ಕ್ರೀಡಾ ಸಂಗಾತಿ
ವೀಣಾ ಹೇಮಂತ್ ಗೌಡ
‘ಪ್ರತಿಭೆಗೆ ಪ್ರೋತ್ಸಾಹವಿರಲಿ’
2024ರ ಪ್ಯಾರಿಸ್ ಒಲಂಪಿಕ್ ಗೇಮ್ಸ್ ನ ಕುಸ್ತಿ ವಿಭಾಗದ ಅರವತ್ತೆಂಟು ಕೆಜಿ ವಿಭಾಗದಲ್ಲಿ ಪದಕಕ್ಕಾಗಿ ಇನ್ನಿಲ್ಲದ ಶ್ರಮ ಹಾಕಿದ ಭಾರತ ಮಾತೆಯ ಹೆಮ್ಮೆಯ ಸುಪುತ್ರಿ ನಿಶಾ ದಹಿಯಾ ಮೆಡಲನ್ನು ಗಳಿಸಲಿಲ್ಲ ನಿಜ.. ಆದರೆ ಕ್ರೀಡಾ ಪ್ರೇಮಿಗಳ ಮನ ಗೆದ್ದಳು.
ಪ್ಯಾರಿಸ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಿಶಾ ಅತ್ಯಂತ ಅಮೋಘವಾಗಿ ಉಕ್ರೇನಿನ ಕುಸ್ತಿಪಟುವಿನೊಂದಿಗೆ ಹೋರಾಡಿ ಜಯ ಸಾಧಿಸಿದಳು.ಪಂದ್ಯದಲ್ಲಿ ಕೊರಿಯನ್ ಕುಸ್ತಿಪಟುವಿನೊಂದಿಗೆ ಅದ್ಭುತವಾಗಿ ಸೆಣಸಿದ ಆಕೆ ಬಲ ತೋಳಿನಲ್ಲಿ ವಿಪರೀತ ನೋವನ್ನು ಅನುಭವಿಸಿದಳು ಆದರೂ ಆಕೆ ಕುಸ್ತಿ ಅಂಕಣವನ್ನು ಬಿಟ್ಟು ಹೊರಗೆ ಹೋಗದೆ ವೈದ್ಯಕೀಯ ಸಹಾಯವನ್ನು ಪಡೆದು ಮತ್ತೆ ಮುಂದುವರೆದು 8-2ರ ಮೇಲುಗೈ ಪಡೆದಳು.
ಆಟದ ಕೊನೆಯ ಕ್ಷಣಗಳಲ್ಲಿ ಆಕೆಯ ಎದುರಾಳಿ ಆಕೆಯ ಬಲಹೀನತೆಯ ಲಾಭವನ್ನು ಪಡೆದು ಸರಿ ಸಮಾನ ಅಂಕಗಳನ್ನು ಕಲೆ ಹಾಕಿದಳು. ಮುಂದುವರೆದು ಆಟವಾಡಲು ಪ್ರಯತ್ನಿಸಿದ ನಿಶಾಳ ನೋವು ಉಲ್ಬಣಗೊಂಡಿತ್ತು. ಇದೇ ಸಮಯವನ್ನು ಸಾಧಿಸಿ ಆಕೆಯ ಎದುರಾಳಿ ಆಕೆಯ ವಿರುದ್ಧ ಗೆಲುವು ದಾಖಲಿಸಿದಳು.
ಪಂದ್ಯದ ತರುವಾಯ ನಿಶಾಳನ್ನು ಒಲಂಪಿಕ್ ಗ್ರಾಮದ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದಾಗ ಆಕೆಯ ಭುಜವನ್ನು ಸ್ಕ್ಯಾನ್ ಮಾಡಿದ ವೈದ್ಯರು ಆಕೆ ಸಂಪೂರ್ಣವಾಗಿ ಗಾಯಗೊಂಡಿರುವುದಾಗಿ ಘೋಷಿಸಿದರು.
