‘ಕನ್ನಡ ಸಾಹಿತ್ಯದಲ್ಲಿ ಸಹ ಜೀವನ ಮತ್ತು ಸಹಬಾಳ್ವೆ’ಒಂದು ಚಿಂತನೆ- ಡಾ.ಯಲ್ಲಮ್ಮ ಕೆ

ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯನ ಎದೆಗೂಡಿನಲ್ಲಿ ಸ್ವಾರ್ಥವು ಮೈದಾಳಿ ಅಲ್ಲಲ್ಲಿ ಅಧಿಕಾರ ದಾಹ, ದೊಂಬಿ, ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಕೋಮು ಗಲಭೆಗಳಿಂದ ಸಮಾಜದಲ್ಲಿ ಅಶಾಂತಿ ಮನೆ ಮಾಡುವುದರ ಜೊತೆ ಜೊತೆಗೆ, ಯಾಂತ್ರಿಕ ಬದುಕಿನಲ್ಲಿ ಗೊತ್ತು-ಗುರಿಯಿಲ್ಲದೆ, ದಣಿವರಿಯದೆ ಓಡುತ್ತಿದ್ದಾನೆ. ಈ ಮಿಂಚಿನ ಓಟದಲ್ಲಿ ಪ್ರೀತಿ, ಪ್ರೇಮ, ವಿಶ್ವಾಸ, ಮಾನವೀಯ ಸಂಬಂಧಗಳ ನೆಲೆಗಟ್ಟಿಯಿಂದ ಬಹು ದೂರದಿ ನಿಂತಿದ್ದಾನೆ… ತತ್ಪರಿಣಾಮವಾಗಿ ಹಿಂದೆಂದಿಗಿಂತ ಇಂದು ಹೆಚ್ಚೆಚ್ಚು ಕೌಟುಂಬಿಕ ವಿಘಟನೆಗಳು, ಮಧುರ ದಾಂಪತ್ಯದಲ್ಲಿ ವಿರಸ ಮೂಡಿ ವಿವಾಹ ವಿಚ್ಛೇದನ ಪ್ರಕರಣಗಳು ನ್ಯಾಯಾಲಯಗಳ ಮೆಟ್ಟಿಲೇರುತ್ತಿರುವುದನ್ನು ಕಾಣಬಹುದಾಗಿದೆ. ಇಂಥ ವಿಷಮ ಪರಿಸ್ಥಿತಿಗಳು ಇದಿರಾದಂಥಹ ಸಂದರ್ಭಕ್ಕೆ ನೀತಿ ಪಾಠವೆಂಬಂತೆ ನಮ್ಮ ಜನಪದರು/ಪೂರ್ವಜರು ಸಹ ಜೀವನ, ಸಹಬಾಳ್ವೆಯನ್ನು ನಡೆಸಿ ಬದುಕಿನ (ಸಂಸಾರವನ್ನು) ಅರ್ಥವನ್ನು ಬಹು ಸೂಕ್ಷ್ಮವಾಗಿ ಗ್ರಹಿಸಿ, ಅಣ್ಣ-ತಂಗಿ, ಅಕ್ಕ-ತಮ್ಮ, ಗಂಡ-ಹೆಂಡತಿ, ಅತ್ತೆ-ಮಾವ, ಮೈದುನ-ನಾದಿನಿ, ಬಂಧು-ಬಾಂಧವರು, ಹೀಗೆ ಮಾನವೀಯ ಸಂಬಂಧಗಳನ್ನು ಹದಗೊಳಿಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳುವುದು ಹೇಗೆಂದು ಮನೋಜ್ಞವಾಗಿ ಅನುಭಾವ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ.


