ಒಂದು ದಿನ ಸುಮತಿಗೆ ಇದ್ದಕ್ಕಿದ್ದ ಹಾಗೆ ಅಪ್ಪನ ನೆನಪಾಯ್ತು. ಅಮ್ಮನ ಹಾಗೂ ತನ್ನ ಮಗನ ಮರಣದ ನಂತರ ಏಕೋ ಅಪ್ಪ ಮನೆಯ ಕಡೆ ಹೆಚ್ಚಾಗಿ ಬರುತ್ತಿರಲಿಲ್ಲ. 

ಅಪ್ಪನನ್ನು ನೋಡಬೇಕೆಂಬ ಆಸೆ ಮನಸ್ಸಲ್ಲಿ ಮೂಡಿದ್ದೇ ತಡ ಬೆಳಗ್ಗೆ ಪತಿ ಕೆಲಸಕ್ಕೆ ಹೊರಡುತ್ತಿದ್ದಾಗ…”ಏನೂಂದ್ರೆ ಏಕೋ ಅಪ್ಪನನ್ನು ನೋಡಬೇಕು ಎನಿಸುತ್ತಿದೆ….ಅಪ್ಪ ನಮ್ಮಲ್ಲಿಗೆ ಬಂದು ಬಹಳ ದಿನಗಳೇ ಆದವು… ನಾನು ಮತ್ತು ಮಗಳು ಅಪ್ಪನನ್ನು ನೋಡಿಕೊಂಡು ಬರುತ್ತೇವೆ” ಎಂದು ಹೇಳಿ ಪತಿ ಏನು ಹೇಳುವರೋ ಎಂಬ ಅಳುಕಿನಿಂದಲೇ ಪತಿಯ ಮುಖವನ್ನೊಮ್ಮೆ ನೋಡಿದಳು. ಅದೇನು ಅನಿಸಿತೋ ಪತ್ನಿಯ ಆಸೆಯನ್ನು ತಿಳಿದು… ಸರಿ ಮಗಳು ಹಾಗೂ ನೀನು ಮಾವನ ಮನೆಗೆ ಹೋಗಿರಿ…ಕೆಲಸದಿಂದ ಬರುವಾಗ ಹಾಗೆಯೇ ನಾನು ಆ ಕಡೆ ಬಂದು ಮಾವನನ್ನು ನೋಡಿ ಮಾತನಾಡಿಸಿಕೊಂಡು ನಿಮ್ಮನ್ನು ಜೊತೆಗೆ ಕರೆದುಕೊಂಡು ಬರುತ್ತೇನೆ”…. ಎಂದರು ವೇಲಾಯುಧನ್. ಪತಿಯ ಈ ಮಾತುಗಳನ್ನು ಕೇಳಿದ ಸುಮತಿ ಸಂತೋಷದಿಂದ ಸ್ಲೇಟಿನ ಮೇಲೆ ಚಿತ್ರವನ್ನು ಬಿಡಿಸುತ್ತಿದ್ದ ತನ್ನ ಆರು ವರ್ಷದ ಮಗಳನ್ನು…”ಬಾ ಮಗಳೇ ತಾತನ ಮನೆಗೆ ಹೋಗಿ ಬರೋಣ…. ಸಂಜೆ ಅಪ್ಪನ ಜೊತೆ ಮನೆಗೆ ಹಿಂತಿರುಗಿ ಬಂದು ಚಿತ್ರ ಬಿಡಿಸುವೆಯಂತೆ”.. ಎಂದು ಹೇಳುತ್ತಾ ಹಿತ್ತಲ ಕಡೆಗೆ ನಡೆದಳು. ಅಲ್ಲಿಂದ ತರಕಾರಿಗಳನ್ನು ಕೊಯ್ದು ತಂದು ಚೀಲದಲ್ಲಿ ತುಂಬಿದಳು. ಮಗಳಿಗೆ ತಿಂಡಿ ತಿನ್ನಿಸಿ, ತಾನೂ ತಿಂದು ಲಗುಬಗೆಯಿಂದ ತಯಾರಾದಳು. ಹಿತ್ತಲ ಬಾಗಿಲು ಹಾಗೂ ಮುಂಬಾಗಿಲನ್ನು ಭದ್ರಪಡಿಸಿ ಮಗಳ ಕೈ ಹಿಡಿದು ಅಪ್ಪನ ಮನೆಗೆ ಹೊರಟಳು ಸುಮತಿ. ಬಹಳ ದಿನಗಳ ನಂತರ ಅಪರೂಪಕ್ಕೆ ಬಂದ ಮಗಳನ್ನು ಕಂಡು ನಾರಾಯಣನ್ ರವರ ಮನಸ್ಸು ತುಂಬಿತು. ತಾಯಿಯನ್ನು ಹಾಗೂ ಮಗನನ್ನು ಕಳೆದುಕೊಂಡ ನಂತರ ಸುಮತಿ ಅಪ್ಪನ ಮನೆಗೆ ಬಂದಿರಲಿಲ್ಲ. 

