ಅಯ್ಯೋ… ಇದೇನು ಮಾತು? ಸೋಲನ್ನು ಅನುಭವಿಸವುದು ಯಾರಿಗೆ ಇಷ್ಟ!.ಸೋತವನ ಮನದಾಳದ ನೋವಿಗೆ ಮುಲಾಮು ಹಚ್ಚುವವರಾರು? ‘ಆಳಿಗೊಂದು ಕಲ್ಲು’ ಎನ್ನುವಂತೆ ಸೋಲಿನ ವಿಶ್ಲೇಷಣೆ ಮಾಡಿ ಜೀವನದಲ್ಲಿ ಇನ್ನೆಂದು’ ಸೋಲು’ ಎಂಬ ಮಾತು ಆಸಪಾಸು ಕೇಳಿಸದಂತೆ ಕಿವಿ ಕೆಪ್ಪಾಗಿಬಿಡುವಷ್ಟು ಕರ್ಕಶ ಪ್ರತಿಧ್ವನಿಗಳು ಒಬ್ಬ ವ್ಯಕ್ತಿಯನ್ನು ಮುಜುಗರಕ್ಕೆ ಒಳಪಡಿಸುತ್ತದೆ.ಅಂದಾಗ ಸೋತವರ ಜೊತೆ ನಿಲ್ಲುವವರ ಸಂಖ್ಯೆ ಝೀರೋ ಇದು ವಾಸ್ತವ!.ಆದರೂ ಸಮಜಾಯಿಷಿ ಕೊಡುವವರು ಸೋಲುಂಡವರು! ಪುನಃ ಪ್ರಯತ್ನ ಮಾಡದೆ ಸೋಲನ್ನು ಸ್ವೀಕರಿಸಿ ಮೌನದತ್ತ ವಾಲಿದವರು. ಪ್ರತಿಯೊಬ್ಬರೂ ಒಂದಿಲ್ಲೊಂದು ಕಾರಣದಿಂದ ಈ ಸೋಲಿನಂದ ಹೊರತಾಗಿಲ್ಲ! ಯೋಗ್ಯತೆ,ಅರ್ಹತೆ ಇದ್ದರೂ, ಸೋಲಿಸುವ ಪಡೆ ಹಿತಶತ್ರುಗಳಾಗಿ,ಬೆನ್ನ ಹಿಂದೆ ಕಾರ್ಯ ಪ್ರವರ್ತರಾಗಿ,ಮೆಚ್ಚುಗೆ ಕೊಡುವುದಿರಲಿ,ಬೆನ್ನು ತಟ್ಟುವ ಸಾಹಸಕ್ಕೂ ಬರದೆ….ದೂರದಿಂದ ನಿನ್ನ ಜೊತೆ ನಾವಿದ್ದೆವೆ ಎಂಬ ಮುಖವಾಡ ಧರಿಸಿ  ಎದುರಾಗುವವರನ್ನು ಕಂಡಾಗ,ಉತ್ತರಿಸುವ ಮನಸ್ಸು ಬರದು.ಸತ್ಯ ಗೊತ್ತಿದ್ದರೂ ಗೊತ್ತಿಲ್ಲದಂತೆ ನಕ್ಕು ಮುಂದೆ ಸಾಗುವ ಒಳಮನಸ್ಸು,ಬಾಹ್ಯವಾಗಿ ಎಲ್ಲರಿಗೂ ಬೇಕಾಗಿ ಬದುಕುವುದು ಅಷ್ಟು ಸುಲಭವಲ್ಲ!. ಬದುಕಲು ಬಿಡುವ ಮನಸ್ಥಿತಿಗಳು ನಮ್ಮಲ್ಲಿ ತುಂಬಾ ವಿರಳ! ಕಾರಣವಿಷ್ಟೇ… ನಾನು,ನನ್ನಿಂದ,ನನ್ನ ಮಾತೆ ನಡೆಯಬೇಕು,ನಾನೇ ಸರಿ ಎಂಬ ‘ಕುಬ್ಜ’ ಮನೋಭಾವದವರಿಗೆ ಕೈಗೆಟುಕುವುದು ಅಷ್ಟೇ ತಾನೆ? ಬದುಕಿನ ಎಲ್ಲ ಆಟಗಳಲ್ಲಿ ಸೋಲು ಅನಿವಾರ್ಯವಾದರೂ,ಅದೇ ಬದುಕಿನ ‘ಲಕ್ಷ್ಯ’ಗುರಿ’ಆಗಬಾರದು.ಆನೆ ನಡೆದದ್ದೆ ದಾರಿ! ಎಂಬುದನ್ನು ಮರೆಯಬಾರದು..ಒಮ್ಮೆ ಯಾಕೆ ಪ್ರತಿಸಲ ಸೋಲಾಗಬಹುದು ಆದರೆ ಪ್ರಾಮಾಣಿಕ ಗೆಲುವು ಸಾಧಕನ ಸೊತ್ತೆ ಹೊರತು,ಅನಾಯಾಸವಾಗಿ ಗೆದ್ದ ಗೆಲುವು ಸುಖ,ಶಾಂತಿ,ನೆಮ್ಮದಿ ನೀಡಲಾರದು,ಕಾರಣ ಆ ಗೆಲುವಿಗೆ ಯಾವ ಮಾರ್ಗ ಬಳಸಿದ್ದೆ ಎಂಬುದೇ ಇಂದಲ್ಲ ನಾಳೆ ಮನಃ ಶಾಂತಿ ಕಿತ್ತುಕೊಳ್ಳುವುದಂತೂ ಸತ್ಯ!..