ಹೆಣ್ಣು ಹುಟ್ಟಿದರೆ ಮೈಗೆ ಹುಂಣು ಹುಟ್ಟಿದಾಗೆ ಅನ್ನೋ ಕಾಲದ ಮನೋಧರ್ಮಕ್ಕೆ ಹೊಂದುವಂತೆ, ಬೆಳೆದು ನಿಂತ ಮಗಳು ಮನೆಯಾಗ ಇರುವಾಗ, ಒಂದೊಳ್ಳಿ ಹುಡ್ಗನ್ನ ನೋಡಿ ಮದುವೆ ಮಾಡಿ ಅಳಿಯನ ಕಾಲು ತೊಳೆದು ಕನ್ಯದಾನ ಮಾಡಿಕೊಟ್ಟು ಕೈ ತೊಳಕೊಂಡ್ರಾಯ್ತು ಎನ್ನುವ ಕನ್ಯಾಪಿತೃಗಳ ಚಡಪಡಿಕೆಗೆ ನೆರೆಹೊರೆಯವರ ಸ್ಪಂದನೆ ಕೇಳಿ-

ಹೆಣ್ಣು ಹಡೆಯಲಿ ಬ್ಯಾಡ ಹೆರವರಿಗೆ ಕೊಡಬ್ಯಾಡ ಹೆಣ್ಣು ಹೋಗಾಗ ಅಳಬ್ಯಾಡ ಹಡದವ್ವ!
ಸಿಟ್ಟಾಗಿ ಶಿವಗ ಬೈಬ್ಯಾಡ

ಎಂದು ಗಂಡು ಮಕ್ಕಳು ಇಲ್ಲ ಅಂದರೆ ಹೆಣ್ಣನ್ನೇ ಗಂಡು (ಪುತ್ರಿಕಾ) ಎಂದು ಭಾವಿಸಿ ಸಂಪೋಷಣೆ ಮಾಡಿಕೊಂಡು ಹೋಗಿ ಮೊಮ್ಮಕ್ಕಳನ್ನು (ಪುತ್ರಿಕಾ ಪುತ್ರಿ ಪಡೆದು ಸಂತಸದಿಂದ ಇನ್ನುಳಿದ ಬದುಕನ್ನು ಕಳೆಯಿರಿ ಎಂದು ತಿಳಿಹೇಳುವ-ಈ ಸಂವಾದವನ್ನು ಆಲಿಸಿದ ಮಗಳು ತಾಯ್ತಂದೆಗೆ ಹೇಳುವ ಮಾತು ಕೇಳಿ ಎಷ್ಟು ಸೊಗಸಾಗಿದೆ-

‘ತಾವರಿಯ ಗಿಡ ಹುಟ್ಟಿ ದೇವರಿಗೆ ನೆರಳಾದೆ | ನಾ ಹುಟ್ಟಿ ಮನೆಗೆ ಎರವಾದೆ | ಹಡದವ್ವ |
ನೀ ಕೊಟ್ಟ ಮನೆಗೆ ಹೆಸರಾದೆ’

ತನ್ನ ತವರಿಗೆ ಒಂದೇ ಒಂದು ಮಾತು ಬರಲಾರದಂಗೆ ತಾನು ತನ್ನ ಸಂಸಾರವನ್ನು ತೂಗಿಸಿಕೊಂಡು ಹೋಗುವೆ ಎನ್ನುವ ಭರವಸೆಯನ್ನು ತಾಯ್ತಂದೆಗೆ ನೀಡುತ್ತಾ ಹಾಗೇ ಮುಂದುವರೆದು ಹೇಳುತ್ತಾಳೆ.

‘ಅಕ್ಕ ಇದ್ದರ ಭಾವ ರೊಕ್ಕ ಇದ್ದರೆ ಸಂತೆ ಮಕ್ಕಳಿದ್ದರೆ ಮನಿಮಾರ | ಹಡೆದವ್ವ ।
ನೀ ಇದ್ದರ ನಮಗ ಸಾಮ್ರಾಜ್ಯ’ |

ಹೆಣ್ಣುಮಕ್ಕಳಿಗೆ ಗಂಡನ ಮನೆ ಎಷ್ಟೇ ಸಿರಿತನದ್ದಾದರೂ, ಅಲ್ಲಿ ಹಿರಿತನ, ದೊರೆತನವೇ ದೊರೆತರು ತಾಯ್ತಂದೆ-ತವರುಮನೆ ಎಂದರೆ…? ಎಲ್ಲಿಲ್ಲದ ಮಮಕಾರ, ವ್ಯಾಮೋಹ ಅವಳಿಗೆ, ಗಂಡನ ಮನೆಯಲ್ಲಿನ ಕಷ್ಟ-ಕೋಟಲೆಯನ್ನು ನೆನೆಯುತ್ತ…

‘ಅತ್ತಿಯ ಮನೆಯಾಗ ಅರವತ್ತು ಗಂಗಾಳ | ಬೆಳಗತೇನತ್ತಿ ಬೈಬ್ಯಾಡ : ತವರವರು | ಸರಮುತ್ತ ಮಾಡಿ ಸಲವ್ಯಾರ” |

ಎಂದು ತವರು ಮನೆಯಲ್ಲಿ ಬಡತನದಲ್ಲಿ ಹುಟ್ಟಿ ರೊಟ್ಟಿ-ಚಟ್ಟಿ ತಿಂದು ಬೆಳೆದರೂ ನಾನು ಯುವರಾಣಿಯಂತೆ ಬೆಳೆದೆ. ಕೊರಳಲ್ಲಿನ ಸರದ ಮುತ್ತಿನಂತೆ ತಮ್ಮ ಎದೆ ಮೇಲೆ ಇರಿಸಿಕೊಂಡೆ ಬೆಳೆಸಿದರು ಎಂದು ಹೇಳುತ್ತಾಳೆ, ಅದೇ ಅಲ್ಲದವೇ ಸ್ವಾಭಿಮಾನ, ತಾಲ್ವೇಮ, ಆ ಹೆಂಣಿಗೆ ಗಂಡನ ಮನೆಯಲ್ಲಿ ಕಂಟಗ್ಗಟ ಕಷ್ಟ
ಬಂದರೂ ಸಹಿಸುತ್ತಾಳೆ. ಆದರೆ ಕಟ್ಟಿಕೊಂಡ ಗಂಡ ದೂರವಾದರೆ ಆದ್ದೇಗೆ ಸಹಿಸ್ಯಾಳು-ಹೀಗೆ ಒಮ್ಮೆ ಮುನಿಸಿಕೊಂಡು ಗಂಡನನ್ನು ತೊರೆದು ತವರಿಗೆ ಹೋದಾಗ, ತಾಯಿ ಮಗಳು ಒಬ್ಬಳೆ ಬಂದಿರುವುದನ್ನು ನೋಡಿ, ಗಾಭರಿಗೊಂಡು ಅವಳ
ಕಂಣೀರಿನ ಕಥೆ ಕೇಳಿ-

‘ಎಂದಿಲ್ಲ ಭಾಗೀರತಿ ಇಂದ್ಯಾಗಳುತಾ ಬಂದೆ…?
ನಮ್ಮತ್ತೆ ನಮ್ಮಾನ ಬ್ಯಾರೆ ಇಡುತ್ತಾರಂತೆ !
ಇಟ್ಟರೆ ಇಡಲೇಲು ವಾಲಿ ಜೋಡು ಕೊಡುತ್ತೇನೆ’!

ಎಂದು ತಾಯಾದವಳು ಮಗಳ ಕಷ್ಟ ಕಾಲಕ್ಕೆ ಆಗುತ್ತೆ ಅಂತ ವರ್ಷಗಟ್ಟಲೇ ದುಡಿದು ಸಂಪಾದಿಸಿ ಕೂಡಿಟ್ಟ ಅಷ್ಟೋ ಇಷ್ಟೋ ಪುಡಿಗಂಟ್ನಲ್ಲೇ ಒಡವೆಗಳನ್ನು ಮಾಡಿಸಿಟ್ಟಿರುತ್ತಾಳೆ. ತಾನು ಯಾವತ್ತೂ ಒಂದೊಳ್ಳೆ ಸೀರೆ ಕಂಡವಳಲ್ಲ ಮಗಳು ಮಾತ್ರ ಸಂದಾಗಿರಬೇಕು ಅಂತ ಆಶಿಸುವ ತಾಯಿಯ ಮಮತೆಗೆ ಎಣೆಯುಂಟೆ..? ತಾಯಿಯ ಈ ಮಾತನ್ನು ಕೇಳಿ ಸಮಾಧಾನಗೊಳ್ಳದ ಮಗಳು

