ಬಾಲ್ಯದ ನೆನಪುಗಳನ್ನು ಯಾರು ತಾನೇ ಅಷ್ಟು ಸುಲಭವಾಗಿ ಮರೆಯುವರು?..ನಾವು ಕಂಡ ಬಾಲ್ಯದ ಘಟನೆಗಳು ನಮಗೆ ಉತ್ಸಾಹ ನೀಡಿದರೆ, ನಮ್ಮ ಹಿರಿಯರು ಕಂಡ ಬಾಲ್ಯದ ಜೀವನದ ದಿವ್ಯಾನುಭವ ಕೇಳಿದರೆ ಹೀಗೂ ಇತ್ತಾ? ಅದೆಲ್ಲ‌ ನಿಜವಿರಬಹುದಾ? ಅಥವಾ ಕಟ್ಟುಕಥೆಯಾ? ಎಂಬೆಲ್ಲ ಅಂಶಗಳು ನಮ್ಮ ಕಾಡದಿರದು.ಯಾಕೆಂದರೆ ನಾವಿಲ್ಲದ ಸಮಯವದು.ಸಾಕ್ಷಿಕರಿಸುವ ದಿನಗಳು ಅವು ಆಗಿರಲಿಲ್ಲ,ತಂತ್ರಜ್ಞಾನ ಇಷ್ಟು ಬೆಳೆದಿರಲಿಲ್ಲ.ಪೋಟೋ ಕೂಡಿ ಹಾಕಿದವರೆ ಒಂದಿಷ್ಟು ಮಾಹಿತಿ ಲಭಿಸಲು ಸಾಧ್ಯವಾಗಿದೆ.ಹೀಗೆಲ್ಲ ಯೋಚಿಸುವಾಗ,ಬಾಲ್ಯದ ದಿನಗಳು ಒಬ್ಬರಿಗೆ ಸಿಹಿಯಾದರೆ, ಇನ್ನೊಬ್ಬರಿಗೆ ಕಹಿಯಾಗಿರಬಹುದು.ಆಗಿನ ವಸ್ತು ಸ್ಥಿತಿ ಒಂದಹೊತ್ತು ಹೊಟ್ಟೆ ತುಂಬ ತುತ್ತು ಸಿಕ್ಕರೆ ಸಾಕೆಂದು ಮಗ್ಗಲು ಬದಲಿಸಿದವರಿದ್ದಾರೆ!.
ಆಗೆಲ್ಲ ಜೀವನ ಸಾಗಿಸುವುದೇ ಒಂದು ಸವಾಲಾಗಿತ್ತು. ಹೊಲಗದ್ದೆಗಳಿದ್ದರೂ,ಬೀಜ ಬಿತ್ತಿ ಬೆಳೆತಗೆಯೊತನಕ ಅದರ ಎರಡರಷ್ಟು ಖರ್ಚಾಗುತ್ತಿತ್ರು..ಉಳ್ಳವರ ಹೊಲಗಳು ನೀರಾವರಿಯಿಂದ ನಳನಳಿಸಿದರೆ,ಬಡವನ ಹೊಲ ಮಳೆಯನ್ನೇ ನಂಬಿ ಬದುಕು ಸಾಗಿಸುವಷ್ಟು ಮಟ್ಟಿಗೆ ನರಕ ಸದೃಶ.