ಭಾರತ ಮಾತೆಯ ಈ ವೀರ ಪುತ್ರಿ ತನ್ನ ಒಂದು ಕೈ ಸಂಪೂರ್ಣವಾಗಿ ಗಾಯಗೊಂಡಿದ್ದರೂ ಪ್ರಯತ್ನವನ್ನು ಕೈ ಬಿಡದೆ ಕೇವಲ ಒಂದೇ ಕೈಯಿಂದ ಸೆಣಸಿದಳು.
ಸೋಲು ಗೆಲುವುಗಳು ಆಟದ ಭಾಗಗಳು. ಆದರೆ ಒಂದು ಬಾರಿ ಮೈದಾನಕ್ಕೆ ಇಳಿದ ಮೇಲೆ ನೂರು ಪ್ರತಿಶತ ಪ್ರಯತ್ನವನ್ನು ಮಾಡುವುದು ಆಟಗಾರನ ಕರ್ತವ್ಯ. ಹಿಂಜರಿಯದೆ, ಧೈರ್ಯಗೆಡದೆ, ಮೈದಾನವನ್ನು ಬಿಟ್ಟು ಹೋಗದೆ ಸೋಲೇ ಇರಲಿ ಗೆಲುವೇ ಬರಲಿ ಆಟವನ್ನು ಮುಂದುವರಿಸುವುದು, ನಿಜವಾದ ಆಟಗಾರನ ಲಕ್ಷಣ. ಆ ದಿನ ಒಲಂಪಿಕ್ಸ್ನ ಕುಸ್ತಿ ಪಂದ್ಯಾವಳಿಯಲ್ಲಿ ನಿಶಾ ಮಾಡಿದ್ದು ಅದನ್ನೇ ಆದರೆ ವಿಧಿಯ ಆಟವೇ ಬೇರೆ ಇತ್ತು… ತಮ್ಮೆಲ್ಲ ಪ್ರಯತ್ನಗಳ ಹೊರತಾಗಿಯೂ ನಿಶಾ ಸೋಲನ್ನನುಭವಿಸಿದಳು.
ಪತ್ರಿಕೆಗಳಲ್ಲಿ ಈ ವಿಷಯ ಸುದ್ದಿ ಆಗಬೇಕಿತ್ತು, ಆಕೆಯ ಪ್ರಯತ್ನದ ಕುರಿತು ಶ್ಲಾಘನೆಗಳ ಸುರಿಮಳೆ ಆಗಬೇಕಿತ್ತು ಆಕೆಯ ಅಭೂತಪೂರ್ವ ಪ್ರಯತ್ನದ ಕುರಿತಾದ ಚರ್ಚೆಗಳಾಗಬೇಕಿತ್ತು…. ಆದರೆ ಯಾವುದೂ ಆಗಲಿಲ್ಲ. ನಾವ್ಯಾರೂ ಪ್ರಾಮಾಣಿಕವಾಗಿ ತನ್ನ 100 ಪ್ರತಿಶತವನ್ನು ನೀಡಿದ ನಿಶಾಳಿಗೆ ಒಂದು ಪ್ರತಿಶತ ಪ್ರತಿಕ್ರಿಯೆ ನೀಡಲಿಲ್ಲ. ಆಕೆಗೆ ನೀಡಬೇಕಾದ ಗೌರವ,ಪ್ರೋತ್ಸಾಹ ಮತ್ತು ಗಮನವನ್ನು ನೀಡಲಿಲ್ಲ.
ಆಕೆಯ ಧೈರ್ಯ,ಸಾಹಸ ಮತ್ತು ಬದ್ಧತೆಗಳ ಕುರಿತು ಮಾತಾಡಲಿಲ್ಲ. ಭಾರತಕ್ಕೆ ಮರಳಿದ ಆಕೆಯನ್ನು ಗೌರವದಿಂದ ಬರಮಾಡಿಕೊಳ್ಳಲಿಲ್ಲ…. ಇಡೀ ದೇಶವನ್ನು ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸಿದ ಓರ್ವ ಕ್ರೀಡಾಪಟುವಿಗೆ ನಾವು ನೀಡಬೇಕಾದ ಯಾವುದೂ ದೊರೆಯಲಿಲ್ಲ…. ಇದು ನಮ್ಮಲ್ಲಿರುವ ಅಭಿಮಾನ ಶೂನ್ಯತೆಯನ್ನು,ನಿಷ್ಕ್ರಿಯತೆಯನ್ನು ತೋರುತ್ತದೆ.