‘ವಾಲಿಯ ಜೋಡೊಯ್ದು ಒಲಿಯಾಗ ಹಾಕವ್ವ’ ಎಂದ ಗದ್ಗದಿತ ಕಂಠದಲ್ಲಿ ಇದಿರಾಡುತ್ತಾಳೆ; ‘ಹೆಣ್ಣುಮಕ್ಕಳ ದುಃಖ ಹೆತ್ತವ್ವ ಬಲ್ಲಳು

ಹುತ್ತದ ಒಳಗಿರೋ ಸರುಪನ ಬೇಗೆಯ
ನೆತ್ತಿ ಮೇಲಿರು ಶಿವ ಬಲ್ಲ’

ಎಂಬಂತೆ ಮಗಳ ಮನಸ್ಸನ್ನು ಓದುವ ತಾಯಿಗೆ ಅವಳ ಕಷ್ಟ

ಅರ್ಥವಾಗದೇ…?
ಹುಚ್ಚಿ-

‘ಅತ್ತರೆ ಕರೆದರೆ ಹತ್ತರಿದ್ದೇವೇನೆ |
ಹುಚ್ಚೇನೇ ಅವ್ವಾ ಮರುಳನೇ ।

ಗೋಡೆಯ ಚಿತ್ತಾರ ನೋಡಿ ಮರೆಯವ್ವ’ ॥ ನಿನ್ನ ಕಷ್ಟಗಳ ಎಲೆ ಮಗಳೆ ಎಂದು ತಿಳಿ ಹೇಳುತ್ತಾಳೆ, ತಾಯಿ ಮಾತು

ಕೇಳಿ ಸಮಾಧಾನಿಸಿ ಇನ್ನೆರೆಡು ದಿನ ಕಳೆದು ಗಂಡನ ಮನೆಗೆ ಹೋಗುವುದಾಗಿ ನಿಶ್ಚಯಿಸಿಯಾದ ದಿನವೇ ನಡೆದ ಪ್ರಸಂಗ ಮನಮರುಗುವಂತದ್ದು,

‘ಆಂಣನ ಹೆಂಡತಿ ಕಂಣೀಗಿ ಒಳ್ಳೆವಳು | ಸುಂಣದ ನೀರ ಒಲಿ ಮುಂದ ಇಟಕೊಂಡು ಎಮ್ಮಿ ಹಾಲೆಂದ ಬಡಸ್ಕಾಳ’ #

ಅತ್ತಿಗೆಯ ಈ ಒಂದು ದಿನದ ಕಿರುಕುಳ ತಾಳದೆ ಇರಲಾಗುತ್ತಿಲ್ಲ, ಇವಳೊಂದಿಗೆ ಹೇಗೆ ಹೆಣಗಾಡುತ್ತಾನೋ ಏನ್ಮಥೆಯೋ ಎಂದು ತನ್ನ ಅಂಣನ ಅಸಹಾಯಕತೆಯನ್ನು ನೆನೆದು. ಮನದಲ್ಲೇ ಮಮ್ಮಲ ಮರುಗಿ, ಅಂದೇ ನಿರ್ಧರಿಸಿ ನನ್ನ ಗಂಡನ ಮನೆಯೇ ನನಗೆ ಕೊನೆತನಕ ನೆರಳೆಂದು ಮನ್ನಂಡು, ಗಂಡನನ್ನು ಕಾಣುವ ತವಕದಿ ಹೊಂಟು ನಿಂತಾಗ ವಾರಗಿ ಗೆಳತಿಯರು ಏನೇ ಸರನೆ ಬಂದು ಬದ್ರನೆ ಹೊರಟೇನೇ..? ಎಂದು ಛೇಡಿಸಿದಾಗ-

