ಧಾರಾವಾಹಿ- 50
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮತ್ತೆ ಗರ್ಭಿಣಿಯಾದ ಸುಮತಿ
ಹೀಗೆ ಮತ್ತೆರಡು ತಿಂಗಳುಗಳು ಕಳೆಯಿತು. ಮತ್ತೂ ಮುಟ್ಟಾಗದೆ ಇರುವುದರಿಂದ ಆತಂಕಗೊಂಡ ಸುಮತಿ ಸರಕಾರಿ ಆಸ್ಪತ್ರೆಗೆ ಬಂದಳು. ಮೊದಲಿದ್ದ ಸ್ತ್ರೀರೋಗ ತಜ್ಞ ವೈದ್ಯರು ವರ್ಗಾವಣೆಯಾಗಿದ್ದರು. ಹೊಸದಾಗಿ ಬಂದ ತಜ್ಞ ವೈದ್ಯರು ಸುಮತಿಯನ್ನು ಕೂಲಂಕುಷವಾಗಿ ಪರೀಕ್ಷಿಸಿ ” ಸುಮತಿ ನೀವು ಆರು ತಿಂಗಳ ಗರ್ಭಿಣಿ… ಆರು ತಿಂಗಳಾದರೂ ನಿಮಗಿದು ಗಮನಕ್ಕೆ ಬರಲಿಲ್ಲವೇ? ಎಂದು ಕೇಳಿದರು. ವೈದ್ಯರ ಮಾತಿಗೆ ಸುಮತಿ… “ಎರಡು ತಿಂಗಳ ಹಿಂದೆ ನಾನು ಇಲ್ಲಿಗೆ ಬಂದು ನಿಮಗಿಂತ ಮೊದಲು ಇದ್ದ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿಕೊಂಡಿದ್ದೆ…. ಆಗ ಅವರು ನನಗೆ ರಕ್ತದ ಕೊರತೆ ಇದೆ ಹಾಗಾಗಿ ಮುಟ್ಟಾಗಲಿಲ್ಲ ಎಂದು ಹೇಳಿ ನನಗೆ ಕಬ್ಬಿಣಾಂಶ ಇರುವ ಔಷಧಿಯನ್ನು ಹಾಗೂ ಇನ್ನಿತರೆ ವಿಟಮಿನ್ ಗುಳಿಗೆಗಳನ್ನು ಕೊಟ್ಟಿದ್ದರು…. ನಂತರದ ದಿನಗಳಲ್ಲಿ ನನ್ನ ಉದರದಲ್ಲಿ ಮಿಸುಕಾಟದ ಅನುಭವವಾಗಿ ಮತ್ತೊಮ್ಮೆ ಪರೀಕ್ಷಿಸಿಕೊಳ್ಳಲು ಬಂದಿದ್ದೆ…. ಆಗ ಅವರು ಪರೀಕ್ಷಿಸಿ ನನ್ನ ಹೊಟ್ಟೆಯಲ್ಲಿ ಗೆಡ್ಡೆ ಬೆಳೆಯುತ್ತಿದೆ ಅದನ್ನು ಆದಷ್ಟು ಬೇಗ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಬೇಕು ಎಂದಿದ್ದರು…. ನನಗೂ ಹಾಗೂ ನನ್ನ ಪತಿಗೂ ಬಹಳ ಆತಂಕವಾಗಿತ್ತು….. ಈಗ ಉದರದೊಳಗೆ ಮಿಸುಕಾಟ ಇನ್ನೂ ಹೆಚ್ಚಾದ ಕಾರಣ ನಾನು ಗರ್ಭಿಣಿ ಇರಬಹುದು ಎನ್ನುವ ಸಂಶಯ ನನಗೆ ಬಲವಾಯಿತು ಹಾಗಾಗಿ ಮತ್ತೊಮ್ಮೆ ಇಲ್ಲಿಗೆ ಬಂದಿರುವೆ”… ಎಂದಳು. ಸುಮತಿಯ ಈ ಮಾತನ್ನು ಕೇಳಿದ ವೈದ್ಯರು ನಗುತ್ತಾ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಇರುವ ಗುಳಿಗೆಗಳನ್ನು ಕೊಟ್ಟು ಪ್ರತಿ ತಿಂಗಳು ಬಂದು ಪರೀಕ್ಷಿಸಿಕೊಳ್ಳಲು ಹೇಳಿದರು. ತಾನು ಮತ್ತೊಮ್ಮೆ ಗರ್ಭಿಣಿ ಎನ್ನುವ ವಿಷಯವನ್ನು ತಿಳಿದು ಸುಮತಿ ಹರ್ಷಿತಳಾದಳು. ಸಂಜೆ ಪತಿಯು ಕೆಲಸದಿಂದ ಮನೆಗೆ ಮರಳಿದ ನಂತರ ಈ ಸಂತೋಷದ ಸುದ್ದಿಯನ್ನು ತಿಳಿಸಿದಳು. ವೇಲಾಯುಧನ್ ಪತ್ನಿ ಹೇಳಿದ ಸಿಹಿ ಸುದ್ದಿಯನ್ನು ಕೇಳಿ ಸಂತುಷ್ಟರಾದರು.