ನನಗೆ ಒಮ್ಮೊಮ್ಮೆ ಅನಿಸಿದ್ದು ಇದೆ,ಜಗತ್ತು ಇಷ್ಟು ವಿಶಾಲವಾಗಿ ತೆರೆದುಕೊಳ್ಳಲು ಸಾವಿರಾರು ಶತಮಾನಗಳು ಗತಿಸಿದ್ದಿದೆ.ಎಲ್ಲ ಪ್ರಕಾರದ ಜೀವಿಗಳು ಹುಟ್ಟಿ ಮಣ್ಣಲ್ಲಿ‌ ಮಣ್ಣಾಗಿವೆ!. ಆದರೂ ಪ್ರಪಂಚ ಮುಂದುವರೆಯುವುದು ನಿಂತಿಲ್ಲ!. ಹಾಗಿದ್ದಾಗ ಮನುಷ್ಯ ಹುಟ್ಟಿದ ದಿನಾಂಕದಿಂದ ನಮ್ಮ ಸಾವಿನ ದಿನಾಂಕದ ರವರೆಗೆ ‌ನೂರೆಂಟು ಜಂಜಾಟಗಳಿಂದ  ಒಂದು ಎತ್ತರಕ್ಕೆ ಅಥವಾ ಪಾತಾಳಕ್ಕೆ ಬಿದ್ದ ಅನುಭವಳಿಗೇನು ಕೊರತೆಯಿಲ್ಲ!. ಬದುಕು ಸತ್ತ ಹಾಗೆ ಇದ್ದರೆ,ಚೈತನ್ಯಕ್ಕೆ ಅಂತ್ಯ ಹಾಡುವ ಕ್ಷಣಗಳು ಸೋತ ವನ ಎದೆಯಲಿ ಎಂಥಹ ಸುನಾಮಿಯನ್ನು ಎಬ್ಬಿಸಿರಬಹುದು? ಉಹಿಸಲು ಸಾಧ್ಯವಿಲ್ಲ.”ಸೋಲು” ಎಂಥವನಿಗೂ ಒಂದು ದಿಗಿಲು,ಛಲ ಬಿತ್ತುವ ಮುಗಿಲು! ಹೀಗಾಗಿ ಸೋತವನಿಗೆ ಮಾತ್ರ ಗೆಲ್ಲಲು ಅವಕಾಶ ಸಿಗುತ್ತದೆ.ನೆಲಕ್ಕೆ ಬಿದ್ದವರನ್ನು ಕಂಡು ನಕ್ಕು ಸುಮ್ಮನಾಗುವ ಜನರ ನಡುವೆ,ಬಿದ್ದವರ ಎದೆಯಲಿ ಸದ್ದಿಲ್ಲದೇ ನಿನ್ನಿಂದ ಇದು ಸಾಧ್ಯ! ಎಂಬ ಆತ್ಮವಿಶ್ವಾಸ ಜಾಗ್ರತಗೊಳಿಸುವುದು ಅತಿ ಮುಖ್ಯ ಎಂಬುದನ್ನು ಮರೆಯಬಾರದು. ಎಷ್ಟೋ ಯುವಕರು ಸಾಧನೆಯ ಹಾದಿಯನ್ನು ಸುಲಭವಾಗಿ ತಲುಪಲು ಬಯಸುತ್ತಾರೆ.ಅವರಿಗೆ ಯಶಸ್ಸು ಮಾತ್ರ ಬೇಕು.ನೋವು,ಕಷ್ಟ ಅನುಭವಿಸುವುದು ಕಿಂಚಿತ್ತು ಇಷ್ಟ ಇಲ್ಲ!.