‘ಎಲ್ಲೆಲ್ಲಿ ನೋಡಿದರೆ ನಲ್ಲನಂಥವರಿಲ್ಲ!
ಹಲ್ಲು ನೋಡಿದರ ಹವಳದ ಪಲ್ಲದ

ಎಂದು ಹೊರಡುತ್ತಾಳೆ ಹೇಳದೇ ಕೇಳದೇ ತವರಿಗೋದ ಸೊಸೆಯ ನಡೆ- ನುಡಿ ಬಗ್ಗೆ ಅತ್ತೆ ಮಾವರ ಚುಚ್ಚಾತುಗಳನ್ನು ಕಿವಿ ಮೇಲೆ ಹಾಕಿಕೊಳ್ಳದೆ, ಒಳನಡೆದು ಪ್ರಯಾಣದ ಆಯಾಸವನ್ನರಿಯದೆ ಮನೆಯನ್ನು ಒಪ್ಪವಾಗಿಸಿ. ಗಂಡನಿಗೆ ಬಿಸಿ ಅಡುಗೆ ಮಾಡಿ, ಅವನ ಬರುವಿಕೆಗಾಗಿ ಹಾದಿ ಕಾಯುತ್ತಾಳೆ, ಬಂದೊಡನೆ ಬಹು ಪ್ರೀತಿಯಿಂದ ಮಾತಾಡಿ ತಂಬಿಗೆ ನೀರು ಕೊಟ್ಟ ಕೈ ಕಾಲು ಮುಖ ತೊಳೆದುಕೊಂಡು ಬರದ್ದೇಳಿ, ಊಟಕ್ಕೆ ಆಣಿಗೊಳಿಸಿ ಉಣಬಡಿಸುತ್ತಾಳೆ. ಮತ್ತೆ ಮತ್ತೆ ಅವಳೇ ಸೋತು ಗೆಲ್ಲುತ್ತಾಳೆ. ಆ ಬೆಳದಿಂಗಳ ಇರುಳಲ್ಲಿ ಲಜ್ಜೆ ಬಿಟ್ಟು, ಸಾಮಿಪ್ಯಕ್ಕೆ ಕರೆಯುತ್ತಾಳೆ.

‘ಸೇರದ ಗಂಡಯ್ಯ ಏನೆಂದು ಕರೆಯಲೋ !
ಬಾರೋ ಗಂಡಯ್ಯ ಮಲಗೋಣ ! ಮಂಚದ್ದೇಲೆ :
ತಾಳೆಹೂವಿನ ದಿಂಬು’
ಕಾದಿರುವೆ ನಲ್ಲ ನಿನಗಾಗಿ

‘ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ’ ಅಂತೇಳಿ ಗಾದೆನೇ ಕೇಳಿಲ್ವಾ..? ಎಂದು ಸಮಜಾಯಿಸಿ ನೀಡಿ ತನ್ನ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಾಳೆ. ಇತ್ತ ಗಂಡನಿಗೂ ಕೂಡ ಹೆಂಡತಿ ಮೇಲೆ ತುಂಬು ಪ್ರೇಮ, ಕೂಡು ಕುಟುಂಬದಲ್ಲಿ ಅದನ್ನು ತೋರ್ಗೊಡುವಂತಿಲ್ಲ, ತಂದೆ-ತಾಯಿ, ಅಕ್ಕ-ತಂಗಿ, ಅಂಣ- ತಮ್ಮರ ಮೇಲೆ ದೂರುವಂತಿಲ್ಲ, ಹೆಂಡತಿಯನ್ನೂ ಕಡೆಗಣಿಸುವಂತಿಲ್ಲ, ಕೌಟುಂಬಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಆತ ಒಮ್ಮೊಮ್ಮೆ ಉರಿದುಬೀಳುತ್ತಾನೆ. ಮತ್ತೊಮ್ಮೆ ದಿವ್ಯ ಮೌನವಹಿಸುತ್ತಾನೆ. ಕೊನೆಗೆ ಯಾರದೋ ಮೇಲಿನ ಕೋಪವನ್ನೆಲ್ಲ-ಉತ್ತರ ಪೌರುಷ ಒಲೆ ಮುಂದೆ ಎಂಬಂತೆ’ ಹೆಂಡತಿಯ ಮೇಲೆ ಪ್ರತಾಪ ತೋರುತ್ತಾನೆ. ಕೋಪ-ತಾಪವೆಲ್ಲ ತಂಣಗಾದ ಮೇಲೆ ಮತ್ತೆ ಮುನಿಸು ಮುರಿಯಲು ಮಡದಿಗಾಗಿ ಮೂರು ಮೊಳ ಮಲ್ಲಿಗೆ ಹೂವು ತಂದು ಮುದ್ದಿನಿಂದ ಸನಿಹ ಕರೆಯುತ್ತಾನೆ. ಲಲ್ಲೆಗರೆಯುತ್ತಾನೆ ಏನಂತ/ದ ಅವಳ ಬಾಯಿಂದಲೇ ಕೇಳಿ.