ತನ್ನ ಬಲಹೀನತೆಯ ಹೊರತಾಗಿಯೂ ಧೀರ ಹೋರಾಟವನ್ನು ಮಾಡಿದ ನಿಶಾ ಎಲ್ಲಿ?? ಸದಾ ರೀಲ್ಸ್ ಗಳನ್ನು ನೋಡುತ್ತ, ನಿರುಪಯುಕ್ತ ಮೆಸೇಜ್ ಗಳನ್ನು ಫಾರ್ವಡ್ ಮಾಡುತ್ತಾ ಇರುವ ನಮ್ಮ ಯುವ ಜನಾಂಗದ ಸಾಮಾಜಿಕ ಮನಸ್ಥಿತಿ ಎಲ್ಲಿ!! ಇದು ನಮ್ಮ ಮಾನಸಿಕ ಅಧಪತನವಲ್ಲದೆ ಮತ್ತಿನ್ನೇನು?
ನಿಶಾ ದಹಿಯಾ ಭಾರತ ಮಾತೆಯ ಪಾಲಿಗೆ ಓರ್ವ ಯುದ್ಧ ವೀರಳು… ಮೆಡಲಿಗೆ ಹೊರತಾಗಿಯೂ ಆಕೆ ದೇಶದ ಜನರಿಗೆ ಬಹಳಷ್ಟನ್ನು ಹೇಳಿಕೊಟ್ಟಿದ್ದಾಳೆ.
‘ದೇಶ ಮೊದಲು, ವೈಯುಕ್ತಿಕತೆ ನಂತರ’ ಎಂಬ ಅತಿ ದೊಡ್ಡ ಪಾಠವನ್ನು ಕಲಿಸಿದ್ದಾಳೆ.
ಇಂದಿನ ಯುವ ಪೀಳಿಗೆ ‘ನೆವರ್ ಗಿವ್ ಅಪ್’ ಎಂಬ ಟಿ ಶರ್ಟ್ ಗಳನ್ನು ಧರಿಸಿ ಓಡಾಡಿದರೆ ದೈಹಿಕ ಸಮಸ್ಯೆಗಳು ಸಾವಿರ ಕಾಡುತ್ತಿದ್ದರೂ ಅವುಗಳನ್ನು ಎದುರಿಸುವ ಛಲವನ್ನು, ಬದ್ಧತೆಯನ್ನು ತನ್ನ ಆಟದಲ್ಲಿ ನೆವರ್ ಗಿವ ಅಪ್ ಎಂದರೇನು ಎಂದರೇನೆಂದು ತೋರಿದ್ದಾಳೆ.
‘ಬಿಲೀವ್ ಇನ್ ಯುವರ್ ಸೆಲ್ಫ್ ‘ ಎಂಬ ಸ್ಲೋಗನ್ ಗಳನ್ನು ಪ್ರಿಂಟ್ ಹಾಕಿರುವ ಬಟ್ಟೆಗಳನ್ನು ಧರಿಸುವ ನಮಗೆ ನಿಶಾಳ ಬಿಲೀವ್ ಇನ್ ಹರ್ ಸೆಲ್ಫ್ ಏಕೆ ಕಣ್ಣಿಗೆ ಕಾಣಲಿಲ್ಲ.
ಈ ರೀತಿಯ ಮಾನಸಿಕ ವಿಸ್ಮೃತಿ ನಮ್ಮಲ್ಲಿ ಮನೆ ಮಾಡಿರುವುದರಿಂದಲೇ ನಾವು ಅಭಿಮಾನ ಶೂನ್ಯರಾಗಿದ್ದೇವೆ. ನಮ್ಮಲ್ಲಿ ಸಾಗರದಷ್ಟು ಜ್ಞಾನ ಇದ್ದರೂ ಪಾಶ್ಚಿಮಾತ್ಯ ದೇಶಗಳ ಸಾಸಿವೆಯಷ್ಟು ಜಾಣ್ಮೆಯನ್ನು,ಆಧುನಿಕತೆಯನ್ನು ಹೊಗಳುವ ನಾವು ಅಭಿಮಾನಹೀನರಲ್ಲದೆ ಮತ್ತಿನ್ನೇನು!?
