ಕಾವ್ಯ ಸಂಗಾತಿ
ಮಾಲಾ ಹೆಗಡೆ
ಪೌರ್ಣಿಮೆಯ ಚಂದ್ರ
ಅಂಬರದಿ ಪೌರ್ಣಿಮೆಯ
ಚಂದಿರನ ಬರುವು,
ಅವನಿಯ ತುಂಬೆಲ್ಲ ಹಾಲ್ಬೆಳಕ
ಹರಿವು.
ಮನಕೆ ಹಿತವೆನಿಪ ತಂಪಿರುಳ
ಚೆಲುವು,
ಸೊಗಸಿಗೆ ಉಪಮೆಯಾಗಿಹ
ಹಿಮಾoಶುವು.
ದುಂಡನೆ ಬೆಳ್ಳಗೆ ಹೊಳೆವ
ದೃಶ್ಯನೋಟವೇ ಚೆನ್ನ,
ಧರೆಯ ಧಗೆಯ ದಿನ ದಣಿವು
ಇವನಿಂದಲೇ ದಮನ.
ತೋರ್ವ ಸತತ ಕಾಲ ಪಕ್ಷದ
ಬದಲಿಕೆಯನ್ನ,
ಕ್ಷೀಣಿಸಿ, ವೃದ್ಧಿಸುತ ಸಾರ್ವ ಬಾಳ ಏರಿಳಿತವನ್ನ.
ಬೆಳದಿಂಗಳೂಟಕ್ಕೆ ಆಹ್ವಾನಿಸುವ
ನಮ್ಮ,
ಚಿಣ್ಣರ ಪ್ರಿಯ ಮಿತ್ರನಿವ ಪೂರ್ಣ
ಚಂದಮಾಮ.
ದಿನಪನ ತಾಪದೆರವಲಲಿ ತಣಿಸಿ
ಬೆಳಗೋ ನೇಮ,
ಸೌಖ್ಯದ ಹೋಲಿಕೆಯ
ರೂವಾರಿ ಈ ಚಂದ್ರಮ.
ಮಾಲಾ ಹೆಗಡೆ.