ಮಗಳು ತಂದಿದ್ದ ಕೈ ಚೀಲವನ್ನು ಖುಷಿಯಿಂದ ಪಡೆದುಕೊಂಡು ಮಗಳನ್ನು ಉತ್ಸಾಹದಿಂದ ಮನೆಯೊಳಗೆ ಬರಮಾಡಿಕೊಂಡರು. ಅಡಿಯಿಂದ ಮುಡಿಯವರೆಗೆ ನೋಡಿ ನನ್ನ ಮಗಳು ಎಷ್ಟು ಸೊರಗಿರುವಳಲ್ಲ? ಮಾನಸಿಕವಾಗಿ ಬಹಳ ನೊಂದಿದ್ದಾಳೆ. ಅದೇಕೋ ಎಂದೂ ಇಲ್ಲದೇ ಇಂದು ನನ್ನನ್ನು ಹುಡುಕಿಕೊಂಡು ಬಂದಿದ್ದಾಳೆ ಎಂದು ಸಂತೋಷಗೊಂಡರು. ನಾರಾಯಣನ್ ತಾವೇ ಸ್ವತಃ ಮಗಳ ಇಷ್ಟದ ಅಡುಗೆಯನ್ನು ಮಾಡಿ ಪ್ರೀತಿಯಿಂದ ಉಣ ಬಡಿಸಿದರು. ಅಪರೂಪಕ್ಕೆ ಅಪ್ಪ ಅಡುಗೆ ಮಾಡುತ್ತಿದ್ದರೂ ಅವರ ಕೈರುಚಿ ಸುಮತಿಗೆ ಬಲು ಪ್ರಿಯ. ಇಂದೇಕೋ ಸುಮತಿಗೆ ಅಪ್ಪನ ಕೈ ತುತ್ತು ತಿನ್ನುವ ಆಸೆಯಾಯಿತು. ಮಗಳಿಗೆ ಊಟ ಮಾಡಿಸುತ್ತಿದ್ದ ಸುಮತಿ ಅಪ್ಪನ ಕಡೆಗೆ ನೋಡಿದಳು. ಸುಮತಿ ತನ್ನ ಕಡೆಯೇ ನೋಡುತ್ತಿರುವಂತೆ ಭಾಸವಾಗಿ ಮಗಳ ಮುಖವನ್ನು ನೋಡಿದರು. ಏನೋ ಹೇಳುವ ತವಕವನ್ನು ಸುಮತಿಯ ಕಣ್ಣುಗಳಲ್ಲಿ ಕಂಡರು. ” ಏನು ಸುಮತೀ…ಏನೋ ಹೇಳಬೇಕೆಂದಿರುವೆ… ಹೇಳಮ್ಮಾ”…ಎಂದರು. ಅಪ್ಪ ಕೇಳಿದ್ದೇ ತಡ “ಅಪ್ಪಾ….ನಿಮ್ಮ ಕೈ ತುತ್ತು ತಿನ್ನುವ ಆಸೆಯಾಗಿದೆ”… ಎಂದಳು. ಸುಮತಿಯ ಮಾತನ್ನು ಕೇಳಿ ನಾರಾಯಣನ್ ರವರ ಮನದಲ್ಲಿ ಅಚ್ಚರಿ ಹಾಗೂ ಸಂತೋಷ ಒಮ್ಮೆಲೇ ಮೂಡಿತು. ಸುಮತಿ ಎಂದೂ ತನ್ನ ಸಣ್ಣ ಆಸೆಗಳನ್ನು ಕೂಡಾ ಬಾಯ್ಬಿಟ್ಟು ಹೇಳುವವಳಲ್ಲ…. ಇಂದು ಅದೂ ತನ್ನ ಕೈ ತುತ್ತು ತಿನ್ನುವ ಆಸೆ ವ್ಯಕ್ತ ಪಡಿಸಿದಳಲ್ಲ…ಎಂದು ತಿಳಿದಾಗ ಅವರ ಕಣ್ಣುಗಳಲ್ಲಿ ಆನಂದಭಾಷ್ಪ ತುಂಬಿದವು. ಅಕ್ಕರೆಯಿಂದ ಮಗಳ ಕಡೆ ನೋಡುತ್ತಾ …ಅಯ್ಯೋ ಮಗಳೇ ಕೈ ತುತ್ತು ಬೇಕೆಂದು ಅಪ್ಪನನ್ನು ಕೇಳಲು ಇಷ್ಟು ಸಂಕೋಚವೇಕೆ?….ಮಗಳಿಗೆ ಕೈ ತುತ್ತು ತಿನ್ನಿಸುವ ಭಾಗ್ಯ ಎಲ್ಲಾ ಅಪ್ಪಂದಿರಿಗೂ ಸಿಗುವುದಿಲ್ಲ ಮಗಳೇ… ಅದೂ ತುಂಬು ಗರ್ಭಿಣಿಯಾದ ಮಗಳೇ ಬಾಯ್ಬಿಟ್ಟು ಕೇಳುತ್ತಿರುವುದು ನಿಜಕ್ಕೂ ನನ್ನ ಅದೃಷ್ಟ….

ಎಂದು ಹೇಳುತ್ತಾ ಬಿಸಿ ಅನ್ನಕ್ಕೆ ಸಾರು ಬೆರೆಸಿ, ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಸೇರಿಸಿ, ಅನ್ನವನ್ನು ಕಲಸಿ ತುತ್ತು ಮಾಡಿ ಮಗಳ ಮುಂದೆ ಹಿಡಿದಾಗ, ಅಪ್ಪನ ಕೈ ಅರ್ಧದಲ್ಲೇ ತಡೆದು…ಅಪ್ಪಾ… ಬಾಳಕದ ಮೆಣಸಿನಕಾಯಿ ಹುರಿದದ್ದು ಈ ತುತ್ತಿನ ಜೊತೆಗೆ ಸೇರಿಸಿ ಕೊಡಿ…ನನಗೆ ತಿನ್ನಲು ಆಸೆಯಾಗಿದೆ ಎಂದಳು ಸುಮತಿ. ಅವಳ ತಾಯ್ತನದ ಬಯಕೆಯನ್ನು ಅರಿತ ನಾರಾಯಣನ್ ಪರಿಪೂರ್ಣ ಮನದಿಂದ ಶ್ರೀ ಗುರುವಾಯುರಪ್ಪನನ್ನು ಧ್ಯಾನಿಸುತ್ತಾ