‘ಹಾಸೀಗಿ ಹಾಸೆಂದಾ ಮಲ್ಲಿಗಿ ಮುಡಿಯೆಂದಾ ।
ಬ್ಯಾಸತ್ತರ ಮಡದಿ ಮಲಗೆಂದಾ | ನನ ರಾಯ ।
ತನ ನೋಡಿ ತವರ ಮರಿಯಂದಾ’ :

ಇನಿಯನ ಪ್ರೀತಿಯ ಮಾತಿನ ಮೋಡಿಗೆ ಕರಗದ ಹೆಂಣಿಲ್ಲ ಈ ಬುವಿಯಲ್ಲಿ, ಅವಳ ಸಿಟ್ಟು ಕ್ಷಣಮಾತ್ರದಲ್ಲೇ ಕರಗಿ, ನಾಚಿ ನೀರಾಗಿ ಅವಳು ಅವನಲ್ಲಿ ಕರಗುತ್ತಾಳೆ. ಹೊಳೆಯಾಗಿ ಹರಿಯುತ್ತಾಳೆ ಇದಲ್ಲವೆ ಸುಖಮಯ ದಾಂಪತ್ಯ, ಸಾಮರಸ್ಯದ
ಬಮಕು, ಇಂಥಹ ನೆಮ್ಮದಿಯ ಬದುಕಿನಲ್ಲಿ ಯಾರದೋ ಕಂಯ್ತಾಗಿ ಒಮ್ಮೊಮ್ಮೆ ಬಿರುಗಾಳಿ ಬಿಸಿ, ಬಿರುಕು ಮೂಡಿದಾಗ, ಒರಗೆಯ ಗೆಳತಿಯ ಕಡೆಯಿಂದ ಬಂದ ಗಾಳಿಸುದ್ದಿಗೆ/ಚಾಡಿ ಮಾತಿಗೆ-

‘ಗಂಡ ಪಂಡಿತರಾಯ ರಂಡೀಯ ಮಾಡಿದರ
ಭಂಡ ಮಾಡುವರ ಮಗಳಲ್ಲ ಕೊರಳಾನ ಗುಂಡು ಬೇಡಿದರ ಕೊಡುವೇನ’

ಇಂಥಹ ಮನೆ ಹಾಳು ಮಾತಿಗೆ ಕಿವಿಗೊಟ್ಟರೆ ಸಂಸಾರ ಉಳಿತದೇನು..? ಸಂಸಾರದ ಗುಟ್ಟು ವ್ಯಾಧಿ ರಟ್ಟು ಅಂತೇಳಿ-ಸುದ್ದಿ ಹಬ್ಬಿಸಿದ ವಾರಗಿ ಗೆಳತಿಗೂ

ಸಿಟ್ಟು ತರಿಸದಂತೆ, ಆ ಸುದ್ದಿಯನ್ನು ಸಾರಸಗಟಾಗಿ ತಿರಸ್ಕರಿಸದಂತೆ-

‘ನಕ್ಕರೆ ನಗಲಾ ನಗೆಮುಗದ ಕ್ಯಾದಗಿ
ನಾ ಮುಚ್ಚಿ ಮುಡಿದ ಪರಿಮಳ ದಾ ಹೂವ।
ಅವಳೊಂದು ಬಾರಿ ಮುಡಿಯಲಿ

ತಂಣಗೆ ಪ್ರತಿಕ್ರಿಯೆ ನೀಡುತ್ತಾಳೆ. ಹಾಗೆಯೇ ಮುಂದುವರೆದು, ‘ಸಂಸಾರವೆಂಬ ಹಾಯಿ ದೋಣಿ ದಾರಿ ತಪ್ಪದಿರ’ಲೆಂದು ಅದನ್ನು ಎಷ್ಟೊಂದು ಸಮಚಿತ್ತದಿಂದ ನಿಭಾಯಿಸುತ್ತಾಳೆಂದರೆ ಅವಳ ಬಾಯಿಂದಲೇ ಕೇಳಿ-

‘ಅಂಗೀಯ ಮ್ಯಾಲಂಗಿ ಛಂದೇನೊ ನನರಾಯ ।
ರಂಬಿ ಮ್ಯಾಲ ರಂಬಿ ಪ್ರತಿರಂದ ಬಂದರ |
ಛಂದೇನೊ ರಾಯ ಮನಿಯಾಗ’ |

ಎಂದು ನಯವಾಗಿ ಕಿವಿ ಹಿಂಡಿ ಸರಿ ದಾರಿಗೆ ಎಳೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಅವಳು ಮನೋಧರ್ಮ, ಮನೋಸ್ಥೆರ್ಯ ಮೆಚ್ಚುವಂತದ್ದು-

‘ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳುಬಂದಿ
ಕೆನ್ನೆ ತುಂಬ ಮುತ್ತು’ (ನಾದಲೀಲೆ-ದ.ರಾ.ಬೇಂದ್ರೆ)

‘ಇರುವ ಭಾಗ್ಯವ ನೆನೆದು,
ಬಾರನೆಂಬುದ ಬಿಡು,
ಹರುಷಕ್ಕಿದೆ ದಾರಿ ಮಂಕುತಿಮ್ಮ’ (ಮಂಕುತಿಮ್ಮನ ಕಗ್ಗ-ಡಿ.ವಿ.ಜಿ)

ಇರುವುದರಲ್ಲೇ ಸುಖಿಸುವ ತೃಪ್ತ ಭಾವ ಅವಳದ್ದು, ನಿಮ್ಮಲ್ಲಿ ಎಷ್ಟೇ ಸಂಪತ್ತಿದ್ದರೂ, ಯಾರು ನಿಮ್ಮನ್ನು ಹೊಲ, ಮನಿ ಎಷ್ಟು.? ಎಂದು ಕೇಳುವುದಿಲ್ಲ ಬದಲಾಗಿ ಗಂಡ-ಹೆಂಣ್ಣೆ ಹೇಗಿದ್ದೀರಾ..? ಮಕ್ಕಳೆಷ್ಟು.? ಅಂತ ಕೆಳ್ತಾರೆ. ಮಕ್ಕಳಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ ಎನ್ನುವ ಅವಳ ಮಾತು ಸತ್ಯ ಅಲ್ಲವೇ..?

“ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು..?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಪಾಲು ಜೇನು,’ (ನಾದಲೀಲೆ-ದ.ರಾ.ಬೇಂದ್ರೆ)