ಇನ್ನೂ ಶಿಕ್ಷಣಕ್ಕೆ ಮಹತ್ವ ಅಷ್ಟಾಗಿ ಇವರಲ್ಲಿ ಆಸಕ್ತಿದಾಯಕ ವಿಷಯವಾಗಿರಲಿಲ್ಲ,ಶಾಲೆಯೆಂಬ ಕನಸು ಉಳ್ಳವರ ಪಾಲಾಗಿತ್ತು. ಹೊಲ,ರಟ್ಟೆಯನ್ನು ನಂಬಿ ಇಡೀ ದಿನ ಬಿಸಿಲ ಬರೆಗೆ ತುತ್ತಾದ ಅದೆಷ್ಟೋ ಜೀವಗಳು ಶಾಲೆಯಿಂದ ದೂರ ಉಳಿಯುವಂತಾಗಿತ್ತು.ಆಗಿನ ಶಾಲೆಗಳ ಆರಂಭ ಹಿಂದಿನ ಗುರುಕುಲ ಪದ್ದತಿಯಂತೆ ಇತ್ತೆಂದರೆ ತಪ್ಪಾಗದು.ಅವನ ಕುಟುಂಬಕ್ಕೊಂದು ಆಸರೆ ಮತ್ತು ಊರಿನವರು ಪಟ್ಟಿಯೆತ್ತಿ ಮಾಸ್ತರ್ ಗೆ ಸಂಬಳ ನೀಡಬೇಕಿತ್ತು.ಅಂತಹ ಸಮಯದಲ್ಲಿಶಾಲೆ ಆರಂಭವಾಗುವುದು” ದೇವಸ್ಥಾನ” ಅಥವಾ ಮರದ ಕೆಳಗೆ,ಊರ ಹಿರಿಯರ ಮನೆ ಜಗಲಿ ಮೇಲೆ “ಮಾಸ್ತರ್” ನೀಡುವ ಶಿಕ್ಷಣ ಮಕ್ಕಳ ಪಾಲಿಗೆ ದೇವರು ವರಕೊಟ್ಟಂತೆ!.ಮನೆ ಮನೆಗೆ ಹೋಗಿ ಮಕ್ಕಳನ್ನು ಕರೆತಂದು ಪಾಠ ಮಾಡುವ ನಿಷ್ಠೆಯಿಂದ ತಮ್ಮ ವೃತ್ತಿಬದುಕನ್ನು ಅನುಭವಿಸಿದವರು ಅವಿಸ್ಮರಣೀಯರು.ಪಾಲಕರೊಂದಿಗೆ ಕೆಲಸಕ್ಕೆ ತೆರಳಿದ ಮಕ್ಕಳನ್ನು ಅಲ್ಲಿಂದ ಕರೆತರುತ್ತಿದ್ದ ಸಮಯದಲ್ಲಿ ಅದೆಷ್ಟು ಪಾಲಕರು ಗುರುಗಳನ್ನು ಬಾಯಿಗೆ ಬಂದಂತೆ ನಿಂದಿಸಿರಬಹುದು ಅಥವಾ ಸ್ಪಂದಿಸಿರಬಹುದು;ಕಷ್ಟವಾದರೂ ಜೀವನ ಸಾಗಿಸುವುದು ಅನಿವಾರ್ಯವಾಗಿತ್ತು

“ಬಡತನ ಎಂಬ ದಿವ್ಯ ಮಂತ್ರಕ್ಕೆ ಬಡವನ ಎದೆಯಿಂದ ಕಷ್ಟಗಳ ಮಾವಿನಕಾಯಿ ಉದುರಲೇ ಬೇಕು”!. ಎಷ್ಟು ಸಾಧ್ಯವೋ ಅಷ್ಟು ದುಡಿದು ಬೆವರು ಸುರಿಸಿ ತಿನ್ನುವ ತಂಗಳನ್ನವೇ ಮೃಷ್ಟಾನ್ ಭೋಜನ! ಗುಡಿಸಲಲ್ಲಿ ಚಿಮುಣಿ ಬುಡ್ಡಿಯಲ್ಲಿ ಏಳು ಗಂಟೆಯೊಳಗೆ ಊಟ ಮುಗಿಸಿ, ಚಾಪೆಯಲ್ಲಿ ಒರಗಿದರೆ ಮುಗಿತು,ಬೆಳಗಾದಮೇಲೆ ಗುಡಿಸಲಿಗೊಂದು ಸೂರ್ಯನ ಆಗಮನವಾದಂತೆ.ಕರಿ ಇದ್ದಿಲನ್ನು ಉಪ್ಪು ಹಾಕಿ ಜಜ್ಜಿ ಹಲ್ಲಿಗಚ್ಚಿ ಉಜ್ಜಿದರೆ ಹಲ್ಲು ಫಳಫಳ! ಅದು ಸಾಲದೇ ಬೇವಿನ ಕಡ್ಡಿಯನ್ನು ಹಲ್ಲಲ್ಲಿ‌ ಹಾಕಿ ಜಗಿಯುತ್ತ,ಅದನ್ನೇ ಬ್ರಶ್ ತರ ಉಪಯೋಗಿಸಿದ ನೆನಪುಗಳನ್ನು ಮೆಲಕು ಹಾಕಿದರೆ ಅದೆಂತಹುದೋ ಸುಖ!,ಅವರೆಲ್ಲ ಹೀಗೆಲ್ಲ ಬದುಕುತ್ತಿದ್ದರು ಎಂದರೆ ನಮ್ಮ ಮಕ್ಕಳಿಗೆ  ಹೇಳಿದರೆ ಅದನ್ನು ಹೌದಾ? ವಾವ್! ಅನ್ನಬಹುದು ಅಷ್ಟೇ!