ತನ್ನ ಮಗಳಿಗೆ ಹಾಗೂ ಅವಳ ಉದರದಲ್ಲಿ ಬೆಳೆಯುತ್ತಿರುವ ಶಿಶುವಿಗೆ ಸದಾ ಒಳಿತಾಗಲೆಂದು ಭಗವಂತನನ್ನು ಕೇಳಿಕೊಂಡು ಅಕ್ಕರೆಯಿಂದ ಮಗಳಿಗೆ ಅವಳ ಆಸೆಯಂತೆ ತುತ್ತು ತಿನಿಸಿದರು. ಸುಮತಿಯ ಕಣ್ಣುಗಳಲ್ಲಿ ಅಪ್ಪ ಅಮ್ಮ ಇಬ್ಬರ ಬಿಂಬವೂ ತುಂಬಿ ಬಂದು, ತನ್ನ ಬಾಲ್ಯದ ದಿನಗಳು ಅವಳಿಗೆ ನೆನಪಾಯಿತು. ಅಪ್ಪನ ಅಕ್ಕರೆಯ ತುತ್ತುಗಳು ತನ್ನ ಬಾಯಿ ಸೇರಿದಾಗ ಅಮೃತ ಪಾನ ಮಾಡಿದಷ್ಟು ತೃಪ್ತಿಯಾಯ್ತು ಅವಳಿಗೆ. ಇಬ್ಬರ ಕಣ್ಣುಗಳೂ ತುಂಬಿದವು. ತನ್ನ ಕಣ್ಣಲ್ಲಿ ತುಂಬಿದ ಕಣ್ಣೀರ ಹನಿಯು ಮಗಳಿಗೆ ಕಾಣದಿರಲೆಂದು ನಾರಾಯಣನ್ ತಲೆ ಬಗ್ಗಿಸಿ ಊಟದ ತಟ್ಟೆಯನ್ನು ನೋಡಿದರು. ಇದು ಸುಮತಿಯ ಗಮನಕ್ಕೆ ಬಂತು ಆದರೂ ಕೇಳಿದರೆ ಅಪ್ಪ ನೊಂದುಕೊಳ್ಳುವರು ಎಂದು ಏನೂ ಅರಿಯದವಳಂತೆ ಮತ್ತೊಂದು ತುತ್ತಿಗಾಗಿ ಕಾದು ಕುಳಿತಳು. ಸುಮತಿ ಹಾಗೂ ನಾರಾಯಣನ್ ಇಬ್ಬರ ಮನವೂ ಗತಕಾಲದ ಕಡೆಗೆ ಮರಳಿ ಕಲ್ಯಾಣಿಯ ನೆನಪುಗಳಿಂದ ಇಬ್ಬರ ಮನವೂ ಭಾರವಾಯಿತು. ಆದರೆ ಅದನ್ನು ತೋರಿಸಿಕೊಳ್ಳದೇ ಇಬ್ಬರೂ ಮೌನಕ್ಕೆ ಶರಣಾದರು. ತಾತ ಅಮ್ಮನಿಗೆ ಕೈ ತುತ್ತು ತಿನ್ನಿಸುತ್ತಾ ಇರುವುದನ್ನು ಗಮನಿಸಿದ ಸುಮತಿಯ ಮಗಳು…”ತಾತ ನನಗೂ ತಿನ್ನಿಸಿ”… ಎಂದು ಮುದ್ದಾಗಿ ಕೇಳಿದಾಗ, ನಾರಾಯಣನ್ ಮೊಮ್ಮಗಳಿಗೂ ಕೈ ತುತ್ತು ತಿನ್ನಿಸಿದರು. 