“ಖಂಡಿತವಾಗಿಯೂ ಈ ಬಾರಿ ನಮಗೆ ಮಗನೇ ಹುಟ್ಟುವನು… ನೋಡು ಬೇಕಿದ್ದರೆ…. ಇದಕ್ಕಿಂತ ಮೊದಲು ನೀನು ಗರ್ಭ ಧರಿಸಿದ್ದಾಗ ನಾಲ್ಕೈದು ತಿಂಗಳು ಇರುವಾಗಲೇ ನಿನಗೆ ಮೈ ಇಳಿದು ಹೋಯಿತಲ್ಲ….ಅದು ಕೂಡಾ ಗಂಡು ಮಗುವಾಗಿತ್ತು ಎಂದು ವೈದ್ಯರು ಹೇಳಿದ್ದರು…ಈ ಬಾರಿಯೂ ಖಂಡಿತಾ ನಮಗೆ ಮಗನೇ ಹುಟ್ಟುವನು…. ಮಗ ಹುಟ್ಟಿದರೆ ಅವನಿಗಿಡಲು ನಾನಾಗಲೇ ಒಂದು ಉತ್ತಮ ಹೆಸರನ್ನು ಮನಸ್ಸಿನಲ್ಲಿ ಗುರುತಿಸಿ ಇಟ್ಟುಕೊಂಡಿರುವೆ”….ಎಂದರು ಖುಷಿಯಿಂದ. ಪತಿಯ ಮಾತನ್ನು ಆಲಿಸಿದ ಸುಮತಿಗೆ ಕೂಡಲೇ ವಿಶ್ವನ ನೆನಪಾಯ್ತು. ಚೊಚ್ಚಲ ಮಗು ಗಂಡು ಎಂದು ತಿಳಿದಾಗಲೂ ಪತಿಯು ಬಹಳ ಸಂತೋಷಗೊಂಡಿದ್ದರು. ಆದರೆ ಅವನನ್ನು ಉಳಿಸಿಕೊಳ್ಳುವ ಭಾಗ್ಯ ನಮಗಿಲ್ಲದಾಯಿತು. ಎಂದು ಮನದಲ್ಲೇ ಹಲುಬುತ್ತಾ ಎಲ್ಲವೂ ತನ್ನ ತಪ್ಪೇ ಎನ್ನುವಂತೆ
ತನ್ನನ್ನೇ ಶಪಿಸಿಕೊಳ್ಳುತ್ತಾ ಕಣ್ಣಿಂದ ಜಾರಿದ ಕಣ್ಣೀರನ್ನು ಮರೆಸಿಕೊಳ್ಳಲು ಅಡುಗೆ ಮನೆಯ ಕಡೆ ನಡೆದಳು. ಇನ್ನೂ ಪತಿಯ ಎದುರು ನಾನು ನಿಂತರೆ ನನ್ನಿಂದ ಒಂದೇ ಒಂದು ಪದವನ್ನು ಕೂಡಾ ಆಡಲು ಆಗದು ಎನ್ನುವುದು ಅವಳಿಗೆ ಮನವರಿಕೆಯಾಯಿತು. ವಿಶ್ವನನ್ನು ಅವಳು ನೆನೆಯದ ದಿನಗಳೇ ಇರಲಿಲ್ಲ. ಅವನ ನೆನಪು ಬಂದಾಗಲೆಲ್ಲಾ ಅವನ ಸಮಾಧಿಯ ಬಳಿಗೆ ಓಡುವಳು. ತನ್ನ ನೋವನ್ನೆಲ್ಲಾ ಅಮ್ಮ ಹಾಗೂ ಮಗನ ಬಳಿ ಹೇಳಿಕೊಂಡು ಮನ ಹಗುರ ಮಾಡಿಕೊಳ್ಳುವಳು. ಅಡುಗೆ ಮನೆಗೆ ಹೋದವಳು ಅಲ್ಲಿ ನಿಲ್ಲಲಾರದೆ ಕಲ್ಯಾಣಿ ಹಾಗೂ ವಿಶ್ವನ ಸಮಾಧಿಯ ಬಳಿಗೆ ಬಂದಳು. ಅಪ್ಪನ ಹಠದ ಕಾರಣದಿಂದ ಅಮ್ಮನನ್ನು ಹಾಗೂ ಪತಿಯ ಕೋಪದ ಕಾರಣದಿಂದ ಮಗನನ್ನು ಕಳೆದುಕೊಂಡ ದುಃಖ ಉಮ್ಮಳಿಸಿ ಬಿಕ್ಕಿ ಬಿಕ್ಕಿ ಅತ್ತಳು.
