ನೇತ್ರ ತಜ್ಞರು ಬರೆದುಕೊಟ್ಟ ಎಲ್ಲಾ ಮಾದರಿಗಳನ್ನು ಪರಿಶೀಲಿಸಲು ಪ್ರಯೋಗಾಲದಲ್ಲಿ ರಕ್ತ ಮೂತ್ರವನ್ನು ಕೊಟ್ಟು ವರದಿಗಾಗಿ ಇಬ್ಬರೂ ಕಾಯುತ್ತಾ ನಿಂತರು. ಸುಮತಿ ಪ್ರಯೋಗಾಲಯದ ಹೊರಗೆ ನಿಂತು ಕಾಯುತ್ತಿರುವುದನ್ನು ಕಂಡ ಸಿಬ್ಬಂದಿ…”ಅಮ್ಮಾ ಎಲ್ಲಾ ವರದಿಗಳು ಬರಲು ಸಮಯ ಹಿಡಿಯುತ್ತದೆ….ಹಾಗಾಗಿ ನೀವು ನಾಳೆ ಬನ್ನಿ”…. ಎಂದರು. ಅವರ ಮಾತನ್ನು ಕೇಳಿದ ಸುಮತಿ ಡ್ರೈವರ್ ನ ಕಡೆ ತಿರುಗಿ ನೋಡಿದಳು….” ಬನ್ನಿ ಟೀಚರಮ್ಮಾ ನಾಳೆ ಮತ್ತೆ ಕರೆದುಕೊಂಡು ಬರುವೆ”…. ಎಂದು ಹೇಳುತ್ತಾ ಕಾರು ನಿಲ್ಲಿಸಿದ ಕಡೆಗೆ ನಡೆದರು. ಸುಮತಿ ಆತನನ್ನು ಹಿಂಬಾಲಿಸಿದಳು. ಇಬ್ಬರೂ ಸಣ್ಣ ಸಾಹುಕಾರರ ಮನೆಗೆ ಬಂದ ನಂತರ ಅಮ್ಮನ ಬಳಿ ಆಸ್ಪತ್ರೆಯ ಸಮಾಚಾರವನ್ನು ತಿಳಿಸಿದರು….”ಹಾಗಾದರೆ ಮತ್ತೊಮ್ಮೆ ನಾಳೆ ಹೋಗಿ ತಜ್ಞರನ್ನು ಭೇಟಿ ಮಾಡಿದರೆ ಆಯ್ತು”… ಏನುತ್ತಾ ಅಮ್ಮ ಡ್ರೈವರ್ ಗೆ….”ನೀನು ಹೋಗಿ ಡಾಕ್ಟರನ್ನು ಊಟಕ್ಕೆ ಕರೆದುಕೊಂಡು ಬಾ”….ಎಂದರು…. ” ಹಾಗೆಯೇ ಆಗಲಿ ಅಮ್ಮ…. ಇದೋ ಈಗ ಹೊರಟೆ”…. ಎನ್ನುತ್ತಾ ಕಾರ್ ತೆಗೆದುಕೊಂಡು ಡ್ರೈವರ್ ಹೋದರು. ಅಮ್ಮ ಸುಮತಿಯನ್ನು ಕರೆದುಕೊಂಡು ಒಳಗೆ ನಡೆದರು. ಒಳಗೆ ಮಗಳು ಯಾವುದೋ ಕಾಮಿಕ್ಸ್ ಒಂದನ್ನು ಓದುತ್ತಾ ಕುಳಿತಿದ್ದಳು. ಸುಮತಿ ಬಂದ ಕೂಡಲೇ”…ಅಮ್ಮಾ ಆಪರೇಷನ್ ಆಯ್ತಾ….ಎಂದು ಕೇಳಿದಳು. ಅವಳ ಮುಗ್ಧತೆಯನ್ನು ಕಂಡ ಅಮ್ಮ ಅವಳ ತಲೆ ನೇವರಿಸುತ್ತಾ…”ಇಲ್ಲ ಮಗೂ ಕಣ್ಣಿನ ಆಪರೇಷನ್ ಆಗಲು ಇನ್ನೂ ಸಮಯ ಹಿಡಿಯುತ್ತದೆ”….ಎಂದಾಗ ಮಗಳು ಸುಮತಿಯ ಮುಖವನ್ನು ನೋಡಿದಳು. ಹೌದು ಎಂಬಂತೆ ಸುಮತಿ ತಲೆಯಾಡಿಸಿದಳು….”ಸುಮತಿ ನೀವು ಹೋಗಿ ವಿಶ್ರಾಂತಿ ತೆಗೆದುಕೊಳ್ಳಿ….ಎಂದು ಅಮ್ಮ ಹೇಳಿದಾಗ…” ಸರಿ ಅಮ್ಮ”…ಎಂದು ಹೇಳಿ ಮಗಳನ್ನು ಕರೆದುಕೊಂಡು ಕೋಣೆಯ ಒಳಗೆ ಹೋದಳು. 