“ಸೋಲೆ ಗೆಲುವಿನ ಸೋಪಾನ” ಎಂಬ ಗಾದೆ ಮಾತನ್ನು ಮಕ್ಕಳು ಬಿತ್ತರಿಸುವಾಗ ಅದು ಅವರ ಅರಿವಿಗೆ ಈ ತಕ್ಷಣಕ್ಕೆ ‌ಬರದಿರಬಹುದು. ಆದರೆ ಆಟ,ಸ್ಪರ್ಧೆಗಳಲ್ಲಿ ಸೋತಾಗ ಬಿಕ್ಕಿ ಬಿಕ್ಕಿ ಅಳುವ ಸದ್ದಿಗೆ ಸಮಾಧಾನ ಪಡಿಸಿ ಮುಂದಿನ ದಿನಗಳಲ್ಲಿ ಗೆಲುವು ನಿನ್ನದಾಗಲಿ ಎಂದು ಕರೆತರುವ ಶಿಕ್ಷಕರು ಮಕ್ಕಳಿಗೆ ಗೆಲುವಿನ ಪಾಠದ ಮುಂಚೆ,ಸೋತವರ ಪಾಠ ಮಾಡುವುದರ ಮೂಲಕ,ಗೆಲ್ಲಲು ನಿನಗೆ ಅವಕಾಶವಿದೆ ಎಂಬ ಯಶೋಗಾಥೆಗಳು  ಸ್ಪೂರ್ತಿಯಾಗಿ ಮುಂದಿನ ದಿನಗಳಲ್ಲಿ ಮಗು ಹತಾಶೆ ಮೆಟ್ಟಿ ನಿಲ್ಲಲು ಸಹಾಯವಾಗುತ್ತದೆ.ಈ ಸ್ಪೂರ್ತಿ ತುಂಬ ಕೆಲಸ ತಂದೆ ತಾಯಿ, ಸಮಾಜ ಮಾಡಿದಷ್ಟು ಮಗು ಸೋತು ಸುಣ್ಣಾಗುವ ಬದಲು ಸೋತಲ್ಲೆ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತದೆ.ಹೀಗೆ ಗಮನಿಸಿ, ಪ್ರತಿ ತರಗತಿಯಲ್ಲಿ ಓದುವ ಎಲ್ಲ ಮಕ್ಕಳು ಜಾಣರೇ!.ಆದರೂ ಅವರಲ್ಲಿ ಅಲ್ಪಸ್ವಲ್ಪ ಗ್ರಹಿಕೆಯ ವ್ಯತ್ಯಾಸಗಳಿಂದ ಕಲಿಕೆಯಲ್ಲಿ ಒಬ್ಬ ಮುಂದೆ ಸಾಗಿದರೆ, ಮತ್ತೊಬ್ಬ ಹಿಂದೆ,ಇನ್ನೊಬ್ಬ ನಿಧಾನ! ಆದರೆ ಕಲಿಕೆ ಮಜಬೂತ ಆಗುವುದು ನಿಷ್ಠೆಯಿಂದ, ಎಡರು ತೊಡರುಗಳನ್ನು ದಾಟಿ ಆಮೆಯಂತೆ ತಾಳ್ಮೆಯ ಪಥ ಹಿಡಿದವನ ಸೊತ್ತು ಎಂಬುದನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಲಾಗಿದೆ.ಮೊಲ/ಆಮೆಯ ಕಥೆ ವಾಸ್ತವದ ಚಿತ್ರಣವನ್ನು ಪ್ರತಿನಿಧಿಸುತ್ತದೆ.”success comes before work only in dictionary not in life’”