ಕಣ್ಣು ಮುಚ್ಚಿ ಅಲ್ಲಿಯೇ ಇದ್ದ ಕಲ್ಲಿನ ಮೇಲೆ ಕುಳಿತಳು. ತಂಗಾಳಿ ಬೀಸಿ ಅವಳ ಮುಂದಲೆಯನ್ನು ನೆವರಿಸಿತು. ಆ ನೇವರಿಕೆ ತನ್ನನ್ನು ಅಗಲಿದ ಅಮ್ಮನ ಕೈ ಸ್ಪರ್ಶದ ಸಾಂತ್ವನದ ಹಾಗೆ ಅನುಭವಾಗಿ ಇನ್ನೂ ಬಿಗಿಯಾಗಿ ಕಣ್ಣುಗಳನ್ನು ಮುಚ್ಚಿ ಅಮ್ಮನನ್ನು ನೆನೆದಳು. ಅಲ್ಲಿಯೇ ಬಳಿಯಲ್ಲಿ ಇದ್ದ ಹಲಸಿನ ಮರದ ಎಲೆಯೊಂದು ಆ ಗಾಳಿಗೆ ತೇಲಿ ಬಂದು ಸುಮತಿಯ ಮಡಿಲಲ್ಲಿ ಬಿದ್ದಿತು. ತನ್ನ ಮಡಿಲಲ್ಲಿ ಎಲೆಯೊಂದು ಬಿದ್ದ ಅನುಭವವಾಗಿ ಕಣ್ಣು ತೆರೆದು ನೋಡಿದಳು. ಆ ಎಲೆಯ ಮೇಲೆ ನಗುತ್ತಿರುವ ತನ್ನ ಮುದ್ದು ಕಂದ ವಿಶ್ವನ ಮುಖ ಮೂಡಿದ ಹಾಗೆ ಅನಿಸಿ ಆತುರದಿಂದ ಆ ಎಲೆಯನ್ನು ಎತ್ತಿಕೊಂಡು ಕೆನ್ನೆಗೆ ಒತ್ತಿಕೊಂಡಳು. “ಅಮ್ಮಾ ಅಳಬೇಡ ನಾನಿದ್ದೇನೆ ಸದಾ…ಧೈರ್ಯವಾಗಿರು” ಎಂದು ವಿಶ್ವ ಕಿವಿಯಲ್ಲಿ ಉಸುರಿದಂತೆ ಭಾಸವಾಯಿತು ಸುಮತಿಗೆ. ಅವಳಿಗೆ ದುಃಖ ತಡೆಯಲು ಆಗಲಿಲ್ಲ. ಸದ್ದು ಮಾಡದೇ ಮೌನವಾಗಿ ಅತ್ತಳು. ಆಗ ಉದರದಲ್ಲಿ ಇರುವ ಕೂಸು ಸ್ವಲ್ಪ ಹೆಚ್ಚಾಗಿಯೇ ಮಿಸುಕಾಡಿ ತನ್ನ ಇರುವನ್ನು ಗಮನಿಸು ಎಂದಿತು. ಕೂಡಲೇ ತನ್ನ ಉಬ್ಬಿರುವ ಉದರದ ಮೇಲೆ ಹಸ್ತವನ್ನು ಇಟ್ಟಳು. ನಾನು ಕೂಡಾ ನಿನ್ನೊಂದಿಗೆ ಇರುವೆ ಅಮ್ಮಾ ಎಂದು ಆ ಶಿಶುವು ಅವಳಿಗೆ ಅರುಹಿದಂತೆ ಆಯ್ತು.