ಸಮಯ ಕಳೆಯಲು ಏನಾದರೊಂದು ಪುಸ್ತಕವನ್ನು ಓದಬೇಕೆಂಬ ಹಂಬಲವಿತ್ತು ಸುಮತಿಗೆ. ಆದರೆ ಕಣ್ಣು ಸರಿಯಾಗಿ ಕಾಣದಿರುವ ಕಾರಣ ಅದು ಸಾಧ್ಯವಿರಲಿಲ್ಲ. ಹಾಗಾಗಿ ಮಗಳಿಗೆ ಕಾಮಿಕ್ಸ್ ಓದಲು ಹೇಳಿ ತಾನು ಕಣ್ಣು ಮುಚ್ಚಿ ದೇವರ ಧ್ಯಾನ ಮಾಡುತ್ತಾ ಕುಳಿತಳು. ದೇವರ ಧ್ಯಾನ ಮಾಡುತ್ತಾ ಕುಳಿತವಳಿಗೆ ಸಮಯ ಹೋದದ್ದೇ ತಿಳಿಯಲಿಲ್ಲ. ಕೆಲಸದ ಹುಡುಗಿ ಬಂದು…” ಟೀಚರೇ ಊಟಕ್ಕೆ ಬನ್ನಿ”… ಎಂದು ಕರೆದಾಗ ಸುಮತಿ ವಾಸ್ತವಕ್ಕೆ ಬಂದಳು. ಹುಡುಗಿಯ ಹಿಂದೆಯೇ ಸುಮತಿ ಹಾಗೂ ಮಗಳು ನಡೆದರು. ಅಷ್ಟು ಹೊತ್ತಿಗೆಲ್ಲ ಕಛೇರಿಗೆ ಹೋಗಿದ್ದ ಡಾಕ್ಟರ್ ಕೂಡಾ ಬಂದಿದ್ದರು. ಎಲ್ಲರೂ ಊಟ ಮುಗಿಸಿ ಸ್ವಲ್ಪ ಹೊತ್ತು ಮಾತನಾಡುತ್ತಾ ಕುಳಿತು ಅವರವರ ಕೋಣೆಗೆ ಹೋದರು. ಡಾಕ್ಟರ್ ಪತ್ನಿಯಿಂದ ಸುಮತಿಯ ವಿವರಗಳನ್ನು ಕೇಳಿ ತಿಳಿದುಕೊಂಡಿದ್ದರು. ಡ್ರೈವರ್ ಗೆ ಬೆಳಗ್ಗೆಯೇ ಸುಮತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಮಧ್ಯಾಹ್ನದ ಊಟದ ನಂತರ ಸುಮತಿಗೆ ನಿದ್ರೆ ಬಂದಂತಾಗಿ ಸ್ವಲ್ಪ ಹೊತ್ತು ಮಲಗಿದಳು. ಸ್ವಲ್ಪ ಸಮಯದ ನಂತರ ಎದ್ದು ಮುಖ ತೊಳೆದು ಮಗಳನ್ನು ಕರೆದುಕೊಂಡು ಬಂಗಲೆಯ ಹೊರಗೆ ಇರುವ ಉದ್ಯಾನದ ಬಳಿ ಬಂದು ಸ್ವಲ್ಪ ಹೊತ್ತು ನಡೆದಾಡಿದಳು. ಶುಗರ್ ನಿಯಂತ್ರಣಕ್ಕೆ ನಲವತ್ತು ನಿಮಿಷವಾದರೂ ನಡೆಯಬೇಕು ಎಂದು ವೈದ್ಯರು ಹೇಳಿದ್ದರು. ಸುಮತಿಗೆ ಯಾವುದೇ ಕೊರತೆ ಆಗದಂತೆ ಅಮ್ಮ ನೋಡಿಕೊಳ್ಳುತ್ತಿದ್ದರು. ಪಥ್ಯಕ್ಕೆ ಅನುಸಾರವಾಗಿ ಅವಳ ಆಹಾರಕ್ರಮ ಇರುವಂತೆ ಎಚ್ಚರಿಕೆ ವಹಿಸುತ್ತಿದ್ದರು. ಅಮ್ಮನ ಆರೈಕೆಯಲ್ಲಿ ಸುಮತಿಯ ಆರೋಗ್ಯವೂ ಚೇತರಿಕೆ ಕಂಡಿತು. ತಮ್ಮನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿರುವ ಸಾಹುಕಾರ ದಂಪತಿಯನ್ನು ಸದಾ ಕಾಲ ಕಾಪಾಡು ಕೃಷ್ಣ ಎಂದು ಮನದಲ್ಲಿಯೇ ಬೇಡಿಕೊಂಡಳು. ಅಂದಿನ ದಿನವೂ ಕಳೆಯಿತು.

ಮಾರನೇ ದಿನ ಡ್ರೈವರ್ ಸುಮತಿಯನ್ನು ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋದರು. ರಕ್ತ ಮೂತ್ರದ ಮಾದರಿಯ ಪರೀಕ್ಷೆಯ ವರದಿಯನ್ನು ಪ್ರಯೋಗಾಲಯದಿಂದ ಪಡೆದುಕೊಂಡು ನೇತ್ರ ತಜ್ಞರ ಬಳಿಗೆ ಹೋದರು. ವರದಿಯಲ್ಲಿ ರಕ್ತ ಹಾಗೂ ಮೂತ್ರದಲ್ಲಿನ ಸಕ್ಕರೆಯ ಅಂಶವು ಸ್ವಲ್ಪ ಹೆಚ್ಚೇ ಇರುವುದನ್ನು ತಜ್ಞರು ಅರಿತು ಸುಮತಿಯನ್ನು ಉದ್ದೇಶಿಸಿ….” ಸುಮತಿಯವರೇ, ನೀವು ತೆಗೆದುಕೊಳ್ಳುತ್ತಿರುವ ಮಾತ್ರೆಗಳು ಹೆಚ್ಚು ಕೆಲಸ ಮಾಡುತ್ತಿಲ್ಲ ಎಂದು ಅನಿಸುತ್ತಿದೆ….ಹಾಗಾಗಿ ಇನ್ನು ಮೇಲೆ ನೀವು ಇನ್ಸುಲಿನ್ ಚುಚ್ಚು ಮದ್ದನ್ನು ಪ್ರತೀ ದಿನವೂ ತೆಗೆದುಕೊಳ್ಳಬೇಕಾಗುತ್ತದೆ…. ಇನ್ಸುಲಿನ್ ಸ್ವಲ್ಪ ದುಬಾರಿ”…ಎಂದರು. ವೈದ್ಯರ ಮಾತನ್ನು ಕೇಳಿದ ಸುಮತಿಯ ಹಣೆಯಲ್ಲಿ ನೆರಿಗೆಗಳು ಮೂಡಿದವು. ನನ್ನ ಸಂಬಳದಲ್ಲಿ ಮಾತ್ರೆ ಖರೀದಿ ಮಾಡಿ ತೆಗೆದುಕೊಳ್ಳುವುದೇ ಕಷ್ಟ ಇನ್ನೂ ಈ ಇನ್ಸುಲಿನ್ ಚುಚ್ಚುಮದ್ದನ್ನು ಹೇಗೆ ಖರೀದಿಸಲಿ? ಅದೂ ಅಲ್ಲದೇ ದಿನವೂ ಆಸ್ಪತ್ರೆಗೆ ಹೋಗಿ ಚುಚ್ಚುಮದ್ದನ್ನು ತೆಗೆದುಕೊಳ್ಳಲು ತನಗೆ ಸಾಧ್ಯವೇ!! ಎನ್ನುವ ಪ್ರಶ್ನೆ ಮನದಲ್ಲಿ ಮೂಡಿದಾಗ ತಜ್ಞರಲ್ಲಿ ತನ್ನ ಮನದಲ್ಲಿ ಮೂಡಿದ ಪ್ರಶ್ನೆಗಳನ್ನು ತಿಳಿಸಿದಳು….”