‘ದಕ್ಷಿಣ ಆಫ್ರಿಕಾದ ಗಾಂಧಿ ನೆಲ್ಸನ್‌ ಮಂಡೇಲಾ’ರಂತಹ ನಮಗೆ ಸ್ಫೂರ್ತಿಯ ಸೆಲೆಯಾಗುತ್ತಾರೆ. ಅವರು 27 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದರೂ ಅವರು ಹೆದರಲಿಲ್ಲ. ಅದರ ಬದಲಿಗೆ 1992ರಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದರು.ಒಬ್ಬ ವ್ಯಕ್ತಿ ಜೈಲಿನಿಂದ ಹೊರಬಂದ ನಂತರ ಅವನ ಮಾನಸಿಕ ಆರೋಗ್ಯ ಬಹುತೇಕ ಕುಸಿತಗೊಂಡಿರುತ್ತದೆ.ತನ್ನೆಲ್ಲ ಆಸೆ ಆಕಾಂಕ್ಷೆಗಳು ಬತ್ತಿ ಹೋದ ಸಮಯದಲ್ಲಿ ಎಲ್ಲರೂ’ ಸೋತು’ ಶರಣಾದನೆಂದು ಗ್ರಹಿಸುವ ಸಮಯದಲ್ಲಿ “ಫೀನಿಕ್ಸ್ “ಪಕ್ಷಿಯಂತೆ ಎದ್ದು ನಿಲ್ಲುದಿದೆಯಲ್ಲ ಅದು ನಿಜವಾದ ಬದುಕು.ನೆಲ್ಸನ್ ಮಂಡೇಲಾರನ್ನು ನೆನಪಿಸಿಕೊಂಡಷ್ಟು ಆತ್ಮ ಸ್ಥೈರ್ಯ ಜಾಗೃತವಾಗುತ್ತೆ..

“ಆಗುವುದೆಲ್ಲ ಒಳ್ಳೆಯದಕ್ಕೆ’ ಆಗುತ್ತಿರುವುದು ಒಳ್ಳೆಯದಕ್ಕೆ’ ಮುಂದಾಗುವುದು ಒಳ್ಳೆಯದೆ’ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನ ಉವಾಚವನ್ನು ಸ್ಮರಿಸಬೇಕು.ದೇಶ ಕಂಡ ಅಪ್ರತಿಮ ‘ಮಿಸಾಯಿಲ್ ಮ್ಯಾನ್‌’ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂರ ಕನಸು ಪೈಲೆಟ್ ಆಗುವುದು,ಆದರೆ  ಪೈಲಟ್‌ ಪರೀಕ್ಷೆಯಲ್ಲಿ ಅವರು ಅನುತ್ತೀರ್ಣರಾಗದೇ ಇದ್ದಿದ್ದರೆ ನಮ್ಮ ದೇಶಕ್ಕೆ ಪ್ರತಿಭಾನ್ವಿತ ವಿಜ್ಞಾನಿಯೊಬ್ಬರು ದೊರಕುತ್ತಿರಲಿಲ್ಲ.ಅವರ ಮಾತಿನಲ್ಲಿ ಹೇಳುವುದಾದರೆ,”ಸೋಲುವುದು ತಪ್ಪಲ್ಲ ಅವು ಭವಿಷ್ಯದ ಹೆದ್ದಾರಿಗಳು.ಭಯ ಪಟ್ಟವನು ಇದ್ದಲ್ಲಿಯೇ ಇರುತ್ತಾನೆ” ಎಂದು. ಆದ್ದರಿಂದ ಸೋತವರು ಭಯ ಪಡಬಾರದು.ಸೋಲು ಹತಾಶೆಯನ್ನು ಮೆಟ್ಟಿ ನಿಲ್ಲುವ ಅಸ್ರ್ತವಾಗಿ ಬಳಸುವ ಕಲೆ ಅರಿತವರಿಗೆ ಮಾತ್ರ ಸೋಲು ಗೆಲುವಾಗಿ ಪರಿವರ್ತನೆ ಹೊಂದುತ್ತವೆ.