ಒಳ್ಳೆಯದು ಜಗತ್ತಿನ ಯಾವ ಮೂಲೆಯಿಂದ ಬಂದರೂ ಅದನ್ನು ಸ್ವೀಕರಿಸು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನೆ ಅಲ್ಲವೇ? ಬೇರೆಯವರ ಜಾಣ್ಮೆಯನ್ನು,ಪ್ರತಿಭೆಗಳನ್ನು, ಒಳ್ಳೆಯತನವನ್ನು ಸ್ವೀಕರಿಸೋಣ ಆದರೆ ನಮ್ಮದನ್ನು ಮರೆಯದಿರೋಣ.
ವಿದೇಶಿ ಕ್ರಿಕೆಟಿಗರನ್ನು, ಫುಟ್ಬಾಲ್ ಆಟಗಾರರನ್ನು ರಾಜಕಾರಣಿಗಳನ್ನು ವಿವಿಧ ಅಥ್ಲೀಟ್ಗಳನ್ನು ಗುರುತಿಸುವ ನಾವು ನಮ್ಮಲ್ಲಿರುವ ಅನರ್ಘ್ಯ ರತ್ನಗಳನ್ನು ಕಾಯ್ದುಕೊಳ್ಳುವುದಿಲ್ಲ ಏಕೆ?? ನಮ್ಮ ಮನೆಯಲ್ಲಿರುವ ಮಕ್ಕಳನ್ನು ಕನಿಷ್ಠ ಆಧರಿಸುವ ಸೌಜನ್ಯವಿಲ್ಲದ ನಾವು ಬೇರೆಯವರ ಮನೆ ಮಕ್ಕಳನ್ನು ಪ್ರೀತಿಸುವುದು ವಿಪರ್ಯಾಸವಲ್ಲವೇ?
ಪ್ರಶ್ನೆಗಳ ಸರಮಾಲೆ ಹನುಮಂತನ ಬಾಲದಂತೆ ಮುಂದುವರೆಯಬಹುದು. ಒಂದು ಪುಟ್ಟ ಕೋಣೆಯನ್ನು ಬೆಳಗಲು ಸೂರ್ಯನ ಬೆಳಕು ಬೇಕಾಗಿಲ್ಲ… ಪುಟ್ಟದೊಂದು ಕಿರು ದೀಪ ಹಚ್ಚಿಟ್ಟರೂ ಸಾಕು ಅದು ಆ ಕೋಣೆಯನ್ನು ಪ್ರಕಾಶಮಯವಾಗಿಸುತ್ತದೆ.ಅಂತೆಯೇ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡು ಬರುವ ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸಿ ಬೆನ್ನು ತಟ್ಟಿದರೆ ಭವಿಷ್ಯದಲ್ಲಿ ಉತ್ತಮ ಪ್ರತಿಭೆಗಳು ಅರಳುವ ಮುನ್ನವೇ ಕಮರುವ ಸಾಧ್ಯತೆಗಳು ಇಲ್ಲವಾಗುತ್ತವೆ. ಅಂತಹ ಪುಟ್ಟ ಪ್ರಯತ್ನಗಳು ಸಮಾಜದ ಎಲ್ಲ ವರ್ಗದ ಜನರಿಂದ ಆಗಲಿ… ಭಾರತ ಮಾತೆಯ ಮಕ್ಕಳು ಇಡೀ ಜಗತ್ತಿನ ಕಣ್ಸೆಳೆಯಲಿ ಭಾರತ ದೇಶ ವಿಶ್ವ ಗುರುವಾಗಿ ಮತ್ತಷ್ಟು ಪ್ರಕಾಶಿಸಲಿ ಎಂದು ಆಶಿಸುವ
ವೀಣಾ ಹೇಮಂತ್ ಗೌಡ ಪಾಟೀಲ್,