ಕಾವ್ಯ ಸಂಗಾತಿ
ಇಂದಿರಾ ಕೆ
ಕವಿತೆ
ಪ್ರೀತಿ ಹೊಂಬೆಳಕು ನನ್ನಲ್ಲಿಹೊಮ್ಮಿಸಿ ಅನುರಾಗದಿ ಜೊತೆ ಸಾಗುವ ಬೆಳದಿಂಗಳು ನೀನಾದೆ…
ಆಂತರ್ಯದಿ ಅದುಮಿಟ್ಟ ಭಾವಗಳನ್ನು ಅನಾವರಣಗೊಳಿಸುವ ಒಲವಿನಂಗಳ ನೀನಾದೆ…
ಹುನ್ನಾರದ ಹೊಗಳಿಕೆ ಪದಗಳಿಗೆ ಶೋಭೆ ಲಜ್ಜೆಯ ಮುಸುಕು ನೀನಾದೆ…
ಮುತ್ತಿನ ಮಳೆಗೈದು ತನುವೆಲ್ಲ ಮೀಯುತ್ತಿರೆ ಸೊಗಸಿನ ಥಳುಕು ನೀನಾದೆ…
ಬೆಸೆದ ಮನಸುಗಳ ಪ್ರೀತಿ ಹೊಯ್ದಾಟದಿ ಖುಷಿಯ ಖಜಾನೆ ನೀನಾದೆ…
ಮೌನದಿ ನನ್ನೆದೆಯ ತರಂಗಗಳ ಮೀಟಿ ಬದುಕಿಗೆ ನಮೂನೆ ನೀನಾದೆ…
ಕಣ್ ಸನ್ನೆಯಲೇ ಸರಿದು ಸಂಕೋಚ ನೂರಾರು ಭಾವಗಳ ವಿನಿಮಯ…
ಮನ ಸಮ್ಮಿಲನ ಸಮ್ಮೋಹನ ನಳನಳಿಸಿ ನಲಿವಿನ ಉಮೇದು ನೀನಾದೆ …
ಪ್ರತಿಕಕ್ಷಣವು ಜತನದಿ ಪ್ರೇಮಸುಧೆಯ ಸುರಿಸುತ
ಒಲವ ತುಂಬಿದ ಬಾಳ ಪಯಣದಿ ಇಂದಿರಾಳ ಇನಿಯ ನೀನಾದೆ…
ಇಂದಿರಾ.ಕೆ –