ಶ್ರೇಷ್ಠ ವಿಜ್ಞಾನಿ‌ “ಥಾಮಸ್ ಎಡಿಸನ್” ರವರು ತಮ್ಮ ಸಂಶೋಧನೆಯನ್ನು ಕಾರ್ಯಗತಗೊಳಿಸುವ ಮೊದಲು ಇವರು 10 ಸಾವಿರ ಬಾರಿ ವಿಫಲತೆ ಕಂಡಿದ್ದರು. ಇಂದು ಜಗತ್ತು ಬೆಳಕಾಗಲು ಕಾರಣವಾದ “ಎಲೆಕ್ಟ್ರಿಕ್‌ ಬಲ್ಬ್ “ಕಂಡು ಹಿಡಿಯಲು ಇವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಟೀಚರ್‌ಗಳಿಂದ ಹಿಡಿದು ಬಂಧು ಮಿತ್ರರೆಲ್ಲರೂ ಎಡಿಸನ್ ಯಶಸ್ಸು ಗಳಿಸಲಾರರೆಂದೇ ತಿಳಿದಿದ್ದರು. ಆದರೆ ತಮ್ಮ ಐದನೇ ವಯಸ್ಸಿನಲ್ಲಿ‌ ‌ಎಡಿಸನ್ ತಾಯಿ ಮಗನನ್ನು ಹತಾಶೆಯತ್ತ ದೂಡಿದ್ದರೆ,ನಿರಾಶರಾಗಿದ್ದರೆ ಇಂದು ಜಗತ್ತು ಹೇಗಿರುತ್ತಿತ್ತು ಎಂಬುದನ್ನು ಉಹಿಸಬಹುದು.ತಾಯಿ…ಪಾತ್ರ ಸೋಲಿನ‌ ಅನುಭವದಲ್ಲಿರುವ ಮಗನಿಗೆ ಗೆಲುವನ್ನು ಸ್ವೀಕರಿಸುವ ರೀತಿಯಲ್ಲಿ ಬದಲಾಯಿಸಿದ ತಾಯಿಯ‌ ಆತ್ಮ ಸ್ಥೈರ್ಯ… “ಎಡಿಸನ್”  ಎಂಬ ಹೆಸರು ಶಾಶ್ವತವಾಗಲು ಕಾರಣ!.ಕಳೆದು ಹೋದದ್ದನ್ನು ಕಳೆದುಕೊಂಡ ಸ್ಥಳದಲ್ಲಿಯೇ ಹುಡುಕಬೇಕು.ಹಾಗೆಯೇ ಎಲ್ಲಿ‌ ಸೋಲುತ್ತವೆಯೋ ಅಲ್ಲೆ ಗೆಲ್ಲಬೇಕು! ಎಂಬ ಮಾತಿನಂತೆ..ಸೋಲನ್ನು ಗೆಲುವಿಗೆ ಬದಲಿಸುವ ಚಾಕಚಕ್ಯತೆ ಬಲ್ಲವರಾದರೆ ಗೆಲುವು ನಿಶ್ಚಿತ!.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದ,ಹೆಸರಾಂತ ಕವಿ ಡಿ.ವಿ. ಗುಂಡಪ್ಪನವರು ಹತ್ತನೆ ತರಗತಿ ಪರೀಕ್ಷೆಯಲ್ಲಿ ಪಾಸಾಗಲಿಲ್ಲ.ಅದಕ್ಕವರು ಹತಾಶರಾಗದೇ “ನಪಾಸೆಂಬ”  ಸೋಲೊಪ್ಪಿಕೊಳ್ಳದೆ “ಮಂಕುತಿಮ್ಮನ ಕಗ್ಗ’ ಎನ್ನುವ ಕೃತಿಯನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವುದು ಪ್ರಸ್ತುತ.ಹಾಗೆಯೇ ಇನ್ನೋರ್ವ ಸಾಧಕರ ಬಗ್ಗೆ ನಾವು ತಿಳಿಯಲೇ ಬೇಕು.ಸುಪ್ರಸಿದ್ಧ ಸಿತಾರ್‌ ವಾದಕ ರವಿಶಂಕರ್‌ ನಾಟ್ಯ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿ ಸಿತಾರ್‌ ಕಲಿತರು. ಈಗ “ಸಿತಾರ್‌ ಎಂದರೆ ರವಿಶಂಕರ್‌, ರವಿಶಂಕರ್‌ ಎಂದರೆ ಸಿತಾರ್‌’ ಎನ್ನುವಷ್ಟರಮಟ್ಟಿಗೆ ಅವರು ಬೆಳೆದು ನಿಂತಿರುವುದು ನಮ್ಮ ಕಣ್ಮುಂದೆ ಇದೆ. ಇದು ಸೋಲನ್ನು ಅರ್ಥೈಸುವನಂತೆ!.ನಿರಾಶೆಯ ಬೆನ್ನು ಹತ್ತುವ ಮೊದಲು ಇನ್ನೊಂದು ಲಕ್ಷ್ಯದತ್ತ ಕೊಂಚ ತಿರುಗಿದರೆ ನೈಜತೆಯ ದಾರಿ ಗೋಚರಿಸುವುದು.ಸಾಧನೆಗೆ ಛಲ ಮುಖ್ಯ!ಖ್ಯಾತ ಭರತನಾಟ್ಯ ಕಲಾವಿದೆ,ಹಿಂದಿ‌ ಧಾರಾವಾಹಿಯ ಮೂಲಕ ಚಿರಪರಿಚಿತ ತನ್ನ ಕಾಲುನ್ನು ಕಳೆದುಕೊಂಡ ಸುಧಾಚಂದನ್ ನಮಗೆಲ್ಲ ಗೊತ್ತು.ಜೀವನವ ನೋಡುವ ಕಲೆ ಗೊತ್ತಿರಬೇಕು ಅಷ್ಟೇ!.