ಇನ್ನೂ ಊರಿನ ಕೆರೆದಂಡೆಯ ಅಕ್ಕ ಪಕ್ಕ ಹೈಕುಗಳು ತಮ್ಮ ಅಗತ್ಯತೆಗಳನ್ನು ಪೂರೈಸಿ ಕೈಯಲ್ಲಿ ಖಾಲಿ ಚಂಬನ್ನು ಹಿಡಿದು ಬರುವ ದೃಶ್ಯ ಅಸಹ್ಯವಾದರೂ ವಾಸ್ತವ! ಇದಕ್ಕೆಲ್ಲ ಕಾರಣ, ಶೌಚಾಲಯ ಬಳಸದಿರುವುದು.ಬಯಲು ಶೌಚಾಲಯ ನಿರ್ಭಂದ ವಿಧಿಸಿದರೂ ಇನ್ನೂ ಹಳ್ಳಿಗಳಲ್ಲಿ ಬಹುಪಾಲು ಜನರು ಹೊಲಗದ್ದೆ,ರಸ್ತೆ ಅಂಚು ಬಳಸುತ್ತಿರುವುದು ಶೋಚನೀಯ!. ಬಯಲು ಶೌಚ ” ನಮ್ಮ ಹಕ್ಕು” ಎನ್ನುವಂತೆ  ನಡೆದುಕೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯ.ಪ್ರತಿ ಮನೆಯಲ್ಲಿ  “ಶೌಚಾಲಯ” ಕಟ್ಟಿಸಿದರೂ ಅದನ್ನು ಬಳಸುವ ಗೋಜಿಗೆ ಹೋಗದೆ ಇರುವ ಕುಟುಂಬಗಳು ಇನ್ನೂ ಹಳ್ಳಿಗಳಲ್ಲಿ ಜೀವಂತ!.

ಪಟ್ಟಣದಿಂದ ಹಳ್ಳಿಗೆ ಹೋದವರು,ಬಯಲು ಶೌಚಾಲಯಕ್ಕೆ ಒಪ್ಪುವುದಿಲ್ಲ.”ಶೌಚಾಲಯ ಇಲ್ಲದ ಮನೆಗೆ ಹೆಣ್ಣನ್ನು ಕೊಡುವುದಿಲ್ಲ”
ಎನ್ನುವ ಘೋಷಣೆ ಪ್ರತಿ ಮನೆಯಲ್ಲಿ ಮೊಳಗಬೇಕು.ಒಲೆಯಲ್ಲಿ ಹೊತ್ತಿದ ಕಟ್ಟಿಗೆಯನ್ನು ಒಳಸರಿಸುತ್ತ,ಕಾದ ಹಂಚಿನ ಮೇಲೆ ಕೊಮ್ಮನಗಿಯಲ್ಲಿ  ತಟ್ಟಿದ ಜೋಳದ ರೊಟ್ಟಿ ಬೇಯಿಸಿ ತಿನ್ನುವ ಗಳಿಗೆ ಈಗಲೂ ಅಲ್ಲಲ್ಲಿ ಕಂಡು ಬರುತ್ತದೆ.ಒಲೆಯಲ್ಲಿ ಬೇಯಿಸಿದ ಅಡಿಗೆ ಅಮೃತಕ್ಕೆ ಸಮ!.ಆದರೆ ಆ ಸೊಗಡಿನ ಸುಗಂಧ ಅನುಭವಿಸುವ ಭಾಗ್ಯ ಇಲ್ಲವೆಂದರೆ ತಪ್ಪಾಗದು..ರೊಟ್ಟಿ ತಟ್ಟುವ ಬದಲು ಲಟ್ಟಿಸುವ ಕಾಲಕ್ಕೆ ಬಂದಿವಿ.ಪರಿಸರ ಉಳಿವಿಗೆ ಗ್ಯಾಸ್ ಬಳಸುತ್ತಿದ್ದಿವಿ,ನೈಜತೆಯ ಬದುಕು ಬಯಲಾಗಿದೆ.ಏನಿದ್ದರೂ ಆಡಂಬರದ ಪ್ರದರ್ಶನ. ಹೊಲದಲ್ಲಿ ದುಡಿವ ಜೋಡೆತ್ತುಗಳು ಮಾಯ!, ಮಷಿನ್ ಬಳಸಿಕೊಂಡು ದುಡಿವ ಕೈಗಳನ್ನು ಕತ್ತರಿಸಿದ ಪರಿಣಾಮ,ಹಳ್ಳಿ‌ ಪಟ್ಟಣದತ್ತ ವಾಲಿದೆಯೆಂದರೆ ತಪ್ಪಾಗದು.ಸಂಸ್ಕೃತಿಗಳ ಮರೀಚಿಕೆ!.