ಮಗಳಿಗೂ ಮೊಮ್ಮಗಳಿಗೂ ಕೈ ತುತ್ತು ತಿನ್ನಿಸಿ ನಾರಾಯಣನ್ ತಾವೂ ಊಟ ಮಾಡಿದರು. ಊಟದ ನಂತರ ಮಾತಿಗೆ ಕುಳಿತ ಅಪ್ಪ ಮಗಳಿಗೆ ತಮ್ಮ ತರವಾಡಿನ ನೆನಪಾಗಿ ಇಬ್ಬರ ನಡುವೆ ಮಾತಿಗಿಂತ ಮೌನವೇ ಹೆಚ್ಚಾಯಿತು. ಇಂದು ನಾರಾಯಣನ್ ಬಹಳ ಭಾವುಕರಾಗಿದ್ದರು. ಮೊಮ್ಮಗಳನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಕಣ್ಣು ಮುಚ್ಚಿ ಹಾಗೇ ಕುಳಿತರು. ತಮ್ಮ ಕೋಯಿಕ್ಕಲ್ ತರವಾಡಿನ ನೆನಪು ಬಂದು ದುಃಖ ಉಮ್ಮಳಿಸಿ, ತನ್ನ ಒಂದು ತಪ್ಪು ನಿರ್ಧಾರಕ್ಕೆ ಇಡೀ ಕುಟುಂಬವೇ ತತ್ತರಿಸಿ ಹೋಯಿತಲ್ಲಾ ಎನ್ನುವ ಪಾಪ ಪ್ರಜ್ಞೆ ಅವರನ್ನು ಬಹುವಾಗಿ ಕಾಡಿತು. ಹೀಗೇ ಅಪ್ಪ ಮಗಳು ತಮ್ಮ ತಮ್ಮ ಆಲೋಚನೆಗಳ ಲೋಕದಲ್ಲಿ ಮುಳುಗಿರುವಾಗ ವೇಲಾಯುಧನ್ ಕೆಲಸ ಮುಗಿಸಿಕೊಂಡು ಮಾವನ ಮನೆಗೆ ಬಂದರು. ಅಪ್ಪ ಮತ್ತು ಮಗಳ ಮೌನಧ್ಯಾನ ಕಂಡು ನಸು ನಗುತ್ತಾ….”ಏನು ಮಾವ…ಇಬ್ಬರೂ ಹೀಗೆ ತಪಸ್ಸಿಗೆ ಕುಳಿತಿರೋ ಹೇಗೆ?” ಎಂದು ಹೇಳುತ್ತಾ ಇಬ್ಬರನ್ನೂ ವಾಸ್ತವದೆಡೆಗೆ ಕರೆತಂದರು. ಅಳಿಯ ಬಂದಿದ್ದನ್ನು ಅರಿತ ನಾರಾಯಣನ್ ಮೊಮ್ಮಗಳನ್ನು ಎತ್ತಿಕೊಂಡು ಕುಳಿತಲ್ಲಿಂದ ಮೇಲೆದ್ದರು…” ಹಾಗೇನಿಲ್ಲ ಹೀಗೇ ನಾನು ಮಗಳು ಇಬ್ಬರೂ ಮಾತನಾಡುತ್ತಾ ಇದ್ದಾಗ ನಮ್ಮ ತರವಾಡಿನ ನೆನಪಾಯ್ತು”…. ಎಂದರು. ಉಭಯಕುಶಲೋಪರಿಯ ನಂತರ ಸುಮತಿ ಮಾಡಿಕೊಟ್ಟ ಚಾಯ್ ಕುಡಿದು ಸುಮತಿಯ ಕುಟುಂಬವು ಹೊರಡಲು ಅನುವಾಯ್ತು. ಮಗಳು ತಂದಿದ್ದ ಕೈ ಚೀಲವನ್ನು ಬರಿದು ಮಾಡಿ, ತಾವು ಬೆಳೆದಿದ್ದ ತರಕಾರಿಗಳನ್ನು ನಾರಾಯಣನ್ ಅದರಲ್ಲಿ ತುಂಬಿದರು. ಹೊರಡುವ ವೇಳೆಯಲ್ಲಿ ಸುಮತಿಯು ಬಾಗಿ ಅಪ್ಪನ ಪಾದಗಳನ್ನು ಮುಟ್ಟಿ ನಮಸ್ಕರಿಸಿದಳು. ಮಗಳ ತಲೆಯನ್ನು ನೇವರಿಸಿ, ಸುಖ ಪ್ರಸವವಾಗಲಿ ದೇವರು ನಿಮ್ಮ ಕುಟುಂಬವನ್ನು ಸದಾ ಕಾಪಾಡಲಿ ಎಂದು ಆಶೀರ್ವದಿಸಿ ಬೀಳ್ಕೊಟ್ಟರು.


Leave a Reply

Back To Top