 -3 ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ಉಚ್ಚರಿಸುತ್ತಾ ನಾದಾನುಸಂಧಾನವನ್ನು ಮಾಡಬೇಕು. ಶವಾಸನವು ಯೋಗಾಭ್ಯಾಸದ ಅಂತಿಮವಾದ ವಿಶ್ರಾಂತ ಸ್ಥಿತಿಯಾಗಿದ್ದು ನಂತರ ಕಣ್ಣನ್ನು ಮುಚ್ಚಿದ ಸ್ಥಿತಿಯಲ್ಲಿಯೇ ಬಲಗಡೆ ಹೊರಳಿ ಎಡಗಾಲನ್ನು ಮಡಚಿ ಎದ್ದು ಕುಳಿತುಕೊಳ್ಳಬೇಕು. ನಂತರ ಎರಡು ಕೈಗಳನ್ನು ಎದೆಯ ಮುಂದೆ ಅಂಜಲಿ ಮುದ್ರೆಯಲ್ಲಿ ಜೋಡಿಸಿ ಶಾಂತಿ ಮಂತ್ರವನ್ನು ಪಠಿಸಬೇಕು. ಈಗ ಎರಡು ಕೈಗಳನ್ನು ಜೋರಾಗಿ ಒಂದನ್ನೊಂದು ಉಜ್ಜಿ ಅದರ ಶಾಖವನ್ನು ಕಣ್ಣುಗಳಿಗೆ ಮತ್ತು ಇಡೀ ಮುಖವನ್ನು ಸವರುವ ಮೂಲಕ ಪ್ರಸರಿಸಬೇಕು. ನಿಧಾನವಾಗಿ ಎರಡು ಕೈಗಳನ್ನು ಎದೆಯ ಮುಂದೆ ಅಂಗೈ ಮೇಲ್ಮುಖವಾಗಿ ಕಮಲದಂತೆ ಬಿಡಿಸಿ ಹಿಡಿದುಕೊಂಡು ‘ಕರಾಗ್ರೇ ವಸತೇ ಲಕ್ಷ್ಮಿ’ ಮಂತ್ರವನ್ನು ಪಠಿಸುತ್ತಾ ಎರಡು ಕಣ್ಣುಗಳನ್ನು ನಿಧಾನವಾಗಿ ಪಿಳಿಕುಸುತ್ತಾ ತೆರೆದು ಅಂಗೈಗಳನ್ನು ದೃಷ್ಟಿಸಬೇಕು.
4.ಪ್ರಾಣಾಯಾಮ…… ಉಸಿರನ್ನು ಮೂಗಿನ ಹೊರಳೆಗಳ ಮೂಲಕ ದೀರ್ಘವಾಗಿ ಒಳಗೆ ತೆಗೆದುಕೊಳ್ಳುವ ಮತ್ತು ಹೊರಬಿಡುವ ಕ್ರಿಯೆ ಪ್ರಾಣಾಯಾಮ. ಇದರಲ್ಲಿ ಹಲವಾರು ಪ್ರಾಣಾಯಾಮ ಕ್ರಿಯೆಗಳಿದ್ದು ಬಸ್ತ್ರಿಕ, ಕಪಾಲಭಾತಿ, ಅನುಲೋಮ ವಿಲೋಮ ಪ್ರಾಣಾಯಾಮ ಮತ್ತು ಭ್ರಮರಿ ಪ್ರಾಣಾಯಾಮಗಳು ಸರ್ವಕಾಲಕ್ಕೂ ಸೂಕ್ತವಾದ ಪ್ರಾಣಾಯಾಮದ ಅಭ್ಯಾಸಗಳಾಗಿದ್ದು ಶೀತಲಿ ಮತ್ತು ಶೀತ್ಕಾರಿ ಎಂಬ ಪ್ರಾಣಾಯಾಮಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಅಭ್ಯಸಿಸಬೇಕು.