ಹಳ್ಳಿಯ ಜೀವನ ಈಗ ಮೊದಲಿನಂತಿಲ್ಲ;ಅಂದರೆ ಆಶ್ಚರ್ಯ ಆಗಬಹುದು! ಆಗಲ್ಲ ಬಿಡಿ ಯಾಕೆಂದರೆ, ಕಾಲ ಬದಲಾದಂತೆ ಋತುಮಾನಗಳ ಛಾಯೆ ಪ್ರತಿಯೊಬ್ಬರಿಗೂ ಅಂಟಿಕೊಳ್ಳದೆ ಬಿಡದು. ಮನುಷ್ಯನ ಅಸ್ತಿತ್ವ ಅಸಾಮಾನ್ಯ! ಹೀಗಾಗಿ ಭೂಮಿಯಲ್ಲಿ ಹುಟ್ಟಿದ ಪ್ರತಿ ಜೀವಿಗೂ ಅದರದೇ ಆದ ಒಳಗುಟ್ಟಿದೆ!.”ನಮ್ಮ ದೇಶದ ಜೀವನಾಡಿಯೆಂದರೆ ಹಳ್ಳಿಗಳು”. ದೇಶದ ಆರ್ಥಿಕ ವ್ಯವಸ್ಥೆ ನಿಂತಿರುವುದೇ ಹಳ್ಳಿಗಳಿಂದ ಎಂಬ ಸತ್ಯ ಮರೆಯುವಂತಿಲ್ಲ!.ಪ್ರಗತಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ ಅಗ್ರಸ್ಥಾನ! ಇದೆಲ್ಲ ಪ್ರತಿ ನಾಗರಿಕನಿಗೂ ಗೊತ್ತಿರುವ ಸಂಗತಿ.ಹೌದು….ನಾವೆಲ್ಲ ದೇಶದ ಬೆನ್ನೆಲುಬು,ಪಕ್ಕೆಲುಬು ಎಲ್ಲವೂ ಯಾರೆಂಬುದು ಗೊತ್ತಿದೆ!.ಇಷ್ಟೆಲ್ಲ
ಅರಿತರು,ಹಳ್ಳಿಯ ನೈಜ ಬದುಕನ್ನು ನೈಜವಾಗಿ ಇರುವಂತೆ ಮಾಡಲು ಪ್ರಯತ್ನ ಮಾಡುವವರು ಯಾರು? ಎಲ್ಲರೂ ನಗರದ ನಿವಾಸಿಗಳಲ್ಲ,ಎಲ್ಲೋ ಒಂದು ಕಡೆ ನಾವು ಹಳ್ಳಿಯಿಂದ ಬಂದವರು ಎಂಬ ಪರಿಕಲ್ಪನೆ ಜಾಗೃತವಾದರೆ ಸಾಕು!.

ನಮ್ಮ ಮಕ್ಕಳಿಗೆ ಹಳ್ಳಿಯ ಆಟಗಳ ಬಗ್ಗೆ ತಿಳಿಸಿಕೊಡುವ ಆಸಕ್ತಿ ನಮಗಿದ್ದರೆ ಎಷ್ಟು ಚೆನ್ನ! “ಚಿನ್ನಿದಾಂಡು, ಚೌಕಾಬಾರ,ಗೋಟಿ ಆಟ, ಕಬಡ್ಡಿ,ಚನ್ನೆಮಣೆಯಾಟ”ಗಳು ಹಳ್ಳಿಯ ಸೊಗಡಿನ ಜಾಡುಗಳು. ಇವನ್ನು ಕಲಿಸುವ‌ ಆಸಕ್ತಿ ನಮಗಿದ್ದರೆ ಒಳಿತಲ್ಲವೆ?ಮಕ್ಕಳಿಗೆ ಹಳ್ಳಿಯಲ್ಲಿ ವಾಸವಿರುವ ಸಂಬಂಧಗಳಲ್ಲಿನ ಬಾಂಧವ್ಯ ಗಟ್ಟಿಗೊಳಿಸುವಂತಹ ಸಮಯ ಅವಕಾಶವನ್ನು ಅವಲಂಬಿಸಿ ನೀಡಿದರೆ ಹೊಸ ಅಲೆಯ ಅನಾವರಣಕ್ಕೆ ಹಾಗೂ ಹಳ್ಳಿ ಜನರ ಮುಗ್ಧತೆಯನ್ನು ಗೌರವಿಸುವ; ಮತ್ತು ಅಭಿವೃದ್ಧಿಯ ಜೊತೆ ಸಂಸ್ಕೃತಿಗಳ ಉಳಿವಿಗೆ ಪಣತೊಟ್ಟರೆ ಮಾತ್ರ ಮತ್ತೆ ಬಾಲ್ಯ ಮರುಕಳಿಸುವಂತೆ ಮಾಡಬಹುದೆಂಬ ಆಶಯ!

ಒಟ್ಟಾರೆ ಹೇಳುವುದಾದರೆ ನಗರ-ಹಳ್ಳಿಯ ನಡುವೆ ಸಿಲುಕಿ ಜನರ ಜನಜೀವನ ಅಸ್ತವ್ಯಸ್ತತೆಗೆ ಒಳಗಾಗಿದೆ.ರೈತರ ಬದುಕು ನಾವೆನಿಸಿದಷ್ಟು ಸರಳವಿಲ್ಲ.ಆಹಾರ ಉತ್ಪನ್ನ ಅಭಿವೃದ್ಧಿ ಎಲ್ಲವೂ ಕೃತಕತೆಯ ಮಾರ್ಗ ಹಿಡಿದಿದೆ.ತಿನ್ನುವ ಆಹಾರ ಸತ್ವ ಭರಿತವಿಲ್ಲದ ಕಾರಣ‌ ಎಲ್ಲರೂ ಒಂದಲ್ಲ ಒಂದು ರೋಗದಿಂದ ಬಳಲುವಂತಾಗಿದೆ.ಗ್ರಾಮ ನೈರ್ಮಲ್ಯದ ಬಗ್ಗೆ ಹೆಚ್ಚು ಒತ್ತುಕೊಡಬೇಕಿದೆ.ಉದ್ಯೋಗಕ್ಕಾಗಿ ನಗರ ಸೇರುವವರ ಸಂಖ್ಯೆ ಇಳಿಮುಖವಾಗಿ,ಹಳ್ಳಿಯಲ್ಲಿ ಉದ್ಯೋಗ ಸೃಷ್ಟಿಯಾದರೆ ಬದುಕು ಹಸನಾದಿತು.ಆದಷ್ಟು ಬಾಲ್ಯದ ಹಚ್ಚಹಸಿರ ನೆನಪುಗಳು ಇತಿಹಾಸ ಪುಟ ಸೇರದೆ,ಜೀವಂತಿಕೆಯ ಪ್ರತೀಕವಾದರೆ ಎಷ್ಟು ಸುಂದರ! ಅಸಾಧ್ಯವೆಂದು ಗೊತ್ತು ಉಹಿಸಬಹುದು!. ಪುನಃ ಈ ಸೃಷ್ಟಿ ರಚನೆಯಾಗಬೇಕಷ್ಟೇ