ಹೆತ್ತ ಅಪ್ಪನಿಂದಲೇ ಅನಿಷ್ಟ ಎಂದು ಕರೆಸಿಕೊಂಡರೂ 2009ರಲ್ಲಿ ‘ಮಿಸ್‌ ಇಂಡಿಯಾ’ ಆಗಿ ಆಯ್ಕೆಯಾದ ಪೂಜಾ ಚೋಪ್ರಾ …ಪ್ರತಿಭೆಯ ಅನಾವರಣಕ್ಕೆ ಬಿಳಿ,ಕಪ್ಪುಬಣ್ಣದ ಲೇಪನದಲ್ಲಿಲ್ಲ,ಯಾರು ಹಂಗಿಸಿದರೂ ಸೋಲು,ಹತಾಶೆಯ ಮೆಟ್ಟಿ ನಿಲ್ಲುವ ಎದೆಗಾರಿಕೆ ಸದಾ ಮರಳುಗಾಡಿನಲ್ಲಿ ಸಿಗುವ ಓಯಾಸಿಸ್ ನಂತೆ!ಹುಟ್ಟಿದ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಒಂದಲ್ಲ ಒಂದು ಸೋಲನ್ನು ಕಂಡಿರುತ್ತಾರೆ,ಕಾರಣ ಎಲ್ಲರಿಗೂ ಗೆಲ್ಲಬೇಕೆಂಬ ಹಂಬಲವಿರುತ್ತದೆ.ಎಲ್ಲರೂ ಆಶಾವಾದಿಗಳೇ ಆದರೆ,ಯಾರಲ್ಲಿ ಈ ಸೋಲೆಂಬ ಎರಡಕ್ಷರವನ್ನು ಸೋಲಿಸುವ ಬಯಕೆ ಜಾಗೃತವಾಗಿರುತ್ತದೆಯೋ ಅವರು ಗೆಲುವೆಂಬ ಕಿರೀಟವನ್ನು ಧರಿಸಲು ಸಮರ್ಥರಾಗಿರುತ್ತಾರೆ.ಅಂತಹ ಅದೃಷ್ಟ ಎಲ್ಲರ ಪಾಲಾಗಲಿ ಎಂಬುದು ಸದಾಶಯ!

5 thoughts on “

  1. ಅತೀ ಸುಂದರ ರೀ ಮೇಡಂ……ಮತ್ತೆ ಮತ್ತೆ ಓದಬೇಕೆಂಬ ಹೊಸ ವಿಷಯ ಮಂಡನೆ…ಅಧ್ಭುತ

  2. ಬರಹ ಅತ್ಯುತ್ತಮ ವಾಗಿದೆ ನಿಮ್ಮ ಕೃತಿಗಳನ್ನು ನೋಡಿ ಸಂತಸವಾಯಿತು.ಸೋಲು ಗೆಲವಿಗೆ ನಾಂದಿ. ಎಲ್ಲಾ ಹಾಡುವ ಬಾಯೇ ಆದರೆ ಚಪ್ಪಾಳೆಗೆ ಜನವೆಲ್ಲಿಎಂಬ ನರಸಿಂಹಸ್ವಾಮಿಯವರ ಕವನದ ಸಾಲು ನೆನಪಾಯಿತು.
    ನಿಂಗಪ್ಪ ಪಿ.ನಿವೃತ್ತ ಡಯಟ್ ಪ್ರಿನ್ಸಿಪಲ್

Leave a Reply

Back To Top