ಸರ್ ಚುಚ್ಚುಮದ್ದನ್ನು ದಿನವೂ ಆಸ್ಪತ್ರೆಗೆ ಹೋಗಿ ಹೇಗೆ ತೆಗೆದುಕೊಳ್ಳುವುದು? ನಾನು ದೂರದ ಹಳ್ಳಿಯಲ್ಲಿ ವಾಸಿಸುವವಳು….ದಿನವೂ ಆಸ್ಪತ್ರೆಗೆ ಹೋಗಿ ಹೇಗೆ ಚುಚ್ಚು ಮದ್ದನ್ನು ತೆಗೆದುಕೊಳ್ಳಲು ಸಾಧ್ಯ?…ಎಂದಾಗ ತಜ್ಞರು ಸುಮತಿಯ ಮುಗ್ಧತೆಯನ್ನು ನೋಡಿ ಮುಗುಳ್ನಗುತ್ತಾ….”ಸುಮತಿಯವರೇ ನೀವು ಇನ್ಸುಲಿನ್ ಇಂಜೆಕ್ಷನ್ ಅನ್ನು ದಿನವೂ ಆಸ್ಪತ್ರೆಗೆ ಹೋಗಿ ತೆಗೆದುಕೊಳ್ಳುವುದು ಬೇಡ….ನೀವೇ ಅದನ್ನು ಚುಚ್ಚಿಕೊಳ್ಳಬಹುದು….ಇಲ್ಲಿನ ದಾದಿಯರು ನೀವು ಸ್ವತಃ ಇನ್ಸುಲಿನ್ ಇಂಜೆಕ್ಷನ್ ಅನ್ನು ಹೇಗೆ ಚುಚ್ಚಿಕೊಳ್ಳುವುದು ಎನ್ನುವುದನ್ನು ನಿಮಗೆ ಕಲಿಸುತ್ತಾರೆ”…. ಎಂದರು. 

ತಾನೇ ಇನ್ಸೂಲಿನ್ ಚುಚ್ಚುಮದ್ದನ್ನು ಚುಚ್ಚಿಕೊಳ್ಳುವುದೇ! 

ಅದು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಯ ಜೊತೆಗೆ ಮನಸ್ಸಲ್ಲಿ ಭಯವೂ ಮೂಡಿತು. ಯೋಚಿಸುತ್ತಾ ಕುಳಿತಿದ್ದ ಸುಮತಿಯನ್ನು ವೈದ್ಯರ ಮಾತು ಎಚ್ಚರಿಸಿತು….”ಸುಮತಿಯವರೇ ನಿಮ್ಮ ದೇಹದಲ್ಲಿನ ಸಕ್ಕರೆಯ ಅಂಶ ಕಡಿಮೆ ಆಗದೇ ನಾನು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ….ಹಾಗಾಗಿ ನಾನು ಬರೆದುಕೊಡುವ ಇನ್ಸುಲಿನ್ ಖರೀದಿ ಮಾಡಿ ದಿನಕ್ಕೆ ಎರಡು ಬಾರಿ, ಅಂದರೆ ಬೆಳಗ್ಗೆ ತಿಂಡಿ ತಿನ್ನುವ ಅರ್ಧಗಂಟೆ ಮೊದಲು ಹಾಗೂ ರಾತ್ರಿ ಊಟಕ್ಕೆ ಅರ್ಧಗಂಟೆ ಮೊದಲು ತೆಗೆದುಕೊಳ್ಳಿ …ಈಗ ಸಧ್ಯಕ್ಕೆ ಇಲ್ಲಿನ ನರ್ಸ್ ನಿಮಗೆ ಚುಚ್ಚುಮದ್ದನ್ನು ಕೊಡುತ್ತಾರೆ…ಎನ್ನುತ್ತಾ ನೇತ್ರತಜ್ಞರು ಹೊರಗೆ ನಿಂತಿದ್ದ ಆಸ್ಪತ್ರೆಯ ಸಿಬ್ಬಂದಿಯನ್ನು ಕೂಗಿ ಕರೆದು ನರ್ಸ್ ಒಬ್ಬರನ್ನು ಕರೆತರಲು ಸೂಚಿಸಿದರು. ಬರುವಾಗ ಜೊತೆಗೆ ಇನ್ಸಲಿನ್, ಸೂಜಿ ಹಾಗೂ ಸಿರಿಂಜ್ ತರಲು ಹೇಳಿದರು. ಕೂಡಲೇ ಒಬ್ಬರು ನರ್ಸ್ ಬಂದರು ಜೊತೆ ಇನ್ಸುಲಿನ್ ನ ಸಣ್ಣ ಶೀಷೆಯ ಜೊತೆಗೆ ಒಂದು ಪುಟ್ಟ ಸಿರಿಂಜ್ ಹಾಗೂ ಅತೀ ಸಣ್ಣ ಮೊನೆ ಇರುವ ಸೂಜಿಯನ್ನು ತಂದರು. ಕತ್ತರಿಯಿಂದ ಇನ್ಸುಲಿನ್ ಶೀಷೆಯ ಮುಚ್ಚಳವನ್ನು ತೆಗೆದು ಶೀಷೆಯ ಬಾಯಿನ್ನು ಮುಚ್ಚಿದ್ದ ರಬ್ಬರ್ ಮುಚ್ಚಳವನ್ನು ತೆಗೆಯದೇ ಹಾಗೇ ಬಿಟ್ಟರು. ಸಿರಿಂಜ್ ಗೆ ಸೂಜಿಯನ್ನು ಅಳವಡಿಸುವುದು ಹೇಗೆ ಎಂದು ಸುಮತಿಗೆ ತೋರಿಸುತ್ತಾ ಸೂಜಿಯನ್ನು ರಬ್ಬರ್ ಮುಚ್ಚಳಕ್ಕೆ ಚುಚ್ಚಿ ನಿಧಾನಕ್ಕೆ ಸಿರಿಂಜ್ ಮೂಲಕ ಡಾಕ್ಟರ್ ಸೂಚಿಸಿದ ಅಳತೆಯಷ್ಟು ಇನ್ಸುಲಿನ್ ಅನ್ನು ತುಂಬಿಸಿದರು. ಸುಮತಿಗೆ ಅಲ್ಲಿಯೇ ಇದ್ದ ಸ್ಟೂಲ್ ಒಂದರ ಮೇಲೆ ಕುಳಿತುಕೊಳ್ಳಲು ಸೂಚಿಸಿ, ಸೀರೆಯನ್ನು ತೊಡೆಯವರೆಗೆ ಸರಿಸುವಂತೆ ಹೇಳಿ, ಎಡಗೈನಿಂದ ತೊಡೆಯ ಮಾಂಸವನ್ನು ಸೇರಿಸಿ ಚರ್ಮವನ್ನು ಎರಡು ಬೆರಳುಗಳಿಂದ ಹಿಡಿದುಕೊಳ್ಳಲು ಹೇಳಿ, ಸಿರಿಂಜ್ ಅನ್ನು ಸುಮತಿಗೆ ಬಲಗೈಯಲ್ಲಿ ಹಿಡಿದುಕೊಳ್ಳಲು ಕೊಟ್ಟು ನಿಧಾನವಾಗಿ ಸೂಜಿಯ ಚೂಪಾದ ಮೊನೆಯನ್ನು ಚುಚ್ಚಿ ಪೂರ್ತಿ ಚರ್ಮದ ಒಳಗೆ ಹೋಗುವಂತೆ ತೂರಿಸಲು ಸೂಚಿಸಿದರು. 


Leave a Reply

Back To Top