14 thoughts on “

  1. ಹಳ್ಳಿ ಜೀವನದ ಜೊತೆಗೆ ಬಾಲ್ಯ ಜೀವನದ ನೆನಪು, ಬಡತನದ ಬೇಗೆ ಇವೆಲ್ಲವೂ ಮರು ಕಳಿಸಿತು.ಗೆಳತಿ ನಿನ್ನ ಅಂಕಣದ ಸಾಲುಗಳು. ಸೂಪರ್

  2. ನಮ್ಮ ಬಾಲ್ಯದ ನೆನಪು ಮರುಕಳಿಸುವಂತೆ ಮಾಡಿದ ಲೇಖನ, ಅಂದಿನ ಬದುಕಿನ ಬವಣೆ, ಇಂದಿನ ಬದುಕಿನ ಆಡಂಬರ, ಹಳ್ಳಿ ಮತ್ತು ಪೇಟೆ ಇವುಗಳ ನಡುವಿನ ಬದುಕಿನ ತಾಕಲಾಟ ಇವೆಲ್ಲ ಮನ ಮುಟ್ಟುವಂತ ಚಿತ್ರಣ ಕಟ್ಟಿಕೊಟ್ಟಿದ್ದೀರಾ.
    ಉತ್ತಮ ಲೇಖನ, ಶುಭವಾಗಲಿ

  3. ನಾನೇನು ಹೇಳಲಿ ನನ್ನ ಪುಟ್ಟ ಗೆಳತಿ.? ಅರಿವಿನ ಹರಿವು ಎಂಬುದು ಬಾಲ್ಯದಲ್ಲಿ ನಾವು ಅನುಭವಿಸಿದ ದಿನಗಳನ್ನು ನೆನಪಿಗೆ ತರುವಂತದ್ದು. ಹಾಗೆ ಹಳ್ಳಿಯ ಜೀವನ ನಗರಗಳಲ್ಲಿಯ ಜೀವನದ ನಡುವಿನ ವ್ಯತ್ಯಾಸವನ್ನು ಎಳೆ ಏಳೆಯಾಗಿ ಬಿಚ್ಚಿಟ್ಟ ಒಂದು ಸವಿ ನೆನಪುಗಳ ಬುತ್ತಿಯಾಗಿದೆ. ಹಾಗೂಇತ್ತೀಚಿನ ದಿನಗಳಲ್ಲಿ ಹಳ್ಳಿ ಪಟ್ಟಣಗಳಲ್ಲಿ ಆಧುನಿಕತೆಯ ಸೋಗು ಹೆಚ್ಚಾಗಿ ಮನೆ ಮನಗಳಲ್ಲಿ ಬದ್ಲಾವಣೆಗಳು ಕಂಡು ಬಂದಿದೆ. ಅಂದ್ರೆ ಅರಿವಿನ ಹರಿವು ಹೆಚ್ಚಾಗಿದೆ. ಅನ್ನಬಹುದು.

    ಜ್ಯೋತಿ ಆಚಾರಿ

  4. ಬಾಲ್ಯವನ್ನು ನೆನಪಿಗೆ ತಂದ, ಮನಸ್ಸಿಗೆ ಬಹಳ ಹತ್ತಿರವೆನಿಸಿದ ಬರೆಹ

  5. ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ ಹಳ್ಳಿಯಲ್ಲೇ ಹೂಲದ ಕೆಲಸ ಮಾಡುವುದು ತುಂಬಾ ಉತ್ತಮ ಕೆಲಸ. ಹೂಲವಿದ್ದ ಜನರು ಕೆಲಸ ಮಾಡಿದರೆ ಎಲ್ಲರ ಹೊಟ್ಟೆ ತುಂಬುವುದು. ಇದು ಸತ್ಯ really super madam

