ಜಾರ್ಜ್ ಹರ್ಬರ್ಟ್ ಅವರ ಇಂಗ್ಲೀಷ್ ಕವಿತೆಯ ಕನ್ನಡಾನುವಾದ-ವಂದಗದ್ದೆ ಗಣೇಶ್

ಮನುಜನನು ಮೊದಲು ಸೃಷ್ಟಿಸಿದ ದೇವನು
ತನ್ನ ಕುಡಿಕೆಯಲಿರುವ ಕಾಣಿಕೆಗಳನೆಲ್ಲವನು
ಒಂದಾದ ಮೇಲೊಂದಂತೆ ನೀಡುತ್ತಲವಗೆ
ತನ್ನೆಲ್ಲ ಸಿರಿಗಳನ್ನು ಕೊಡಲವನು ಮುಂದಾದ

ಮೊದಲಿಗೆ ಹರಿಯಿತು ಶಕ್ತಿಯ ಮೂಲವದು
ನಂತರದ ಸ್ಥಾನವದು ಚೆಲುವಿನ ಪಾಲಾಯಿತು
ಜ್ಞಾನ, ಗೌರವ, ಸುಖ, ಸಂತೋಷಗಳು ಹರಿದು
ಕೊನೆಯ ಮಾಣಿಕ್ಯವುಳಿಯಿತು ಕುಡಿಕೆಯ ತಳದಲ್ಲಿ
ಅದುವೆ ಮನ:ಶಾಂತಿಯೆಂಬ ಅಮೂಲ್ಯ ರತ್ನ

ಆ ಮಾಣಿಕ್ಯವನೂ ನಾ ಮನುಜಗೆ ನೀಡಿದರೆ
ತನ್ನ ತಾ ಮರೆಯುತ ನನ್ನನೂ ಮರೆಯುವನು
ಎನಗೆ ಬದಲಾಗಿ ಎನ್ನ ಸಿರಿಗಳನು ಪೂಜಿಸುತ
ಮಾನವನಾಗುವ ಬದಲು ದಾನವನಾಗುವನು
ಕಳೆದುಕೊಳ್ಳುವೆವಾಗ ನಾವು ಒಬ್ಬೊರನೊಬ್ಬರು

ಅದಕೀಗ ನೀಡುವೆನು ಈ ಭವ್ಯ ಕಾಣಿಕೆಯ
ಆ ಶಾಂತಿಯೊಳಗೆ ಈ ಅಶಾಂತಿಯನ್ನೂ ತುರುಕಿ
ಅರಿಯುವನು ಆಗ ಶಾಂತಿಯಾ ಮೌಲ್ಯವನು
ಸಂತಸದ ಸಮಯದಿ ನೆನೆಯದಿದ್ದರೂ ನನ್ನ
ಸಂಕಟದ ಸಮಯದಲ್ಲಿ ಹಾರಿಬರುವ ನನ್ನೆಡೆಗೆ


Leave a Reply

Back To Top