5. ಪ್ರತ್ಯಾಹಾರ….. ಪ್ರತ್ಯಾಹಾರವೂ ಪತಂಜಲಿಯ ಯೋಗ ಸೂತ್ರದ ಐದನೇ ಹಂತವಾಗಿದ್ದು ಮೊದಲ ನಾಲ್ಕು ಹಂತಗಳನ್ನು ದಾಟಿ ಬಂದ ವ್ಯಕ್ತಿಯು ಒಂದು ಮಟ್ಟದ ನಿರ್ಲಿಪ್ತಿಯನ್ನು ಸಾಧಿಸಿದ್ದು ಧ್ಯಾನ ಮತ್ತು ಸಮಾಧಿಯ ಮೊದಲ ಮೆಟ್ಟಿಲಾಗಿ ಪ್ರತ್ಯಾಹಾರವನ್ನು ಗುರುತಿಸಲಾಗುತ್ತದೆ. ಈ ಹಂತದಲ್ಲಿ ವ್ಯಕ್ತಿಯು ತನ್ನೆಲ್ಲಾ ಮೂಲಭೂತ ಅವಶ್ಯಕತೆಗಳನ್ನು, ಇಂದ್ರಿಯಕ್ಕೆ ಸಂಬಂಧಪಟ್ಟ ಉದ್ದೇಶಗಳನ್ನು, ಹೊರ ಪ್ರಪಂಚದ ಸಾಂಸಾರಿಕ ಸೆಳೆತಗಳಿಂದ ವಿಮುಖನಾಗಿ, ಸಂಸಾರದಲ್ಲಿದ್ದು ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಂಡು ಹೋಗುತ್ತಾನೆ.
ಒಂದರ್ಥದಲ್ಲಿ ಬಾಹ್ಯ ಪ್ರಪಂಚ ತೋರುವ ಆಸೆ ಆಮಿಷಗಳನ್ನು ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸುವುದನ್ನು ಪ್ರತ್ಯಾಹಾರ ಎಂದು ಹೇಳಬಹುದು.
ಪ್ರತ್ಯಾಹಾರದಲ್ಲಿ
*ಇಂದ್ರಿಯ ಪ್ರತ್ಯಾಹಾರ( ಪಂಚೇಂದ್ರಿಯಗಳ ಮೇಲೆ ಹಿಡಿತ ಸಾಧಿಸುವುದು)
*ಪ್ರಾಣ ಪ್ರತ್ಯಾಹಾರ( ಪ್ರಾಣಶಕ್ತಿ ಮತ್ತು ಉಸಿರಾಟದ ಮೇಲೆ ನಿಯಂತ್ರಣ ಹೊಂದುವುದು )
* ಕರ್ಮ ಪ್ರತ್ಯಾಹಾರ (ಸ್ವಾರ್ಥಪರ ಆಲೋಚನೆಗಳ ಬಿಟ್ಟು ಲೋಕ ಹಿತಕ್ಕಾಗಿ ದುಡಿಯುವುದು )
*ಮನೋ ಪ್ರತ್ಯಾಹಾರ (ಮನಸ್ಸು ಮತ್ತು ಆತ್ಮದ ಆಂತರಿಕ ಅರ್ಥವನ್ನು ನಿಯಂತ್ರಿಸಲು ಮತ್ತು ಸಮತೋಲನ ಗಳಿಸಲು) ಎಂಬ ನಾಲ್ಕು ವಿಧಗಳಿದ್ದು
ಪ್ರತ್ಯಾಹಾರದ ಮೂಲಕ ಎಲ್ಲ ನಕಾರಾತ್ಮಕ ಭಾವನೆಗಳು ಇಂದ್ರಿಯ ಪ್ರಚೋದನೆಗಳನ್ನು ನಿಯಂತ್ರಿಸಿ ಸಹಿಷ್ಣುತೆಯನ್ನು ಅಭಿವೃದ್ಧಿಪಡಿಸುವ ಕ್ರಿಯೆ ಪ್ರತ್ಯಾಹಾರದ್ದಾಗಿದೆ.
6.ಧಾರಣ…. ಯೋಗದ ಮೊದಲ ಐದು ಸೂತ್ರಗಳನ್ನು ಸತತವಾಗಿ ಅಭ್ಯಸಿಸುತ್ತಾ ತನ್ನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸ್ಥಿತಿಯನ್ನು ಧಾರಣ ಎಂದು ಕರೆಯುತ್ತಾರೆ.ಧಾರಣ ಎಂದರೆ ತಾಳಿಕೊಳ್ಳುವ, ತಡೆದುಕೊಳ್ಳುವ ಎಂಬ ಅರ್ಥವಿದ್ದು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಅಚಲ ಬಂಡೆಯಂತೆ ತನ್ನನ್ನು ತಾನು ಸಂಭಾಳಿಸಿಕೊಳ್ಳುವ ಶಕ್ತಿಯನ್ನು ಮನುಷ್ಯ ಪಡೆಯುತ್ತಾನೆ. ಇದು ಆತನ ಧಾರಣ ಶಕ್ತಿ.