  6. ನಿಜ…ಗ್ರಾಮೋದ್ಧಾರವೇ ಭಾರತದ ಉದ್ಧಾರ .. ಇದನ್ನರಿತು ನಾವೆಲ್ಲ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ.
    ಜುಬೇದಾಬೇಗಂ

  7. ಅತೀ ಸುಂದರ ಸುಮಧುರ ಬಾಲ್ಯದ ಸವಿಬುತ್ತಿ ಮನವ ತಣಿಸಿದೆ. ಮುದಗೊಲಿಸಿದೆ. ಅಲಭ್ಯ ಲಭ್ಯ ದ ಅಧ್ಭುತ ಲೇಖನ ವಿತ್ತ ತಮ್ಮ ಸಾಹಿತ್ಯ ಕೃಷಿಗೆ ಶರಣು ಶರಣು ರೀ.

  8. ಬಾಲ್ಯದ ಜೀವನದ ಮೆಲಕುಗಳು ಚೇತೋಹಾರಿಯಾಗಿವೆ.ಬದುಕಿನ ತಲ್ಲಣಗಳ ಗತ ಬದುಕಿಗೆ ಸಾಣೆ ಹಾಕಿರುವ ಪರಿ,ಓದುಗನಿಗೆ ತನ್ನ ಜೀವನಕ್ಕೆ ತಾಳೆ ಹಾಕಿ ನೋಡುವಂತೆ ಮಾಡುತ್ತದೆ.

  9. ಅರಿವಿನ ಹರಿವು ಅಂಕಣ ತುಂಬಾ ಸೊಗಸಾಗಿದೆ ಹಿಂದೆ ಅನುಬವಿಸಿದ ಜೀವನ ದ ಪ್ರತಿ ಘಟನೆ ನಾನು ಅನುಭವಿಸಿ ರುವ ವಾಸ್ತವ.

  10. ಮಧುರವಾದ ಹಳೆಯ ನೆನಪುಗಳು ಅಲ್ಲಲ್ಲಿ ಕೆಲವು ಕಹಿ ನೆನಪುಗಳನ್ನು ತುಂಬಾ ಚೆನ್ನಾಗಿ ಮೆಲ್ಕು ಹಾಕಿದ್ದೀರಾ ಅಭಿನಂದನೆಗಳು

  11. ಈ ಅಂಕಣ ಬರಹ ತುಂಬಾ ಚೆನ್ನಾಗಿದೆ ಕಥೆಯ ಮೂಲ ತುಂಬಾ ರಸವತ್ತಾಗಿದೆ. ನೈಜವಾಗಿದೆ ಹುಚ್ಚನ ಮದುವೆಲಿ ಉಂಡವನೆ ಜಾಣ ಎಂಬ ಮಾತಿನಂತೆ ಜಂಗಮವಾಣಿಯ ಜಗದೊಳು ಮೂಲ ಆಟಗಳ ಲಾಭವನ್ನು ತಿಳಿದವನು ಜಾಣ ಎನ್ನುವಂತೆ ಮಾನವ ನಿರ್ಮಿತ ವೈಜ್ಞಾನಿಕ ಯುಗದಲ್ಲಿ ಎಲ್ಲವೂ ಕೃತಕ ಎಂದೆನಿಸುತ್ತದೆ

  12. ಹಳ್ಳಿಯಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಬಾಲ್ಯದಲ್ಲಿ ಇಂಥ ಸಿಹಿ ಅನುಭವಗಳು ಆಗಿರುತ್ತವೆ. ಆದರೆ ಈ ಅನುಭವಗಳನ್ನು ಹೊತ್ತಿಗೆಯಲ್ಲಿ ವ್ಯಕ್ತಪಡಿಸಿ ನಮ್ಮೆಲ್ಲರನ್ನು ಒಮ್ಮೆ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ ನಮ್ಮಷ್ಟಕ್ಕೆ ನಾವು ನಗುವಂತೆ ಮಾಡಿದ ನಿಮ್ಮ ಈ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು ಮೇಡಂ

Leave a Reply

Back To Top