ಪತಿವ್ರತಾ ಧರ್ಮವನ್ನು ಎತ್ತಿ ಹಿಡಿದ ಸತಿ-ಸಾದ್ವಿ ಶಿರೋಮಣಿಯರು, ಆ ವಾರಿಯಲ್ಲೇ ಮುನ್ನಡೆಯುತ್ತಿರುವ ಇಂದಿನ ಮಹಿಳೆಯರು ಹೆಮ್ಮೆಯ ಭಾರತೀಯ ಸಂಸ್ಕೃತಿಯ ಪ್ರತೀಕ ಎಂಥಹ ದುರ್ಗಮ ಪರಿಸ್ಥಿತಿ ಎದುರಾದರೂ ತಮ್ಮ ಪಾತಿವ್ರತ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಕಡ್ಡಿ ಮೆಟ್ಟಿಯ ಕಾಶೀಬಾಯಿ ಕಥನ ಗೀತೆಯಲ್ಲಿರುವಂತೆ-ರೈಲು ತಪ್ಪಿಸಿಕೊಂಡು ದಿಕ್ಕೆಟ್ಟು, ಅಸಹಾಯಕ ಸ್ಥಿತಿಯಲಿ ಸಿಕ್ಕ ಅಬಲೆ ಕಾಶೀಬಾಯನ್ನು ಕಾಮಪಿಪಾಸು ರೈಲ್ವೇ ಸ್ಟೇಶನ್ ಮಾಸ್ತಾರನ ಸಂಚಿಗೆ ಸಿಲುಕಿ ವಿಶ್ರಾಂತಿ ಕೊಠಡಿಯಲ್ಲಿ ಬಂಧಿಯಾದವಳನ್ನು, ನೀನು ನನಗೆ ಸಿಕ್ಕರೆ ನಾ ನಿನಗೆ ನಿನ್ನ ಮಗುವನ್ನು ಕೊಡುವೆನು ಇಲ್ಲಂದರೆ ಕತ್ತು ಸೀಳಿ ಸಾಯಿಸುವ ಎಂದಾಗ, ಆ ತಾಯಿ ಮಾತೃ ವಾತ್ಸಲ್ಯ. ಪುತ್ರ ಪ್ರೇಮ ಮರೆತು, ಆ ಮಹಿಳೆಯ ನುಡಿದ ನುಡಿ ಕೇಳಿ.

‘ಹೆಂಣಿನ ನೆಲಿಯ ತಿಳಿದಿಲ್ಲ
ಹೆಂಣಿನ ನೆಲಿಯ ತಿಳಿದಿಲ್ಲ ಕಾಶಮ್ಮ
ಕಂದನ ಕಡದು ಮೋಸವ
ನನ್ನ ಮುತ್ತೈತನ ತಂಣಗ ಇದ್ದರ

ಇಂಥ ಏಸು ಪುತ್ರ ಪಡೆದೇನೊ’ ಹತ್ತು ಮಕ್ಕಳನ್ನು ಹೆರಬಲ್ಲೆ ಆದರೆ ನಾ ನಿನಗೆ ಒಳಗಾಗಿ ಪತಿವ್ರತಾ ಧರ್ಮಕ್ಕೆ ಮೋಸ ಮಾಡುವುದಿಲ್ಲ, ನನ್ನ ಗಂಡನಿಗೆ ಎಂದೂ ಮೋಸ ಮಾಡುವುದಿಲ್ಲ. ಅವಳು ತೋರಿದ ದಿಟ್ಟತನ ಇತಿಹಾಸದ ಪುಟಗಳನ್ನು ಸೇರಿತು. ಹೀಗೆ ಬದುಕಿಗೆ ಬೇಕಾದದ್ದು ಬರೀ ದುಡಿಮೆ. ದುಡ್ಡಲ್ಲ ಪ್ರೀತಿ, ವಿಶ್ವಾಸ, ಬಂಧುತ್ವ ಇದೆಲ್ಲ ಇದ್ದರೆ ತಾನೇ ಸಹಜೀವನ, ಸಹಬಾಳ್ವೆ ‘ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ’ ಎನ್ನುತ್ತದೆ ಕವಿವಾಣಿ.


2 thoughts on “‘ಕನ್ನಡ ಸಾಹಿತ್ಯದಲ್ಲಿ ಸಹ ಜೀವನ ಮತ್ತು ಸಹಬಾಳ್ವೆ’ಒಂದು ಚಿಂತನೆ- ಡಾ.ಯಲ್ಲಮ್ಮ ಕೆ

  1. ಮೇಡಂ ತುಂಬಾ ಚೆನ್ನಾಗಿ ಬರಿದೀರಿ.

    ಹೆಣ್ಣು ಹೆರಲು ಬೇಕು
    ತಮ್ಮನಿಗೆ ಕೊಡಬೇಕು
    ತವರು ಮನೆಯ ಬಳ್ಳಿ ಹಬ್ಬಬೇಕು

    ಹದಿನಾರು ಎಕರೆ ಹೊಲದ
    ಬದುವಿಗೆ ಸಮವಿಲ್ಲ
    ನನ್ನೋರ ನೌಕರಿ ಬೇಕಿಲ್ಲ

Leave a Reply

Back To Top