ಇಷ್ಟ ದೈವವನ್ನು ಧ್ಯಾನಿಸಿ….ಕೃಷ್ಣಾ ಏನಿದು ವಿಧಿ ಲೀಲೆ? ಏಕೆ ಹೀಗೆ ನನ್ನ ಜೀವನದಲ್ಲಿ? ನಾನೇನು ಮಾಡಬಾರದ ಪಾಪ ಮಾಡಿರುವೆಯೆಂದು ನನ್ನನ್ನು ಹೀಗೆ ಶೋಧನೆ ಮಾಡುತ್ತಿರುವೆ? ಏನೇ ಬಂದರೂ ಸಹಿಸುವ ತಾಳ್ಮೆ, ಸಹನೆ, ಶಕ್ತಿಯನ್ನು ಕೊಡು ದೇವನೇ ಎಂದು ಬೇಡಿಕೊಳ್ಳುತ್ತಿದ್ದ ಹಾಗೆ ಮನೆಯ ಒಳಗಿನಿಂದ ವೇಲಾಯುಧನ್ ರವರು ಸುಮತೀ…ಎಲ್ಲಿ ಹೋದೆ…ಬೇಗ ನನಗೆ ಕಾಫಿ ಮಾಡಿಕೊಡು ಎಂದು ಕೂಗಿದರು. ಪತಿಯು ಧ್ವನಿಗೆ…ಈಗ ಬಂದೇ…ಎಂದು ಹೇಳುತ್ತಾ ಕಣ್ಣು ಮೂಗನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ ಹಿಂಬಾಗಿಲಿನಿಂದ ಅಡುಗೆ ಮನೆಗೆ ಬಂದು ಒಲೆಯ ಒಳಗೆ ಒಣಗಿದ ಕಟ್ಟಿಗೆಯನ್ನು ಇಟ್ಟು ಬೆಂಕಿ ಹಚ್ಚಿ
ಹಾಲನ್ನು ಇಟ್ಟು ಕಾಯಿಸಿ ಬೇಗನೇ ಕಾಫಿ ಮಾಡಿ ಹಜಾರದಲ್ಲಿ ಕುಳಿತಿದ್ದ ಪತಿಗೆ ಕೊಟ್ಟಳು.