7.ಧ್ಯಾನ…. ಶಾಂತವಾದ ಮತ್ತು ಒಳ್ಳೆಯ ಗಾಳಿ ಬೆಳಕು ಇರುವ ಸ್ಥಳದಲ್ಲಿ ಸುಖಾಸನ ಇಲ್ಲವೇ ಪದ್ಮಾಸನದಲ್ಲಿ ಕುಳಿತು ಎರಡು ಅಂಗೈಗಳನ್ನು ಒಂದರ ಮೇಲೊಂದರಂತೆ ಇಟ್ಟು ಕಣ್ಣು ಮುಚ್ಚಿ ಮನಸ್ಸಿನಲ್ಲಿ ಬರುವ ವಿಚಾರಗಳನ್ನು ತಡೆ ಹಿಡಿಯದೆ, ಅವುಗಳು ತಂದೊಡ್ಡುವ ಗೊಂದಲಗಳಿಗೆ ಪ್ರತಿಕ್ರಿಯಿಸದೆ ನೀರು ಹರಿದು ಹೋಗುವಂತೆ ವಿಚಾರ ಲಹರಿಯನ್ನು ಹರಿಯಲು ಬಿಟ್ಟು ತನ್ನ ಪಾಡಿಗೆ ತಾನು ಸ್ಥಿತ ಪ್ರಜ್ಞನಾಗಿ ಕುಳಿತುಕೊಳ್ಳುವ ಭಂಗಿಯನ್ನು ಧ್ಯಾನಸ್ತ ಸ್ಥಿತಿ ಎಂದು ಹೇಳಬಹುದು. ಕಲ್ಲೆಸೆದು ತರಂಗಗಳನ್ನು ಎಬ್ಬಿಸಿದ ಕೆರೆಯಲ್ಲಿ ನಿಧಾನವಾಗಿ ಅಲೆಗಳು ಮೂಡಿ ನಂತರ ಶಾಂತವಾಗುವ ರೀತಿಯಲ್ಲಿ ಮನದ ಎಲ್ಲ ವಿಚಾರಗಳು ಒಂದು ಹಂತದಲ್ಲಿ ನಿಂತು ಹೋಗಿ ಮನುಷ್ಯ ಅನಿರ್ವಚನೀಯ ಆನಂದದ ಅನುಭವವನ್ನು ಪಡೆಯುತ್ತಾನೆ.
8.ಸಮಾಧಿ…. ಪತಂಜಲಿಯ ಯೋಗ ಸೂತ್ರದ ಅಂತಿಮವಾದ ಈ ಸ್ಥಿತಿಯನ್ನು ಅತ್ಯಂತ ಆನಂದಮಯ ಸ್ಥಿತಿಯೆಂದು ಗುರುತಿಸಿದ್ದು ಜ್ಞಾನೋದಯದ ಸಂತೃಪ್ತಿ ಮಿಳಿತಗೊಂಡ ಈ ಸ್ಥಿತಿಯಲ್ಲಿ ಮನುಷ್ಯ ಆತ್ಮ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ. ಆಂತರಿಕ ಪ್ರಜ್ಞೆಯು ಆಳವಾದ ನಿಶ್ಚಲತೆ ಮತ್ತು ಮೌನದಲ್ಲಿ ಮುಳುಗುತ್ತದೆ. ಲೌಕಿಕ ಜೀವನದ ಅಂತಿಮ ಹಂತ ಸಮಾಧಿ ಸ್ಥಿತಿಯಾದರೆ ಆಧ್ಯಾತ್ಮಿಕತೆಗೆ ಮೊದಲ ಮೆಟ್ಟಿಲು ಕೂಡ ಸಮಾಧಿಯೇ ಆಗಿದೆ.
ಪತಂಜಲಿಯ ಈ ಎಂಟು ಸೂತ್ರಗಳನ್ನು ಸರಿಯಾಗಿ ಪಾಲಿಸಿದ ವ್ಯಕ್ತಿ ಮಹಾ ಸಾಧಕನಾಗುತ್ತಾನೆ, ಜ್ಞಾನಿಯಾಗುತ್ತಾನೆ. ಜಿತೇಂದ್ರಿಯನಾಗುತ್ತಾನೆ.
ಸಾವಿರಾರು ವರ್ಷಗಳ ಹಿಂದೆಯೇ ತನ್ನ ಯೋಗ ಸೂತ್ರಗಳ ಮೂಲಕ ನಮಗೆ ಬದುಕಿನ ದಾರಿಯನ್ನು ತೋರಿದ ಯೋಗ ಪಿತಾಮಹ ಪತಂಜಲಿ ಮಹರ್ಷಿಗೆ
ಶಿರಬಾಗಿ ನಮಿಸುವ
ವೀಣಾ ಹೇಮಂತ್ ಗೌಡ ಪಾಟೀಲ್
.
Good information