ಪತ್ನಿಯ ಕೈಯಿಂದ ಕಾಫಿಯನ್ನು ತೆಗೆದುಕೊಂಡು ವೇಲಾಯುಧನ್ ಅವಳೆಡೆಗೆ ನೋಡಿದರು. ಅವಳ ಕಣ್ಣುಗಳು ಕೆಂಪಗಾಗಿ ಊದಿಕೊಂಡಿದ್ದವು…. “ಏನು ನಿನಗೆ ಸದಾ ಅಳುವ ಕೆಲಸವೇ? ಸಂತೋಷ ದುಃಖ ಏನೇ ಇದ್ದರೂ ಸದಾ ಅಳುವುದೊಂದೇ… ಈಗ ಅಂತದ್ದು ಏನಾಗಿದೆ? ಸಂತೋಷದ ಸಮಯದಲ್ಲಿ ಹೀಗೇಕೆ ಮುಖ ಮಾಡಿ ಕೊಂಡಿರುವೆ…. ನೀನು ಈಗ ಮತ್ತೊಮ್ಮೆ ಗಂಡು ಸಂತಾನದ ತಾಯಿಯಾಗುವೆ…. ನಿನ್ನ ರಕ್ತಹೀನ ಮುಖವನನ್ನೂ ಹೆಚ್ಚು ಉಬ್ಬಿರದ ಉದರವನ್ನೂ ಕಂಡರೆ ತಿಳಿಯುತ್ತದೆ ನಿನ್ನೊಳಗಿರುವುದು ಗಂಡು ಶಿಶು ಎಂದು…. ವೃಥಾ ಚಿಂತಿಸಿ ಸುಮ್ಮನೇ ಅಳಬೇಡ…. ಒಬ್ಬ ಮಗ ಹೋದರೆ ಏನಂತೆ ಇನ್ನೊಬ್ಬ ಮಗ ಹುಟ್ಟುವನು….ಏಕೆಂದರೆ ನನ್ನ ತಾಯಿಗೆ ನಾವು ನಾಲ್ವರು ಗಂಡು ಮಕ್ಕಳು…. ಏನೋ ಎರಡನೆಯದು ನಿನಗೆ ಹೆಣ್ಣಾಗಿ ಹುಟ್ಟಿತು…. ಮೂರನೆಯದು ನಿನಗೆ ಮೈ ಇಳಿಯಿತು…. ಅದೂ ಕೂಡಾ ಗಂಡೇ ಆಗಿತ್ತು ಅಲ್ಲವೇ? ತೀರಿ ಹೋದ ಮಗ ಈಗ ಮತ್ತೊಮ್ಮೆ ಹುಟ್ಟಿ ಬರುವನು…. ಸುಮ್ಮನೇ ಚಿಂತಿಸಿ ಅಳುತ್ತಲೇ ಇರಬೇಡ ಎಂದು ಹೇಳಿ ಖಾಲಿಯಾದ ಲೋಟವನ್ನು ಮೇಜಿನ ಮೇಲೆ ಇರಿಸಿ…”ನಾನು ಪೇಟೆಗೆ ಹೋಗಿ ಬರುವೆ”….ಎಂದು ಹೇಳುತ್ತಾ ಮನೆಯ ಹೊರಗೆ ಇಟ್ಟಿದ್ದ ಚಪ್ಪಲಿಯನ್ನು ಮೆಟ್ಟಿಕೊಂಡು ವೇಲಾಯುಧನ್ ಹೊರ ನಡೆದರು. ಪತಿಯು ಹೋದ ಕಡೆಯೇ ನೋಡುತ್ತಾ ಅವರು ಹೇಳಿದ ಮಾತುಗಳ ಬಗ್ಗೆ ಯೋಚಿಸುತ್ತಾ ಹಾಗೇ ಹೊಸ್ತಿಲ ಬಳಿ ನಿಂತಳು. ಮಗ ವಿಶ್ವ ಅಸಹಜವಾಗಿ ಮರಣ ಹೊಂದಿದರೂ ಕೂಡಾ ಏನೂ ಆಗದಂತೆ ಹೀಗಿರಲು ಇವರಿಗೆ ಹೇಗೆ ಸಾಧ್ಯವಾಯಿತು. ಈಗವನು ಇದ್ದಿದ್ದರೆ ಹದಿಮೂರು ವರ್ಷದ ಹುಡುಗನಾಗಿ ನನ್ನತ್ತರಕ್ಕೆ ಬೆಳೆದಿರುತ್ತಿದ್ದ. ಅಮ್ಮಾ ನಿನಗೆ ನಾನಿದ್ದೇನೆ ಎಂದು ಅವನು ಹೇಳುತ್ತಿದ್ದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ಇವರೇಕೆ ಹೀಗೆ? ಎಂದು ಚಿಂತಿಸುತ್ತಾ ಅಲ್ಲಿಯೇ ನಿಂತಳು ಸುಮತಿ.